ಚಿತ್ರ ಅಗತ್ಯ ಇರೋದೆಲ್ಲಿ?
ನಿಮ್ಮ ವಕ್ರತುಂಡೋಕ್ತಿ 23.2.2013ರಲ್ಲಿ 'ಲೇಖನವನ್ನು ಎಡಿಟ್ ಮಾಡಿ ಪ್ರಕಟಿಸುವುದಕ್ಕೆ 'ಕತ್ತರಿ ಪ್ರಯೋಗ ಎನ್ನುವುದಾದರೆ, ಪ್ರಕಟಿಸದೇ ಇರುವುದಕ್ಕೆ ಹಾರೆ, ಗುದ್ದಲಿ, ಪಿಕಾಸಿ ಪ್ರಯೋಗ ಅಂದಿದ್ದೀರಲ್ಲ. ಅದರ ಬದಲಿಗೆ 'ಕಸದ ಬುಟ್ಟಿ ಪ್ರಯೋಗ ಅಥವಾ ಉಪಯೋಗ' ಅನ್ನಬಹುದೇನೋ.
-ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ (ಉ.ಕ.)
ಉತ್ತಮ ಸುದ್ದಿ, ಮಾಹಿತಿ, ಲೇಖನ... ನೀಡುತ್ತಿರುವ 'ಕನ್ನಡಪ್ರಭ'ದ ಎಲ್ಲಾ ಬಂಧುಗಳಿಗೂ ಅಭಿನಂದನೆಗಳು. ಕನ್ನಡಪ್ರಭ ಪತ್ರಿಕೆಯನ್ನು ಸುದ್ದಿಗಿಂತ ಶೀರ್ಷಿಕೆ ವಿನ್ಯಾಸಕ್ಕಾಗಿ ಹೆಚ್ಚು ಇಷ್ಟಪಡುತ್ತೇನೆ. ಹಾಗೆಯೇ ಲೇಖನಗಳೂ ಸಹ ಉತ್ತಮವಾಗಿ ಮೂಡಿ ಬರುತ್ತಿವೆ. ಆದರೆ ದಿನಾಂಕ 20.03.2013ರ ಮುಖಪುಟದಲ್ಲಿ 'ಕಾಮುಕರಿಗೆ ಆಜೀವ ಜೈಲು' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಸುದ್ದಿಯ ಬಗ್ಗೆ ಆಕ್ಷೇಪವಿಲ್ಲ. ಆದರೆ ಅಲ್ಲಿ "ಸಮ್ಮತಿ ಸೆಕ್ಸ್ 18ಕ್ಕೆ ನಿಗದಿ" ಉಪಶೀರ್ಷಿಕೆಯ ಚಿತ್ರ ತುಂಬಾ ಅಶ್ಲೀಲವೆನಿಸಿತು. ಅಶ್ಲೀಲವಾದ ವಿಚಾರವನ್ನು ಅಶ್ಲೀಲ ಚಿತ್ರಗಳ ಮೂಲಕ ತೋರಿಸುವ ಅಗತ್ಯವಿಲ್ಲ. ಇಷ್ಟಕ್ಕೂ ಚಿತ್ರಗಳ ಅಗತ್ಯವಿರುವುದು ಅಮೂರ್ತವಾದ ಇಲ್ಲವೇ ಅಪರಿಚಿತವಾದ ವಿಷಯ ಹಾಗೂ ವಸ್ತುಗಳ ಪರಿಚಯಕ್ಕಾಗಿ. ಆದರೆ 'ಸೆಕ್ಸ್' ನಂತಹ ವಿಚಾರಗಳು ಪ್ರೌಢರಿಗೆ ಅರ್ಥವಾಗುತ್ತದೆ. ಬಾಲಕರಿಗೆ ಅರ್ಥವಾಗದಿರುವುದೇ ಒಳ್ಳೆಯದು! ಹೀಗಿರುವಾಗ ಇಂತಹ ಅನಗತ್ಯ ಚಿತ್ರಗಳನ್ನು ಪ್ರಕಟಿಸುವುದು ಸರಿಯಿಲ್ಲ ಎಂಬುದು ನನ್ನ ಭಾವನೆ. ಇತ್ತೀಚೆಗೆ ಋಣಾತ್ಮಕ ಅಂಶಗಳೇ ಹೆಚ್ಚಾಗಿ ಮುಖಪುಟದಲ್ಲಿ ಪ್ರಕಟಗೊಳ್ಳುತ್ತಿವೆ. ಆದಷ್ಟು ಸಾಧನೆ ಮೆರೆದ, ಹೆಮ್ಮೆ ಮೂಡುವ ವಿಚಾರಗಳಿಗೆ ಹೆಚ್ಚು ಪ್ರಚಾರ ನೀಡಿದರೆ ಸಾಮಾಜಿಕ ಕಳಕಳಿ ಹೆಚ್ಚುತ್ತದೆಯಲ್ಲವೆ?
