ನಿತೀಶರು ಹೇಳುವ ಬಿಹಾರ ಮಾದರಿ ಅಸ್ತಿತ್ವದಲ್ಲಿದೆಯೇ?
ದೆಹಲಿಯಲ್ಲಿ ನಡೆದ 'ಅಧಿಕಾರ್' ಸಮಾವೇಶದಲ್ಲಿ ನಿತೀಶ್ ಕುಮಾರ್ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಒಂದಂತೂ ಸ್ಪಷ್ಟ. ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದ್ದರೂ, ತಮ್ಮದೇ 'ಅಭಿವೃದ್ಧಿ ಮಾದರಿ' ಬಗ್ಗೆ ಹೇಳಿದರೂ ಒಟ್ಟಾರೆಯಾಗಿ ಅವರ ಭಾಷಣ ಆರ್ಥಿಕ ನೆಲೆಗಿಂತ ಹೆಚ್ಚಾಗಿ ರಾಜಕೀಯ ಕೇಂದ್ರಿತವಾಗಿತ್ತು. ಅವರು ಹೇಳಿದ ಮುಖ್ಯ ಮಾತುಗಳು ಹಾಗೂ ಅವುಗಳಿಂದ ಉದ್ಭವಿಸುವ ಪ್ರಶ್ನೆಗಳನ್ನು ಈ ಕೆಳಗಿನಂತೆ ಪೇರಿಸಬಹುದು.
'ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಯುಪಿಎ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿರುವುದು ನಮಗೆ ಸಂತಸ ತಂದಿದೆ. ನಾವೀಗ ಅದು ಶೀಘ್ರದಲ್ಲಿಯೇ ಅನುಷ್ಠಾನವಾಗಬೇಕು ಎಂದು ಬಯಸುತ್ತಿದ್ದೇವೆ. ಅದನ್ನು ಈಗಲೇ ಜಾರಿಗೊಳಿಸಿ ಇಲ್ಲದಿದ್ದರೆ 2014ರ ಚುನಾವಣೆ ನಂತರ ಅದು ಅನಿವಾರ್ಯ ಎನಿಸಬಹುದು. ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳದಂಥ ಹಿಂದುಳಿದ ರಾಜ್ಯಗಳ ಕೈ ಯಾರು ಹಿಡಿಯುತ್ತಾರೋ ಅವರೇ ದೆಹಲಿಯ ಅಧಿಕಾರ ಗದ್ದುಗೆ ಹಿಡಿಯುತ್ತಾರೆ.'
2014ರ ನಂತರ ನಿತೀಶ್ ಕುಮಾರ್ ತಮ್ಮ ಮೈತ್ರಿಕೂಟವನ್ನು ಬದಲಿಸಲಿದ್ದಾರೆ ಎಂದೇ ಈ ಮೇಲಿನ ಮಾತುಗಳನ್ನು ಕೇಳಿದವರು ವ್ಯಾಖ್ಯಾನಿಸುತ್ತಾರೆ. ಚಿಕ್ಕದಾಗಿ ಹೇಳಬೇಕೆಂದೆರೆ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದೇ ಆದಲ್ಲಿ ಅವರು ಎನ್ಡಿಎ ಕೂಟವನ್ನು ಬದಿಗೊತ್ತಿ ಯುಪಿಎ ಸೇರಿಕೊಳ್ಳುವುದಕ್ಕೆ ಸಿದ್ಧರಿದ್ದಾರೆ.
ವಾಸ್ತವ ಇನ್ನೂ ಸೂಕ್ಷ್ಮವಾಗಿದೆ.
