ಸಿಮೆಂಟ್ ಉದ್ದಿಮೆಗಳು ಸ್ಥಳೀಯರ ಬದುಕು ಕಟ್ಟಲಿಲ್ಲ!
ಹಾವಿನ ಸ್ನೇಹ ಮಾಡಿ ಸುಟ್ಟುಹೋದ ಮರದ ಕಥೆ ಎಲ್ಲರಿಗೂ ಗೊತ್ತು. ಸಿಮೆಂಟ್ ಉದ್ದಿಮೆಗಳೊಂದಿಗೆ ಸ್ನೇಹ ಇಟ್ಟುಕೊಂಡಿರುವ ಗುಲ್ಬರ್ಗದ್ದೂ ಇದೇ ಕಥೆ ಆಗಿದೆ. ಹೊಸ ಸಿಮೆಂಟ್ ಉದ್ದಿಮೆಗಳು ಇತ್ತ ಮುಖಮಾಡುತ್ತಿವೆ. ಆದರೆ ಈ ಜಿಲ್ಲೆಯ ಪ್ರಗತಿಗೆ ಯಾವ ಉದ್ದಿಮೆಗಳಿಂದಲೂ ಪ್ರಯೋಜನವಾಗಿಲ್ಲ ಎಂಬುದು ಮಾತ್ರ ವಾಸ್ತವ.
'ಸಾರಾ ಸಮುಂದರ್ ಮೆರಾ ಪಾಸ್ ಹೈ, ಏಕ್ ಬೂಂದ ಪಾನಿ ಕಿ ಮೆರಾ ಪ್ಯಾಸ್ ಹೈ' (ಸಮುದ್ರವೇ ನನ್ನ ಹತ್ತಿರವಿದೆ, ಆದರೂ ಹನಿ ನೀರಿಗಾಗಿ ಪರಿತಪಿಸುತ್ತಿರುವೆ) ಎಂಬಂತಾಗಿದೆ ಗುಲ್ಬರ್ಗದವರ ಬದುಕು. ದೈತ್ಯ ಕೊಳವೆ (ಕಿಲ್)ಗಳೊಂದಿಗೆ ಪ್ರಪಂಚವೇ ನಿಬ್ಬೆರಗಾಗುವಂತಂಹ ತಂತ್ರಜ್ಞಾನ ಅಳವಡಿಸಿಕೊಂಡು ವಾರ್ಷಿಕ ಲಕ್ಷಾವಧಿ ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದಿಸುವ ಬೃಹತ್ ಉದ್ದಿಮೆಗಳು ಗುಲ್ಬರ್ಗದಲ್ಲಿದ್ದರೂ ಶೈಕ್ಷಣಿಕ ಸೌಕರ್ಯ, ಆರೋಗ್ಯ ಸೇವೆ, ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು, ಸೌಲಭ್ಯಪೂರ್ಣ ಶಾಲೆ- ಕಾಲೇಜುಗಳಿಗೆ ಇಲ್ಲಿನ್ನೂ ಬರ. ಅಷ್ಟೇ ಯಾಕೆ, 'ಸಿಮಂಟ್ ಕಾಶಿ' ಎಂದೇ ಹೆಸರಾದರೂ ನಿರುದ್ಯೋಗ ಸಮಸ್ಯೆಗೆ ಮಾತ್ರ ಪರಿಹಾರವಿಲ್ಲ.
