ಆರು ತಿಂಗಳ ಅನಂತರದ ತಳಮಳ

ಚುನಾವಣೆ ಮುಗಿದು, ಹಿಂದಿನ ಆಡಳಿತಗಾರರು ಮನೆಗೆ ಹೋಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು.
Updated on: 

ವಿಧಾನ ಸಭೆ ಚುನಾವಣೆ ಮುಗಿದು, ಹಿಂದಿನ ಆಡಳಿತಗಾರರು ಮನೆಗೆ ಹೋಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು. ಅಂದರೆ, ಚುನಾಯಿತ ಅವಧಿಯಲ್ಲಿ ಶೇಕಡಾ 10 ರಷ್ಟನ್ನು ಪಕ್ಷ ಈಗಾಗಲೇ ಮುಗಿಸಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಹೆಚ್ಚು ಕಡಿಮೆ ಸ್ಪರ್ಧೆಯೇ ಇಲ್ಲದೆ. ಕಳೆದ ಆರು ತಿಂಗಳಲ್ಲಿ ಅವರಿಗೂ ಇದು ಹೊಸ ಅನುಭವ. ನಿಜ. ಹಿಂದೆ, ಮಂತ್ರಿ-ಉಪಮುಖ್ಯಮಂತ್ರಿಯಾಗಿದ್ದವರು, ಸರ್ಕಾರದ ಆಡಳಿತ ವ್ಯವಸ್ಥೆಯ ಪರಿಚಯ ಚೆನ್ನಾಗಿಯೇ ಇತ್ತು. ಆದ್ದರಿಂದ ಹೊಸ ಕುರ್ಚಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗಿರಲಿಲ್ಲ. ಹಿಂದೆ ಇದ್ದ ಮಾರ್ಗದರ್ಶಿಗಳು ಈಗ ಇಲ್ಲ. ಅವರೇ ಇತರರಿಗೆ ಮಾರ್ಗದರ್ಶನ ನೀಡಬೇಕಾದ ಸ್ಥಿತಿ. ಇದೆಲ್ಲವೂ ರಾಜಕೀಯದಲ್ಲಿ ಸಾಮಾನ್ಯವೇ.
ಸಿದ್ದರಾಮಯ್ಯ ಅವರೇನೋ ತಮ್ಮ ಹೊಸ ಸ್ಥಾನ-ಮಾನಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಅದೇ ಮಾತನ್ನು ಈಗ ಆಳುವ ಪಕ್ಷವಾಗಿರುವ ಕಾಂಗ್ರೆಸ್ಸಿನ ಪ್ರಮುಖರ ವಿಚಾರದಲ್ಲಿ ಹೇಳುವಂತಿಲ್ಲ. ಅನೇಕರು ಈಗಲೂ ತಮ್ಮ ಪರಿಸ್ಥಿತಿ ಬದಲಾಗಿಲ್ಲ, ಹಿಂದೆ ಇದ್ದಂತೆಯೇ ಇರಬೇಕಾಗಿದೆ ಎನ್ನುವ ಕೊರಗನ್ನು ತೋಡಿಕೊಂಡಿದ್ದಾರೆ.
ಅವರ ತೊಳಲಾಟ ಅರ್ಥವಾಗುವಂತಹದ್ದು. ಮಂತ್ರಿ ಸ್ಥಾನವನ್ನು ಪಡೆಯುವ ಭರವಸೆಯನ್ನು ಇಟ್ಟುಕೊಂಡಿದ್ದವರಲ್ಲಿ ಅನೇಕರಿಗೆ ಹತಾಶೆಯಾಗಿದೆ. ಅವರು ಅದನ್ನು ಬಹಿರಂಗವಾಗಿ ತೋಡಿಕೊಳ್ಳುವಂತೆ ಇಲ್ಲ. ಇದು ಶಾಸಕರ ಪಾಡಾದರೆ, ಪಕ್ಷದ ಕಾರ್ಯಕರ್ತರೆನಿಸಿಕೊಂಡವರು, ಅಕ್ಷರಶಃ ಫುಟ್‌ಪಾತ್‌ನಲ್ಲಿ ಬಿದ್ದವರಂತೆಯೇ ನೋವನ್ನು ಅನುಭವಿಸುತ್ತಿದ್ದಾರೆ. ಅದನ್ನು ಆಡುವಂತಿಲ್ಲ ಅನುಭವಿಸುವಂತಿಲ್ಲ. ಶೀಘ್ರದಲ್ಲೇ ಮಂತ್ರಿಮಂಡಲದ ವಿಸ್ತರಣೆ, ಆದಷ್ಟು ಬೇಗ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಎನ್ನುವ ಆಶ್ವಾಸನೆಗಳನ್ನು ಕೇಳಿ ಕೇಳಿ ಅವರಲ್ಲೂ ಹತಾಶೆ ಮೂಡಿದೆ. ಈ ಸ್ಥಿತಿಯಲ್ಲಿ ಪಕ್ಷದ ಸಂಘಟನೆಯತ್ತ ಗಮನ ಹರಿಸಲು ಅವರಿಗೆ ಮನಸ್ಸಿಲ್ಲ.
