ರಸ್ತೆಯಲ್ಲಿ ಕಾರು-ಬೈಕು ನಡುವೆ ಸಣ್ಣ ಅಪಘಾತವೊಂದು ನಡೆದರೆ ಅಲ್ಲಿ ಜಮಾಯಿಸುವ ಜನರಿಗೆಲ್ಲ ಕಾರಿನವನನ್ನು ಬಯ್ಯುವ ಉತ್ಸುಕತೆ ಹೆಚ್ಚಿರುತ್ತದೆ. ತಪ್ಪು ಯಾರದ್ದು ಎಂಬ ಮಾತು ಆಮೇಲಿನದು. ಕಾರಿನವನಿಗೆ ದುಡ್ಡಿನ ಜಂಬ, ಅವನೇ ಎರ್ರಾಬಿರ್ರಿ ನುಗ್ಗಿರುತ್ತಾನೆ ಎಂಬ ಸ್ಥಾಪಿತ ಅಭಿಪ್ರಾಯ!
ಸ್ಥಾಪಿತ ಅಭಿಪ್ರಾಯವೊಂದಕ್ಕೆ ತುಸು ಭಿನ್ನ ಲಹರಿಯಲ್ಲಿ ಮಾತಿಗಿಳಿಯುವ ಬರಹಗಳು ನನ್ನನ್ನು ಯಾವತ್ತೂ ಸೆಳೆಯುತ್ತವೆ. ಈ ವಾರ ಅಂಥದ್ದೆ ಒಂದು ಬ್ಲಾಗ್ ಬರಹ ಗಮನ ಸೆಳೆಯಿತು. ಸುರೇಖಾ ಪಿಳ್ಳೈ ಎಂಬುವವರು ಹೋಟೆಲ್ನ ವೈಯ್ಟರ್ಗಳ ಬಗ್ಗೆ ತಮ್ಮ ಅನುಭವವನ್ನು ಆಧರಿಸಿ ಬರೆದ ಪುಟ್ಟ ಬರಹ ಇದು. ಆ ಆಂಗ್ಲ ಬರಹವನ್ನು ಇಲ್ಲಿ ಇಡಿಯಾಗಿ ಹರಡಿ ಇಡುವುದಕ್ಕೆ ಮುಂಚೆ ಚಿಕ್ಕದೊಂದು ಪೀಠಿಕೆ.
ಆರ್ಥಿಕವಾಗಿ ಕೆಳಸ್ತರದಲ್ಲಿರುವವನ ಮೇಲೆ ಸಾರ್ವಜನಿಕವಾಗಿ ಒಂದು ಅನುಕಂಪವಿರುತ್ತದೆ. ವೈಯಕ್ತಿಕ ನೆಲೆಯಲ್ಲಿ ಅದು ಇರುತ್ತದೊ ಬಿಡುತ್ತದೊ ಬೇರೆ ಮಾತು. ಇರಲಿ, ಬಡವರ ಕುರಿತ ಅನುಕಂಪ ಮಾನವತೆಯ ಗುರುತು. ಅದು ಯಾವತ್ತೂ ಮಾಸಬಾರದು. ಆದರೆ ಇವತ್ತಿನ ಸಿನಿಮಾಗಳು ಮತ್ತು ಕತೆಗಳೆಲ್ಲ ಬಡತನವನ್ನು ರೋಮಾಂಚಕವಾಗಿಸುತ್ತ ಹೋಗಿರುವುದರ ಪರಿಣಾಮವೋ ಏನೊ, ಆರ್ಥಿಕ ಸ್ಥಿತಿವಂತನಲ್ಲದವ ತಪ್ಪೆ ಮಾಡಲಾರ ಎಂಬಷ್ಟರ ಮಟ್ಟಿಗಿನ ಅತಿ ಎನಿಸುವ ಅಪಾಯಕಾರಿ ಅಭಿಪ್ರಾಯವೊಂದು ನೆಲೆಯೂರಿಬಿಟ್ಟಿದೆ. ಸೂಕ್ಷ್ಮವಾಗಿ ಗಮನಿಸಿ; ರಸ್ತೆಯಲ್ಲಿ ಕಾರು-ಬೈಕು ನಡುವೆ ಸಣ್ಣ ಅಪಘಾತವೊಂದು ನಡೆದರೆ ಅಲ್ಲಿ ಜಮಾಯಿಸುವ ಜನರಿಗೆಲ್ಲ ಕಾರಿನವನನ್ನು ಬಯ್ಯುವ ಉತ್ಸುಕತೆ ಹೆಚ್ಚಿರುತ್ತದೆ. ತಪ್ಪು ಯಾರದ್ದು ಎಂಬ ಮಾತು ಆಮೇಲಿನದು. ಕಾರಿನವನಿಗೆ ದುಡ್ಡಿನ ಜಂಬ, ಅವನೇ ಎರ್ರಾಬಿರ್ರಿ ನುಗ್ಗಿರುತ್ತಾನೆ ಎಂಬ ಸ್ಥಾಪಿತ ಅಭಿಪ್ರಾಯ! ಇಂಥದೆ ಮನಸ್ಥಿತಿಯ ಸೀಳುನೋಟವೊಂದು ಸುರೇಖಾ ಬರಹದಲ್ಲಿ ಕಾಣಿಸಿತು. ನಿಮಗೂ ಇಷ್ಟವಾದೀತು, ಹೌದೆನಿಸೀತು....
ಶ್ರೀಶ್ರೀಶ್ರೀ
ನನ್ನ ಪರಿಚಯದ ಸ್ನೇಹಿತರು, ಬಂಧುಗಳು ಹಾಗೂ ಸಹೋದ್ಯೋಗಿಗಳು, ಆಗೊಮ್ಮೆ ಈಗೊಮ್ಮೆ ತಪ್ಪದೇ ಹೇಳುವ ಮಾತುಗಳು ಹೀಗಿರುತ್ತವೆ: 'ಮೊನ್ನೆ ಒಂದು ಹೋಟೆಲ್ಗೆ ಹೋಗಿದ್ದೆ. ಅಲ್ಲಿ ಕೆಲಸ ಮಾಡುವ ವೆಯ್ಟರ್ಗಳ ಬದುಕು ಎಷ್ಟೊಂದು ಕಷ್ಟವಾದದ್ದು ಎಂಬುದನ್ನು ಪ್ರತ್ಯಕ್ಷ ಕಂಡೆ. ಅಂಥದೊಂದು ಸಂಕಟದ ಕೆಲಸ ನನ್ನ ಪಾಲಿಗೆ ಬರಲಿಲ್ಲವಲ್ಲ; ಅದಕ್ಕಾಗಿ ನಾನು ದಯಾಮಯಿ ಭಗವಂತನಿಗೆ, ನನ್ನ ಪಾಲಿಗಿರುವ ಅದೃಷ್ಟ ದೇವತೆಗಳಿಗೆ ಧನ್ಯವಾದ ಹೇಳುತ್ತೇನೆ...'
ಮತ್ತೆ ಕೆಲವರ ಅಭಿಪ್ರಾಯ ಹೀಗಿರುತ್ತದೆ: 'ಕೆಲವು ಹೋಟೆಲುಗಳು ಹೊರಗಿನಿಂದ ನೋಡಲು ತುಂಬ ಚೆನ್ನಾಗಿ ಕಾಣುತ್ತವೆ. ಆದರೆ, ಅಲ್ಲಿನ ವೆಯ್ಟರ್ಗಳು ಗ್ರಾಹಕರೊಂದಿಗೆ ಅದೆಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂದರೆ, ಆ ಕ್ಷಣಕ್ಕೆ ಸಮಸ್ತ ವೆಯ್ಟರ್ಗಳ ಬಗ್ಗೆಯೇ ಜಿಗುಪ್ಸೆ ಮತ್ತು ಅಸಹನೆ ಹುಟ್ಟಿಕೊಳ್ಳುತ್ತದೆ. ಗ್ರಾಹಕರಿಲ್ಲದಿದ್ದರೆ ನಿಮಗೆ ಬದುಕೇ ಇಲ್ಲ. ಹೋಟೆಲಿಗೆ ಬಂದವರೊಂದಿಗೆ ಸೌಜನ್ಯದಿಂದ ವರ್ತಿಸಲು ಕಲಿತುಕೊಳ್ರಪ್ಪಾ ಎಂದು ಚೀರಿ ಹೇಳಬೇಕು ಅನಿಸುತ್ತದೆ...'
