ಬೆತ್ತಲಾದ ರಾಜಕಾರಣಿಗಳು!
ಬಾಟ್ಲಾ ಹೌಸ್ ಶೂಟೌಟ್ ನಡೆದು ಬರೋಬ್ಬರಿ 5 ವರ್ಷಗಳು ಕಳೆದಿವೆ. ಕೊನೆಗೂ ನ್ಯಾಯಾಲಯ ಸರಿಯಾದ ತೀರ್ಪು ಕೊಟ್ಟಿದ್ದು ನೋಡಿ ಇಡೀ ದೇಶವೇ ಸಂಭ್ರಮಾಚರಣೆ ಮಾಡುತ್ತಿದೆ. ಈ ಶೂಟೌಟ್ ಮಾಡಿದ ಮೋಹನ್ ಚಾಂದ್ ಶರ್ಮಾರ ಆತ್ಮಕ್ಕೆ ಶಾಂತಿಯೇನೋ ಸಿಕ್ಕಿರಬಹುದು, ಆದರೆ ಆತಂಕವಾದಿಗಳ ಹೆಸರಿನಲ್ಲಿ ಕಳೆದ 5 ವರ್ಷಗಳಲ್ಲಿ ಅದೆಷ್ಟು ಜನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿಲ್ಲ? ದಿಗ್ವಿಜಯ ಸಿಂಗ್, ಸಲ್ಮಾನ್ ಖುರ್ಷಿದ್, ಸೋನಿಯಾ ಗಾಂಧಿ ಹಾಗೂ ಅರವಿಂದ್ ಕೇಜ್ರಿವಾಲರಂಥ ಮಹಾನ್ ನಾಯಕರ ಎದೆಗಳು ಈ ತೀರ್ಪನ್ನು ಕೇಳಿ ಧಸಕ್ಕೆಂದಿರಬಹುದೇನೋ!
ಸೆಪ್ಟೆಂಬರ್ 13, 2008ರಲ್ಲಿ ದೆಹಲಿಯಲ್ಲಿ 5 ಸರಣಿ ಸ್ಫೋಟಗಳು ನಡೆದವು. ಏನಾಗಿದೆ ಎಂದು ಅರಿವಾಗುವದರಲ್ಲೇ ಆ ಸ್ಫೋಟಗಳು 30 ಜನರ ಪ್ರಾಣ ತೆಗೆದುಕೊಂಡು, 100 ಕ್ಕೂ ಹೆಚ್ಚು ಜನರನ್ನು ಗಂಭೀರವಾಗಿ ಗಾಯಗೊಳಿಸಿದವು. ಇದಾದ ಕೆಲವೇ ಕ್ಷಣಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ ಈ ಘಟನೆಯ ಜವಬ್ದಾರಿ ಹೊತ್ತ ಇಮೇಲ್ ಒಂದನ್ನು ಎಲ್ಲ ಮಾಧ್ಯಮಗಳಿಗೆ ಮುಟ್ಟಿಸಿತ್ತು. ಇದರ ಪ್ರಮುಖ ರೂವಾರಿಗಳಾದ ಆತಿಫ್ ಅಮೀನ್ ಮತ್ತು ಮೊಹಮ್ಮದ್ ಸಾಜಿದ್ ಎನ್ಕೌಂಟರ್‌ನಲ್ಲಿ ಸತ್ತರೆ ಮೊಹಮ್ಮದ್ ಸೈಫ್ ಹಾಗೂ ಜೀಷಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿರು. ಅಜೀಜ್ ಖಾನ್ ಎನ್ನುವ ಮತೊಬ್ಬ ಅರೋಪಿ ತಪ್ಪಿಸಿಕೊಂಡ. ಬಾಟ್ಲಾ ಹೌಸ್ ಎನ್ಕೌಂಟರ್‌ಗೆ ಪ್ರತೀಕಾರವಾಗಿ ಉಗ್ರರು 2010 ಸೆಪ್ಟೆಂಬರ್ 10 ರಂದು ದಿಲ್ಲಿಯ ಜಮಾ ಮಜಿದ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಒಬ್ಬ ವಿದೇಶಿ ಪ್ರವಾಸಿಗನನ್ನು ಕೊಂದು, ಮತ್ತಿಬ್ಬರನ್ನು ಗಾಯಗೊಳಿಸಿದರು.