ಕಾಂಗ್ರೆಸ್ಸಿಗೆ ಈ ಆರು ತಿಂಗಳಲ್ಲಿ ಸಿಕ್ಕ ಅತಿ ದೊಡ್ಡ ವರ ಎಂದರೆ, ಮಂಡ್ಯ-ಬೆಂಗಳೂರು ಗ್ರಾಮೀಣ ಲೋಕಸಭೆ ಉಪಚುನಾವಣೆಗಳಲ್ಲಿ ಸಿಕ್ಕ ಜಯ. ಒಂದು ರೀತಿಯಲ್ಲಿ ಆ ಚುನಾವಣೆಯ ವಿಜಯ ಪಕ್ಷದ ಪಾಲಿಗೆ ರಾಜಕೀಯವಾಗಿ ಕಾಯಕಲ್ಪವೇ. ಉಳಿದಂತೆ, ಸರ್ಕಾರದ ಆಡಳಿತದಲ್ಲಿ ಆಡಳಿತಗಾರರು ಬದಲಾಗಿರಬಹುದು. ಆದರೆ ವ್ಯವಸ್ಥೆ ಬದಲಾಗಿಲ್ಲ.
ಗಮನಾರ್ಹವಾಗಿ ಕಂಡು ಬರುವ ಒಂದು ಬದಲಾವಣೆ ಎಂದರೆ, ಬಿಜೆಪಿ ಸರ್ಕಾರವಿದ್ದಾಗ ಕೇಂದ್ರದ ಜತೆ ಹೆಚ್ಚು ಕಡಿಮೆ, ಎಲ್ಲಾ ಪ್ರಮುಖ ವಿಚಾರಗಳಲ್ಲೂ ಕಂಡು ಬರುತ್ತಿದ್ದ ಸಂಘರ್ಷ ಈಗ ಇಲ್ಲ ಎನ್ನುವುದೇ. ಒಂದೇ ಬಾರಿ, ಏಕ್‌ದಮ್ ಬದಲಾಗುವುದೂ ಸಾಧ್ಯವಿಲ್ಲ.

ಇನ್ನೆಷ್ಟು ದಿನ ಹೀಗೆ?: ಈಗಿನ ಪರಿಸ್ಥಿತಿ  ಬಹುಕಾಲ ಉಳಿಯುವುದಂತೂ ಸಾಧ್ಯವಿಲ್ಲ. ಕಾಂಗ್ರೆಸ್ಸಿಗರಿಗೆ ಮಧುಚಂದ್ರದ ಅವಧಿ ಮುಗಿದಿದೆ. ಇನ್ನು ಮುಂದೆ ಈಗ ಎದುರಿಸುತ್ತಿರುವುದಕ್ಕಿಂತ ಹೆಚ್ಚಿನ ತೀವ್ರವಾದ ಟೀಕೆಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆ ಸ್ಪಷ್ಟವಾಗಿ ಕಂಡುಬರುತ್ತಿದೆ.

