ಆಧುನಿಕ ಭಾರತದ ಜೀವಾಳ ಎಂದರೆ ಅದರ ಪ್ರಗತಿಪರ ಪ್ರಜಾಪ್ರಭುತ್ವ ವ್ಯವಸ್ಥೆ. ಅಂಥ ವ್ಯವಸ್ಥೆಯನ್ನೇ ಕಳೆದುಕೊಳ್ಳುವ ಅಪಾಯ ಇಂದು ಸನ್ನಿಹಿತವಾಗಿದೆಯೇ? ಕೋಮುವಾದಿ ಪ್ರವೃತ್ತಿ ಹಿಂದೆಂದಿಗಿಂತಲೂ ಹೆಚ್ಚು ತಾಂಡವವಾಡುತ್ತಿದೆ. ಜಾತಿವಾದಿ ನಾಯಕರು ಕಾನೂನುಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಅಸಹಿಷ್ಣುತೆಯು ಗೌರವದ ಸಂಕೇತವೆಂಬಂತೆ ಮೆರೆದಾಡುತ್ತಿದೆ. ಸರ್ಕಾರವು ಎಲ್ಲವನ್ನೂ ಮೂಕಪ್ರೇಕ್ಷಕನಂತೆ ವೀಕ್ಷಿಸುತ್ತಾ ನಿಂತಿದೆ, ಅದರ ನಿಷ್ಕ್ರಿಯತೆಯು ಎಲ್ಲದಕ್ಕೂ ಕುಮ್ಮಕ್ಕು ನೀಡುವಂತಿದೆ.
ಪ್ರಜಾಪ್ರಭುತ್ವ ಎಂಬುದನ್ನು ಅಣಕವಾಗಿ ಪರಿವರ್ತಿಸಿದರೆ, ನಾವೂ ಇತರ ರಾಷ್ಟ್ರಗಳ ಸಾಲಿಗೆ ಸೇರಿಕೊಳ್ಳುತ್ತೇವೆ ಅಷ್ಟೆ. ಇಂಡೋನೇಷ್ಯಾ ಸ್ವಾತಂತ್ರ್ಯ ಹೋರಾಟದ ಹೀರೋ ಸುಕರ್ಣೋ ಅವರು ಅಧಿಕಾರದ ಗದ್ದುಗೆಗೇರಿ 'ಮಾರ್ಗದರ್ಶಿ ಪ್ರಜಾಪ್ರಭುತ್ವ'ವನ್ನು ಘೋಷಿಸಿದಾಗ ಒಬ್ಬ ಜನನಾಯಕ ಎನಿಸಿಬಿಟ್ಟರು. ಇಲ್ಲಿ ಪ್ರಜಾಪ್ರಭುತ್ವಕ್ಕೆ ಮಾರ್ಗದರ್ಶನ ನೀಡಿದ್ದು ಸ್ವತಃ ಸುಕರ್ಣೋ ಅವರೇ. ಅವರ ಉತ್ತರಾಧಿಕಾರಿ ಸುಹಾರ್ತೋ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದರು. ಆದರೆ, ಅದನ್ನೇ 'ಪಂಚಶೀಲ ಪ್ರಜಾಪ್ರಭುತ್ವ' ಎಂದು ಬಣ್ಣಿಸಿದರು. ಮಲೇಷ್ಯಾದಲ್ಲಿ ಕಂಡುಬಂದಿದ್ದು 'ನಿಯಂತ್ರಿತ ಪ್ರಜಾಪ್ರಭುತ್ವ'. ಪಾಕಿಸ್ತಾನದಲ್ಲಿ ಜುಲ್ಫಿಕರ್ ಭುಟ್ಟೋ 'ಇಸ್ಲಾಂ ಪ್ರಜಾಪ್ರಭುತ್ವ' ಘೋಷಿಸಿದರು. ಅದರ ಅರ್ಥ ಏನಾದರೂ ಇದ್ದಿರಬಹುದು!
