

ಇತ್ತೀಚಿನ ದಿನಗಳಲ್ಲಿ ಪಂಡಿತ- ಪಾಮರರನ್ನೆಲ್ಲ ಒಂದು ವೇದಿಕೆಗೆ ತಂದು ಕುಸ್ತಿ ಮಾಡಿಸುತ್ತಿರುವ ಚರ್ಚೆ ಎಂದರೆ ನಂಬಿಕೆಯ ಕುರಿತಾಗಿದ್ದು. ಮೂಢನಂಬಿಕೆ ನಿಷೇಧಕ್ಕೆ ವಿಧೇಯಕ ತರುವ ನಿಟ್ಟಿನಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿರುವ ಸಮಿತಿ, ತನಗೆ ಆಗಿಬರದ್ದೆಲ್ಲವನ್ನೂ ಮೂಢನಂಬಿಕೆಗಳು ಅಂತ ಪಟ್ಟಿ ಮಾಡಿದ ಕಾರಣದಿಂದ ವಿವಾದ ಹುಟ್ಟಿಕೊಂಡಿತು. ಅತಿರೇಕಗಳು ಎಲ್ಲ ವ್ಯವಸ್ಥೆಗಳಲ್ಲಿವೆ ಹಾಗೂ ಅದನ್ನು ತಹಬಂದಿಗೆ ತರುವ ಕೆಲಸ ಆಗುತ್ತಿರಬೇಕು ಎಂಬುದಕ್ಕೆ ಹೆಚ್ಚಿನವರ ತಕರಾರಿಲ್ಲ. ಅತಿರೇಕ ಧರ್ಮದ ಹೆಸರಿನಲ್ಲೂ ಆಗುತ್ತದೆ, ವಿಜ್ಞಾನದ ಹೆಸರಲ್ಲೂ ನಡೆಯುತ್ತದೆ, ಸರ್ಕಾರಗಳ ಕಡೆಯಿಂದಲೂ ಅನವರತ ಆಗುತ್ತಿರುತ್ತದೆ. ಇಂಥ ಅತಿರೇಕವನ್ನಷ್ಟೇ ಗುರುತಿಸಿ ಎಚ್ಚರಿಕೆಯ ಚಿಕಿತ್ಸೆ ಕೊಡಬೇಕಾದಲ್ಲಿ ತರಲೆ ಪ್ರಚಾರಪ್ರಿಯರೇ ತುಂಬಿಕೊಂಡ ಕಾರಣ ಅವರು ಸೂಚಿಸಿರುವ ಕರಡೇ ಒಂದು ಅತಿರೇಕದ ರೂಪಕವಾಗಿದೆ. ನಮ್ಮ ಪತ್ರಿಕಾಲಯಕ್ಕಂತೂ, ಓದಿ-ಓದಿ ಸುಸ್ತಾದೆವು ಎಂಬಷ್ಟರಮಟ್ಟಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ನಂಬಿಕೆ ಎಂಬುದು ನೇರ ಜನರಿಗೇ ಸಂಬಂಧಿಸಿದ್ದಾದ್ದರಿಂದ ಈ ವಿಚಾರದಲ್ಲಿ ಅವರ ತೀವ್ರತೆಯೂ ಸಹಜವೇ.