-ಮಾಗಡಿ ಶ್ರೀನಿವಾಸ್.ಬಾಳೆಕಟ್ಟೆ, ಮತ್ತೀಕೆರೆ ಅಂಚೆ,ರಾಮನಗರ ಜಿಲ್ಲೆ.ಮೊ. 9902 797767.
"ಕೇಳ್ರಪ್ಪೋ ಕೇಳಿ" (ಕ.ಪ್ರ. ಮಾರ್ಚ್ 14) ಯಲ್ಲಿನ ಒಂದು ಪ್ರಶ್ನೆ- 'ಸೊಂಟ ಅಂದಾಕ್ಷಣ ಪಡ್ಡೆ ಹೈಕಳ ಕಿವಿ ನಿಮಿರುತ್ತಲ್ಲ, ಯಾಕೆ?' ಇದಕ್ಕೆ ನಿಮ್ಮ ಉತ್ತರ- 'ಕಿವಿಯಷ್ಟೇ ನಿಮಿರುವುದು ಎಷ್ಟೋ ಒಳ್ಳೆಯದು.' ಈ ಉತ್ತರಕ್ಕೆ ಹಲವು ಆಯಾಮಗಳಲ್ಲಿ ಅರ್ಥವಿದ್ದರೂ, ಥಟ್ಟನೆ ಹೊಳೆಯುವ ಅರ್ಥವೇ ಬೇರೆ! ಕನ್ನಡಪ್ರಭದಂಥ ಪ್ರಬುದ್ಧ ಪತ್ರಿಕೆಗೆ ಇದು ಸಲ್ಲವೆಂದೇ ನನ್ನ ಅಭಿಮತ.
-ಕೆ. ಆದಿತ್ಯ ಹೆಬ್ಬಾರ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ.
ಪ್ರತಿ ಶನಿವಾರ 'ಕನ್ನಡಪ್ರಭ' ಬಂದ ಕೂಡಲೇ ಮೊದಲು ನೋಡುವುದೇ 'ಬೆತ್ತಲೆ ಪ್ರಪಂಚ'. ಪ್ರತಾಪಸಿಂಹ ಬರೆಯುವ ಲೇಖನ ನಮಗೆ ಬಹಳ ಅಚ್ಚುಮೆಚ್ಚು. ಮಾರ್ಚ್ 16ನೇ ದಿನಾಂಕದ ಕ.ಪ್ರ.ದಲ್ಲಿ 'ಗೆದ್ದು ಗದ್ದುಗೆ ಏರಿದ ಮೇಲೆ ಈ ಬಿ.ಜೆ.ಪಿ.ಯವರಲ್ಲಿ ಒಂದು ಗುರಿ, ಉದ್ದೇಶವಿದೆ ಎಂದು ಯಾವತ್ತಾದರೂ ಅನಿಸಿತಾ?' ಈ ಲೇಖನ ಬಿ.ಜೆ.ಪಿ.ಯ ಒಳಹುಳುಕುಗಳನ್ನು ಹೊರ ಹಾಕಿದೆ ಮತ್ತು ಉಡುಪಿ, ಕುಂದಾಪುರದಲ್ಲಿ ಬಿ.ಜೆ.ಪಿ.ಗೆ ಸೋಲು ಅನುಭವಿಸಲು ಮೂಲಕಾರಣ ಕುಂದಾಪುರದ ವಾಜಪೇಯಿ ಎಂದು ಹೆಸರು ಮಾಡಿದ ಸರಳ ಸಜ್ಜನ ಶ್ರೀನಿವಾಸ ಶೆಟ್ಟರನ್ನು ಮೂಲೆಗುಂಪು ಮಾಡಿರುವುದೇ ಕಾರಣ. ಇನ್ನಾದರೂ ಬಿ.ಜೆ.ಪಿ. ಎಚ್ಚೆತ್ತುಕೊಳ್ಳಲಿ. ಪಕ್ಷಕ್ಕಾಗಿ ದುಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ.
-ರವಿಕುಮಾರ್ ಜಿ.ಬಿ. ಉಡುಪಿ, ಮೊ. 944 9669897.
