ಲಂಕಾ-ತಮಿಳರ ಸಮಸ್ಯೆಗೇನು ಪರಿಹಾರ?
ತಮಿಳುನಾಡಿನ ಸಾಮಾನ್ಯ ಜನತೆಯಲ್ಲಿ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ಮಡುಗಟ್ಟಿರುವ ಸಿಟ್ಟನ್ನು ಸುಲಭವಾಗಿ ಗ್ರಹಿಸಬಹುದು. ಕಾಲೇಜುಗಳು ಬಂದಾಗುತ್ತಿವೆ. ಶ್ರೀಲಂಕಾದಲ್ಲಾದ ಅನಾಹುತದ ಬಗ್ಗೆ ಶಾಲಾ ಮಕ್ಕಳೂ ಚರ್ಚಿಸತೊಡಗಿದ್ದಾರೆ. ಖಾಸಗಿ ಮಾತುಕತೆಗಳೂ ಕೂಡ ಕಡೆಗೆ ಈ ದೈತ್ಯಾಕಾರದ ಮಾನವ ದುರಂತದತ್ತಲೇ ವಾಲುತ್ತಿವೆ. ಶ್ರೀಲಂಕಾದಲ್ಲಾದ ಘಟನೆ ಸ್ವೀಕಾರಾರ್ಹವಲ್ಲದ ಮತ್ತು ವ್ಯಥೆ ಪಡುವಂತಹ ವಿಷಯ.
ಎಣಿಕೆಯಂತೆ ಶ್ರೀಲಂಕಾ ತಮಿಳರಿಗೆ ಸಂಬಂಧಿಸಿದ ವಿಷಯ ಈಗ ರಾಜಕೀಯ ವಲಯದಲ್ಲಿ ಹೆಚ್ಚು ಹರಿದಾಡತೊಡಗಿದೆ. ರಾಜಕಾರಣಿಗಳು, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ರಾಜಕಾರಣಿಗಳು ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಎಂದಿನಂತೆ ಈ ವಿಷಯ ಬರೀ ಚರ್ಚೆಗೊಳಗಾಗುತ್ತದೆಯೇ ವಿನಹ, ಯಾವ ಮಾತೂ ಅನುಷ್ಠಾನಕ್ಕೆ ಬರುವುದಿಲ್ಲ ಎನ್ನುವುದು ನಿಶ್ಚಿತ. ಎಷ್ಟಿದ್ದರೂ ಭಾಷಣ ಶಾಸ್ತ್ರ ಮತ್ತು ಅನಿರೀಕ್ಷಿತ ನಡವಳಿಕೆಯಲ್ಲಿ ನಮ್ಮ ರಾಜಕಾರಣಿಗಳದ್ದು(ತಮಿಳುನಾಡಿನ)ಮೊದಲಿನಿಂದಲೂ ಎತ್ತಿದ ಕೈ.
ಈಗ ನಮ್ಮ ರಾಜಕಾರಣಿಗಳು ತಳೆದಿರುವ ಭಂಗಿ ಹೊಸತೇನೂ ಅಲ್ಲ. ಇದನ್ನು ನಾವು ಕಳೆದ ಮೂರು ದಶಕಗಳಿಂದಲೂ ನೋಡುತ್ತಿದ್ದೇವೆ. ಆದರೆ ಇದರ ಮಧ್ಯಕಾಲದಲ್ಲಿ ಯಾವೊಂದು ಪಕ್ಷವೂ ಕೂಡ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಈ ಅಸ್ತವ್ಯಸ್ತತೆಯನ್ನು ಸರಿಪಡಿಸುವ ಪರಿಹಾರವನ್ನು ಮುಂದಿಟ್ಟಿಲ್ಲ.
ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ಗೊತ್ತುವಳಿಯಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಭವವಾಗಬಹುದಾದ ಜಟಿಲತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ 'ಜನಾಂಗೀಯ ಹತ್ಯೆ' ಎಂಬ ಪದವನ್ನು ಸೇರಿಸಲು ರಾಜಕೀಯ ಪಕ್ಷಗಳು ಏಕೆ ಅಷ್ಟೊಂದು ಉತ್ಸುಕತೆ ತೋರಿದವು ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಅಂತಹ ಪದವನ್ನು ಸೇರಿಸಲು ಒದ್ದಾಡಿದವರೆಲ್ಲ, ಜನಾಂಗೀಯ ಹತ್ಯೆಯ ಸಮಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುಮ್ಮನಿದ್ದರು ಎಂಬುದು!
