ಕೆರೆಗಳ ಹೂಳೆತ್ತುವಿಕೆಯಿಂದ ಕೃಷಿಕನಿಗೆ ದುಪ್ಪಟ್ಟು ಲಾಭ

Updated on: 

ರಜನೀಶ್: ನಾನು ಧಾರವಾಡದ ಜಿಲ್ಲಾಧಿಕಾರಿ ಆಗಿದ್ದಾಗ ಪಿ.ಹೆಚ್‌ಡಿ ಪದವಿಗೆ ವ್ಯಾಸಂಗ ಆರಂಭಿಸಿದೆ. ನನ್ನ ಸಂಶೋಧನೆಯ ಶಿರೋನಾಮೆ 'ಕರ್ನಾಟಕದಲ್ಲಿ ಸಮುದಾಯ ಆರೋಗ್ಯ ವ್ಯವಸ್ಥೆ'. ಅದಕ್ಕಾಗಿ ಸಾಕಷ್ಟು ಅಂಕಿ ಅಂಶಗಳನ್ನು ಕಲೆ ಹಾಕಿದೆ. ಪ್ರೊಫೆಸರ್ ಪಂಚಮುಖಿ ಎನ್ನುವವರು ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ರಿಸರ್ಚ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಮುದಾಯದ ಆರೋಗ್ಯ, ಮನೆ ಬಾಗಿಲಿಗೆ ಸಹಾಯ ಒದಗಿಸುವುದು, ಆರೋಗ್ಯದ ಬಗ್ಗೆ ಜನಜಾಗೃತಿಯನ್ನು ಮೂಡಿಸುವುದು, ಸುಲಭ ರೋಗ ಪರಿಹಾರ, ಇವೆಲ್ಲವುಗಳ ಬಗ್ಗೆ ಈ ಸಂಸ್ಥೆ ಉತ್ತಮ ಕೆಲಸ ಮಾಡಿದೆ. ನಾಲ್ಕು ವಿವಿಧ ವಿಭಾಗಗಳು, ನಾಲ್ಕು ಆಸ್ಪತ್ರೆಗಳು, ಪ್ರಮುಖ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಂದ ಅಂಕಿ ಅಂಶಗಳನ್ನೆಲ್ಲ ಪಡೆದುಕೊಂಡು ನನ್ನ ವ್ಯಾಸಂಗಕ್ಕೆ ಬಳಸಿಕೊಂಡೆ. ನಾನು ಅದಕ್ಕೂ ಮುಂಚೆ ಧಾರವಾಡ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಿದ್ದರಿಂದ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್‌ಡಿ ಪದವಿಗೆ ನೋಂದಣಿ ಮಾಡದೆ ಚಂಡೀಗಢದಲ್ಲಿ ನೋಂದಣಿ ಮಾಡಿಸಿದೆ. ಧಾರವಾಡದ ಜಿಲ್ಲಾಧಿಕಾರಿಯಾಗಿ ನಾನು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಸೆಲ್ಯೂಟ್  ಸ್ವೀಕರಿಸಿದ್ದೆ. ಸಾಮಾನ್ಯವಾಗಿ ಈ ಕೆಲಸವನ್ನು ಜಿಲ್ಲಾ ಮಂತ್ರಿಗಳು ಮಾಡುತ್ತಾರೆ. ಆದರೆ ಆಗ ಚುನಾವಣೆ ಘೋಷಣೆಯಾದ್ದರಿಂದ ಮಂತ್ರಿಗಳು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿರಲಿಲ್ಲ. ಹಾಗಾಗಿ ನನಗೆ ಆ ಒಂದು ಒಳ್ಳೆಯ ಅವಕಾಶ ದೊರಕಿತ್ತು.