ಇತರ ದೇಶಗಳ ಪ್ರಜಾಪ್ರಭುತ್ವಕ್ಕೆ ಹೋಲಿಸಿದಾಗ, ಭಾರತ ಇಂಥವಕ್ಕೆಲ್ಲ ಹೊರತಾದುದು ಎನ್ನಿಸಿತ್ತು. ಏಕೆಂದರೆ, ನಮ್ಮ ಸಂವಿಧಾನವನ್ನು ರೂಪಿಸಿದವರು 20ನೇ ಶತಮಾನದ ಕೆಲ ಮಹಾಮೇಧಾವಿಗಳು. ಆದರೆ, 1949ರ ನವೆಂಬರ್ನಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ್ದ ಬಿ.ಆರ್. ಅಂಬೇಡ್ಕರ್, ಭಾರಿ ಅಪಾಯದ ಮುನ್ಸೂಚನೆ ನೀಡಿದ್ದರು. ಒಂದು ಉತ್ತಮ ಸಂವಿಧಾನವು ದುರ್ಜನರ ಕೈಗೆ ಸಿಕ್ಕಿತೆಂದರೆ ಅದರಿಂದ ಏನೂ ಪ್ರಯೋಜನವಾಗದು ಎಂದು ಆತಂಕ ವ್ಯಕ್ತಪಡಿಸಿದ್ದರು. ರಾಜಕೀಯ ಪಕ್ಷಗಳು ಮತ- ನಂಬಿಕೆಗಳಿಗೇ ದೇಶಕ್ಕಿಂತ ಮಿಗಿಲಾದ ಸ್ಥಾನ ಕಲ್ಪಿಸಿದರೆ ನಮ್ಮ ಸ್ವಾತಂತ್ರ್ಯಕ್ಕೇ ಧಕ್ಕೆ ಉಂಟಾದೀತು ಮಾತ್ರವಲ್ಲದೆ, ಸ್ವಾತಂತ್ರ್ಯವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳಬೇಕಾದೀತು ಎಂದೂ ಎಚ್ಚರಿಸಿದ್ದರು.
ಆರು ದಶಕಗಳ ಬಳಿಕ, ಅಂಬೇಡ್ಕರ್ ಅವರ ಆ ಮಾತುಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರತಿಧ್ವನಿಸುತ್ತಿವೆ. ನಮ್ಮ ಎಲ್ಲ ಪಕ್ಷಗಳು ಜಾತಿ-ಮತ ಮತ್ತು ತಮ್ಮ ನಾಯಕರ ಖಾಸಗಿ ಗುರಿಗಳನ್ನೇ ದೇಶಕ್ಕಿಂತ ಮಿಗಿಲು ಎಂದು ಪರಿಗಣಿಸಿವೆ. ಆಶೀಷ್ ನಂದಿ ಅವರ ಬಂಧನಕ್ಕೆ ಮಾಯಾವತಿ ಒತ್ತಾಯಿಸುವುದರಲ್ಲಿ ಅರ್ಥವಾದರೂ ಏನಿದೆ? ಮೊದಲನೆಯದಾಗಿ, ನಂದಿ ಅವರು ದಲಿತರನ್ನು ಹಳಿದಿರಲೇ ಇಲ್ಲ. ನಂದಿಯವರ ಹೇಳಿಕೆಗಳನ್ನು ಸಾವಧಾನವಾಗಿ ಮರುಪರಿಶೀಲಿಸಿದ ಬಳಿಕ ದಲಿತೋದ್ಧಾರಕ ಕಂಚ ಐಲಯ್ಯ ಅವರೇ ಇದನ್ನು ಮನಗಂಡಿದ್ದಾರೆ. ನಂದಿಯವರ ಮಾತಿನಲ್ಲಿ ಅರ್ಥವಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಮಾಯಾವತಿ ಅವರು ಉತ್ತರಪ್ರದೇಶದಲ್ಲಿ ದೀರ್ಘಕಾಲದಿಂದ ಪ್ರಭಾವ ಹೊಂದಿದ್ದರೂ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಿಂಚಿತ್ತೂ ಪ್ರಯತ್ನ ನಡೆಸಿಲ್ಲ. ಅವರದೇ ಪಕ್ಷದ ಕಾರ್ಯಕರ್ತರೂ ಎಷ್ಟೋ ಬಾರಿ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದುಂಟು. ದಲಿತರ ಹೆಸರಿನಲ್ಲಿ ಆಕೆ ಲಾಭ ಗಳಿಸಿಕೊಳ್ಳುತ್ತಿರುವುದಂತೂ ಸತ್ಯ. ಆದರೆ, ಆಶೀಷ್ ನಂದಿ ಅವರದು ಮಾಯಾವತಿಯ ಚಾರಿತ್ರ್ಯದಂತಲ್ಲ, ಅದು ಪ್ರಾಮಾಣಿಕವಾದುದು.