ಇದೊಂದು ನಕಲಿ ಎನ್ಕೌಂಟರ್ ಎನ್ನುವ ಕೂಗು ಜೋರಾಯಿತು. ಮಾನವ ಹಕ್ಕು ಹೋರಾಟಗಾರರ, ರಾಜಕಾರಣಿಗಳ, ಮಾಧ್ಯಮಗಳ ಒತ್ತಡಕ್ಕೆ ಮಣಿದ ದೆಹಲಿಯ ನ್ಯಾಯಾಲಯ, ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಈ ಬಗ್ಗೆ ತನಿಖೆ ಮಾಡಲು ಸೂಚಿಸಿತು. ತನಿಖೆ ನಡೆಸಿದ ಆಯೋಗ ತನ್ನ ವರದಿಯಲ್ಲಿ ದೆಹಲಿ ಪೊಲೀಸರನ್ನು ನಿರ್ದೋಶಿಗಳೆಂದು ಹೇಳಿತು. ದುರಂತವೆಂದರೆ, ಇಷ್ಟಕ್ಕೇ ನಿಲಲ್ಲಿಲ್ಲ ಈ ಉಗ್ರರ ಪರವಾಗಿರುವವರ ಹೋರಾಟ. ದಿಗ್ವಿಜಯ್ ಸಿಂಗ್ ಅಂದಿನಿಂದ ಇಂದಿನವರೆಗೂ ಹೋದಲ್ಲೆಲ್ಲ 'ಬಾಟ್ಲಾ ಎನ್ಕೌಂಟರ್ ಮೇಲೆ ನನಗೆ ಸಂದೇಹವಿದೆ' ಎಂದು ಹೇಳುತ್ತಿದ್ದಾರೆ.
2012ರ ಉತ್ತರ ಪ್ರದೇಶದ ಚುನಾವಣೆ ವೇಳೆಗೆ ಸಲ್ಮಾನ್ ಖುರ್ಷಿದ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ' ನಾವು ಬಾಟ್ಲಾ ಹೌಸ್ ಎನ್ಕೌಂಟರ್‌ನ ಫೋಟೋಗಳನ್ನು ಸೋನಿಯಾ ಗಾಂಧಿಗೆ ತೋರಿಸಿದ್ದೆವು. ಅವರು ದುಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಾ 'ನನ್ನಿಂದ ನೋಡಲಾಗುವದಿಲ್ಲ ದಯವಿಟ್ಟು ಈ ಫೋಟೋಗಳನ್ನು ನನಗೆ ತೋರಿಸಬೇಡಿ, ಹೋಗಿ ಪ್ರಧಾನ ಮಂತ್ರಿಗಳೊಡನೆ ಮಾತಾನಾಡಿ' ಎಂದಿದ್ದರು' ಎನ್ನುವ ಮಾತನ್ನೂ ಹೊರಹಾಕಿದರು. ಇದರಲ್ಲಿ ಎಷ್ಟು ನಿಜಾಂಶವಿತ್ತೋ!?
ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹೊರಬಂದ ಅರವಿಂದ್ ಕೇಜ್ರಿವಾಲರು ಇತ್ತೀಚೆಗಷ್ಟೇ ದೆಹಲಿಯ ಮುಸ್ಲಿಂ ಸಮುದಾಯಕ್ಕೆ ಬರೆದ ಪತ್ರದಲ್ಲಿ 'ಇದೊಂದು ಫೇಕ್ ಎನ್ಕೌಂಟರ್. ಇದರ ಬಗ್ಗೆ ತನಿಖೆಯಾಗಬೇಕು' ಎಂದು ಹೇಳಿದ್ದಾರೆ. ಇನ್ನು ಕೇವಲ ಎರಡು ಮೂರು ತಿಂಗಳಲ್ಲಿ ದೆಹಲಿಯಲ್ಲಿ ಚುನಾವಣೆಗಳು ನಡೆಯಲಿವೆ, ಚುನಾವಣಾ ಪೂರ್ವ ಸಿದ್ಧತೆಯಾಗಿ ಅಲ್ಪ ಸಂಖ್ಯಾತರ ಒಲೈಕೆ ರಾಜಕೀಯಕ್ಕೆ ಬಿದ್ದರಾ ಕೇಜ್ರಿವಾಲ್ ಎನ್ನುವ ಸಂದೇಹ ಕಾಡುತ್ತಿದೆ. ರಾಜಕಾರಣಿಗಳ ಈ ತುಚ್ಛ ನಡೆ, ಆ ಎನ್ಕೌಂಟರ್ ವೇಳೆ ಗಾಯಗೊಂಡು ನಂತರ ಕೊನೆಯುಸಿರೆಳೆದ ಧೀರ ಪೊಲೀಸ್ ಅಧಿಕಾರಿ ಶರ್ಮಾ ಅವರಿಗಷ್ಟೇ ಅಲ್ಲ, ಇಂಡಿಯನ್ ಮುಜಾಹಿದ್ದೀನ್ ಉಗ್ರರಿಂದ ಬಲಿಯಾದ ಎಲ್ಲ ಅಮಾಯಕರಿಗೆ ಹಾಗೂ ಅವರ ಕುಟುಂಬದವರಿಗೆ ಮಾಡಿದ ಘೋರ ಅನ್ಯಾಯ.