ಅತ್ಯಾಧುನಿಕ ತಂತ್ರಜ್ಞಾನದ, ಕೌಶಲ್ಯ ಆಧರಿತ ಕೆಲಸಗಳ ಮಾತಿರಲಿ, ಸಿಮೆಂಟ್ ಚೀಲ ತುಂಬುವ- ಕಟ್ಟುವ, ಉತ್ಪಾದನೆಯ ಸ್ಥಳದಲ್ಲಿ ಕಸ ಗುಡಿಸುವಂತಹ 'ಸಿ' ಮತ್ತು 'ಡಿ' ಗುಂಪಿನ ಹುದ್ದೆಗಳಿಗೂ ಹೈ- ಕ ನೆಲದವರಿಗೆ ಜಾಗವಿಲ್ಲ. ನಮ್ಮ ನೆಲ, ಜಲ ಬಳಸಿಕೊಂಡು ಕೋಟಿಗಟ್ಟಲೆ ಬಾಚಿಕೊಳ್ಳುತ್ತಿರುವ ಸಿಮೆಂಟ್ ಉದ್ಯಮಿಗಳು ದೂರದ ಗುಜರಾತ್, ರಾಜಸ್ಥಾನ, ಬಿಹಾರದಂತಹ ಅನ್ಯ ರಾಜ್ಯಗಳ ಕಾರ್ಮಿಕರಿಗೆ ಇಲ್ಲಿ ಮಣೆ ಹಾಕುತ್ತಿದ್ದಾರೆಯೇ ಹೊರತು ಸ್ಥಳೀಯರಿಗೆ 'ಕೆಲಸವಿಲ್ಲ' ಎಂದು ಕೈಯಾಡಿಸಿಬಿಡುತ್ತಾರೆ. ಗುಲ್ಬರ್ಗದಲ್ಲಿ ಈಗಾಗಲೇ ಬೃಹತ್ ಪ್ರಮಾಣದ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ 5 ಸಿಮೆಂಟ್ ಉದ್ದಿಮೆಗಳಿದ್ದರೂ ಬೇರು ಹಂತದಲ್ಲಿ ನಿರುದ್ಯೋಗ ಇನ್ನೂ ಸಾಮಾನ್ಯ ಜನರನ್ನು ಬೇಟೆಯಾಡುತ್ತಿದೆ. 'ಯಾಕೆ ಕಳೆದ 3 ದಶಕಗಳಿಂದ ಸಿಮೆಂಟ್ ಉತ್ಪಾದನೆ ಸಾಗಿದ್ದರೂ ನಮಗೆ ಕೆಲಸ ಸಿಗುತ್ತಿಲ್ಲ' ಎಂದು ಇಲ್ಲಿನವರು ಫ್ಯಾಕ್ಟರಿ ಕಂಡಾಗೆಲ್ಲಾ ಕೊರಗುತ್ತಲೇ ಇದ್ದಾರೆ.
ಗುಲ್ಬರ್ಗ ಜಿಲ್ಲೆಯ ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕುಗಳಲ್ಲೆಲ್ಲ ಬೃಹತ್ ಸಿಮೆಂಟ್ ಘಟಕಗಳೇ ಪವಡಿಸಿವೆ. ವಾಸವದತ್ತಾ, ರಾಜಶ್ರೀ, ಎಸಿಸಿ, ವಿಕಾಟ ಸಾಗರ್, ಜೆಕೆ ಸಿಮೆಂಟ್ ಈಗಾಗಲೇ ದಶಕಗಳಿಂದ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ನಿತ್ಯ ಲಕ್ಷಾಂತರ ಟನ್ ಸಿಮೆಂಟ್ ಉತ್ಪಾದನೆಯಲ್ಲಿ ತೊಡಗಿವೆ. ಇಂಡಸ್ಟ್ರಿಯಲ್ ಡಿಸ್ಪೂಟ್ ಆ್ಯಕ್ಟ್, ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ ಕಾನೂನು... ಹೀಗೆ ಜಾರಿಯಲ್ಲಿರುವ ಹಲವು ಕಾನೂನುಗಳಿಗೆ ಉದ್ದಿಮೆಗಳ ಮಂದಿ ಕ್ಯಾರೆ ಎನ್ನುತ್ತಿಲ್ಲ. ಸಿಮೆಂಟ್ ಉದ್ದಿಮೆದಾರರ ಹಿತಾಸಕ್ತಿ ಮುಕ್ಕಾಗಬಾರದು ಎಂದು ಬಂಡವಾಳಶಾಹಿಗಳ ಪರ ವಹಿಸಿಕೊಂಡೇ ನಮ್ಮನ್ನಾಳುವವರು, ಅಧಿಕಾರಿಗಳೆಲ್ಲರೂ ಇಲ್ಲಿನ ಕಾನೂನು ಉಲ್ಲಂಘನೆ ಪ್ರಕರಣಗಳಿಗೆ ಕ್ಯಾರೆ ಎಂದಿಲ್ಲ.