ಮೊದಲನೆಯದಾಗಿ, ಎನ್ಡಿಎ ಆಗಲೀ ಯುಪಿಎ ಆಗಲೀ ರೂಪುಗೊಳ್ಳುವುದು ಚುನಾವಣೆಗಳು ಮುಗಿದ ನಂತರವೇ. ಯಾರಿಗೆ ಎಷ್ಟು ಸ್ಥಾನಗಳು ಬಂದಿವೆ ಎಂಬುದನ್ನು ನೋಡಿದ ನಂತರವೇ ಎಲ್ಲ ಪಕ್ಷಗಳು ಮೈತ್ರಿಕೂಟವೊಂದಕ್ಕೆ ಜೋತು ಬೀಳುತ್ತವೆ. ಎನ್ಡಿಎ ತನಗೆ ಎಲ್ಲ ಕಾಲದಲ್ಲೂ ನಂಬಿಕೊಳ್ಳಬಹುದು ಎಂಬಂಥ ಮೂರು ಪಕ್ಷಗಳನ್ನಷ್ಟೇ ಹೊಂದಿದೆ. ಶಿವಸೇನೆ, ಎಂಎನ್ಎಸ್, ಅಕಾಲಿದಳ. ಉಳಿದವೆಲ್ಲ ಅವಕಾಶವಾದಿ ಪಕ್ಷಗಳು. ಯುಪಿಎಗೆ ಶಾಶ್ವತ ಮೈತ್ರಿಗಳೇ ಇಲ್ಲ. ಬಿಜೆಪಿಗೆ ಯಾರೆಲ್ಲ ವಿರುದ್ಧವೋ ಅವರನ್ನು ಇದು ನೆಚ್ಚಿಕೊಂಡಿದೆ. ಅದೇರೀತಿ ಯಾರಿಗೆಲ್ಲ ಕಾಂಗ್ರೆಸ್ ಪ್ರಮುಖ ಎದುರಾಳಿ ಆಗಿದೆಯೋ ಅವೆಲ್ಲ ಎನ್ಡಿಎದಲ್ಲಿ ಜಮಾಯಿಸುತ್ತವೆ. ಹೀಗಾಗಿ ಮುಂದಿನ ಚುನಾವಣೆ ನಂತರ ತನ್ನನ್ನು ಯಾರು ಸರಿಯಾಗಿ ಕುದುರಿಸಿಕೊಳ್ಳುತ್ತಾರೋ ಅವರೊಂದಿಗೆ ಹೋಗುವ ಸೂಚನೆಯನ್ನು ನಿತೀಶ್ ಕುಮಾರ್ ನೀಡಿರುವುದು ತೀರ ಅಚ್ಚರಿಯನ್ನೇನೂ ಹುಟ್ಟುಹಾಕುತ್ತಿಲ್ಲ.
ಎರಡನೆಯದಾಗಿ, ಎನ್ಡಿಎ ಜತೆ ನಿತೀಶ್ ಕುಮಾರ್ ಹೊಂದಿರುವ ಏಕಮಾತ್ರ ಸಮಸ್ಯೆ ಎಂದರೆ ನರೇಂದ್ರ ಮೋದಿ. ಈಗಲೂ ನಿತೀಶ್ ತಮ್ಮ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದಾರೆ. ಎನ್ಡಿಎ ಜತೆಗೆ ಅವರ ಸಮಸ್ಯೆ ಎಂದರೆ ಎಲ್ಲಿಯವರೆಗೆ ಅಲ್ಲಿ ಮೋದಿ ಮುಂಚೂಣಿಯಲ್ಲಿರುತ್ತಾರೋ ಅಲ್ಲಿಯವರೆಗೆ ತಾವು ಮುಂದಾಳತ್ವ ವಹಿಸುವುದಕ್ಕೆ ಆಗುವುದಿಲ್ಲ ಎಂಬುದಷ್ಟೇ.
ದುರಾದೃಷ್ಟವೆಂದರೆ, 'ತಾನು ಯಾರೊಂದಿಗೆ ಹೋಗುವುದಕ್ಕೂ ಸೈ' ಎಂಬ ಸೂಚನೆಯನ್ನು ನಿತೀಶ್ ಹೊರಡಿಸುತ್ತಿರುವ ವೇಳೆಗೆ ಬಿಹಾರದ ಬಿಜೆಪಿ ಘಟಕವು ಜೆಡಿಯುನಿಂದ ಬೇರಾಗುವುದಕ್ಕೆ ತಯಾರಿ ನಡೆಸಿದಂತಿದೆ. ಇತ್ತ ನಿತೀಶ್ ಅಧಿಕಾರ್ ರ್ಯಾಲಿ ನಡೆಸಿದ ಸಮಯದಲ್ಲೇ ಅತ್ತ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ತಾವು ನರೇಂದ್ರ ಮೋದಿಯವರ ಪರವಾಗಿರುವುದಾಗಿ ಹೇಳಿದ್ದಾರೆ. ಈ ಮೊದಲು ಅವರು ಗುಜರಾತ್ ವೈಭವವನ್ನು ಒಪ್ಪಿಕೊಂಡಿರಲಿಲ್ಲ ಎಂಬುದು ಗಮನಾರ್ಹ.
ಬಿಹಾರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸುಶೀಲ್ ಕುಮಾರ್ ಅವರು ಆಡಿರುವ ಮಾತುಗಳು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ವರದಿಯಾಗಿರುವುದು ಹೀಗೆ: 'ನಾನು ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದ ದಿನಗಳಿಂದ ಹಿಡಿದು ನರೇಂದ್ರ ಮೋದಿಯವರೊಂದಿಗಿನ ನನ್ನ ಬಾಂಧವ್ಯ 35 ವರ್ಷಗಳದ್ದು. ನನ್ನ ಮತ್ತು ಮೋದಿ ನಡುವೆ ಕಂದಕ ಇದೆ ಎಂದು ಬಿಂಬಿಸುತ್ತಿರುವುದು ಮಾಧ್ಯಮ ಪ್ರಪಂಚವಷ್ಟೆ. 2014ರ ಚುನಾವಣೆ ಸಮರವು ಬಿಜೆಪಿಯ ಸಿದ್ಧಾಂತ ಹಾಗೂ ಕಾಂಗ್ರೆಸ್ನ ಕುಟುಂಬದ ನಡುವೆ ನಡೆಯಲಿದೆ ಎಂಬುದು ನಮಗೆ ಗೊತ್ತು. ನಮ್ಮ ಪಕ್ಷ ನಿರ್ಧರಿಸಿದ್ದೇ ಆದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಕ್ಕೆ ನಾವು ಸಿದ್ಧರಿದ್ದೇವೆ. '
ಇದರಿಂದ ತಿಳಿದುಬರುವುದೇನು? ನಿತೀಶ್ ಕುಮಾರ್ ಅವರಿಗೇನಾದರೂ ಇದು ಅರ್ಥವಾಗಿಲ್ಲ ಎಂದಾದರೆ ಅದರ ಸಂದೇಶ ಸ್ಪಷ್ಟ: ಕಾಂಗ್ರೆಸ್ ಮುಳುಗುವ ಹಡಗು. ಅದರ ಜತೆ ಪ್ರಯಾಣ ಬೆಳೆಸುವವರು ಮುಳುಗುವುದಕ್ಕೆ ಸಿದ್ಧರಾಗಿ.
ಇಲ್ಲಿನ ಸನ್ನಿವೇಶ ಸ್ಪಷ್ಟವಿದೆ. ಒಮ್ಮೆ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದೇ ಆದಲ್ಲಿ ನಿತೀಶ್ ಅದನ್ನು ಒಪ್ಪಬೇಕು ಇಲ್ಲವೇ ದೂರ ಸರಿಯಬೇಕು. ತಾವು ಯಾರ ಜತೆಗೆ ಬೇಕಾದರೂ ಹೋಗಲು ಸಿದ್ಧ ಎನ್ನುವುದರ ಮೂಲಕ ಅವರು ತಮಗೆ ಬರಬೇಕಾಗಿರುವುದರ ಬಗ್ಗೆ ಚೌಕಾಶಿಗೆ ಇಳಿದಿದ್ದಾರೆ. ಬಹುಶಃ ಚುನಾವಣೆ ನಂತರ ಮೋದಿ ಇವರಿಗೆ ಬೇಕಾದ ಬಲವನ್ನು ಕೊಡಬಹುದು. ಅದಕ್ಕೂ ಹೆಚ್ಚಿನ ಸೂಚನೆಗಳೇನೂ ಇಲ್ಲಿಲ್ಲ. ಬಿಜೆಪಿ ಸದ್ಯಕ್ಕೆ ಮೈತ್ರಿಯನ್ನು ಸ್ಫುಟವಾಗಿಯೇ ಇಟ್ಟುಕೊಂಡು ಚುನಾವಣೆ ಮುಗಿದ ನಂತರ ನಿತೀಶ್ ಜತೆಗಿರಬೇಕೆ, ಬೇಡವೇ ಎಂಬ ನಿರ್ಧಾರ ಮಾಡುವ ಆಸೆ ಹೊಂದಿದೆ.