ಇದಷ್ಟೇ ಅಲ್ಲ. ಒಂದು ವೇಳೆ ವಿಶ್ವಸಂಸ್ಥೆ ಈ ವಿಚಾರವಾಗಿ ಸ್ವತಂತ್ರ ತನಿಖೆ ಮಾಡಲು ಮುಂದಾಗಿತ್ತೆಂದರೆ, ಕೆಲವು ರಾಜಕಾರಣಿಗಳಿಗೆ ಎಲ್ಟಿಟಿಇಯೊಂದಿಗಿದ್ದ ಸಾಮೀಪ್ಯ ಅವರಿಗೆ ಮುಳುವಾಗಿ ಪರಿಣಮಿಸಲಿತ್ತು. ಅವರಂತೆಯೇ ಕೆಲವು ಬುದ್ಧಿಜೀವಿಗಳು, ಎನ್ಜಿಒಗಳು, ಸಿನೆಮಾ ನಿರ್ಮಾಪಕರು ಮತ್ತು ನಟರೂ ಕೂಡ ಸಿಕ್ಕಿಬೀಳುತ್ತಿದ್ದರು. ಸದ್ಯ ಆ ಅಪಾಯ ಎದುರಾಗಿಲ್ಲ!
ಚೀನಿಯರ ಆರ್ಥಿಕ ಮತ್ತು ತಾಂತ್ರಿಕ ಸಹಾಯದಿಂದ ನಿರ್ಮಾಣವಾಗಿರುವ ಹಂಬನ್ತೋಟಾ ಬಂದರು ಶ್ರೀಲಂಕಾದ ದೇಶೀಯ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ಈ ಯೋಜನೆಯ ಮೊದಲ ಹಂತ ಇಂಧನ ತೊಟ್ಟಿ, ಹಡಗು ರಿಪೇರಿ, ಹಡಗು ನಿರ್ಮಾಣ ಮತ್ತು ನೌಕರರ ಬದಲಾವಣೆಯ ಸೌಲಭ್ಯಗಳನ್ನು ಹೊಂದಿದೆ. ಇದರ ನಿರ್ಮಾಣ ಸಂಪೂರ್ಣವಾಗುತ್ತಿದ್ದಂತೆಯೇ, 21ನೇ ಶತಮಾನದ ಅತಿ ದೊಡ್ಡ ಭೂ ಬಂದರು ಎಂಬ ಖ್ಯಾತಿ ಇದಕ್ಕೆ ಸಿಗಲಿದೆ. ಈ ಹಂಬನ್ತೋಟಾ ಬಂದರು ಏಶಿಯಾ ಮತ್ತು ಯುರೋಪಿಯನ್ ಅಂತಾರಾಷ್ಟ್ರೀಯ ನೌಕಾ ಮಾರ್ಗಗಳಾದ ಸುಯೆಜ್ ಮತ್ತು ಸ್ಟ್ರೇಟ್ ಆಫ್ ಮಲಕ್ಕಾಗೆ ಅತಿ ಹತ್ತಿರದಲ್ಲಿದೆ. ಮುಂಚೂಣಿಯ ಹಡಗು ತಜ್ಞ ನುವಾನ್ ಪೆರಿಸ್ ಪೇರಿಸ್, 'ಈ ಬಂದರು ಏಶಿಯಾದ ಸೂಪರ್ಪವರ್ಗಳಾದ ಚೀನಾ ಮತ್ತು ಭಾರತದ ನಡುವೆ ತಿಕ್ಕಾಟ ತಂದಿಡಲಿದೆ' ಎಂದು ಹೇಳುತ್ತಾರೆ.
ಅವರ ಪ್ರಕಾರ, ಈ ಬಂದರಿನ ನಿರ್ಮಾಣದಲ್ಲಿನ ಚೀನಾದ ಆಸಕ್ತಿ, ಎರಡೂ ದೇಶಗಳ ನಡುವಿನ ಜಗಳಕ್ಕೆ ಹೊಸ ಆಯಾಮ ನೀಡಲಿದೆ ಮತ್ತು 'ದಕ್ಷಿಣ ಏಶ್ಯಾದ ಭೂ ದೃಶ್ಯದಲ್ಲಿ ಪ್ರಮುಖ ಬದಲಾವಣೆ ತರಲಿದೆ'.