ಶಾಲಿನಿ: 1999ರಲ್ಲಿ ಧಾರವಾಡದ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿ.ಇ.ಓ) ನೇಮಕಗೊಂಡೆ.  ನಾನು ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯಕ್ಕೆ ಸೇರುವ ಮುನ್ನ ಕುರ್ಚಿಯಲ್ಲಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ ಸಂಘರ್ಷ ನಡೆದಿತ್ತು. ಭಿನ್ನಾಭಿಪ್ರಾಯದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದವು. ಈ ನಡುವೆ ನಾನು ಕಾರ್ಯಭಾರ ವಹಿಸಿಕೊಂಡೆ. ಮಂಗಳೂರು ಜಿಲ್ಲಾ ಪಂಚಾಯತ್‌ನಲ್ಲಿ ತುಂಬಾ ಸೌಹಾರ್ದಯುತ ವಾತಾವರಣವನ್ನು ಅನುಭವಿಸಿದ್ದೆ. ಧಾರವಾಡದಲ್ಲಿ ಅಂತಹ ವಾತಾವರಣ ಇಲ್ಲದೆ ಇದ್ದುದರಿಂದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಡುವಿನ ಸಂಬಂಧ ಸುಧಾರಿಸಲು ಹೆಚ್ಚಿನ ಶ್ರಮ ವಹಿಸಲು ಸಿದ್ಧಳಿದ್ದೆ. ಈ ನಿಟ್ಟಿನಲ್ಲಿ ಮೊದಲನೆ ಹೆಜ್ಜೆ ಇಡಬೇಕಾಗಿತ್ತು. ಹೊಸ ಕಚೇರಿಗೆ ಬಂದ ತಕ್ಷಣ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಭೇಟಿ ಮಾಡಲು ಸಮಯ ಕೋರಿದೆ. ಒಬ್ಬ ಮಹಿಳೆ ಅಲ್ಲಿನ ಅಧ್ಯಕ್ಷರಾಗಿದ್ದರು. ನಾನು ಅವರನ್ನು ಭೇಟಿ ಮಾಡಲು ಹೋದಾಗ ಅವರು ಎದ್ದು ನಿಂತು ಸಂತೋಷದಿಂದ ನನ್ನನ್ನು ಸ್ವಾಗತಿಸಿದರು. 'ನಾನು ಮೊದಲನೇ ಸಲ ಇಂತಹ ಸ್ಥಾನದಲ್ಲಿದ್ದೇನೆ.  ನನಗೆ ಅನುಭವ ಇಲ್ಲ.  ಆದರೆ ನನ್ನ ಅವಧಿಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ತೀವ್ರ ಆಕಾಂಕ್ಷೆ ಇದೆ. ನೀವು ಉನ್ನತ ಐ.ಎ.ಎಸ್, ಅಧಿಕಾರಿ ಆಗಿರುವುದರಿಂದ, ನಿಮಗೆ ಕಚೇರಿ ವ್ಯವಹಾರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ನಿಮ್ಮ ಸಹಕಾರ ಸಿಕ್ಕರೆ ಧಾರವಾಡ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು. ನಾನು ಅವರ ಕೈ ಹಿಡಿದು 'ಅಭಿವೃದ್ಧಿ ಕೆಲಸಕ್ಕೆ ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ಜೊತೆಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗಳಿಗೂ ಸಹ ನಾವು ಪ್ರೇರಣೆ ಹಾಗೂ ಮಾರ್ಗದರ್ಶನ ನೀಡೋಣ. ತಾವು ಜನಪ್ರತಿನಿಧಿಗಳಾಗಿರುವುದರಿಂದ ಜನರ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳಿಯ ಪ್ರದೇಶಗಳ ಬಗ್ಗೆ ನಿಮಗಿರುವಷ್ಟು ಮಾಹಿತಿ, ಅನುಭವ ನಮಗಿರುವುದಿಲ್ಲ. ಆದುದರಿಂದ ತಮ್ಮ ಹಾಗೂ ನನ್ನ ಅನುಭವವನ್ನು ಒಟ್ಟುಗೂಡಿಸಿ ಕಾರ್ಯಾನುಷ್ಠಾನಕ್ಕೆ ಉಪಯೋಗಿಸಿದಲ್ಲಿ ಖಂಡಿತವಾಗಿಯೂ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಸಾಧಿಸಬಹುದು' ಎಂದು ತಿಳಿಸಿದೆ.
