ರಾಜಕುಮಾರಿ ಬಸುರಾದರೆ ದೇಶಕ್ಕೆಲ್ಲ ಹೆರಿಗೆ ಬೇನೆ!

ನಾವೇ ಮೂರ್ಖರು, ನಮ್ಮ ಜನರೂ ಹಾಗೆ ಎಂದು ಭಾವಿಸಿದರೆ, ಅವರು ನಮಗಿಂತ...
ರಾಜಕುಮಾರಿ ಬಸುರಾದರೆ ದೇಶಕ್ಕೆಲ್ಲ ಹೆರಿಗೆ ಬೇನೆ!
Updated on: 

ನಾವೇ ಮೂರ್ಖರು, ನಮ್ಮ ಜನರೂ ಹಾಗೆ ಎಂದು ಭಾವಿಸಿದರೆ, ಅವರು ನಮಗಿಂತ ಜಾಸ್ತಿ ಮೂರ್ಖರು! ಈ ವಿಷಯದಲ್ಲಿ ನಾವು ಅವರ ಜತೆಗೆ ಪೈಪೋಟಿಯೊಡ್ಡುವುದು ಕಷ್ಟವೇ ಸರಿ.
ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರನ್ನು ಕಂಡರೆ ನಮಗೆ ಒಂಥರಾ  obsession. ಅವರು ಏನೇ ಮಾಡಿದರೂ ಚೆಂದ. ಅವರನ್ನು ನಾವು ತಲೆ ಮೇಲೆ ಹೊತ್ತುಕೊಳ್ಳುವ ನಿತ್ಯ ಆರಾಧಕರು. ಅವರ ಗುಣಗಾನದಲ್ಲಿ ಸ್ವಯಂಸುಖವನ್ನು ಕಾಣುವವರು. ಅವರ ಪ್ರತಿ ನಡೆ, ನುಡಿ, ಹಾವಭಾವ ನಮಗೆ ಖುಷಿಯೋ ಖುಷಿ. ಸಭೆ-ಸಮಾರಂಭ, ಮುಹೂರ್ತ ಹಾಗೂ ಎಲ್ಲ ವಿಶೇಷ ಸಂದರ್ಭಗಳಲ್ಲಿ ಅವರು ಇರಲೇಬೇಕು. ಒಂದು ರೀತಿಯಲ್ಲಿ ಅವರು ನಮ್ಮ ಯೋಚನೆ, ಆಲೋಚನೆ, ಭಾವನೆಗಳ ಅವಿಭಾಜ್ಯ ಅಂಗ. ಸಚಿನ್ ತೆಂಡುಲ್ಕರ್, ಅಮಿತಾಭ್ ಬಚ್ಚನ್, ಶಾರುಖ್‌ಖಾನ್ ಇವರಿಗೆಲ್ಲ ನಮ್ಮ ಹೃದಯ ಸಾಮ್ರಾಜ್ಯದಲ್ಲಿ ಎಕರೆಗಟ್ಟಲೆ ಜಾಗವನ್ನು ಕೊಟ್ಟಿದ್ದೇವೆ. ಅವರೆಲ್ಲ ಟಿ.ವಿ., ಆಭರಣ, ಮನೆ, ಫ್ರಿಡ್ಜು ಜಾಹೀರಾತಿಗೆ ಬಂದರೂ ಚೆಂದ, ಟಾಯ್ಲೆಟ್ ಜಾಹೀರಾತಿಗೆ ಬಂದರೂ ಚೆಂದ. ಸಚಿನ್ ತೆಂಡುಲ್ಕರ್‌ನನ್ನು 'ಕ್ರಿಕೆಟ್ ದೇವರು' ಎಂದು ಆರಾಧಿಸುವವರು ನಾವು. ಆತ ಏನೇ ಮಾಡಿದರೂ ಮುಫತ್ತು. ಸಿನಿಮಾ ತಾರೆಯರು ತೆರಿಗೆ ವಂಚಿಸಿದರೆ 'ಹೋಗ್ಲಿಬಿಡು' ಎಂದು ಸುಮ್ಮನಾಗುತ್ತೇವೆ. ಇವರೆಲ್ಲರನ್ನು ಆರಾಧಿಸುವ ಭರದಲ್ಲಿ ನಮ್ಮ ಮೂರ್ಖತನ ಪ್ರದರ್ಶನವಾದರೆ ನಮಗೇನೂ ಅನಿಸುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಮೂರ್ಖತನವನ್ನು ರಿಪೀಟ್ ಮಾಡುತ್ತಿರುತ್ತೇವೆ.
ಇಷ್ಟಾಗಿಯೂ ನಾವೇ ವಾಸಿ ಎಂದು ನನಗೆ ಎಷ್ಟೋ ಸಲ ಅನಿಸಿದೆ.
