ಒಂದು ಸೆಮಿನಾರ್ನಲ್ಲಿ ಹದಿನೈದಿಪ್ಪತ್ತು ಮಹಿಳೆಯರು ಸೇರಿ ಹರಟೆ ಹೊಡೆಯುತ್ತಿದ್ದರು. ಮಾತಿಗೆ ಮಾತು ಬೆಳೆದು ಅವರೆಲ್ಲ ಒಂದು ವಿಷಯದ ಬಗ್ಗೆ ಚರ್ಚಿಸಲಾರಂಭಿಸಿದರು. ಅದೇನೆಂದರೆ ತಮ್ಮ ತಮ್ಮ ಗಂಡಂದಿರ ಜತೆ ಪ್ರೀತಿಯಿಂದ ಸಂಸಾರ ಮಾಡೋದು ಹೇಗೆ?
ಆ ಪೈಕಿ ಒಬ್ಬ ಮಹಿಳೆ ಜೋರು ದನಿಯಲ್ಲಿ, 'ನಿಮ್ಮ ಪೈಕಿ ಎಷ್ಟು ಜನ ನಿಮ್ಮ ಗಂಡಂದಿರನ್ನು ಪ್ರೀತಿಸುತ್ತೀರಿ?' ಎಂದು ಕೇಳಿದಳು. ಎಲ್ಲ ಮಹಿಳೆಯರೂ ಕೈ ಎತ್ತಿ 'ನಾನು ನನ್ನ ಗಂಡನನ್ನು ಪ್ರೀತಿಸುತ್ತೇನೆ' ಎಂದು ಗಟ್ಟಿದನಿಯಲ್ಲಿ ಹೇಳಿದರು.
ಅದೇ ಮಹಿಳೆ ಕೇಳಿದಳು- 'ಐ ಲವ್ ಯು ಅಂತ ನೀವು ನಿಮ್ಮ ನಿಮ್ಮ ಗಂಡಂದಿರಿಗೆ ಹೇಳಿದ್ದು ಯಾವಾಗ? ನಿಮಗೆ ನೆನಪಿದೆಯಾ? ಹೇಳ್ರಿ'
ಅದಕ್ಕೆ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಕೆಲವರು 'ಇಂದು', ಇನ್ನು ಕೆಲವರು 'ಎರಡು ದಿನಗಳ ಹಿಂದೆ', ಮತ್ತೆ ಕೆಲವರು ನೆನಪಿಲ್ಲ'...ಹೀಗೆ ತರೇಹವಾರಿ ಉತ್ತರ ನೀಡಿದರು. ಅದಕ್ಕೆ ಆ ಮಹಿಳೆ ಹೇಳಿದಳು-'ಒಂದು ಕೆಲಸ ಮಾಡಿ. ಈಗ ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ನಿಂದ ನಿಮ್ಮ ನಿಮ್ಮ ಗಂಡಂದಿರಿಗೆ 'ಹಾಯ್ ಸ್ವೀಟ್ ಹಾರ್ಟ್, ಐ ಲವ್ ಯು' ಎಂದು ಎಸ್ಸೆಮ್ಮೆಸ್ ಕಳಿಸಿ'.
ಎಲ್ಲರೂ ತಟ್ಟನೆ 'ಹಾಯ್ ಸ್ವೀಟ್ ಹಾರ್ಟ್, ಐ ಲವ್ ಯು' ಎಂದು ಟೈಪ್ ಮಾಡಿ ಎಸ್ಸೆಮ್ಮೆಸ್ ಕಳಿಸಿದರು. ಮರುಗಳಿಗೆಯಲ್ಲೇ ಅವರವರ ಗಂಡಂದಿರಿಂದ ಎಲ್ಲರಿಗೂ ಉತ್ತರ ಬಂತು. ಆಗ ಆ ಮಹಿಳೆ ಹೇಳಿದಳು-'ದಯವಿಟ್ಟು ಆ ಮೆಸೇಜನ್ನು ನೀವೇ ಓದಬೇಡಿ. ಅದರ ಬದಲು ನಿಮ್ಮ ನಿಮ್ಮ ಮೊಬೈಲ್ನ್ನು ಎಕ್ಸ್ಚೇಂಜ್ ಮಾಡಿಕೊಳ್ಳಿ. ಆನಂತರ ಬಂದ ಮೆಸೇಜನ್ನು ಜೋರಾಗಿ ಓದಿ ಹೇಳಿ.'
