ವಕ್ರತುಂಡೋಕ್ತಿ ತಂದ ಸಂಕಟ, ಪೀಕಲಾಟ

ವಕ್ರತುಂಡೋಕ್ತಿ ನಿತ್ಯ ನಮ್ಮ ಓದುಗರಿಗೆ ಕಚಗುಳಿ ಇಡಬಹುದು. ಆದರೆ ನಾನು..
Updated on: 

ವಕ್ರತುಂಡೋಕ್ತಿ ನಿತ್ಯ ನಮ್ಮ ಓದುಗರಿಗೆ ಕಚಗುಳಿ ಇಡಬಹುದು. ಆದರೆ ಈಗಾಗಲೇ ನಾನು ಎರಡು ಕೇಸುಗಳನ್ನು ಎದುರಿಸುತ್ತಿದ್ದೇನೆಂದು ನಿಮಗೆ ಗೊತ್ತಿರಲಿ. ನನ್ನ ವಿರುದ್ಧ ಇರುವ ಆಪಾದನೆಯೆಂದರೆ ಸ್ತ್ರೀ ವಿರೋಧಿ, ಪತ್ನಿವಿರೋಧಿ

ರಜಾ ದಿನಗಳನ್ನು ಹೊರತುಪಡಿಸಿ, ಒಂದು ದಿನವೂ ಬಿಡದೇ, ಕಳೆದ ಹದಿಮೂರು ವರ್ಷಗಳಿಂದ, ನಿತ್ಯವೂ ನಾನು ವಕ್ರತುಂಡೋಕ್ತಿ ಬರೆಯುತ್ತಿದ್ದೇನೆ. ಒಂದು ಅಥವಾ ಎರಡು ಸಾಲಿನ ಈ ಪುಟ್ಟ ವಾಕ್ಯವನ್ನು ಬರೆಯಲು ಒಮ್ಮೊಮ್ಮೆ ಅರ್ಧಗಂಟೆಗೂ ಹೆಚ್ಚು ಕಾಲ ಯೋಚಿಸಿದ್ದುಂಟು. ಒಮ್ಮೊಮ್ಮೆ, ಅಂಕಣ ಬರೆಯುವುದು ಸುಲಭ, ಆದರೆ ಒಂದು ಹಾಗೂ ಮತ್ತೊಂದರ ಸಾಲಿನ ವಕ್ರತುಂಡೋಕ್ತಿ ಬರೆಯುವುದು ಕಠಿಣ ಎಂದು ಅನಿಸಿದ್ದುಂಟು. ಯಾಕೆಂದರೆ ಒಂದು ಅಥವಾ ಎರಡು ಸಾಲುಗಳಲ್ಲಿ ಒಂದು ಮಿಂಚು, ಕಿರುನಗೆ, ತಿಳಿಹಾಸ್ಯ, ಸಣ್ಣನಗೆ, ದೊಡ್ಡ ಬೋರ್ಗರೆತದ ನಗುವನ್ನು ಕಟ್ಟಿಕೊಡುವುದು ಸಣ್ಣ ಕೆಲಸವಲ್ಲ.
ವಕ್ರತುಂಡೋಕ್ತಿಯನ್ನು ಕಾಯಂ ಆಗಿ ಓದುವ ಬಹು ದೊಡ್ಡ ಓದುಗ ವೃಂದವಿದೆಯೆಂಬುದು ಗೊತ್ತು. ಅನೇಕರು ವಕ್ರತುಂಡೋಕ್ತಿ ಆಗಬಹುದಾದ ಸಾಲುಗಳು ಹೊಳೆದರೆ ತಕ್ಷಣ ನನಗೆ ಕಳಿಸಿಕೊಡುತ್ತಾರೆ. ಇನ್ನು ಕೆಲವರು ಎಸ್ಸೆಮ್ಮೆಸ್ ಮಾಡುತ್ತಾರೆ. ವಕ್ರತುಂಡೋಕ್ತಿ ಹೆಚ್ಚಾಗಿ ಮದುವೆ, ದಾಂಪತ್ಯ, ಗಂಡ-ಹೆಂಡತಿ, ಸಂಸಾರದ ಸುತ್ತ ಸುತ್ತುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಹೆಂಡತಿಯರ ಕುರಿತಾಗಿ ಹಾಗೂ ಅವರ ವಿರುದ್ಧವಾಗಿ ಇರುವುದರಿಂದ ಪ್ರತಿದಿನ ಗಂಡ-ಹೆಂಡತಿ ನಡುವೆ ಸಣ್ಣ ಚರ್ಚೆಗೆ, ಪುಟ್ಟ ವಿರಸಕ್ಕೆ, ಮುನಿಸಿಗೆ ಕಾರಣವೂ ಆಗುತ್ತದೆ.