ನೀವು ಆ ಬ್ರಿಟಿಷ್ ಮಂದಿಯನ್ನು ನೋಡಬೇಕು. ಅವರಿಗೆ ಆ ರಾಣಿ ಏನೇ ಮಾಡಿದರೂ ಚೆಂದ. ಅವರು ರಾಜಮನೆತನದವರನ್ನು ಆರಾಧಿಸುವುದರ ಮುಂದೆ, ನಾವು ಏನೇನೂ ಅಲ್ಲ. ಅವರು ಕಟ್ಟಿಕೊಂಡ, ಮನೆಯಲ್ಲಿರುವ ರಾಣಿ (ಪತ್ನಿ)ಯನ್ನಾದರೂ ಒಂದು ಕ್ಷಣ ಮರೆತಾರು, ಅವಳನ್ನಾದರೂ ಬಿಟ್ಟಾರು, ಆದರೆ ಬಕಿಂಗ್‌ಹ್ಯಾಮ್ ಅರಮನೆಯಲ್ಲಿರುವ ರಾಣಿಯನ್ನು ಮಾತ್ರ ಬಿಡಲಾರರು. ಅವರಿಗೆ ಒಂಥರಾ obsession.
ಬೆಳಗಾಗೆದ್ದ ಕೂಡಲೇ ಅವಳ ಮುಸುಡಿ ಕಾಣಬೇಕು. ಎಂಬತ್ತೇಳು ವರ್ಷದ ಹಪ್ಪು ಹಪ್ಪು ಮುದುಕಿಯಾದರೇನು, ಅವಳ ಸ್ವಾಟೆ ನೋಡಿದರೆ ಏನೋ ಖುಷಿ. ಶುಭಶಕುನ ಆಯಿತು ಎಂಬ ಭಾವನೆ. ರಾಣಿ ಇಂದು ಏನು ಮಾಡಿದಳು, ಯಾವ ಉಡುಪು ಧರಿಸಿದಳು, ಎಷ್ಟು ಸಲ ಉಡುಪು ಬದಲಿಸಿದಳು, ಆ ಉಡುಪುಗಳ ವೈಶಿಷ್ಟ್ಯಗಳೇನು, ರಾಣಿ ಒಂದೇ ಉಡುಪನ್ನು ಎಷ್ಟು ಸಲ ಧರಿಸುತ್ತಾಳೆ, ಯಾವ ಯಾವ ಸಂದರ್ಭಗಳಲ್ಲಿ ಉಡುಪುಗಳು ರಿಪೀಟ್ ಆಗಿವೆ, ಅದಕ್ಕೆ ಕಾರಣಗಳೇನು, ಇಂದು ರಾಣಿಯನ್ನು ಯಾರ್ಯಾರು ಭೇಟಿ ಮಾಡಿದ್ದರು, ಅವರ ಜತೆಗೆ ಹೇಗೆ ಸಮಯ ಕಳೆದಳು, ಏನೇನು ಮಾತಾಡಿದಳು, ರಾತ್ರಿ ಔತಣಕೂಟದಲ್ಲಿ ಟೇಬಲ್‌ನಲ್ಲಿ ರಾಣಿ ಅಕ್ಕ-ಪಕ್ಕ ಯಾರು ಕುಳಿತಿದ್ದರು... ಎಂದೆಲ್ಲ ಅಲ್ಲಿನ ಪತ್ರಿಕೆಗಳು ವರದಿ ಮಾಡುತ್ತವೆ. 'This is too much ಎಂದು ಕೆಲವರು ಗೊಣಗುತ್ತಾರೆ, ಆದರೂ ತಪ್ಪದೇ ಓದುತ್ತಾರೆ, ಒಂದು ವಾರ ಸುದ್ದಿ ಪ್ರಕಟವಾಗದಿದ್ದರೆ, ಏನನ್ನೋ ಕಳಕೊಂಡವರಂತೆ ಚಡಪಡಿಸುತ್ತಾರೆ.
