ಆಧುನಿಕ ಔಷಧಿಗಳ ಉಪಯೋಗ ಆಯುರ್ವೇದಕ್ಕೆ ಮರಣ ಶಾಸನ!
ಆಯುರ್ವೇದ ಶಾಸ್ತ್ರವು ಬ್ರಹ್ಮನಿಂದ ಉಪದೇಶಿಸಲ್ಪಟ್ಟು ಅಶ್ವಿನಿ ದೇವತೆಗಳಿಂದ ಪ್ರಚಾರ ಮಾಡಲ್ಪಟ್ಟ ವೈದ್ಯಕೀಯ ಶಾಸ್ತ್ರ. ಇದು ಸಮಸ್ತ ಮಾನವನ ಆರೋಗ್ಯ ರಕ್ಷಣೆಗೆ ಪರಿಪೂರ್ಣವಾಗಿ ಸಿದ್ದಪಡಿಸಿದ ಗ್ರಂಥ ಎಂಬುದಾಗಿ ಶತಮಾನಗಳಿಂದಲೂ ಭಾರತದಲ್ಲಿ ಗುರುತಿಸಲ್ಪಟ್ಟಿದೆ.
ಆಯುರ್ವೇದದಲ್ಲಿ ಕೇವಲ ಅಂಗಶಾಸ್ತ್ರವನ್ನಲ್ಲದೆ ಪಂಚಭೂತ ವಿಜ್ಞಾನ, ಪಂಚಕೋಶ ಸಿದ್ಧಾಂತ, ಆಂತಃಕರಣ ಚತುಷ್ಟಯ, ಷಟ್ ಚಕ್ರಾದಿ ನಿರೂಪಣೆ, ರಸಶಾಸ್ತ್ರ, ಮಾನಸಿಕ ಚಿಕಿತ್ಸೆ, ರಿಷ್ಟ ವಿಜ್ಞಾನ, ವಿಷ ಚಿಕಿತ್ಸೆ, ನಾಡಿ ವಿಜ್ಞಾನ, ತಂತ್ರವಿದ್ಯೆ ಜೊತೆಯಲ್ಲಿಯೇ ಜೋತಿಷ್ಯ ಶಾಸ್ತ್ರದ ಕೆಲವು ಮೂಲಗಳು ಸೇರ್ಪಡೆಯಾಗಿರುತ್ತದೆ.
ಆಯುರ್ವೇದದ ಮೂಲ ಗ್ರಂಥಗಳು ಸಂಸ್ಕೃತದಲ್ಲಿ ಮಾತ್ರ ದಾಖಲೆಗೊಳಿಸಲ್ಪಟ್ಟಿವೆ. ಇವುಗಳನ್ನು ಕಾಲಕ್ರಮೇಣ ಆಧುನಿಕ ಕಾಲದ ಪರಿಣಾಮದಿಂದಾಗಿ ಪ್ರಚಲಿತ ಭಾಷೆಗಳಿಗೆ ಭಾಷಾಂತರಗೊಂಡಿದೆ. ಸಹಜವಾಗಿಯೇ ಭಾಷಾಂತರಗೊಂಡ ಕೃತಿಗಳಲ್ಲಿ ಮೂಲ ಉದ್ದೇಶದ ಕೆಲವೊಂದು ಅಂಶಗಳು, ಕಠಿಣವೆನಿಸಿದ ಭಾಗಗಳು, ಜಾರಿಗೊಳಿಸಲು ಅಸಾಧ್ಯ ಎಂಬ ಭಾವನೆ ಮೂಡಿಸುವ ಸಿದ್ಧ ಪ್ರಕರಣಗಳು ಹಾಗೂ ಲಭ್ಯವಿಲ್ಲವೆಂದು ಪರಿಗಣಿಸಲಾದ ಔಷಧ ತಯಾರಿಕೆಯ ದ್ರವ್ಯಗಳು ಮುಂತಾದ ಅಂಶಗಳನ್ನು ಕೈಬಿಡಲಾಗಿದೆ.
