ಅಂಕಣಗಳು

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಸಾಧ್ಯವಿಲ್ಲವೇ?

Published On :

ಅಪೌಷ್ಟಿಕತೆ ಎನ್ನುವ ಶಬ್ದವೇ ಮನಸ್ಸಿಗೆ ಬೇಸರವನ್ನುಂಟು ಮಾಡುವಂತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಯಾವುದೇ ರಾಷ್ಟ್ರಕ್ಕೂ ಮಾರಕ ಎನ್ನುವುದರಲ್ಲಿ ಸಂಶಯವಿಲ್ಲ. ದೇಶಗಳ ಉನ್ನತಿ ದೃಷ್ಟಿಯಿಂದ ಮುಂದಿನ ಪೀಳಿಗೆ ಅಪೌಷ್ಟಿಕತೆ ಹೊಂದುವುದು ಉತ್ತಮ ಬೆಳವಣಿಯಲ್ಲ. ಅದಕ್ಕಾಗಿ ಇಂದಿನ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡುವ ಗಂಭೀರ ಪ್ರಯತ್ನಗಳು ನಡೆಯಬೇಕಿದೆ.
ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ ಎನ್ನುವುದನ್ನು ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ಹೇಳುತ್ತಿದೆ ಎಂದಾದಲ್ಲಿ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಲಾಖೆ ಮತ್ತು ಸರ್ಕಾರ ಇಷ್ಟೊಂದು ವರ್ಷಗಳಿಂದ ಮಾಡಿದ ಕೆಲಸವಾದರೂ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಲಾಖೆ ರಾಜ್ಯದಲ್ಲಿನ ಅಂಗನವಾಡಿಗಳ ಮೂಲಕ ಇಷ್ಟೊಂದು ವರ್ಷಗಳ ಕಾಲ ಆಹಾರವನ್ನು ವಿತರಿಸಿದ್ದರೂ ಏಕೆ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಇಲಾಖೆ ಇಲ್ಲಿಯವರೆಗೆ ವಿತರಣೆ ಮಾಡಿರುವ ಆಹಾರವೇ ಪೌಷ್ಟಿಕತೆಯ ಕೊರತೆಯಿಂದ ಕೂಡಿತ್ತೇ ಎನ್ನುವ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತಿದೆ.  
ಮಕ್ಕಳಲ್ಲಿನ ಅಪೌಷ್ಟಿಕತೆಯಿಂದ ಹಲವಾರು ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದು, 4 ಸಾವಿರಕ್ಕಿಂತಲೂ ಹೆಚ್ಚಿನ ಮಕ್ಕಳು ತೀರಾ ಎದ್ದು ನಿಲ್ಲದ ಸ್ಥಿತಿಯಲ್ಲಿದ್ದಾರೆ. ಮಕ್ಕಳಲ್ಲಿ ಇರಬೇಕಾದ ಏಇ (ಹಿಮೋಗ್ಲೋಬಿನ್) ಆರೋಗ್ಯಯುತ ಮಕ್ಕಳಿಗೆ ಹೋಲಿಕೆ ಮಾಡಿದಲ್ಲಿ ಸರಾಸರಿ ಶೇ. 28ರಷ್ಟು ಕಡಿಮೆ ಇರುವುದು ಪತ್ತೆಯಾಗಿದೆ. ಇಂದಿನ ಮಕ್ಕಳು ಮುಂದಿನ ದೇಶದ ಆಸ್ತಿಯಾಗಿದ್ದಾರೆ. ಅವರು ಬಾಲ್ಯಾವಸ್ಥೆಯಲ್ಲಿಯೇ ಅಪೌಷ್ಟಿಕತೆಯಿಂದ ಬಳಲಿದಲ್ಲಿ ದೇಶ ಮುನ್ನಡೆಸುವವರ್ಯಾರು? ಹೆಚ್ಚಾಗಿ ಬಡವರ ಮಕ್ಕಳೇ ಈ ಸಮಸ್ಯೆ ಎದುರಿಸುತ್ತಿದ್ದಾರೆ.   
