ಪಕ್ಷಾಂತರಿಗಳಿಗೆ ಪಾಠ ಕಲಿಸುವಿರಾ?
ಅಂತೂ ನಿರೀಕ್ಷೆಯಿಂದ ಕಾಯುತ್ತಿದ್ದ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಇದುವರೆಗೂ ಮುಗುಮ್ಮಾಗಿ ಕುಳಿತಿದ್ದ ಎಲ್ಲಾ ಪಕ್ಷದ ರಾಜಕಾರಣಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದಲೂ ಪ್ರತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಪಟ್ಟಿ ಮಾಡುವಲ್ಲಿ ಪಕ್ಷಗಳ ಮುಖಂಡರ ನಿದ್ದೆಗೆಡಿಸಿದೆ. ಜೊತೆಗೆ ಟಿಕೆಟ್ಗಾಗಿ ಲಾಬಿಯೂ ಜೋರಾಗಿ ನಡೆಯುತ್ತಿದೆ. ಇವೆಲ್ಲದರ ನಡುವೆ ಭಾರಿ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿರುವುದು ರಾಜ್ಯ ರಾಜಕೀಯದ ದಿಕ್ಕು ಎತ್ತ ಕಡೆ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿರುವುದು ಸುಳ್ಳಲ್ಲ. ಇಷ್ಟಕ್ಕೂ ಪಕ್ಷಾಂತರ ಮಾಡುತ್ತಿರುವವರೇನು ನಿಜವಾಗಲೂ ಆಯಾ ಪಕ್ಷದ ತತ್ವ ಸಿದ್ಧಾಂತಕ್ಕೆ ಮೆಚ್ಚಿ ಪಕ್ಷ ಸೇರುತ್ತಿದ್ದಾರಾ? ಅದು ಮಾತ್ರ ಅಕ್ಷರಶಃ ಸುಳ್ಳೇ ಸರಿ. ಇದಕ್ಕೆ ಉದಾಹರಣೆಯೇ ಕಳೆದ ಐದು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತಾವಧಿ.
ಪ್ರಪ್ರಥಮವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಅದಕ್ಕೆ ಅಧಿಕಾರ ಹಿಡಿಯಲು ಬೇಕಾಗಿದ್ದು ಪಕ್ಷೇತರರ ಸಹಕಾರ. ಅವರೂ ಸಹ ಎಲ್ಲರೂ ಎಣಿಸಿದಂತೆಯೇ ಬೆಂಬಲವನ್ನು ನೀಡಿದರು. ಇದು ಸಹಜವೇ. ಯಾವುದೇ ಪಕ್ಷಗಳಿಗೂ ಸೇರದೆ ಪಕ್ಷೇತರರಾಗಿ ಸ್ವಸಾಮರ್ಥ್ಯದಿಂದ ಆರಿಸಿ ಬಂದವರಿಗೆ ಯಾರಿಗೆ ಬೇಕಾದರೂ ಬೆಂಬಲ ನೀಡುವಂತಹ ಸ್ವಾತಂತ್ರ್ಯವಿದೆ. ಅದೇ ಥರಾ ಪಕ್ಷೇತರರು ಸಹ ಬಿಜೆಪಿಗೆ ಬೆಂಬಲ ನೀಡಿದರು. ಇಷ್ಟಿದ್ದರೇ ಸಾಕಿತ್ತು. ಯಾವುದೇ ಗೊಂದಲಗಳಿಲ್ಲದೇ ಸರ್ಕಾರ ನಡೆಸಿಕೊಂಡು ಹೋಗಬಹುದಾಗಿತ್ತು. ಆದರೆ ಯಾವಾಗ ಆಪರೇಷನ್ ಕಮಲ ಎಂಬ ಕೆಟ್ಟ ಪರ್ವ ಪ್ರಾರಂಭವಾಯಿತೋ ಆಗ ನೋಡಿ ಎಲ್ಲಾ ಪಕ್ಷಗಳ ಬುಡಕ್ಕೆ ಬಾಂಬ್ ಬಿದ್ದಿದ್ದು. ಇದ್ಯಾವುದನ್ನೂ ನಿರೀಕ್ಷೆ ಮಾಡದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಿಜೆಪಿ ನೀಡಿದ ಹೊಡೆತಕ್ಕೆ ಥಂಡಾ ಹೊಡೆದುಬಿಟ್ಟವು. ಏನು ಮಾಡಬೇಕೆಂದು