ಅದೇರಿ... ಲೈವು ಯಾವಾಗ್ ಬರುತ್ತೆ?!

'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋ ಖ್ಯಾತಿಯ ಹಾಗೂ 'ಜಂಗಲ್ ಜಾಕಿ' ಚಿತ್ರದ ನಾಯಕ ನಟ ರಾಜೇಶ್ ಕಳೆದ ವಾರ...
Updated on: 

'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋ ಖ್ಯಾತಿಯ ಹಾಗೂ 'ಜಂಗಲ್ ಜಾಕಿ' ಚಿತ್ರದ ನಾಯಕ ನಟ ರಾಜೇಶ್ ಕಳೆದ ವಾರ ಮೈಸೂರು ಹೊರವಲಯದ ಪರಸಯ್ಯನಹುಂಡಿಯಲ್ಲಿ ತಾನು ವಾಸವಿದ್ದ ಮನೆಯ ಮಹಡಿಯಿಂದ ಕೆಳಬಿದ್ದು ತೀವ್ರವಾಗಿ ಗಾಯಗೊಂಡ ಮೃತಪಟ್ಟ ವಿಷಯ ಗೊತ್ತಿರಬೇಕಲ್ಲ. ಅಲ್ಲೊಂದು ಇಂಟರೆಸ್ಟಿಂಗ್ ಸಂಗತಿ ನಡೆಯಿತು. ಏನೆಂದರೆ, ರಾಜೇಶ್ ವಾಸವಿದ್ದ ಮನೆಯ ಬಳಿ ಖಾಸಗಿ ಸುದ್ದಿ ವಾಹಿನಿಗಳ ವರದಿಗಾರರು ಓಬಿ ವ್ಯಾನ್‌ನೊಂದಿಗೆ ನೇರಪ್ರಸಾರಕ್ಕೆ ತೆರಳಿದ್ದರು. ವಾಹಿನಿಯೊಂದರ ವರದಿಗಾರ ನೇರಪ್ರಸಾರದಲ್ಲಿ ಮಾತನಾಡಲು ಸಜ್ಜಾಗಿದ್ದರು. ಆಗ ಪಕ್ಕಕ್ಕೆ ಬಂದ ಸ್ಥಳೀಯ ನಿವಾಸಿಯೊಬ್ಬರು 'ಪರಮಾತ್ಮ' ಆಡಿಸಿದಂತೆ ಆಡುತ್ತಿದ್ದರು. ಟಿವಿಯಲ್ಲಿ ಯಾವ್ಯಾಗ್ ಬರುತ್ತೆ ಅಂತಾ ಕೇಳಿದ. ಇದು ಲೈವ್ ಅಂದ್ರೆ ನೇರಪ್ರಸಾರ ಎಂದು ಆ ವರದಿಗಾರ ಉತ್ತರಿಸಿದರು. ಆತನಿಗೆ ತಲೆಬುಡ ಅರ್ಥವಾಗಲಿಲ್ಲ.  ಅದೇರಿ ಅದು ಯಾವಾಗ್...? ಅಂದಾಗ ವರದಿಗಾರ ಸುಸ್ತು. ಈಗ ಮನೆಗೋಗಿ ಟಿವಿ ಹಾಕು ಬರ್ತಾಯಿದೆ ಅಂತ ಹೇಳಿ ಅಲ್ಲಿಂದ ಸಾಗ ಹಾಕಿ ಪ್ರಸಾರ ಮುಂದುವರಿಸಬೇಕಾಯಿತು.

