ಎಕ್ಕಾ, ರಾಜಾ, ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆ..! ಈ ರೀತಿ ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಪ್ರಹ್ಲಾದ ಜೋಶಿ ಹಾಡಲಿಲ್ಲ ಅಷ್ಟೇ. ಆದರೆ ಹೇಳಿದ ರೀತಿ ಅದೇ ಇತ್ತು. ಕಳೆದ ವಾರ ಮೈಸೂರಿನಲ್ಲಿ ಬಿಜೆಪಿಯ 'ವಿಜಯ ಸಂಕಲ್ಪ ಯಾತ್ರೆ' ಆಯೋಜಿಸಲಾಗಿತ್ತು. ಮೊದಲಿಗೆ ಮಾತನಾಡಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್. ಅವರ ಭಾಷಣದಲ್ಲಿ ಕ್ರಿಕೆಟ್ ಪ್ರಸ್ತಾಪ ಬರಲೇಬೇಕು. ಸರಿ ಮಾತಿಗೆ ಶುರುವಿಟ್ಟುಕೊಂಡರು. ಸಿದ್ದರಾಮಯ್ಯ ಅಲ್ಲ, ಸಿದ್ದುಗೆ ಸವಾಲ್. ಟಿ20 ಮ್ಯಾಚ್ ಶುರುವಾಗುತ್ತಿದೆ. ನಮ್ಮ ಪಕ್ಷದ ಕ್ಯಾಪ್ಟನ್ ಜಗದೀಶ ಶೆಟ್ಟರ್ ಅವರು ಟಾಸ್ ಮಾಡಲು ಸಜ್ಜಾಗಿ ನಿಂತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಕ್ಯಾಪ್ಟನ್ ಇಲ್ಲ. ಕಾಂಗ್ರೆಸ್ನವರು ಮ್ಯಾಚ್ ಮುಗಿದ ಮೇಲೆ ಕ್ಯಾಪ್ಟನ್ ಯಾರೆಂದು ಹೇಳುತ್ತೇವೆ ಎನ್ನುತ್ತಿದ್ದಾರೆ ಅಂದ್ರು. ಪ್ರಹ್ಲಾದ ಜೋಶಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿದ್ದರಾಮಯ್ಯ ರಾಜಾ ಅಂದ್ರೆ, ಮಲ್ಲಿಕಾರ್ಜುನ ಖರ್ಗೆ ರಾಣಿ ಅಂತಾರೆ ಅಂದಾಗ ಸಭೆಯಲ್ಲಿ ನಗುವಿನ ಅಲೆ. ಜತೆಗೆ ಹಿಡಿ ಮಣ್ಣು ಯಾರ ಬಾಯಿಗೆ ಎಂಬ ಗುಸುಗುಸು ಕೇಳಿಬಂತು!
ನಾನು 'ಏಕೈಕ ವೀರ' ಪಟ್ಟಣಶೆಟ್ಟಿ ಮಾತಾಡುದ್ರಿ!
ಚುನಾವಣೆಯ ಸೋಲು-ಗೆಲವು ಆಯಾ ಸ್ಪರ್ಧಾಳುಗಳನ್ನಷ್ಟೇ ಅಲ್ಲ ಆ ಚುನಾವಣೆ ಹೊಣೆ ಹೊತ್ತವರನ್ನೂ ಕಾಡುತ್ತದೆ. ಅಂಥ ನೋವು ಬಾದಾಮಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರಿಗೂ ಬಾಧಿಸುತ್ತಿದೆ. ಇತ್ತೀಚೆಗೆ ನಡೆದ 'ಕಿರು ಕದನ'ದಲ್ಲಿ ಬಾದಾಮಿ ಪುರಸಭೆಯ 23 ಸ್ಥಾನಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ 1 ಸ್ಥಾನ. ಬಳಿಕ ಇದರ ಹೊಣೆ ಹೊತ್ತ ಪಟ್ಟಣಶೆಟ್ಟಿ ಅವರು ಆತ್ಮಾವಲೋಕನ ಸಭೆ ಕರೆದರು. ಅಲ್ಲಿ ಕಾರ್ಯಕರ್ತರು, ಮುಖಂಡರು ಪಟ್ಟಣಶೆಟ್ಟಿ ಅವರು 'ಏಕೈಕ ವೀರ', 'ಚಾಲುಕ್ಯ ಚಕ್ರವರ್ತಿ' ಎಂದು ಲೇವಡಿ ಮಾಡಿದರು. ಇದನ್ನೇ ತಲೆಯಲ್ಲಿಟ್ಟುಕೊಂಡ ಪಟ್ಟಣಶೆಟ್ಟಿ ಅವರು ಮನೆಯ ಲ್ಯಾಂಡ್ ಫೋನ್ಗೆ ಬರುವ ಕರೆಗಳಿಗೆ 'ನಾವ್ರೀ ಏಕೈಕ ವೀರ್ರೂ ಮಾತಾಡೋದು' ಎಂದು ಪರಿಚಯಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಯ ಸೋಲು ಪಟ್ಟಣಶೆಟ್ಟಿ ಅವರನ್ನು ಎಷ್ಟೊಂದು ಕಂಗೆಡಿಸಿದೆ ನೋಡಿ!