ತಿಳಿಯದೇ ಕಂಡಕಂಡಲ್ಲಿ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆದರೆ ಇದ್ಯಾವುದೂ ತನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಬಿಜೆಪಿ ತನ್ನ ಹಳೇ ಚಾಳಿ ಮುಂದುವರೆಸಿತು. ಆಡಳಿತ ಪಕ್ಷವೇ ಇಷ್ಟು ರಾಜಕಾರಣ ಮಾಡುತ್ತಿರುವಾಗ ವಿರೋಧ ಪಕ್ಷಗಳು ಸುಮ್ಮನಿರಲು ಸಾಧ್ಯವಾ? ಅವು ಸಹ ತಮ್ಮ ಸಾಮರ್ಥ್ಯವನ್ನು ತೋರಿಸಿಯೇ ಬಿಟ್ಟವು. ಬಿಜೆಪಿ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ ಬಟಾ ಬಯಲು ಮಾಡಿದವು. ಇದರ ನಂತರದ ಬೆಳವಣಿಗೆಗಳು ಮಾತ್ರ ನಿಜಕ್ಕೂ ಇತಿಹಾಸ. ಕಂಡ ಕಂಡವರ ಮೇಲೆಲ್ಲಾ ಕೇಸ್ಗಳು ಬಿದ್ದವು. ಒಂದಷ್ಟು ಜನ ಜೈಲು ಸೇರಿದರು. ಒಟ್ಟಿನಲ್ಲಿ ಈ ಮಾದರಿ ರಾಜಕೀಯವನ್ನು ನೋಡಿ ವೋಟು ಒತ್ತಿದ ಪ್ರಜೆಗಳು ಮತ್ತು ವೋಟು ಹಾಕದವರು ಬೇಸರಿಸಿದ್ದು ಕಟು ಸತ್ಯವೇ.
ಇಷ್ಟೆಲ್ಲಾ ಗೊಂದಲಗಳ ನಡುವೆ ಈಗ ಮತ್ತೇ ಚುನಾವಣೆ ಬಂದಿದೆ. ಆದರೆ ಈ ಚುನಾವಣೆ ನೋಡಿದರೆ ಇದು ಪಕ್ಷಾಂತರಿಗಳಿಗೆ ಮೀಸಲಿಟ್ಟ ಚುನಾವಣೆಯೋ ಎಂಬ ಅನುಮಾನದ ಹೊಗೆ ಏಳುತ್ತಿರುವುದು ವಾಸ್ತವ. ಹಿಂದೆಂದೂ ನಡೆಯದಂತಹ ಪಕ್ಷಗಳಿಂದ ಪಕ್ಷದ ಹಾರಾಟ ನಿಶ್ಚಿತ. ಕಲಿಯುಗದ ರಾಜಕೀಯದಲ್ಲಿ ಗೆದ್ದೆತ್ತಿನ ಬಾಲವನ್ನು ಹಿಡಿಯುವವರೇ ಬಹಳ ಮಂದಿ. ಈ ಕಾರಣಕ್ಕಾಗಿಯೇ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದೂ ಚುನಾವಣೆಯ ಪೂರ್ವದಲ್ಲಿಯೇ ಭಾವಿಸಿರುವ ಮುಖಂಡರುಗಳು ಕಾಂಗ್ರೆಸ್ನ ಕಡೆಗೆ ಹೆಜ್ಜೆ ಹಾಕುತಿದ್ದಾರೆ. ಆದರೆ ತಮಾಷೆಯ ವಿಷಯವೆಂದರೆ ಕಾಂಗ್ರೆಸ್ನಲ್ಲಿ ಇವರನ್ನೆಲ್ಲಾ ಸ್ವಾಗತಿಸಲು ರತ್ನಗಂಬಳಿ ಹಾಸಲು ಯಾರೊಬ್ಬರಿಗೂ ಪುರುಸೊತ್ತಿಲ್ಲ. ಆದರೂ ಕಾಂಗ್ರೆಸ್ ಬಾಗಿಲು ತಟ್ಟುತ್ತಾ ಅವರು ಯಾವಾಗ ಬಾಗಿಲು ತೆಗೆಯುತ್ತಾರೆ ಎಂದೂ ಕಾಯುತ್ತಿರುವವರು ಬಹಳಷ್ಟಿದ್ದಾರೆ. ಇನ್ನು ಒಂದಷ್ಟು ಜನ ಯಾವುದೋ ಒತ್ತಡಕ್ಕೆ ಸಿಲುಕಿ ಹೊಸದಾಗಿ ಉದಯಿಸಿರುವ ಪಕ್ಷಗಳ ಬೆನ್ನು ಬಿದ್ದಿದ್ದಾರೆ. ಇದೆಲ್ಲಾ ನೋಡಿದರೆ ಯಾರಿಗಾದರೂ ಅರ್ಥವಾದೀತು. ಪಕ್ಷದ ಸಿದ್ದಾಂತ ನೋಡಿ ಪಕ್ಷಕ್ಕೆ ಬರದೇ ಅಧಿಕಾರದ ಆಸೆಗಾಗಿ ಪಕ್ಷ ಸೇರುತ್ತಿದ್ದಾರೆ ಎಂಬುದು.
