ಅವನಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಬೆಳಗಿನಿಂದ ದುಡಿಮೆಯಲ್ಲಿ ಮೈಮೆರೆತಿದ್ದ ಆತ, ಸಂಜೆಯಾಗುತ್ತಿದ್ದಂತೆಯೇ ಮನೆಗೆ ಹೊರಟ. ಜೊತೆಯಲ್ಲಿ ಹೆಂಡತಿಯೂ ಇದ್ದಳು. ಮನೆಗೆ ಮರಳುವ ದಾರಿಯಲ್ಲಿ, ಅವರು ನದಿಯೊಂದನ್ನು ದಾಟಬೇಕಿತ್ತು. ಇವರ ದುರದೃಷ್ಟಕ್ಕೆ ಅವತ್ತು ದೋಣಿ ನಡೆಸಲು ಅಂಬಿಗನೂ ಇರಲಿಲ್ಲ. ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸೇನೆಯಲ್ಲಿದ್ದು ಬಂದವನು. ಅವನಿಗೆ ಸೇನೆಯಲ್ಲಿದ್ದಾಗಲೇ ದೋಣಿ ಚಾಲನೆಯ ತರಬೇತಿ ಸಿಕ್ಕಿತ್ತು. ಅದೇನನ್ನೂ ಹೆಂಡತಿಗೆ ತಿಳಿಸದೆ, 'ದೋಣಿ ಹತ್ಕೋ, ನಾನು ಕರ್ಕೊಂಡು ಹೋಗ್ತೇನೆ' ಎಂದ.
ಅರ್ಧ ನದಿಯನ್ನು ದಾಟುವ ಮೊದಲೇ ಭಾರೀ ಬಿರುಗಾಳಿ ಎದ್ದಿತು. ರಭಸದ ಮಳೆಯಾಗುವ ಎಲ್ಲ ಸೂಚನೆಗಳೂ ಕಾಣತೊಡಗಿದ್ದವು. ಬಿರುಗಾಳಿಯ ಆರ್ಭಟ ಹೇಗಿತ್ತು ಎಂದರೆ ದೋಣಿ ಯಾವುದೇ ಸಂದರ್ಭದಲ್ಲಾದರೂ ತಲೆಕೆಳಕಾಗುವ ಅಪಾಯವಿತ್ತು. ಈ ವಿಷಯ ಅರ್ಥವಾದ ತಕ್ಷಣದಿಂದಲೇ ದೋಣಿಯಲ್ಲಿದ್ದ ಆಕೆ ಥರಥರನೆ ನಡುಗಲಾರಂಭಿಸಿದಳು. ನಿಮಿಷಕ್ಕೊಮ್ಮೆ, ದೇವರೇ ಕಾಪಾಡು, ದೇವರೇ ಕಾಪಾಡು ಎನ್ನುತ್ತಿದ್ದಳು. ಅವಳ ಗಂಡ ಮಾತ್ರ ಏನೂ ಆಗಿಯೇ ಇಲ್ಲವೇನೋ ಎಂಬಂತೆ ನಿರುಮ್ಮಳವಾಗಿ ದೋಣಿಯ ಹುಟ್ಟು ಹಾಕುತ್ತಿದ್ದ. ಅದನ್ನು ಗಮನಿಸಿದ ತಕ್ಷಣ ಕೇಳಿದಳು: 'ಏನ್ರೀ, ಈ ಬಿರುಗಾಳಿಯ ವೇಗ ನೋಡಿದ್ರೆ ದೋಣಿ ಯಾವಾಗ ಬೇಕಾದ್ರೂ ಮಗುಚಿಕೊಳ್ಳಬಹುದು ಅನ್ನಿಸ್ತಿದೆ. ನಾವು ಇವತ್ತು ಜೀವಸಹಿತ ಮನೆ ತಲುಪುತ್ತೇವೆ ಎಂಬ ಯಾವ ಗ್ಯಾರಂಟಿಯೂ ನನಗಿಲ್ಲ. ಇವತ್ತು ನಮ್ಮ ಬದುಕಿನ ಕೊನೆಯ ಕ್ಷಣವೇನೋ ಅನ್ನಿಸ್ತಿದೆ. ಹಾಗಿದ್ರೂ ನೀವು ನೆಮ್ಮದಿಯಾಗಿ ಹುಟ್ಟು ಹಾಕ್ತಾ ಇದೀರಲ್ಲ, ನಿಮಗೆ ಭಯ ಆಗ್ತಾ ಇಲ್ವ? ಈ ನದಿಯೊಳಗೆ ಮುಳುಗಿ ನಾನು ಸತ್ತು ಹೋದ್ರೆ ಗತಿ ಏನು ಎಂಬ ಚಿಂತೆಯೂ ಇಲ್ವಾ?'
ಹೆಂಡತಿಯ ಮಾತಿಗೆ ಆ ಮಾಜಿ ಯೋಧ ಉತ್ತರಿಸಲಿಲ್ಲ. ಬದಲಿಗೆ, ಸುಮ್ಮನೆ ನಕ್ಕ. ಮರುಕ್ಷಣವೇ ಸೊಂಟದಲ್ಲಿ ಅಡಗಿಸಿ ಇಟ್ಟಿದ್ದ ಕತ್ತಿ ಹೊರಗೆಳೆದ ವೇಗವನ್ನು ಗಮನಿಸಿದರೆ, ಕೆಲವೇ ಸೆಕೆಂಡುಗಳಲ್ಲಿ ಆಕೆಯ ಕೊರಳು ಸೀಳಿಹೋಗುವುದೇನೋ ಎಂಬಂತಿತ್ತು. ಹಾಗೇನೂ ಆಗಲಿಲ್ಲ. ಗಂಡನ ಈ ಅವಸರದ ವರ್ತನೆಯನ್ನು ಕಂಡ ಮೇಲೂ ಆಕೆ ಶಾಂತಚಿತ್ತದಿಂದಲೇ ಇದ್ದಳು. ಅದನ್ನು ಕಂಡು ಈತ ಕೇಳಿದ: 'ಕುತ್ತಿಗೆಯ ಬಳಿಗೆ ಮಿಂಚಿನ ವೇಗದಲ್ಲಿ ಕತ್ತಿ ಬಂತಲ್ಲ ಆಗ ನಿನಗೆ ಪ್ರಾಣ ಭೀತಿ ಕಾಡಲಿಲ್ವಾ?'
ಆಕೆ, ಗಟ್ಟಿಯಾಗಿ ನಗುತ್ತಾ ಹೇಳಿದಳು: 'ನಾನು ಯಾಕೆ ಹೆದರಲಿ? ನೀವು ನನ್ನ ಕೈ ಹಿಡಿದವರು. ನನ್ನನ್ನು ನೀವು ರಕ್ಷಿಸ್ತೀರ ಅಂತ ನನಗೆ ಗೊತ್ತಿದೆ. ಹಾಗಿರುವಾಗ ನಾನೇಕೆ ಹೆದರಲಿ?'