ಒಂದು ಕಾಲದಲ್ಲಿ ನನ್ನ ಬಾಸ್ ಆಗಿದ್ದ ಬ್ಯಾನರ್ಜಿ ಹೇಳಿದ್ದರು: ಹೋಟೆಲುಗಳಲ್ಲಿ, ಅದರಲ್ಲೂ ವಿಶೇಷವಾಗಿ ಸ್ಟಾರ್ ಹೋಟೆಲುಗಳಲ್ಲಿ ನೀವು ಜೋರು ದನಿಯಲ್ಲಿ ಕೂಗಾಡಿದಷ್ಟೂ, ಹೆಚ್ಚು ಹೆಚ್ಚು ದೂರಿದಷ್ಟೂ ನಿಮಗೆ ಹೆಚ್ಚಿನ ಮರ್ಯಾದೆ ದೊರೆಯುತ್ತದೆ! ಹೀಗೆ ಹೇಳುವುದು ಮಾತ್ರವಲ್ಲ; ಫೈವ್ಸ್ಟಾರ್ ಹೋಟೆಲುಗಳಿಗೆ ಹೋದ ಪ್ರತಿ ಸಂದರ್ಭದಲ್ಲೂ ಅಲ್ಲಿನ ಯಾವುದಾದರೂ ಒಂದು ತಪ್ಪನ್ನು ಕಂಡು ಹಿಡಿದು ಹೋಟೆಲಿನ ಸಿಬ್ಬಂದಿ ಹಾಗೂ ಮೆನೇಜರ್ ಮೇಲೆ ಹರಿಹಾಯುವ ಕೆಲಸವನ್ನು ಬ್ಯಾನರ್ಜಿಯವರು ತಪ್ಪದೇ ಮಾಡುತ್ತಿದ್ದರು. ಅವರ ಆರ್ಭಟಕ್ಕೆ ಕಂಗಾಲಾಗುತ್ತಿದ್ದ ಹೋಟೆಲಿನ ಸಿಬ್ಬಂದಿ, ಅವರು ತಂಗಿದಷ್ಟು ದಿನವೂ ಅವರ ಹಿಂದೆ ಮುಂದೆಯೇ ಓಡಾಡುತ್ತಾ ಅವರು ಕೇಳಿದ್ದೆಲ್ಲವನ್ನೂ ಈಡೇರಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು.
ಬ್ಯಾನರ್ಜಿಯವರಂತೆಯೇ ಜೋರಾಗಿ ಅಬ್ಬರಿಸುತ್ತಾ ಅಡ್ಡಾಡಿದರೆ ಎಲ್ಲ ಕೆಲಸವೂ ಆಗುತ್ತದೆ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಆದರೆ ಎಲ್ಲ ಸಂದರ್ಭದಲ್ಲೂ ಇಂಥ ಗುಡುಗಾಟ ವರ್ಕ್ಔಟ್ ಆಗುವುದಿಲ್ಲ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೊಮ್ಮೆ ಕಚೇರಿ ಕೆಲಸದ ನಿಮಿತ್ತ ಕೋಲ್ಕತ್ತಾಗೆ ಹೋಗಿದ್ದಾಗ, ಪುಟ್ಟ ಕೊಳದ ಎದುರಿಗಿರುವ ಕೊಠಡಿಯನ್ನು ನೀಡಲಿಲ್ಲ ಎಂದು ಸಿಬ್ಬಂದಿಯ ಮೇಲೆ ಎಗರಾಡಲು ಪ್ರಾರಂಭಿಸಿದೆ. ಆ ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದ ಹೋಟೆಲಿನ ಮೆನೇಜರ್, ತುಂಬ ತಾಳ್ಮೆಯಿಂದ ನನ್ನ ಮಾತುಗಳನ್ನು ಆಲಿಸಿದರು. ನಂತರ ಹೇಳಿದರು: 'ಮೇಡಂ, ಈ ಹೋಟೆಲಿನ ಮುಂದೆ ಯಾವೊಂದು ಕೊಳವೂ ಇಲ್ಲ. ಹಾಗಿರುವಾಗ ಕೊಳದ ಎದುರಿಗಿರುವ ಕೊಠಡಿಯನ್ನು ನಿಮಗೆ ಒದಗಿಸಲು ಹೇಗೆ ತಾನೆ ಸಾಧ್ಯ?'
