ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಗಿದಿದೆ. ಈ ಚುನಾವಣೆಯಲ್ಲಿ ಸಮಾಜದ ನಾನಾ ಸ್ತರದ ಜನ ಅಭ್ಯರ್ಥಿಗಳಾಗಿದ್ದರು. ಮೈಸೂರು ನಗರಪಾಲಿಕೆ ಚುನಾವಣೆಯಲ್ಲಿ ಕಲಾವಿದರು, ವಕೀಲರು, ಪತ್ರಿಕಾ ವಿತರಕರು, ಚುರುಮರಿ ಮಾರುವವರು, ಹಾವು ಹಿಡಿಯುವವರು- ಹೀಗೆ ನೂರಾರು ಮಂದಿ ಸ್ಪರ್ಧಿಸಿದ್ದರು. ವಿಭಿನ್ನ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರಚಾರ ಪಡೆದಿದ್ದು ಉರಗ ತಜ್ಞ ಸ್ನೇಕ್ ಶ್ಯಾಮ್. ಮೈಸೂರಿನಲ್ಲಿ ಎಲ್ಲಿಯೇ ಹಾವು ಕಾಣಿಸಿಕೊಂಡರೂ ತಕ್ಷಣ ಸ್ಥಳಕ್ಕೆ ಹೋಗಿ, ಹಿಡಿದು ವಾರಕ್ಕೊಮ್ಮೆ ಕಾಡಿಗೆ ಬಿಡುವ ಕಾಯಕ ಮಾಡುತ್ತಾರೆ. ತಮ್ಮ ಮನೆಯಿರುವ ಬೃಂದಾವನ ಬಡಾವಣೆಯ ವಾರ್ಡ್‌ನಿಂದ ಪಕ್ಷೇತರವಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಇವರಿಗೆ ವಾರ್ಡ್ ಮೀಸಲಾತಿ ಬದಲಾಗದಿದ್ದರಿಂದ ನಿರಾಸೆಯಾಯಿತು. ನಂತರ ಪಕ್ಕದ ಗೋಕುಲಂ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಲು ಮುಂದಾದರು. ಅಲ್ಲಿ ಹಾಲಿ ಬಿಜೆಪಿ ಸದಸ್ಯರಿದ್ದರು. ಹೀಗಾಗಿ ದೂರದ ಕುವೆಂಪುನಗರ ವಾರ್ಡ್‌ನಲ್ಲಿ ಬಿಜೆಪಿಯ ಟಿಕೆಟ್ ನೀಡಲಾಯಿತು. ಸ್ನೇಕ್ ಶ್ಯಾಮ್ ಎಂದರೆ ಮೈಸೂರಿನಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಗೊತ್ತು. ಅದೇ ರೀತಿ ಅವರ ಯೂನಿಫಾರಂ ಕೂಡ ಗೊತ್ತು. ಸದಾ ಬರ್ಮುಡಾ ಚೆಡ್ಡಿ, ಟೀ ಶರ್ಟ್, ವಿಷ್ಣುವರ್ಧನ್ ಸ್ಟೈಲ್‌ನಲ್ಲಿ ಸದಾ ಕೈಗೊಂದು ಬಳೆ, ತಲೆಗೊಂದು ಸ್ಕಾರ್ಪ್, ಕೊರಳ ತುಂಬಾ ನಾನಾ ರೀತಿಯ ಸರ, ರುದ್ರಾಕ್ಷಿಮಾಲೆ, ಎಲ್ಲ ಬೆರಳುಗಳಿಗೆ ಉಂಗುರಗಳು. ಇಂಥ ಶ್ಯಾಮ್ ಇದೀಗ ಕಾರ್ಪೊರೇಟರ್ ಆದ್ರೆ ಪ್ರತಿ ಭಾನುವಾರ ಫಾರ್ಮಲ್ ಪ್ಯಾಂಟು ಹಾಗೂ ಶರ್ಟ್ ಹಾಕುತ್ತಾರಂತೆ. ಶ್ಯಾಮ್‌ರನ್ನು ನೋಡಿ ಮಕ್ಕಳು ಚೆಡ್ಡಿ ಹೋಗಿ ಪ್ಯಾಂಟು ಬಂತು ಡುಂ ಡುಂ ಡುಂ... ಎಂದು ಹಾಡಬಹುದು.