1997ರಲ್ಲಿ ನಾನು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ನನ್ನ ಪ್ರೀತಿಯ ಮೇಷ್ಟ್ರಾಗಿದ್ದ ಜಾನ್‌ರೈನ್ ಅವರು, ಸುದ್ದಿಯ ಅಂಶಗಳನ್ನು ವಿವರಿಸುವಾಗ,  Queen is the headline, Palace is masthead (ರಾಣಿಗೆ ಸಂಬಂಧಿಸಿದ ಸುದ್ದಿ ಪತ್ರಿಕೆಯ ಮುಖಪುಟ ಹೆಡ್‌ಲೈನ್ ಇದ್ದಂತೆ, ರಾಣಿ ವಾಸಿಸುವ ಅರಮನೆ ಪತ್ರಿಕೆಯ ಶೀರ್ಷಿಕೆಯಿದ್ದಂತೆ) ಎಂದು ಹೇಳುತ್ತಿದ್ದರು. ರಾಣಿಯನ್ನು ನಿರ್ಲಕ್ಷಿಸಿ ಬ್ರಿಟಿಷ್ ಪತ್ರಿಕೋದ್ಯಮ ಕಟ್ಟುವುದನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. 'ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿ, ನನ್ನ ಮೊಮ್ಮಗ ರಾಣಿಗೆ ಸಂಬಂಧಿಸಿದ ಸುದ್ದಿಯನ್ನು ಇಷ್ಟಪಡದಿರಬಹುದು, ಆದರೆ ನನ್ನ ಅತ್ತೆ, ಮಾವನಿಗಾಗಿ ಆ ಸುದ್ದಿ ನೀಡುವುದು ಅನಿವಾರ್ಯ' ಎಂದು ಜಾನ್‌ರೈನ್ ತಮಾಷೆ ಮಾಡುತ್ತಿದ್ದರು. ಪ್ರತಿಷ್ಠಿತ 'ದಿ ಗಾರ್ಡಿಯನ್‌' ಪತ್ರಿಕಾ ಕಚೇರಿಗೆ ನಾವು ಭೇಟಿ ಕೊಟ್ಟಾಗ ಸಂಪಾದಕರೊಂದಿಗೆ ಮಾತಾಡುವಾಗ, 'ನಮ್ಮ ಪತ್ರಿಕಾ ಸಂಗ್ರಹಾಲಯದಲ್ಲಿ ರಾಣಿಯ ಎರಡು ಲಕ್ಷಕ್ಕೂ ಅಧಿಕ ಫೋಟೋಗಳಿವೆ' ಎಂದು ಅಭಿಮಾನದಿಂದ ಹೇಳಿದ್ದು ಈಗಲೂ ನೆನಪಿದೆ. (ರಾಣಿಗೆ ಸಮೀಪದ ಪ್ರತಿಸ್ಪರ್ಧಿಯೆಂದರೆ ಸೊಸೆ ರಾಜಕುಮಾರಿ ಡಯಾನಾ).
ತಮಾಷೆಯೆನಿಸಬಹುದು, ಇಂಗ್ಲೆಂಡ್‌ನಲ್ಲಿ ಒಂದು ಮಾತಿದೆ-'ರಾಣಿ ಯಾವ ದಿನ ಏನನ್ನೂ ಮಾತಾಡುವುದಿಲ್ಲವೋ, ಅವಳು ಪತ್ರಿಕೆ, ಟಿವಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೋ, ಆ ದಿನ ರಾಷ್ಟ್ರೀಯ ಶೋಕ ದಿನ.' ಇದು ಅತಿಶಯೋಕ್ತಿಯೆನಿಸಬಹುದು, ಆದರೆ ಸತ್ಯ. 'ದಿ ಡೇಲಿ ಟೆಲಿಗ್ರಾಫ್‌' ಪತ್ರಿಕೆಯಲ್ಲಿ ನಾವು ಇಂಟರ್ನಶಿಪ್ ಮಾಡುವಾಗ, ಒಂದು ದಿನ ರಾಣಿ ಮೆಕ್‌ಡೊನಾಲ್ಡ್‌ಗೆ ಹೋಗಿ ಬರ್ಗರ್ ತಿಂದಿದ್ದಳು. ಆ ದಿನ ಇಡೀ ಪತ್ರಿಕಾಲಯದಲ್ಲಿ  ವಿಪರೀತ ಚಟುವಟಿಕೆ ಕಂಡು ಬಂದಿತ್ತು. ಮರುದಿನ ಆ ಪತ್ರಿಕೆ ಮುಖಪುಟ ಸೇರಿ ನಾಲ್ಕು ಪೂರ್ಣ ಪುಟಗಳನ್ನು ರಾಣಿ ಬರ್ಗರ್ ತಿಂದ ಸುದ್ದಿಗೆ ಮೀಸಲಿಟ್ಟಿತ್ತು!
ಇಂಗ್ಲೆಂಡ್‌ನಲ್ಲಿ ಒಂದು ಮಾತು ಜನಪ್ರಿಯವಾಗಿದೆ. ಅದೇನೆಂದರೆ ರಾಣಿಗೆ ಜಗತ್ತಿಗೆ ತಿಳಿಯದಂತೆ ಸೀನಲು, ಕೆಮ್ಮಲು ಬರುವುದಿಲ್ಲವಂತೆ. ಅಂದರೆ ರಾಣಿ ಸೀನಿದರೆ, ಕೆಮ್ಮಿದರೆ ಅದೇ ದೊಡ್ಡ ಸುದ್ದಿಯಾಗಿ ಇಡೀ ಜಗತ್ತಿಗೆ ಗೊತ್ತಾಗುತ್ತದೆ.