ಹೀಗಾಗಿ ಮೂಲದ ಸಂಸ್ಕೃತದ ಆಯುರ್ವೇದ ಗ್ರಂಥಗಳಿಗೂ ಇತ್ತೀಚೆಗೆ ಭಾಷಾಂತರಗೊಂಡಿರುವ ಗ್ರಂಥಗಳು ಪುನರ್ ಮುದ್ರಣಗೊಳ್ಳುವ ಪ್ರತಿ ಸಂದರ್ಭದಲ್ಲಿಯೂ ಬದಲಾವಣೆಯಾಗುತ್ತಿರುವ ಗ್ರಂಥಗಳು ಮೂಲ ಉದ್ದೇಶದ ಸಿದ್ಧಾಂತಗಳನ್ನೆ ಕೈಬಿಟ್ಟಿರುವ ಅಂಶಗಳು ಬಹಳವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ವ್ಯಕ್ತಿತ್ವವುಳ್ಳ ವಿದ್ವಾಂಸರುಗಳು ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಮೂಲ ಗ್ರಂಥಗಳಲ್ಲಿ ವಿಶ್ಲೇಷಿಸಲ್ಪಟ್ಟಿರುವ ಹಲವಾರು ಔಷಧ ತಯಾರಿಕಾ ಕ್ರಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಜತೆಗೆ ಮೂಲ ಗ್ರಂಥಗಳಲ್ಲಿ ಉಪಯೋಗಿಸಲ್ಪಟ್ಟ ಔಷಧ ಪರಿಕರಗಳ ಹೆಸರುಗಳು ಮಾತ್ರವಲ್ಲ, ರೋಗದ ಹೆಸರುಗಳನ್ನೂ ಸಹ ಆಧುನಿಕತೆಗೆ ಸಂಪೂರ್ಣವಾಗಿ ಬದಲಾಯಿಸಿಕೊಳ್ಳಲಾಗಿದೆ.
ಹೀಗಾಗಿ ಮೂಲ ಗ್ರಂಥಗಳ ಭಾಷೆಯ ಅರಿವಿಲ್ಲದೆ ಅವುಗಳ ತಾತ್ವಿಕ ಸಿದ್ಧಾಂತಗಳ ವಿಶಾಲ ಅರ್ಥವನ್ನು ಅರಿತುಕೊಳ್ಳುವ ಅವಕಾಶದಿಂದ ಇಂದಿನ ಭಾಷಾಂತರ ಗ್ರಂಥಗಳನ್ನು ಪಠಣ ಮಾಡುತ್ತಿರುವ ಆಯುರ್ವೇದಿಯರು ಸೀಮಿತ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಆಯುರ್ವೇದದಲ್ಲಿ ನಾಡಿ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವಿಧಾನ ಮಾಯವಾಗಿದೆ. ಅಷ್ಠಾಂಗ ಪರೀಕ್ಷೆಯ ವಿಧಾನ ಪರಿಪೂರ್ಣವಾಗಿ ಬೋಧಿಸಲ್ಪಡುತ್ತಿಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಮೂಲ ಗ್ರಂಥಗಳು ದುರ್ಲಭವಾಗಿದೆ. ಜತೆಗೆ ಈ ಬಗ್ಗೆ ಭಾಷಾಂತರಗೊಂಡ ಗ್ರಂಥಗಳು ಪರಿಪೂರ್ಣವಾಗಿರುವುದಿಲ್ಲ.
ಹೀಗಾಗಿ ಆಯುರ್ವೇದದ ಮೂಲ ಸಿದ್ಧಾಂತಗಳಾದ ತ್ರಿದೋಷ ಸಿದ್ಧಾಂತವು ರೋಗಿಯ ಪರೀಕ್ಷಾ ವಿಧಾನದಿಂದ ಮರೆಯಾಗಿದೆ. ಆಧುನಿಕತೆಯ ಶಸ್ತ್ರಾಸ್ತ್ರಗಳು ಪರಿಕರಗಳು ರೋಗ ಪತ್ತೆಗೆ ಸುಲಭವಾದ ಸಲಕರಣೆಗಳು ಅಧಿಕವಾಗಿ ಚಲಾವಣೆಯಲ್ಲಿರುವುದರಿಂದ ಸಹಜವಾಗಿಯೇ ಕಠಿಣವಾದ ರೋಗಿಯ ಪರೀಕ್ಷಾ ವಿಧಾನಗಳಿಂದ ಆಯುರ್ವೇದ ವೈದ್ಯರುಗಳು ದೂರವಾಗಿದ್ದಾರೆ.
