'Journalism is organized gossips'
ಹಾಗಂತ ಹೇಳಿದವನು ಅಮೆರಿಕದ ಖ್ಯಾತ ಇತಿಹಾಸಕಾರ ಮತ್ತು ಕಾದಂಬರಿಕಾರ ಎಡ್ವರ್ಡ್ ಈಗಲ್ಸ್ಟನ್. ಈ ಮಾತನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಆದರೆ ಪತ್ರಕರ್ತರಿದ್ದಾರಲ್ಲ, ಅವರು ಮಾತ್ರ ಮಹಾನ್ ವದಂತಿಪ್ರಿಯರು, ಗಾಸಿಪ್ದಾಸರು. ಎಷ್ಟು ವದಂತಿಪ್ರಿಯರೆಂದರೆ ಅವರು ವದಂತಿಯನ್ನು ಕೇಳುವುದಷ್ಟೇ ಅಲ್ಲ, ಅದನ್ನೇ ಉಸಿರಾಡಲು ಬಯಸುತ್ತಾರೆ. ಕೆಲವರು ಅದನ್ನೇ ವೃತ್ತಿ (Profession) ಎಂದು ಭಾವಿಸಿರುತ್ತಾರೆ. ವದಂತಿಗಳ ಬಗ್ಗೆ ಪತ್ರಕರ್ತರದು ಎಂಥಾ ನಿಯತ್ತು ಅಂದ್ರೆ ಯಾರು ಸಹ ವದಂತಿಗಳನ್ನಷ್ಟೇ ರಿಪೀಟ್ ಮಾಡುವುದಿಲ್ಲ. ಜತೆಗೆ ತಮ್ಮ ಕಾಣ್ಕೆಯನ್ನೂ ಸೇರಿಸಿ ಇಂಪ್ರೂವ್ ಮಾಡುತ್ತಾರೆ.
ವಿಧಾನಸೌಧದ ಮುಂದೆ ಹುಲಿಯೊಂದು ತನ್ನ ಪಾಡಿಗೆ ತಾನು ನಡೆಯುತ್ತಾ ಕಬ್ಬನ್ಪಾರ್ಕ್ಗೆ ಹೋಗಿ ಅಲ್ಲಿನ ಮರಗಿಡಗಳ ಮಧ್ಯೆ ಕಣ್ಮರೆಯಾಯಿತು ಅಂತಿಟ್ಟುಕೊಳ್ಳಿ. ಆ ಸುದ್ದಿ ಪಕ್ಕದ ಪ್ರೆಸ್ ಕ್ಲಬ್ನಲ್ಲಿ ಕೆಲಸವಿಲ್ಲದೇ ಕುಳಿತ ಪರಾಮಶಿ ಪತ್ರಕರ್ತನೊಬ್ಬನ ಕಿವಿಗೆ ಬಿತ್ತು ಅಂತಿಟ್ಟುಕೊಳ್ಳಿ, ಅರ್ಧ ಗಂಟೆಯೊಳಗೆ ಅದು ಎಲ್ಲ ಟಿವಿ ಚಾನೆಲ್ ಹಾಗೂ ಪತ್ರಿಕಾ ಕಚೇರಿಗಳಿಗೆ ತಲುಪಿರುತ್ತದೆ. ಟಿವಿ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ನಲ್ಲಿ 'ಸಿಎಂ ಸಿದ್ದರಾಮಯ್ಯ ಭೇಟಿಯಾದ ಹುಲಿರಾಯ', 'ಕುರಿಗಳ ಮೇಲೆ ದಾಳಿ ಮಾಡಕೂಡದೆಂದು ಒತ್ತಾಯಿಸಿದ ಸಿಎಂ' ಎಂಬ ಸುದ್ದಿಸಾಲುಗಳು ಸರಿದು ಹೋಗುತ್ತಿರುತ್ತವೆ. ಅದಕ್ಕೇ ಇರಬೇಕು. ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ- Today's gossip is tomorrow's headline (ಇಂದಿನ ವದಂತಿಯೇ ನಾಳಿನ ಪತ್ರಿಕೆಗಳಲ್ಲಿ ಹೆಡ್ಲೈನ್).