ಈ ಬಗ್ಗೆ ನನ್ನದೂ ಒಂದು ವಾದಸರಣಿ ಇರಲಿ ಎಂದು ಇಷ್ಟೆಲ್ಲ ಪೀಠಿಕೆ ಹಾಕುತ್ತಿದ್ದೇನೆ ಎಂದುಕೊಂಡರೆ ನೀವು ಪಿಗ್ಗಿ ಬಿದ್ದಿದ್ದೀರಿ ಎಂದರ್ಥ. ಹೇಗೂ ನೀವು ವಾದ-ಪ್ರತಿವಾದಗಳ ಗಹನ ಲೇಖನಗಳನ್ನು ಈ ವಿವಾದ ಆರಂಭವಾದಾಗಿನಿಂದ ಸಾಕಷ್ಟು ಓದಿದ್ದೀರಿ. ಹೀಗೆ ನಂಬಿಕೆ- ತರ್ಕ ಎಂಬ ವಿವಾದ ಎದ್ದಾಗಲೆಲ್ಲ ಫೇಸ್ಬುಕ್, ಇಮೇಲ್ ಇತ್ಯಾದಿ ಇಂಟರ್ನೆಟ್ ಮಾಧ್ಯಮದಲ್ಲಿ ತಮ್ಮ ತಮ್ಮ ವಾದಮಂಡನೆಗೆ ಅನುಕೂಲವಾಗುವ ಚಿಕ್ಕ-ಚಿಕ್ಕ ಕತೆಗಳು ಹರಿದಾಡುತ್ತಿರುತ್ತವೆ. ಭಾವಾತಿರೇಕದಲ್ಲಿ ಹಳಿತಪ್ಪುವ ಕತೆಗಳು ಹಲವಿದ್ದರೂ ಕೆಲ ಚುಟುಕು ಕತೆಗಳು ತಟಕ್ಕನೇ ನವಿಲುಗರಿಯಲ್ಲಿ ಮೈ ಸ್ಪರ್ಶಿಸಿದ ಪುಳಕವೊಂದನ್ನು ಕಟ್ಟಿಕೊಡುತ್ತವೆ. ಹಾಗೆ ಕಣ್ಣಿಗೆ ಬಿದ್ದ ಕೆಲ ಚುಟುಕು-ಚಟಾಕಿಗಳನ್ನು ನಿಮ್ಮೆದುರು ಸಿಂಗರಿಸಿ ಇಡುತ್ತಿದ್ದೇನೆ, ಆ ಮೂಢನಂಬಿಕೆ ವಾದ ಸದ್ಯ ಪಕ್ಕಕ್ಕಿರಲಿ.
---
ಗುರು-ಶಿಷ್ಯರ ನಡುವಿನ ಸಂಭಾಷಣೆ.
ಗುರು- ನೀನು ದೇವರನ್ನು ನಂಬುವವನು ಹೌದಲ್ಲ?
ಶಿಷ್ಯ- ಹೌದು ಗುರುಗಳೇ.
ಗುರು- ಈ ದೇವರು ತುಂಬ ಒಳ್ಳೆಯವನಾ?
ಶಿಷ್ಯ- ಖಂಡಿತ ಸರ್.
ಗುರು- ಆತ ಬಹಳ ಪವರ್ಫುಲ್ಲಾ? ಅಂದ್ರೆ, ನಿಮ್ಮ ಭಾಷೆಯಲ್ಲೇ ಕೇಳೋದಾದರೆ ಸರ್ವಶಕ್ತನಾ?
ಶಿಷ್ಯ - ಹೌದು ಸರ್.
ಗುರು- ನನ್ನ ಸಹೋದರನಿಗೆ ಕ್ಯಾನ್ಸರ್ ಆಗಿತ್ತು. ಆತನಿಗೆ ದೇವರಲ್ಲಿ ಅಗಾಧ ನಂಬಿಕೆ. ತನ್ನ ರೋಗವನ್ನು ಗುಣಪಡಿಸು ಅಂತ ದಿನವೂ ದೇವರಲ್ಲಿ ಪ್ರಾರ್ಥಿಸುತ್ತಿದ್ದ. ನಮ್ಮಂಥ ಮನುಷ್ಯರನ್ನು ಯಾರಾದರೂ ಆರ್ತವಾಗಿ ಬೇಡಿಕೊಂಡರೆ ನಾವು ನಮ್ಮ ಕೈಲಾದ ಸಹಾಯವನ್ನು ಮಾಡದೇ ಇರುತ್ತೇವಾ? ಆದರೆ ಆ ನಿನ್ನ ಸರ್ವಶಕ್ತ ದೇವರು ನನ್ನ ಸಹೋದರನ ನೆರವಿಗೆ ಬರಲೇ ಇಲ್ಲ. ಅಂದಮೇಲೆ ಆತ ಒಳ್ಳೆಯವನು ಹೇಗಾಗುತ್ತಾನೆ?
ಗುರುವಿನ ಈ ಪ್ರಶ್ನೆಗೆ ಶಿಷ್ಯ ಏನೂ ಉತ್ತರಿಸದೇ ಮೌನವಾದ.
ಗುರು- ನಿನಗೆ ಉತ್ತರಿಸುವುದಕ್ಕೇ ಆಗ್ತಾ ಇಲ್ಲ ಅಲ್ವಾ? ಆದ್ರೂ ಮತ್ತೊಮ್ಮೆ ಕೇಳ್ತೇನೆ, ದೇವರು ಒಳ್ಳೆಯವನಾ?
ಶಿಷ್ಯ- ಹೌದು, ಒಳ್ಳೆಯವನೇ.
