ಶುಕ್ರವಾರದಂದು ಪ್ರಕಟವಾದ ಅಗ್ನಿ ಶ್ರೀಧರ್ರವರ ಲೇಖನದ ಕುರಿತು ಪ್ರವೀಣ್ ಪಟವರ್ಧನ್ (16-02-2013) ಮತ್ತು ಪ್ರಸಾದ್ ಕುಮಾರ್ (18-02-2013) ಎನ್ನುವವರ ಪ್ರತಿಕ್ರಿಯೆಗಳ ಸ್ವರೂಪವನ್ನು ಕುರಿತು ನಮ್ಮ ಪ್ರತಿಕ್ರಿಯೆ ಇದು.
ಅಗ್ನಿ ಶ್ರೀಧರ್ ಇರಲಿ, ಗಿರೀಶ್ ಕಾರ್ನಾರ್ಡ್ ಇರಲಿ ಅಥವಾ ಎಸ್.ಎಲ್.ಭೈರಪ್ಪನವರೆ ಆಗಲಿ, ಯಾವುದೇ ಲೇಖಕ/ಚಿಂತಕರ ಅಭಿಪ್ರಾಯಗಳು ಟೀಕಾತೀತವಲ್ಲ. ಹಾಗೆ ಟೀಕಿಸುವುದು ಆರೋಗ್ಯಕರ ಮನಸ್ಸುಗಳ ಲಕ್ಷಣ ಕೂಡ. ಆದರೆ ಆ ಟೀಕೆಗಳು ಅಭಿಪ್ರಾಯ ಭಿನ್ನತೆಗಳಾಗದೆ ವೈಯಕ್ತಿಕ ಕೆಸರೆರಚುವಿಕೆ (ಪಟವರ್ಧನ್) ಮತ್ತು ಲೇಖನದ ಅಂತಃಸತ್ವವನ್ನೇ ಗ್ರಹಿಸದ ಕುರುಡು ಖಂಡನೆಯಾಗಿರುವುದು(ಪ್ರಸಾದ್) ಪೂರ್ವಗ್ರಹಪೀಡಿತ, ರೋಗಿಷ್ಠ ಬಾಲಿಶ ಮನಸುಗಳ ಭಂಡಾಟವಾಗಿ ಕಾಣುತ್ತದೆ.
ಶ್ರೀಧರ್ರವರು ಅಫ್ಜಲ್ ಗುರು ಪ್ರಕರಣ ಕುರಿತು ಯಾರೂ ಹೇಳದೇ ಇರುವುದನ್ನು ಹೇಳಿಲ್ಲ. ಸಾಕಷ್ಟು ನ್ಯಾಯವಾದಿಗಳು ಹೇಳಿರುವುದನ್ನೇ ಅವರೂ ಅನುಮೋದಿಸಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ಎಸಗಿದ ಪ್ರಕರಣವನ್ನು ನ್ಯಾಯಾಲಯ ಸಂಶಯಕ್ಕೆಡೆಯಿಲ್ಲದಂತೆ, ಸಂದೇಹಾತೀತವಾಗಿ ನಿರ್ವಹಿಸಬೇಕಿತ್ತೆಂದು ಮೊನಚಾಗಿ ಹೇಳಿರುವುದು ತಪ್ಪೇ? ಅಫ್ಜಲ್ ಗುರು ನಿಜಕ್ಕೂ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅವನನ್ನು ಕ್ಷಮಿಸಬೇಕಾಗಿತ್ತೆನ್ನುವ ನಿಲುವು ಅವರ ಲೇಖನದಲ್ಲಿ ಎಲ್ಲೂ ಧ್ವನಿಸುವುದಿಲ್ಲ. ಆದರೆ ಅದು ಪಟವರ್ಧನ್ರಿಗೆ ಕೇಳಿಸಿದೆ! ಶ್ರೀಧರ್ರವರು ಕೇವಲ ಮುಸ್ಲಿಮರ ಪರವಾಗಿದ್ದರೆ ತಲೆಯ ಮೇಲೆ ಬಟ್ಟೆ, ಟೋಪಿ ಯಾವುದೂ ಇಲ್ಲದ, ಸಮಾಜದ ತೀರ ಅಂಚಿನಲ್ಲಿ ನಿಂತಿರುವ ದಂಡೂಪಾಳ್ಯದ ಹಂತಕರ ಪರವಾಗಿ ಏಕೆ ವಕಾಲತ್ತು ವಹಿಸುತ್ತಾರೆ? ಅದರಿಂದ ಅವರಿಗೆ ಸಿಗುವ ಲಾಭವಾದರೂ ಏನು? ಅವರೆಲ್ಲ ನಿಮ್ಮ ಏಜೆಂಟರೇ ಎನ್ನುವ ಪದಗಳು ಏಡ್ಸ್ಗಿಂತಲೂ ಬಲಿಷ್ಠ ಮಾನಸಿಕ ರೋಗಕ್ಕೆ ಸಿಲುಕಿರುವವರ ಮನ-ಸ್ಥಿತಿಯ ದ್ಯೋತಕ. ಅಂತಹ ಪದಗಳನ್ನು ಪ್ರಕಟಿಸುವವರು ಸ್ವಲ್ಪ ಮಟ್ಟಿನ ಎಚ್ಚರಿಕೆ, ಜವಾಬ್ದಾರಿಗಳನ್ನು ಹೊಂದಿರಬೇಕಾಗುತ್ತದೆ. ಶ್ರೀಧರ್ರವರು ದಂಡುಪಾಳ್ಯದವರನ್ನು ಕುರಿತು ಅಫ್ಜಲ್ ಗುರು ನೇಣಿನ ನಂತರ ಪ್ರಸ್ತಾಪಿಸಿಲ್ಲ. ಹಲವಾರು ತಿಂಗಳುಗಳ ಹಿಂದಿನಿಂದಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅಂತಹ ಆರೋಪವನ್ನು ಪೊಲೀಸ್ ಇಲಾಖೆಯ ವಿರುದ್ಧ ಮಾಡಿದ್ದರೆ, ಇದುವರೆಗೂ ಏಕೆ ಆ ಇಲಾಖೆ ಅದನ್ನು ಸ್ಪಷ್ಟಗೊಳಿಸಿಲ್ಲ ಮತ್ತು ಅವರ ಮೇಲೇಕೆ ಕ್ರಮ ಕೈಗೊಂಡಿಲ್ಲ? ಮುಂದೊಂದು ದಿನ ತಮ್ಮ ಹೆಣ್ಣುಮಕ್ಕಳು ಮತ್ತು ವೃದ್ಧರನ್ನು ಕೊಂದವರು ದಂಡುಪಾಳ್ಯದವರಲ್ಲವೆಂದು ಆ ಹತ್ಯೆಯಾದವರ ಸಂಬಂಧಿಗಳಿಗೆ ಗೊತ್ತಾದರೆ ಏನೆನ್ನಿಸಬಹುದು? ಕಡೆಯ ಪಕ್ಷ ಮಾಧ್ಯಮಗಳಾದರೂ ಅವರು ಮಾಡುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೇ ಹೊರತು ಉಡಾಫೆಯಾಗಿ ಆ ಪ್ರಕರಣವನ್ನು ಬದಿಗೆ ಸರಿಸಬಾರದು.
ನಮ್ಮಂತಹ ಅನೇಕರು ಮೆಚ್ಚಿರುವ ಅವರ ಲೇಖನದ ಕಡೆಯ ಪ್ಯಾರಾ ಪಟವರ್ಧನ್ರವರಿಗೆ ಏಕೊ ಜೀರ್ಣವಾಗಿಲ್ಲ. ಅವರ ಅವಿವೇಕಕ್ಕೆ ಮರುಕ ಉಂಟಾಗುತ್ತಿದೆ. ಏಕೆಂದರೆ, ಹತ್ತು ವರ್ಷಗಳ ಹಿಂದೆ ಸಾಕೇತ್ ರಾಜನ್ ಗತಿಸಿದಾಗಲೂ ಶ್ರೀಧರ್ ಅಂತಹುದೇ ಅಭಿಪ್ರಾಯಗಳನ್ನು ದಾಖಲಿಸಿದ್ದರು.
ಹಾಗೆಯೆ, ಅವರ ಲೇಖನದಲ್ಲಿ ಎಲ್ಲಿಯೂ ಕಸಬ್ಗೆ ಗಲ್ಲುಶಿಕ್ಷೆ ನೀಡಬಾರದಿತ್ತೆನ್ನುವ ಉಲ್ಲೇಖವೇ ಇಲ್ಲ. ಕೇವಲ ಪ್ರಸಾದ್ ಅವರಿಗೆ ಅದು ಹೇಗೆ ಗೋಚರಿಸಿತೋ? ಅಭಿಪ್ರಾಯಗಳ ಕಾರಣಕ್ಕಾಗಿ ಯಾರನ್ನಾದರೂ ದಂಡಿಸಿದರೆ ಅದು ನಾಝಿ ವರ್ತನೆಯಾಗುತ್ತದೆಂದು ಹೇಳಿರುವಾಗ, ಅದನ್ನು 'ಕೃತ್ಯ' ಅಥವಾ 'ಆಕ್ರಮಣ' ಎನ್ನುವ ಅರ್ಥದಲ್ಲಿ ಗ್ರಹಿಸಿದರೆ ಏನು ಹೇಳುವುದು?
ಶ್ರೀಧರ್ ಅವರು ಭೈರಪ್ಪನವರನ್ನು ಟೀಕಿಸಿ ಬರೆಯುವಾಗ ವೈಯಕ್ತಿಕ ನೆಲೆಯಲ್ಲಿ ವಹಿಸುವ ಎಚ್ಚರ ಯುವ ಲೇಖಕರಿಗೆ ಮಾದರಿಯಾಗಬೇಕು. ಕೆಸರೆರಚಾಟ ಸಣ್ಣ ಮನಸ್ಸುಗಳ ಸಂಕೇತ. ಯಾರಿಗೂ ಶೋಭೆ ತರುವುದಿಲ್ಲ.
-ಶಶಾಂಕ್ ಭದ್ರಾವತಿ, ಮಹಾದೇವ ಪಾಟೀಲ್