ಆಧುನಿಕತೆಯ ಹಾಗೂ ಆಧುನಿಕ ವೈದ್ಯ ಪದ್ಧತಿಯ ಆಕರ್ಷಣೆಗೆ ಮಾರು ಹೋಗಿರುವ ವೈದ್ಯಕೀಯ ಅಭ್ಯಾಸನಿರತರು ಸುಲಭವಾಗಿ ಚಿಕಿತ್ಸೆ ನೀಡುವ ಆಶಯದಿಂದ ಆಯುರ್ವೇದದ ಮೂಲ ಸಿದ್ದಾಂತಗಳನ್ನೇ ಮೂಲೆ ಗುಂಪಾಗಿ ಮಾಡಿರುವುದರಿಂದ ಆಯುರ್ವೇದದ ಪ್ರಯೋಜನದ ಬದಲು ವಿಪುಲಾಂಶಗಳೆ ಹೆಚ್ಚಾಗಿದೆ. ಇದರಿಂದಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಆಧುನಿಕ ಔಷಧಿಗಳನ್ನು ನೀಡುವ ಹಕ್ಕು ಅಥವಾ ಅವಕಾಶ ಬೇಕೆಂಬುದು ಆಯುರ್ವೇದ ವೈದ್ಯರು ಬೇಡಿಕೆಯಾಗಿದೆ. ಈ ಬೇಡಿಕೆ ಎಷ್ಟು ಅಸಮಂಜಸವಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ಆಯುರ್ವೇದ ಅಭ್ಯಾಸ ಮಾಡಬೇಕೆಂದು ಆಯುರ್ವೇದ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಇದು ಆಯುರ್ವೇದ ಕಾಲೇಜು ಎಂಬ ಸ್ಪಷ್ಟತೆ ಇರುತ್ತದೆ. ಈ ಸ್ಪಷ್ಟತೆಯಿಂದಲೇ ಈ ಕಾಲೇಜುಗಳಿಗೆ ಪ್ರವೇಶ ಬಯಸುತ್ತಾರೆ. ಪ್ರವೇಶವಾದ ನಂತರ ಅಲೋಪತಿ ಶಿಕ್ಷಣ ಸೇರ್ಪಡೆ ಬೇಕೆಂದು ಬೇಡಿಕೆ ಇಡುತ್ತಾರೆ.
ನಿಜವಾಗಿಯೂ ಇವರಿಗೆ ಅಲೋಪತಿ ಶಿಕ್ಷಣ ಬೇಕೆನಿಸಿದರೆ ಅಲೋಪತಿ ಕಾಲೇಜುಗಳಿಗೆ ಸೇರಬಹುದಾಗಿರುತ್ತದೆ. ಅಲ್ಲಿ ಪ್ರವೇಶ ಕಷ್ಟಸಾಧ್ಯವಾದುದರಿಂದ ಸುಲಭ ಸಾಧ್ಯವಾದ ಆಯುರ್ವೇದ ಕಾಲೇಜುಗಳಿಗೆ ಪ್ರವೇಶ ಪಡೆದುಕೊಳ್ಳುತ್ತಾರೆ. ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ ಎಂಬ ದೊಡ್ಡ ಫಲಕವುಳ್ಳ ಉಪಾಹಾರ ಮಂದಿರ ಪ್ರವೇಶಿಸಿ ಮಾಂಸ ಆಹಾರವನ್ನು ಅಪೇಕ್ಷಿಸುವುದು ಎಷ್ಟು ಸಾಧುವಾದುದು ಎಂಬುದನ್ನು ಬೇಡಿಕೆ ಇಡುವವರೇ ಅರ್ಥ ಮಾಡಿಕೊಳ್ಳಬೇಕು. ಆಯುರ್ವೇದ ಕ್ಷೇತ್ರದಲ್ಲಿ ಪ್ರಾತಃಸ್ಮರಣಿಯರಾದ ಪಂಡಿತ ತಾರಾನಾಥ್, ಪಂಡಿತ ವಾಳ್ವೇಕರ್, ದತ್ತಾತ್ರೇಯ ಕೃಷ್ಣ ಭಾರದ್ವಾಜ್, ಹಲಸೀಕರ್ ಮುಂತಾದ ಮಹನೀಯರುಗಳು ಆಯುರ್ವೇದ ಚಿಕಿತ್ಸೆ ಮುಖಾಂತರವೇ ಲಕ್ಷಾಂತರ ಜನರನ್ನು ಮಾರಕ ರೋಗಗಳಿಂದ ಗುಣಪಡಿಸಿದ್ದರು.