ಈಗ ಮತ್ತೆ ವೆಯ್ಟರ್ಗಳ ವರ್ತನೆಯ ವಿಷಯಕ್ಕೆ ಬರೋಣ: ಹೋಟೆಲಿಗೆ ಹೋದ ಸಂದರ್ಭದಲ್ಲಿ ಬಹಳಷ್ಟು ಮಂದಿಗೆ ಮುಜುಗರ ಪಡುವಂಥ, ಕೋಪಗೊಳ್ಳುವಂಥಾ ಸಂದರ್ಭಗಳು ಅಲ್ಲಿನ ವೆಯ್ಟರ್ಗಳಿಂದಲೇ ಆಗುತ್ತದೆ. ಬಹುಶಃ ಈಗ ವಿವರಿಸುವಂಥ ಸಂದರ್ಭಗಳು ನಮ್ಮಲ್ಲಿ ಬಹುಮಂದಿಯ ಅನುಭವಕ್ಕೆ ಖಂಡಿತ ಬಂದಿರುತ್ತವೆ. ಏನೆಂದರೆ, ಯಾವುದೋ ಒಂದು ಹೋಟೆಲಿಗೆ ಹೋಗಿ ಗೋಬಿ ಮಂಚೂರಿ ಆರ್ಡರ್ ಮಾಡಿರುತ್ತೀರಿ ಎಂದುಕೊಳ್ಳಿ. ವೆಯ್ಟರ್, ಗೋಬಿ ಮಂಚೂರಿಯನ್ನು ತಂದಿಡುತ್ತಾನೆ. ಆದರೆ ಅದರ ಜೊತೆಗೇ ನೀಡಬೇಕಾದ ಸಾಸ್ ಕೊಡಲು ಬೇಕೆಂದೇ ಮರೆತಿರುತ್ತಾನೆ. ಇನ್ನು ಒಂದೆರಡು ನಿಮಿಷದಲ್ಲಿ ಆತ ಸಾಸ್ನೊಂದಿಗೆ, ಮರಳಿ ಬರುತ್ತಾನೆ ಎಂದು ಕಾಯುತ್ತಾ ಕೂತಿರುತ್ತೀರಿ. ಆದರೆ, ಆತ ಬೇರೆ ಗ್ರಾಹಕರ ಆರ್ಡರ್ಗಳೊಂದಿಗೆ ಬ್ಯುಸಿಯಾಗಿರುತ್ತಾನೆ. ಇಲ್ಲವಾದರೆ, ಸಹೋದ್ಯೋಗಿಗಳೊಂದಿಗೆ ಕೆಲಸಕ್ಕೆ ಬಾರದ ಹರಟೆಯಲ್ಲಿ ಮಗ್ನನಾಗಿರುತ್ತಾನೆ. ಕಡೆಗೊಮ್ಮೆ, ತಾಳ್ಮೆ ಕಳೆದುಕೊಂಡು ನೀವು ಸ್ವಲ್ಪ ದನಿ ಎತ್ತರಿಸಿ 'ಸಾಸ್ ತಗೋಬನ್ರಿ' ಎಂದು ಕೂಗಿದರೆ, ತುಂಬ ಉದಾಸೀನದಿಂದಲೇ ತಂದಿಟ್ಟು, ಒಮ್ಮೆ ನಿಮ್ಮನ್ನೇ ದುರುಗುಟ್ಟಿಕೊಂಡು ನೋಡಿ ಹೋಗುತ್ತಾನೆ. ಮತ್ತೆ ಕೆಲವೊಮ್ಮೆ ಊಟಕ್ಕೆ ಕೂತವರು, ಸಾಂಬಾರ್ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಎಕ್ಸ್ಟ್ರಾ ರಸಂ ತಂದು ಕೊಡಪ್ಪಾ ಎಂದು ಕೇಳಿದರೆ, ಎದುರಿನ ನಾಲ್ಕೂ ಟೇಬಲ್ಗಳಲ್ಲಿರುವ ಮಂದಿಗೆ ಕೇಳಿಸುವಂತೆ-'ಏನಂದ್ರಿ? ರಸಂ ಕೇಳಿದ್ರಾ' ಎಂದು ಕೇಳುವ ವೆಯ್ಟರ್ಗಳು ಆ ನಂತರವೇ ತಂದು ಕೊಡುತ್ತಾರೆ!