ವಕ್ರತುಂಡೋಕ್ತಿ ನಿತ್ಯ ನಮ್ಮ ಓದುಗರಿಗೆ ಕಚಗುಳಿ ಇಡಬಹುದು. ಆದರೆ ಈಗಾಗಲೇ ನಾನು ಎರಡು ಕೇಸುಗಳನ್ನು ಎದುರಿಸುತ್ತಿದ್ದೇನೆಂದು ನಿಮಗೆ ಗೊತ್ತಿರಲಿ. ನನ್ನ ವಿರುದ್ಧ ಇರುವ ಆಪಾದನೆಯೆಂದರೆ ಸ್ತ್ರೀ ವಿರೋಧಿ ಹಾಗೂ ಪತ್ನಿವಿರೋಧಿ. ಈ ಎರಡು ಆಪಾದನೆಗಳಿಗೆ ನಿಮ್ಮ ಹೆಂಡತಿಯ ಉತ್ತರ ನಿಮ್ಮ ಉತ್ತರದ ಜತೆಗೆ ಇರಲಿ ಎಂದು ವಕೀಲರು ಹೇಳಿದರು. 'ವಕ್ರತುಂಡೋಕ್ತಿಯಲ್ಲಿ ನಿಮ್ಮ ಯಜಮಾನರು ಹೆಂಡತಿಯರ ವಿರುದ್ಧ ಬರೆಯುತ್ತಾರಲ್ಲಾ, ಈ ಬರಹಕ್ಕೆ ನೀವೇ ಸ್ಫೂರ್ತಿನಾ? ನಿಮಗೇನೂ ಅನಿಸುವುದೇ ಇಲ್ಲವಾ? ನೀವು ಪ್ರತಿಭಟಿಸಬೇಕು. ನಿಮ್ಮ ಜಾಗದಲ್ಲಿ ನಾವೇನಾದರೂ ಇದ್ದಿದ್ದರೆ ಕತೆಯೇ ಬೇರೆ ಇರುತ್ತಿತ್ತು' ಎಂದು ಹಲವು ಮಹಿಳೆಯರು ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಸಿಕ್ಕಾಗ ನನ್ನ ಪತ್ನಿಯನ್ನು ಕಿಚಾಯಿಸುವುದುಂಟು. (ನನ್ನ ಗಂಡನನ್ನು ಸ್ತ್ರೀಯರೆಲ್ಲ  ಸ್ತ್ರೀವಿರೋಧಿ ಎಂದು ಭಾವಿಸಿರುವುದು ಸುರಕ್ಷಿತ ಎಂದು ನನ್ನ ಪತ್ನಿಯೂ ಯೋಚಿಸಿರಬಹುದಾ ಎಂದು ನಾನಂತೂ ಹಲವು ಸಲ ಯೋಚಿಸಿದ್ದೇನೆ.)