ಗುರು- ಇರಲಿ. ಈ ಸೈತಾನ ಅಂದ್ರೆ ದೇವರಿಗೆ ಮೀರಿದವನಾ ಅಥವಾ ಅವನೂ ದೇವರ ಸೃಷ್ಟಿಯ ಭಾಗವಾ? ಆತ ಒಳ್ಳೆಯವನಾ, ಕೆಟ್ಟವನಾ?
ಶಿಷ್ಯ- ಸೈತಾನ ದೇವರ ಸೃಷ್ಟಿಯೇ. ಆತ ಕೆಟ್ಟದ್ದರ ಪ್ರತೀಕ.
ಗುರು- ಸರಿಬಿಡು. ಈ ಜಗತ್ತಿನಲ್ಲಿ ಕೆಟ್ಟದ್ದು ಇರುವುದು ಹೌದಲ್ಲವಾ?
ಶಿಷ್ಯ- ಹೌದು ಇದೆ.
ಗುರು- ಜಗತ್ತಿನಲ್ಲಿ ಕೆಟ್ಟದ್ದು ತುಂಬಿಕೊಂಡಿದೆ. ದೇವರೇ ಎಲ್ಲವನ್ನೂ ಸೃಷ್ಟಿಸಿದ್ದಾನೆ. ಅಂದಮೇಲೆ ಕೆಟ್ಟದ್ದನ್ನು ಸೃಷ್ಟಿಸಿದವರು ಯಾರು?
ಈ ಬಾರಿಯೂ ಶಿಷ್ಯ ನಿರುತ್ತರನಾದ.
ಗುರು- ಈ ಜಗತ್ತಿನಲ್ಲಿ ರೋಗ, ಸಾವು-ನೋವು, ದ್ವೇಷ, ವಿಕೃತಿ ಎಲ್ಲವೂ ಇವೆ. ಇವನ್ನೆಲ್ಲ ಸೃಷ್ಟಿಸಿದವರು ಯಾರು?
ಶಿಷ್ಯ ಈಗಲೂ ಮೌನ.
ಗುರು- ನಿನ್ನ ಸುತ್ತಲಿನ ಜಗತ್ತನ್ನು ಗ್ರಹಿಸುವುದಕ್ಕೆ ಅನುವಾಗುವ ಪಂಚೇಂದ್ರಿಯಗಳ ಅರಿವನ್ನು ನಿನಗೆ ವಿಜ್ಞಾನ ನೀಡಿದೆ. ಅವುಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು ದೇವರನ್ನು ಕಂಡಿದ್ದೀಯಾ? ಆತನ ಸ್ಪರ್ಶ, ರುಚಿ, ವಾಸನೆ ಏನನ್ನಾದರೂ ಹೇಳಬಲ್ಲೆಯಾ?
ಶಿಷ್ಯ- ಇಲ್ಲ ಸರ್...
ಗುರು- ಅಷ್ಟಾಗಿಯೂ ನೀನು ದೇವರನ್ನು ನಂಬುತ್ತೀಯಾ?
ಶಿಷ್ಯ- ಹೌದು.
ಗುರು- ವಿಜ್ಞಾನದ ಯಾವ ಮಾನದಂಡದ ಪ್ರಕಾರವೂ ದೇವರು ಅಸ್ತಿತ್ವದಲ್ಲೇ ಇಲ್ಲ. ಇದಕ್ಕೇನಂತೀಯಾ?
ಶಿಷ್ಯ- ನಾನೇನೂ ಹೇಳಲಾರೆ. ನನಗೆ ದೇವರಲ್ಲಿ ನಂಬಿಕೆ ಇದೆ ಎಂದಷ್ಟೇ ಹೇಳಬಲ್ಲೆ.
ಗುರು- ಇಲ್ಲೇ ನೋಡು ಸಮಸ್ಯೆ ಬರೋದು. ನಂಬಿಕೆಯೇ ವಿಜ್ಞಾನದ ಸಮಸ್ಯೆ.
ಶಿಷ್ಯ- ಸರ್ ಹೀಟ್ ಅಥವಾ ಶಾಖ ಅನ್ನೋದೊಂದು ಇದೆಯಾ?
ಗುರು- ಇದೆ.
ಶಿಷ್ಯ- ಕೋಲ್ಡ್ ಅರ್ಥಾತ್ ಶೀತ ಅನ್ನೋದು?