ಒಂದು ಪಕ್ಷವನ್ನು ತೊರೆದ ನಂತರ ಹಳೆ ಪಕ್ಷದಲ್ಲಿ ಉಸಿರುಕಟ್ಟುವ ವಾತಾವರಣವಿದೆ, ಅಲ್ಲಿ ಮಾತಿಗೆ ಬೆಲೆಯಿಲ್ಲ ಎಂದು ಹಲುಬುವ ನಾಯಕರು ಬೇರೆ ಪಕ್ಷದಿಂದ ಆ ಪಕ್ಷ ಸೇರಿದಾಗ ಹೇಳಿದ್ದು ಇದೇ ಅಲ್ಲವೇ? ಎಲ್ಲಾ ಪಕ್ಷಗಳಲ್ಲೂ ಮಾತಿಗೆ ಬೆಲೆಯಿಲ್ಲ ಅಂತಾದರೆ ಪಕ್ಷೇತರರಾಗಿ ನಿಲ್ಲಬಹುದಲ್ಲ?! ಊಹೂಂ ಅದ್ಯಾವುದು ಇಲ್ಲಿ ನಡೆಯಲ್ಲ. ಒಂದಷ್ಟು ಬೆಂಬಲಿಗರೊಂದಿಗೆ ಈ ಮುಖಂಡರು ಆ ಪಕ್ಷವನ್ನು ಸೇರಿದರು ಅಂತ ದೊಡ್ಡ ಸುದ್ದಿ ಮಾಡಿ, ಬಿಟ್ಟಿ ಪ್ರಚಾರ ತೆಗೆದುಕೊಂಡು ಚುನಾವಣೆಗೆ ಟಿಕೆಟ್ ಖಾತ್ರಿ ಮಾಡಿಕೊಳ್ಳುವ ಮುಖಂಡರ ಬುದ್ದಿವಂತಿಕೆ ನಿಜಕ್ಕೂ ಹೊಗಳಬೇಕಾದದ್ದೆ. ಇಷ್ಟಕ್ಕೂ ಎಚ್ಚೆತ್ತುಕೊಳ್ಳಬೇಕಾದವರು ನೋಟು ಕಂಡು ವೋಟು ಒತ್ತುವ ಮತದಾರರು, ಕಂಡ ಕಂಡವರನ್ನೆಲ್ಲಾ ಪಕ್ಷಕ್ಕೆ ಸೇರಿಸುವ ಮುಖಂಡರು. ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ನಿಜವಾದ ಗೊಂದಲಗಳು ಏರ್ಪಡುವುದು ಇಂಥವರಿಂದಲೇ. ಪಕ್ಷಗಳಲ್ಲಿ ಮೊದಲಿಂದಲೂ ದುಡಿದವರಿಗೇ ಮಣೆ ಹಾಕದೆ ನಿನ್ನೆ ಬಂದು ಜೈ ಅಂದವರಿಗೇ ಅಧಿಕಾರ ಕೊಟ್ಟು ಕೂರಿಸುವುದು ಸರ್ವಥಾ ಒಪ್ಪುವಂಥ ಮಾತಲ್ಲ. ಆಗ ಶುರುವಾಗುವ ಗಲಾಟೆಯೇ ಸರ್ಕಾರದ ಅಂತ್ಯಕ್ಕೆ ಮಂಗಳ ಹಾಡಬಹುದು. ಈ ಬಗ್ಗೆ ಎಲ್ಲಾ ಪಕ್ಷಗಳ ಮುಖಂಡರು ಗಮನಹರಿಸುವುದು ಸೂಕ್ತ. ಬೇಕಾದರೆ ಹಿಂದಿನ ಐದು ವರ್ಷಗಳ ಉದಾಹರಣೆಯೇ ಕಣ್ಣಮುಂದಿದೆ. ನಿಜವಾಗಲೂ ಯೋಚಿಸಿ ನೋಡಿ, ಈಗ ಏನೋ ಅಧಿಕಾರ ಬಂತು ಇಂಥವರು ಪಕ್ಷಕ್ಕೇ ಬರುತ್ತಾರೆ, ಜೈ ಅನ್ನುತ್ತಾರೆ, ಅಧಿಕಾರ 4 ವರ್ಷ ಅನುಭವಿಸುತ್ತಾರೆ, ಮತ್ತೆ ಜನರ ಮನಸ್ಥಿತಿ ನೋಡಿ ಬೇರೆ ಪಕ್ಷ ಸೇರುತ್ತಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮದೊಂದು ಕರ್ಚೀಫ್ ಹಾಕಿ ಕುರ್ಚಿ ಭದ್ರ ಮಾಡಿಕೊಳ್ಳುವ ಇವರು ನಿಜವಾಗಲೂ ಅವರೇ ಹೇಳುವಂತೆ ಪಕ್ಷಗಳ ಸಿದ್ದಾಂತ ಮೆಚ್ಚಿ ಪಕ್ಷ ಸೇರುತ್ತಾರೆಯೇ? ಪಕ್ಷದ ಸಿದ್ಧಾಂತದ ಬಗ್ಗೆ ಎಳ್ಳಷ್ಟೂ ಮಾಹಿತಿಯಿದೆಯೇ? ಊಹೂಂ! ನಯಾಪೈಸೆಯಷ್ಟು ಗೊತ್ತಿರುವುದಿಲ್ಲ. ಹಾಲಲ್ಲಿ ಹಾಲಾಗಿ ನೀರಲ್ಲಿ ನೀರಾಗುವ ಬುದ್ಧಿವಂತಿಕೆ ಚೆನ್ನಾಗಿ ಕಲಿತಿರುವ ಇಂತಹ ಪಕ್ಷಾಂತರಿಗಳು ಕೆಸರಲ್ಲಿ ಕೊಳಕಾಗುವುದಕ್ಕೂ ಹೇಸುವುದಿಲ್ಲ.
ಕೊನೆಯದಾಗಿ ಪಕ್ಷಾಂತರಿಗಳಿಗೆ ಬುದ್ದಿ ಕಲಿಸಬೇಕಾದವರು ವೋಟು ಹಾಕುವವರು. ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಚುನಾವಣೆಯಲ್ಲಿ ತಿರಸ್ಕರಿಸಿದರೆ ಮುಂದಿನ ರಾಜಕೀಯ ಭವಿಷ್ಯಕ್ಕಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಜೊತೆ ಜೊತೆಗೆ ಪಕ್ಷಾಂತರಿಗಳನ್ನು ಪಕ್ಷಕ್ಕೆ ಬರ ಮಾಡಿಕೊಂಡು ಅಧಿಕಾರದ ಬರಗಾಲ ಅನುಭವಿಸುವದಕ್ಕಿಂತ ಪಕ್ಷಕ್ಕಾಗಿಯೇ ತಮ್ಮ ಜೀವನವನ್ನು ತೇಯ್ದ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೂ ಒಳ್ಳೆ ಹೆಸರು ಆ ಅಭ್ಯರ್ಥಿಗೂ ತನ್ನ ಗುರುತಿಸಿದ ಬಗ್ಗೆ ಖುಷಿ ಇರುತ್ತದೆ. ಇನ್ನು ಪಕ್ಷಾಂತರಿಗಳಿಗೆ ಒಂದು ಮನವಿ, ಅಧಿಕಾರಕ್ಕಾಗಿ ಕಂಡ ಕಂಡ ಪಕ್ಷಗಳಿಗೆ ಹಾರುವುದಕ್ಕಿಂತ ಪಕ್ಷೇತರರಾಗಿ ಚುನಾವಣೆಗೆ ನಿಂತು ನಿಮ್ಮ ಸ್ವಸಾಮರ್ಥ್ಯದಿಂದ ಗೆದ್ದು ಬನ್ನಿ. ಆಗ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಪ್ರಪ್ರಥವಾಗಿ ಬೆಂಬಲ ಬೇಡುವುದು ನಿಮ್ಮಲ್ಲಿಯೇ! ಆಗಲೂ ಅಧಿಕಾರ ನಮ್ಮ ಬಳಿ ತಾನಾಗಿಯೇ ಬರುತ್ತದೆ. ಒಮ್ಮೆ ಯೋಚಿಸಿ. ಸರ್ವರಿಗೂ ಇದು ಒಳಿತು. ಏನಂತೀರಿ?
- ಮಧು ಮಾಲ್ವೆ, ಸಾಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