ನ್ಯಾಯಾಧೀಶರ ಮಾನವೀಯ 'ಹೃದಯ'ಕ್ಕೆ ಸರ್ಜರಿ!
ಮಾನವ ಹಕ್ಕು ಆಯೋಗದ ಸದಸ್ಯ ಹುನಗುಂದ ಅವರಿಗೆ ನ್ಯಾಯಾಧೀಶರ ಹೃದಯಕ್ಕೆ ಬೈಪಾಸ್ ಸರ್ಜರಿ ಮಾಡಿ ಮಾನವೀಯ ಹೃದಯವನ್ನು ಜೋಡಿಸಿದ್ದಾರಂತೆ! ಇದನ್ನು ಹೇಳಿದ್ದು ಖುದ್ದು ನ್ಯಾ. ಹುನಗುಂದ ಅವರೇ. ಇತ್ತೀಚೆಗೆ ಮಂಗಳೂರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನವಹಕ್ಕು ದೂರುಗಳ ಕುರಿತು ವಿಚಾರಣೆ ಸಭೆ ನಡೆಸಿದ ವೇಳೆ ಹುನಗುಂದ ವಿಚಾರ ಅರುಹಿದ್ದು ಹೀಗೆ. ಮಾನವಹಕ್ಕು ಆಯೋಗದ ಸದಸ್ಯನಾಗಿ ಆಯ್ಕೆ ಆಗುವ ಮುನ್ನ ನನಗೆ ಹೃದಯಾಘಾತ ಆಯಿತು. ವೈದ್ಯರ ಬಳಿ ವಿಚಾರಿಸಿದಾಗ ಇದು ವಂಶವಾಹಿನಿ ಸಮಸ್ಯೆ ಎಂದರು. ಬಳಿಕ ಬೈಪಾಸ್ ಸರ್ಜರಿಯೂ ನಡೆಯಿತು. ಈಗ ಹೃದಯ ಗಟ್ಟಿಮುಟ್ಟಾಗಿದೆ. ನನ್ನ ಪ್ರಕಾರ ಮಾನವ ಹಕ್ಕು ಆಯೋಗದಲ್ಲಿ ಕೆಲಸ ಮಾಡಲು ಕೇವಲ ನ್ಯಾಯಧೀಶನ ಹೃದಯ ಸಾಲದು, ಮಾನವೀಯ ಹೃದಯ ಬೇಕು ಎಂದು ಕಾಣುತ್ತದೆ. ಈಗ ನನಗೆ ಮಾನವೀಯ ಹೃದಯ ಕಸಿ ಮಾಡಾಗಿದೆ ಎಂದು ನಕ್ಕು ಹೇಳಿದರು. ಎಲ್ಲ ಅಧಿಕಾರಿಗಳು ಮಾನವೀಯ ಹೃದಯದಿಂದ ಕೆಲಸ ಮಾಡಿದರೆ ಸಮಸ್ಯೆಯೇ ಇಲ್ಲ ಎಂದು ಹೇಳುವುದನ್ನು ಮರೆಯಲಿಲ್ಲ.
ಶ್ಯಾಮನೂರು, ಮತ್ತೀಕಟ್ಟಿಗೆ ವಯಸ್ಸೇ ಆಗಿಲ್ಲ!