ಫೋಟೋಗಾಗಿ ಎರಡು ಬಾರಿ ಬಜೆಟ್ ಪುಸ್ತಕ ಓದಿದ ಕಾಪುಸಿ!
ಇತ್ತೀಚೆಗೆ ಮೈಸೂರು ಜಿಪಂ ಬಜೆಟ್ ಮಂಡನೆಯ ಸಭೆ ಇತ್ತು. ಅಧ್ಯಕ್ಷರು ಕಾ.ಪು. ಸಿದ್ದವೀರಪ್ಪ. ಇವ್ರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಸಹೋದರ. 46 ಸ್ಥಾನಗಳಲ್ಲಿ ಬಿಜೆಪಿ ಕೇವಲ 8 ಸೀಟು ಗೆದ್ದರೂ ಜೆಡಿಎಸ್ ಜತೆಗಿನ ಮೈತ್ರಿಯಿಂದ ಅಧ್ಯಕ್ಷರಾಗಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷರಾದವರು ಬಜೆಟ್ ಮಂಡನೆಗೆ ಸಿದ್ಧಪಡಿಸಿದ ಪೂರ್ತಿ ಪುಸ್ತಕ ಓದುತ್ತಾರೆ. ಆದರೆ ಸಿದ್ದವೀರಪ್ಪ ಅದರ ಸಹವಾಸವೇ ಬೇಡ ಅಂತಾ 2 ಪುಟಗಳ ಮುಖ್ಯಾಂಶಗಳ ಹೇಳಿಕೆಯನ್ನು ಓದಿ ಬಜೆಟ್ ಮಂಡನೆಯಾಗಿದೆ. ಸದಸ್ಯರಿಗೆ ನೀಡಿರುವ ಪುಸ್ತಕ ಓದಿ ಅನುಮೋದಿಸಿ. ಅಲ್ಲಿಯವರೆಗೆ ಕಾಫಿ- ಸಿಂಡಿ ತಕೊಳಿ ಎಂದು ಸಭೆಯನ್ನು ಮುಂದೂಡಿದರು. ಬಜೆಟ್ ಸಭೆಯಲ್ಲಿ ಪುಸ್ತಕ ಓದುವುದು ವಿಳಂಬವಾಗುತ್ತದೆ. ಯಾವಾಗಬೇಕಾದರೂ ಫೋಟೋ ತೆಗೆಯಬಹುದು ಎಂದು ಪತ್ರಿಕಾ ಛಾಯಾಗ್ರಾಹಕರು ವಿಳಂಬವಾಗಿ ಬಂದರು. ಆ ವೇಳೆಗೆ ಕಾಫಿ- ತಿಂಡಿ ನಡೆದಿತ್ತು. ಇದರಿಂದ ಪೇಚಿಗೀಡಾದ ಛಾಯಾಗ್ರಾಹಕರು ಸಿದ್ದವೀರಪ್ಪಗೆ ದುಂಬಾಲು ಬಿದ್ದು, ಮತ್ತೆ ಕೈಲಿ ಬಜೆಟ್ ಪುಸ್ತಕ ಹಿಡಿದು ನಿಲ್ಲಿಸಿ ಫೋಟೋ ತೆಗೆದರು. ಆಗ ಕಾಂಗ್ರೆಸ್ ಸದಸ್ಯರು ಮರಳಿ ಯತ್ನವ ಮಾಡು... ಎಂದು ಕೋರಸ್ನಲ್ಲಿ ಹಾಡಿದರು. ಆಗ ಸಿದ್ದವೀರಪ್ಪ ಎಂದಿನಂತೆ ತಮ್ಮ ನಂಜನಗೂಡು ಸ್ಟೈಲ್ ಕನ್ನಡದಲ್ಲಿ ಅಯ್, ಪದೇ ಪದೇ ಮಾಡ್ಬಾರ್ದು ಸುಮ್ಕಿರ್ರಿ ಅಂದ್ರು.
ಶೆಟ್ಟರ್ಗೆ ರಮಾನಾಥ ರೈಗಳ ನಿ'ವೇದನೆ' ಪತ್ರ!
