ಜಾತ್ಯತೀತ ಮನೋಭಾವದವರು, ಪ್ರಬುದ್ಧ ಚಿಂತಕರು, ಮಾನವೀಯ ಮುಖದವರು ಆದ ಅಲಿಖಾನರ ಪತ್ರ, 'ಟಿಪ್ಪುವಿನ ಮೇಲೆ ವಿಷಕಾರುವುದೇಕೆ?' ಓದಿ ಅಶ್ಚರ್ಯವಾಯಿತು. ಪತ್ರದಲ್ಲಿ ಟಿಪ್ಪುಹೆಸರಿನ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧ ಮಾಡಬಾರದೆಂದು ಚಿದಾನಂದ ಮೂರ್ತಿಗಳನ್ನು ಅವರು ಕೇಳಿಕೊಂಡಿದ್ದಾರೆ. ಟಿಪ್ಪುಸುಲ್ತಾನ್ ಎಂತಹ ಆಡಳಿತಗಾರನಾಗಿದ್ದ ಎನ್ನುವುದರ ಬಗ್ಗೆ ನೂರಾರು ದಾಖಲೆಗಳು ನಮ್ಮ ಕಣ್ಣೆದುರಿಗಿವೆ. ಸಂಶೋಧಕರಾದ ಚಿದಾನಂದಮೂರ್ತಿಗಳನ್ನೊಳಗೊಂಡಂತೆ ಹಲವಾರು ಪ್ರಭುದ್ಧರು, ಟಿಪ್ಪು ಎಂಥಹವನೆಂಬುದರ ಸತ್ಯದರ್ಶನ ಮಾಡಿಸಿದ್ದಾರೆ. 'ಇಸ್ರೇಲ್ನ ವಿಶ್ವವಿದ್ಯಾಲಯಕ್ಕೆ ಹಿಟ್ಲರ್ನ ಹೆಸರಿಟ್ಟರೆ ಹೇಗಿರುತ್ತೆ?' ಎನ್ನುವ ಸಂದೀಪ್ ಬಾಲಕೃಷ್ಣ ಅವರ ಲೇಖನವನ್ನು ತಾವು ಓದಿಲ್ಲವೆನಿಸುತ್ತದೆ. ಓದಿದ್ದರೆ ತಾವು ಹೀಗೆ ಬರೆಯುತ್ತಿರಲಿಲ್ಲವೇನೋ? ಅಷ್ಟೇ ಅಲ್ಲದೆ, ಆತ ಕನ್ನಡ ಭಾಷೆಯ ಮೇಲೂ ದಾಳಿ ಮಾಡಿದ್ದ. ತನ್ನ ಕಾಲಾವಧಿಯಲ್ಲಿ ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ.
ಆಳುವವರು ಹಲವಾರು ತಪ್ಪುಗಳು ಮಾಡುತ್ತಾರೆ ನಿಜ, ಆದರೆ ಒಂದು ಜನಾಂಗವನ್ನೇ ದ್ವೇಷಿಸುವ ಮತಾಂತರಗೊಳಿಸುವ, ಮತಾಂತರಗೊಳ್ಳದವರ ರಕ್ತಹರಿಸುವ, ಅವರ ಭಾಷೆಯನ್ನೇ ಕಿತ್ತೊಗೆದುಬಿಡುವ, ಅಸಹನೆ, ಅಸಹಿಷ್ಣುತೆಯನ್ನೇ ಕಾಯಕವನ್ನಾಗಿ ಮಾಡಿಕೊಂಡ ವ್ಯಕ್ತಿಯನ್ನು ಅಪರಾಧಿ ಎಂದೇ ಪರಿಗಣಿಸಬೇಕಾಗುತ್ತದೆ. ಅಂಥಹ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಏನೇ ಸಾಧನೆ ಮಾಡಿರಲಿ, ಆತ ಎಂದಿಗೂ ಆದರ್ಶ ಪುರುಷನಾಗಲಾರ.
