ವಾಟಾಳ್ ಹೋರಾಟ, ಹಾರಾಟ!

Updated on: 

ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಬೆಂಗಳೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ಆ ಕ್ಷೇತ್ರ ಬಿಟ್ಟು ಗಡಿ ಭಾಗದ ಚಾಮರಾಜನಗರಕ್ಕೆ ವಲಸೆ ಬಂದಿದ್ದರು. ಅಲ್ಲಿಂದ ಮೂರು ಬಾರಿ ಆಯ್ಕೆಯಾದರು. ಅಷ್ಟೇ ಬಾರಿ ಸೋತಿದ್ದಾರೆ. ಈ ಬಾರಿ ಕೊನೆ ಹೋರಾಟವೆಂಬಂತೆ ಪ್ರಚಾರ ನಡೆಸಿದರು. ಆದರೆ ಕ್ಷೇತ್ರದ ಜನತೆ ಸೊಪ್ಪು ಹಾಕಲಿಲ್ಲ. ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಕಾಯಂ ಎನಿಸಿಕೊಂಡ 3ನೇ ಸ್ಥಾನ ನೀಡಿದರು. ಫಲಿತಾಂಶ ಪ್ರಕಟವಾದ ನಂತರ ನಾಪತ್ತೆಯಾಗಿದ್ದ ವಾಟಾಳ್ ಕಳೆದ ವಾರ ಕ್ಷೇತ್ರದಲ್ಲಿ ಪ್ರತ್ಯಕ್ಷರಾದರು. ನನ್ನನ್ನು ಗೆಲ್ಲಿಸದಿದ್ದುದು ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ನಷ್ಟ ಎಂದು ಹಾರಾಡಿದರು. ಏಕೆಂದರೆ ಮಹಾರಾಷ್ಟ್ರ ಗಡಿ ಭಾಗವಾದ ಬೆಳಗಾವಿಯಿಂದ ಎಂಇಎಸ್‌ನ ಇಬ್ಬರು ಗೆದ್ದಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡಲು ತಮಿಳುನಾಡು ಗಡಿ ಭಾಗವಾದ ಚಾಮರಾಜನಗರದಿಂದ ನಾನು ಗೆದ್ದು ಹೋಗಬೇಕಿತ್ತು ಎಂದರು. ಜೈ ಹಿಂದ್, ಜೈ ಕರ್ನಾಟಕ ಮಾತೆ!
ಪಾತ್ರೆಗಾಗಿ ಪೊಲೀಸ್ ಠಾಣೆಗೆ ಅಲೆದಾಟ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರು ಹೊರವಲಯದ ಕೂಡನಹಳ್ಳಿ ಬಳಿ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಮತ್ತೊಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ದಾಳಿ ಮಾಡಿ, ಚುನಾವಣಾಧಿಕಾರಿಗಳಿಗೆ ದೂರು ನೀಡಿ, ಅಡುಗೆಗೆ ಬಳಸಿದ್ದ ಪಾತ್ರೆಗಳನ್ನು ಜಫ್ತಿ ಮಾಡಿಸಿದರು. ಈ ಪಾತ್ರೆಗಳನ್ನು ಅಡುಗೆ ಕಂಟ್ರ್ಯಾಕ್ಟರ್‌ರೊಬ್ಬರ ಬಳಿ ದಿನ ಬಾಡಿಗೆ ಆಧಾರದ ಮೇಲೆ ಪಡೆದು ಕೊಡಿಸಿದ್ದ ವ್ಯಕ್ತಿಯೊಬ್ಬರಿಗೆ ಈಗ ಪೀಕಲಾಟ. ಏಕೆಂದರೆ ಪಾತ್ರೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅವುಗಳನ್ನು ಬಿಡುಗಡೆ ಮಾಡಿಸಿಕೊಳ್ಳಬೇಕಾದರೆ ಸಂಬಂಧಪಟ್ಟವರು ಅಂದರೆ ಆ ಪಕ್ಷದ ಅಭ್ಯರ್ಥಿ, ಕ್ಷೇತ್ರಾಧ್ಯಕ್ಷರು ಮತ್ತಿತರರು ಹಾಜರಾಗಬೇಕು. ಆದರೆ ಸೋತ ಅಭ್ಯರ್ಥಿ ನಾಪತ್ತೆಯಾಗಿದ್ದರೆ ಕ್ಷೇತ್ರಾಧ್ಯಕ್ಷರ ಮೊಬೈಲ್ ಸ್ವಿಚ್‌ಆಫ್. ಇದರಿಂದ ಪಾತ್ರೆ ಕೊಡಿಸಿದ ವ್ಯಕ್ತಿ ದಿನಕ್ಕೆ 750 ಬಾಡಿಗೆ ಕಟ್ಟುತ್ತಾ ಅಭ್ಯರ್ಥಿ, ಕ್ಷೇತ್ರಾಧ್ಯಕ್ಷರ ಮನೆ ಬಾಗಿಲಿಗೆ, ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.
ಸೀನಿಯರ್ ಲೂಸ್ ಟಾಕ್ ಈಗ ಸಪ್ಪೆ!