ರಾಣಿ, ರಾಜಮನೆತನ, ಅರಮನೆ ಬಗ್ಗೆ ಬ್ರಿಟಿಷರಿಗೆ ಅದೆಂಥ ಆಸಕ್ತಿ ಅಂದ್ರೆ ಎಲ್ಲ ಪತ್ರಿಕೆಗಳು 'ಪ್ಯಾಲೇಸ್ ರಿಪೋರ್ಟರ್‌' ಗಳನ್ನು ಹೊಂದಿವೆ. ಕೆಲವು ಪತ್ರಿಕೆಗಳಲ್ಲಿ ಐದಕ್ಕಿಂತ ಹೆಚ್ಚು ಇಂಥ ರಿಪೋರ್ಟ್‌ಗಳಿದ್ದಾರೆ. ಇವರು ಪಾಳಿಯ ಪ್ರಕಾರ, ಅರಮನೆಯ ವಿದ್ಯಮಾನಗಳನ್ನು ವರದಿ ಮಾಡುತ್ತಾರೆ. (ಕೆಲವು ಪತ್ರಿಕೆಗಳು ಈ ವರದಿಗಾರರಿಗೆ ರಾಯಲ್ ಕರೆಸ್ಪಾಂಡೆಂಟ್ ಎಂದು ಕರೆಯುವುದುಂಟು). ಈ ವರದಿಗಾರರಿಗೆ ಪ್ರತಿ ದಿನ ಅರಮನೆಯಲ್ಲಿ ಏನಾಯಿತೆಂಬುದನ್ನು ವರದಿ ಮಾಡುವುದಷ್ಟೇ ಕೆಲಸ.
ರಾಣಿ ಎಷ್ಟು ಗಂಟೆಗೆ ಎದ್ದಳು, ಮಲಗಿದಳು, ರಾಣಿಯ ನಾಯಿ ಏನೇನು ತಿಂದಿತು, ಬೆಕ್ಕು ಸೌಖ್ಯದಿಂದ ಇದೆಯಾ... ಮುಂತಾದ ಸಂಗತಿಗಳೆಲ್ಲ ಮುಖ್ಯವೆನಿಸುತ್ತವೆ. ರಾಣಿ ಗಣ್ಯ ಅತಿಥಿಗಳೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿ ಮಾತಾಡುತ್ತಿರುವುದನ್ನು ದೂರದಲ್ಲಿ ನಿಂತು ಗಮನಿಸುವ, ಅವಳ ತುಟಿ ಚಲನವಲನವನ್ನು ಅರ್ಥೈಸುವ (Lip reader) ವರದಿಗಾರರೂ ಇದ್ದಾರೆ. ಲಿಪ್‌ರೀಡ್ ಮಾಡುವ ಪತ್ರಕರ್ತರು ಬರೆಯುವ ವರದಿಗಳು ಭಲೇ ರೋಚಕವಾಗಿರುತ್ತವೆ. ಬಕಿಂಗ್‌ಹ್ಯಾಮ್ ಪ್ಯಾಲೇಸಿನ ಪಡಸಾಲೆಯಲ್ಲಿ ನಿಂತು ರಾಣಿ ಗೊಣಗಿದರೂ, ಅದನ್ನು ನೋಡಿ ಲಿಪ್ ರೀಡ್ ಮಾಡುವ ಪತ್ರಕರ್ತ ವರದಿ ಮಾಡುವ ಸಾಧ್ಯತೆ, ಅಪಾಯ ಇರುತ್ತದೆ. ರಾಣಿಯ ಮೊಮ್ಮಗ ವಿಲಿಯಮ್ಸ್‌ನ ಮದುವೆಯಾಗಿ ಅರಮನೆ ಸೇರಿದ ಬಳಿಕ ಕೇಟ್ ಮಿಡ್ಲಟನ್‌ಗೆ ಅಲ್ಲಿನ ಶಿಷ್ಟಾಚಾರ ಮುಖ್ಯಸ್ಥ, ಪ್ರತಿದಿನ ಒಂದು ಗಂಟೆಯಂತೆ ನಾಲ್ಕು ದಿನ ಕ್ಲಾಸು ತೆಗೆದುಕೊಂಡಿದ್ದ. ಅರಮನೆಯ ಗೋಡೆಗೆಲ್ಲ ಕಣ್ಣು-ಕಿವಿ ಇರುವುದನ್ನು ಎಚ್ಚರಿಸಿದ್ದ. ಅರಮನೆಯೊಳಗಿರುವ ಸೂಕ್ಷ್ಮ ಸಂಗತಿಗಳ ಬಗ್ಗೆ ಅರಿವು ಮೂಡಿಸಿದ್ದ.