ಜಾತಿ ಮೇಲಾಟಕ್ಕಿಂತಲೂ ಕೆಟ್ಟ ವಿಚಾರವೆಂದರೆ, ಧಾರ್ಮಿಕ ಮತಾಂಧತೆಯಲ್ಲಿನ ಹೊಸ ತಿರುವುಗಳು. ಮುಸ್ಲಿಮರ ಮಧ್ಯೆ ಮಾತ್ರವಲ್ಲ, ಹಿಂದುಗಳು, ಸಿಖ್ಖ್ಖರು, ಕ್ರಿಶ್ಚಿಯನ್ನರು ಮತ್ತು ಇತರ ಧರ್ಮದವರ ನಡುವೆಯೂ ಮೂಲಭೂತವಾದಿಗಳು, ಭಯೋತ್ಪಾದಕರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ದುಷ್ಕೃತ್ಯಗಳನ್ನು ನೋಡಿಯೂ ನೋಡದಂತೆ ವರ್ತಿಸುವ ಮೂಲಕ ಸರ್ಕಾರವು ಅವರನ್ನು ಪ್ರೋತ್ಸಾಹಿಸುತ್ತಿದೆ. ಒಂದು ಅತಿರೇಕದಿಂದ ಇನ್ನೊಂದು ಅತಿರೇಕದತ್ತ ಸಾಗಲು ಸರ್ಕಾರವು ಶಿವಸೇನೆಗೆ ಅವಕಾಶ ಮಾಡಿಕೊಟ್ಟಿದೆ. ಮಂಗಳೂರು ಪ್ರದೇಶದಲ್ಲಿ ಬಜರಂಗ ದಳವು ಇನ್ನೂ ತನ್ನ ಹುಚ್ಚಾಟ ಪ್ರದರ್ಶಿಸುತ್ತಿದೆ. ಆದರೆ ಅದನ್ನು ಹಿಡಿತದಲ್ಲಿಡಲು ಕರ್ನಾಟಕ ಸರ್ಕಾರಕ್ಕೆ ಪುರುಸೊತ್ತೇ ಇಲ್ಲ!
ಈ ಸೇನೆ ಅಥವಾ ಆ ದಳದಂಥ ಸಣ್ಣಪುಟ್ಟ ಸಂಘಟನೆಗಳು ಸನಾತನ ಧರ್ಮದ ಮಹಾನ್ ಪರಂಪರೆಯನ್ನು ಪ್ರತಿನಿಧಿಸಲಾರವು. ಹಾಗೆಯೇ ಉಗ್ರವಾದಿ ಮುಸ್ಲಿಮರು ಭಾರತದಲ್ಲಿನ ಬಹುತೇಕ ಮುಸ್ಲಿಮರನ್ನು ಪ್ರತಿನಿಧಿಸುವುದಿಲ್ಲ. ಆದರೂ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಏಕೆಂದರೆ ಅವರು ಮತಾಂಧತೆಯ ಪ್ರದರ್ಶನ ಮಾಡುತ್ತಾರೆ. ಇಸ್ಲಾಂ ಶ್ರದ್ಧೆಯ ಪ್ರದರ್ಶನದ ಮೂಲಕ ಹೈದರಾಬಾದ್ನ ಒವೈಸಿಗಳು ಸಾಕಷ್ಟು ಲಾಭ ಗಳಿಸಿಕೊಂಡಿದ್ದಾರೆ. ಆದರೂ ಭೂ ಹಂಚಿಕೆ ಅಥವಾ ಇತರ ಯಾವುದೋ ಸೌಲಭ್ಯ ಕೂಡಲೇ ಮಂಜೂರಾಗದಿದ್ದಾಗ ಬೆದರಿಕೆಯ ಹಾದಿಯನ್ನೂ ಹಿಡಿಯುತ್ತಾರೆ. ಕೆಲ ಪಕ್ಷಾಭಿಮಾನಿಗಳು ಘೋಷಣೆ ಕೂಗುತ್ತಾರೆ, ತಕ್ಷಣವೇ ಪಶ್ಚಿಮ ಬಂಗಾಳ ಸರ್ಕಾರ ಸಲ್ಮಾನ್ ರಶ್ದಿಯ ಕೋಲ್ಕತಾ ಭೇಟಿಯನ್ನು ನಿಷೇಧಿಸುತ್ತದೆ. ಭಾರತದಲ್ಲಿ ಕೆಲಸ ಸಾಧಿಸಿಕೊಳ್ಳಬೇಕೆಂದರೆ ಹಿಂಸಾಚಾರದ ಬೆದರಿಕೆ ಒಡ್ಡುವುದು ಸುಲಭದ ಹಾದಿ ಎಂದು ಕೋಮುವಾದಿಗಳು ಭಾವಿಸಿದಂತಿದೆ.