ಗುಲ್ಬರ್ಗ 'ಪ್ರಗತಿ ಪುರುಷರು' ಎಂದು ಕರೆಸಿಕೊಳ್ಳುವ, ಆ ಭಾಗವನ್ನು ಅಸೆಂಬ್ಲಿ, ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಜನನಾಯಕರ ಸಿಮೆಂಟ್ ಉದ್ದಿಮೆ ಸ್ನೇಹ, ಪರಿಸ್ಥಿತಿ ಇನ್ನೂ ಬಿಗಡಾಯಿಸಲು ಕಾರಣವಾಗಿದೆ. ಕೆಲಸವಿಲ್ಲವೆಂದು ಬಡವರು, ಅದರಲ್ಲೂ ಸಿಮೆಂಟ್ ಉದ್ದಿಮೆಗಳ ಸುತ್ತಲಿನ ಹಳ್ಳಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ, ಪುಣೆ, ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಶಹಾಬಾದ್, ವಾಡಿಯಲ್ಲೇ 3 ಸಿಮೆಂಟ್ ಉದ್ದಿಮೆಗಳಿದ್ದರೂ ಜಿಲ್ಲೆಯಿಂದ ಗುಳೆ ಹೋಗುವವರಲ್ಲಿ ಈ ಪರಿಸರದ ನಿವಾಸಿಗಳದ್ದೇ ಸಿಂಹಪಾಲು.
ಜಿಲ್ಲೆಯ ಕಾಗಿಣಾ, ಕಮಲಾವತಿ, ಭೀಮಾ ನದಿಗಳ ನೀರನ್ನು ಯಥೇಚ್ಚವಾಗಿ ಬಳಸಿಕೊಳ್ಳುತ್ತಿರುವ ಉದ್ದಿಮೆಗಳು ಅದಕ್ಕೆ ಪ್ರತಿಯಾಗಿ ತಾವು ನಿತ್ಯ ಉತ್ಪಾದಿಸುವ ತ್ಯಾಜ್ಯವನ್ನು ನದಿಗಳಿಗೆ ಹರಿಬಿಡುತ್ತಿವೆ. ಕಾಗಿಣಾ ನದಿತೀರದಲ್ಲಿ ಅದಾಗಲೇ ಸಿಮೆಂಟ್ ಕಾರ್ಖಾನೆಯಿಂದ ಹರಿದು ಬರುವ ರಾಡಿ ಸೇರಿಕೊಳ್ಳುತ್ತಿದ್ದರೂ ಯಾಕೆ ಈ ತ್ಯಾಜ್ಯ ನದಿಗೆ ಬಿಡುತ್ತೀರಿ ಎಂದು ಪ್ರಶ್ನಿಸುವ ಧಾರ್ಷ್ಟ್ಯ ಯಾರೂ ಪ್ರದರ್ಶಿಸಿಲ್ಲ. ಹಂಗನಹಳ್ಳಿ 19 ರೈತರ ಹೊಲಗದ್ದೆಗಳು ರಾಸಾಯನಯುಕ್ತ ನೀರಿನಿಂದ ಬೀಳು ಬಿದ್ದರೂ ಜಿಲ್ಲಾಡಳಿತ ಈ ಮಾರಕ ಬೆಳವಣಿಗೆಗೆ ಕುರುಡಾಗಿದೆ.
ಉದ್ದಿಮೆಗಳ ಈ ಕಳ್ಳದಾರಿ ವಿಚಾರ ಗೊತ್ತಿದ್ದೂ ಗೊತ್ತಿಲ್ಲದಂತೆ ಮಾಲಿನ್ಯ ನಿಯಂತ್ರಣ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಪೊಲೀಸ್, ಸಹಾಯಕ ಆಯುಕ್ತರು, ತಹಶೀಲ್ದಾರ್ ಆದಿಯಾಗಿ ಎಲ್ಲಾ ಹಂತದಲ್ಲಿಯೂ ಉದ್ದಿಮೆಗಳ ಪ್ರತಿ ಧೃತರಾಷ್ಟ್ರ ಪ್ರೇಮ ಹೆಚ್ಚುತ್ತಲೇ ಸಾಗಿದೆ.