ಅವಳ ಮಾತು ಮುಗಿಯುತ್ತಿದ್ದಂತೆಯೇ ಕತ್ತಿಯನ್ನು ಮತ್ತೆ ಯಥಾಸ್ಥಾನದಲ್ಲಿ ಇಟ್ಟುಕೊಂಡ ಆತ ಹೇಳಿದ: ಬಿರುಗಾಳಿಗೆ, ಅದು ಉಂಟು ಮಾಡುವ ಅನಾಹುತಕ್ಕೆ ಹೆದರಿಕೆ ಆಗಲಿಲ್ವಾ ಎಂದು ಪ್ರಶ್ನಿಸಿದೆ ಅಲ್ವಾ? ಅದಕ್ಕೆ ಈಗ ಉತ್ತರ ಹೇಳ್ತೇನೆ ಕೇಳು. ನಿನಗೆ ನನ್ನ ಮೇಲಿದೆಯಲ್ಲ; ಅಂಥದೇ ನಂಬಿಕೆ ನನಗೆ ದೇವರ ಮೇಲಿದೆ. ಬಿರುಗಾಳಿ ಎಂಬ ಕತ್ತಿ ಈಗ ಅವನ ಕೈಲಿದೆ. ನಂಬಿದವರನ್ನು ಆತ ಎಂದೆಂದೂ ಕೈ ಬಿಡಲಾರ. ಅಪಾಯಕ್ಕೆ ಸಿಕ್ಕಿಸಲಾರ. ಅದು ಗೊತ್ತಿರುವುದರಿಂದಲೇ ನಾನು ಆರಾಮಾಗಿ ದೋಣಿಯ ಹುಟ್ಟು ಹಾಕ್ತಾ ಇದೀನಿ'...
ನೀತಿ: ನಮ್ಮನ್ನು ಮೀರಿದ ಶಕ್ತಿಯೊಂದಿದೆ ಎಂದುಕೊಂಡು ಬದುಕಿದರೆ, ಸಂಕಟದ ಸಂದರ್ಭದಲ್ಲೂ ನೆಮ್ಮದಿಯ ಬದುಕು ಸಾಧ್ಯ...
-------------
ನಾನೇ ಬರುವೆ!
ಗಂಡ-ಹೆಂಡತಿ ಮಧ್ಯೆ ಹೊಡೆದಾಟವೇ ನಡೆದು ಹೋಯಿತು. ಹೆಂಡತಿ ತವರಿನಲ್ಲಿರುವ ತಾಯಿಗೆ ಫೋನ್ ಮಾಡಿ, ' ಅಮ್ಮ, ನಾನು ನನ್ನ ಗಂಡನ ಜತೆ ಸಂಸಾರ ಮಾಡಲಾರೆ. ಈಗಲೇ ತವರಿಗೆ ಬರುತ್ತಿದ್ದೇನೆ. ಇನ್ನು ಮುಂದೆ ನಾನು ನಿನ್ನ ಜತೆಯೇ ವಾಸಿಸುತ್ತೇನೆ' ಎಂದು ಹೇಳಿದಳು. ಅದಕ್ಕೆ ತಾಯಿ ಹೇಳಿದಳು- 'ನೋ ಡಾರ್ಲಿಂಗ್, ನಿನ್ನ ಗಂಡ ಮಾಡಿದ ತಪ್ಪಿಗೆ ಶಾಸ್ತಿಯಾಗಲೇಬೇಕು. ನಾನೇ ನಿನ್ನ ಜತೆ ಬಂದು ವಾಸಿಸುತ್ತೇನೆ.'
-------------
ಅವಳು ಬೇರಾರೂ ಅಲ್ಲ. ನಾನೇ!
ಮಹಿಳೆಯೊಬ್ಬಳು ನರ್ಸಿಂಗ್ ಹೋಮ್‌ಗೆ ಫೋನ್ ಮಾಡಿ, 'ನಿಮ್ಮ ಆಸ್ಪತ್ರೆಯಲ್ಲಿರುವ ಒಬ್ಬ ರೋಗಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕಿತ್ತಲ್ಲ?' ಎಂದು ಕೇಳಿದಳು.
ಆಪರೇಟರ್ ಪ್ರಶ್ನೆ- 'ಮೇಡಂ, ನಿಮಗೆ ಸಹಾಯ ಮಾಡಲು ನನಗೆ ಸಂತಸವಾಗುತ್ತಿದೆ. ದಯವಿಟ್ಟು ರೋಗಿಯ ಹೆಸರು ಹಾಗೂ ರೂಮ್‌ನಂಬರ್‌ನ್ನು ಹೇಳ್ತೀರಾ?'