ಗುರು- ಅದೂ ಇದೆಯಲ್ಲ...
ಶಿಷ್ಯ- ಇಲ್ಲ ಸರ್. ಅಂಥದ್ದೊಂದಿಲ್ಲ. ನಾವು ಬಹಳ ಬಗೆಯ ಶಾಖಗಳನ್ನು ಹೊಂದಬಹುದು. ಹೀಟ್, ಸೂಪರ್ಹೀಟ್, ವೈಟ್ಹೀಟ್, ಮೆಗಾಹೀಟ್, ಕಡಿಮೆ ಶಾಖ ಹಾಗೂ ಶಾಖ ಇಲ್ಲದೇ ಇರುವಿಕೆ. ಆದರೆ ಕೋಲ್ಡ್ ಅನ್ನೋದಿಲ್ಲ. ನಾವು ಶೂನ್ಯದ ಕೆಳಗೆ 458 ಡಿಗ್ರಿವರೆಗೂ ಮುಟ್ಟಬಹುದು. ಈ ಹೀಟ್ನ ಅನುಪಸ್ಥಿತಿಯನ್ನು ವಿವರಿಸುವುದಕ್ಕೆ ನಾವು ಕೋಲ್ಡ್ ಎಂಬ ಶಬ್ದ ಬಳಸುತ್ತೇವೆ. ಕೋಲ್ಡ್ ಅನ್ನು ನೀವು ಅಳೆಯಲಾರಿರಿ. ಹೀಟ್ ಎಂಬುದು ಒಂದು ಶಕ್ತಿ. ಕೋಲ್ಡ್ ಎಂಬುದು ಹೀಟ್ನ ವಿರುದ್ಧಾರ್ಥಕವಲ್ಲ, ಅದರ ಅನುಪಸ್ಥಿತಿ ಅಷ್ಟೆ. ಇದು ಹಾಗಿರಲಿ. ಕತ್ತಲು ಅನ್ನೋದಿದೆಯೇ ಗುರುಗಳೇ?
ಗುರು- ಕತ್ತಲು ಎಂಬುದೂ ಇಲ್ಲ ಎನ್ನುವುದಾದರೆ ರಾತ್ರಿ ಹೇಗಾಗುತ್ತಿತ್ತು?
ಶಿಷ್ಯ- ಇಲ್ಲ ಸರ್. ಈಗಲೂ ತಪ್ಪಿದಿರಿ. ಬೆಳಕು ಇದೆ. ಅದನ್ನು ಸಾಧಾರಣ ಬೆಳಕು, ಗಾಢ ಬೆಳಕು, ಫ್ಲಾಶ್ ಲೈಟ್ ಇತ್ಯಾದಿಯನ್ನಾಗಿ ಮಾಡಬಹುದು. ಈ ಲೈಟ್ ಎಂಬುದು ನಿರಂತರವಾಗಿ ಇಲ್ಲದಿರುವ ಸಂದರ್ಭದಲ್ಲಿ ಅದನ್ನು ಕತ್ತಲು ಎಂದು ಹೇಳುತ್ತೇವೆ. ಕತ್ತಲು ಎಂಬುದಿದೆ ಎಂದಾದರೆ ಅದನ್ನು ಇನ್ನಷ್ಟು ಗಾಢವಾಗಿಸುವ, ಕುಗ್ಗಿಸುವ ಪ್ರಕ್ರಿಯೆಗಳೆಲ್ಲ ಸಾಧ್ಯವಾಗಬೇಕಿತ್ತು ಅಲ್ಲವೇ?
ಗುರು- ಇಷ್ಟಕ್ಕೂ ನೀನೇನು ಹೇಳಲಿಕ್ಕೆ ಹೊರಟಿದ್ದೀಯಪ್ಪಾ?