'ವಕ್ರತುಂಡೋಕ್ತಿ ಒಂದು ತಿಳಿಹಾಸ್ಯಕ್ಕೆ ಕಾರಣವಾಗುವುದಾದರೆ ಆಗಲಿ ಬಿಡಿ. ವಕ್ರತುಂಡೋಕ್ತಿಯನ್ನು ನಾನು ಗಂಭೀರವಾಗಿ, ಪರ್ಸನಲ್ ಆಗಿ ಸ್ವೀಕರಿಸುವುದಿಲ್ಲ. ಕೆಲವು ವಕ್ರತುಂಡೋಕ್ತಿಗಳನ್ನು ನಾನೇ ನಮ್ಮೆಜಮಾನರಿಗೆ ಹೇಳಿದ್ದುಂಟು. ಗಂಡ-ಹೆಂಡತಿ ಮಧ್ಯೆ ನಾಲ್ಕು ಮಾತಿಗೆ ಕಾರಣವಾಗುವುದಾದರೆ, ಒಳ್ಳೆಯದೇ ಅಲ್ಲವಾ?' ಎಂದು ನನ್ನ ಪತ್ನಿ ಸಮಜಾಯಿಷಿ ನೀಡುವುದನ್ನು ನಾನೇ ಹಲವು ಬಾರಿ ಕೇಳಿದ್ದೇನೆ, ನೋಡಿದ್ದೇನೆ.
ಮೊನ್ನೆ ನಮ್ಮ ವಕೀಲರು ಫೋನ್ ಮಾಡಿ 'ಮುಂದಿನ ತಿಂಗಳು ಕೇಸಿದೆ. ವಕ್ರತುಂಡೋಕ್ತಿ
ಬರೀತೀರಲ್ಲ, ಅದಕ್ಕೆ ಸಂಬಂಧಿಸಿದ್ದು' ಎಂದು ಜೋರಾಗಿ ನಗತೊಡಗಿದರು. ನನ್ನ ಪಾಡನ್ನು ನೋಡಿ ನಕ್ಕರೋ, ತಮಗೆ ಫೀಜು ಸಿಗುತ್ತದಲ್ಲ ಎಂಬ ಆಸೆಯಿಂದ ನಕ್ಕರೋ ತಿಳಿಯಲಿಲ್ಲ.
ಆದರೆ ನನಗೆ ಖುಷಿ ಎನಿಸಿದ್ದು ನಮ್ಮ ವಕೀಲರು ಸಿದ್ಧಪಡಿಸಿದ ಉತ್ತರ ನೋಡಿ. ಸುಮಾರು ಇಪ್ಪತ್ತೊಂದು ಪುಟಗಳ ಸುದೀರ್ಘ ಉತ್ತರ ಬರೆದಿದ್ದಾರೆ. ವಕ್ರತುಂಡೋಕ್ತಿ ಅಂದ್ರೆ ಏನು ಎಂಬುದನ್ನು ನನಗಿಂತ ಅವರೇ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಜತೆಯಲ್ಲಿ 'ವಕ್ರತುಂಡೋಕ್ತಿ ಭಾಗ-1 ಹಾಗೂ ಭಾಗ-2' ಪುಸ್ತಕಗಳನ್ನೂ ಇಟ್ಟಿದ್ದಾರೆ. ಕೇಸು ಏನಾದರೂ ಆಗಲಿ, ಆದರೆ ಒಂದು ಸಾಲಿನ ಬರಹದ ಪರಿಣಾಮ ಮಾತ್ರ ಗಂಭೀರ. (ಕನಿಷ್ಠ ಪಕ್ಷ ನನ್ನ ವಿರುದ್ಧ ಕೇಸು ಹಾಕಿದವರಿಗೆ.) ಉಳಿದವರಿಗೆ ಅದು ಶುದ್ಧ ತಮಾಷೆಯೇ ಆಗಿರಬಹುದು. 'ಈ ಕೇಸನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ. ಗಂಭೀರವಾಗಿ ಫೈಟ್ ಮಾಡೋಣ, ಒಂದಷ್ಟು ತಮಾಷೆ ಸಿಗಬಹುದು' ಎಂದು ನನ್ನ ವಕೀಲರಿಗೆ ಹೇಳಿದ್ದೇನೆ. ನಮ್ಮ ವಕೀಲರು ಸಿದ್ಧಪಡಿಸಿದ ಉತ್ತರವನ್ನು ಓದಿದ ಬಳಿಕ ವಕ್ರತುಂಡೋಕ್ತಿ ಬಗ್ಗೆ ನಿಮಗೂ ಕೆಲವು ಸಂಗತಿಗಳನ್ನು ತಿಳಿಸಬೇಕು ಅನಿಸುತ್ತಿದೆ.