ಪಕ್ಷದ ನಿಷ್ಠೆ ಮತ್ತು ಹೆಚ್ಚು ಬಾರಿ ಆಯ್ಕೆ ನಿಜ್ಕಕೂ ಒಬ್ಬ ರಾಜಕಾರಣಿಗೆ ಅಧಿಕಾರದ ಗದ್ದುಗೆಯ ಸಮೀಪ ಹೋಗಲು ಬಹು ದೊಡ್ಡ ಅರ್ಹತೆ. ಆದರೆ, ಪಕ್ಷವನ್ನು ಮುನ್ನಡೆಸಬಲ್ಲ ನಾಯಕತ್ವ ಗುಣ ಇದ್ದವರೊಂದಿಗೆ ಗುದ್ದಾಟಕ್ಕಿಳಿದರೆ, ಲೂಸ್ ಟಾಕ್ ಆಗಿದ್ದರೆ ಇಂಥ ಅರ್ಹರಿಗೂ ಅದೆಂಥ ಗತಿ ಎದುರಾಗುತ್ತದೆ ಎನ್ನುವುದಕ್ಕೆ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ತಾಜಾ ನಿದರ್ಶನ. ಕುರುಬ ಜನಾಂಗ ಪ್ರತಿನಿಧಿಸುವ ಚಿಮ್ಮನಕಟ್ಟಿ ಅದನ್ನೇ ಆಧಾರವಾಗಿಟ್ಟುಕೊಂಡು ಐದು ಬಾರಿ ಗೆದ್ದಿದ್ದಾರೆ. ಆದರೆ, ಅವರ 'ಲೂಸ್ ಟಾಕ್‌'ನಿಂದಾಗಿ ಈಗ ಸಚಿವ ಪಟ್ಟವೂ ಸಿಗದೆ ಒದ್ದಾಡುತ್ತಿದ್ದಾರೆ. ಕುರುಬ ಜನಾಂಗದ ಪ್ರಬಲ ನಾಯಕ ಸಿದ್ದರಾಮಯ್ಯ ಅವರ ವಿರುದ್ಧವೂ ಸಾಕಷ್ಟು ಮಾತಾಡಿ ಈಗ ಪರದಾಡುತ್ತಿದ್ದಾರೆ. ಕುರುಬ ಸಮುದಾಯಕ್ಕೆ ಉನ್ನತ ಸ್ಥಾನ ಸಿಗುವುದಾದರೆ ಕುರುಬರಲ್ಲಿ ನಾನೇ ಸೀನಿಯರ್, ನನಗೆ ಅಂಥ ಸ್ಥಾನ ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದರು. ಪ್ರತಿಪಕ್ಷದ ನಾಯಕರಾದ ಬಳಿಕ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಪ್ರವಾಸ ಕೈಕೊಂಡು ಬಾದಾಮಿ, ಬಾಗಲಕೋಟೆಗೆ ಬಂದಾಗಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಪರ ಜೈಕಾರ ಹಾಕಿದರೆ 'ಸಿದ್ದುಗಿಂತ ನಾನು ಸೀನಿಯರ್ರು, ಮೊದಲು ನನಗೆ ಜೈ ಎನ್ನಿ' ಎಂದು ಮೈಕ್ ಮುಂದೆ ಬಂದು ಗಲಾಟೆ ಮಾಡಿದ್ದರು. ಚಿಮ್ಮನಕಟ್ಟಿ ಅವರ ಈ ಸೀನಿಯರ್ ಪ್ರತಿಪಾದನೆಯನ್ನು ಕೇಳುತ್ತ ಬಂದಿರುವ ಅವರ ಅಭಿಮಾನಿಗಳು ಈಗ ಮಂತ್ರಿ ಸ್ಥಾನ ಕೈ ತಪ್ಪಿರುವುದನ್ನು ಕಂಡು 'ನಮ್ ಸೀನಿಯರ್ ನಾಯಕರಿಗೆ ನಿಗಮ-ಮಂಡಳಿಯ ಅಧ್ಯಕ್ಷಗಿರಿಯಾದರೂ ಸಿಗಲಿ ದೇವ್ರೇ. ಇಲ್ಲದಿದ್ದರೆ ಕನಸಿನಲ್ಲೂ ಸೀನಿಯರ್ ಸೀನಿಯರ್ ಎಂದು ಬಡಬಡಿಸುತ್ತಾರೆ' ಎಂದು ಪ್ರಾರ್ಥಿಸುತ್ತಿದ್ದಾರೆ.