ಆ ಮಹಿಳಾಮಣಿಗಳಿಗೆ ಗಂಡಂದಿರಿಂದ ಬಂದ ಕೆಲವು ಎಸ್ಸೆಮ್ಮೆಸ್ಗಳು:
ನನ್ನ ಮಕ್ಕಳ ತಾಯಿಯೇ, ನಿನಗೆ ಹುಷಾರಿಲ್ವಾ?
ಏನಾಯ್ತು? ಪುನಃ ಕಾರನ್ನು ಗುದ್ದಿದೆಯಾ?
ನೀನು ಏನು ಹೇಳ್ತಾ ಇದೀಯಾ, ನಂಗೆ ಅರ್ಥ ಆಗ್ತಿಲ್ಲ!
ನಿನಗೆ ಏನಾಯ್ತು? ಮೈ ಹುಷಾರಿದೆ ತಾನೆ?
ಈ ಸಲ ನಾನು ನಿನ್ನನ್ನು ಬಿಡೊಲ್ಲ, ತಮಾಷೆ ಬೇಡ!
? ! ? ! ???
ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು, ಸುತ್ತಿ ಬಳಸಿ ಮಾತಾಡಬೇಡ.
ನಾನೇನು ಕನಸು ಕಾಣ್ತಾ ಇಲ್ಲ ತಾನೆ?
ನಿಜ ಹೇಳು ಈ ಮೆಸೇಜನ್ನು ಯಾರಿಗೆ ಕಳಿಸಬೇಕು ಅಂತ ಅಂದುಕೊಂಡಿದ್ದೆ?
ಎಷ್ಟು ಸಲ ಹೇಳಬೇಕು ನಿಂಗೆ, ಜಾಸ್ತಿ ಕುಡಿಬೇಡ ಅಂತ!
ತಪ್ಪಾಗಿ ನನಗೆ ಬಂದಿಲ್ಲ ತಾನೆ?
ಏನ್ ಸಮಾಚಾರ? ಅಮ್ಮಾವ್ರು ಬಹಳ ಮೂಡಿನಲ್ಲಿ ಇರುವಂತಿದೆಯಲ್ಲ!
ಇಪ್ಪತ್ತು ವರ್ಷಗಳ ಹಿಂದೆ ಕೇಳಿದ ಮಾತು ಈಗ ಹೇಗೆ ಪ್ರಸಾರವಾಯ್ತು ಅಂತ ಆಶ್ಚರ್ಯವಾಗ್ತಿದೆ!
ಬದಲಾವಣೆ ತರುವ ಕೆಲಸ
ಅದು ಬೆಳಗಿನ ಒಂಭತ್ತು ಗಂಟೆಯ ಹೊತ್ತು. ಸಮುದ್ರ ತೀರದಲ್ಲಿ ಆ ಹೊತ್ತಿನಲ್ಲಿಯೇ ಸುಡು ಬಿಸಿಲಿತ್ತು. ಕೆಲವರು, ಆ ಬಿಸಿಲಿನಲ್ಲೂ ವಾಕಿಂಗ್ ಹೊರಟಿದ್ದರು. ಅವತ್ತು ಉಳಿದೆಲ್ಲ ದಿನಗಳಿಗಿಂತ ಗಾಳಿಯ ರಭಸ ಸ್ವಲ್ಪ ಜಾಸ್ತಿ ಇತ್ತು. ಹಾಗಾಗಿ ಅಲೆಗಳೂ ವೇಗವಾಗಿಯೇ ಬಂದು ವಾಪಸ್ ಹೋಗುತ್ತಿದ್ದವು. ಹೀಗೆ, ರೊಯ್ಯನೆ ನುಗ್ಗಿ ಬರುವ ಅಲೆಗಳೊಂದಿಗೆ ನೂರರ ಸಂಖ್ಯೆಯಲ್ಲಿ ಸಣ್ಣ ಗಾತ್ರದ ಮೀನುಗಳೂ ದಡಕ್ಕೆ ಬಂದು ಬೀಳುತ್ತಿದ್ದವು. ಕೆಲವು ಮೀನುಗಳು ವಾಪಸ್ ಹೋಗುವ ಅಲೆಗಳೊಂದಿಗೇ ಸಮುದ್ರ ಸೇರಿಕೊಳ್ಳುತ್ತಿದ್ದವು. ಮತ್ತೆ ಕೆಲವು ಅಲೆಗಳ ವೇಗಕ್ಕೆ ಸಿಕ್ಕಿಕೊಳ್ಳದೆ ದಡದಲ್ಲಿಯೇ ಉಳಿದುಬಿಡುತ್ತಿದ್ದವು. ಹೀಗೆ ಉಳಿದ ಮೀನುಗಳು ಸೂರ್ಯನ ಶಾಖ ತಡೆಯಲಾಗದೆ ವಿಲವಿಲನೆ ಒದ್ದಾಡುತ್ತಿದ್ದವು. ಬೇರೊಂದು ಅಲೆ ಬಂದು ಹೊತ್ತೊಯ್ಯದಿದ್ದರೆ, ಕೆಲವೇ ಕ್ಷಣಗಳಲ್ಲಿ ಜೀವ ಬಿಡುತ್ತಿದ್ದವು.
ಸಮುದ್ರ ಅಂದ ಮೇಲೆ ವಿವರಿಸಿ ಹೇಳಬೇಕಿಲ್ಲ ತಾನೆ? ಅಲ್ಲಿ ಪ್ರತಿ ನಿಮಿಷಕ್ಕೂ ಒಂದೊಂದು ಅಲೆ ಬರುತ್ತಿತ್ತು. ಪ್ರತಿ ಸಂದರ್ಭದಲ್ಲೂ ಮೀನುಗಳೂ ದಡಕ್ಕೆ ಬರುತ್ತಿದ್ದವು. ಅಲೆಯೊಂದಿಗೆ ಮರಳಿ ಸಮುದ್ರ ತಲುಪಲಾಗದ ದುರಾದೃಷ್ಟವಂತ ಮೀನುಗಳು ನಾಲ್ಕಾರು ನಿಮಿಷ ಮರಳ ಮೇಲೆ ಒದ್ದಾಡಿ ಪ್ರಾಣ ಬಿಡುತ್ತಿದ್ದವು.
ಅದೇ ಸಮುದ್ರ ತೀರದಲ್ಲಿ ಒಬ್ಬ ಅಸಾಮಿಯಿದ್ದ. ಆತ, ಹೀಗೆ ದಡಕ್ಕೆ ಬಂದು ಬೀಳುವ ಮೀನುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅವು ಒದ್ದಾಡಲು ಆರಂಭಿಸುವ ಮೊದಲೇ ಅಲ್ಲಿಗೆ ದಡಬಡಿಸಿ ಹೋಗಿ, ಮೀನನ್ನು ಛಕ್ಕನೆ ಎತ್ತಿಕೊಂಡು ಸಮುದ್ರಕ್ಕೆ ಎಸೆಯುತ್ತಿದ್ದ. ಈ ಕೆಲಸವನ್ನು ಆತ ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದ.