ಕೆಲವೊಂದು ಹೋಟೆಲುಗಳಲ್ಲಿನ ಅನುಭವ ಇನ್ನೂ ವಿಭಿನ್ನವಾದದ್ದು. ಹೋಟೆಲಿನ ಹೊರಗಿನ ಅಂಗಳದಲ್ಲಿ ಗೆಳೆಯರನ್ನೋ, ಬಂಧುಗಳನ್ನೋ, ಕಾಯುತ್ತಾ ಕೂತಿರುವ ಗ್ರಾಹಕರತ್ತ ಬರುವ ವೆಯ್ಟರ್ಗಳು-ಯಾರಿಗಾಗಿ ಕಾಯ್ತಾ ಇದೀರ? ಇಲ್ಲಿಗೆ ಯಾಕೆ ಬಂದಿದ್ದೀರ? ಎಂದೆಲ್ಲ ಕುಹಕದಿಂದ ಪ್ರಶ್ನಿಸುತ್ತಾರೆ. ಕೆಲವರು ತುಂಬ ಅಹಂಕಾರದಿಂದ -'ಬೇಗ ಜಾಗ ಖಾಲಿ ಮಾಡಿ' ಎಂದು ಹೇಳುವುದೂ ಉಂಟು!
ಇಂಥ ಸಂದರ್ಭಗಳನ್ನು ನಾವು-ನೀವೆಲ್ಲ ಪ್ರತಿನಿತ್ಯ ನೋಡುತ್ತಲೇ ಇರುತ್ತೇವೆ. ಆದರೂ ನಮ್ಮಲ್ಲಿ ವೆಯ್ಟರ್ಗಳ ಬಗ್ಗೆ ಹೆಚ್ಚಿನವರಿಗೆ ಅಯ್ಯೋ ಪಾಪ ಎಂಬಂಥ ಭಾವನೆಯಿದೆ. ಆತ ಟೇಬಲ್ ಬಳಿ ಸರ್ವ್ ಮಾಡುತ್ತಾನೆ ಎಂಬುದನ್ನೇ ನೆಪ ಮಾಡಿಕೊಂಡು ಹೋಟೆಲಿನಿಂದ ಎದ್ದು ಬರುವ ಮುನ್ನ ಟಿಪ್ಸ್ ಇಟ್ಟು ಬರುತ್ತೇವೆ. ಅಂಥ ನಾವೇ, ಮನೆಗೆ ಬರುವ ದಾರಿಯಲ್ಲಿ ದಿಢೀರ್ ಎದುರಾಗುವ ಭಿಕ್ಷುಕನನ್ನು, ಬೆಳಗ್ಗೆಯೇ ಬಂದು ಬಾಗಿಲು ತಟ್ಟುವ ಹೂವು ತರಕಾರಿ ಮಾರುವವನನ್ನು, ಶಾಂಪೂ ತಗೊಳ್ಳಿ ಸಾರ್ ಎಂದು ದೀನನಾಗಿ ಪ್ರಾರ್ಥಿಸುವ ಸೇಲ್ಸ್ ಬಾಯ್ನನ್ನು ಯಕ್ಕಾಮಕ್ಕಾ ಬಯ್ಯುತ್ತೇವೆ.