ಪೇಪರ್‌ನಲ್ಲಿ ಒಂದೇ ಒಂದು ಲೈನ್
ಚುನಾವಣೆ ಘೋಷಣೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಕ್ಕೆ ಎರಡು ಮೂರು ಕಡೆ ಪತ್ರಿಕಾಗೋಷ್ಠಿ ನಡೆಸಿ ಶತಕದತ್ತ ಮುನ್ನುಗ್ಗಿರುವ ಜನಾರ್ದನ ಪೂಜಾರಿ ಕಳೆದ ಶನಿವಾರವೂ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. 'ಸರ್ಕಾರ ದಾರಿ ತಪ್ಪಿದರೆ ಜನ ಬುದ್ಧಿ ಕಲಿಸುತ್ತಾರೆ. ನಿಮಗೆ ಗೊತ್ತುಂಟಲ್ಲ, ಸಿದ್ದರಾಮಯ್ಯಗೆ ನಾನು ಬಿಡುವುದಿಲ್ಲ' ಎಂದು ಹೇಳಿದ್ದನ್ನೇ ಹೇಳಿದಾಗ ಸಹನೆ ಕಳೆದುಕೊಂಡ ಪತ್ರಕರ್ತರೊಬ್ಬರು, ಪ್ರತಿದಿನ ನೀವು ಇದನ್ನು ನಮ್ಮ ಮುಂದೆ ಹೇಳುವುದನ್ನು ಬಿಟ್ಟು ಸಿದ್ದರಾಮಯ್ಯರ ಕ್ಯಾಬಿನೆಟ್ ಮುಂದೆ ಸುದ್ದಿ ಹೇಳಬಹುದಲ್ಲ ಎಂದಾಗ ಪೂಜಾರಿ ಉಗುಳು ನುಂಗಿಕೊಂಡು, ಅಲ್ಲಲ್ಲ.. ಅದು ಜನರಿಗೂ ಗೊತ್ತಾಗಬೇಕು ಎಂದರು. ಕೊನೆಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರೊಬ್ಬರನ್ನು ತಡೆದು ನಿಲ್ಲಿಸಿ, ನಿನಗೆ ಬೇಜಾರಾಗದಿದ್ರೆ ಒಂದು ಪ್ರಶ್ನೆ ಕೇಳಬಹುದಾ ಎಂದರು. 'ನೀವು ಇಷ್ಟೆಲ್ಲಾ ಪ್ರಶ್ನೆಗಳನ್ನು ಕೇಳ್ತೀರಲ್ಲಾ.. ಮರುದಿನ ಪೇಪರ್‌ನಲ್ಲಿ ಒಂದೇ ಒಂದು ಲೈನ್ ಸುದ್ದಿ ಬರುತ್ತದೆ ಅಷ್ಟೇ..' ಎಂದರು. ಬಳಿಕ ಪತ್ರಕರ್ತರು ಮಾತಾಡಲಿಲ್ಲ. ಪೂಜಾರಿಯೂ ಮಾತಾಡಲಿಲ್ಲ.
ಗೆಲ್ಲುವ ಮೊದಲೇ ಸೆಲ್ಯೂಟ್!
ಮತ ಎಣಿಕೆ ದಿನ ಬಂಟ್ವಾಳ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹು ಸಂಖ್ಯೆಯಲ್ಲಿ ಮುನ್ನುಗ್ಗುತ್ತಿದ್ದರು. ಎಣಿಕೆ ಇನ್ನೂ ಪೂರ್ಣಗೊಂಡಿರಲಿಲ್ಲ. ರಮಾನಾಥ ರೈ ಗೆಲ್ಲುವುದು ಖಚಿತವಾದಾಗ ಒಂದು ರೌಂಡ್ ಗಾಳಿ ಸೇವನೆಗೆಂದು ಹೊರಗೆ ಕಾಲಿಟ್ಟರು. ಅಷ್ಟೇ ಗೊತ್ತು. ಇಬ್ಬರು ಎಸಿಪಿಗಳು(ಸಂಚಾರಿ ಮತ್ತು ನಗರ) ನಾ ಮುಂದು ತಾ ಮುಂದು ಎಂದು ಸೆಲ್ಯೂಟ್ ಹೊಡೆದೇ ಬಿಟ್ಟರು. ಇಬ್ಬರು ಎಸಿಪಿಗಳೂ ಬಿಜೆಪಿ ಶಕ್ತಿ ಕೇಂದ್ರದ ಪ್ರಭಾವ ಬಳಸಿಕೊಂಡೇ ಬಂದಿದ್ದರು ಎಂಬುದನ್ನು ಬೇರೆ ಹೇಳಬೇಕಾಗಿರಲಿಲ್ಲ. ಇದು ಗೊತ್ತಿದ್ದ ರೈ, ಸಣ್ಣದಾಗಿ ನಸು ನಕ್ಕರು. ಆದರೆ ರೈ ಅವರ ಬೆಂಬಿಡದ ಎಸಿಪಿಗಳು ನಮ್ದೇ ಸರ್ಕಾರ ಬರ್ತದೆ ಸರ್ ಎಂದು ಹೇಳಿದಾಗ, ರೈ ಅವರು ಸುಮ್ಮನಿರಲಿಲ್ಲ. ನೀವೆಲ್ಲಾ ಹಿಂದಿನ ಸರ್ಕಾರದ ಏಜೆಂಟರಲ್ವಾ ಎಂದು ಕುಟಕಿಯೇ ಬಿಟ್ಟರು. ಈಗ ಪೆಚ್ಚು ಮೋರೆ ಹಾಕುವ ಸರದಿ ಎಸಿಪಿಗಳದ್ದು!

-ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com