ಅಂಕಣಗಳು

ಮಹಾ ಭ್ರಮನಿರಸನದ ಯಾತನೆಯಲ್ಲಿ...

Published On :

ಅಂದು: 1970ರ ದಶಕದ ನೆನಪುಗಳನ್ನು ಮರುಕಳಿಸಿ ಬರೆಯುತ್ತಿದ್ದೇನೆ. ಅಂದು ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ರಾಜಕೀಯದಲ್ಲಿ ಆಸಕ್ತಿ ಇದ್ದುದರಿಂದ ಅಂದಿನ 'ಭಾರತೀಯ ಜನಸಂಘ'ದ ಅನುಯಾಯಿಯಾಗಿದ್ದೆ. ಆ ದಿನಗಳಲ್ಲಿ ಜನಸಂಘ ಪಕ್ಷವು ಅಧಿಕಾರಕ್ಕೆ ಬಂದಿರದಿದ್ದರೂ ಒಂದು ಆದರ್ಶವಾದಿ ಪಕ್ಷವೆಂದು ಬಿಂಬಿತವಾಗಿತ್ತು. ಬಲರಾಜ ಮಧೋಕ್, ಅಟಲ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ಮುರಲಿ ಮನೋಹರ ಜೋಶಿ ಇನ್ನೂ ಹತ್ತು ಹಲವಾರು ನಾಯಕರನ್ನು ಪಕ್ಷ ಹೊಂದಿತ್ತು. ರಾಜ್ಯ ಮಟ್ಟದಲ್ಲಿ ಜಗನ್ನಾಥ ಜೋಶಿಯವರಂಥ ಅನುಭವೀ ನಾಯಕರು. ಇಂಥವರ ಭಾಷಣ ಕೇಳಲು ಸೈಕಲ್ನಲ್ಲಿ ಮೈಲಿಗಟ್ಟಲೆ ದೂರ ಹೋಗಿದ್ದುಂಟು. ಯಡಿಯೂರಪ್ಪನವರು ಅಂದಿನ ಯುವ ನಾಯಕರು. ಪಕ್ಷಕ್ಕಾಗಿ ದಿನರಾತ್ರಿ ದುಡಿದಂಥವರು. ಯುವಕರಿಗೆ, ಪಕ್ಷದ ಕಾರ್ಯಕರ್ತರಿಗೆ ಯಾವಾಗಲೂ ಹುರಿದುಂಬಿಸುತ್ತಿದ್ದರು. ನಮಗೆಲ್ಲ ಅವರ ಬಗ್ಗೆ ಅಪಾರ ಗೌರವ, ಅಭಿಮಾನ.
ಚುನಾವಣಾ ಸಮಯದಲ್ಲಿ ಹೊನ್ನಾವರದಿಂದ ಕುಮಟಾಗೆ ಸೈಕಲ್ ಸವಾರಿಯಲ್ಲಿ ಹೋಗಿ ಅಲ್ಲಿನ ಸಭೆಯಲ್ಲಿ ಭಾಗವಹಿಸಿ ಪುನಃ ಬರುತ್ತಿದ್ದೆವು. ಸೈಕಲ್ಗಳು ಪಕ್ಷದಿಂದ ಕೊಡುವಂಥವಲ್ಲ. ಸ್ವಂತ ಸೈಕಲ್. ಭಾರತೀಯ ಜನಸಂಘದ ಒಂದು ಬಾವುಟ ಸಿಕ್ಕರೆ ಏನೋ ಒಂದು ನಿಧಿ ಸಿಕ್ಕಿದಂತೆ. ಅದನ್ನು ಸೈಕಲ್ನ ಹ್ಯಾಂಡಲ್ಗೆ ಕಟ್ಟಿ ಸೈಕಲ್ ತುಳಿಯುವಾಗ ಪಟಪಟ ಹಾರುವಾಗ ಏನೋ ಒಂದು ಸಂಭ್ರಮ. ಬಂತ್ರಪ್ಪ ಬಂತು ದೀಪ ಬಂತು, ಅಲ್ಲಿ ನೋಡು ದೀಪ, ಇಲ್ಲಿ ನೋಡು ದೀಪ, ಎಲ್ಲೆಲ್ಲೂ ದೀಪ" ಮುಂತಾಗಿ ಘೋಷಣೆಗಳೊಂದಿಗೆ ನಮ್ಮ ಸೈಕಲ್ ಫೇರಿ (Procession) ಸಾಗುತ್ತಿತ್ತು. (ಆಗಿನ ಜನಸಂಘದ ಚುನಾವಣಾ ಚಿನ್ಹೆ ದೀಪವಾಗಿತ್ತು) ಹಗಲು ರಾತ್ರಿ ಎನ್ನದೇ ಪಕ್ಷದ ಬಗ್ಗೆ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುತ್ತಿದ್ದೆವು. ನಾವು ಏನನ್ನೂ ಅಪೇಕ್ಷಿಸದೆ ಪಕ್ಷದ ಕೆಲಸ ಮಾಡುವಾಗ ನಮ್ಮಲ್ಲಿ ಕೃತಾರ್ಥತೆಯ ಮನೋಭಾವವಿರುತ್ತಿತ್ತು. ಸ್ಥಳೀಯ, ರಾಜ್ಯಮಟ್ಟದ ರಾಷ್ಟ್ರ ಮಟ್ಟದ ಪಕ್ಷದ ನಾಯಕರ ಬಗ್ಗೆ ಅಪಾರ ಗೌರವ ಮನೋಭಾವವಿರುತ್ತಿತ್ತು. ಒಮ್ಮೆ ನನ್ನ ಮಿತ್ರರೊಬ್ಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಕ್ಕೆ ಹೋಗಿ ಬಂದವರು ನನ್ನೊಡನೆ ತುಂಬ ಬೀಗಿ ಹೇಳಿದರು "ಯಡಿಯೂರಪ್ಪನವರು ಪ್ರಾರ್ಥನೆಗೆ ನನ್ನಿಂದ ಕೇವಲ ಮೂರು ಸಾಲು ಹತ್ತಿರದಲ್ಲಿ ನಿಂತಿದ್ದರು ಕಣೋ!" ಅಂದರೆ ತಮ್ಮ ನೆಚ್ಚಿನ ನಾಯಕರೊಬ್ಬರ ಹತ್ತಿರ ನಿಂತು ಸಂಘದ ಪ್ರಾರ್ಥನೆಗೆ ಮಾಡಿದ್ದು ಅವರಿಗೆ ಅಪಾರ ಹೆಮ್ಮೆಯ ವಿಷಯವಾಗಿತ್ತು. ಹೇಳಲು ಇನ್ನೂ ನೂರು ಪ್ರಸಂಗಗಳನ್ನು ವಿವರಿಸಬಹುದು.  ಅಂದು ಪಕ್ಷದ ಬಗ್ಗೆ, ಸಂಘಟನೆ ಮತ್ತು ಅದರ ಸಂಘಟಕರ ಬಗ್ಗೆ ಅಪಾರ ಗೌರವ ಕಾರ್ಯಕರ್ತರಲ್ಲಿತ್ತು. ಏಕೆಂದರೆ, ಸಂಘಟಕರೂ ಸಹ ಕಾರ್ಯಕರ್ತರನ್ನು ಅಷ್ಟೇ ಗೌರವ, ಪ್ರೇಮದಿಂದ ನಡೆಸಿಕೊಳ್ಳುತ್ತಿದ್ದರು.
