

ಒಂಬತ್ತು ವರ್ಷಗಳ ವನವಾಸದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರಲ್ಲಿ ಯಾವುದಾದರೂ ಅಧಿಕಾರ ಹಿಡಿಯಬೇಕು ಎಂಬ ಆಕಾಂಕ್ಷೆ. ಇದಕ್ಕಾಗಿ ಎಲ್ಲರಿಗೂ ತಮ್ಮ ವ್ಯಕ್ತಿಗತ ವಿವರ ಇರುವ ಮನವಿ ಪತ್ರ ನೀಡಿ ಗಣ್ಯರಿಗೆ ದಂಬಾಲು ಬೀಳುತ್ತಿದ್ದಾರೆ. ಕಳೆದ ವಾರ ಮೈಸೂರಿಗೆ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಬರುವವರಿದ್ದರು. ಉಡುಪಿಯವರಾದ ಅವರ ಮುಖಪರಿಚಯ ಮೈಸೂರಿನ ಹೆಚ್ಚಿನವರಿಗೆ ಇದ್ದಂತಿಲ್ಲ. ಸರಿ, ಕಾಂಗ್ರೆಸ್ ಕಾರ್ಯಕರ್ತನೊಬ್ಬ ನಿಗಮ ಮಂಡಳಿಗೆ ತನ್ನನ್ನು ನೇಮಿಸಬೇಕು ಎಂಬ ಮನವಿ ಪತ್ರ, ಹಾರ ಹಿಡಿದು ಸಚಿವರಿಗೆ ಕಾಯುತ್ತಿದ್ದ. ಕೆಂಪುದೀಪದ ಗೂಟದ ಕಾರು ಬರುತ್ತಲೇ ಮುನ್ನುಗ್ಗಿದ ಆತ ಕಾರಿನಿಂದ ಇಳಿದವರಿಗೆ ಹಾರ ಹಾಕಿ, ಮನವಿ ಪತ್ರ ನೀಡಿ ತನ್ನ ನೇಮಕ ಆಗಿಯೇ ಹೋಯ್ತು ಎಂಬಂತೆ ಖುಷಿಯಿಂದ ಬೀಗಿದ. ಆದರೆ ನಂತರ ಆತನಿಗೆ ಅರಿವಾಗಿದ್ದು, ಅವರು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅಲ್ಲ, ಆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ ಎಂದು. ತಕ್ಷಣ ಆತ ಹಲ್ಲು ಗಿಂಜುತ್ತಾ ಅವರಿಂದ ಮನವಿ ಪತ್ರ ವಾಪಸ್ ಪಡೆದ. ಸದ್ಯ ಹಾರ ವಾಪಸ್ ಕೇಳಲಿಲ್ಲ! ಸಚಿವರು ಬರುವುದರೊಳಗೆ ಇನ್ನೊಂದು ಹಾರ ತಂದು ಮತ್ತೆ ಮನವಿ ಪತ್ರ ನೀಡಿದ. ಇದನ್ನು ಕಂಡ ಪಕ್ಷದ ಮುಖಂಡರು, ಕಾರ್ಯಕರ್ತರು ನಕ್ಕಿದ್ದೇ ನಕ್ಕಿದ್ದು.