ಪತ್ರಕರ್ತರು ಮಹಾನ್ ವದಂತಿಪ್ರಿಯರು ಎಂಬ ಕಾರಣಕ್ಕೇ ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಡನ್ ಜಾನ್ಸನ್ ಪತ್ರಕರ್ತರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಪತ್ರಕರ್ತರೂ ಅವನ ವಿಷಯದಲ್ಲಿ ತುಸು ಅತಿಯಾಗಿಯೇ ಬರೆಯುತ್ತಿದ್ದರು. ಜಾನ್ಸನ್ ಕೂಡ ಪತ್ರಕರ್ತರನ್ನು ಕಂಡರೆ ಅತಿಯಾಯಾಗಿ ವರ್ತಿಸುತ್ತಿದ್ದ. ಬೇಕಂತಲೇ ಕೆಣಕುತ್ತಿದ್ದ. 'ನನ್ನ ಬಗ್ಗೆ ನೀವು ಯಾವತ್ತೂ ಒಳ್ಳೆಯದನ್ನು ಬರೆದವರಲ್ಲ. ಹೀಗಾಗಿ ನಾನು ನಿಮ್ಮಿಂದ ಅದನ್ನು ನಿರೀಕ್ಷಿಸುವುದಿಲ್ಲ. ಐ ಡೋಂಟ್ ಕೇರ್ ಫಾರ್ ಯು' ಎಂದು ನೇರಾನೇರ ಝಾಡಿಸುತ್ತಿದ್ದ. ಪತ್ರಕರ್ತರಿಗೂ ಅವನನ್ನು ಕೆಣಕುವುದರಲ್ಲಿ ಏನೋ ಮಹಾದಾನಂದ. ಇದು ಅತಿರೇಕಕ್ಕೆ ಹೋಗಿ ಜಾನ್ಸನ್ ಪತ್ರಕರ್ತರನ್ನು ಭೇಟಿಯಾಗಲೇಬಾರದು ಎಂದು ನಿರ್ಧರಿಸಿದ್ದ.
ಅಧ್ಯಕ್ಷನಾಗಿ ಆರು ತಿಂಗಳಾದವು. ಜಾನ್ಸನ್ನ ಪತ್ರಿಕಾ ಕಾರ್ಯದರ್ಶಿ 'ಸಾರ್, ಹೀಗಾದ್ರೆ ಹೇಗೆ? ಬೇಡ, ಚೆನ್ನಾಗಿರೊಲ್ಲ. ಪತ್ರಕರ್ತರ ಜತೆ ಊಟ ಮಾಡೋಣ. ಭೋಜನಕೂಟಕ್ಕೆ ಆಹ್ವಾನಿಸಿ' ಎಂದು ಸಲಹೆಕೊಟ್ಟ. ಒಲ್ಲದ ಮನಸ್ಸಿನಿಂದ ಜಾನ್ಸನ್ ಒಪ್ಪಿದ.