ಶಿಷ್ಯ- ನಿಮ್ಮ ತಾತ್ವಿಕ ನೆಲೆ ದೋಷಪೂರಿತ ಎಂದು ಹೇಳುತ್ತಿದ್ದೇನೆ. ಬದುಕಿದೆ, ನಂತರ ಸಾವಿದೆ; ಒಳ್ಳೆ ದೇವರು- ಕೆಟ್ಟ ದೇವರು ಇದು ನಿಮ್ಮ ವಾದ. ಅಂದರೆ ದೇವರನ್ನು ನೀವು ಅಳತೆ ಮಾಡಬಹುದಾದ ಪರಿಧಿಯಲ್ಲಿ ನೋಡುತ್ತಿದ್ದೀರಿ. ವಿಜ್ಞಾನವು ಥಾಟ್ ಅಥವಾ ಯೋಚನೆ ಎಂಬುದಕ್ಕೆ ವಿವರಣೆ ಕೊಡಲಾರದು. ಎಲೆಕ್ಟ್ರಿಸಿಟಿ ಹಾಗೂ ಮ್ಯಾಗ್ನೆಟಿಸಮ್ ಎಂದು ಹೇಳುತ್ತದೆ, ಅವೆರಡನ್ನೂ ನೋಡಲಾಗಿಲ್ಲ. ಅರ್ಥ ಮಾಡಿಕೊಳ್ಳುವುದೂ ಬಾಕಿ ಇದೆ. ಸಾವು ಎಂಬುದು ಅಸ್ತಿತ್ವದಲ್ಲಿರುವ ಪದಾರ್ಥವಲ್ಲ. ಹೀಗಾಗಿ ಬದುಕಿನ ವಿರುದ್ಧಾರ್ಥಕ ಆಗಲಾರದು. ಸಾವೆಂಬುದು ಬದುಕಿನ ಅನುಪಸ್ಥಿತಿ ಅಷ್ಟೆ. ನಂಬಿಕೆ ಎಂಬುದು ಮನುಷ್ಯ ಮತ್ತು ದೇವರ ನಡುವಿನ ಕೊಂಡಿ.
---
ನಾಟಕವೊಂದರ ದೃಶ್ಯ. ಡಾರ್ವಿನ್ನ ಜೀವ ವಿಕಾಸ ಸಿದ್ಧಾಂತದ ಪ್ರತಿಪಾದಕನನ್ನು ಧರ್ಮನಿಂದನೆಯ ಪ್ರಕರಣದಲ್ಲಿ ಕಟಕಟೆಗೆ ತರಲಾಗಿತ್ತು.
ಸಂಪ್ರದಾಯವಾದಿಗಳು ಹೇಳಿದರು- ನಿನ್ನ ಪ್ರಕಾರ ಜಗತ್ತಿನ ಈ ಜೀವಜಾಲ ಲಕ್ಷಾಂತರ ವರ್ಷಗಳಲ್ಲಿ ವಿಕಸನ ಹೊಂದಿತು. ಹೌದೇ?
ವಿಕಸನವಾದಿ- ಹೌದು.
ಸಂಪ್ರದಾಯವಾದಿ- ನಿನ್ನ ಪ್ರತಿಪಾದನೆ ದೈವನಿಂದೆಯಾಗುತ್ತದೆ. ಏಕೆಂದರೆ ನಮ್ಮ ಗ್ರಂಥಗಳು ಸಾರುವ ಪ್ರಕಾರ ದೇವರು ಏಳು ದಿನಗಳಲ್ಲಿ ಈ ಪ್ರಪಂಚವನ್ನು ನಿರ್ಮಿಸಿದ.
ವಿಕಸನವಾದಿ- ಇರಬಹುದು. ನಾನೇಕೆ ಇಲ್ಲವೆನ್ನಲಿ. ದೇವರ ಲೆಕ್ಕಾಚಾರದಲ್ಲಿ ಆ 'ಏಳು ದಿನಗಳು' ಎಷ್ಟು ದೀರ್ಘ ಅವಧಿಯದ್ದಾದರೂ ಆಗಿರಬಹುದಲ್ಲ!
---
ಹರ್ಷ ಸ್ನೇಹಾಂಶು ಎಂಬುವವರು ಬ್ಲಾಗ್ನಲ್ಲಿ ದಾಖಲಿಸಿರುವ ಪುಟ್ಟ ಬರಹದ ಶೀರ್ಷಿಕೆ- 'ದೇವರು ನಾಸ್ತಿಕನಾಗಿದ್ದರೆ...'
ಆತ ಎರಡು ಬೋರ್ಡ್ ಎಕ್ಸಾಮ್ಗಳಲ್ಲಿ ಫೇಲ್ ಆಗಿದ್ದ. ಹತಾಶೆಅವನ ನಿತ್ಯ ಸಹಚರನಾಗಿತ್ತು. ಭವಿಷ್ಯದ ಪಥ ಗೋಚರಿಸದಷ್ಟು ಕತ್ತಲು. ಆತನಿಗೆ ತನ್ನ ಬದುಕನ್ನು ಕೊನೆಗೊಳಿಸಿಕೊಳ್ಳುವ ಇರಾದೆಯಾಯಿತು.