ತಮಿಳುನಾಡಿನ ರಾಜಕಾರಣಿಗಳು ಈ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಇತ್ತ ಕೇಂದ್ರ ಸರ್ಕಾರವೂ ಯಾವುದೇ ಕಾರ್ಯತಂತ್ರವನ್ನು ರಚಿಸುವಲ್ಲಿ ತೊಡಗಿಲ್ಲ. ಕುತೂಹಲಕರ ವಿಷಯವೆಂದರೆ, ಪ್ರಾದೇಶಿಕ ಪಕ್ಷಗಳ ರಾಜಕೀಯ ಇಚ್ಛೆ ವಿದೇಶಿ ನೀತಿಯನ್ನು ಆಳಬಾರದು ಎನ್ನುವ ಮಾತಿದೆ.
ಆದರೆ ಆರ್ಥಿಕ ನೀತಿ ಮತ್ತು ಸುಧಾರಣೆಯ ಕತೆಯೇನು? ನೆನಪು ಮಾಡಿಕೊಳ್ಳಿ, ಯುಪಿಎ ಸರ್ಕಾರದ ಮಿತ್ರ ಪಕ್ಷಗಳೆಲ್ಲವೂ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಆರ್ಥಿಕ ಸುಧಾರಣೆಗೆ ಮುಂತಡೆಯೊಡ್ಡುತ್ತಲೇ ಬಂದಿದ್ದವು! ಅಥವಾ ವಿದೇಶಿ ನೀತಿ ದೇಶೀಯ ಆರ್ಥಿಕ ನೀತಿಗಿಂತಲೂ ದೊಡ್ಡದೇ?
ಇದೇನೇ ಇರಲಿ, ಒಂದು ವಿಷಯವನ್ನಂತೂ ಮರೆಯುವುದು ಬೇಡ. ಈಗ ಯುಪಿಎ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷಗಳ ಒಕ್ಕೂಟವಾಗಿ ಉಳಿದಿದೆಯಷ್ಟೆ. ಈ ಬೆಳವಣಿಗೆಯನ್ನು ನೋಡಿದರೆ, ಪ್ರಾದೇಶಿಕ ಪಕ್ಷಗಳು 'ವಿದೇಶಾಂಗ ನೀತಿಯ ಒಪ್ಪಂದಗಳ ನಡುವೆ ಮೂಗು ತೂರಿಸಬಾರದು' ಎನ್ನುವ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ಶ್ರೀಲಂಕಾದ ಆಂತರಿಕ ವ್ಯವಹಾರಗಳ ನಡುವೆ ಹೊಕ್ಕು ಸ್ವಂತಂತ್ರ 'ಈಳಂ'(ಶ್ರೀಲಂಕಾ ತಮಿಳರಿಗಾಗಿ ಪ್ರತ್ಯೇಕ ರಾಷ್ಟ್ರ)ನ ಸ್ಥಾಪನೆ ಮಾಡುತ್ತದೆ ಎಂದು ಭಾವಿಸುವುದು ಮೂರ್ಖತನವಾದೀತು. ನಿಜ ಹೇಳಬೇಕೆಂದರೆ ಪ್ರತ್ಯೇಕ ರಾಷ್ಟ್ರ ರಚನೆಯ ಮಾತನಾಡುವವರು ಶ್ರೀಲಂಕಾದ ತಮಿಳರಿಗೆ ದ್ರೋಹ ಬಗೆಯುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಶ್ರೀಲಂಕಾದಲ್ಲಿ ಬಹುತೇಕ ತಮಿಳರಿಗೆ ಪ್ರತ್ಯೇಕ ರಾಷ್ಟ್ರ ಬೇಕೇ ಇಲ್ಲ! ಕೆಲವೇ ವರ್ಷಗಳ ಹಿಂದೆ ಪ್ರತ್ಯೇಕ ತೆಲಂಗಾಣ ರಚನೆ ಮಾಡುವುದಾಗಿ ಭಾಷೆ ಕೊಟ್ಟು ನಂತರ ಸುಮ್ಮನಾಗಿಬಿಟ್ಟ ಸರ್ಕಾರ ಈಗ ತಮಿಳರಿಗೆ ನೀಡಿದ ಭರವಸೆಯನ್ನು ಅದ್ಹೇಗೆ ತಾನೇ ಉಳಿಸಿಕೊಂಡೀತು? ಈ ವಿಷಯವನ್ನೇ ತಮಿಳುನಾಡು ಅರ್ಥ ಮಾಡಿಕೊಳ್ಳಲು ವಿಫಲವಾಗುತ್ತಿದೆ. ಒಂದು ವೇಳೆ ರಾಜಕೀಯ ಪರಿಹಾರಗಳು ಸಿಗದೇ ಹೋದರೆ, ಪರ್ಯಾಯ ಮಾರ್ಗಗಳಂತೂ ಇದ್ದೇ ಇವೆ. ಆರ್ಥಿಕ ಪರಿಹಾರಗಳಾದಂತಹ ವ್ಯಾಪಾರ, ಪ್ರವಾಸೋದ್ಯಮ ಮತ್ತು ದೂರ ಸಂಪರ್ಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬಹುದಲ್ಲವೇ?