ಸರಿ, ಭೋಜನಕೂಟ ಏರ್ಪಾಟಾಯಿತು. ಪತ್ರಕರ್ತರು ಬಂದರು. ಜಾನ್ಸನ್ ಮೊದಲೇ ನಿರ್ಧರಿಸಿದ್ದ ಪತ್ರಕರ್ತರ ಜತೆ ಹೆಚ್ಚು ಮಾತಾಡಬಾರದೆಂದು. ಅದೇನಾಯಿತೋ ಏನೋ? ಪತ್ರಕರ್ತರನ್ನು ಕಂಡ ಕೂಡಲೇ ಅವರನ್ನು ಕೇಳಬೇಕೆನಿಸಿತು. ಒಬ್ಬ ಪತ್ರಕರ್ತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, 'ಹುಬರ್ಟ್ ಹೆಂಫ್ರಿ (ಜಾನ್ಸನ್ ಅಧ್ಯಕ್ಷನಾದ ಅವಧಿಯಲ್ಲಿ ಹೆಂಫ್ರಿ ಉಪಾಧ್ಯಕ್ಷನಾಗಿದ್ದ)ಯ ವೃಷಣವಿದೆಯಲ್ಲ, ಬೇಕಾದರೆ ನೋಡಿ, ಅದು ನನ್ನ ಪ್ಯಾಂಟಿನ ಕಿಸೆಯಲ್ಲಿಯೇ ಇದೆ. ಯಾರಿಗೂ ಗೊತ್ತಿಲ್ಲ. ಎಲ್ಲರೂ ಅದು ನನ್ನದೇ ಎಂದು ಭಾವಿಸಿದ್ದಾರೆ.' ಎಂದು ಗುಟ್ಟು ಮಾಡಿದ. ಈ ವರದಿಗಾರ ಈ ಸುದ್ದಿಯನ್ನು ಹೇಗೆ ಬರೆಯಬಹುದು ಎಂಬ ಬಗ್ಗೆ ಜಾನ್ಸನ್ಗೆ ತೀವ್ರ ಕುತೂಹಲವಿತ್ತು. ಮರುದಿನದ ಪತ್ರಿಕೆಯಲ್ಲಿ ಶೀರ್ಷಿಕೆ ಪ್ರಕಟವಾಗಿತ್ತು- Hubert Humphrey's vice is president.' (ಇಲ್ಲಿ vice ಅಂದ್ರೆ ವೃಷಣ ಎಂಬುದಾಗಿ ಆತ ಬಣ್ಣಿಸಿದ್ದ. ವೈಸ್ ಪ್ರಸಿಡೆಂಟ್ ಹುಬರ್ಟ್ ಹೆಂಫ್ರಿಯ ವೃಷಣವೇ ಪ್ರಸಿಡೆಂಟ್. ಲಿಂಡನ್ ಜಾನ್ಸನ್ ಯೋಚನೆಗಳಿಗೆಲ್ಲ ಮೂಲವೇ ಅದು ಎಂಬ ಅರ್ಥ ಬರುವಂತೆ ಬರೆದಿದ್ದ.)
ಇದಾಗಿ ಆರು ತಿಂಗಳ ನಂತರ ಪುನಃ ಪತ್ರಕರ್ತರಿಗೆ ಜಾನ್ಸನ್ ಔತಣಕೂಟವನ್ನು ಏರ್ಪಡಿಸಿದ್ದ. ಆಗಲೂ ಅವನಿಗೆ ಪತ್ರಕರ್ತರ ಬಗ್ಗೆ ಮೊದಲಿನ ಅಭಿಪ್ರಾಯವೇ ಇತ್ತು. ಆದರೂ ಪುನಃ ಅವರನ್ನು ಪರೀಕ್ಷಿಸಲೆಂದೋ, ಕೀಟಲೆ ಮಾಡಲೆಂದೋ ಜಾನ್ಸನ್ ಹೇಳಿದ- 'ನೋಡಿ, ನಾನು ವಾಷಿಂಗ್ಟನ್ನಲ್ಲಿರುವ ಪೊಟೋಮ್ಯಾಕ್ ನದಿಯ ಮೇಲೆ ನಡೆಯಲು ಆರಂಭಿಸಿದ್ದೇನೆ.' ಅಮೆರಿಕದ ಅಧ್ಯಕ್ಷ ನದಿ ನೀರಿನ ಮೇಲೆ ನಡೆಯುವುದೆಂದರೆ ಸಣ್ಣ ಮಾತೇನು?!