ವೈ.ಎನ್. ಕೃಷ್ಣಮೂರ್ತಿ ಅರ್ಥಾತ್ ವೈಯೆನ್ಕೆ ಅವರು 'ಕನ್ನಡಪ್ರಭ' ಸಂಪಾದಕರಾಗಿದ್ದಾಗ ನಾನು ಇದೇ ಪತ್ರಿಕೆಯಲ್ಲಿ ಕಿರಿಯ ಉಪಸಂಪಾದಕನಾಗಿದ್ದೆ. ಅವರು ಆಗಾಗ 'ಇಂಗ್ಲೀಷಿನಲ್ಲಿ ್ಟಟಿಜ ಟ್ಝಟಿಜ್ಠ ಅಂತ ಇದೆ. ಆಸ್ಕರ್‌ವೈಲ್ಡ್, ಆ್ಯಗೃನ್ ನ್ಯಾಷ್, ವುಡ್‌ಹೌಸ್ ಮುಂತಾದವರ ಬರಹಗಳಲ್ಲಿ ಈ ಒನ್‌ಲೈನರ್ ಬಹಳ ಜನಪ್ರಿಯ. ಕನ್ನಡದಲ್ಲೂ ಈ ಪ್ರಕಾರವನ್ನು ಜನಪ್ರಿಯಗೊಳಿಸಬೇಕು. ನೀವು ಪ್ರಯತ್ನಿಸಿ' ಎಂದು ನನ್ನ ಮುಂದೆ ಅನೇಕ ಸಲ ಹೇಳಿದ್ದರು. 'ಒನ್‌ಲೈನರ್ ಹೇಗಿರಬೇಕು ಅಂದ್ರೆ ಐದು ನಿಮಿಷದ ಜೋಕಿಗೆ ಎಷ್ಟು ನಗುತ್ತೇವೋ, ಅದಕ್ಕಿಂತ ಜಾಸ್ತಿ ಒನ್‌ಲೈನರ್ ಕೇಳಿ ನಗಬೇಕು. ಉದಾಹರಣೆಗೆ ಒಂದು ಹೇಳ್ತೀನಿ. ಕೆಲವರು, ಹಲ್ಲುಜ್ಜಿದರೆ ಕ್ಲೀನಾಗುವುದು ಬ್ರಶ್‌' ಎಂದು ಹೇಳಿ ನಗಿಸುತ್ತಿದ್ದರು.
ವೈಯೆನ್ಕೆ ಅವರು ಹೇಳಿದ್ದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು. ನಾನು 'ವಿಜಯಕರ್ನಾಟಕ' ಸೇರಿದಾಗ ಇಂಥದೊಂದು ಅಂಕಣ ಆರಂಭ ಮಾಡಲು ನಿರ್ಧರಿಸಿದೆ. ಅದಕ್ಕೆ 'ವಕ್ರತುಂಡೋಕ್ತಿ' ಅಂತ ನಾಮಕರಣ ಮಾಡಿದೆ. ಇದಕ್ಕೆ ಮೂಲ ಪ್ರೇರಣೆ ವೈಯೆನ್ಕೆ ಅವರೇ.
ಕೆಲವು ತಿಂಗಳುಗಳ ಹಿಂದೆ ಮನೆ ಬದಲಿಸುವಾಗ ವೈಯೆನ್ಕೆ ಅವರು ಬರೆದ ಕೆಲವು ಒನ್‌ಲೈನರ್ಸ್ ಅರ್ಥಾತ್ ವಕ್ರತುಂಡೋಕ್ತಿಗಳು ಸಿಕ್ಕವು. ಬಹಳ ಸಂತಸವಾಯಿತು. ವಕ್ರತುಂಡೋಕ್ತಿಯ ಜನಪ್ರಿಯತೆಯನ್ನು ಅವರು ನೋಡಿದ್ದರೆ ಬಹಳ ಖುಷಿಪಡುತ್ತಿದ್ದರು. ಪ್ರತಿದಿನ ಅವರೇ ವಕ್ರತುಂಡೋಕ್ತಿಗಳನ್ನು ಸೂಚಿಸುತ್ತಿದ್ದರು.