ಉದಾಹರಣೆಗೆ, ಪಾಕ್ ಜಲಸಂಧಿಯಿಂದ ಪ್ರತ್ಯೇಕವಾಗಿರುವ ತಮಿಳುನಾಡು ಮತ್ತು ಶ್ರೀಲಂಕಾದ ನಡುವಿನ ಅಂತರ ಕೆಲವೇ ಕೆಲವು ಕಿಲೋಮೀಟರ್ಗಳಷ್ಟಿದೆ. ಆದರೂ ಶ್ರೀಲಂಕಾ ಮತ್ತು ಭಾರತದ ನಡುವಿನ ಫೋನ್ ಕಾಲ್ಗಳಿಗೆ ಅಂತಾರಾಷ್ಟ್ರೀಯ ಕರೆ ಶುಲ್ಕ ಅನ್ವಯವಾಗುತ್ತದೆ. ಇದನ್ನು ಸ್ಥಳೀಯ ಟಾರಿಫ್ಗೆ ಬದಲಾಯಿಸಬಹುದು. ಅದರೊಟ್ಟಿಗೆ, ಭಾರತ ಮತ್ತು ಶ್ರೀಲಂಕಾದ ನಡುವಿನ ಪ್ರಯಾಣಕ್ಕೆ ವೀಸಾದ ಅವಶ್ಯಕತೆಯನ್ನು ಎರಡೂ ರಾಷ್ಟ್ರಗಳು ಬಿಟ್ಟುಬಿಡಬೇಕು. ಇವೆಲ್ಲ ಕೇಂದ್ರ ಮಟ್ಟದಲ್ಲಿ ಮಾತ್ರ ಸಾಧ್ಯ.
ಇನ್ನು ಶ್ರೀಲಂಕಾದ ತಮಿಳು ಭಾಷಿಕರ ಪ್ರದೇಶಗಳಲ್ಲಿ ಬಂಡವಾಳ ಹೂಡುವ ಭಾರತೀಯ ಉದ್ಯಮಗಳಿಗೆ ರಾಜ್ಯ ಸರ್ಕಾರ ಸ್ಥಳೀಯ ಸುಂಕಗಳಲ್ಲಿ ರಿಯಾಯಿತಿ ಕೊಡಬೇಕು. ಹಾಗೆ ಮಾಡುವ ಮೂಲಕ ಶ್ರೀಲಂಕಾದಲ್ಲಿನ ತಮಿಳರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಟಾಟಾ, ಅಂಬಾನಿ ಸಹೋದರರು ಅಥವಾ ಇನ್ನುಳಿದ ಯಾವುದೇ ಭಾರತೀಯ ಉದ್ಯಮಿಗಳು ಅಂತಹ ಹೂಡಿಕೆಯ ಮೂಲಕ, ನಮ್ಮ ಸೇನೆಯೂ ಕೊಡಲಾರದಂತಗ ರಕ್ಷಣೆಯನ್ನು ಅಲ್ಲಿನ ಜನರಿಗೆ ಕೊಡಬಲ್ಲರು. ಈಗ ಹಂಬನ್ತೋಟಾದ ವಿಷಯಕ್ಕೆ ಬರೋಣ. ಅಲ್ಲಿ ಚೀನಿಯರ ಇರುವಿಕೆಯನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ತಮಿಳುನಾಡಿನ ರಾಜಕೀಯ ಪಕ್ಷಗಳು ಮೊದಲೇ ಎಚ್ಚೆತ್ತುಕೊಂಡು ಈ ಯೋಜನೆಯನ್ನು ತಡೆಯಲು ಪ್ರಯತ್ನ ಪಡಬೇಕಿತ್ತು. ಆದರೆ ಅಂತಹ ಮುಂದಾಲೋಚನೆ ನಮ್ಮ ಯಾವ ರಾಜಕೀಯ ಪಕ್ಷಗಳಿಗಿದೆ?