ಬಕಿಂಗ್‌ಹ್ಯಾಮ್ ಅರಮನೆ ಕಾಯಲೆಂದೇ ಪ್ರತ್ಯೇಕ ಪೊಲೀಸ್ ದಳವಿದೆ. ಅದು ಪ್ರತಿದಿನ ಪಾಳಿಯ ಪ್ರಕಾರ ಬದಲಾಗುತ್ತದೆ. ಅರಮನೆಯೊಳಗೆ ಎಂಥ ಭದ್ರತೆಯಿರಬಹುದು ಎಂಬುದನ್ನು ಹೊರಗಿನ ಭದ್ರತೆಯಿಂದಲೂ ಊಹಿಸಬಹುದು. ಆದರೂ ಅಲ್ಲಿ ಆಡುವ ಪಿಸು ಮಾತು ಸಹ ಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಅಂದರೆ ಅಲ್ಲಿನ ಜನರಿಗೆ ರಾಣಿ, ರಾಜಮನೆತನದ ಬಗ್ಗೆ ಅದೆಂಥ ಪ್ರೀತಿ, obsession, ಕುತೂಹಲ, ಇರಬಹುದು?
ಹದಿನಾರು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡುವಾಗ ಅರಮನೆ, ರಾಣಿ ಬಗ್ಗೆ ಕೇಳುತ್ತಿದ್ದ ಕತೆಗಳು, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳನ್ನು ತಪ್ಪದೇ ಓದುತ್ತಿದ್ದುದರಿಂದ ನನಗೂ ಒಂಥರಾ  obsession ಅಂಟಿಕೊಂಡಿತ್ತು. ಬ್ರಿಟಿಷರಲ್ಲಿ ಈ ರಾಜಮನೆತನ ಹಾಗೂ ರಾಣಿಯ ಬಗೆಗಿರುವ ಗೀಳು ಕಡಿಮೆಯಾಗಿರಬಹುದು, ಹೊಸ ತಲೆಮಾರಿನ ಜನತೆ ಈ ಗೀಳಿನಿಂದ ವಿಮುಖರಾಗಿರಬಹುದು ಎಂದು ಅಂದುಕೊಂಡಿದ್ದೆ.
ಆದರೆ ಈಗ ಏಳು ತಿಂಗಳ ಹಿಂದೆ, ರಾಣಿಯ ಮೊಮ್ಮಗ ಕೇಂಬ್ರಿಡ್ಜ್‌ನ ಡ್ಯೂಕ್, ರಾಜಕುಮಾರ ವಿಲಿಯಮ್ಸ್‌ನ ಪತ್ನಿ ಕೇಂಬ್ರಿಡ್ಜ್‌ನ ಡಚಸ್ ರಾಜಕುಮಾರಿ ಕೇಟ್ ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿಯನ್ನು ಬ್ರಿಟಿಷ್ ಮಾಧ್ಯಮ ವರದಿ ಮಾಡಿದ ರೀತಿ ನೋಡಿ ಇದು ಗುಣಮುಖವಾಗದ ಶತಶತಮಾನಗಳ ಕಾಯಿಲೆ ಹಾಗೂ ಭಯಂಕರ ಸಾಂಕ್ರಾಮಿಕ ರೋಗ ಎಂಬುದು ಮನವರಿಕೆಯಾಯಿತು. 'ಕೇಟ್ ಬಸುರಾದರೆ ಬ್ರಿಟನ್‌ಗೆ ಹೆರಿಗೆ ಬೇನೆ' ಎಂಬಂತೆ ಮಾಧ್ಯಮಗಳು ವರ್ತಿಸಿದವು. ಆಕೆಯ ಪ್ರತಿ ಚಲನವಲನವೂ ಸುದ್ದಿಯಾದವು. ಗರ್ಭಿಣಿ ಕೇಟ್ ಐದು, ಆರು, ಏಳು, ಎಂಟನೆ ತಿಂಗಳಲ್ಲಿ ಯಾವ ಉಡುಪು ಧರಿಸಬೇಕು, ಯಾವ ಡ್ರೆಸ್‌ನಲ್ಲಿ ಚೆಂದವಾಗಿ ಕಾಣುತ್ತಾಳೆ ಎಂದು ಖ್ಯಾತ ಫ್ಯಾಷನ್ ಡಿಸೈನರ್‌ಗಳ ಸಂದರ್ಶನ ಆಧರಿತ ನುಡಿ ಚಿತ್ರಗಳನ್ನು ಬರೆದು ಪತ್ರಿಕೆಗಳು ಸಂತೃಪ್ತವಾದವು. ಈ ಲೇಖನಗಳನ್ನು ಓದುವಾಗ ಕೇಟ್‌ಗಿಂತ ಮೊದಲು ಬ್ರಿಟನ್‌ನಲ್ಲಿ ಯಾರೂ ಬಸುರಾಗಿಲ್ಲ, ಮೊಟ್ಟ ಮೊದಲ ಬಾರಿಗೆ ಸೃಷ್ಟಿ ವೈಚಿತ್ರ್ಯ ಘಟಿಸುತ್ತಿದೆ ಎಂದು ಯಾರಿಗಾದರೂ ಅನಿಸಿದ್ದರೆ ಅಚ್ಚರಿಯಿಲ್ಲ. ಅಂಥ ಪ್ರಾಮುಖ್ಯ ಹಾಗೂ ಕವರೇಜ್ ಸಿಕ್ಕಿತು.