ಪರಧರ್ಮ ಸಹಿಷ್ಣುವಾದ, ಸಮತಾಭಾವದ ವ್ಯಕ್ತಿ ದೊಡ್ಡವನೆಸಿಸುತ್ತಾನೆ. ಆದರ್ಶವ್ಯಕ್ತಿಯಾಗುತ್ತಾನೆ. ಆದರೆ ಟಿಪ್ಪುಸುಲ್ತಾನ್ನಲ್ಲಿ ಇಂಥಹ ಯಾವ ಆದರ್ಶ ನಿಮಗೆ ಕಂಡಿತು? ಇಷ್ಟಕ್ಕೂ ಆ ವಿಶ್ವವಿದ್ಯಾಲಯಕ್ಕೆ ಆ ಹೆಸರಿಡುವ ಅವಶ್ಯಕತೆ ಏನಿದೆ? ಹಾಗೆಯೇ ಧರ್ಮದ ಬುನಾದಿಯ ಮೇಲೆ ನಿಂತಿರುವ ವಿಶ್ವವಿದ್ಯಾನಿಲಯದಿಂದ 'ಸಿಮಿ'ಯಂತಹ ಉಗ್ರ ಸಂಘಟನೆಗಳು ಹುಟ್ಟಿಕೊಂಡಿದ್ದು ನಿಮಗೆ ತಿಳಿದಿಲ್ಲವೇ?
ನಿಸ್ಪಕ್ಷಪಾತವಾಗಿ, ಸುಮುಖವಾಗಿ ಅಧ್ಯಯನ ನಡೆಯಬೇಕಾದ ಜಾಗದಲ್ಲಿ ಧರ್ಮವನ್ನು ತಂದು ಮೂಲಭೂತ ವಾದಕ್ಕೆ ಕುಮ್ಮಕ್ಕು ನೀಡಿ ಕೇಂದ್ರ ಸರ್ಕಾರ ಈ ನಿಟ್ಟಿನ್ನಲಿ ತಪ್ಪುಮಾಡುತ್ತಿದೆ. ಹಾಗೊಂದು ವೇಳೆ ವಿ.ವಿ.ಗಳ ಸ್ಥಾಪನೆ ಮಾಡಲೇಬೇಕಾದರೆ ಧರ್ಮ, ಜಾತಿಗಳ, ಸಂಕೋಲೆ ಇಲ್ಲದ ಆದರ್ಶ ವ್ಯಕ್ತಿಗಳ ಹೆಸರನ್ನಿಡಲಿ. ಮುಸ್ಲಿಮ್ ವಿಶ್ವವಿದ್ಯಾಲಯದ ಬದಲು ಸಾರ್ವಜನಿಕ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ. ಅದಕ್ಕೆ ಬೇಕಾದರೆ ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂಥವರ, ಇಲ್ಲವೇ ಸಂತ ಶಿಶುನಾಳ ಶರೀಫರ ಹೆಸರಿಡಲಿ. ಆಗ ಯಾರು ವಿರೋಧಿಸುವುದಿಲ್ಲ. ಇಲ್ಲವೆ ಶ್ರೀರಂಗಪಟ್ಟಣವನ್ನು ಸುತ್ತುವರೆದು ಸಲಹುತ್ತಿರುವ ಜೀವನದಿ ಕಾವೇರಿ ತಾಯಿಯ ಹೆಸರು ಅದಕ್ಕಿಡಬಹುದಲ್ಲವೇ? ನಿಷ್ಪಕ್ಷಪಾತಿಯಾದ ಅಲಿಖಾನರ ಮನದಲ್ಲಿ ಈ ಈ ವಿಚಾರ ಏಕೆ ಕುಣಿಯಿತೋ ಗೊತ್ತಿಲ್ಲ. ಇಷ್ಟೆಲ್ಲ ಅತ್ಯಾಚಾರವನ್ನು ಆತ ನಿರ್ದಿಷ್ಟ ಜನಾಂಗದ ಮೇಲೆ ಎಸಗಿರುವಾಗ, ವಿಷಕಾರದೆ ಅಮೃತ ಸುರಿಸಲಾಗುತ್ತದೆಯೇ ಡಾ. ಮುಮ್ತಾಜ್ ಅಲಿ ಖಾನರೇ?