ಇಂದು: ಇಂಗ್ಲಿಷಿನಲ್ಲಿ ಒಂದು ಮಾತಿದೆ. ಯಾವುದೇ ಬದಲಾವಣೆ ಬಂದಾಗ 'ಂಛಟಿಣ ಛ ಢಿಛಡಿಜ್ಠಡ ಛಢಜ ಜಿಟ್ಟಢಿಟಿ ಜ್ಟಢಿಟಿ ಝಿಜ ಎಛಟ್ಜಿಜಡ' ಎಂದು. ಅಂತೆಯೇ, ತುಂಗೆ, ಕೃಷ್ಣ, ಶರಾವತಿ, ಕಾಳಿ ನದಿ ಸಮೂಹಗಳಲ್ಲೂ ಸಾಕಷ್ಟು ನೀರು ಹರಿದಿದೆ. ಬದಲಾವಣೆಗಳು ತುಂಬ, ಹೇಳ ಹೆಸರಿಲ್ಲದಂತೆ ಆಗಿವೆ. ಅಂದಿನ ಜನಸಂಘ ಇಂದು 'ಭಾರತೀಯ ಜನತಾ ಪಕ್ಷ'ವಾಗಿದೆ. ಅಂದಿನ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುವ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗಿದೆ. ಪಕ್ಷಕ್ಕೆ ನಾನೇನು ಕೊಡಲಿ ಎನ್ನುವುದಕ್ಕಿಂತ ಪಕ್ಷದಿಂದ ನಾನೇನು, ಹೇಗೆ ಪಡೆದುಕೊಳ್ಳಬಹುದು ಎನ್ನುವ ಮನೋಭಾವದ ಕಾರ್ಯಕರ್ತರು ಹೆಚ್ಚುತ್ತಿದ್ದಾರೆ. ಹಾಗೆಂದು ಅಂದಿನ ನಿಷ್ಠಾವಂತ ಕಾರ್ಯಕರ್ತರು ಇಂದಿಗೂ ಇದ್ದಾರೆ. ಆದರೆ ಮೂಲೆಗುಂಪಾಗಿದ್ದಾರೆ. ಇದಕ್ಕೆ ಕಾರಣ ಪಕ್ಷದ ನಾಯಕತ್ವದ ಸ್ವಾರ್ಥ ಮನೋಭಾವ. ಕರ್ನಾಟಕದಲ್ಲಿ ಭಾ.ಜ.ಪ. ಅಧಿಕಾರಕ್ಕೆ ಬಂದಂದಿನಿಂದ ಪಕ್ಷದ ಮುಖಂಡರೇ ಬದಲಾಗಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಸ್ವಾರ್ಥ. ಅದಕ್ಕೆ ಅವರದೇ ಆದ ಸ್ಪಷ್ಟೀಕರಣ. ಅದನ್ನು ಸಾಧಿಸುವಲ್ಲಿ ಪಕ್ಷವನ್ನು ಮತ್ತು ಅದರ ಸಂಘಟನಾ ಶಕ್ತಿಯನ್ನು ಪೂರ್ತಿ ಕುಂದಿಸಿದ್ದಾರೆ. ಯಾವ ನಾಯಕರ ಬಗ್ಗೆ ಹೆಮ್ಮೆ ಪಡುತ್ತಿದ್ದೆವೋ ಅಂಥ ನಾಯಕರು, ಯಡಿಯೂರಪ್ಪನವರು. ಇಂದು ತಾವು ಗೆಲ್ಲುವುದಕ್ಕಿಂತ ಪ್ರಮುಖವಾಗಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟು ಹೊಸ ಪಕ್ಷ ಕೆ.ಜೆ.ಪಿ.ಯನ್ನು ಸ್ಥಾಪಿಸಿದ್ದಾರೆ. ತನಗೆ ಆಸರೆ ಕೊಟ್ಟು ಮರವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟ ತನ್ನ ಮಾತೃ ಪಕ್ಷವನ್ನು ನಾಶ ಮಾಡಲು ಪಣ ತೊಟ್ಟು ನಿಂತಿದ್ದಾರೆ. "ನನ್ನ ಗುರಿ ಬಿಜೆಪಿಯನ್ನು ಸೋಲಿಸುವುದೇ ಆಗಿತ್ತು. ಅದರಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ಯಡಿಯೂರಪ್ಪನವರಿಲ್ಲದ ಬಿಜೆಪಿಯ ಗತಿ ಏನಾಗಿದೆ ಎಂಬುದನ್ನು ಅರಿಯಲಿ" ಎನ್ನುವ ಅವರ ಅಹಂಭಾವದ ಮಾತುಗಳನ್ನು ಅವರ ಅಂತರಾತ್ಮವೂ ಖಂಡಿತ ಒಪ್ಪಲಿಕ್ಕಿಲ್ಲ. ಏಕೆಂದರೆ ಅವರು ತಮ್ಮನ್ನು ನಾಯಕರೆಂದು ಪರಿಗಣಿಸುವುದಾದರೆ ಅದು ಸಾಧ್ಯವಾಗಿದ್ದು ಒಂದು ಪಕ್ಷ, ಒಂದು ಸಂಘಟನೆಯಿಂದ ಮಾತ್ರ.

-   ದಯಾನಂದ ಪುತ್ತು ಹೆಗಡೆ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.