ಅಂಕಣಗಳು

ಇಂಡಿಯಾ ಶೈನಿಂಗ್, ಭಾರತ ನಿರ್ಮಾಣ ತೆರಿಗೆದಾರನಿಗೆ ಅವಮಾನ

Published On :

ಅದಾಗಲೇ ಬೇರೆ ಬೇರೆ ಸಂದರ್ಭಗಳಲ್ಲಿ ಸರ್ಕಾರಿ ಜಾಹೀರಾತಿನ ಮೂಲಕ ಸಾರಿರುವ ವಿಷಯಗಳನ್ನೇ ಮತ್ತೆ ಹೇಳುವುದಕ್ಕೆ ನೂರು ಕೋಟಿ ರುಪಾಯಿಗಳ ವೆಚ್ಚದಲ್ಲಿ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳುವುದು ಎಂದರೆ ಏನರ್ಥ?
ಭಾರತ್ ನಿರ್ಮಾಣ್ ಎಂಬುದು ಕೇಂದ್ರ ಸರ್ಕಾರದ ಜಾಹೀರಾತು ಆಂದೋಲನ. ಇದರಲ್ಲಿ ಜನರು ಐಐಟಿಗಳು, ರಸ್ತೆ, ಮೆಟ್ರೋ ರೈಲ್ವೆ, ಮಾಹಿತಿ ಹಕ್ಕು ಕಾಯ್ದೆ ಮತ್ತು ಸರ್ಕಾರದ ಇನ್ನಿತರ ಸಾಧನೆಗಳ ಬಗ್ಗೆ ಮಾತನಾಡುವಂತೆ ಚಿತ್ರಿಸಲಾಗಿದೆ. ಹದಿನೈದು ದಿನಗಳ ಮೊದಲ ಸುತ್ತಿನ ಪ್ರಚಾರಾಂದೋಲನಕ್ಕೆ ತಗುಲಿದ ವೆಚ್ಚ 35 ಕೋಟಿ ರುಪಾಯಿಗಳು. ಪ್ರದೀಪ್ ಸರ್ಕಾರ್ ನಿರ್ದೇಶನದ, ಶಾನ್ ಮತ್ತು ಸುನಿಧಿ ಚೌಹಾಣ್ ಹಾಡುಗಾರಿಕೆಯ 'ಮೈಲೋ ಹಮ್ ಮೈಲೋ ಹಮ್ ಜಾನಾ ಹೈ' ಎಂಬ ಜಾಹೀರಾತು ನಿರ್ಮಾಣಕ್ಕೆ ತಗುಲಿದ ವೆಚ್ಚವೇ 16 ಕೋಟಿ ರುಪಾಯಿಗಳಂತೆ. ನಿರೀಕ್ಷೆಯಂತೆ ಎಲ್ಲ ಜಾಹೀರಾತುಗಳೂ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರನ್ನು ಮಂದಸ್ಮಿತ ಮುಖದಲ್ಲಿ ಚಿತ್ರಿಸಿವೆ. ಈ ಪ್ರಾರಂಭಿಕ ಜಾಹೀರಾತು ಚಮಕ್‌ಗಳಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು, ಸರ್ಕಾರದ ಸಾಧನೆ ಬಿಂಬಿಸುವ ಇನ್ನೂ ಹೆಚ್ಚಿನ ಜಾಹೀರಾತುಗಳನ್ನು 180 ಕೋಟಿ ರುಪಾಯಿಗಳಲ್ಲಿ ನಿರ್ಮಿಸುವ ಯೋಜನೆ ಇದೆ ಎಂದು 'ಇಂಡಿಯಾ ಟುಡೆ' ನಿಯತಕಾಲಿಕದ ವರದಿ ಹೇಳುತ್ತಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವ ಮನೀಶ್ ತಿವಾರಿ ಇದನ್ನು ಭರ್ಜರಿಯಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ಅವರ ಪ್ರಕಾರ ಇದು ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡುತ್ತಿರುವ ಪ್ರಚಾರಾಂದೋಲನ ಅಲ್ಲವೇ ಅಲ್ಲ. ಯುಪಿಎ ಸರ್ಕಾರದ ಒಂಬತ್ತು ವರ್ಷದ ಸಾಧನೆಗಳನ್ನು ಹರವಿಡುವ ಪ್ರಯತ್ನವಂತೆ. '2004ರಲ್ಲಿ ಎನ್‌ಡಿಎ ನಡೆಸಿದ 'ಇಂಡಿಯಾ ಶೈನಿಂಗ್‌' ಅಭಿಯಾನಕ್ಕೆ ಇದನ್ನು ಹೋಲಿಸಬೇಡಿ. ಅಲ್ಲಿ ಎಲ್ಲವನ್ನೂ ಉತ್ಪ್ರೇಕ್ಷಿತವಾಗಿ ಹೇಳಲಾಗಿತ್ತು. ನಾವು ಅಂಕಿಅಂಶಗಳನ್ನಷ್ಟೇ ಮುಂದಿಟ್ಟು ಉಳಿದಿದ್ದನ್ನು ಜನರ ನಿಷ್ಕರ್ಷೆಗೆ ಬಿಡುತ್ತಿದ್ದೇವೆ' ಎನ್ನುತ್ತಾರವರು. ಇಂಡಿಯಾ ಶೈನಿಂಗ್ ಉದಾಹರಣೆಯಿಂದ ಇವರು ಅಂತರ ಕಾಪಾಡಿಕೊಳ್ಳುವುದಕ್ಕೂ ಕಾರಣವಿದೆ. ಅತ್ಯಂತ ಟೀಕೆಗೆ ಒಳಗಾದ ರಾಜಕೀಯ ಅಭಿಯಾನ ಅದು. 120 ದಿನಗಳ ಅವಧಿಯಲ್ಲಿ ತೆರಿಗೆದಾರರ 150 ಕೋಟಿ ರುಪಾಯಿಗಳನ್ನು ವ್ಯರ್ಥ ಮಾಡಿತ್ತದು. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಆ ಅಭಿಯಾನವನ್ನು ನಿರ್ಮಿಸಿದ ಏಜೆನ್ಸಿಯವರೂ 'ಇದು ಇಂಥದೇ ಪಕ್ಷಕ್ಕೆ ಮತ ಹಾಕಿ ಎನ್ನುವ ರಾಜಕೀಯ ಅಭಿಯಾನ ಅಲ್ಲವೇ ಅಲ್ಲ. ಭಾರತದ ಕತೆಯನ್ನು ಜನರೆದುರು ತೆರೆದಿಡುವುದಷ್ಟೇ ಅದರ ಉದ್ದೇಶವಾಗಿತ್ತು' ಎಂದೇ ಪ್ರತಿಪಾದಿಸಿದ್ದರು.  ಅಂತೂ ಕೇವಲ ರಾಜಕೀಯ ಆಕಾಂಕ್ಷೆಗಳನ್ನು ಪೊರೆಯುವುದಕ್ಕಷ್ಟೇ ಸೀಮಿತವೆನಿಸುವ ಇಂಥ ಅಭಿಯಾನಗಳಿಗೆ ಬೆಲೆ ತೆರುವ ಸ್ಥಿತಿ ಭಾರತೀಯರದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇಂಥ ದುಂದುವೆಚ್ಚದಲ್ಲಿ ಆಗಾಗ ತೊಡಗಿಸಿಕೊಳ್ಳುತ್ತವೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಪೂರ್ವದ ಇಂಥ ಖರ್ಚುಗಳ ವಿಷಯದಲ್ಲಿ ಚುನಾವಣಾ ಆಯೋಗವೂ ಏನೂ ಮಾಡುವಂತಿಲ್ಲ. ಬಹುಶಃ ಮಾಹಿತಿ ಆಂದೋಲನ ಮತ್ತು ರಾಜಕೀಯ ಅಭಿಯಾನಗಳ ನಡುವೆ ವ್ಯತ್ಯಾಸ ಗುರುತಿಸುವ ಕೆಲಸವನ್ನೂ ಆಯೋಗಕ್ಕೆ ವಹಿಸಿದರೆ ಒಳ್ಳೆಯದು. ಏಕೆಂದರೆ ಇಂಥವುಗಳಿಗೆಲ್ಲ ತೆರಿಗೆದಾರರ ಹಣವಿರುವ ಸರ್ಕಾರಿ ಖಜಾನೆಯನ್ನೇ ಬಳಸಲಾಗುತ್ತಿದೆಯಲ್ಲ..

-ಅರುಣ್ ಜಾರ್ಜ್,
ಫಸ್ಟ್‌ಪೋಸ್ಟ್ ಜಾಲತಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.