ಅಂಕಣಗಳು

ದಾವೂದ್ ಈಗ ಹೊಸ ಬಂಗಲೆಯಲ್ಲಿದ್ದಾನೆ!

Published On :

ನಟ ಸಂಜಯ್ ದತ್ಗೆ 5 ವರ್ಷಗಳ ಜೈಲು ಶಿಕ್ಷೆಯಾಗುತ್ತಿದ್ದಂತೆಯೇ, ಎಲ್ಲರ ಸ್ಮೃತಿ 1993 ಸರಣಿ ಸ್ಫೋಟದತ್ತ ಓಡುತ್ತಿದೆ. ದಾಳಿಯ ಮಾಸ್ಟರ್ಮೈಂಡ್ ದಾವೂದ್ ಇಬ್ರಾಹಿಂ ಮಾತ್ರ ನಿಶ್ಚಿಂತೆಯಿಂದ ಪಾಕಿಸ್ತಾನದಲ್ಲಿದ್ದಾನೆ. ಎಂದಿನಂತೆ ಪಾಕಿಸ್ತಾನ 'ಆತ ನಮ್ಮಲ್ಲಿಲ್ಲ' ಎಂದು ಹೇಳುತ್ತಿದೆ. ಹಾಗೆ ನೋಡಿದರೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ರಿಂದ ಹಿಡಿದು, ರೆಹಮಾನ್ ಮಲಿಕ್ರವರೆಗೆ ಎಲ್ಲರೂ ತಮ್ಮ ನೆಲದಲ್ಲಿ ದಾವೂದ್ ಇಲ್ಲ ಎಂದೇ ಮೊದಲಿನಿಂದಲೂ ವಾದಿಸುತ್ತಲೇ ಬಂದಿದ್ದಾರೆ!
ಆದರೆ ಗುಪ್ತಚರ ದಳದ ದಾಖಲೆಗಳನ್ನು ಆಧರಿಸಿ ದಾವೂದ್ನ ಹೊಸ ಅಡ್ಡಾವನ್ನು ಹುಡುಕಿಕೊಂಡು ಹೊರಟ 'ಆಜ್ ತಕ್' ವಾಹಿನಿ ಕೊನೆಗೂ ಆತನ ಹೊಸ ನೆಲೆಯನ್ನು ಪತ್ತೆ ಹಚ್ಚಿದೆ. ಕರಾಚಿಯ ಪ್ರಭಾವಿ ಏರಿಯಾದ ಬಂಗಲೆಯೊಂದರಲ್ಲಿ ದಾವೂದ್ ಠಿಕಾಣಿ ಹೂಡಿದ್ದಾನೆ, ಕರಾಚಿಯ ರಕ್ಷಣಾ ವಸತಿ ಕ್ಷೇತ್ರದಲ್ಲಿರುವ  '6-ಆ, ಖಾಯಾಬನ್ ತಂಜೀಮ್' ದಾವೂದ್ನ ಹೊಸ ವಿಳಾಸ ಎಂದದು ವರದಿ ಮಾಡಿದೆ.
ದಾವೂದ್ ಇದೇ ಮನೆಯಲ್ಲಿ ವಾಸಿಸುತ್ತಿರಬಹುದು ಎಂಬ ಅನುಮಾನದಿಂದ ಇಂಟರ್ಪೋಲ್, ಕೆಲವು ದಿನಗಳ ಹಿಂದೆಯೇ ಇಸ್ಲಾಮಾಬಾದ್ಗೆ ಸಂದೇಶ ಕಳುಹಿಸಿತ್ತು. ಆದರೆ ಪಾಕಿಸ್ತಾನಿ ಸರ್ಕಾರ, 'ಅಲ್ಲಿ ದಾವೂದ್ ಇಲ್ಲವೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿತ್ತು!  9/11 ದಾಳಿಯ ನಂತರ ದಾವೂದ್ನನ್ನು ಅಮೆರಿಕ 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿದಾಕ್ಷಣ ಆತ ತನ್ನ ನೆಲೆಯನ್ನು ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯಕ್ಕೆ ಬದಲಾಯಿಸಿದ್ದ. ಅಲ್ಲಿಂದ ಈಗ ಕರಾಚಿಗೆ ಬಂದು ಕಾಲುಚಾಚಿ ಮಲಗಿದ್ದಾನೆ.
ದಾವೂದ್ನ ಹೊಸ ಬಂಗಲೆಯ ಚಿತ್ರಗಳನ್ನು ನೋಡಿದಾಗ ಆತನಿಗೆ ಪಾಕಿಸ್ತಾನಿ ಸರ್ಕಾರದಿಂದ ಪೂರ್ಣ ಪ್ರಮಾಣದ ರಕ್ಷಣೆ ನೀಡಲಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಟೊಯೇಟಾ ಲ್ಯಾಂಡ್ ಕ್ರೂಸರ್ ಸೇರಿದಂತೆ ಹತ್ತಾರು ಐಷಾರಾಮಿ ಕಾರುಗಳು ಆತನ ಬಂಗಲೆಯಲ್ಲಿವೆ. ಅಷ್ಟೇ ಅಲ್ಲದೆ, ಆ ಬಂಗಲೆಯ ಪಕ್ಕದಲ್ಲಿ ಮಾಜಿ ಗವರ್ನರ್ಗಳು ಮತ್ತು ರಾಜಕಾರಣಿಗಳೂ ವಾಸಿಸುತ್ತಿದ್ದಾರೆ. ಸದ್ಯಕ್ಕೆ ದಾವೂದ್ ತನ್ನ ಹೆಂಡತಿ ಮಹ್ಜಬೀನ್ ಮತ್ತು ಮಗನೊಂದಿಗೆ ಆ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ಇನ್ನು ಆತನ ಹಿರಿಯ ಮಗಳು ಮತ್ತಾಕೆಯ ಪತಿ, ಸಹೋದರ ಅನೀಸ್ ಇಬ್ರಾಹಿಂ ಕೂಡ ಅದೇ ಕಾಲೋನಿಯಲ್ಲಿದ್ದಾರೆ.  ಈ ಕುರಿತು ಮಾತನಾಡಿದ ಹಿರಿಯ ವಕೀಲ ಮಾಜಿದ್ ಮೆಮನ್, 'ಕೇವಲ ಒಬ್ಬ ಪತ್ರಕರ್ತ ಅಷ್ಟೊಂದು ನಿರಾಯಾಸವಾಗಿ ದಾವೂದ್ನ ನೆಲೆಯನ್ನು ಕಂಡುಹಿಡಿದದ್ದು ಆಶ್ಚರ್ಯ ತರಿಸುತ್ತಿದೆ. ಈ ಕೆಲಸ ಭಾರತದ ಗುಪ್ತಚರ ದಳ ಮತ್ತು 'ರಾ' ಗಳಿಂದ ಏಕೆ ಆಗಲಿಲ್ಲ? ಅವೇನು ಮಾಡುತ್ತಿವೆ?' ಎಂದು ಪ್ರಶ್ನಿಸುತ್ತಾರೆ.

- ದೀಪಕ್ ಶರ್ಮ, ಹಮ್ಜಾ ಅಮಿರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.