ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿಯೊಬ್ಬರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗ ಗ್ರಾಮವೊಂದಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸುತ್ತಿದ್ದರು. ರೈತನೊಬ್ಬನ ಜಮೀನು ಹಸಿರಿನಿಂದ ಕಂಗೊಳಿಸುತ್ತಿತ್ತು. ಇದನ್ನು ಕಂಡು ಸಂತಸರಾದ ಆ ಡಿಸಿ ಪಕ್ಕದ ಜಮೀನು ಬರಡಾಗಿದ್ದನ್ನು ಕಂಡು ಮರುಗಿದರು. ಅಲ್ಲೇ ಸಮೀಪದ ಮರದ ಬುಡದಲ್ಲಿದ್ದ ಕಟ್ಟೆಯ ಮೇಲೆ ಕುಳಿತ ಇತರರೊಂದಿಗೆ ಸೇರಿ ಹರಟುತ್ತಿದ್ದ ಆ ಜಮೀನಿನ ರೈತನನ್ನು ಕರೆದು, ಅಲ್ಲಪ್ಪ, ಪಕ್ಕದ ಜಮೀನು ನೋಡು ಎಷ್ಟೊಂದು ಚೆನ್ನಾಗಿದೆ. ನಿನ್ನ ಜಮೀನು ನೋಡು ಎಲ್ಲ ಹಾಳಾಗಿದೆ. ಏಕೆ ಸರಿಯಾಗಿ ವ್ಯವಸಾಯ ಮಾಡೊಲ್ವ ಎಂದು ಕೇಳಿದರು. ಅವರು ಮಾತು ನಿಲ್ಲಿಸುವುದನ್ನೇ ಕಾಯುತ್ತಿದ್ದ ಆ ರೈತ, ಈಗ ನಾನ್ ಮಾತಾಡಬಹ್ದು ಸಾ... ಎಂದು ರಾಗ ಎಳೆದ. ಆಯ್ತ್ ಹೇಳಪ್ಪ ಅಂದ್ರು ಡಿಸಿ. ಸಾ.. ಒಂದ್ ಮಾತ್ ಕೇಳ್ತಿನಿ. ಬೇಜಾರ್ ಮಾಡ್ಕೊಬೇಡಿ ಅಂತಾ ಮತ್ತೆ ರಾಗ ಎಳೆದ. ಇಲ್ಲ ಹೇಳಪ್ಪ ಅಂದ್ರು ಡಿಸಿ. ನೀವ್ ಡಿಸಿಯಾಗಿದ್ದೀರಿ. ನಿಮ್ಮ ಬ್ಯಾಚ್‌ನಲ್ಲಿ ಓದ್ತಿದ್ದ ಎಲ್ರೂ ಡಿಸಿ ಆಗವ್ರ ಸಾ....? ಇದು ಹಂಗೆಯಾ ಸಾ... ಎಂದು ಈ ಕಿಲಾಡಿ ರೈತ ಉತ್ತರ ನೀಡುತ್ತಿದ್ದಂತೆ ನಗು ತಡೆಯಲಾರದೇ ಡಿಸಿ ಸಾಹೇಬ್ರು ಕಾರು ಹತ್ತಿ ಅಲ್ಲಿಂದ ರೈಟ್ ಹೇಳಿದರು.