ಸೈಕಲ್ ಸವಾರಿ, ಆನೆ ಪರಾರಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಳೆದ ವಾರ ಮೈಸೂರಿಗೆ ಭೇಟಿ ನೀಡಿದ್ದರು. ಅಖಿಲೇಶ್ ಮೈಸೂರಿನ ಸುತ್ತೂರು ಮಠಕ್ಕೆ ಸೇರಿದ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಹೀಗಾಗಿಯೇ ಅವರು ಮೊದಲು ಮಠ, ನಂತರ ಕಾಲೇಜಿಗೆ ಭೇಟಿ ನೀಡಿದ್ದರು. ಸುತ್ತೂರು ಮಠದಲ್ಲಿ ಆನೆಗಳನ್ನು ಸಾಕಿದ್ದಾರೆ. ಗಣ್ಯರು ಬಂದಾಗ ಅವುಗಳಿಂದ ಹಾರ ಹಾಕಿಸುವುದು ಸಂಪ್ರದಾಯ. ಹಿಂದೆ ಇದ್ದ ಆನೆಗಳು ಒಮ್ಮೆ ರಾದ್ಧಾಂತ ಮಾಡಿದ್ದರಿಂದ ಅವುಗಳನ್ನು ಕೊಟ್ಟು, ಬದಲಿಗೆ ಮರಿ ಆನೆಗಳನ್ನು ಪಡೆದು, ತರಬೇತಿ ಕೊಡಿಸಿದ್ದಾರೆ. ಅಖಿಲೇಶ್ ಯಾದವ್ ಸ್ವಾಗತಕ್ಕೆ ಈ ಆನೆಗಳನ್ನು ಮಠದ ಮುಂದೆ ತಂದು ನಿಲ್ಲಿಸಲಾಗಿತ್ತು. ಆದರೆ ನಂತರ ಏನಾಯ್ತೋ ಆವುಗಳನ್ನು ಅಲ್ಲಿಂದ ವಾಪಸ್ ಬಿಡಾರಕ್ಕೆ ಕಳುಹಿಸಲಾಯಿತು. ಮಠದವರ ಪ್ರಕಾರ, ಅವಿನ್ನೂ ಮರಿಯಾನೆಗಳು. ಹೀಗಾಗಿ ರಿಸ್ಕ್ ಬೇಡ ಎಂಬ ಕಾರಣಕ್ಕೆ ಗಣ್ಯರನ್ನು ಸ್ವಾಗತಿಸುವ ಕೆಲಸದಿಂದ ವಾಪಸ್ ಕಳುಹಿಸಲಾಯಿತು ಎಂದರೆ ಮತ್ತೆ ಕೆಲವರು 'ಅಖಿಲೇಶ್ ಯಾದವ್ ಸೈಕಲ್ ಚಿಹ್ನೆ ಇರುವ ಸಮಾಜವಾದಿ ಪಾರ್ಟಿಯವರು ಉತ್ತರಪ್ರದೇಶದಲ್ಲಿ ಆ ಪಕ್ಷದ ಎದುರಾಳಿ ಆನೆಯ ಚಿಹ್ನೆ ಇರುವ ಬಿಎಸ್ಪಿ. ಹೀಗಾಗಿ ಸೈಕಲ್ ಸವಾರಿ ಬರುತ್ತಲೇ ಆನೆ ಪರಾರಿ' ಎಂದು ತಮಾಷೆ ಮಾಡಿದರು.
ಮೂರು ಬಾರಿ ಸ್ವಾಗತ!