ಪ್ರತಿಪಕ್ಷಗಳ ಸ್ಥಿತಿಗತಿ: ರಾಜಕೀಯ ಏಳುಬೀಳಿನ ಚಿತ್ರದ ಉರುಳಿನಲ್ಲಿ ಕಾಂಗ್ರೆಸ್ ಮೇಲಕ್ಕೆದ್ದಿದ್ದರೆ, ಪ್ರತಿಪಕ್ಷಗಳು ಕೆಳಗೆ ಬಿದ್ದಿವೆ. ಚುನಾವಣೆ ಸಮಯದಲ್ಲಿನ ವಾತಾವರಣದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ಸಂಭವ ಕಡಿಮೆ ಎನ್ನುವುದು ಗೋಚರವಾಗಿದ್ದರೂ, ಆ ಪಕ್ಷ ಇಷ್ಟು ಹೀನಾಯವಾದ ಸೋಲನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿಗೆ ಚುನಾವಣೆಯ ಫಲಿತಾಂಶ ಕೊಟ್ಟ  ಮರ್ಮಘಾತಕ್ಕೆ ನಿಜವಾದ ಕಾರಣಗಳನ್ನು ಪತ್ತೆ ಹಚ್ಚುವ ಪ್ರಾಮಾಣಿಕ ಪ್ರಯತ್ನವನ್ನೂ ಪಕ್ಷದ ರಾಜ್ಯಮಟ್ಟದ ನಾಯಕತ್ವ ಮಾಡಲಿಲ್ಲ. ಸೋಲಿಗೆ ಎಲ್ಲ ಹೊಣೆಯನ್ನೂ ಯಡಿಯೂರಪ್ಪ ಅವರ ಬಂಡಾಯ, ಅವರು ಸ್ಥಾಪಿಸಿದ ಕರ್ನಾಟಕ ಜನತಾ ಪಾರ್ಟಿ, ಕಾಂಗ್ರೆಸ್ ವಿರೋಧಿ ಬಿಜೆಪಿ ಮತಗಳನ್ನು ಒಡೆದಿದ್ದರ ಮೇಲೆ ಹಾಕಿ ತನ್ನ ಕೈಲಿ ಇನ್ನೇನೂ ಮಾಡುವುದು ಸಾಧ್ಯವಿಲ್ಲವೆಂದು ಕೈಚೆಲ್ಲಿ ಕೂಡುವ ಸ್ಥಿತಿಯನ್ನು ಮುಟ್ಟಿತ್ತು.
ಆ ಗುಂಗಿನಿಂದ ಬಿಜೆಪಿ ಇನ್ನೂ ಹೊರಗೆ ಬಂದಿಲ್ಲ. ಆ ಕಾರಣಕ್ಕಾಗಿಯೇ ಈಗಲೂ ಯಡಿಯೂರಪ್ಪ ಅವರ ಪ್ರತಿಯೊಂದು ಚಲನವಲನವನ್ನೂ ಪಕ್ಷದ ನಾಯಕರು ಆಸೆಯ ಕಣ್ಣುಗಳಿಂದ ನೋಡುತ್ತಿರುವುದು. ಈಗ ಕರ್ನಾಟಕ ಬಿಜೆಪಿಯಲ್ಲಿ ರಾಜಕೀಯವಾಗಿ, ಅಧಿಕಾರಯುತವಾಗಿ, ಜವಾಬ್ದಾರಿಯುತವಾಗಿ ಮಾತನಾಡಬಲ್ಲ ನಾಯಕರೇ ಇಲ್ಲವಾಗಿದ್ದಾರೆ. ಪಕ್ಷದಲ್ಲಿನ ಆಸಕ್ತ ಗುಂಪುಗಳ ನಡುವಣ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ ಪ್ರದೇಶ ಬಿಜೆಪಿಯ ಅಧ್ಯಕ್ಷರ ಸ್ಥಾನಕ್ಕೆ ನೇಮಕಗೊಂಡ ಸಂಸದ ಪ್ರಹ್ಲಾದ ಜೋಷಿ ಅವರು ಸಂಪೂರ್ಣವಾಗಿ ಮೌನವ್ರತಕ್ಕೆ ಶರಣಾಗಿರುವಂತಿದೆ.