ಇವತ್ತು ಸಿದ್ರಾಮಯ್ಯ, ನಾಳೆ ಕಾಂಗ್ರೆಸ್ 'ಕೈ' ಬಿಡ್ತೀವಿ
ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ ಕಾಮನ್. ಸಚಿವ ಸ್ಥಾನ ವಂಚಿತರಾಗಿರುವ ಕನಕಪುರದ ಪ್ರಭಾವಿ ಶಾಸಕ ಡಿ.ಕೆ.ಶಿವಕುಮಾರ್ ಇನ್ನೂ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಅವರು ಬಸವ ವಸತಿ ಯೋಜನೆ ಮನೆಗಳ ಉದ್ಘಾಟನಾ ಸಮಾರಂಭವನ್ನು ಸ್ವಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ವಸತಿ ಸಚಿವ ಅಂಬರೀಷ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಆಹ್ವಾನಿಸಲಾಗಿತ್ತು. ಬೃಹತ್ ಜನಸ್ತೋಮದ ನಡುವೆ ಈ ಕಾರ್ಯಕ್ರಮ ನಡೆಯಿತು. ಅಂಬರೀಷ್, ಜಾರ್ಜ್ ಮತ್ತು ಶಿವಕುಮಾರ್ ಅವರಿದ್ದ ಪ್ರಚಾರ ಸಾಮಗ್ರಿಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಎತ್ತ ಕಣ್ಣಾಡಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖಾರವಿಂದವಿರುವ ಫ್ಲೆಕ್ಸ್ ಕಾಣಲೇ ಇಲ್ಲ. ವರದಿಗಾಗಿ ತೆರಳಿದ್ದ ಇಬ್ಬರು ಪತ್ರಕರ್ತರು ಪೆಟ್ಟಿ ಅಂಗಡಿ ಬಳಿ ಸಿಗರೇಟು ಸೇದುತ್ತಾ, ಬೇಕಂತಲೇ ಸಿಎಂ ಫೋಟೋ ತೆಗೆಸಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ರು. ಅದನ್ನು ನಿಶಾಬಾಜಿಯಲ್ಲಿದ್ದ ವ್ಯಕ್ತಿ ಕುತೂಹಲದಿಂದ್ಲೇ ಕೇಳಿಸಿಕೊಳ್ಳುತ್ತಿದ್ದ. ಆತನಿಗೆ ಅದ್ಯಾವ ರೀತಿ ಸಿಟ್ಟು ಬಂತೋ ಗೊತ್ತಿಲ್ಲ. ನಮ್ಮ ಶಿವಕುಮಾರಣ್ಣನ್ನ ಕ್ಯಾಬಿನೆಟ್‌ನಿಂದ ಕೈಬಿಟ್ಟ ಆ ಸಿದ್ರಾಮಯ್ಯನ್ನ ನಾವು ಕನಕಪುರದಲ್ಲಿ ಕೈ ಬಿಟ್ಟೀವಿ. ನಮ್ಮನ್ನು ಎದ್ರಾಕ್ಕೊಂಡ್ರೆ ಇವತ್ತು ಸಿದ್ರಾಮಯ್ಯ, ನಾಳೆ ಕಾಂಗ್ರೆಸನ್ನೇ 'ಕೈ' ಬಿಟ್ಟುಬಿಡ್ತೀವಿ ಎಂದು ಅಬ್ಬರಿಸಿದ. ಅಲ್ಲಿದ್ದ ಪತ್ರಕರ್ತರು ಇನ್ನೂ ಇಲ್ಲೇ ಇದ್ರೆ ನಮ್ಮ ಮೇಲೇ 'ಕೈ' ಇಟ್ಟಾನು ಎಂದು ಜಾಗ ಖಾಲಿ ಮಾಡಿದ್ರು.