ಇದರರ್ಥವಿಷ್ಟೆ, ಹಂಬನ್ತೋಟಾದಲ್ಲಿ ಬಂದರು ನಿರ್ಮಾಣ ಮಾಡಲು ಶ್ರೀಲಂಕಾ ಯೋಜನೆ ಹಾಕಿಕೊಂಡಾಗ ನಾವು ನಿಷ್ಕ್ರಿಯರಾಗಿದ್ದೆವು. ಚೀನಿಯರು ನಮ್ಮ ನಿಷ್ಕ್ರಿಯತೆಯ ಲಾಭಪಡೆದ ತಕ್ಷಣ, ನಮ್ಮ ಶೋಕಗೀತೆ ಶುರುವಾಯಿತು! ಈಗ ಚೀನಿಯರು ಅಲ್ಲಿರುವ ಕಾರಣ ಮತ್ತೆ ಮೈಗಳ್ಳತನಕ್ಕೆ ಹಿಂದಿರುಗುತ್ತಿದ್ದೇವೆ. ವ್ಯಂಗ್ಯವೆಂದರೆ, ಇದನ್ನೆಲ್ಲ ವಿದೇಶಾಂಗ ನೀತಿ ಎಂದು ಕರೆಯಲಾಗುತ್ತಿರುವುದು. ಹಾಗಂತ ಎಲ್ಲವೂ ನಮ್ಮ ಕೈಜಾರಿಲ್ಲ. ಚೀನಿಯರು ಹಂಬನ್ತೋಟಾ ಬಂದರನ್ನು ತಮ್ಮ ಮಾನದಂಡಕ್ಕೆ ತಕ್ಕಂತೆ ನಿರ್ಮಾಣ ಮಾಡಿದ್ದಾರೆ ಅಂದಮೇಲೆ ಅದರ ಸಾಮರ್ಥ್ಯ ದೊಡ್ಡ ಪ್ರಮಾಣದಲ್ಲಿದೆ ಎಂದೇ ಅರ್ಥ. ಆ ಬಂದರು ಬದುಕುಳಿಯಬೇಕಾದರೆ ಅಲ್ಲಿ ಬೃಹತ್ ರಫ್ತು ವ್ಯವಹಾರ ನಡೆಯಲೇಬೇಕು. ಶ್ರೀಲಂಕಾದಿಂದ ಈ ಕೆಲಸ ಸಾಧ್ಯವಿಲ್ಲ. ಹಾಗಾಗೇ ಭಾರತಕ್ಕೆ ಇಲ್ಲೊಂದು ಅವಕಾಶ ಸಿಗುತ್ತದೆ. ತಮಿಳುನಾಡು ಈ ಕೂಡಲೇ ಟುಟಿಕಾರಿನ್ ಬಂದರನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ಅದನ್ನು ಹಂಬನ್ತೋಟಾ ಬಂದರಿನೊಂದಿಗೆ ವ್ಯಾಪಾರಕ್ಕೆ ಇಳಿಸಬೇಕು. ಇದರಿಂದಾಗಿ ಕೆಲವೇ ದಿನಗಳಲ್ಲಿ ಶ್ರೀಲಂಕಾ ಭಾರತದ ಮೇಲೆ ಅವಲಂಬಿತವಾಗುತ್ತದೆ. ಚೀನಿಯರಿಂದ ಕಳೆದುಕೊಂಡದ್ದನ್ನು ನಾವು ಶ್ರೀಲಂಕಾದಿಂದ ಪಡೆದುಕೊಂಡಂತಾಗುತ್ತದೆ.
ಸರಳವಾಗಿ ಹೇಳಬೇಕೆಂದರೆ, ಚೀನಿಯರು (ತಮ್ಮ ಹಣ, ಕೆಲಸಗಾರರು ಮತ್ತು ತಂತ್ರಜ್ಞಾನದಿಂದ) ಶ್ರೀಲಂಕಾದಲ್ಲಿ ನಿರ್ಮಾಣ ಮಾಡಿದ ಬಂದರು, ಭಾರತಕ್ಕೆ ಹೆಚ್ಚು ಉಪಯೋಗಕ್ಕೆ ಬರಬೇಕು! ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದು ಸಿಗುತ್ತದಾ?