ಪ್ರತಾಪಸಿಂಹರವರೇ ನಿಮ್ಮ ಅಂಕಣಗಳು ಸ್ವಾರಸ್ಯಕರ ನಿಜ. ಆದರೆ ಅದರಲ್ಲಿ ಬಿಂಬಿತವಾಗುವ ವಿಷಯಗಳು ಎಷ್ಟರ ಮಟ್ಟಿಗೆ ಸತ್ಯ? ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಆದರೆ ನೀವು ಕೆಲವೊಮ್ಮೆ, 'ನೀವಿದಕ್ಕೆ ಜೈ ಅಂದು ಬಿಡಿ, ನೀವಿದನ್ನು ಮರೆತು ಬಿಡಿ' ಎಂದು ಓದುಗರನ್ನು ಪುಸಲಾಯಿಸುವುದೇಕೆ? ಉದಾ:- 'ಮೋದಿ ಅಂದರೆ ಮೋಡಿ, ನೀವೂ ಜೈ ಅಂದು ಬಿಡಿ', 'ಗೋಧ್ರಾ ದುರಂತ, ಗುಜರಾತ್ ಹಿಂಸಾಚಾರ ಎರಡನ್ನೂ ಮರೆಯಬೇಕಾದ ಕಾಲ ಬಂತೇ?' ಈ ಅಂಕಣಗಳಲ್ಲಿ ನೀವೇಕೆ ಓದುಗರನ್ನು ಪ್ರೇರೇಪಿಸುತ್ತೀರಿ? ಇವು ನಿಮಗೆ ಬಿಜೆಪಿ ಪರ ವಾಸನೆ ಇದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ನೀವೂ ಒಳಗೊಂಡಂತೆ ಮೋದಿಯ ಹಿಂಬಾಲಕರೆಲ್ಲರೂ ಅವರ ಮೋಡಿಗೆ ಸೈ ಅನ್ನಿ. ಅಭ್ಯಂತರವಿಲ್ಲ. ಮುಗ್ಧ ಕ.ಪ್ರ. ಓದುಗರನ್ನೇಕೆ ಓಲೈಸುತ್ತೀರಿ? ಗೋಧ್ರಾ, ಅಷ್ಟು ಸುಲಭವಾಗಿ ಮರೆಯಲು ಆಗಲ್ಲ. ನಿಮ್ಮನ್ನು ಪ್ರಶ್ನಿಸೋ ಹಕ್ಕು ಕನ್ನಡಪ್ರಭ ಓದುಗನಾದ ನನಗಿದೆಯೇ? ಖಂಡಿತ ಇಲ್ಲಾ. ಏಕೆಂದರೆ ತಾವು ಪತ್ರಕರ್ತರು, ಭಾರೀ ಬೇಡಿಕೆ ಇರೋ ಅಂಕಣಕಾರರು. ಸಂಪಾದಕರು ಇಂತಹ ಪ್ರಕಟಣೆಗಳ ಬಗ್ಗೆ ಚಿಂತಿಸಬೇಕಾದ ಕಾಲ ಬಂದಿದೆ.
-ಡಿ. ರಾಧಾಕೃಷ್ಣ, 110/7ನೇ ಅಡ್ಡರಸ್ತೆ,
ರಾಘವೇಂದ್ರ ಬಡಾವಣೆ, ಮೈಸೂರು-19.
ಪ್ರಣತೀ! ನೀನೇಕೆ ಓದುಗರನ್ನು ಕಾಡುತೀ...? ನೀನು ಯಾರೆಂದು ತಿಳಿಸಿದ್ದರೆ ಪಾಪ, ಓದುಗರೊಬ್ಬರು (ಆಚಾರ್ಯ) ನಿನಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರಲಿಲ್ಲ. ಅಕಸ್ಮಾತ್ ನೀನು 'ಕಾಲ್ಪನಿಕ' ಸುಂದರಿ ಆಗಿದ್ದರೆ ನಿಜ ರೂಪ ತೋರಬಾರದೇ? ಸಂಪಾದಕರೇ, ಏನೇ ಬರೆದ್ರೂ ಪ್ರಕಟಿಸ್ತೀವಿ ಅಂತ ಏನೆಲ್ಲಾ ಬರೀಬೇಡಿ ಅನ್ನುವ ನೀವು ಪ್ರಣತಿ ಬಗ್ಗೆ ಓದುಗ ಮಹಾಶಯನ ಪ್ರೇಮಪತ್ರ ಪ್ರಕಟಿಸಿದ್ದೀರಲ್ಲ...? ಇಂತಹ ಪತ್ರಗಳಿಗೆ ಖಂಡಿತಾ ಅವಕಾಶ ಬೇಡ. ಆರೋಗ್ಯಕರ, ಸದಭಿರುಚಿಯ ವಿಚಾರ ವಿನಿಮಯ ಪತ್ರಗಳಿಗೆ ಈ ಅಂಕಣ ಮೀಸಲಾಗಿಡಿ ಪ್ಲೀಸ್...
-ಬೆಳ್ಳಾವೆ ರಮೇಶ್, ಬನಶಂಕರಿ, ಬೆಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