ಪ್ರಸಾದ ಬಹಿರಂಗಪಡಿಸಿದ ಸತ್ಯ
ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಚಾಮರಾಜನಗರ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದವರು. ಅವರ ಕಾಲಕ್ಕೆ ಸಂಸದರ ನಿಧಿ ಇರಲಿಲ್ಲ. ಆದರೂ ಶ್ರೀನಿವಾಸಪ್ರಸಾದ್ ಕ್ಷೇತ್ರ ವ್ಯಾಪ್ತಿಯ ಯಾವುದೇ ಕಾರ್ಯಕ್ರಮಗಳಿದ್ದರೂ ಹಾಜರಾಗುತ್ತಿದ್ದರು. ಹೀಗಾಗಿ ಪ್ರಸಾದ್ ನಮ್ಮ ಜೊತೆ ಯಾವಾಗಲೂ ಇರ್ತಾರೆ ಅಂತಾ ವೋಟ್ ಹಾಕ್ತಾ ಇದ್ರು. ಇದರಿಂದ ನಾನು ಐದು ಬಾರಿ ಎಂಪಿ ಆಗಲು ಸಾಧ್ಯವಾಯ್ತು ಅಂತಾ ಇತ್ತೀಚೆಗೆ ನಂಜನಗೂಡು ತಾಲೂಕು ಕೂಡ್ಲಾಪುರದಲ್ಲಿ ನಡೆದ ಪಿಂಚಣಿ ಅದಾಲತ್ ಸಮಾರಂಭದಲ್ಲಿ ಬಹಿರಂಗಪಡಿಸಿದರು. ಇಷ್ಟೇ ಅಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈಗ ನಮ್ಮ ಧ್ರುವನಾರಾಯಣ (ಚಾಮರಾಜನಗರ ಸಂಸದರು) ಅದೇ ರೀತಿ. ಯಾವಾಗ್ಲೂ ಜನರ ಮಧ್ಯೆಯೇ ಇರ್ತಾರೆ ಅಂದ್ರು. ಸಭಿಕರು ಪ್ರಸಾದ್ ಮಾತಿನ ಗೂಡಾರ್ಥ ತಿಳಿದು ಬಿದ್ದುಬಿದ್ದು ನಗತೊಡಗಿದರು. ಆದರೆ ಈಗ ಸಂಸದರಿಗೆ ವಾರ್ಷಿಕ 1 ಕೋಟಿ ಅನುದಾನ ಇದೆ ಎಂಬುದನ್ನು ಹೇಳಲು ಮರೆತರು.
ಸುದ್ದಿ ನೀಡಲು ಹೋಗಿ ಏಟು ತಿಂದರು!
ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಂದು ಏನಾದ್ರೂ ವಿಶೇಷ ಸುದ್ದಿ ನೀಡಬೇಕೆಂದು ರಾಮನಗರದ ಕಾರ್ಮಿಕ ಅಧಿಕಾರಿಗಳಿಗೆ ಮನಸಾಗಿ ಪತ್ರಕರ್ತರನ್ನು ಕರೆಯಿಸಿಕೊಂಡರು. ಪಟ್ಟಣದ ಐಜೂರು ಕೈಗಾರಿಕಾ ಪ್ರದೇಶ ಪಕ್ಕದ ಗ್ಯಾರೇಜ್‌ಗಳ ಮೇಲೆ ದಾಳಿ ನಡೆಸಲು ಅಧಿಕಾರಿಗಳ ತಂಡ ಪತ್ರಕರ್ತರೊಂದಿಗೆ ತೆರಳಿತು. ಈ ತಂಡ ಹೋಗುತ್ತಿದ್ದಂತೆಯೇ ಒಬ್ಬ ಬಾಲಕ ಸಿಕ್ಕಿಬಿದ್ದ. ಇದನ್ನು ಗಮನಿಸಿ ಪಕ್ಕದ ಅಂಗಡಿಯಲ್ಲಿದ್ದ ಮತ್ತೊಬ್ಬ ಬಾಲಕ ಪೇರಿ ಕಿತ್ತ. ಆತನನ್ನು ಹಿಡಿಯಲು ಅಧಿಕಾರಿಗಳು ಬೆನ್ನಟ್ಟಿದರು. ಬಾಲಕನನ್ನು ಹಿಂಬಾಲಿಸುತ್ತಿದ್ದ ಅಧಿಕಾರಿಗಳನ್ನು ಇದ್ದಕ್ಕಿದ್ದಂತೆ ಗುಂಪೊಂದು ಅಡ್ಡಗಟ್ಟಿತು. ಗುಂಪಿನ ಉದ್ದೇಶ ಬಾಲಕನನ್ನು ಬಚಾವ್ ಮಾಡುವುದಷ್ಟೇ ಆಗಿದ್ದಿರಬಹುದು. ಆದರೆ, ಅಧಿಕಾರಿಗಳು ಗುಂಪಿನ ಮೇಲೆ ಹರಿಹಾಯ್ದರು. ಕೇಸು ಹಾಕಿ ನಿಮ್ಮನ್ನೂ ಜೈಲಿಗೆ ಹಾಕಿಸಿಬಿಡುತ್ತೇವೆಂದು ಬೊಬ್ಬಿರಿದರು. ಮಾತಿಗೆ ಮಾತು ಬೆಳೆಯಿತು. ಗುಂಪಿನಲ್ಲಿದ್ದವರು ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ ಮೂತಿ ನೋಡದೆ ತದುಕಿದರು. ಒಬ್ಬ ಅಧಿಕಾರಿ ಕೆನ್ನೆ ಕಡುಬು ಹೋಲುವಂತಾಗಿತ್ತು. ಈ ಘಟನೆಯಿಂದ ತಂಡದಲ್ಲಿದ್ದ ಇಲಾಖೆಯ ಇತರೆ ಸಿಬ್ಬಂದಿ, ಪತ್ರಕರ್ತರೂ ಗಾಬರಿಯಾದರು. ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕಾದ ಕಾರ್ಮಿಕ ಅಧಿಕಾರಿಗಳು ಹಲ್ಲೆಗೊಳಗಾಗಿ ಪೊಲೀಸರ ಮೊರೆ ಹೋದರು. ಸುದ್ದಿ ನೀಡುವುದಾಗಿ ಪತ್ರಕರ್ತರನ್ನು ಕರೆಯಿಸಿಕೊಂಡು ಕಾರ್ಮಿಕ ಅಧಿಕಾರಿಗಳೇ ಸುದ್ದಿಯಾದರು.
ಕೇರಳದಲ್ಲಿ ಕನ್ನಡಿಗರ ಮಂಜೇಶ್ವರಕ್ಕೆ ರಂ ಕುಡಿಸಿದ್ದು!
ಕೇರಳ ಮಂಜೇಶ್ವರದಲ್ಲಿ ನಡೆದ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಬಳಿ ಸಾಕೇತ ವಸತಿಗೃಹ ಅರ್ಪಣೆ ಕಾರ್ಯಕ್ರಮದಲ್ಲಿ ಸ್ವಾಗತ ಮಲೆಯಾಳಿಯಲ್ಲಿ, ವಂದನಾರ್ಪಣೆ ಕನ್ನಡದಲ್ಲಿ! ಬ್ಯಾನರ್ ಸಂಪೂರ್ಣ ಇಂಗ್ಲಿಷ್‌ನಲ್ಲಿ. ಆದರೆ ಹೆಚ್ಚು ಮಂದಿ ಮಾತನಾಡಿದ್ದು ಮಲೆಯಾಳದಲ್ಲಿ. ಜಿಲ್ಲಾಧಿಕಾರಿ, ಶಾಸಕ, ಸಂಸದರು ಬಹುತೇಕ ಜನಪ್ರತಿನಿಧಿಗಳು ಅಪ್ಪಟ ಮಲಯಾಳ ಭಾಷೆಯಲ್ಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆಯೊಬ್ಬರು ಕನ್ನಡದಲ್ಲಿ ಬರೆದು ತಂದ ಭಾಷಣ ಓದಿ ಮಾನ ಉಳಿಸಿದರು. ಇದೆಲ್ಲ ನೋಡಿದ ಜಾನಪದ ಸಂಶೋಧಕ ಡಿ.ಕೆ. ಚೌಟರು ಕನ್ನಡದಲ್ಲಿ ಕೇರಳಿಗರಿಗೆ ಕಿಕ್ ನೀಡಿದ್ದು ಹೀಗೆ: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದರೂ ಮಂಜೇಶ್ವರವನ್ನು ಕೇರಳದವರು ರಂ ಕುಡಿಸಿ, ಮಂಜೇಶ್ವರಂ ಮಾಡುತ್ತಿದ್ದಾರೆ. ಕನ್ನಡಿಗರು ನಶೆಯಿಂದ ಹೊರಬಂದಿಲ್ಲ!
- ನಂಬಿರಾಜ್