ತಕ್ಷಣ ಈ ಸುದ್ದಿ ಎಲ್ಲರಿಗೂ ಮುಟ್ಟಿತು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರು ಜೊತೆಯಾಗಿದ್ದಾರೆ ಎಂಬುದನ್ನು ಉಳಿದ ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯ್ತಿ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಗಮನಿಸಿದರು. ಇದಾದ ನಂತರ ಸರದಿಯಲ್ಲಿ ಜಿಲ್ಲಾ ಪಂಚಾಯತ್‌ನ ಪ್ರಮುಖ ಸದಸ್ಯರು, ಮಾಜಿ ಅಧ್ಯಕ್ಷರು ಮುಂತಾದವರೊಂದಿಗೆ ತುಂಬಾ ಆತ್ಮೀಯವಾಗಿ ಮಾತುಕತೆಯಾಡಿದೆ. ಹಾಗಾಗಿ ಜಿಲ್ಲೆಯಲ್ಲಿ ನಡೆಯತಕ್ಕಂತಹ ಯೋಜನೆಗಳ ಸ್ಥಿತಿಗತಿ, ಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಕೆಲವೇ ದಿನಗಳಲ್ಲಿ ಉತ್ತಮ ಮಾಹಿತಿ ದೊರೆಯಿತು. ಇದರಿಂದ ನಾನು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವಾಗ ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಅವುಗಳನ್ನು ಬಗೆಹರಿಸಲು ಅವಕಾಶ ದೊರೆಯಿತು.  ಸಭೆಗಳಲ್ಲಾಗಲಿ, ಚರ್ಚೆಗಳಲ್ಲಾಗಲಿ ಅಥವಾ ಸ್ಥಳ ಪರಿಶೀಲನೆಗಳಲ್ಲಾಗಲಿ ಎಲ್ಲ ಕೆಲಸದಲ್ಲಿಯೂ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳನ್ನು ನಾನು ತೊಡಗಿಸಿಕೊಂಡಿದ್ದೆ. ಇದರಿಂದಾಗಿ ಅಧಿಕಾರಿಗಳನ್ನು ಚುನಾಯಿತ ಪ್ರತಿನಿಧಿಗಳು ದೂಷಿಸುವುದು ಕಡಿಮೆಯಾಗಿ ಉತ್ತಮ ವಾತಾವರಣ ಸೃಷ್ಟಿಯಾಯಿತು. ಇದನ್ನು ಬಳಸಿಕೊಂಡು ನಾನು ಮತ್ತು ಡಾ. ರಜನೀಶ್ ಗೋಯಲ್‌ರವರು ಎಲ್ಲಾ ಹಳ್ಳಿಗಳಿಗೆ ಜಂಟಿಯಾಗಿ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡೆವು.  ಏಕೆಂದರೆ ಅಂಕಿ ಅಂಶಗಳನ್ನು ಸಭೆಗಳಲ್ಲಿ ಪರಿಶೀಲಿಸಿದರೆ, ವಾಸ್ತವವಾಗಿ ಜನರು ಅನುಭವಿಸುತ್ತಿರುವ ಆಡಳಿತ ಸವಾಲುಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಅಭಿವೃದ್ಧಿ ಯೋಜನೆಗಳನ್ನು ಅಂಕಿ ಅಂಶಗಳ ಬದಲು ಫಲಿತಾಂಶಕ್ಕೆ ಅನುಗುಣವಾಗಿ ಕಾರ್ಯಗತಗೊಳಿಸುವ ಉದ್ಧೇಶ ನಮ್ಮದಾಗಿತ್ತು. ಎಲ್ಲರ ಸಹಕಾರ ಸಿಕ್ಕಿತಾದ್ದರಿಂದ ಜನರ ಕುಂದುಕೊರತೆ ನಿವಾರಿಸಲು ಅನುಕೂಲವಾಯಿತು. ಆದರೆ, ಜೊತೆಗೆ ಜನರ ಬೇಡಿಕೆ, ಆಕಾಂಕ್ಷೆ ಸಹ ಜಾಸ್ತಿಯಾಯಿತು. ಅದಕ್ಕೆ ತಕ್ಕುದಾಗಿ ವಿವಿಧ ಕೋನಗಳಿಂದ ತಯಾರು ಮಾಡಿದ ಒಂದು ಸರ್ವತೋಮುಖ ಬೆಳವಣಿಗೆಯ ನೀಲ ನಕ್ಷೆಯನ್ನು ತಯಾರಿಸಿದೆವು.