ಹೋರಾಟಕ್ಕೆ ಕಾಲ ಕೂಡಿ ಬಂದಿಲ್ವಂತೆ!
ರೈತ ಚಳವಳಿ ಮೂಲಕವೇ ತಮ್ಮ ರಾಜಕೀಯ ಸ್ಥಾನವನ್ನು ಭದ್ರಪಡಿಸಿಕೊಂಡು ಅಧಿಕಾರ ಅನುಭವಿಸಿದ ಈಗಿನ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ರೈತ ಮುಖಂಡ ಬಾಬಾಗೌಡ ಪಾಟೀಲ ಅವರು ಈಚೆಗೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಪತ್ರಕರ್ತರೊಬ್ಬರು, 'ಅಲ್ರಿ.. ಪಾಟೀಲ್ರ ಕಬ್ಬು ಬೆಳೆಗಾರರ ಬೇಡಿಕೆಗೆ ಬೆಂಬಲಿಸಿ ಹೇಳಿಕೆ ನೀಡುವುದಕ್ಕಿಂತ ನೀವೇ ಯಾಕೆ ಹೋರಾಟದಲ್ಲಿ ಪಾಲ್ಗೊಳ್ಳಬಾರದು' ಎಂದು ಪ್ರಶ್ನಿಸಿದರು. ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ ಪಾಟೀಲರು ತಕ್ಷಣ ಸಾವರಿಸಿಕೊಂಡು, 'ರೈತ ಹೋರಾಟಗಳಿಂದ ಈಗ ನಾನು ದೂರವಾಗಿದ್ದೇನೆ ನಿಜ. ಏಕೆಂದರೆ ನಾನು ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರೆ ಪ್ರಚೋದನೆಯಾಗುತ್ತದೆ. ಪ್ರಸಂಗ ಬಂದರೆ ಮಾತ್ರ ರೈತ ಚಳವಳಿಗೆ ಧುಮುಕುತ್ತೇನೆ' ಎಂದರು. ಹಿಂದೆ ಕುಳಿತಿದ್ದ ಪತ್ರಕರ್ತರೊಬ್ಬರು, 'ಹೌದು ಹೌದು. ಕಬ್ಬು ಬೆಳೆಗಾರರು ಈಗ ಪ್ರಸಂಗ ಇಲ್ಲದೇ ನ್ಯಾಯಯುತ ಬೆಲೆಗಾಗಿ ಕಳೆದ ಎರಡು ವರ್ಷಗಳಿಂದ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಅವರಿಗೇನು ಕೆಲಸ ಇಲ್ವಲ್ಲ...' ಎಂದು ಮೆಲ್ಲಗೆ ಹೇಳಿದಾಗ ಗೌಡರು ಹೆಗಲ ಮೇಲಿನ ಶಾಲು ಸರಿಪಡಿಸಿಕೊಳ್ಳುತ್ತ ಪತ್ರಿಕಾಗೋಷ್ಠಿ ಮುಗಿಸಿದರು.

ಅಯ್ಯೋ ಸಿದ್ದರಾಮಯ್ಯನವರೇ ಅನ್ನೋಣ ಬಿಡಿ
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಕಳೆದ ವಾರ ಮೈಸೂರಿನಲ್ಲಿ ಕಳಪೆ ಸಿಮೆಂಟ್ ಹಗರಣದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಈ ರೀತಿ ಕಳಪೆ ಸಿಮೆಂಟ್‌ನಿಂದ ನಿರ್ಮಿಸಿರುವ ಕಟ್ಟಡಗಳನ್ನು ಆ ದೇವ್ರೆ ಕಾಪಾಡಬೇಕು ಅಂದ್ರು. ಆಗ ಪತ್ರಕರ್ತರು, ಈಗ ಮೂಢನಂಬಿಕೆ ನಿಷೇಧ ವಿಧೇಯಕ ಮಂಡನೆಗೆ ಸಿದ್ಧತೆ ನಡೆದಿದೆ. ಇನ್ನು ಮುಂದೆ ನೀವು ದೇವ್ರೆ ಎನ್ನುವಂತಿಲ್ಲ ಎಂದು ಜ್ಞಾಪಿಸಿದಾಗ, ಆಯ್ತು ಬಿಡಿ ಇನ್ನು ಮುಂದೆ ಅಯ್ಯೋ ದೇವ್ರೆ ಅನ್ನುವ ಬದಲು ಅಯ್ಯೋ ಸಿದ್ದರಾಮಯ್ಯನವರೇ, ಅಯ್ಯೋ ರಾಜ್ಯಪಾಲರೇ... ಎಂದು ಹೇಳೋಣ ಎಂದಾಗ ನಗುವಿನ ಅಲೆ.