ಮತ್ತೆ ಹೋಟೆಲಿಗೆ ಬಂದರೆ ಸಾಕು; ಪಾಪ ವೆಯ್ಟರ್ ಎಂಬ ಉದ್ಗಾರ ನಮ್ಮದಾಗುತ್ತದೆ. ಆದರೆ, ಕೆಲವು ವೆಯ್ಟರ್ಗಳು ಮಾತ್ರ ಇಡೀ ಹೋಟೆಲ್ಲೇ ತಮ್ಮದು ಎಂಬಂಥ ಉಡಾಫೆಯ ವರ್ತನೆ ತೋರಿ, ಜನ ಹೀಗೂ ಇರ್ತಾರಾ ಎಂದು ಉದ್ಗರಿಸುವಂತೆ ಮಾಡಿ ಬಿಡುತ್ತಾರೆ.
ಅಂದ ಹಾಗೆ ಇದು ನನ್ನ ಅನುಭವ. ವೆಯ್ಟರ್ಗಳೊಂದಿಗೆ ನಿಮಗೆ ಆಗಿರುವ ಅನುಭವವೂ ಹೀಗೇ ಇರಬಹುದು. ಅಥವಾ ಇದಕ್ಕಿಂತ ಭಿನ್ನವಾಗಿಯೂ ಇರಬಹುದು: ಹೋಟೆಲುಗಳ ತಿಂಡಿಯ ಹಾಗೆ-ಅವುಗಳ ಥರಾವರಿ ರುಚಿಯ ಹಾಗೆ!
ಪ್ರಕೃತಿಗೆ ಹತ್ತಿರವಾಗಿ ಬದುಕೋದು ಅಂದ್ರೆ...
ಜೂನ್ ಐದರಂದು ಪರಿಸರ ದಿನಾಚರಣೆ ಮುಗಿದಿದೆ. ಈ ತಿಂಗಳು ಪೂರ್ತಿ ಅಲ್ಲಲ್ಲಿ ಪರಿಸರ ಕಾಳಜಿಯ ಬರಹ ಹಾಗೂ ಮಾತುಗಳು ಇಣುಕುತ್ತಿರುತ್ತವೆ. ಈ ಬಗ್ಗೆ ಬರೆದಂತೆಲ್ಲ ಪಶ್ಚಾತ್ತಾಪವೇ ಕಾಡುತ್ತದೆ. ಏಕೆಂದರೆ ಒಟ್ಟಾರೆ ಜೀವನ ಪದ್ಧತಿ ಅಷ್ಟು ದೂರ ಬಂದುಬಿಟ್ಟಿದೆ. ಭಾಷಣದ ಧಾಟಿಯಲ್ಲಿ ಪರಿಸರ ಉಳಿಸುವ ಬಗ್ಗೆ ಸುದೀರ್ಘವಾಗಿ ಏನೆಲ್ಲ ಅಂಶಗಳನ್ನು ಹೇಳಿಬಿಡಬಹುದು. ಆದರೆ ಪರಿಸರದ ಮೇಲಿನ ಹೊರೆ ತಪ್ಪಿಸುವ ನಿಟ್ಟಿನಲ್ಲಿ ದೈನಂದಿನ ಬದುಕಿನಲ್ಲಿ ನಾವು ರಾಜಿಯಾಗಿದ್ದೇವೆಯೇ ಅಂತ ನೋಡಿದರೆ ನಮಗೇ ಮುಜುಗರವಾಗುತ್ತದೆ. ನಿಸರ್ಗಕ್ಕೆ ಹತ್ತಿರವಾಗಿ ಬದುಕುವುದು ಎಂದರೆ ಒಂಥರದ ಬೌದ್ಧಿಕ ಮಾತಿನಂತೆ, ಮೇಲ್ಮಟ್ಟದ ಆದರ್ಶದಂತೆ ಗೋಚರವಾಗುತ್ತದೆ. ಅಂದಹಾಗೆ ಪ್ರಕೃತಿ ಜತೆ ಬದುಕುವುದು ಎಂದರೆ ಗಿಡಮರಗಳ ನಡುವೆಯೇ ಇರುವುದು ಎಂಬ ಸಾರಾಸಗಟು ಅರ್ಥವೇನೂ ಅಲ್ಲ. ಇಂಟರ್ನೆಟ್ನಲ್ಲಿ ಇತ್ತೀಚೆಗೆ ಓದಿದ ಬರಹವೊಂದು, ಪ್ರಕೃತಿಗೆ ಹತ್ತಿರವಾಗುವುದು ಎಂಬುದಕ್ಕೆ ಕೆಲ ಅಂಶಗಳನ್ನು ಪಟ್ಟಿ ಮಾಡಿತ್ತು. ಆ ಆಸಕ್ತಿಕರ ಅಂಶಗಳು ಹೀಗಿದ್ದವು.