'ದಿ ಗಾರ್ಡಿಯನ್‌' ಪತ್ರಿಕೆಯ ಖ್ಯಾತ ಅಂಕಣಕಾರ ಹಾಗೂ ಹಿರಿಯ ಪತ್ರಕರ್ತ ಸೈಮನ್ ಜೆಂಕಿನ್ಸ್, 'ಕೇಟ್ ಬಸುರಿಯಾದ ಬಗ್ಗೆ, ಅವಳಿಗೆ ಹುಟ್ಟುವ ಮಗುವಿನ ಬಗ್ಗೆ ಬರೆಯದೇ ಬೇರೆ ವಿಷಯಗಳ ಕುರಿತು ಬರೆದರೆ, ಅದನ್ನು ಓದುವವರ್ಯಾರು ಎಂಬ ಸಂದೇಹ ಈಗ ನನ್ನನ್ನು ಬಲವಾಗಿ ಕಾಡಲಾರಂಭಿಸಿದೆ' ಎಂದು ತಮಾಷೆಯಿಂದ ಅಂಕಣದಲ್ಲಿ ಬರೆದುಕೊಂಡಿದ್ದು ವ್ಯಂಗ್ಯ ಹಾಗೂ ಪರಿಸ್ಥಿತಿಯ ಸೂಚಕ.
ಈ 'ರಾಷ್ಟ್ರೀಯ ಕಾಯಿಲೆ' ಅಥವಾ 'ಸಾಮೂಹಿಕ ಪಿಡುಗು' ಮೊನ್ನೆ ಮೊನ್ನೆ ಜುಲೈ 22ರಂದು ಕೇಟ್‌ಗೆ ಪ್ರಸವವಾಗುವ ತನಕವೂ ಮುಂದುವರಿದುಕೊಂಡು ಬಂದಿತು.
ಕೇಟ್ ಪ್ರಸವಕ್ಕೆ ಕ್ಷಣಗಣನೆಯ ಮೀಟರ್ ಅನ್ನು ಹಾಕಿಕೊಂಡ ಮಾಧ್ಯಮಗಳು ಅದನ್ನು ಎಣಿಸುತ್ತಾ ಕುಳಿತು ಬಿಟ್ಟವು. ಅತಿ ಆಯಾಸದ ಪ್ರಸವಕ್ಕೆ ಗಜಪ್ರಸವ ಎಂದು ಕರೆಯುವುದುಂಟು. ಇದನ್ನು ಬ್ರಿಟನ್ ಮಾಧ್ಯಮಗಳು 'ರಾಯಲ್ ಡೆಲಿವರಿ' ಎಂದು ಕರೆದವು. 'ಬ್ರಿಟನ್ ನವಚೇತನ ಪಡೆಯಲಿದೆ: 'ಬ್ರಿಟನ್ ಪುನಃ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಲಿದೆ', 'ಸರ್ವ ಸಂಕಷ್ಟದಿಂದ ಬ್ರಿಟನ್ ಇನ್ನು ಮುಂದೆ ಮುಕ್ತವಾಗಲಿದೆ' 'ರಾಜಕುವರನ ಜನನ: ಇಡೀ ದೇಶವೇ ಸಂಭ್ರಮಿಸುವ ಕಾಲ' ಮುಂತಾದ ಶೀರ್ಷಿಕೆಗಳಿಂದ ಪತ್ರಿಕೆಗಳು ಕಂಗೊಳಿಸಿದವು. ದೇಶದ ಸಮಸ್ಯೆಗಳನ್ನೆಲ್ಲ ಮರೆಯಲು ಒಂದು ಕಾರಣ ಸಿಕ್ಕಂತಾಯಿತು ಎಂದು ಸಂಪಾದಕೀಯ ಬರೆದವು. ಬ್ರಿಟನ್‌ನ ಹಲವು ಚರ್ಚ್‌ಗಳಲ್ಲಿ ಒಂದೇ ಸಮನೆ ನಾಲ್ಕೈದು ತಾಸುಗಳ ಕಾಲ ಗಂಟೆಗಳು ಮೊಳಗಿದವು. ಸತತ ಐದು ತಾಸುಗಳವರೆಗೆ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಜನಸಂಭ್ರಮಿಸಿದರು. ಕುಶಾಲು ತೋಪಿನ ಮೊರೆತ ಹೇಗಿತ್ತೆಂದರೆ ಲಂಡನ್‌ನಲ್ಲಿ ಯುದ್ಧ ಘೋಷಣೆಯಾಗಿದೆಯೇನೋ ಎಂದು ತಟ್ಟನೆ ಭಾವಿಸುವಷ್ಟು ತೀವ್ರವಾಗಿತ್ತು.