ಇದ್ಯಾಕೋ ಓವರ್ ಆ್ಯಕ್ಟಿಂಗ್ ಆಯ್ತು!
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾಲಕ್ಕೆ ಮುತಾಲಿಕರಿಗೂ ಬಿಜೆಪಿಯವಗೂ ಹಾವು-ಮುಂಗುಸಿಯ ಸಂಬಂಧ. ಇದರ ಪರಿಣಾಮವೋ ಎನ್ನುವಂತೆ ಬಿಜೆಪಿ ಆಡಳಿತದಲ್ಲಿಯೇ ಮುತಾಲಿಕರ ವಿರುದ್ಧ ಸಾಕಷ್ಟು ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಸಭೆ, ಸಮಾರಂಭದಲ್ಲಿ ಈ ಬಗ್ಗೆ ಸಾಕಷ್ಟು ಬಾರಿ ಮುತಾಲಿಕರು ಅಸಮಾಧಾನ ತೋಡಿಕೊಂಡಿದ್ದುಂಟು. ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಹಿಂದೂ ಅಧಿವೇಶನ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಇದೇ ಮಾತು ಪುನರಾವರ್ತಿಸಿದರು. ಇಷ್ಟಕ್ಕೇ ಸುಮ್ಮನಾಗಿದ್ದರೆ ನಡೆಯುತ್ತಿತ್ತೇನೋ? ಮಾತು ಮುಂದುವರಿಸಿ ನನ್ನನ್ನು ಹಿಂದೂ ಗೂಂಡಾ ಎನ್ನುವಂತೆ ಬಿಂಬಿಸಲಾಗಿದೆ. ನಾನು ಬೆಳಗಾವಿಯಲ್ಲಿ ಬಾಡಿಗೆ ಮನೆ ಪಡೆಯಲು ಹೋದರೆ ಯಾರೂ ಮನೆ ಕೊಡಲಿಲ್ಲ ಎಂದುಬಿಟ್ಟರು. ಪತ್ರಕರ್ತರ ಸಾಲಿನ ಹಿಂಬದಿಯಲ್ಲಿ ಕುಳಿತಿದ್ದ ಒಂದಿಬ್ಬರು ಇದ್ಯಾಕೋ ಓವರ್ ಆ್ಯಕ್ಟಿಂಗ್ ಆಯ್ತು ಎಂದು ಮುಸಿ ಮುಸಿ ನಕ್ಕರು.

ಟ್ಯೂಬ್‌ನಲ್ಲಿ ಮೋದಿ ಗಾಳಿ!
ಹೊರಗಡೆ ಗಾಳಿ ಇದ್ದ ಮಾತ್ರಕ್ಕೆ ಜೀಪಿನ ಟ್ಯೂಬ್‌ಗೆ ಪ್ರಯೋಜನ ಇಲ್ಲ. ಜೀಪಿಗೆ ಚಕ್ರ ಇದ್ದರೆ ಸಾಲದು, ಅದರೊಳಗಿನ ಟ್ಯೂಬ್‌ಗೆ ಗಾಳಿಯೂ ಬೇಕು. ಹೊರಗಡೆ ಇರುವ ಗಾಳಿಯನ್ನು ತುಂಬಿಸುವ ಕೆಲಸ ಆಗಬೇಕು. ಕಾರ್ಯಕರ್ತರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟ್ಯೂಬ್‌ನಂತೆ ಕೆಲಸ ಮಾಡಬೇಕು... ಅರೇ ಇದೇನು ಟ್ಯೂಬ್... ಗಾಳಿ... ಜೀಪ್ ಅಂತಾ ತೆಲೆ ಕೆಡಿಸಿಕೊಳ್ಳಬೇಡಿ. ಶುಕ್ರವಾರ ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಕಾರ್ಯಕರ್ತರನ್ನು ಹುರಿದುಂಬಿಸಲು ಬಳಿಸಿದ ರೂಪಕ ಇದು. ದೇಶಾದ್ಯಂತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇದೆ. ಹಾಗೆಯೇ ರಾಜ್ಯದಲ್ಲೂ ಮೋದಿ ಹವಾ ಬೀಸುತ್ತಿದೆ. ಇದು ಹೊರಗಿನಿಂದ ಬೀಸುತ್ತಿದ್ದರೆ ಪ್ರಯೋಜನವಾಗದು. ಮೋದಿ ಹವಾ ಕಾಯ್ದುಕೊಳ್ಳಲು ಟಯರ್‌ನ ಟ್ಯೂಬ್‌ನಂತಿರುವ ಕಾರ್ಯಕರ್ತರಲ್ಲೂ ಈ ಗಾಳಿ ತುಂಬಬೇಕು. ಹಾಗಿದ್ದರೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಬಹುದು ಎಂದು ವಿಕಾಸ್ ಮಾರ್ಮಿಕವಾಗಿ ಹೇಳಿದರು.

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com