ಅದಕ್ಕೆ ಆ ಮಹಿಳೆ 'ಆಕೆಯ ಹೆಸರು ಜಯಂತಿ, ರೂಮ್ ನಂಬರ್ 403' ಎಂದಳು.
'ಹಾಗಾದರೆ ಒಂದು ಕೆಲಸ ಮಾಡಿ ಮೇಡಂ, ನಿಮ್ಮ ಕರೆಯನ್ನು ಹೋಲ್ಡ್ ಮಾಡಿ ಇಟ್ಟಿರುತ್ತೇನೆ. ನರ್ಸ್‌ನ್ನು ಆ ರೂಮಿಗೆ ಕಳಿಸಿ ನೀವು ಬಯಸಿದ ವಿವರಗಳನ್ನು ಕೇಳಿ ಬರುವಂತೆ ತಿಳಿಸುತ್ತೇನೆ' ಎಂದಳು ಆಪರೇಟರ್.
ಕೆಲವು ಕ್ಷಣಗಳ ನಂತರ ಆಪರೇಟರ್ ಮಹಿಳೆಗೆ ಫೋನ್ ಮಾಡಿ, 'ಮೇಡಂ, ನಿಮಗೊಂದು ಖುಷಿ ಸಮಾಚಾರ. ಜಯಂತಿಯನ್ನು ಆರೈಕೆ ಮಾಡುತ್ತಿರುವ ನರ್ಸ್ ಹೇಳಿದರು ಆಕೆ ಈಗ ಆರೋಗ್ಯವಾಗಿದ್ದಾರೆಂದು. ಅವರ ಬ್ಲಡ್‌ಪ್ರೆಶರ್ ಸರಿಯಿದೆ. ಬ್ಲಡ್ ರಿಪೋರ್ಟ್ ಓಕೆ. ಆಕೆಯನ್ನು ನಾಳೆ ಡಿಸ್‌ಚಾರ್ಜ್ ಮಾಡಬಹುದೆಂದು ವೈದ್ಯರು ಹೇಳಿದ್ದಾರೆ' ಎಂದಳು.
ಅದಕ್ಕೆ ಮಹಿಳೆ 'ಥ್ಯಾಂಕ್ಯು ಮೇಡಂ, ನನಗೆ ಇಷ್ಟು ಒಳ್ಳೆಯ ಸಮಾಚಾರ ನೀಡಿದ್ದಕ್ಕೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ' ಎಂದು ಹಾರೈಸಿದಳು.
ಫೋನ್ ಇಡುವ ಮುನ್ನ ಆಪರೇಟರ್ ಕೇಳಿದಳು- 'ಅದೆಲ್ಲ ಸರಿ ಮೇಡಂ. ಜಯಂತಿ ಯಾರು? ನಿಮ್ಮ ಮಗಳಾ?'
ಅದಕ್ಕೆ ಆ ಮಹಿಳೆ ಹೇಳಿದಳು- 'ಇಲ್ಲ, ನಾನೇ ಜಯಂತಿ. ಎರಡು ದಿನಗಳಿಂದ ನರ್ಸ್‌ಗಳ ಬಳಿ ಕೇಳಿ ಕೇಳಿ ಸುಸ್ತಾದೆ. ಯಾರೂ ಏನೂ ಹೇಳ್ತಿರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಈ ಉಪಾಯ ಮಾಡಿದೆ.'
ಹುಲಿಗೆ ಸಾಯುವ ಪರೀಕ್ಷೆ!
ಹೇಳಿಕೇಳಿ ಇದು ಪರೀಕ್ಷಾಪರ್ವ. ಈ ಸಂದರ್ಭದಲ್ಲಿ 'ಹುಲಿ ಸಾಯಿಸುವ' ಘನ ಗಂಭೀರ ಚರ್ಚೆಗೆ ಪರೀಕ್ಷೆಗಳ ಆಯಾಮವನ್ನಿಟ್ಟುಕೊಂಡು ಒಂದಿಷ್ಟು ಐಡಿಯಾ ಹಾಕಿರುವ ಮೇಧಾ ಹೆಗಡೆ ಎಂಬ ಓದುಗರು ಮಿಂಚಂಚೆ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ...