ಡಾ.ವೈ.ಪಾರ್ಥನಾರಾಯಣ ಪಂಡಿತ್, ಡಾ. ಭಟ್ಟಾಚಾರಿ, ಡಾ. ಗೋಪಾಲ ಕೃಷ್ಣರಾವ್, ಡಾ.ಎನ್.ವಿ. ಉಪಾಧ್ಯಾಯ, ಡಾ. ಗುರುರಾಜ ಭಟ್ ಮುಂತಾದವರೂ ಸಹ ವೈದ್ಯಕೀಯ ಕ್ಷೇತ್ರದಲ್ಲಿ ಧ್ರುವತಾರೆಯಂತೆ ಬೆಳಗಿ ಜನತಾ ಜನಾರ್ಧನ ಸೇವೆಯಲ್ಲಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡ ವ್ಯಕ್ತಿಗಳು. ರಾಜ್ಯದಲ್ಲಿ ಪದವಿ ಶಿಕ್ಷಣ ಪ್ರಾರಂಭವಾದಾಗ ಬೋಧಕರಾಗಿದ್ದ ಡಾ.ಪಿ.ಟಿ.ಕೆ. ನಂಬೀಷನ್, ಡಾ.ಎಲ್. ಅಶ್ವತ್ಥನಾರಾಯಣ, ಡಾ. ಲಕ್ಷ್ಮಿನಾರಾಯಣ, ಡಾ.ಕೆ.ಆರ್. ಶ್ರೀಕಂಠಮೂರ್ತಿ, ಡಾ. ಚನ್ನಬಸಪ್ಪ, ಡಾ.ಎಸ್.ಎಂ. ಅಂಗಡಿ ಮುಂತಾದವರು ಆಯುರ್ವೇದದ ಮಹತ್ವವನ್ನು ಕುರಿತು ಪಾಠ ಪ್ರವಚನ ನಡೆಸುತ್ತಿದ್ದರು.
ಆಧುನಿಕತೆಯ ಹೆಸರಿನ ಬಿರುಗಾಳಿಯಲ್ಲಿ ಮೂಲ ಸಿದ್ಧಾಂತಗಳನ್ನೇ ಅರಿಯದ, ಅವುಗಳ ಪ್ರಾಮುಖ್ಯತೆಯನ್ನು ತಿಳಿಯದ ಮತ್ತು ಇವುಗಳ ಬಗ್ಗೆ ಆಸಕ್ತಿ ಇಲ್ಲದೆ ಸುಲಭವಾಗಿ ವೈದ್ಯಕೀಯ ಪದವಿ ಪಡೆಯಬಹುದೆಂಬ ಭ್ರಮೆಯನ್ನು ಕೆಲವರು ಹೊಂದಿ ತಮ್ಮ ವಿತಂಡ ವಾದವನ್ನು ಮಂಡಿಸುತ್ತಾರೆ. ಇವೆಲ್ಲದರ ಪರಿಣಾಮ ಆಯುರ್ವೇದ ಪರಿಪೂರ್ಣವಲ್ಲ ಎಂಬ ಭ್ರಮೆಯನ್ನು ಮೂಡಿಸಿ ಅಲೋಪತಿ ವಿಜ್ಞಾನವನ್ನು ಆಯುರ್ವೇದಿಯರ ಜೊತೆ ಸೇರಿಸಬೇಕೆಂಬ ವಿತಂಡ ವಾದವನ್ನು ಜಾರಿಗೊಳಿಸುವುದರಲ್ಲಿ ಅರ್ಹತೆ ಇಲ್ಲದ ಬೋಧಕರು ಶಿಕ್ಷಣ ಕ್ಷೇತ್ರದಲ್ಲಿ ರಾಡಿ ಎಬ್ಬಿಸಿದರು. ಆಯುರ್ವೇದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆಯುರ್ವೇದ ಆಯುರ್ವೇದವಾಗಿಯೇ ಇರಬೇಕು. ಅದಕ್ಕೆ ಆಧುನಿಕತೆಯ ಹೆಸರಿನಲ್ಲಿ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗುವ ಇತರ ಪದ್ಧತಿಗಳ ಮಿಶ್ರಣ ಅಥವಾ ಸಮ್ಮಿಶ್ರಣ ತರವಾದುದಲ್ಲ. ಒಂದು ವೇಳೆ ಹೀಗೆ ಮಾಡುವುದರಿಂದ ಆಯುರ್ವೇದದ ಅಧೋಗತಿ ಸತ್ಯವಾದುದು. ಸರ್ಕಾರ ಇತ್ತೀಚೆಗೆ ಆಯುರ್ವೇದ ವೈದ್ಯರುಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಆಧುನಿಕ ಔಷಧಿಗಳ ಉಪಯೋಗಕ್ಕೆ ಅವಕಾಶ ಕೊಡುವುದಾಗಿ ಸಮ್ಮತಿಸಿದೆ. ಇದು ಆಯುರ್ವೇದ ಶಾಸ್ತ್ರಕ್ಕೆ ಮರಣ ಶಾಸನವಾಗುವುದರಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ. ಸಾವಿರಾರು ಆಯುರ್ವೇದ ಪದವೀಧರರ ಒಮ್ಮತದ ಬೇಡಿಕೆ ಎಂದರೆ ಅಯುರ್ವೇದ ಸಿದ್ಧಾಂತದಲ್ಲಿ ಅಕ್ಕರೆ, ಆಸಕ್ತಿ, ಅಭಿಮಾನ ಜೊತೆಗೆ ನಂಬಿಕೆ ಇರುವವರಿಗೆ ಮಾತ್ರ ಆಯುರ್ವೇದ ಕಾಲೇಜುಗಳಲ್ಲಿ ಪ್ರವೇಶ ಸಿಗಲಿ.
ಆಧುನಿಕ ವೈದ್ಯ ಪದ್ಧತಿಯ ಆಶಯ ಉಳ್ಳವರು ಆ ಕಾಲೇಜುಗಳಿಗೆ ಸೇರಲಿ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲಿ ಎಂಬುದಾಗಿ ಹೇಳುತ್ತಾ, ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಕೆ. ಪುಟ್ಟಸ್ವಾಮಿಯವರು ಆಯುರ್ವೇವೇದ ಶಿಕ್ಷಣದ ಜತೆಗೆ ಅಲೋಪತಿ ಶಿಕ್ಷಣ ಸೇರಿಸಬೇಕೆಂಬ ಬೇಡಿಕೆ ಇಟ್ಟಾಗ ಅವರು ನೀಡಿದ ಉತ್ತರ, ಆಯುರ್ವೇದ ಕಾಲೇಜುಗಳನ್ನು ಅಲೋಪತಿ ಕಾಲೇಜುಗಳಿಗೆ ಜಂಪಿಂಗ್ ಬೋರ್ಡ್ ಮಾಡಿಕೊಳ್ಳಬೇಡಿ (ಮೈಸೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಎದುರುಗಡೆಯೇ ಅಲೋಪತಿ ಕಾಲೇಜು ಇದೆ).
ತ್ರಿದೋಷ ಸಿದ್ಧಾಂತದ ಆಧಾರದ ಮೇಲೆ ರೂಪುಗೊಂಡಿರುವ ಆಯುರ್ವೇದ ಶಾಸ್ತ್ರಕ್ಕೆ ಯಾವುದೇ ರೀತಿಯ ಸಮ್ಮಿಶ್ರ ಮಾಡುವುದು ಬೇಡವೇ ಬೇಡ. ಅದನ್ನು ಉಳಿಸಿ-ಬೆಳೆಸಲು ಅಗತ್ಯವಾದ ಯೋಜನೆಗಳನ್ನು ರೂಪಿಸಲು ಸರ್ಕಾರ ಮುಂದಾಗಲಿ.
- ಡಾ.ಎಂ.ಜಿ.ಆರ್ ಅರಸ್
ಸಂಪಾದಕರು
ವೈದ್ಯವಾರ್ತಾ ಮಾಸಪತ್ರಿಕೆ, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