ಮಂಗಳೂರಲ್ಲಿ ಲೇಡಿಗೋಷನ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹೊಸ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ ತೋರಿದರು. ಏಕೆಂದರೆ ಲೇಡಿಗೋಷನ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ಒಎನ್ಜಿಸಿ ಎಂಆರ್ಪಿಎಲ್ ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ವ್ಯಾಪ್ತಿಯಲ್ಲಿದೆ. ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ ಭಟ್ಟರು ಕಳೆದ 5 ವರ್ಷದಿಂದ ಹೋರಾಟ ನಡೆಸಿ ಎಂಆರ್ಪಿಎಲ್ ಬಳಿ ಮಾತನಾಡಿ ದೇಣಿಗೆ ಗಿಟ್ಟಿಸಿಕೊಳ್ಳುವಲ್ಲಿ ಶ್ರಮ ವಹಿಸಿದ್ದರು. ಹೀಗಾಗಿ ಕ್ರೆಡಿಟ್ ಬಗ್ಗೆ ಸಮಾರಂಭದಲ್ಲಿ ಪರೋಕ್ಷವಾಗಿ ಈ ರೀತಿ ವ್ಯಕ್ತವಾಯಿತು. ಆದರೆ ಮೈತ್ರಿ ಕಂಡು ಬಂದದ್ದು ಅಂತ್ಯದಲ್ಲಿ! ಮಂಗಳೂರು ಲೇಡಿಗೋಷನ್ ಆಸ್ಪತ್ರೆ ಶಂಕುಸ್ಥಾಪನೆ ಸಮಾರಂಭ ಮುಗಿಯುವ ಹಂತದಲ್ಲಿ ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಬಿ.ರಮಾನಾಥ ರೈ ಮೆಲ್ಲನೆ ಬಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ಗೆ ಒಂದು ಹಾಳೆಯಲ್ಲಿ ಹೆಸರು ಬರೆದು ಕೊಟ್ಟರು. ಚೀಟಿ ನೋಡಿ ಪಕ್ಕದಲ್ಲಿ ಕುಳಿತಿದ್ದ ಉಸ್ತುವಾರಿ ಸಚಿವ ಸಿ.ಟಿ.ರವಿಯ ಹುಬ್ಬು ಮೇಲಕ್ಕೆ ಹೋಯಿತು. ಅರೆರೇ.. ಉಸ್ತುವಾರಿ ಸಚಿವ ನಾನಿರುವಾಗ ಮಾಜಿ ಉಸ್ತುವಾರಿ ಸಚಿವರು ಚೀಟಿ ಏಕೆ ನೀಡಿದರು ಎಂಬ ಪ್ರಶ್ನೆ ಅವರಲ್ಲಿತ್ತು. ಕುತೂಹಲ ತಡೆಯಲಾಗದೆ ರೈಗಳ ಬಳಿ ಪತ್ರಕರ್ತರೊಬ್ಬರು ಕೇಳಿದಾಗ, ರೈ ತುಟಿಬಿಚ್ಚದೆ ಅಲ್ಲಿಂದ ತೆರಳಿದರು. ಶೋಧ ನಡೆಸಿದ ಪತ್ರಕರ್ತನಿಗೆ ತಿಳಿದು ಬಂದದ್ದು ಏನೆಂದರೆ ಚೀಟಿಯಲ್ಲಿದ್ದದ್ದು ಬಂಟ್ವಾಳದ ತಾಲೂಕಿನ ಐವರು ಅಧಿಕಾರಿಗಳ ಹೆಸರು! ಇವರನ್ನೆಲ್ಲ ವರ್ಗಾವಣೆ ಮಾಡಿ ಎಂಬುದು ರೈಗಳ ಮನವಿ! ಕಾಂಗ್ರೆಸ್, ಬಿಜೆಪಿ ಭಾಯಿ, ಭಾಯಿ!!
ಕಾರ್ಯಕ್ರಮದ ಜ್ಯೋತಿ ಬೆಳಗಿಸಲು ಲೈಟರ್!
ಮೈಸೂರಿನ ಹಿರಿಯ ನಾಗರಿಕರ ಮಂಡಳಿಯಲ್ಲಿ ಕಳೆದ ವಾರ ಒಂದು ಕಾರ್ಯಕ್ರಮ ಇತ್ತು. ನಿರೂಪಕರು ಈಗ ಕಾರ್ಯಕ್ರಮ ಉದ್ಘಾಟನೆ, ಅತಿಥಿಗಳಿಂದ ದೀಪ ಬೆಳಗುವಿಕೆ ಅಂದ್ರು. ಅಸಲಿಗೆ ಅಲ್ಲಿ ಕ್ಯಾಂಡಲ್, ಬೆಂಕಿ ಪೊಟ್ಟಣ ಇರಲಿಲ್ಲ. ಸಂಘಟಕರು ಅಲ್ಲೇ ಇದ್ದ ಬೀರುವಿನ ಬೀಗ ತೆಗೆದು, ಮೇಣದ ಬತ್ತಿ, ಬೆಂಕಿ ಪೊಟ್ಟಣಕ್ಕಾಗಿ ಹುಡುಕಾಡ ತೊಡಗಿದರು. ಇದು ಸುಮಾರು ಹೊತ್ತು ನಡೆದಿತ್ತು. ಅವರು ಎಷ್ಟೇ ಹುಡುಕಾಡಿದರೂ ಕೈಗೆ ಮೇಣದ ಬತ್ತಿ, ಬೆಂಕಿ ಪೊಟ್ಟಣ ಸಿಗಲಿಲ್ಲ. ಆಗ ಅಲ್ಲಿದ್ದವರೊಬ್ಬರು ತಮ್ಮ ಬಳಿ ಇದ್ದ ಲೈಟರ್ ಕೊಟ್ಟರು. ಲೈಟರ್ನಿಂದಲೇ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.
-ನಂಬಿರಾಜ್