ಸರ್ಕಾರದ ಸಂಪನ್ಮೂಲಗಳು ಇರುವುದು ಸೀಮಿತ. ಆದರೆ, ಜನರ ಬೇಡಿಕೆ ಮಾತ್ರ ಅಪಾರ. ಆದುದರಿಂದ  ಅತಿ ಮುಖ್ಯವಾದ ಬೇಡಿಕೆಗಳನ್ನು ಆದ್ಯತೆಯ ಮೇಲೆ, ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸ ನಿರ್ವಹಿಸುವ ಒಂದು ತಂತ್ರವನ್ನು ಸಿದ್ಧಪಡಿಸಿದೆವು. ಉದಾಹರಣೆಗೆ, ಹಿಂದಿನ ಕಾಲದಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು ಕೆರೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಮಣ್ಣಿನ ಸವಕಳಿಯಿಂದ ಕೆರೆಗಳಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ನೀರು ಸಂಗ್ರಹಣೆ ಆಗದೆ, ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯನ್ನು ಜನ ಅನುಭವಿಸುತ್ತಿದ್ದರು. ಈ ಹಿಂದೆ ಕೆರೆ ನೀರಿನಿಂದ ಎರಡನೇ ಆಥವಾ ಮೂರನೇ ಬೆಳೆಯನ್ನು ರೈತರು ತೆಗೆಯುತ್ತಿದ್ದರು.
ಆದರೆ ನಾವು ಧಾರವಾಡದ ಸುತ್ತಲೆಲ್ಲ ಅಡ್ಡಾಡಿ ನೋಡಿದಾಗ ಕುಡಿಯಲು ಕೆರೆಯ ನೀರಾಗಲಿ ಅಥವಾ ಅಂತರ ಜಲ ಲಭ್ಯತೆ ಇಲ್ಲದೆ ಇರುವುದು ಗಮನಕ್ಕೆ ಬಂದಿತು. ಆದುದರಿಂದ ನಾವು ರೈತರ ಸಹಭಾಗಿತ್ವದಲ್ಲಿ ಮಾದರಿ ಗ್ರಾಮವಾದ ಕುಸುಗಲ್‌ನಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.  ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರನ್ನು ಭೇಟಿ ಮಾಡಿ, ಯಾರ ಹತ್ತಿರ ಟ್ರಾಕ್ಟರ್ ಇದೆಯೋ ಹಾಗೂ ಯಾರಿಗೆ ತಮ್ಮ ಭೂಮಿಯಲ್ಲಿ ಹೂಳು ಮಣ್ಣಿನ ಅವಶ್ಯಕತೆ ಇದೆ ಎಂಬುದನ್ನು ಅರಿತುಕೊಂಡರು. ನಿಗದಿತ ದಿನದಂದು ಇಂಜನಿಯರಿಂಗ್ ಇಲಾಖೆಯ ವತಿಯಿಂದ ಎರಡು ಜೆ.ಸಿ.ಬಿ. ಯಂತ್ರಗಳನ್ನು ತರಿಸಿ ಮಣ್ಣನ್ನು ಟ್ರಾಕ್ಟರ್‌ಗಳಲ್ಲಿ ತುಂಬಿ ಸಾಲಾಗಿ ಕಳುಹಿಸಿಕೊಡಲಾಯಿತು. ಹೂಳು ತೆಗೆಯಿಸಲು ಸುಮಾರು ಮೂವತ್ತು ನಲವತ್ತು ಲಕ್ಷ ರುಪಾಯಿ ಖರ್ಚಾಗಬಹುದೆಂದು ಅಂದಾಜು ಮಾಡಿದ್ದೆವಾದರೂ, ಅದನ್ನು ಕೇವಲ ಐದು ಲಕ್ಷ ರು.ಗಳಲ್ಲಿ ಮುಗಿಸಲಾಯಿತು (ಟ್ರಾಕ್ಟರ್‌ಗಳಿಗೆ ಡೀಸಲ್ ಮತ್ತು ಜೆಸಿಬಿಗಳ ಬಾಡಿಗೆ ವೆಚ್ಚ ಮಾತ್ರ). ಹೂಳು ಎತ್ತಿದಾಗ ಬಂದ ಮಣ್ಣನ್ನು ರೈತರಿಗೆ ಕೊಟ್ಟೆವು. ಅದು ಅವರ ಗದ್ದೆ ಮತ್ತು ಜಮೀನುಗಳಲ್ಲೆಲ್ಲ ವ್ಯಾಪಿಸಿತು. ಅದರಿಂದ ಅವರ ಕೃಷಿ ಇಳುವರಿಯೂ ಹೆಚ್ಚಾಯಿತು. ಇಂತಹ ಒಂದು ಮಾದರಿಯನ್ನು ಸುಮಾರು ಹಳ್ಳಿಗಳು ಅನುಸರಿಸುವಂತಹ ಕೆಲಸ ಅಂದು ಆಯಿತು.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com