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಹಾಗೂ ಸದಾನಂದಗೌಡರು ಆಗೀಗ ಸರ್ಕಾರದ ವಿರುದ್ಧ ಟೀಕಿಸಿದರೂ, ತಮ್ಮ ಪಕ್ಷದ ವ್ಯವಹಾರಗಳನ್ನು ಕುರಿತು ಮಾತಾಡುತ್ತಿಲ್ಲ. ಇದೇನೂ ಚೈತನ್ಯದ ಲಕ್ಷಣವಲ್ಲ. ಸದ್ಯಕ್ಕೆ ಬಿಜೆಪಿಯ ಮುಂದೆ ರಾಜ್ಯದಲ್ಲಿ ಇರುವ ಏಕೈಕ ರಾಜಕೀಯ ವಿಚಾರ ಎಂದರೆ ಯಡಿಯೂರಪ್ಪ ಅವರು ಪಕ್ಷಕ್ಕೆ ಮತ್ತೆ ಬರ್ತಾರಾ? ಬರುವುದಾದರೆ ಯಾವ ರೀತಿಯಲ್ಲಿ? ಎನ್ನುವುದೇ. ಯಡಿಯೂರಪ್ಪ ಅವರನ್ನೂ ಪಕ್ಷಕ್ಕೆ ಕರೆದುಕೊಂಡು ಬರಲು, ಹಿಂದೆ ಅವರನ್ನು ಬಲವಾಗಿ ವಿರೋಧಿಸಿದ್ದ ಬಿ.ಬಿ. ಶಿವಪ್ಪ ಅವರಂತಹವರೇ ಮುಂದಾಗಿರುವುದು, ಈ ವಿಚಾರಕ್ಕೆ ಇರುವ ಪ್ರಾಮುಖ್ಯವನ್ನು ಸೂಚಿಸುತ್ತದೆ.
ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಈಗ ಯಡಿಯೂರಪ್ಪ ಅವರನ್ನು ಹಿಂದಕ್ಕೆ ಬರುವಂತೆ ಮಾಡಲು ಶ್ರಮಿಸುತ್ತಿರುವವರಲ್ಲಿ ಪ್ರಮುಖರು. ಕೊನೆಗೆ ಎಲ್ಲ ರಾಷ್ಟ್ರೀಯ ಪಕ್ಷಗಳೂ ಮಾಡಿದಂತೆ, ಕರ್ನಾಟಕ ಬಿಜೆಪಿಯೂ ಯಡಿಯೂರಪ್ಪ ಅವರ ಸಹವಾಸದ ವಿಚಾರದಲ್ಲಿ ಅಂತಿಮ ತೀರ್ಪನ್ನು ವರಿಷ್ಠರ ಹೆಗಲಿಗೇ ರವಾನಿಸಿದೆ. ಯಡಿಯೂರಪ್ಪ ಅವರೂ, ಈ ವಿಚಾರದಲ್ಲಿ ಹಲವು ಬಗೆಯ ಅರ್ಥವನ್ನು ಕೊಡುವ ರೀತಿಯಲ್ಲಿ ಮಾತಾಡಿ, ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ ಎನ್ನುವ ಹಂತಕ್ಕೂ ಹೋಗಿ, ಅನಂತರ ಸ್ವಲ್ಪ ಹಿಂದಕ್ಕೆ ಬಂದಿದ್ದೂ ಆಯಿತು.
ಯಡಿಯೂರಪ್ಪ ಅವರ ಪುನರಾಗಮನದ ವಿಚಾರ ಅಂತಿಮವಾಗಿ ತೀರ್ಮಾನವಾಗುವವರೆಗೆ ಬಿಜೆಪಿಗೆ ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮವನ್ನು ರೂಪಿಸಿಕೊಳ್ಳುವುದೂ ಅಸಾಧ್ಯ. ಯಡಿಯೂರಪ್ಪ ಅವರಂತೆಯೇ, ಮಾಜಿ ಮಂತ್ರಿ, ಬಿಎಸ್ಸಾರ್ ಪಕ್ಷದ ಶ್ರೀರಾಮುಲು ಅವರ ವಿಚಾರವೂ ಅಷ್ಟೇ. ನಿರ್ದಿಷ್ಟವಾದ ನಿಲವನ್ನು ಪ್ರಕಟಿಸುವುದಕ್ಕೆ ಇನ್ನೂ ಬಿಜೆಪಿ- ಶ್ರೀರಾಮುಲು ಸಿದ್ಧವಿಲ್ಲ. ಸದ್ಯಕ್ಕೆ ನರೇಂದ್ರ ಮೋದಿ ಅವರ ಭಾಷಣಗಳೇ ಬಿಜೆಪಿಗೆ ಆಮ್ಲಜನಕ.