ಆದರೆ ಇಷ್ಟು ಮಾಡಿದರೆ ಸಾಕೇ? ಖಂಡಿತವಾಗಿಯೂ ಇಲ್ಲ. ನಾವು ಮೊದಲು ಬೆಂಗಳೂರಿನಿಂದ ಸೇಲಂಮೂಲಕ ಟುಟಿಕಾರಿನ್ವರೆಗೆ ಹಾದು ಹೋಗುವ ಸರಕು ಸಾಗಣೆ ಕಾರಿಡಾರ್ನ ನಿರ್ಮಾಣ ಮಾಡಬೇಕು. ಇದಾದ ನಂತರ, ಸದ್ಯಕ್ಕೆ ಉಪಯೋಗದಲ್ಲಿಲ್ಲದ ಸೇಲಂನ ಏರ್ಪೋರ್ಟ್ ಅನ್ನು ಹಂಬನ್ತೋಟಾದ ಏರ್ಸ್ಟ್ರಿಪ್ನೊಂದಿಗೆ ಬೆಸೆಯಬೇಕು. ಚೀನಿಯರು ಬಂದರು ನಿರ್ಮಾಣ ಮಾಡುತ್ತಾರೆಂದರೆ, ನಾವು ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದಲ್ಲವೇ?
ಸೇಲಂ ಏಕೆ? ಸೇಲಂ ತಮಿಳುನಾಡಿದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದು. ಆದರೂ ಅದು ಮಧ್ಯಭಾಗದಲ್ಲಿದೆ. ಈ ಯೋಜನೆಗೆ ಹೇಳಿ ಮಾಡಿಸಿದಂತಹ ಸ್ಥಳ. ಅನೇಕ ರಫ್ತು ಸಮೂಹಗಳು ಈ ಸ್ಥಳಕ್ಕೆ ಸಮೀಪದಲ್ಲಿಯೇ ಇವೆ. ಇದರಿಂದ ರಾಜ್ಯಕ್ಕೂ ಬಹಳಷ್ಟು ಆದಾಯ ಬರಲಿದೆ. ಟುಟಿಕಾರಿನ್ವರೆಗಿನ ಸರಕು ಕಾರಿಡಾರ್ ನಿರ್ಮಾಣ, ಸೇತು ಸಮುದ್ರಂ ಯೋಜನೆಗೆ(ವಿಫಲವಾದ) ಉತ್ತಮ ಪರ್ಯಾಯವಾಗಲಿದೆ. ಅಂತಹ ಕಾರ್ಯಸಾಧುವಲ್ಲದ ಯೋಜನೆಗೆ ಬಿಲಿಯನ್ಗಟ್ಟಲೇ ಹಣ ಖರ್ಚು ಮಾಡಲು ಕೇಂದ್ರ ಸರ್ಕಾರ ಸಿದ್ಧವಿತ್ತು. ಅದರ ಬದಲು ಸರಕು ಕಾರಿಡಾರ್ ಯೋಜನೆಗೆ ಎಷ್ಟೇ ಖರ್ಚಾದರೂ ಅದು ಮುಂದಾಗಬೇಕಲ್ಲವೇ? ಇದರಿಂದಾಗಿ ತಮಿಳುನಾಡಿನ ಆರ್ಥಿಕತೆ ಮೇಲ್ಮಟ್ಟಕ್ಕೆ ಜಿಗಿಯುವುದು ನಿಶ್ಚಿತ. ಜೊತೆಗೆ ಸ್ಥಳೀಯರಿಗೆ ಹಲವಾರು ಉದ್ಯೋಗಾವಕಾಶಗಳೂ ದೊರೆಯಲಿವೆ. ಒಮ್ಮೆ ಶ್ರೀಲಂಕಾವನ್ನು ನಮ್ಮ ಆರ್ಥಿಕ ಆಲಿಂಗನದಲ್ಲಿ ಬಂಧಿಸಿಬಿಟ್ಟರೆ ಅದರ ಆಂತರಿಕ ರಾಜಕೀಯವನ್ನೆಲ್ಲ ಆಳುವಂತಹ ಶಕ್ತಿ ನಮಗೆ ದೊರೆಯುತ್ತದೆ. ಆಗ ಮಾತ್ರ ಶ್ರೀಲಂಕಾದ ತಮಿಳರಿಗೆ ನಾವು ನಿಜವಾಗಿ ರಕ್ಷಣೆ ನೀಡಬಲ್ಲೆವು.
- ಎಮ್.ಆರ್.ವೆಂಕಟೇಶ್
ಚಾರ್ಟರ್ಡ್ ಅಕೌಂಟೆಂಟ್ ಮತ್ತು ಆರ್ಥಿಕ ವಿಶ್ಲೇಷಣಕಾರರು
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