ಒಂದು ಸಂದರ್ಭದಲ್ಲಿ ಜಗತ್ತಿನ ಎಲ್ಲ ಟಿವಿ ಚಾನೆಲ್‌ಗಳಲ್ಲಿ ಕೇಟ್ ಹೆರಿಗೆ ಸುದ್ದಿಯೇ ಪ್ರಸಾರವಾಗುತ್ತಿದ್ದಿರಬಹುದು ಹಾಗೂ ಅದನ್ನು ಇಡೀ ವಿಶ್ವವೇ ವೀಕ್ಷಿಸುತ್ತಿರಬಹುದು ಎಂಬ ಭಾವನೆ ಯಾರ ಮನಸ್ಸಿನಲ್ಲಿ ಸುಳಿದು ಹೋಗಿದ್ದರೆ ಆಶ್ಚರ್ಯವಿರಲಿಲ್ಲ. ಕಾರಣ ಕೇಟ್ ಹೆರಿಗೆಗೆಂದು ಅಡ್ಮಿಟ್ ಆಗಿದ್ದ ಆಸ್ಪತ್ರೆ ಮುಂದೆ ಜಗತ್ತಿನ ಎಲ್ಲ ಮಾಧ್ಯಮಗಳ ಪ್ರತಿನಿಧಿಗಳು ತಂಬು ಹೂಡಿದ್ದರು. ತಾವೇ ಮೊದಲ ಸುದ್ದಿಯನ್ನು ಬ್ರೇಕ್ ಮಾಡಬೇಕೆಂದು ಅವರವರಲ್ಲಿ ತೀವ್ರ ಪೈಪೋಟಿ ನಡೆದಿತ್ತು.
ಈ ಸಂದರ್ಭದಲ್ಲಿ ಲಂಡನ್‌ನ ಪಾರ್ಲಿಮೆಂಟ್ ಭವನದ ಪಕ್ಕದಲ್ಲಿ ಎತ್ತರದ ಕಟ್ಟಡದ ಬಿಗ್‌ಬೆನ್ ಗಡಿಯಾರವನ್ನು ಯಾರಾದರೂ ಕಿತ್ತು ಕದ್ದೊಯ್ದಿದ್ದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲವೇನೋ? ಅದನ್ನು ಟಿವಿ ಚಾನೆಲ್‌ಗಳು ಚಿತ್ರೀಕರಿಸಿಕೊಳ್ಳಲು ಮರೆತು ಬಿಡುತ್ತಿದ್ದವೇನೋ? ಇಡೀ ಬ್ರಿಟನ್‌ನ ಲಕ್ಷ್ಯವೆಲ್ಲ ಹೆರಿಗೆ ಆಸ್ಪತ್ರೆಯ ಮೇಲಿತ್ತು!
(ಸ್ವಾಮಿ, ಇದು ನನ್ನ ಕಲ್ಪನೆಯಲ್ಲ, ಬಣ್ಣನೆಯೂ ಅಲ್ಲ. ಮಾಧ್ಯಮಗಳು ಈ ರೀತಿ ವರ್ತಿಸಿದ್ದನ್ನು ಜಗತ್ತಿನ ಮಾಧ್ಯಮಗಳಲ್ಲಿ ವರದಿಯಾಗಿವೆ.)
