ಅಟ್ಟಹಾಸ: ಇದು ಕರ್ನಾಟಕದ ಗೇಲಿಯಲ್ಲವೇ?
ನರಹಂತಕ ವೀರಪ್ಪನ್ ಕುರಿತ ಅಥವಾ ವೀರಪ್ಪನ್ ಬಗ್ಗೆ ಅಥವಾ ವೀರಪ್ಪನ್ ವಿಷಯಾಧಾರಿತ ಚಿತ್ರ ಅಟ್ಟಹಾಸ ತಮಿಳಿಗೋಸ್ಕರ ನಿರ್ಮಿಸಿದ ಕನ್ನಡ ಚಿತ್ರ ಎಂಬಂತೆ ತೋರುತ್ತದೆ. ಚಿತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಪೂರಕವಾಗಿ ಈ ಲೇಖನ.
1991ರಲ್ಲಿ ಚಂದೂಲಾಲ್ ಜೈನ್ ರವೀಂದ್ರನಾಥ್ ನಿರ್ದೇಶನದಲ್ಲಿ ವೀರಪ್ಪನ್ ಚಿತ್ರ ನಿರ್ಮಿಸಿದ್ದರು. ನಟ ದೇವ್ರಾಜ್ರಿಗೆ ರಾಜ್ಯಪ್ರಶಸ್ತಿ ತಂದಿತ್ತು. ಇಂಥಹ ನೆಗಟಿವ್ ಕತೆಗೆ ಪ್ರಶಸ್ತಿ ಎಷ್ಟು ಸರಿ ಎಂಬ ಪ್ರಶ್ನೆಗೆ ತೀರ್ಪುಗಾರರಲ್ಲಿ ಒಬ್ಬರಾದ ವೈಎನ್ಕೆ ಹೇಳಿದ್ದು- ಫ್ರಾನ್ಸ್ ಅಧ್ಯಕ್ಷನ ಹತ್ಯೆ ಕುರಿತ ಆಂಗ್ಲ ಚಿತ್ರ 'ದ ಡೇ ಆಫ್ ಜಾಕಲ್' ನೆಗಟಿವ್ ಕತೆ ಆದರೆ ಅದಕ್ಕೆ ಹಲವಾರು ಪ್ರಶಸ್ತಿ ನೀಡಿದ್ದು ತಪ್ಪೇ?
ಅಂದು ನಿರ್ದೇಶಕ ರವೀಂದ್ರನಾಥ್ ಸಹ ಮಲೆ ಮಹಾದೇಶ್ವರ ಬೆಟ್ಟ, ಗೋಪಿನಾಥ್ಂ, ಹೋಗೆನ್ಕಲ್ ಬಳಿ ವೀರಪ್ಪನ್ ಅಟ್ಟಹಾಸಗೈದ ಸ್ಥಳಗಳಲ್ಲಿ ಚಿತ್ರಿಸಿದ್ದರು. ವೀರಪ್ಪನ್ ಗೆಲುವು ಹಾಗೂ ಪೋಲಿಸರ ಸೋಲು ಯಾಕೆ ಎಂಬ ಉತ್ತರ ಆ ಚಿತ್ರದಲ್ಲಿ ಸೂಕ್ಷ್ಮವಾಗಿತ್ತು. ಆಗ ವೀರಪ್ಪನ್ ಇನ್ನೂ ಬದುಕಿದ್ದ.
ಅಟ್ಟಹಾಸ ಚಿತ್ರದ ನಿರ್ದೇಶಕ ರಮೇಶ ಪ್ರಕಾರ ಈ ಚಿತ್ರಕ್ಕೆ ಹತ್ತು ವರ್ಷದ ಶ್ರಮ ಅಂದರೆ ವೀರಪ್ಪನ್ ಬದುಕಿರುವಾಗಲೇ ಈ ಚಿತ್ರದ ತಯಾರಿ ನಡೆದಿತ್ತು. ಈ ಚಿತ್ರದ ಯೂ ಟ್ಯೂಬ್ನ ಪ್ರೋಮೋದಲ್ಲಿ ಸುಚೇಂದ್ರ ಪ್ರಸಾದ್ ಧ್ವನಿ ಹೇಳುತ್ತೆ- ನರಹಂತಕನ ಜೀವನ ವೃತ್ತಾಂತದ ಅನಾವರಣವೇ ಈ ಚಿತ್ರ. ಆದರೆ ಚಿತ್ರದ ಕೊನೆಯ 35ರಷ್ಟು ಭಾಗ ತಮಿಳುನಾಡು ಮುಖ್ಯಮಂತ್ರಿ ಮತ್ತು ಪೊಲೀಸರ ಯಶಸ್ಸು ವಿಜೃಂಭಿಸುತ್ತದೆ.