ಕಮಲಹಾಸನ್ ಪ್ರಕರಣವನ್ನೇ ನೋಡಿ. ಅವರೊಬ್ಬ ಮಾನವೀಯ ಗುಣವುಳ್ಳ, ಸಮತೂಕದ ವ್ಯಕ್ತಿ. ನಂದಿ ಅವರು ಹೇಗೆ ದಲಿತ ವಿರೋಧಿ ಅಲ್ಲವೋ ಹಾಗೆಯೇ ಕಮಲಹಾಸನ್ ಕೂಡಾ ಅಲ್ಪಸಂಖ್ಯಾತ ವಿರೋಧಿ ಅಲ್ಲ. ಆದರೆ, ಎಲ್ಲೋ ಯಾರೋ ಕುತಂತ್ರ ನಡೆಸುತ್ತಾರೆ. ಕಮಲಹಾಸನ್ ಆ ಕುತಂತ್ರಕ್ಕೆ ಬಲಿಯಾಗುತ್ತಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ತಮಿಳು ಸಿನಿಮಾ 'ತುಪಾಕಿ'ಯ ವಿರುದ್ಧವೂ ಕೆಲ ಮುಸ್ಲಿಂ ಸಂಘಟನೆಗಳು ಸಿಡಿದೆದ್ದಿದ್ದವು. ಆದರೆ, ಎಲ್ಲಕ್ಕಿಂತ ಅತಿರೇಕದ್ದು ಎಂದರೆ ತಮಿಳು ಲೇಖಕ ಮನುಷ್ಯಪುದಿರನ್ ಪ್ರಕರಣ. ಸೌದಿ ಅರೇಬಿಯಾದಲ್ಲಿ ಶ್ರೀಲಂಕಾ ಮಹಿಳೆಯ ಶಿರಚ್ಛೇದವನ್ನು ಖಂಡಿಸಿದ್ದಕ್ಕಾಗಿ ಅವರು ಮುಸ್ಲಿಂ ಸಂಘಟನೆಯೊಂದರ ಬೆದರಿಕೆ ಎದುರಿಸಬೇಕಾಯಿತು. ಇಲ್ಲಿನ ತಮಿಳು ಮುಸ್ಲಿಮರು ಸೌದಿ ಅರೇಬಿಯಾ ಪರವಾಗಿ ಸಮರಕ್ಕಿಳಿಯಲು ಕಾರಣವಾದರೂ ಏನು?
ಇದೊಂದು ಮಹತ್ವದ ಪ್ರಶ್ನೆಯೇ. ವಹಾಬಿಸಂ ಮಾದರಿಯಲ್ಲಿ ಮುಸ್ಲಿಮರನ್ನು ಕ್ರಾಂತಿಕಾರಿಗಳನ್ನಾಗಿಸುವ ವಿಶ್ವವ್ಯಾಪಿ ಆಂದೋಲನಕ್ಕೆ ಸೌದಿ ಅರೇಬಿಯಾ ಆರ್ಥಿಕ ನೆರವು ನೀಡುತ್ತಿದೆ ಎನ್ನಲಾಗಿದೆ. ತನ್ನ ಚಿಂತನೆಯ ಹಾದಿಗೆ ಇಡೀ ವಿಶ್ವವನ್ನು ಪರಿವರ್ತಿಸುವುದೇ ವಹಾಬಿಸಂ ಸಿದ್ಧಾಂತ. ಸೌದಿ ಅರೇಬಿಯಾದ ಗುಪ್ತ ಹಾಗೂ ಹಿಂಸಾಚಾರ ಪ್ರವೃತ್ತಿಯ ಮತಪ್ರಚಾರದಿಂದ ಎದುರಾಗಿರುವ ಅಪಾಯದ ಬಗ್ಗೆ ಅಮೆರಿಕದಲ್ಲಿ ಈಗಾಗಲೇ ಎಚ್ಚರಿಕೆಯ ಧ್ವನಿ ಕೇಳಿಬಂದಿದೆ. ಆದರೆ, ಸೂಕ್ತ ಕ್ರಮ ಕೈಗೊಳ್ಳಲು ಅಮೆರಿಕ ಸರ್ಕಾರ ಹಿಂಜರಿಯುತ್ತಿದೆ. ಇಂಥ ವಿದ್ಯಮಾನಗಳ ನಡುವೆ, ಅಂಬೇಡ್ಕರ್ ಅವರ ಸಂವಿಧಾನ ಸುಸೂತ್ರವಾಗಿ ಜಾರಿಯಾಗುತ್ತದೆಯೇ ಅಥವಾ ನಮ್ಮ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾದೀತು ಎಂಬ ಅಂಬೇಡ್ಕರ್ ಅವರ ಎಚ್ಚರಿಕೆ ನಿಜವಾಗುವುದೇ ಎಂಬುದನ್ನು ನಾವು ಯೋಚಿಸಬೇಕಾಗಿದೆ.
-ಟಿ.ಜೆಎಸ್.ಜಾರ್ಜ್