ಕೇಂದ್ರ ಸರ್ಕಾರ ಈ ರೀತಿ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ದೇಶದ ಅಭಿವೃದ್ಧಿಗೆ ಮಾರಕ. ಯಾವ ದೇಶದಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ ಆ ದೇಶವನ್ನು ವಿಶ್ವ ಮಟ್ಟದಲ್ಲಿ ಬಡ ರಾಷ್ಟ್ರ ಎನ್ನುವ ಮಟ್ಟದಲ್ಲಿ ಗುರುತಿಸುವಂತಹ ವಾತಾವರಣವಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿಯನ್ನು ಜಾರಿಗೊಳಿಸಿತ್ತು. ಅದನ್ನು ನಮ್ಮ ರಾಜ್ಯ ಸರ್ಕಾರ 2007 ರಲ್ಲಿಯೇ ಅನುಮೋದಿಸಿ, ಅನುಷ್ಠಾನಕ್ಕೆ ತಂದಿದೆ. ಆದರೆ 2007ರಿಂದ 2013ರ ವರೆಗಿನ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ ಅನುಮೋದನೆಯಾಗಿ 6 ವರ್ಷಗಳ ಅವಧಿಯಲ್ಲಿ ಮಕ್ಕಳಲ್ಲಿ ಕಂಡು ಬರುತ್ತಿರುವ ಈ ಅಪೌಷ್ಟಿಕತೆ ಕಡಿಮೆಯಾಗಬೇಕಿತ್ತು. ಆದರೆ ಅದರ ಪ್ರಮಾಣ ಹೆಚ್ಚಾಗಿರುವುದು, ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದಕ್ಕೆ ನೀಡಿರುವ ಪ್ರಾಮುಖ್ಯತೆ ಎಷ್ಟಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ.
ಮಕ್ಕಳಲ್ಲಿನ ಅಪೌಷ್ಟಿಕತೆಗೆ ಪ್ರಮುಖವಾಗಿ ಪಾಲಕರ ಬಡತನ ಮತ್ತು ಅನಕ್ಷರತೆಯೂ ಕಾರಣವಾಗಿದೆ. ರಾಜ್ಯದ ರಾಯಚೂರ, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿ ಕಂಡು ಬಂದರೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಮಕ್ಕಳಲ್ಲಿಯೂ ಅಪೌಷ್ಟಿಕತೆ ಕಂಡು ಬರುತ್ತಿರುವುದು ಮಾತ್ರ ಆತಂಕದ ಸಂಗತಿ. ಮುಖ್ಯವಾಗಿ ಅವರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ಇರುವುದು ಮತ್ತು ಆಹಾರ ಪದ್ಧತಿಯ ಬಗ್ಗೆ ತಿಳಿವಳಿಕೆ ಇಲ್ಲದೇ ಇರುವುದು ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಅದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ವಿಶೇಷ ಕಾಳಜಿ ವಹಿಸಿ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಅಂತಹ ಸಮನ್ವಯತೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ.
ರಾಜ್ಯದ 4 ಸಾವಿರಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದಿಗೂ ವೈದ್ಯರೇ ಇಲ್ಲ. ಇರುವ ವೈದ್ಯರಿಗೆ ನಾಲ್ಕೈದು ಆಸ್ಪತ್ರೆಗಳ ಜಬಾಬ್ದಾರಿ ನೀಡಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ಎನ್ನುವುದು ಬಡವರ (ದುಡಿವ ವರ್ಗ) ಪಾಲಿನ ಶತ್ರುವಾಗಿದೆ. ಇವರೆಲ್ಲಾ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವುದರಿಂದ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಇರುವುದರಿಂದ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಯಾಗಬೇಕಾದ ಈ ಅಪೌಷ್ಟಿಕತೆ ಗುರುತಿಸದೇ ಹೋಗುವುದರಿಂದ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ.  