ರಾಜಕಾರಣ (ಣಿ) ಬಗ್ಗೆ ವೈಯೆನ್ಕೆ ಬರೆದ ಕೆಲವು ವಕ್ರತುಂಡೋಕ್ತಿಗಳನ್ನು ನಿಮ್ಮ ಓದಿನ ಆನಂದಕ್ಕೆ ಕೊಡುತ್ತಿದ್ದೇನೆ.
-ಆತನ ಜನಪ್ರಿಯತೆ ಎಷ್ಟು ಕೆಳಕ್ಕೆ ಇಳಿದಿದೆ ಅಂದ್ರೆ ಅವನೊಬ್ಬನೇ ಚುನಾವಣೆಗೆ ನಿಂತರೂ ಠೇವಣಿ ಕಳೆದುಕೊಳ್ಳುತ್ತಾನೆ.
-ನನ್ನ ವಿರೋಧಿ ಬಗ್ಗೆ ನನಗೆ ದ್ವೇಷವಿಲ್ಲ. ಅಂಥ ಸಂದರ್ಭದಲ್ಲಿ ದರಿದ್ರ ಹೆಗ್ಗಣ ಏನು ಮಾಡುತ್ತಿತ್ತೋ ಅದನ್ನೇ ಮಾಡಿದ್ದಾನೆ.
- 'ಅವನನ್ನ ಅಗ್ಗದ, ಬೆಲೆ ಇಲ್ಲದ ರಾಜಕಾರಣಿ ಅಂತ ಕರೆಯೊಲ್ಲ. ಅವನಿಗಾಗಿ ದೇಶ ದುಬಾರಿ ಹಣ ಖರ್ಚು ಮಾಡುತ್ತಿದೆ'
-ಈ ಇಬ್ಬರು ಹುರಿಯಾಳುಗಳನ್ನು ನೋಡಿದರೆ, ಸದ್ಯ ಒಬ್ಬ ತಾನೆ ಚುನಾಯಿತನಾಗೋದು ಅನ್ನೋದೆ ಸಮಾಧಾನ.
-ತಪ್ಪು ಮಾಡುವುದು ಮಾನವಸಹಜ. ಅದನ್ನು ಮತ್ತೊಬ್ಬರ ಮೇಲೆ ಹೊರಿಸುವುದು ರಾಜಕಾರಣ.
- ನಾವು ಹುಡುಗರಾಗಿದ್ದಾಗ ಹೇಳುತ್ತಿದ್ದರು-'ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದೂಂತ.' ಈಗ ನೋಡಿದರೆ ಅದು ನಿಜ ಅಂತ ಅನಿಸುತ್ತಿದೆ.
-ನಾನು ಯಾರ ಪರವಾಗಿಯೂ ವೋಟ್ ಮಾಡೊಲ್ಲ, ವಿರೋಧವಾಗಿ ಮಾಡ್ತೀನಿ.
-ನಿಮ್ಮ ವಂಶವೃಕ್ಷದ ಬಗ್ಗೆ ಮಾಹಿತಿ ಬೇಕಾದರೆ ಸುಮ್ಮನೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಚುನಾವಣೆಗೆ ನಿಂತರೆ ಸಾಕು, ನಿಮ್ಮ ಎದುರಾಳಿಯೇ ಎಲ್ಲ ಜಗಜ್ಜಾಹೀರು ಮಾಡುತ್ತಾನೆ.
-ನಿಮ್ಮ ತಲೆ ಮೇಲೆ ಹತ್ತಿ ಮೆರೆಯುವುದಕ್ಕಾಗಿ ರಾಜಕಾರಣಿ ನಿಮ್ಮ ಸೇವಕನೆಂದು ಸೋಗು ಹಾಕುತ್ತಾನೆ.
-ಯಾವ ಪಕ್ಷವೇ ಆಗಲಿ, ಅದರ ನಾಯಕರಷ್ಟು ಕಚಡಾ ಆಗಿರೋದಿಲ್ಲ.