ಇನ್ನು, ನಿತೀಶ್ ಕುಮಾರ್ ಭಾಷಣದಲ್ಲಿನ ಮತ್ತೊಂದು ಪ್ರಮುಖ ಭಾಗವೆಂದರೆ 'ಬಿಹಾರ ಅಭಿವೃದ್ಧಿ ಮಾದರಿ'. 'ಇಂದು ಬಹಳಷ್ಟು ಅಭಿವೃದ್ಧಿ ಮಾದರಿಗಳು ಚರ್ಚಿತವಾಗುತ್ತಿವೆ. ನಾವು ಎಲ್ಲರನ್ನೂ ಒಳಗೊಳ್ಳುವ ಮಾದರಿಯಲ್ಲಿ ನಂಬಿಕೆ ಇರಿಸಿದ್ದೇವೆ. ಅದು ಎಲ್ಲ ವರ್ಗಗಳ, ಎಲ್ಲ ಸಮುದಾಯದ ಮತ್ತು ಎಲ್ಲ ಜಾತಿಗಳ ಬಲವರ್ಧನೆ ಮಾಡುತ್ತದೆ' ಎಂದಿದ್ದಾರೆ ನಿತೀಶ್. ಒಟ್ಟಿನಲ್ಲಿ ನಿತೀಶ್ ಕುಮಾರ್ ಅವರು ಮೋದಿಯವರು ಗುಜರಾತ್ ಅಭಿವೃದ್ಧಿ ಮಾದರಿಯನ್ನು ಮತ್ತೆ ತೆಗಳುತ್ತಿದ್ದಾರೆ.
ಆದರೆ ನಿತೀಶ್ ಏನೂ ತಮ್ಮ ಮಾಡೆಲ್ ಅನ್ನು ಪ್ರಸ್ತುತ ಪಡಿಸಿಲ್ಲ. ನಾವು ಅಭಿವೃದ್ಧಿ ಮಾದರಿಯನ್ನು ನೀಡಲಿದ್ದೇವೆ ಎಂದು ಭಾಷಣದಲ್ಲಿ ಹೇಳಿದರಾಗಲೀ 'ನಾವು ಅಭಿವೃದ್ಧಿ ಮಾದರಿ' ಕೊಟ್ಟಿದ್ದೇವೆ ಎಂದು ಹೇಳಲಿಲ್ಲ. ಹಾಗಾದರೆ ಮೋದಿ ಅಭಿವೃದ್ಧಿ ಮಾದರಿ ಎನ್ನುವುದರ ಅರ್ಥವಾದರೂ ಏನು? ಟೀಕಾಕಾರರು ಹೇಳುವುದೇನೆಂದರೆ ಬೆಳವಣಿಗೆ ಹಂತದಲ್ಲಿ ಗುಜರಾತ್ ಮಾದರಿಯು ಕೆಲವು ಸಮುದಾಯಗಳನ್ನು ಉಪೇಕ್ಷಿಸಿದೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಕಡೆಗಣಿಸಿ ಬೆಳವಣಿಗೆಯನ್ನು ಸಾಧಿಸಿದೆ.
ನಾವು ಬಹಳ ಸ್ಪಷ್ಟವಾಗಿರಬೇಕಾದ ಸಂಗತಿ ಎಂದರೆ ಮೋದಿ ಮಾದರಿ ಅಥವಾ ಗುಜರಾತ್ ಮಾದರಿ ಎಂಬ ಸಂಗತಿಯೇ ಇಲ್ಲ. ಜಗತ್ತಿನಾದ್ಯಂತ ಕಂಡುಬರುವಂಥವು ಮೂರು ಬಗೆಯ ಅಭಿವೃದ್ಧಿ ಮಾದರಿಗಳು. ಅಮೆರಿಕ ಅನುಸರಿಸುತ್ತಿರುವ ಬಂಡವಾಳಶಾಹಿ ಮಾದರಿ, ಸೋವಿಯತ್ ರಷ್ಯ ಹಾಗೂ ಚೀನಾ ಅನುಕರಣೆಯ ಕಮ್ಯುನಿಸ್ಟ್ ಮಾದರಿ ಹಾಗೂ ಸಾರ್ವಜನಿಕ ವೆಚ್ಚದ ಬಹುಭಾಗವನ್ನು ಸರ್ಕಾರವೇ ನಿರ್ವಹಿಸಿ ಖಾಸಗಿ ವಲಯಕ್ಕೂ ಅನುವು ಮಾಡಿಕೊಡುವ ಯುರೋಪಿಯನ್ ಮಾದರಿ.