ಅಷ್ಟಕ್ಕೂ ಅಲ್ಪ ಸಂಖ್ಯಾತರ ಓಲೈಕೆಗೆ ಕೆಲವು ಪಕ್ಷಗಳಂತೂ ತೋಳು ಮೇಲೇರಿಸಿ ನಿಂತಿದ್ದು ಕಾಣಿಸುತ್ತದೆ. ಎಂಐಂಎಂನ ಅಕ್ಬರ್ ಉದ್ದೀನ್ ಓವೈಸಿ, ಉಗ್ರ ಕಸಾಬ್‌ನನ್ನು 'ಬಚ್ಚಾ'(ಚಿಕ್ಕ ಹುಡುಗ) ಅಂದಿದ್ದು, ಉಮರ್ ಅಬ್ದುಲ್ಲಾ ಆಫ್ಜಲ್ ಗುರುವನ್ನು 'ಸಾಹೇಬ್' ಎಂದು ಕರೆದದ್ದು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಶಂಕಿತ ಉಗ್ರರ ಮೇಲಿನ ಕೇಸ್ ತೆಗೆಸಿದ್ದು, ಮೊನ್ನೆ ಕಾಲೇಜ್ ಒಂದರಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಶಂಕಿತ ಉಗ್ರರೆಂದು ಜೈಲಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೋಸ್ಕರ ಬೇರೆ ನ್ಯಾಯಾಲದ ಸ್ಥಾಪನೆ ಮಾಡುತ್ತೇವೆ' ಎಂದು ಹೇಳಿದ್ದು, ಕೇರಳ ಕಾಂಗ್ರೆಸ್ಸಿನ ಓಮನ್ ಚಾಂಡಿ ಬೆಂಗಳೂರಿನ ಜೈಲಿನಲ್ಲಿರುವ ಮದನಿಯ ಆಸ್ಪತ್ರೆ ಖರ್ಚು ಭರಿಸುತ್ತಿರುವುದು, ಗೃಹ ಮಂತ್ರಿ ಶಿಂಧೆಯವರು ಉಗ್ರ ಹಫೀಜ್ ಸಯೀದ್‌ಗೆ 'ಶ್ರೀ' ಎಂದದ್ದು, ದಿಗ್ವಿಜಯ್ ಸಿಂಗ್ 'ಒಸಾಮಾ ಜೀ' ಎಂದು ಗೌರವ ಕೊಟ್ಟಿದ್ದು....ಇಂಥ ಸಾವಿರಾರು ಉದಾಹರಣೆಗಳಿವೆ. ದಿಗ್ವಿಜಯ ಸಿಂಗ್ ಅಂತೂ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ 'ನನಗೆ ತೀರ್ಪಿನ ಬಗ್ಗೆ ಸಮಾಧಾನವಿಲ್ಲ, ನಾನು ನನ್ನ ಮೊದಲ ಹೇಳಿಕೆಗೆ ಬದ್ಧನಾಗಿರುತ್ತೇನೆ' ಎಂದು ಹೇಳಿದ್ದಾರೆ!
ತನಿಖೆ ನಡೆಯುತ್ತಿರುವಾಗಲೇ ಅದನ್ನು 'ಫೇಕ್' ಎಂದು ಕರೆಯುವುದು, ಉಗ್ರರ ಪ್ರಮುಖ ಕೋಮಿಗೆ ಸೇರಿದವರೆಂದು ಅವರನ್ನು ಅಮಾಯಕರೆಂದು ಬಿಂಬಿಸಲು ಪ್ರಯತ್ನಿಸುವುದು ಎಷ್ಟು ಸರಿ? ಇದು ಬರಿ ಒಂದು ಪಕ್ಷಕ್ಕೆ ಸೀಮಿತವಾದ ಮಾತಲ್ಲ, ದೇಶದ ಸುರಕ್ಷೆಯನ್ನು ವೋಟು ಬ್ಯಾಂಕ್ ರಾಜಕಾರಣಕ್ಕೆ ಒತ್ತೆ ಇಟ್ಟ ಹಾಗೆ. ಅಷ್ಟಕ್ಕೂ ಈ ಉಗ್ರರ ಕುಮುಕ್ಕಿನಿಂದ ಬಲಿಯಾದ ಸಾವಿರಾರು ಅಮಾಯಕರಿಗೆ ಹಾಗೂ ಅವರ ಮನೆಯವರಿಗೆ ಮಾಡಿದ ಅನ್ಯಾಯ ಹಾಗು ನ್ಯಾಯದ ನಿಂದನೆಯೂ ಹೌದು.
- ಅನಿಲ್ ಚಳಗೇರಿ
anil.chalageri@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