ಚಿತ್ರದ ಆರಂಭದಲ್ಲಿ ತಾಂತ್ರಿಕ ಕಾರಣಕ್ಕೆ ಅಥವಾ ನಿಯಮ ಪಾಲನೆಗಾಗಿ ನೈಜ ಘಟನೆಗಳ ಆಧಾರಿತ ಚಿತ್ರ ಅಲ್ಲ ಎಂಬ ಪ್ರಕಟಣೆ ಇದೆ. ಆದರೆ ಜಾಹೀರಾತಿನಲ್ಲಿ Dr. Raj humility personified, The great kidnap episode incorporated ಎಂಬ ಬರಹ ಇದೆ. ಇದಂತೂ ಗೊಂದಲ ಮೂಡಿಸುತ್ತೆ.
ವೀರಪ್ಪನ್ ಮೊದಲಿನಿಂದಲೂ ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳಿಗೆ ಸಂಬಂಧ ಪಟ್ಟ ವಿಚಾರ. ರಾಜ್ಯ ಪೊಲೀಸರು ತಮಿಳುನಾಡು ಅಧಿಕಾರಿಗಳ ಸಹಕಾರ ಪಡೆಯುವಲ್ಲಿ ಸೋತು ವೀರಪ್ಪನ್ಗೆ ರಾಜ್ಯದ ಅನೇಕ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಬಲಿಯಾಗಿದ್ದಾರೆ. ಏಪ್ರಿಲ್ 09, 1990 ಹೊಗೇನಕಲ್ ಬಳಿ ಪಿಎಸ್ಐ ಜಗನ್ನಾಥ್, ದಿನೇಶ್ ಸೇರಿ ನಾಲ್ಕು ಜನರನ್ನು ಕೊಂದ ಘಟನೆ ಈ ಚಿತ್ರದಲ್ಲಿ ನಾಲ್ಕು ನಿಮಿಷಕ್ಕೆ ಸೀಮಿತವಾಗಿದೆ. ಈ ಸುದ್ದಿ ರಾಜ್ಯ, ರಾಷ್ಟ್ರದ ಗಮನ ಸೆಳೆಯಿತು. ಇದಕ್ಕೆ ಮುಂಚೆಯೇ ಅಂದಿನ ಎಸಿಪಿ ಬಿಪಿನ್ ಗೋಪಾಲಕೃಷ್ಣ ವಿಶೇಷ ತಂಡದೊಂದಿಗೆ ಅನೇಕ ಬಾರಿ ವೀರಪ್ಪನ್ಗಾಗಿ ಬಲೆ ಬೀಸಿದ್ದರು. ಇದಕ್ಕೆ ಉತ್ತರವಾಗಿ ವೀರಪ್ಪನ್ ಪೊಲೀಸ್ ಜೀಪ್ ಮೇಲೆ ದಾಳಿ ನಡೆಸಿದ್ದ. ಅಂದಿನ ಐಜಿಪಿ ವಿವಿ ಭಾಸ್ಕರ್ ಈ ಘಟನೆಯಲ್ಲಿ ವೀರಪ್ಪನ್ ತಂಡದ ಮೇಲೆ ಪ್ರತಿದಾಳಿ ನಡೆಸಿ ಗಾಯಗೊಂಡಿದ್ದ ಪಿಎಸ್ಐ ಚಂದ್ರಪ್ಪ ಮತ್ತು ಕೃಷ್ಣೇ ಅರಸ್ ಧರ್ಮಪುರಿ ಆಸ್ಪತ್ರೆಯಲ್ಲಿ ಭೇಟಿಯ ನಂತರ ಅಲ್ಲೇ ವೀರಪ್ಪನ್ ಕಾರ್ಯಾಚರಣೆಗೆ ಡಡಿಜಿ ಪಡೆಯನ್ನು ಘೋಷಿಸಿದರು. ಐಜಿಪಿ ಕೆಯೂ ಶೆಟ್ಟಿ ನೇತೃತ್ವದಲ್ಲಿ ್ಟಠಜ್ಠಛಡ್ಝ್ಟಿಟಿ ಢಜಜ್ಠಛಠಠಛಟಿ ಶುರುವಾಯಿತು. ಆಗಲೂ ತಮಿಳನಾಡು ಕಡೆಯ ಸಹಕಾರ ಸಿಕ್ಕಿದ್ದು ಕಡಿಮೆಯೇ. ಅಂದಿನ ಮೆಟ್ಟೂರು ಎಸ್ಪಿ ರ್ಯಾಂಬೋ ಗೋಪಾಲಕೃಷ್ಣ ಮಾತ್ರ ಛಲದಿಂದ ಕಾರ್ಯಾಚರಣೆ ಮಾಡುತ್ತಿದ್ದರು.
ವೀರಪ್ಪನ್ ಕಾರ್ಯಕ್ಷೇತ್ರ ಗಡಿಭಾಗವಾದ್ದರಿಂದ ಆತ ಪೊಲೀಸ್ ವ್ಯಾಪ್ತಿಯ ಕಾರಣವನ್ನು ಚೆನ್ನಾಗಿ ಉಪಯೋಗಿಸಿಕೊಂಡ. ಆತನ ಬಗ್ಗೆ ತಮಿಳುನಾಡಿನ ಹಳ್ಳಿ ಜನರಿಂದ ರಾಜ್ಯದ ಪೊಲೀಸರಿಗೆ ಕಿಂಚಿತ್ತೂ ಮಾಹಿತಿ ಸಿಗುತ್ತಿರಲಿಲ್ಲ. ರಾಜ್ಯದ ಪೊಲೀಸರಿಂದ 4-5 ಬಾರಿ ವೀರಪ್ಪನ್ ಸದ್ಯದರಲ್ಲೇ ತಪ್ಪಿಸಿಕೊಂಡಿದ್ದಾನೆ. ಇದು ಈ ಅಟ್ಟಹಾಸ ಚಿತ್ರದಲ್ಲಿ ಕಾಣಲ್ಲ. ಉಈಋ ಶ್ರೀನಿವಾಸ್ ಪಾತ್ರವನ್ನು ಮಾತ್ರ ಚೆನ್ನಾಗಿ ಬಳಸಿಕೊಳ್ಳಲಾಗಿದೆ.
1990ರ ಏಪ್ರಿಲ್ನಿಂದ ಮೂರು ವರ್ಷಗಳ ಕಾಲ ನಾನು ತಿಂಗಳಿಗೆ ಒಂದು ವಾರ ವೀರಪ್ಪನ್ ಬೇಟೆಗೆ ಹೋಗುತ್ತಿದ್ದೆ. 1991ರ ಜನವರಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋದೆ. ಅಲ್ಲಿನ ಫಾರೆಸ್ಟ್ ಗೆಸ್ಟ ಹೌಸ್ನಲ್ಲಿದ್ದ ಡಿಸಿಎಫ್ ಶ್ರೀನಿವಾಸ್, 'ರೇಪು ಹೋಗೆನ್ಕಲ್ ಫಾರೆಸ್ಟ್ ಗೆಸ್ಟ್ಹೌಸ್ ಕಿ ರಾ ಯವರಿಕೂ ಚಪ್ಪರಾದು' (ನಾಳೆ ಹೊಗೆನ್ಕಲ್ ಫಾರೆಸ್ಟ್ ಗೆಸ್ಟ್ಹೌಸ್ಗೆ ಬಾ. ಯಾರಿಗೂ ಹೇಳಬೇಡ) ಎಂದರು. ಹಲವಾರು ತಿಂಗಳುಗಳಿಂದ ಅನೇಕ ಬಾರಿ ರಾತ್ರಿ -ಹಗಲು ಪೊಲೀಸ್ ಕಾರ್ಯಾಚರಣೆಗೆ ಹೋಗಿದ್ದ ನನಗೆ ಅವರ ಮಾತಲ್ಲಿ ಕುತೂಹಲ ಉಳಿದಿರಲಿಲ್ಲ. ಮರುದಿನ ಮಹದೇಶ್ವರ ಬೆಟ್ಟದಿಂದ ಬಸ್ಸಿನಲ್ಲಿ ಹೊಗೆನ್ಕಲ್ ತಲುಪಲು ಮಧ್ಯಾಹ್ನ 2 ಗಂಟೆ ಆಗಿತ್ತು. ಗೆಸ್ಟಹೌಸ್ ಒಳಗೆ ಶ್ರೀನಿವಾಸ್ ತಮಿಳುನಾಡು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದರು. ಇತ್ತ ಮೂಲೆಯಲ್ಲಿ ತಾಯಿ, ಮಗು ವ್ಯಕ್ತಿಯೊಂದಿಗೆ ಕುಳಿತಿದ್ದರು. ಶ್ರೀನಿವಾಸ್ ಹೊರಗೆ ಬಂದು (ತೆಲುಗಿನಲ್ಲಿ)- ಈ ಲೇಡಿ ಯಾರು ಗೊತ್ತಾ ವೀರಪ್ಪನ್ ಹೆಂಡತಿ ಮುತ್ತುಲಕ್ಷ್ಮಿ, ಅವನು ಅವರಪ್ಪ ಎಂದರು. ಕ್ಯಾಮರಾಕ್ಕೆ ಕೈ ಹಾಕಿದೆ ಕೂಡಲೇ ಶ್ರೀನಿವಾಸ್, 'ಬೇಡ ಬೇಡ ಒಂದು ತಿಂಗಳು ಕಾಯಿರಿ, ಗಂಡ-ಹೆಂಡತಿ ಇಬ್ಬರ ಪೋಟೋ ತೆಗೆಯಬಹುದು. ಬೇಕಾದರೆ ಆಕೆಯನ್ನು ಮಾತಾಡಿಸಿ' ಎಂದರು. ಆಕೆ ಮಾತನಾಡಲು ಸಿದ್ಧಳಿರಲಿಲ್ಲ. ಅದೇ ಕ್ಯಾಮರಾ ಡಿಸೆಂಬರ್ನಲ್ಲಿ ಮಹದೇಶ್ವರ ಬೆಟ್ಟದ ಗೆಸ್ಟಹೌಸ್ನಲ್ಲಿ ಶಿರವಿಲ್ಲದ ಶ್ರೀನಿವಾಸ್ ದೇಹದ ಚಿತ್ರ ತೆಗೆಯಿತು! ಹಿಂದೆ ನಡೆದಿದ್ದ ತಪ್ಪನ್ನು ಸರಿ ಪಡಿಸಿಕೊಳ್ಳಲು ಶ್ರೀನಿವಾಸ್ಗೆ ವೀರಪ್ಪನ್ನನ್ನು ಜೀವಂತ ಬಂಧಿಸುವ ವಿಶ್ವಾಸ ಅಪಾರವಾಗಿತ್ತು.