1980ರ ನಂತರ ಸೋವಿಯತ್ ಮಾದರಿಯನ್ನು ಎಲ್ಲ ದೇಶಗಳೂ ತಿರಸ್ಕರಿಸಿದವು. ಇನ್ನುಳಿದ ಅಮೆರಿಕನ್ ಹಾಗೂ ಯುರೋಪ್ ಮಾದರಿಗಳಲ್ಲಿ ನಾವು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಇವೆರಡೂ ಈಗ ಸಂಕಷ್ಟದಲ್ಲಿಯೇ ಇವೆ. ಆದರೆ ಅಮೆರಿಕದ ಉದ್ಯಮ ಅಂತಃಸತ್ವವು ಇದರಿಂದ ಮೇಲೆ ಬರುವ ದಾರಿ ಕಂಡುಕೊಳ್ಳುವುದಕ್ಕೆ ಶಕ್ತವಾಗಿದೆ ಎಂದು ನಂಬಬಹುದಾಗಿದೆ. ಈ ನಡುವೆ ನಾರ್ಡಿಕ್ ಮಾದರಿ ಎಂಬುದೂ ಒಂದಿದೆ. ಇದರಲ್ಲಿ ಸರ್ಕಾರವು ಹೆಚ್ಚಿನ ತೆರಿಗೆಯನ್ನೇ ವಿಧಿಸುತ್ತದೆ ಹಾಗೂ ಹೆಚ್ಚಿನ ಜನಕಲ್ಯಾಣ ಲಾಭಗಳನ್ನು ಒದಗಿಸುತ್ತದೆ. ಆದರೆ ಇದು ಫಲ ಕೊಡುವುದು ಒಂದೇ ಬಗೆಯ ಸಂಸ್ಕೃತಿ ಇರುವ ರಾಷ್ಟ್ರದಲ್ಲಿ. ಅಮೆರಿಕ ಮತ್ತು ಭಾರತದಂಥ ಬಹುಸಂಸ್ಕೃತಿಯ ದೇಶಗಳಲ್ಲಿ ಇದು ಫಲ ಕೊಡದು.
ಗುಜರಾತ್ ಮಾದರಿಯು ಅಮೆರಿಕ - ಚೀನಾ ಮಾದರಿಗಳಿಂತ ಭಿನ್ನವಾಗಿಯೇನೂ ಇಲ್ಲ. ಆದರೆ ಇವುಗಳ ರಾಜಕೀಯ ವ್ಯವಸ್ಥೆ ಭಿನ್ನವಾಗಿದೆಯಷ್ಟೇ. 20ನೇ ಶತಮಾನದ ಅಂತಿಮ ಭಾಗದಲ್ಲಿ ಏಷ್ಯನ್ ಟೈಗರ್ ಎಕಾನಮಿ ಸೃಷ್ಟಿಸಿದ ಆಗ್ನೇಯ ಏಷ್ಯಾದ ಮಾದರಿಗಿಂತ ಇದೇನೂ ಭಿನ್ನವಾಗಿಲ್ಲ. 1991ರ ಉದಾರೀಕರಣ ಪ್ರಕ್ರಿಯೆಯಲ್ಲಿ ಆಗ್ನೇಯ ಏಷ್ಯ ಮಾದರಿಯನ್ನೇ ಮನಮೋಹನಸಿಂಗರು ಅಪ್ಪಿಕೊಂಡಿದ್ದರು. ನಂತರ ಕೆಲ ವರ್ಷಗಳ ಕಾಲ ಅಧಿಕಾರರಹಿತರಾಗಿದ್ದು ಹಿಂತಿರುಗಿದ ನಂತರ ಸೋನಿಯಾ ಗಾಂಧಿ ಮತ್ತೆ ಕಲ್ಯಾಣ ಕಾರ್ಯಕ್ರಮಗಳ ಮಾದರಿಗೆ ಜಾರಿಕೊಂಡರು. ಪ್ರಾರಂಭದಲ್ಲಿ ಪ್ರಗತಿಯಾದಂತೆ ಕಂಡು ನಂತರ ಅರ್ಥವ್ಯವಸ್ಥೆ ಅಧಃಪತನಕ್ಕೆ ಇದು ಕಾರಣವಾಯಿತು.