ವಾಕಿಂಗ್ ಮಾಡುವ ನೆಪದಲ್ಲಿ ಇದನ್ನೆಲ್ಲ ಗಮನಿಸುತ್ತಿದ್ದ ಮತ್ತೊಬ್ಬನಿಗೆ ಇದನ್ನು ಕಂಡು ಸೋಜಿಗ ಅನ್ನಿಸಿತು. ಅಷ್ಟೇ ಅಲ್ಲ, ಹೀಗೆ ಮೀನುಗಳನ್ನು ಹಿಡಿದು ಮತ್ತೆ ಸಮುದ್ರಕ್ಕೆ ಎಸೆಯುವುದು ಮೂರ್ಖತನ ಅನ್ನಿಸಿತು. ಆತ ಸರಸರನೆ ಹೋಗಿ ಎದುರು ನಿಂತು ಕೇಳಿದ: ನಾನೂ ತುಂಬಾ ಹೊತ್ತಿನಿಂದ ನೋಡ್ತಾ ಇದೀನಿ. ನೀವು ದಾಪುಗಾಲಿನಲ್ಲಿ ತೀರದ ಉದ್ದಕ್ಕೂ ಓಡಾಡ್ತಾ ಇದೀರ. ಒಂದೊಂದೇ ಮೀನು ಹಿಡಿದು ಸಮುದ್ರಕ್ಕೆ ಎಸೀತಾ ಇದೀರ. ಇದೆಂಥ ಹುಚ್ಚು ಕಣ್ರೀ ನಿಮ್ದು? ಹೇಳಿ ಕೇಳಿ ಇದು ಸಮುದ್ರ. ನಿಮಿಷಕ್ಕೊಂದು ಅಲೆ ಬರುತ್ತೆ. ಪ್ರತಿಯೊಂದು ಅಲೆಯ ಜೊತೆಗೂ ಹತ್ತು ಮೀನು ಬರ್ತವೆ ಅಂತ ಅಂದಾಜು ಮಾಡಿಕೊಂಡ್ರೂ, ನಾಲ್ಕು ಮೀನಾದ್ರೂ ದಡದಲ್ಲಿ ಉಳಿದು ಹೋಗ್ತವೆ. ನೀವು ಐದು ನಿಮಿಷದ ಅವಧಿಯಲ್ಲಿ ಒಂದೋ, ಎರಡೋ ಮೀನುಗಳನ್ನು ಸಮುದ್ರಕ್ಕೆ ಎಸೆಯಬಹುದು ಅಷ್ಟೆ. ಇದರಿಂದ 'ಮಹಾ' ಅನ್ನುವಂಥ ಯಾವ ಬದಲಾವಣೆಯೂ ಆಗೋದಿಲ್ಲ. ನಿಮ್ಮ ಈ ಕೆಲಸದಿಂದ ಏನೂ ಪ್ರಯೋಜನವಿಲ್ಲ. ಈ ಕೆಲಸವನ್ನು ಯಾರೂ ಗುರ್ತಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮೀನುಗಳ ವಂಶವನ್ನೇ ಉಳಿಸುವ ಕೆಲಸವೂ ನಿಮ್ಮಿಂದ ಸಾಧ್ಯವಾಗೋದಿಲ್ಲ. ಹಾಗಿರುವಾಗ ಯಾಕೆ ಈ ಕೆಲಸಕ್ಕೆ ಕೈ ಹಾಕಿದ್ರಿ? ಇದರಿಂದ ಏನು ಉಪಯೋಗ ಇದೆ? ನಿಮ್ಮ ಈ ಕೆಲಸದಿಂದ ಅದ್ಯಾವ ಮಹಾನ್ ಬದಲಾವಣೆ ಆಗಿಬಿಡ್ತದೆ? ನೀವು ಅದೆಷ್ಟೆ ಬಿರುಸಿನಿಂದ ಮೀನುಗಳನ್ನು ಸಮುದ್ರಕ್ಕೆ ಎಸೆದರೂ ಸಾವಿರಕ್ಕೂ ಹೆಚ್ಚು ಮೀನುಗಳು ನಿಮ್ಮ ಕಣ್ಣೆದುರೇ ಸತ್ತು ಹೋಗ್ತವಲ್ಲ ಸಾರ್... ಅದಕ್ಕೆ ಏನಂತೀರಿ?'
ತಿವಿಯುವಂತಿದ್ದ ಈ ಪ್ರಶ್ನೆಗೆ ಮೀನು ಎಸೆಯುತ್ತಿದ್ದ ವ್ಯಕ್ತಿ, ಅದೇ ವೇಗದಲ್ಲಿ ತನ್ನ ಕೆಲಸ ಮುಂದುವರಿಸುತ್ತಾ ಹೇಳಿದ: 'ನನ್ನ ಕಣ್ಮುಂದೆಯೇ ನೂರಾರು ಮೀನುಗಳು ಸಾಯ್ತಾ ಇರಬಹುದು. ಆದರೆ, ಕಳೆದ ಒಂದು ಗಂಟೆಯ ಅವಧಿಯಲ್ಲಿ ಐವತ್ತಕ್ಕೂ ಹೆಚ್ಚು ಮೀನುಗಳನ್ನು ನಾನು ಬದುಕಿಸಿದ್ದೀನಿ. ಈ ಐವತ್ತು ಮೀನುಗಳೇ ಐದು ಸಾವಿರ ಹೊಸ ಮೀನುಗಳ ಸೃಷ್ಟಿಗೆ ಕಾರಣವಾಗಬಲ್ಲವು. ನನ್ನ ಕೆಲಸದಿಂದ ಆಗುವ 'ಮಹಾ' ಬದಲಾವಣೆ ಇದೇ. ಇದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇಕಾಗಿಲ್ಲ...'