ಗ್ರಾಮೀಣಾಭಿವೃದ್ಧಿ ಮಂತ್ರ ಜಪಿಸುತ್ತಲೇ ಬರುವ ಉದ್ದಿಮೆದಾರರು, ಇಲ್ಲಿ ತಳ ಊರಿದ ಮೇಲೆ ಅದನ್ನೆಲ್ಲ ಮರೆತು ಹಳ್ಳಿಗಾಡಿನ ಜನಜೀವನವನ್ನು ನರಕವಾಗಿಸುತ್ತಿದ್ದಾರೆ. ವಾಸವದತ್ತಾ ಸಿಮೆಂಟ್ನ ಖಣಿ ಪಕ್ಕದಲ್ಲೇ ಇರುವ ಇಂಜಪಲ್ಲಿ ಗ್ರಾಮದ ಬವಣೆಯೇ ಇದಕ್ಕೆ ಕನ್ನಡಿ. ಕಾರ್ಖಾನೆ ಬರುವ ಪೂರ್ವ ನೆಮ್ಮದಿಯಿಂದ ಇದ್ದ ಈ ಪುಟ್ಟ ಊರಲ್ಲೀಗ ಗಣಿಗಾರಿಕೆ ಸ್ಫೋಟದ ಸದ್ದಿನಿಂದ ನಿತ್ಯ ಭೂಕಂಪ. ಮನೆಗಳ ಜೊತೆಗೇ ಇಲ್ಲಿನವರ ಬದುಕೂ ಅಭದ್ರ. ಎಲ್ಲ ಕಾರ್ಖಾನೆಗಳಲ್ಲೂ ಗ್ರಾಮೀಣಾಭಿವೃದ್ಧಿ ವಿಭಾಗ ತೆರೆದುಕೊಂಡಿದ್ದರೂ ಅಲ್ಲಿನ ಗ್ರಾಮೀಣ ಕಲ್ಯಾಣ ಮಾತ್ರ ನೆಪಮಾತ್ರ. ಆರೋಗ್ಯ ಶಿಬಿರದ ಹೆಸರಿನಲ್ಲಿ ನಾಲ್ಕು ಮಂದಿ ತಪಾಸಣೆ ಮಾಡಿ ದೊಡ್ಡದಾಗಿ ಪ್ರಚಾರ ಗಿಟ್ಟಿಸುವ ಕಾರ್ಖಾನೆಗಳ ಧೂಳಿನಿಂದ ಅದೆಷ್ಟು ಲಕ್ಷ ಜನರಿಗೆ ಶ್ವಾಸಕೋಶ ತೊಂದರೆಗಳು ಕಾಡುತ್ತಿವೆ ಎಂಬುದನ್ನು ಅರಿಯುವ ಪ್ರಯತ್ನ ಇಂದಿಗೂ ಆಗುತ್ತಿಲ್ಲ.