ಜಾತ್ಯತೀತ ಜನತಾದಳ : ಮಂಡ್ಯ- ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳಲ್ಲಿನ ಸೋಲಿನಿಂದ ತತ್ತರಿಸಿರುವ ಜಾತ್ಯತೀತ ಜನತಾದಳದ ಚುಕ್ಕಾಣಿಯನ್ನು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಸ್ವಂತವಾಗಿ ಹಿಡಿದಿದ್ದಾರೆ. ಪಕ್ಷದ ಬೆಂಬಲಿಗರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನದಲ್ಲಿ ಅವರು ಹಿಂದೆ ಬಿದ್ದಿಲ್ಲ. ಎಂಬತ್ತರ ಗಡಿ ದಾಟಿದ್ದರೂ ನಿರಂತರವಾಗಿ ಪ್ರವಾಸ ಮಾಡುತ್ತಲೇ ಇದ್ದಾರೆ.
ಪಕ್ಷದ ಜನಾಂಗೀಯ ಸ್ವರೂಪವನ್ನು ಬದಲಾಯಿಸುವ ಪ್ರಯತ್ನದಲ್ಲಿ ದೇವೇಗೌಡರು ಹಿಂದುಳಿದ ಜಾತಿ- ಪಂಗಡಕ್ಕೆ ಸೇರಿದ ಎ.ಕೃಷ್ಣಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸ್ಥಾನದಲ್ಲಿ ನೇಮಿಸಿದ್ದರೂ ಅದರ ಪರಿಣಾಮ ಜನರ ಮನಸ್ಸನ್ನು ಮುಟ್ಟುವ ರೀತಿಯಲ್ಲಿ ಕಂಡು ಬಂದಿಲ್ಲ.
ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ, ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರೂ ಆಗಿರುವುದರಿಂದ, ಈಗಲೂ ಜನರ ಕಣ್ಣಿನಲ್ಲಿ ಅವರೇ ಜೆಡಿಎಸ್‌ನ ನಂಬರ್ ಒನ್ ನಾಯಕರು. ಸಾರ್ವಜನಿಕ ವಿವಾದಗಳಲ್ಲಿ ದೇವೇಗೌಡರನ್ನು ಬಿಟ್ಟರೆ, ಪಕ್ಷದ ನಿಲವನ್ನು ಪ್ರತಿಪಾದಿಸುತ್ತಿರುವವರು ಅವರೇ. ಇಲ್ಲಿ ಒಂದು ಗುಣಾತ್ಮಕವಾದ ಬದಲಾವಣೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ದೇವೇಗೌಡರು, ಕೆಲವು ಕಾಲ ರಾಷ್ಟ್ರೀಯ ಮಟ್ಟದ ತೃತೀಯ ರಂಗದ ರಚನೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಬಯಕೆಯನ್ನು ಹತ್ತಿಕ್ಕಿದ್ದರೂ, ಈಗ ಮತ್ತೆ ಆ ಸುಳಿಯಲ್ಲೇ ಸಿಕ್ಕಿ ಬಿದ್ದಿರುವಂತಿದೆ. ಈಚೆಗೆ ದೆಹಲಿಯಲ್ಲಿ ನಡೆದ ಹದಿನಾಲ್ಕು ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲುಗೊಂಡಿದ್ದ ದೇವೇಗೌಡರು ಮತ್ತೊಮ್ಮೆ ಕಾಂಗ್ರೆಸ್ ವಿರೋಧಿ, ಬಿಜೆಪಿ ವಿರೋಧಿ ತೃತೀಯ ರಂಗದ ಮಾತನ್ನು ಆಡುತ್ತಿದ್ದಾರೆ. ರಾಷ್ಟ್ರೀಯ ನೆಲೆಗಟ್ಟಿನಲ್ಲಿ ದೇವೇಗೌಡರು ಆ ಕಲ್ಪನೆಯನ್ನು ಪ್ರಕಟಿಸುವುದು ಸುಲಭ. ಆದರೆ ಕರ್ನಾಟಕದ ಮಟ್ಟದಲ್ಲಿ ಕಾಂಗ್ರೆಸ್ - ಬಿಜೆಪಿ ವಿರೋಧಿ ನಿಲವು ಎಂದರೆ ಏಕಾಂಗಿತನವೇ.