ಹುಷಾರಾಗಿ ಯೋಚಿಸಿ ನೋಡಿ: ಮೀನುಗಳನ್ನು ಬದುಕಿಸುವ ಕೆಲಸ ಮಾಡುತ್ತಿದ್ದನಲ್ಲ; ಅಂಥದೇ ಜಾಯಮಾನದ ಹಲವರು ನಮಗೆ ನಿತ್ಯದ ಬದುಕಿನಲ್ಲಿ ಆಗಿಂದಾಗ್ಗೆ ಎದುರಾಗುತ್ತಿರುತ್ತಾರೆ. ಆದರೆ ನಾವು - 'ಅಯ್ಯೋ, ಅವರಿಂದ ಏನ್ ಮಹಾ ಬದಲಾವಣೆ ಆಗುತ್ತೆ ಬಿಡು' ಎಂಬ ಉಡಾಫೆಯ ಮಾತಾಡಿ ಹೆಜ್ಜೆ ಮುಂದಿಟ್ಟಿರುತ್ತೇವೆ.
ಇನ್ನು ಮುಂದಾದರೂ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಒಂದು ಪುಟ್ಟ ಬದಲಾವಣೆ ತರುವ ಕೆಲಸದಲ್ಲಿ ತೊಡಗಿಸಿಕೊಳ್ಳೋಣ. ಅಲ್ವೇ?
ಹೃದಯ-ಕಣ್ಣುಗಳ ಸಂವಾದ
ಅದೊಂದು ಸಂದರ್ಭದಲ್ಲಿ ಹೃದಯ ಹಾಗೂ ಕಣ್ಣುಗಳು ಸವಾಲ್-ಜವಾಬ್ ಮಾದರಿಯ ಮಾತುಕತೆಯಲ್ಲಿ ತೊಡಗಿದ್ದವು. ಆಗ ಹೃದಯ ಹೇಳಿತು: 'ನಿತ್ಯದ ಜೀವನದಲ್ಲಿ ಏನೇನೆಲ್ಲಾ ಕಾಣಿಸುತ್ತೆ. ಹಾಗಂತ ಕಂಡದ್ದನ್ನೆಲ್ಲ ನೋಡಬೇಡ. ಅದರಲ್ಲೂ ನೋವಿನ ಸಂದರ್ಭಗಳನ್ನಂತೂ ನೋಡಲೇ ಬೇಡ. ಏಕೆಂದರೆ, ಅಂಥ ದೃಶ್ಯಗಳನ್ನೇ ನೀನು ಜಾಸ್ತಿ ನೋಡಿದರೆ, ಮನಸ್ಸಿಗೆ ವೇದನೆಯಾಗುತ್ತೆ. ಮರುಕ್ಷಣವೇ ಹೃದಯದ ಬಡಿತದಲ್ಲಿ ಏರುಪೇರಾಗಿ ನನಗೆ ತುಂಬಾ ತೊಂದರೆ ಆಗುತ್ತೆ...'
'ಇದಕ್ಕೆ ಉತ್ತರವೆಂಬಂತೆ ಕಣ್ಣು ಹೇಳಿತು: 'ನೀನೂ ಅಷ್ಟೆ. ಯಾವುದೇ ವಿಷಯ ಆದ್ರೂ ಪರವಾಗಿಲ್ಲ. ಅದನ್ನು ಜಾಸ್ತಿ ಹಚ್ಕೋಬೇಡ. ನೀನೇನಾದ್ರೂ ವಿಪರೀತ ಸಂಕಟಕ್ಕೆ ಒಳಗಾದರೆ ನಾನು ಒಂದೇ ಸಮನೆ ಕಣ್ಣೀರು ಹರಿಸಿ, ಹರಿಸಿ ಎರಡೂ ಕಡೆ ನೋವು ಬರುತ್ತೆ...'