ಇಂದು ಮಕ್ಕಳಲ್ಲಿ ಇಷ್ಟೊಂದು ಪ್ರಮಾಣದ ಅಪೌಷ್ಟಿಕತೆ ಕಂಡು ಬರಲು ಕೇವಲ ನಮ್ಮ ಆಹಾರ ಪದ್ಧತಿ ಮಾತ್ರವಲ್ಲ. ಬಾಲ್ಯ ವಿವಾಹವೂ ಪ್ರಮುಖ ಕಾರಣವಾಗಿದೆ. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಪೂರ್ವದಲ್ಲಿನ ಮದುವೆಗೆ ಸರ್ಕಾರ, ನ್ಯಾಯಾಲಯಗಳು ಎಷ್ಟೇ ಕಡಿವಾಣ ಹಾಕಲು ಪ್ರಯತ್ನಿಸಿದರೂ ಇಂದಿಗೂ ಆ ಅನಿಷ್ಟ ಪದ್ಧತಿ ನಡೆಯುತ್ತಿರುವುದರಿಂದ ಮಕ್ಕಳು ಹುಟ್ಟುತ್ತಲೇ ಅಪೌಷ್ಟಿಕತೆಯನ್ನು ಹೊತ್ತುಕೊಂಡೇ ಜನಿಸುತ್ತಿವೆ. ಒಂದು ಮೂಲದ ಅಂಕಿ ಅಂಶಗಳ ಆಧಾರದಲ್ಲಿ ಪ್ರತಿ ದಿನ ಜನನವಾಗುವ ಒಟ್ಟು ಮಕ್ಕಳಲ್ಲಿ (1 ತಿಂಗಳಲ್ಲಿ) ಸರಾಸರಿ 1 ಮಗು ಈ ರೀತಿ ಅಪೌಷ್ಟಿಕತೆ ಹೊಂದಿಯೇ ಜನಿಸುತ್ತದೆ.
ಈ ಎಲ್ಲ ಅಂಶಗಳನ್ನು ಹೊರತುಪಡಿಸಿ ವೈದ್ಯ ಲೋಕದ ತನಿಖೆ ಹೇಳುವ ಇನ್ನೊಂದು ಅಚ್ಚರಿಯ ವಿಷಯವೆಂದರೆ ಸಂಬಂಧಿಗಳಲ್ಲಿಯೇ ಪದೇ ಪದೇ ವಿವಾಹ ಮಾಡುವುದು ಇದಕ್ಕೆ ಮತ್ತೊಂದು ಗಂಭೀರ ಕಾರಣವಾಗಿದೆ. ಈ ವಿಷಯವಾಗಿ ಕರ್ನಾಟಕದಲ್ಲಿ 2008-09ನೇ ಸಾಲಿನಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಇದು ಸಾಬೀತಾಗಿದೆ. ಇಂತಹ ವಿವಾಹಗಳಿಂದ ತಾಯಿ ಗರ್ಭದಲ್ಲಿರುವಾಗಲೇ ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿವೆ ಎನ್ನುವ ಬಗ್ಗೆ ಬೆಳಕು ಚೆಲ್ಲಿವೆ.
ಸರ್ಕಾರಗಳ ಪ್ರಯತ್ನಗಳು ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಅಪೌಷ್ಟಿಕತೆ ಇಲ್ಲದೇ ಇರುವ ಮಕ್ಕಳು ಜನನವಾಗಬೇಕಾದಲ್ಲಿ ಮತ್ತು ಸದ್ಯ ಅಪೌಷ್ಟಿಕತೆಯನ್ನು ಹೊಂದಿರುವ ಮಕ್ಕಳು ಪೌಷ್ಟಿಕವಾಗಿರಬೇಕಾದಲ್ಲಿ ಸಾರ್ವಜನಿಕರಲ್ಲಿಯೂ ಜಾಗೃತಿ ಅವಶ್ಯವಿದೆ. ಮಕ್ಕಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ಆಹಾರ ನೀಡಬೇಕು ಎನ್ನುವ ಮೂಲ ಶಿಕ್ಷಣ ಅವರಿಗೆ ಬೇಕಾಗಿದೆ. ಸ್ವಚ್ಛ ಮತ್ತು ಶುದ್ಧ ಆಹಾರ ಮತ್ತು ನೀರನ್ನು ಬಳಕೆ ಮಾಡಬೇಕು. ಇದರೊಟ್ಟಿಗೆ ಬಾಲ್ಯ ವಿವಾಹ ಹಾಗೂ ಪದೇ ಪದೇ ಸಂಬಂಧಿಗಳಲ್ಲಿಯೇ ವಿವಾಹ ಮಾಡುವುದನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸುವತ್ತ ಗಮನ ನೀಡಬೇಕಿದೆ.
ಇನ್ನು ಸರ್ಕಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯನ್ನು ಒಳಗೊಂಡ ಒಂದು ವಿಶೇಷ ಘಟಕವನ್ನೇ ಸ್ಥಾಪಿಸಿ, ಈ  ಇಲಾಖೆಗಳ ಸಹಯೋಗದಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಪ್ರಮುಖವಾಗಿದ್ದು, ಈ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರ ತರಲು ಸಾಧ್ಯ.

- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.