ಸಭೆ, ಸಮಾರಂಭಗಳಲ್ಲಿ ಕೆಲವರಿಗೆ ಸಮಯ ಪ್ರಜ್ಞೆಯೇ ಇರುವುದಿಲ್ಲ. ಕೆಲವರು ಸ್ವಾಗತ, ನಿರೂಪಣೆ ಮಾಡುವ ಬದಲು ಭಾಷಣವನ್ನೇ ಮಾಡಿ ಸಭಿಕರ ತಾಳ್ಮೆ ಪರೀಕ್ಷಿಸುತ್ತಾರೆ. ಕಳೆದ ವಾರ ಮೈಸೂರಿನಲ್ಲಿ ಅದೇ ರೀತಿಯಾಯ್ತು. ಮಾನಸ ಗಂಗೋತ್ರಿಯ ಬಾಬು ಜಗಜೀವನರಾಂ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದಲ್ಲಿ ಕಾರ್ಯಕ್ರಮ ಇತ್ತು. ಸ್ವಾಗತಕ್ಕೆ ನಿಂತವರು ಗಣ್ಯರ ವ್ಯಕ್ತಿ ಪರಿಚಯಕ್ಕೆ ಮುಂದಾರು. ಸಭಿಕರು, ರೀ ಸ್ವಾಮಿ, ವ್ಯಕ್ತಿ ಪರಿಚಯ ಬೇಡ. ಸ್ವಾಗತ ಸಾಕು ಅಂದ್ರು. ಸ್ವಾಗತ ಮಾಡುತ್ತಿದ್ದವರು ಅಷ್ಟಕ್ಕೆ ನಿಲ್ಲಿಸಿ ಈಗ ಉದ್ಘಾಟನೆ ಅಂದ್ರು. ಉದ್ಘಾಟನೆ ಮಗಿದ ಬಳಿಕ ಮತ್ತೊಮ್ಮೆ ಸ್ವಾಗತಕ್ಕೆ ನಿಂತ್ರು. ಆಗಲೂ ಬೇಡ ಬೇಡ ಎಂದು ನಿಲ್ಲಿಸಲಾಯಿತು. ಆ ವೇಳೆಗೆ ಕಾರ್ಯಕ್ರಮಕ್ಕೆ ಶಾಸಕ ವಾಸು ಬಂದ್ರು. ಆಗ ಸ್ವಾಗತಕಾರರು ಮೂರನೇ ಬಾರಿ ಸ್ವಾಗತಕ್ಕೆ ನಿಂತು ವಾಸು ಅವರನ್ನು ಎರ್ರಾಬಿರ್ರಿ ಹೊಗಳಲು ಶುರು ಮಾಡಿದರು. ಆಗ ವಾಸು ಅವರೇ ಮಧ್ಯಪ್ರವೇಶಿಸಿ, ಅವರ ಸ್ವಾಗತಕ್ಕೆ ಬ್ರೇಕ್ ಹಾಕಿದ್ರು. ಹೀಗಾಗಿ ಮರಳಿ ಯತ್ನ ಮಾಡಿದರೂ ಮೂರು ಬಾರಿಯೂ ಅವರ ಸ್ವಾಗತ ಪೂರ್ಣವಾಗಲಿಲ್ಲ. ಅಯ್ಯೋ ಪಾಪ!
ಬಾಡೂಟಕ್ಕಾಗಿ ನಾಟಿಕೋಳಿಗೆ ಪ್ರೋತ್ಸಾಹ ಧನ!
ತುಮಕೂರು ಜಿಲ್ಲಾ ಉಸ್ತುವಾರಿ ಹೊತ್ತಿರುವ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಮಾಣ ವಚನ ಸ್ವೀಕರಿಸಿ ತವರು ನೆಲೆ ಶಿರಾಕ್ಕೆ ಬಂದಿದ್ದೇ ತಡ ಅವರ ಅಭಿಮಾನಿಗಳು ಸಾಹೇಬರಿಗೆ ಭರ್ಜರಿ 'ಬಾಡೂಟ'ಕ್ಕೆ ತುರುಸಿನ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಜಯಚಂದ್ರ ಅವರು ಕುರಿ, ಮೇಕೆ ಏನೂ ಬೇಡಪ್ಪ. ನಾಟಿ ಕೋಳಿ, ಮುದ್ದೆ ಊಟವಾದರೆ ಸಾಕು ಎಂದು ಬಿಟ್ಟರು. ಸಚಿವರು ನಾಟಿಕೋಳಿ ಊಟ ಇಷ್ಟಪಟ್ಟಿದ್ದನ್ನು ಮನಗಂಡ ಕಾರ್ಯಕರ್ತರು ಹಳ್ಳಿ ಹಳ್ಳಿ ಸುತ್ತಾಡಿದರೂ ನಾಟಿ ಕೋಳಿ ಸಿಗಲೇ ಇಲ್ಲ. ಇದರಿಂದ ಕಂಗಾಲಾದ ಜಯಚಂದ್ರ ಅವರು ಬೆಂಗಳೂರಿಗೆ ಮರಳಿದ ಬಳಿಕ ತುಮಕೂರು ಜಿಲ್ಲೆಯ 10 ಕಡೆ ನಾಟಿಕೋಳಿ ಸಾಕಲು ರೈತರಿಗೆ ನೆರವಾಗಲು ಮುಂದಾದರು. ಅಷ್ಟೇ ಅಲ್ಲ ಸರ್ಕಾರದಿಂದ 3 ಸಾವಿರ ಪ್ರೋತ್ಸಾಹ ಧನ ಕೊಡಲು ಸರ್ಕಾರದಿಂದ ಸುತ್ತೋಲೆ ಹೊರಡಿಸಿಯೇ ಬಿಟ್ಟರು. ಅಧಿಕಾರಿಗಳೆಲ್ಲಾ ಜಯಚಂದ್ರ ಅವರ ಕೆಲಸದ ಸ್ಪೀಡಿಗೆ ಮೂಗಿನ ಮೇಲೆ ಬೆರಳಿಟ್ಟುಕೊಂಡರೆ ಶಿರಾ ಕ್ಷೇತ್ರದ ಜನತೆ ಮಾತ್ರ ಸಚಿವರು ಊರಿಗೆ ಬಂದಾಗ ನಾಟಿಕೋಳಿ ತಿನ್ನಿಸಿ ಕಳಿಸಲೇಬೇಕಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ.
ಎಂಬಿಬಿಎಸ್ ಸೀಟಿಗೆ ಕೈ ಎತ್ತಿದ ಖಾದರ್!
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಜನರ ಅಹವಾಲು ಆಲಿಸುತ್ತಿದ್ದರು. ಅಷ್ಟರಲ್ಲಿ ಒಬ್ಬರು ತಮ್ಮ ಮಗಳು ಶೇ.60 ಅಂಕ ಪಡೆದಿದ್ದಾಳೆ, ಫಾದರ್ ಮುಲ್ಲರ್ಸ್‌ನಲ್ಲಿ ಮೆಡಿಕಲ್ ಸೀಟು ಕೊಡಿಸಿ ಎಂದು ವಿನಂತಿಸಿದರು. ಆದಕ್ಕೆ ಖಾದರ್ ಆತ್ಮೀಯತೆಯಿಂದ ತಮ್ಮ ಬ್ಯಾರಿ ಭಾಷೆಯಲ್ಲಿಯೇ ಮಾತನಾಡುತ್ತಾ ಅಲ್ಲಿ ಶೇ.90ರ ಮೇಲೆ ಅಂಕ ಗಳಿಸಿದವರೇ ಕ್ಯೂನಲ್ಲಿ ಇದ್ದಾರೆ ಎಂದು ಕಾಲೇಜಿನವರು ಹೇಳುತ್ತಾರೆ. ನಮ್ಮ ಲೋಕೋಪಯೋಗಿ ಸಚಿವರಿಗೆ ತೀರಾ ಬೇಕಾದವರೊಬ್ಬರ ಮಗನಿಗೆ ಶೇ.70ರಷ್ಟು ಅಂಕ ಇದ್ದರೂ ಮೆಡಿಕಲ್ ಸೀಟ್ ಸಿಕ್ಕಿಲ್ಲ! ನೀವು ಎಂಜಿನಿಯರಿಂಗ್ ಟ್ರೈ ಮಾಡಿ, ಆಲ್‌ದ ಬೆಸ್ಟ್ ಹೇಳುತ್ತಾ ವಿದ್ಯಾರ್ಥಿನಿಯ ಎಂಬಿಬಿಎಸ್ ಮಾಡುವ ಆಸೆಯನ್ನು ಮನ್ನಾ ಮಾಡಿದರು ನಮ್ಮ ಖಾದರ್ ಭಾಯಿ!
- ನಂಬಿರಾಜ್