ಈ ಪ್ರಶ್ನೆಗೆ ಹೇಗೆ ಉತ್ತರ ಹೇಳೋದು?
ಮನೇಲಿದ್ದುದು ತುಂಟ ಮಗು. ಅದರ ತುಂಟತನದ ಬಗ್ಗೆ ಶಾಲೆಯಿಂದ ದಿನವೂ ದೂರುಗಳು ಬರುತ್ತಿದ್ದವು. ಆಕಸ್ಮಿಕವಾಗಿ ಪರಿಚಯದವರ, ಬಂಧುಗಳ ಮನೆಗೆ ಹೋದರೆ, ಈ ಮಗು ಅಲ್ಲಿಯೂ ಏನಾದರೂ ತರಲೆ ಮಾಡಿರುತ್ತಿತ್ತು. ಅದನ್ನು ಕಂಡವರು- ಮಕ್ಕಳು ಇಷ್ಟೊಂದು ತುಂಟರಾಗಿದ್ರೆ ಕಷ್ಟ ಎನ್ನುತ್ತಿದ್ದರು. ಇಂಥ ಮಾತುಗಳನ್ನು ಕೇಳಿ ಕೇಳಿ ಆ ಮಗುವಿನ ತಾಯಿಗೆ ತಲೆ ಚಿಟ್ಟು ಹಿಡಿದಿತ್ತು. ಆದರೆ ಮಗುವನ್ನು ಸರಿದಾರಿಗೆ ತರುವುದು ಹೇಗೆಂದೇ ಆಕೆಗೆ ಅರ್ಥವಾಗಿರಲಿಲ್ಲ.
ಹೀಗಿರುವಾಗಲೇ ಅದೊಂದು ಭಾನುವಾರ ಅಮ್ಮನ ಮುಂದೆ ನಿಂತ ಮಗು ಕೇಳಿತು: 'ಅಮ್ಮ ಅಮ್ಮ, ನಿನ್ನ ತಲೇಲಿ ಅಲ್ಲೊಂದು ಇಲ್ಲೊಂದು ಬಿಳೀ ಕೂದಲು ಬಂದಿದೆಯಲ್ಲ ಯಾಕೆ?' ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಅಮ್ಮನಿಗೆ ಒಂದು ಐಡಿಯಾ ಬಂತು. ಮಗುವಿಗೆ ಬುದ್ಧಿ ಹೇಳಲು ಇದೇ ಒಳ್ಳೆಯ ಸಮಯ ಎಂದುಕೊಂಡ ಆಕೆ ಹೇಳಿದಳು: ಹೀಗೆಲ್ಲಾ ಆಗೋಕೆ ನೀನೇ ಕಾರಣ ಕಂದಾ. ನೀನು ಒಂದೊಂದು ತಪ್ಪು ಮಾಡ್ತೀಯಲ್ಲ. ಅದರ ನೆನಪಿಗೆ ದೇವರು ನನ್ನ ತಲೇಲಿ ಒಂದು ಬಿಳಿಯ ಕೂದಲು ಬರೋ ಹಾಗೆ ಮಾಡ್ತಾನೆ...'
ಅಮ್ಮನ ಮಾತು ಮುಗಿದು ಎರಡು ನಿಮಿಷ ಕಳೆವವರೆಗೂ ಸುಮ್ಮನೆ ನಿಂತಿದ್ದ ಆ ಮಗು ನಂತರ ತುಂಬಾ ಅಚ್ಚರಿಯಿಂದ ಕೇಳಿತು: 'ಅಮ್ಮ ಅಮ್ಮ, ಅಜ್ಜಿಯ ತಲೆಯ ತುಂಬಾ ಬರೀ ಬಿಳಿಯ ಕೂದಲುಗಳೇ ಇವೆ. ಹಾಗಾದ್ರೆ ನೀನು ಅಷ್ಟೊಂದು ತಪ್ಪು ಮಾಡಿದೀಯಾ?'
- ವಿಶ್ವೇಶ್ವರ ಭಟ್