'ವೀರಪ್ಪನ್ ಅಂತ್ಯ ಕೇವಲ ಅವನ ಅಡಗು ತಾಣದ ಬಗೆಗಿನ ಸಣ್ಣ ಮಾಹಿತಿಯನ್ನು ಅವಲಂಬಿಸಿದೆ ಖಚಿತ ಮಾಹಿತಿ ಸಿಕ್ಕರೆ ಅವನ ಗತಿ ಕಾಣಿಸಲು ನಾನು ನನ್ನ ಇಬ್ಬರು ಮೆನ್ ಸಾಕು' ಎಂದು ಅವನ ಗುಂಡೇಟಿಗೆ ಬಲಿಯಾದ ಪಿಎಸ್ಐ ಶಕೀಲ್ ಅಹಮ್ಮದ್ ಯಾವಾಗಲೂ ಹೇಳುತ್ತಿದ್ದರು. ಎಸ್ಟಿಎಫ್ ಚೀಫ್ಗಳಾದ ಕೆಯು ಶೆಟ್ಟಿ, ಟಿ ಮಡಿಯಾಲ್, ಶಂಕರ ಬಿದರಿ ಇದೇ ಮಾತು ಹೇಳುತ್ತಿದ್ದರು. ರಾಜ್ಯದ ಗುಪ್ತದಳ ಸೋತಿತ್ತು. ಆದರೆ ಎಸ್ಟಿಎಫ್ ಕಾರ್ಯಾಚರಣೆಯಲ್ಲಿ ವೀರಪ್ಪನ್ ಬಲ ಕುಗ್ಗಿಸುವ ಕೆಲಸ ಸಮರ್ಪಕವಾಗಿ ನಡೆದಿತ್ತು. ಅವನ ಮಾಹಿತಿದಾರರ, ಆಹಾರ ಒದಗಿಸುವವರ, ಬಲಗೈ ಬಂಟರ ಬಾಲ ಕತ್ತರಿಸುವಲ್ಲಿ ಎಸ್ಟಿಎಫ್ ಯಶಸ್ವಿಯಾಗಿತ್ತು. ಅವನ ಸಾಮರ್ಥ್ಯವನ್ನು ಬಗ್ಗು ಬಡಿಯುವಲ್ಲಿ ಕರ್ನಾಟಕದ ಬಿದರಿ, ತಮಿಳುನಾಡಿನ ದೇವರಂ ಸಾಕಷ್ಟು ಪೊಲೀಸರನ್ನು ಬಲಿ ಕೊಟ್ಟರು. ನಕಲಿ ಎನ್ಕೌಂಟರ್, ಪೊಲೀಸ್ ದೌರ್ಜನ್ಯಗಳ ಬಗ್ಗೆ ವರದಿಯಾದವು. ಇವುಗಳನ್ನು ಮಾತ್ರ ರಮೇಶ್ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ.
2004 ರ ಹೊತ್ತಿಗೆ ವೀರಪ್ಪನ್ ತನ್ನ ಎಲ್ಲಾ ಸಹಚರರನ್ನೂ ಕಳೆದುಕೊಂಡಿದ್ದ. ಅವನ ತಂಡ ಸೇರಲು ಯುವಕರು ಸಿದ್ಧರಿರಲಿಲ್ಲ. ಕೇವಲ ಇಬ್ಬರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದ. ದೊರೆತ ಖಚಿತ ಆಧಾರದ ಮೇಲೆ ಜಂಟಿ ಎಸ್ಟಿಎಫ್ ಮುಖ್ಯಸ್ಥ ವಿಜಯಕುಮಾರ್ ರೂಪಿಸಿದ ವೀರಪ್ಪನ್ ಅಂತ್ಯ ಕಂಡ 'ಆಪರೇಷನ್ ಕಕೂನ್' ಈ ಚಿತ್ರದ ಜೀವಾಳವಾಗಿದೆ (ಉದ್ದೇಶವಾಗಿದೆ) ಅನಿಸುತ್ತದೆ. ವಿಜಯ್ ಕುಮಾರ್ ಎಂತಹ ದಕ್ಷ ಅಧಿಕಾರಿ ಎನ್ನುವುದಕ್ಕೆ ಪ್ರತ್ಯೇಕ ದೃಶ್ಯವಿರುವುದರ ಉದ್ದೇಶವೇನು? ಸೈಯನೈಡ್ನಂತಹ ಸಿನಿಮಾ ನೀಡಿದ ರಮೇಶಗೆ ಸಿನಿಮಾ ಮಾಡಲು ಅಪರೇಷನ್ ಕಕೂನ್ ಒಂದೇ ಸಾಕಾಗಿತ್ತು.