ಹತ್ತನೇ ತರಗತಿ ಮಾದರಿ: ನವೆಂಬರ್-ಡಿಸೆಂಬರ್ ಹೊತ್ತಿಗೆ ಇನ್ನೂ ಹತ್ತನೇ ತರಗತಿಯ ಸಿಲೆಬಸ್ ಕಂಪ್ಲೀಟ್ ಆಗಿರುವುದಿಲ್ಲ. ಆ ಹೊತ್ತಿಗಾಗಲೇ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಬರುತ್ತದೆ. ಹುಲಿ ಅದನ್ನು ಹೇಗೋ ಬರೆದು ಪಾಸು ಮಾಡುವ ಹೊತ್ತಿಗೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಬರುತ್ತದೆ. ಹುಲಿ ಕಷ್ಟಪಟ್ಟು ಅದನ್ನೂ ಸಹ ಬರೆದು ಪಾಸು ಮಾಡುವಷ್ಟರಲ್ಲಿ ಮೂರನೇ ಪರೀಕ್ಷೆಯ ವೇಳಾಪಟ್ಟಿ ಬರುತ್ತದೆ. ಹುಲಿ ಮತ್ತೆ ಅಡ್ಡಬಿದ್ದು ಓದಿ ಎಕ್ಸಾಮ್ ಬರೆಯುತ್ತದೆ. ಹೀಗೆ ಆರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆದು ಮುಗಿಸುವ ಹೊತ್ತಿಗೆ ಓದಿ ಓದಿ ಸುಸ್ತಾಗಿ ಹುಲಿ ಸತ್ತೇ ಹೋಗುತ್ತದೆ.
ದ್ವಿತೀಯ ಪಿಯುಸಿ ಮಾದರಿ: ಮಾರ್ಚ್ ತಿಂಗಳಲ್ಲಿ ಹುಲಿ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ಹೊತ್ತಿನಲ್ಲಿ ವೃತ್ತಿಪರ ಕೋರ್ಸುಗಳಿಗೆ ರಾಜ್ಯಮಟ್ಟದಲ್ಲಿ ಸಿಇಟಿ ನಡೆಸಲಾಗುತ್ತದೆ ಎಂದು ರಾಜ್ಯಸರ್ಕಾರ ಪ್ರಕಟಣೆ ಹೊರಡಿಸುತ್ತದೆ. ಹುಲಿ ಸಿಇಟಿಗೆ ಸಿದ್ಧತೆ ನಡೆಸುತ್ತದೆ. ಅಷ್ಟರಲ್ಲಿ ವೃತ್ತಿಪರ ಕೋರ್ಸುಗಳಿಗೆ ರಾಷ್ಟ್ರಮಟ್ಟದಲ್ಲಿ ಏಕ ರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ರಾಜ್ಯಸರ್ಕಾರ ಪ್ರಕಟಣೆ ಹೊರಡಿಸುತ್ತದೆ. ಹುಲಿ ಸಿಇಟಿ ಬಿಟ್ಟು ಈ ಹೊಸ ಪರೀಕ್ಷೆಗೆ ಸಿದ್ಧತೆ ನಡೆಸುವ ಹೊತ್ತಿಗೆ ಮತ್ತೆ ಸರ್ಕಾರ ಸಿಇಟಿಯೇ ಅಂತಿಮ ಎಂದು ಘೋಷಿಸುತ್ತದೆ. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ರಾಷ್ಟ್ರಮಟ್ಟದ ಏಕ ರೂಪದ ಪ್ರವೇಶ ಪರೀಕ್ಷೆಯ ಪ್ರಸ್ತಾಪ ಬರುತ್ತದೆ. ಯಾವ ಪರೀಕ್ಷೆಗೆ ಸಿದ್ಧತೆ ನಡೆಸಬೇಕೆಂಬುದು ತಿಳಿಯದೇ ಗೊಂದಲದಲ್ಲಿ ಹುಲಿ ಸತ್ತೇ ಹೋಗುತ್ತದೆ.