ಯುಪಿಎ ಹೇಳುವ 'ಎಲ್ಲರನ್ನೊಳಗೊಂಡ ಮಾದರಿ' ಹಾಗೂ ಬಿಹಾರ ಮಾದರಿಗಳೆಲ್ಲ ಸಾಮಾಜಿಕ-ರಾಜಕೀಯ ಆಯೇಜನೆಗಳಷ್ಟೆ. ಕೋಟಾ ಮತ್ತು ಅಂಥದೇ ಮಾರ್ಗಗಳ ಮೂಲಕ ಬೆಳವಣಿಗೆಯ ಲಾಭವನ್ನು ಎಲ್ಲರಿಗೂ ತಲುಪಿಸುತ್ತಿದ್ದೇವೆ ಎಂದುಕೊಳ್ಳುವುದು.
ನೀವು ಎಲ್ಲವನ್ನೂ ಒಳಗೊಳ್ಳುವಿಕೆಯ ಸಾಧನೆಯನ್ನು ಎರಡು ಬಗೆಗಳಲ್ಲಿ ಮಾಡಬಹುದು. ಮೊದಲು ರೊಟ್ಟಿ ಬೇಯಿಸಿ ನಂತರ ಅದನ್ನು ಹಂಚುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಹಾಗೂ ರೊಟ್ಟಿ ಬೇಯುವುದಕ್ಕೂ ಮೊದಲೇ ಅದಕ್ಕಾಗಿ ಕಿತ್ತಾಡುವುದು.
ಏನೇ ಆಗುವುದಿದ್ದರೂ ಮೊದಲು ಬೆಳವಣಿಗೆ ಆಗಬೇಕು. ನಂತರವಷ್ಟೇ ಅದನ್ನು ಹಂಚುವ ಪರಿಕಲ್ಪನೆ. ಬಿಹಾರವು ಅದಾಗಲೇ ಅಭಿವೃದ್ಧಿಯ ಮೇಲುಹಂತದಲ್ಲಿದೆ ಎಂದು ನಂಬುವ ನಿತೀಶ್ ಕುಮಾರ್ ಅವರು, 'ನಾವು ಎಲ್ಲರನ್ನೂ ಹಿಂದೆ ಹಾಕುತ್ತೇವೆ' ಎಂದು ಎದೆ ತಟ್ಟಿಕೊಂಡಿದ್ದಾರೆ. ಅಂದರೆ ಮೋದಿ ಅನುಸರಿಸುತ್ತಿರುವ ಮಾರ್ಗದ ಮೊದಲಾರ್ಧವನ್ನಾದರೂ ಅವರು ಒಪ್ಪಿಕೊಂಡಿದ್ದಾರೆ ಎಂದಾಯಿತು. ಅದೇನೆಂದರೆ ಮೊದಲು ಅಭಿವೃದ್ಧಿ ಆಗಬೇಕು. ಗುಜರಾತ್ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕಗಳು ಆಗ್ನೇಯ ಏಷ್ಯ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಂಡಿವೆ. ಆದರೆ ಮೋದಿ ಮಾತ್ರ ಇದಕ್ಕೊಂದು ಸೈದ್ಧಾಂತಿಕ ಕವಚವನ್ನು ಕೊಟ್ಟಿದ್ದಾರೆ. ಅಲ್ಲದೇ ಇದರಲ್ಲಿ ಚೀನಾ ಅವತರಣಿಕೆಯನ್ನೂ ಅವರು ಅಳವಡಿಸಿಕೊಂಡಿದ್ದಾರೆ. ಬೆಳವಣಿಗೆಯ ಬೆನ್ನು ಹತ್ತುವಾಗ ಭಾರಿ ಬಂಡವಾಳ ಹಾಗೂ ಮೂಲಸೌಕರ್ಯಗಳು ಜತೆಯಾಗಿರಬೇಕು ಎಂಬುದು. ಈ ಮೂಲಕವೇ ಗುಜರಾತ್ ಮಾಡೆಲ್ ಹುಟ್ಟಿಕೊಂಡಿದೆ.
2012ರ ಮೋದಿಯವರ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಎಂಬ ಪದ ಸೇರಿಕೊಂಡಿದೆ. ವ್ಯತ್ಯಾಸ ಏನೆಂದರೆ ಮೊದಲು ಬೆಳವಣಿಗೆ ಸಾಧಿಸಿ ನಂತರ ಎಲ್ಲರನ್ನೂ ಒಳಗೊಳ್ಳುವಿಕೆಯತ್ತ ಮೋದಿ ಗಮನ ಹರಿಸಿದ್ದಾರೆ.