ಅಂದಿನಿಂದ ಅಂತ್ಯದ ವರೆಗೂ ಸಮಗ್ರವಾಗಿ ವರದಿ ನೀಡಿರುವ ಕನ್ನಡಪ್ರಭ, ಆಂದೋಲನ ಪತ್ರಿಕೆಗಳ ಪತ್ರಕರ್ತರಿಗೆ, ವೀರಪ್ಪನ್ಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ, ಕಾರ್ಯಾಚರಣೆಯಲ್ಲಿದ್ದ ಅಧಿಕಾರಿ ವರ್ಗಕ್ಕೆ, ಡಾ. ರಾಜ್ ಕುಮಾರ್ ಅಭಿಮಾನಿಗಳಿಗೆ, ಕನ್ನಡಿಗರಿಗೆ ಈ ಚಿತ್ರ ನೋಡಿದ ಮೇಲೆ ಕಾಡುವ ಪ್ರಶ್ನೆಗಳು-
-ಕರ್ನಾಟಕ ಎಸ್ಟಿಎಫ್ ತಂಡದಲ್ಲಿದ್ದ ಬುದ್ಧಿವಂತ ದಕ್ಷ ಪೋಲೀಸ್ ಅಧಿಕಾರಿಗಳು ಕಾಣಲಿಲ್ಲವೇ?
-ವೀರಪ್ಪನ್ ಹುಟ್ಟಿದ ದಿನ ಮಹಾನ್ ವ್ಯಕ್ತಿ ಜನಿಸಿದಂತೆ ಚಿತ್ರಿಸಿರುವುದು ಎಷ್ಟು ಸಮಂಜಸ?
-14 ದಿನ ವೀರಪ್ಪನ್ ಜತೆ ಹೆಣಗಾಡಿದ ಪ್ರಸಿದ್ದ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ನೆನಪಾಗಲಿಲ್ಲವೇ?
-109 ದಿನದ ಡಾ. ರಾಜ್ ಕುಮಾರ್ ವನವಾಸ ದೃಶ್ಯಗಳು ಕನ್ನಡಿಗರನ್ನು ಮೆಚ್ಚಿಸುವ ಪ್ರಯತ್ನವಲ್ಲವೇ?
-ಇದು ತಮಿಳುನಾಡು ಸರ್ಕಾರ ಮತ್ತು ಪೊಲೀಸರನ್ನು ಮೆಚ್ಚಿಸಲು ತೆಗೆದ ಚಿತ್ರಾನಾ?
-ಬೇರೆಲ್ಲಾ ಘಟನೆಗಳನ್ನೂ ಸೂಕ್ಷ್ಮವಾಗಿ ಸುಂದರವಾಗಿ ಪೊಣಿಸಿರುವಾಗ ಅಪರೇಷನ್ ಕಕೂನ್ಗೆ ಅಷ್ಟು ದೀರ್ಘ ಮಹತ್ವ ನೀಡಿದ್ಯಾಕೆ?
-ವೀರಪ್ಪನ್ ಪೊಲೀಸ್ ದಾಳಿಗೆ ಬಲಿಯಾದ ದಿನ ವಿಜಯ್ ಕುಮಾರ್ ಮತ್ತು ಮಿರ್ಜಿ ಎರಡು ರಾಜ್ಯಗಳ ಪಡೆಯೊಂದಿಗೆ ಧರ್ಮಪುರಿ ಪೊಲೀಸ್ ಕೇಂದ್ರದಲ್ಲಿ ಆಚರಿಸಿದ ವಿಜಯೋತ್ಸವ ಏಕೆ ದಾಖಲಾಗಿಲ್ಲ?
-ತಮಿಳುನಾಡು ಸಿಎಂ ಅವರು ಎಸ್ಟಿಎಫ್ ಪಡೆಗೆ ಬಹುಮಾನ ಘೋಷಿಸುವ ವಿಷಯ ಇಂತಹ 'ಒಳ್ಳೆಯ' ಸಿನಿಮಾಗೆ ಬೇಕೇ?
-ಒಟ್ಟಿನಲ್ಲಿ ವೀರಪ್ಪನ್ನಿಂದ ಮತ್ತು ಅವನ ಕುರಿತ ಸಿನಿಮಾದಿಂದ ರಾಜ್ಯಕ್ಕೆ ಅನ್ಯಾಯವಾಗಿದೆಯಲ್ಲವೇ?
-ಸಾಗ್ಗೆರೆ ರಾಮಸ್ವಾಮಿ, ಸಂಪಾದಕ, ಕೆಪಿಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