   ಅಂದ ಹಾಗೆ ಈ ಒನ್‌ಲೈನರ್‌ಗಳನ್ನು ವೈಯೆನ್ಕೆಯವರು ಬರೆದಿದ್ದು ಸುಮಾರು ಹದಿನಾರು ವರ್ಷ (1997) ಗಳ ಹಿಂದೆ.

ಹೀಗೊಂದು ದೂರು
ಆ ಆಶ್ರಮದಲ್ಲಿರುವ ಸನ್ಯಾಸಿಗಳಿಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಮಾತ್ರ ನಾಲ್ಕು ಪದಗಳಿಗೆ ಮೀರದ ಒಂದು ವಾಕ್ಯ ಮಾತಾಡಲು ಅವಕಾಶ ಸಿಗುತ್ತಿತ್ತು. ಅದಕ್ಕಿಂತ ಹೆಚ್ಚು ಮಾತಾಡುವಂತಿಲ್ಲ. ಅಷ್ಟು ಮಾತಾಡಿದ ಬಳಿಕ ಪುನಃ ಮೌನಕ್ಕೆ ಶರಣಾಗಿ ಜಪದಲ್ಲಿ ತಲ್ಲೀನರಾಗಬೇಕು. ಇದು ಅಲ್ಲಿನ ನಿಯಮ.
ಸನ್ಯಾಸಿಯೊಬ್ಬ ಹತ್ತು ವರ್ಷ ಪೂರೈಸಿದ. ಆತನಿಗೆ ಮೊದಲ ಸಲ ಮಾತಾಡುವ ಅವಕಾಶ ಸಿಕ್ಕಿತು. ಧರ್ಮಗುರು ಬಳಿ ಹೋಗಿ, 'ಈ ಆಶ್ರಮದಲ್ಲಿ ಊಟ ಸರಿಯಾಗಿಲ್ಲ' ಅಂದು ಮೌನಕ್ಕೆ ಜಾರಿದ. ಹತ್ತು ವರ್ಷಗಳು ಕಳೆದವು. ಪುನಃ ಧರ್ಮಗುರುವಿನ ಬಳಿ ಹೋಗಿ, 'ಈ ಆಶ್ರಮದಲ್ಲಿ ಹಾಸಿಗೆ ಚೆನ್ನಾಗಿಲ್ಲ.' ಅಂದು ಮೌನಕ್ಕೆ ಶರಣಾದ.
ಮೂವತ್ತು ವರ್ಷಗಳು ಗತಿಸಿದವು. ಪುನಃ ಮಾತಾಡುವ ಅವಕಾಶ. ಧರ್ಮಗುರುವಿನ ಮುಂದೆ ಹೋದ ಅದೇ ಸನ್ಯಾಸಿ, 'ಈ ಆಶ್ರಮದಲ್ಲಿ ವಿಪರೀತ ಚಳಿ' ಅಂದ. ನಂತರ ಜಪಕ್ಕೆ ಅಣಿಯಾದ.ನಲವತ್ತು ವರ್ಷಗಳು ಕಳೆದು ಹೋದವು. ಮತ್ತೆ ಮಾತಾಡುವ ಅವಕಾಶ. ಧರ್ಮಗುರುವಿನ ಮುಂದೆ ನಿಂತು
'ಈ ಆಶ್ರಮದಿಂದ ನಿರ್ಗಮಿಸುತ್ತಿದ್ದೇನೆ' ಎಂದ. ಅವನ ಮಾತುಗಳನ್ನು ಕೇಳಿದ ಧರ್ಮಗುರು ಚುರುಕಾಗಿ ಹೇಳಿದ-'ನಿನ್ನ ನಿರ್ಧಾರದಿಂದ ನನಗೆ ಅಚ್ಚರಿಯಾಗುತ್ತಿಲ್ಲ. ನೀನು ನಲವತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದಂದಿನಿಂದ ದೂರುತ್ತಲೇ ಇದ್ದೀಯಾ.'

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com