ಆ ಬಿಸಿಯನ್ನು ಅನುಭವಿಸಬೇಕಾದವರು ಕುಮಾರಸ್ವಾಮಿಯವರೇ ವಿನಾ ದೇವೇಗೌಡರಲ್ಲ. ವಿಧಾನ ಮಂಡಲದಲ್ಲಿ ಜಾತ್ಯತೀತ ಜನತಾದಳ ಬಿಜೆಪಿಯನ್ನು ವಿರೋಧಿಸಿದರೆ, ಅದರಿಂದ ರಾಜ್ಯದಲ್ಲಿ ಪ್ರತಿಪಕ್ಷವೇ ದುರ್ಬಲವಾದಂತೆಯೇ ಆಗುತ್ತದೆ. ಆ ಪರಿಸ್ಥಿತಿಯಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕುಮಾರಸ್ವಾಮಿ ಕೆಲಸ ಮಾಡುವುದು ಕಷ್ಟ. ರಾಷ್ಟ್ರೀಯ ಮಟ್ಟದ ತೃತೀಯ ರಂಗದ ರಚನೆಯ ಕಲ್ಪನೆಗೆ ಮಾಯಾವತಿ ಅವರ ಬೆಂಬಲವಿಲ್ಲ. ಆ ಗುಂಪಿನಲ್ಲಿ ಕರುಣಾನಿಧಿ ಬರುವಂತಿಲ್ಲ. ಬಿಹಾರದ ನಿತೀಶ್ ಕುಮಾರ್ ಅವರು ಹಿಂದೇಟು ಹಾಕುವುದು ಖಚಿತ.
ಮುಲಾಯಂ ಸಿಂಗ್ ಯಾದವ್ ಅವರಿಗೇ ತೃತೀಯ ರಂಗದ ನಾಯಕತ್ವದ ಪಟ್ಟ ಕಟ್ಟಲು ಇತರರು ಒಪ್ಪದೇ ಹೋದರೆ, ತೃತೀಯ ರಂಗದ ವೇದಿಕೆಯ ರಚನೆ ಅಸಾಧ್ಯವೆಂದೇ ಪರಿಗಣಿಸಬೇಕು. ಆಗ ದೇವೇಗೌಡರು ಎಲ್ಲಿರುತ್ತಾರೆ? ಆ ಪ್ರಶ್ನೆಗೆ ಈಗ ಕುಮಾರಸ್ವಾಮಿ ಅವರೇ ಉತ್ತರ ಹುಡುಕುತ್ತಿರುವಂತಿದೆ.

ಕಿಡಿಗೇಡಿತನ: ಈಗಾಗಲೇ ದೇವೇಗೌಡರು ಹಾಸನದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಆತ್ಮೀಯರಲ್ಲಿ ಪ್ರಕಟಿಸಿದ್ದಾಗಿದೆ. ವಯಸ್ಸಿನಲ್ಲಿ ಅವರಿಗಿಂತ ಸ್ವಲ್ಪ ಹಿರಿಯರಾದ ಎಸ್.ಎಂ.ಕೃಷ್ಣ ಅವರ ಮನಸ್ಸಿನಲ್ಲೂ ವರಿಷ್ಠರು ಒಪ್ಪಿದರೆ ಸ್ಪರ್ಧಿಸುವ ಬಯಕೆ ಮೂಡಿದೆಯಂತೆ. ಎಂಬತ್ತರಲ್ಲಿ ಆಯ್ಕೆಯಾದರೆ, ಮುಂದಿನ ಲೋಕ ಸಭೆ ಅವಧಿ ಮುಗಿಯುವ ವೇಳೆಗೆ 85 ವರ್ಷಗಳ ಹಿರಿಯರು ಏನು ಸಾಧಿಸಬಹುದು?

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com