ಕೆಪಿಸಿಸಿಗೆ ಒಂದು ಘನಘೋರ ದ್ವಂದ್ವ ಕಾಡುತ್ತಿದೆ. ಅದು ಪಕ್ಷದಲ್ಲಿ ಹೊಸದಾಗಿ ಅಧಿಕಾರ ಹೊಂದಿದ ಮತ್ತು ಅಧಿಕಾರಕ್ಕಾಗಿ ಹಪಾಹಪಿಸುವ ಹಿರಿಯ ತಲೆಯಾಳುಗಳನ್ನು ವಯಸ್ಸಾದೋರು, ವಯೋವೃದ್ಧರು ಎಂದು ಕರೆಯಬೇಕೇ ಅಥವಾ ಅನುಭವಿಗಳು ಎಂದು ಸಂಭೋದಿಸಬೇಕೆ ಎನ್ನುವುದು. ಇತ್ತೀಚೆಗೆ ಬಾಗಲಕೋಟೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಎದುರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ಮಾಡಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬದಿಗಿಟ್ಟು ವೀರಣ್ಣ ಮತ್ತಿಕಟ್ಟಿ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ ಕಟ್ಟಿದ್ದೀರಲ್ಲ, ಶಾಮನೂರಗಿಂತ ಮತ್ತಿಕಟ್ಟಿ ಹೇಗೆ ವಿಭಿನ್ನ ಎನ್ನುವ ಪ್ರಶ್ನೆ ಎದುರಾಯಿತು. ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ನೂರೆಂಟು ಕಿರುಕುಳ ನೀಡಿದ್ದರೂ ಅದಾವುದನ್ನೂ ತೋರುಗೊಡದೆ ಇಬ್ಬರೂ ಹಿರಿಯರು, ಅನುಭವಿಗಳು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಕ್ರಿಯಾಶೀಲ ಮುಖಂಡರು. ಕಾಂಗ್ರೆಸ್ಸಿನಲ್ಲಿ ಆಯ್ಕೆ, ಅಧಿಕಾರ ಏನಿದ್ರೂ ಎಐಸಿಸಿ ನಿರ್ಧಾರ. ಹೀಗೆ ಪರಮೇಶ್ವರ ಸ್ತೋತ್ರ ಮುಂದುವರಿದಾಗ ಪತ್ರಕರ್ತರ ಹಿಂದೆ ಕುಳಿತಿದ್ದ ಕಾಂಗ್ರೆಸ್‌ನ ಯುವ ಕಾಂರ್ುಕರ್ತನೊಬ್ಬ, ಮಂುಸ್ಸಾಗಿದೆ ಮನೆಯಲ್ಲಿ ಕೂಡ್ರಿ ಅನ್ನೋದು ಬಿಟ್ಟು ಕರೆದು ಕರೆದು ಅವ್ರುಗೇ ಅಧಿಕಾರ ಕೊಡ್ತೀರಲ್ರೀ ಎಂದು ಕಿಚಾಯಿಸಿದ. ಈ ಮಾತು ಪತ್ರಕರ್ತರೆ ನುಡಿದರು ಎಂದು ಭಾವಿಸಿದ ಡಾ.ಪರಮೇಶ್ವರ, ಅಲ್ಲಲ್ಲ, ಇವರ ದೇಹಕ್ಕೆ ವಯಸ್ಸಾಗಿದೆಯೇ ವಿನಾ ಮನಸ್ಸು, ಬುದ್ಧಿಶಕ್ತಿ, ದೇಶದ ಕಳಕಳಿಂು ಮನಸ್ಸಿಗೆ ಅಲ್ಲ ಎನ್ನುವ ಸ್ಪಷ್ಟನೆ ನೀಡಿ ಮೇಲೆದ್ದಾಗ ಪಕ್ಕದಲ್ಲಿದ್ದ ಮತ್ತಿಕಟ್ಟಿಗೆ ಸ್ವತಂತ್ರವಾಗಿ ಏಳಲು ಆಗಲಿಲ್ಲ. ಇಬ್ಬರು ಶಿಷ್ಯರು ಎರಡೂ ತೋಳು ಹಿಡಿದು ಮೇಲೆತ್ತಿ ಆಸರೆಯಾಗಿ ಹೊರಗೆ ಕರೆದೊಯ್ದಾಗ ಗುಂಪಿನಲ್ಲಿ ಗೊಳ್ಳಂತ ತೇಲಿ ಬಂದ ನಗುವಿಗೆ ಕಿವಿಗೊಡದೇ ಪರಮೇಶ್ವರ ಸರಸರನೇ ಮುಂದೆ ಹೆಜ್ಜೆ ಹಾಕಿದರು.
ಮತಪಟ್ಟಿಯಲ್ಲಿ ಸತ್ತವರು ಎದ್ದು ಬಂದಾಗ!
ಗುಲ್ಬರ್ಗ ಜಿಲ್ಲೆಯಲ್ಲಿ ಮೃತಪಟ್ಟಳೆಂದು ಹೇಳಲಾಗಿದ್ದ ವೃದ್ಧೆಯೊಬ್ಬರು ಚಟ್ಟದಿಂದ ತಟ್ಟನೆ ಎದ್ದು ಕುಳಿತು ಎಲ್ಲರನ್ನು ಬೆಚ್ಚಿ ಬೀಳಿಸಿದ, ಬೆರಗಾಗಿಸಿದ ಘಟನೆ ಕೇಳಿದ್ದೀರಿ. ಮೈಸೂರಿನಲ್ಲಿ ಕಳೆದ ವಾರ ನಗರಪಾಲಿಕೆ ಚುನಾವಣೆಗೆ ಮತದಾನ ಮಾಡಲು ಮತಗಟ್ಟೆಗೆ ಹೋದವರು ಮತಪಟ್ಟಿಯಿಂದ ತಮ್ಮ ಹೆಸರಿನ ಮುಂದೆ ಡಿಲೀಟೆಡ್ ಎಂದು ಸೀಲ್ ಹಾಕಿ ತೆಗೆದಿದ್ದನ್ನು ಕಂಡು ಹೌಹಾರಿದರು. ಸಾಮಾನ್ಯವಾಗಿ ಮೃತಪಟ್ಟವರ ಹೆಸರನ್ನು ಈ ರೀತಿ ತೆಗೆಯಲಾಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೂ ತೆಗೆಯಲಾಗುತ್ತದೆ. ಜನ ಗುರುತಿನ ಚೀಟಿ ತೋರಿಸುತ್ತಾ ಅಧಿಕಾರಿಗಳೊಂದಿಗೆ ವಾದಕ್ಕಿಳಿದರು. ನಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಹಾಗಾದರೆ ನಾವೇನ್ ದೆವ್ವಗಳಾ ಎಂದು ಕೇಳುತ್ತಿದ್ದಂತೆ ಸಿಬ್ಬಂದಿ ಕೂಡ ಬೆಚ್ಚಿಬಿದ್ದರು. ಈ ಬಗ್ಗೆ ನಮಗೇನೂ ಗೊತ್ತಿಲ್ಲ. ಚುನಾವಣಾಧಿಕಾರಿಗಳನ್ನು ಕೇಳಿ ಎಂದು ಹೇಳಿ ಅವರನ್ನು ಸಾಗಹಾಕುವಷ್ಟರಲ್ಲಿ ಸುಸ್ತಾಗುತ್ತಿದ್ದರು. ಅಲ್ಪಸಂಖ್ಯಾತರೇ ಹೆಚ್ಚಿರುವ ನರಸಿಂಹರಾಜ ಕ್ಷೇತ್ರದಲ್ಲಿ ಈ ರೀತಿಯ ಸಮಸ್ಯೆ ಬೃಹದಾಕಾರವಾಗಿತ್ತು. ಆಗ ಅವರು, ಸಬ್ ಕೆ ಸಬ್ ಮರಗಯೇ ಕ್ಯಾ. ಫಿರ್ ಕ್ಯುಂ ಏ ಎಲೆಕ್ಷನ್ (ಎಲ್ರೂ ಸತ್ತು ಹೋಗಿದ್ದಾರೆ. ಮತ್ಯಾಕೆ ಚುನಾವಣೆ) ಎಂದು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.
- ನಂಬಿರಾಜ್