ಇಂಜಿನಿರಿಂಗ್ ಮಾದರಿ: ಹುಲಿಗೆ ಸೆಮಿಸ್ಟರ್ ಎಕ್ಸಾಮ್ ಪ್ರಾರಂಭವಾಗಲು ಒಂದೇ ವಾರ ಬಾಕಿಯಿರುತ್ತದೆ. ಆಗ ಹುಲಿಗೆ ಅಸೈನ್ಮೆಂಟ್ ಬರೆಯಲು ಹೇಳುತ್ತಾರೆ. ಹುಲಿ ಘರ್ಜಿಸುತ್ತದೆ. ಮತ್ತೆ ಜರ್ನಲ್ ಸರ್ಟಿಫೈ ಮಾಡಿಸಲು ನಾಳೆಯೇ ಕೊನೆಯ ದಿನ ಎಂದು ನೋಟಿಸ್ ಬರುತ್ತದೆ. ಹುಲಿ ಪುನಃ ಘರ್ಜಿಸುತ್ತದೆ. ಕೋರ್ಸ್‌ಪ್ರೊಜೆಕ್ಟುಗಳಿಗೂ ನಾಳೆಯೇ ಡೆಡ್‌ಲೈನ್ ಎಂದು ಸುದ್ದಿ ಬರುತ್ತದೆ. ಯಾವ ಕೆಲಸವನ್ನು ಮೊದಲು ಮಾಡಬೇಕೆಂಬುದು ತಿಳಿಯದೇ ಕನ್‌ಫ್ಯೂಷನ್‌ನಲ್ಲಿ ಘರ್ಜಿಸಿ ಘರ್ಜಿಸಿ ಹುಲಿ ಸತ್ತೇ ಹೋಗುತ್ತದೆ.
ಕೊನೆಯದಾಗಿ ಒಂದು ಭಿನ್ನ ಮಾದರಿ, ವಿಶ್ವೇಶ್ವರ್ ಭಟ್ ಮಾದರಿ: ಭಟ್ಟರು ಹುಲಿ ಸಾಯಿಸುವ ವಿವಿಧ ಕ್ರಮಗಳ ಕುರಿತು ಪತ್ರಿಕೆಯಲ್ಲಿ ಬರೆಯುತ್ತಾರೆ. ಅದನ್ನು ಓದಿ ಹುಲಿ ಸಿಟ್ಟಿನಿಂದ ಘರ್ಜಿಸುತ್ತದೆ. ಭಟ್ಟರು ಮುಂದಿನ ವಾರ ಪುನಃ ಇನ್ನಷ್ಟು ಕ್ರಮಗಳ ಕುರಿತು ಮತ್ತೆ ಬರೆಯುತ್ತಾರೆ. ಹುಲಿ ಮತ್ತೆ ಘರ್ಜಿಸುತ್ತದೆ. ಭಟ್ಟರು ಮತ್ತೆ ಬರೆಯುತ್ತಾರೆ. ತನ್ನನ್ನು ಸಾಯಿಸಲು ಇಷ್ಟೊಂದು ಕ್ರಮಗಳಿರುವುದನ್ನು ನೋಡಿ ಹುಲಿ ಹೆದರಿ ಘರ್ಜಿಸಿ ಘರ್ಜಿಸಿ ಸತ್ತೇ ಹೋಗುತ್ತದೆ.
- ವಿಶ್ವೇಶ್ವರ ಭಟ್