- ಸಾರ್ವಜನಿಕ ಸಾರಿಗೆಯನ್ನೇ ಬಳಸುವವರು. ನಡಿಗೆಯನ್ನು ನೆಚ್ಚಿಕೊಂಡಿರುವವರು.
- ಮಣ್ಣಿನ ಗಡಿಗೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯಲು ಬಳಸುವವರು. (ಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಕ್ಯಾನು ಈ ವಿಚಾರ ಕೇಳಿ ಗಹಗಹಿಸಿದಂತಿದೆ!)
-ತಣ್ಣೀರಿನಲ್ಲೇ ಸ್ನಾನ ಮಾಡುವ ಅಭ್ಯಾಸ.
- ಕಾಯಿಲೆ ಕಾಣಿಸಿಕೊಂಡಾಗ ಆಯುರ್ವೇದ ವೈದ್ಯರನ್ನೇ ಆದ್ಯತೆಯಾಗಿಸಿಕೊಳ್ಳುವವರು.
- ಸೋಪು-ಶಾಂಪುಗಳ ಬದಲಿಗೆ ಮನೆಯಲ್ಲಿ ಸಂಸ್ಕರಿಸಿದ ಎಣ್ಣೆ- ಶೀಗೆಕಾಯಿ ಬಳಸುವವರು. ಟೂಥ್ಪೇಸ್ಟ್ ಬದಲು ಇದ್ದಿಲು ಉಪಯೋಗಿಸುವವರು, ಒಟ್ಟಿನಲ್ಲಿ ದೇಹಕ್ಕೆ ರಾಸಾಯನಿಕಗಳು ಸೇರದಂತೆ ಎಚ್ಚರಿಕೆ ವಹಿಸುವವರು.
-ಟಿವಿ, ಮೊಬೈಲ್ಗಳಿಂದ ತಾನು ದೂರ, ಹಾಗಾಗಿಯೇ ಖುಷಿಯಿಂದಿದ್ದೇನೆ ಎನ್ನುವವರು.
ಬಹುಶಃ ಈ ಪಟ್ಟಿಯಲ್ಲಿರುವಂತೆ ಬದುಕುವುದಕ್ಕೆ ಸನ್ಯಾಸಿಯೇ ಆಗಿರಬೇಕು ಅನ್ನುತ್ತೀರೇನೋ? ಹೌದೇ..? ಇವತ್ತಿನ ಕಾಲಘಟ್ಟದಲ್ಲಿ ಸನ್ಯಾಸಿಗಳೆನಿಸಿಕೊಂಡವರು ಇವುಗಳಿಂದೆಲ್ಲ ದೂರವಾಗಿರುತ್ತಾರಾ?
ಇರಲಿ. ನಿಸರ್ಗಕ್ಕೆ ಹತ್ತಿರವಾದ ಬದುಕು ಎಂಬುದು ಹೇಗೆ ರಮ್ಯ ಕಲ್ಪನೆ ಆಗುತ್ತಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಹೀಗೆಲ್ಲ ಪಟ್ಟಿ ಮಾಡಬೇಕಾಯಿತು.
- ವಿಶ್ವೇಶ್ವರ ಭಟ್