ಜಾನ್ಸನ್ಗೆ ಬಹಳ ಕುತೂಹಲವಿತ್ತು, ಮರುದಿನ ಪತ್ರಕರ್ತರು ತನ್ನ ಈ ಹೇಳಿಕೆಯನ್ನು ಹೇಗೆ ವರದಿ ಮಾಡಬಹುದೆಂದು. ಪತ್ರಿಕೆಯೊಂದು ಬರೆದಿತ್ತು- 'American President doesn't know swimming'. (ಅಮೆರಿಕ ಅಧ್ಯಕ್ಷರಿಗೆ ಈಜಲು ಬರುವುದಿಲ್ಲ.) ಪತ್ರಿಕೋದ್ಯಮ ಅಂದ್ರೆ ವ್ಯವಸ್ಥಿತ ಅಥವಾ ಸಂಘಟಿತ ವದಂತಿಗಳ ಕಂತೆ ಎಂದು ಆ ಮಹಾಶಯ ಹೇಳಿದ್ದು ಇದಕ್ಕೇನಾ?
ಲಿಂಡನ್ ಜಾನ್ಸನ್ ಪತ್ರಕರ್ತರ ಬಗ್ಗೆ ಮತ್ತೊಂದು ಮಾತನ್ನು ಹೇಳಿದ್ದಾನೆ-'ಪತ್ರಕರ್ತರು ಜನರನ್ನು ಎರಡು ರೀತಿಯಲ್ಲಿ ಹೆಸರಿಸುತ್ತಾರೆ. ನಿನ್ನ ಬಗ್ಗೆ ಬರೆಯುವುದಿಲ್ಲ ಅಂತ ಹೇಳಿ ಹೆದರಿಸುತ್ತಾರೆ. ಇದು ಎಷ್ಟೋ ಪಾಲು ಒಳ್ಳೆಯದು. ಇನ್ನೊಂದು ರೀತಿಯಲ್ಲೂ ಹೆದರಿಸುತ್ತಾರೆ. ಅದೇನೆಂದರೆ, ನಿನ್ನ ವಿರುದ್ಧ ಬರೀತೀನಿ ನೋಡು ಎಂದು ಹೇಳುತ್ತಾರೆ.'
'ಪತ್ರಕರ್ತರಿಗೆ ಗಾಸಿಪ್ ಅನ್ನು ಮಾತ್ರ ಭದ್ರವಾಗಿ ಇಟ್ಟುಕೊಳ್ಳಲು ಬರೊಲ್ಲ. ಎಷ್ಟೇ ಪ್ರಯಾಸ ಪಟ್ಟರೂ ಅದನ್ನು ತಮ್ಮಲ್ಲಿ ಇಟ್ಟುಕೊಳ್ಳಲು ಅವರಿಗೆ ಆಗುವುದೇ ಇಲ್ಲ. ಕೇಳಿದ ತಕ್ಷಣ ಅದನ್ನು ಬೇರೆಯವರಿಗೆ ಹೇಳಿ ಬಿಡಬೇಕು. ಕೇಳಿದ್ದಷ್ಟನ್ನೇ ಅಲ್ಲ, ಜತೆಗೆ ಉಪ್ಪು-ಖಾರವನ್ನೂ ಸೇರಿಸಿ ಹೇಳಬೇಕು'. ಹೀಗೆಂದು ಹೇಳಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಅದಕ್ಕೆ ಕಾರಣವೂ ಇತ್ತು. ಎಂಬತ್ತರ ದಶಕದ ಆರಂಭದಲ್ಲಿ ವಾಜಪೇಯಿ ಅವರು ಹೊಸ ದಿಲ್ಲಿಯಲ್ಲಿ ಕೌಲ್ ದಂಪತಿಗಳ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರೊ. ಕೌಲ್ ಅವರು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ವಾಜಪೇಯಿ ಅವರು ಅಲ್ಲಿ ಉಳಿದುಕೊಂಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ವದಂತಿಗಳಿಗೆ ತನ್ನಿಂದ ತಾನೇ ರೆಕ್ಕೆ-ಪುಕ್ಕ ತಗುಲಿಕೊಂಡಿದ್ದವು. ಈ ವದಂತಿಗಳು ಸಹಜವಾಗಿ ವಾಜಪೇಯಿಯವರನ್ನೂ ತಲುಪಿದವು.
ಒಮ್ಮೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಮುಗಿದ ನಂತರ ಪತ್ರಕರ್ತರೊಂದಿಗೆ ಲೋಕಾಭಿರಾಮ ಮಾತನಾಡುವಾಗ, 'ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಪಾಪ, ಏನೋ ಕೇಳಬೇಕು ಅಂತ ಚಡಪಡಿಸುತ್ತೀರಿ. ಕೇಳಲಾಗದೇ ಮತ್ತಷ್ಟು ಚಡಪಡಿಸುತ್ತೀರಿ. ನಿಮ್ಮನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಾಕ್ರಟಿಸ್ ಇದ್ದಾನಲ್ಲ, ಆತ ವದಂತಿಗಳ ಬಗ್ಗೆ ಒಂದು ಕತೆ ಹೇಳಿದ್ದ. ಆ ಕತೆ ನೆನಪಾಗುತ್ತಿದೆ. ಹೇಳ್ತೇನೆ ಕೇಳಿ' ಎಂದು ಶುರು ಹಚ್ಚಿಕೊಂಡರು.
ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ, 'ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿನಗೆ ಗೊತ್ತಿದೆಯಾ?' ಎಂದು ಕೇಳಿದ.
ಅದಕ್ಕೆ ಸಾಕ್ರಟಿಸ್, 'ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ' ಎಂದ. ಅದಕ್ಕೆ ಆತ ಒಪ್ಪಿಕೊಂಡ.
'ಮೊದಲ ಹಂತ ಅಂದ್ರೆ ಸತ್ಯ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?' ಎಂದ ಸಾಕ್ರಟೀಸ್.
ಅದಕ್ಕೆ ಸ್ನೇಹಿತ 'ಅದು ಸತ್ಯವೂ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ' ಎಂದ.
ಅವನ ಮಾತಿಗೆ ಸಾಕ್ರಟಿಸ್, 'ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು. ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ. ಇದು goodness ಪರೀಕ್ಷೆ. ಆದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?' ಎಂದು ಕೇಳಿದ.
ಅದಕ್ಕೆ ಸ್ನೇಹಿತ, 'ಇಲ್ಲ...ಇಲ್ಲ... ಅದು ಒಳ್ಳೆಯ ವಿಷಯವಲ್ಲ' ಎಂದ.
'ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು. ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ. ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು' ಎಂದ ಸಾಕ್ರಟಿಸ್.
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ. ಸಾಕ್ರಟಿಸ್ ಮುಂದುವರಿಸಿದ-'ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?'
ಅದಕ್ಕೆ ಸ್ನೇಹಿತ, ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ' ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-'ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ? ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು.'
ವಾಜಪೇಯಿ ಈ ಕತೆ ಹೇಳಿ ಮುಗಿಸುವ ಹೊತ್ತಿಗೆ ಅವರ ಮಾತಿನ ಮರ್ಮವನ್ನು ಅರಿತುಗೊಂಡ ಪತ್ರಕರ್ತರಲ್ಲಿ ಬಹುತೇಕರು ಕಾಲಿಗೆ ಬುದ್ಧಿ ಹೇಳಿದ್ದರು. ಈ ಪ್ರಸಂಗದ ಬಳಿಕ ವಾಜಪೇಯಿಯವರಿಗೆ ತಮ್ಮ ಸುತ್ತ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮತ್ತೆ ಎಂದೆಂದೂ ಸ್ಪಷ್ಟನೆ ನೀಡುವ ಅಗತ್ಯವೇ ಬೀಳಲಿಲ್ಲ.
ನಿಮಗೆ ಪೋಪ್ ನ್ಯೂಯಾರ್ ಕ್ಗೆ ಹೋದ ಕತೆ ಗೊತ್ತಿರಬಹುದು.
ಒಮ್ಮೆ ಪೋಪ್ ನ್ಯೂಯಾರ್ ಕ್ಗೆ ಹೋದರು. ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಪೋಪ್ ರನ್ನು ಸುತ್ತುವರಿದು ಪ್ರಶ್ನೆಗಳ ಮಳೆಗರೆಯಲಾರಂಭಿಸಿದರು. ಪೋಪ್ ಸಮಾಧಾನಚಿತ್ತರಾಗಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದರು. ಕೊನೆಯಲ್ಲಿ ಕಿಲಾಡಿ ಪತ್ರಕರ್ತನೊಬ್ಬ, 'ಪೋಪ್ ಅವರೇ, ತಮ್ಮ ನ್ಯೂಯಾರ್ಕ್ ಭೇಟಿ ಸಂದರ್ಭದಲ್ಲಿ ಇಲ್ಲಿನ ನೈಟ್ ಕ್ಲಬ್ಗಳಿಗೆ ಹೋಗುತ್ತೀರಾ?' ಎಂದು ಕೇಳಿಬಿಟ್ಟ. ಪಾಪ. ಪೋಪ್ಗೆ ನೈಟ್ಕ್ಲಬ್ ಅಂದ್ರೆ ಏನು ಅಂತ ಗೊತ್ತಿಲ್ಲ. ಆತನ ಚೇಷ್ಟೆ ಅವರಿಗೆ ಅರ್ಥವಾಗಲಿಲ್ಲ. ಅವರು ಕುತೂಹಲದಿಂದ 'ನೈಟ್ ಕ್ಲಬ್ ಅಂದ್ರೆ ಏನು?' ಎಂದು ಕೇಳಿದರು. ಪತ್ರಕರ್ತರು ಹಾಗೆಂದರೇನು ಎಂಬುದನ್ನು ಬಣ್ಣಿಸಿದರು. 'ಹೌದಾ?! ನ್ಯೂಯಾರ್ಕ್ನಲ್ಲಿ ನೈಟ್ ಕ್ಲಬ್ ಗಳಂಥ ತಾಣಗಳೂ ಇವೆ ಅಂತಾಯ್ತು. 'very interesting' ಅಂತ ಉದ್ಗರಿಸಿದರು.
ಅಲ್ಲಿದ್ದ ವರದಿಗಾರರಿಗೆ ಅಷ್ಟೇ ಸಾಕಾಯಿತು. ನೈಟ್ ಕ್ಲಬ್ಗಳ ಬಗ್ಗೆ very interesting' ಎಂದು ಪೋಪ್ ಉದ್ಗರಿಸಿದರಲ್ಲ. ಹಾಗಾದರೆ ಅವರು ಅಲ್ಲಿಗೆ ಭೇಟಿ ನೀಡಲು ಉತ್ಸುಕರಾಗಿರಲೇಬೇಕು. ಇಲ್ಲದಿದ್ದರೆ very interesting ಎಂದು ಹೇಳುತ್ತಿರಲಿಲ್ಲ. ಅಷ್ಟೇ ಅಲ್ಲ, ನೈಟ್ ಕ್ಲಬ್ ಅಂದ್ರೆ ಏನು, ಅಲ್ಲಿ ಏನೇನು ಇರುತ್ತವೆ ಎಂದೆಲ್ಲ ವಿಚಾರಿಸಿಕೊಂಡರಲ್ಲ, ಅದರರ್ಥ ಅವರಿಗೆ ನೈಟ್ ಕ್ಲಬ್ ಗೆ ಹೋಗುವ ತವಕವಾಗಿರಬೇಕು. ಇಲ್ಲದಿದ್ದರೆ ನೈಟ್ ಕ್ಲಬ್ ಗಳ ಬಗ್ಗೆ ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಿರಲಿಲ್ಲ... ಹೀಗೆಲ್ಲ ಅಲ್ಲಿ ಸೇರಿದ್ದ ವರದಿಗಾರರು ತಮ್ಮ ತಮ್ಮಲ್ಲಿ ಚರ್ಚಿಸಿಕೊಂಡರು. ನೈಟ್ಕ್ಲಬ್ ಅಂದ್ರೆ ಏನು ಅಂತ, ಅದರ ಬಗ್ಗೆ ಏನೇನೂ ಗೊತ್ತಿಲ್ಲದ ಪೋಪ್ ಪ್ರಶ್ನೆ ಕೇಳಿದ್ದೇ ಯಡವಟ್ಟಾಯಿತು. ಅದು ದೊಡ್ಡ ವದಂತಿಯಾಗಿ ಹರಿದಾಡಲಾರಂಭಿಸಿತು. ಅವರು ಹೇಳಿದ ಇತರ ಸಂಗತಿಗಳೆಲ್ಲ ಗೌಣವಾಯಿತು.