ಕೇಟ್ ಬಸುರಿಯಾಗುವುದಕ್ಕಿಂತ ತಿಂಗಳ ಮುಂಚೆ, ಆಕೆ ಬಸುರಿಯಾಗಿದ್ದಾಳೆಂದೂ, ಇಲ್ಲವೆಂದೂ ಬ್ರಿಟನ್‌ನ ಮಂದಿ ಬಾಜಿ ಕಟ್ಟಿದರು. ಕೇಟ್ ಗರ್ಭಿಣಿಯಾದರೆ ಯಾರಿಗೋ ಲಾಭ, ಇನ್ಯಾರಿಗೋ ನಷ್ಟ. ಆಕೆಗೆ ಏಳು ತಿಂಗಳು ತುಂಬುತ್ತಿದ್ದಂತೆ ಹುಟ್ಟಲಿರುವ ಮಗು ಗಂಡೋ, ಹೆಣ್ಣೋ ಎಂದು ಬಾಜಿ ಕಟ್ಟಲಾರಂಭಿಸಿದರು. ಜಾನ್, ಜಾರ್ಜ್, ಡೆವಿಡ್ ಹೆಸರುಗಳ ಮೇಲೂ ಜನ ಬಾಜಿ ಕಟ್ಟಿದರು. ಕೊನೆಗೆ 'ಜಾರ್ಜ್‌' ಹೆಸರಿನ ಮೇಲೆ ಹಣ ಕಟ್ಟಿದವರು ಕೊನೆ ನಗೆ ಬೀರಿದರು.
ಈ ಅಪಸವ್ಯಗಳನ್ನೆಲ್ಲ ನೋಡಿ ತಲೆ ಕೆಟ್ಟು ಹೋದವರು 'ಕೇಟ್ ಯಾವಾಗ ಹಡೆಯುತ್ತಾಳೋ ಏನೋ? ಅವಳ ಹೆರಿಗೆಯಾದರೆ ಸಾಕು, ದಮ್ಮಯ್ಯ' ಎಂದು ಅಲವತ್ತುಕೊಳ್ಳುತ್ತಿದುದು ಸಾಮಾನ್ಯವಾಗಿತ್ತು. ಕೆಲವು ಟೀಕಾಕಾರರು 'ಈ ದೇಶ ಯಾವಾಗ ಉದ್ಧಾರವಾಗುತ್ತೋ? ಈ ಜನರಿಗೆ ಯಾವಾಗ ಬುದ್ಧಿ ಬರುತ್ತೋ?' ಎಂದು ಮುಖ ಕಿವುಚಿಕೊಂಡು ಸಂಕಟಪಟ್ಟುಕೊಂಡರು. ಇನ್ನು ಕೆಲವರು ಇದು ವಾಸಿಯಾಗದ ರೋಗ ಎಂದು ಗೊಣಗಿಕೊಂಡರು.
ಬ್ರಿಟಿಷ್ ಮಂದಿ ನಮಗಿಂತ ಬುದ್ಧಿವಂತರಿರಬಹುದು, ನಮಗಿಂತ ಮುಂದುವರಿದವರಾಗಿರಬಹುದು, ಆದರೆ ರಾಣಿಯ ವಿಷಯ ಬಂದಾಗ, ರಾಜಮನೆತನದ ವಿಷಯ ಬಂದಾಗ ತಮ್ಮ ಹುಟ್ಟುಗುಣವನ್ನು ತೋರಿಸುತ್ತಾರೆ.
ಈ ಬರಹ ಮುಗಿಸುವ ಮುನ್ನ ಕುತೂಹಲ ತಾಳಲಾರದೇ, ರಾಜಕುಮಾರ ಹುಟ್ಟಿದ ಮರುದಿನದ (ಜುಲೈ 23) ಜನಪ್ರಿಯ ದೈನಿಕ 'ದಿ ಸನ್‌' (The Sun) ಟ್ಯಾಬ್ಲಾಯಿಡ್ ಸಂಚಿಕೆ ಮುಖಪುಟ ಹೇಗಿರಬಹುದು ಎಂದು ಇಂಟರ್‌ನೆಟ್‌ನಲ್ಲಿ ತಡಕಾಡಿದೆ. ಆ ದಿನದ ಸಂಚಿಕೆ ನೋಡಿ ಒಂದು ಕ್ಷಣ ಕಕ್ಕಾಬಿಕ್ಕಿಯಾದೆ. The Sun ಪತ್ರಿಕೆ ತನ್ನ ಹೆಸರನ್ನೇ The Son ಎಂದು ಬದಲಿಸಿತ್ತು. ಇದಕ್ಕಿಂತಲೂ ಗಟ್ಟಿಯಾಗಿ, ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲ, ಬಿಡಿ.
ಅಂದ ಹಾಗೆ, ಕೇಟ್‌ಗೆ ಗಂಡು ಮಗು ಹುಟ್ಟಿದ್ದಕ್ಕೆ ನನಗೂ ಅತೀವ ಆನಂದವಾಯಿತು. ಕಾರಣ ಅಂದು (ಜುಲೈ 22) ನನ್ನ ಜನ್ಮದಿನವೂ ಹೌದು!

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com