ಈಗ 'ಬಿಹಾರ ಅಭಿವೃದ್ಧಿ ಮಾದರಿ' ಅನ್ನುವಂಥದ್ದೇನಾದರೂ ಇದೆಯೋ ಎಂಬುದನ್ನು ಗಮನ ಹರಿಸೋಣ. ನಿತೀಶ್ ಕುಮಾರ್ ಅವರ ಮೊದಲ ಬೇಡಿಕೆಯೇ ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಕು ಎಂಬುದಾಗಿದೆ. ವಿಶೇಷ ಸ್ಥಾನಮಾನವನ್ನು ಕೊಡುವುದು ಕೈಗಾರಿಕೆಗಳು ಪ್ರೋತ್ಸಾಹಧನದ ಹೊರತಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಿರದ ಗುಡ್ಡ ಪ್ರದೇಶಗಳಲ್ಲಿ. ಹಾಗೆಂದೇ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಾಂಡಗಳಿಗೆ ವಿಶೇಷ ಸ್ಥಾನಮಾನ ಲಭಿಸಿದೆ. ನಾವು ಹಿಂದುಳಿದಿದ್ದೇವೆ ಎನ್ನುವುದಕ್ಕಿಂತ ಭಿನ್ನವಾದ ಇನ್ಯಾವ ಕಾರಣದಿಂದ ವಿಶೇಷ ಸ್ಥಾನಮಾನವನ್ನು ಬೇಡುತ್ತಾರೆ? ಕೇಂದ್ರದಿಂದ ಬರುವ ಅನುದಾನವನ್ನೇ ನೆಚ್ಚಿಕೊಂಡು ಮಾದರಿಯನ್ನು ಕಟ್ಟಿ ನಿಲ್ಲಿಸುವುದಕ್ಕೆ ಸಾಧ್ಯವೇ? ಅನುದಾನಗಳಿಂದ ಬಡತನ ಹೋಗಲಾಡಿಸುವಿಕೆ ಅವರ ಉದ್ದೇಶವೇ? ನಿತೀಶ್ ತಲೆಯಲ್ಲಿ ಐಡಿಯಾಗಳಿಗೆ ಬರವಿದೆ ಎಂಬುದನ್ನಷ್ಟೇ ಇದು ಸೂಚಿಸುತ್ತದೆ.
ಹಾಗಾದರೆ ಮೋದಿ ಮಾಡುತ್ತಿರುವುದೇನು? ತಮ್ಮ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸುವ ಬೃಹತ್ ಉದ್ಯಮಗಳಿಗೆ ಅವರು ತೆರಿಗೆ ವಿನಾಯತಿ ನೀಡುತ್ತಿದ್ದಾರೆ. ಇದನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಸಹ ಮಾಡಬಹುದಲ್ಲ? ಯಾರವರನ್ನು ತಡೆದಿರುವುದು?
ಇವರು ಹೇಳುವ ಬಿಹಾರ ಮಾದರಿಯಲ್ಲಿ ಕೇವಲ ರಾಜಕೀಯವಿದೆ ಹೊರತು ಆರ್ಥಿಕತೆ ಇಲ್ಲ. ಲಾಲು ಪ್ರಸಾದ್ ನಂತರ ಬಿಹಾರ ಅಭಿವೃದ್ಧಿ ಹೊಂದುವುದಕ್ಕೆ ಅಲ್ಲಿ ಕಾನೂನು ಸುವ್ಯವಸ್ಥೆ ಹಳಿಗೆ ಬಂದಿದ್ದು ಹಾಗೂ ಲಾಲು ಐಡೆಂಟಿಟಿ ಪಾಲಿಟಕ್ಸ್ಗೆ ಭಿನ್ನವಾಗಿ ನಿತೀಶ್ ಅಭಿವೃದ್ಧಿಯ ಮಾತನಾಡಿದ್ದು ಕಾರಣ. ಈಗ ಒಳಗೊಳ್ಳುವಿಕೆ ಹೆಸರಲ್ಲಿ ಕೋಟಾ ವ್ಯವಸ್ಥೆಯ ಮತ್ತದೇ ಐಡೆಂಟಿಟಿ ಪಾಲಿಟಿಕ್ಸ್ನತ್ತ ನಿತೀಶ್ ಹೊರಳಿದರೇಕೆ?
-ಆರ್ ಜಗನ್ನಾಥನ್
ಸಂಪಾದಕರು, ಫಸ್ಟ್ಪೋಸ್ಟ್ ಜಾಲತಾಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