ಯಾವುದೇ ಪ್ರದೇಶದಲ್ಲಿ ಒಂದೇ ತೆರನಾದ ಉದ್ದಿಮೆಗಳು ಅತಿಯಾಗಿ ತಲೆ ಎತ್ತಿದರೆ ಅಲ್ಲಿ ಅನಾಹುತ ಕಟ್ಟಿಟ್ಟಬುತ್ತಿ. ಆಯಾ ಪ್ರದೇಶದ ಧಾರಣ ಶಕ್ತಿ ಅಧ್ಯಯನವಾಗಲೇಬೇಕಲ್ಲವೆ. ಅದರಂತೆಯೇ ಸುಣ್ಣದ ಕಲ್ಲು ಇದೆ ಎಂದಾಕ್ಷಣ ಸಿಮೆಂಟ್ ಉದ್ದಿಮೆಗಳೇ ದಾಂಗುಡಿ ಇಡುತ್ತಿರುವ ಹೈ- ಕ ನೆಲದಲ್ಲಿ ಏನೆಲ್ಲಾ ನಡೆಯುತ್ತಿದೆ ಅಲ್ಲಿನ ಪರಿಸರ, ಜನಜೀವನದ ಮೇಲೆ ಸಿಮೆಂಟ್ ಉದ್ದಿಮೆಗಳು ಅದ್ಯಾವ ತೆರನಾದ ಪರಿಣಾಮ (ಸುಪರಿಣಾಮ- ದುಷ್ಪರಿಣಾಮ) ಬೀರಿವೆ ಎಂಬುದರ ಅಧ್ಯಯನ ಆಗಲೇಬೇಕಲ್ಲವೆ? ಅದ್ಯಾಕೋ ಏನೋ ವಾರ್ಷಿಕ ನಾಲ್ಕೆಂಟು ಸಿಮೆಂಟ್ ಉದ್ದಿಮೆಗಳಿಗೆ ಪರವಾನಿಗೆ ನೀಡುತ್ತಲೇ ಹೊರಟಿರುವ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಇಂತಹ ಯಾವ ಸಂಗತಿಗಳೂ ಗೋಚರಿಸುತ್ತಿಲ್ಲ. ಏಕೆಂದರೆ ಬರುವ ಇನ್ನೆರಡು ವರ್ಷಗಳಲ್ಲಿ ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಇನ್ನೂ 6 ಹೊಸ ಕಾರ್ಖಾನೆಗಳು ಆರಂಭವಾಗಲಿವೆಯಂತೆ! ಶ್ರೀ ಸಿಮೆಂಟ್, ದಾಲ್ಮಿಯಾ, ಝುವಾರಿ... ಹೀಗೆ ಹಲವು ಕಪನಿಗಳವರು ಪರವಾನಿಗೆ ಪಡೆದು ಭೂಮಿ ಖರೀದಿಗೆ ದಾಪುಗಾಲು ಹಾಕುತ್ತಿದ್ದಾರೆ.
ಸ್ಥಳೀಯ ರಾಜಕೀಯ ಪುಢಾರಿಗಳು, ಮರಿ ಪುಢಾರಿಗಳಂತೂ ಕಂಪನಿಗಳ ಎಂಜಲು ಕಾಸಿಗೆ ಆಸೆಪಡುತ್ತ ರೈತರನ್ನೇ ಯಾಮಾರಿಸುವ ದಂಧೆಗೆ ಮುಂದಾಗಿದ್ದಾರೆ. ರೈತರು- ಕಂಪನಿಗಳವರ ನಡುವೆ ದಲ್ಲಾಳಿಯಾಗಿ ವರ್ತಿಸುತ್ತ ಬಂಗಾರದಂತಹ ಬೆಳೆ ಬೆಳೆಯುವ ಭೂಮಿಯನ್ನೇ ಕಾರ್ಪೋರೇಟ್ ಕಂಪನಿಗಳ ಜೋಳಿಗೆ ತುಂಬುವಂತೆ ಮಾಡುತ್ತಿದ್ದಾರೆ. ಔದ್ಯಮೀಕರಣ ಸ್ವಾಗತಿಸಲೇಬೇಕು, ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತೇ ಇದೆಯಲ್ಲ, ಹಾಗೆಯೇ ಒಂದು ನಿರ್ದಿಷ್ಟ ಭೌಗೋಳಿಕ ಪರಿಸರದಲ್ಲಿ ಒಂದೇ ತೆರನಾದ ಉದ್ದಿಮೆಗಳೇ ತಲೆಎತ್ತಲಾರಂಭಿಸಿದರೆ ಅದರಿಂದ ಅಪಾಯವೇ ಅಧಿಕವಲ್ಲವೆ?
- ಶೇಷಮೂರ್ತಿ ಅವಧಾನಿ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