ಮರುದಿನದ ಪತ್ರಿಕೆಗಳಲ್ಲಿ Pope shows keen interest to visit city night club ಎಂಬ ಶೀರ್ಷಿಕೆಯಡಿಯಲ್ಲಿ ವರದಿಗಳು ಪ್ರಕಟವಾದವು.
ಸುದ್ದಿ ಅಂದ್ರೆ ಸತ್ಯ ಸಂಗತಿ. ಗಾಸಿಪ್ ಅಂದ್ರೆ ಗಾಳಿ ಮಾತು. ಅದರಲ್ಲಿ ಸತ್ಯ ಇರೊಲ್ಲ. ಅದಕ್ಕಾಗಿಯೇ ಅದು ಗಾಸಿಪ್. (Gossip is called gossip because its not always the truth) ಹೀಗಾಗಿ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮಗೆ ಆಗದವರ ವಿರುದ್ಧ ನೀವು ಕೇಳಲು ಬಯಸುವ ಸಂಗತಿಗಳೇ ಗಾಸಿಪ್. ಹೀಗಾಗಿ ಅದು ಸಾಕಷ್ಟು ಗಿರಕಿ ಹೊಡೆಯುತ್ತಿರುತ್ತವೆ.
ವದಂತಿಗಳು ಯಾರದೋ ಹಿಂದೆ ಹೋಗುವುದಿಲ್ಲ. ಅವುಗಳಿಗೂ ಪ್ರಸಿದ್ಧಿ, ಜನಪ್ರಿಯತೆ, ಯಶಸ್ಸು ಪಡೆದವರೇ ಬೇಕು. ನಿಮ್ಮ ಬಗ್ಗೆ ಯಾರಾದರೂ ವದಂತಿ ಹರಡುತ್ತಿದ್ದಾರೆಂದರೆ ಅಷ್ಟರಮಟ್ಟಿಗೆ ನೀವೂ ಇವನ್ನೆಲ್ಲ ಪಡೆದವರಿರಬೇಕು ಎಂದರ್ಥ. ಇಲ್ಲೊಂದು ಸಲಹೆ-ಯಾರಾದರೂ ನಿಮ್ಮ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಅಂದ್ರೆ ನೀವು ಅದನ್ನು ನಿಲ್ಲಿಸಲು ಹೋಗಬೇಡಿ. ಅವರು ಕೊಡುವ ಪುಕ್ಕಟ್ಟೆ ಪ್ರಚಾರದಿಂದ ವಂಚಿತರಾಗಬೇಡಿ. ಬೇರೆಯವರು ನಮ್ಮ ಬಗ್ಗೆ ಮಾತಾಡುತ್ತಿದ್ದಾರೆಂದರೆ, ಬಾಡಿಗೆ ಕೊಡದೇ ನಾವು ಅವರ ತಲೆಯಲ್ಲಿ ವಾಸಿಸುತ್ತಿದ್ದೇವೆ ಎಂದರ್ಥ. Let's enjoy this rare previlege! ಅವರೆಲ್ಲರಿಗೆ ಸ್ಪಷ್ಟನೆ ಕೊಟ್ಟು ಈ ಮಜಾ ಅನುಭವವನ್ನು ಕಳೆದುಕೊಳ್ಳಬಾರದು.
ಅದೆಂಥ ಮಜಾ ಎಂಬುದು ಅದನ್ನು ಈಗ ಅನುಭವಿಸುತ್ತಿರುವ ನನಗೇ ಗೊತ್ತು!
-ವಿಶ್ವೇಶ್ವರ ಭಟ್
vbhat@me.com