ಮುಂಜಾನೆ ವೇಳೆ ಅಮ್ಮ ಪೂಜಾಕೋಣೆಯಲ್ಲಿ ಪ್ರಾರ್ಥನೆಯಲ್ಲಿ ನಿರತಳಾಗಿರುವಾಗ ತಾನು ನೇಣು ಹಾಕಿಕೊಳ್ಳಬೇಕು ಎಂದು ನಿರ್ಧರಿಸಿದ. ಹಗ್ಗ, ಸ್ಟೂಲ್ ಎಲ್ಲ ಪರಿಕರಗಳನ್ನೂ ಸಿದ್ಧಪಡಿಸಿಕೊಂಡ. ಮರುದಿನ ಯೋಜನೆಯಂತೆ ಕಾರ್ಯಪ್ರವೃತ್ತವಾಗಿ ಚೀಲದಿಂದ ಹಗ್ಗ ತೆಗೆಯುವಷ್ಟರಲ್ಲಿ ಹಠಾತ್ತನೇ ಅಮ್ಮ ಕೊಠಡಿಯೊಳಗೆ ಪ್ರವೇಶಿಸಿಬಿಟ್ಟಳು. ಈತ ಹಗ್ಗವನ್ನು ಬೆನ್ನಹಿಂದೆ ಬಚ್ಚಿಟ್ಟುಕೊಳ್ಳುತ್ತಾ ತಡವರಿಸಿದ- 'ಅಮ್ಮಾ, ನೀನು ಈ ವೇಳೆಗೆ ಪ್ರಾರ್ಥನೆ ಮಾಡುತ್ತಿರಬೇಕಿತ್ತು ಅಲ್ಲವಾ?'
ಅಮ್ಮ ಹೇಳಿದಳು- 'ಅದೇನಾಯ್ತು ಅಂದ್ರೆ ನಿನ್ನೆ ರಾತ್ರಿ ನನ್ನ ಕನಸೊಳಗೆ ಬಂದ ದೇವರು ತಾನೀಗ ನಾಸ್ತಿಕವಾದಿಯಾಗಿರುವುದಾಗಿ ಹೇಳಿದ.'
ಮಗ ಇನ್ನಷ್ಟು ತಡಬಡಾಯಿಸಿದ- 'ಅದು ಹೇಗೆ ಸಾಧ್ಯ? ಅವನಲ್ಲೇ ಆತನಿಗೆ ನಂಬಿಕೆ ಇಲ್ಲದಿದ್ದರೆ ವಿಶ್ವವನ್ನು ಹೇಗೆ ನಿಭಾಯಿಸುತ್ತಾನೆ?'
'ನಾನೂ ಅದನ್ನೇ ಹೇಳೋದು' ಎಂದ ತಾಯಿ ಮಗನ ಬೆನ್ನಹಿಂದಿದ್ದ ಹಗ್ಗವನ್ನು ಸೆಳೆದು ತನ್ನ ವಿಶ್ವವನ್ನು ಉಳಿಸಿಕೊಂಡಳು.
---
'ದೇವರನ್ನು ವಿವರಿಸಿ' ಎಂದು ಆ ಶಾಲೆಯಲ್ಲಿ ಹೋಮ್ವರ್ಕ್ ಕೊಟ್ಟಿದ್ದರು. ಡ್ಯಾನಿ ಡಟ್ಟನ್ ಎಂಬ ಹುಡುಗ ಬರೆದಿದ್ದ ಪ್ರಬಂಧ ಹೀಗಿತ್ತು.
ದೇವರ ಮುಖ್ಯ ಕೆಲಸವೆಂದರೆ ಜನರನ್ನು ತಯಾರಿಸೋದು. ಸತ್ತ ಜನರ ಜಾಗದಲ್ಲಿ ಹೊಸಬರನ್ನಿರಿಸಿ ಭೂಮಿಯನ್ನು ನೋಡಿಕೊಳ್ಳುವುದಕ್ಕೆ ಬಿಡುತ್ತಾನೆ. ಚಿಕ್ಕದಾಗಿ, ತಯಾರಿಕೆಗೆ ಸುಲಭ ಅಂತ ಆತ ದೊಡ್ಡವರನ್ನಲ್ಲದೇ ಬೇಬಿಗಳನ್ನೇ ತಯಾರಿಸುತ್ತಾನೆ. ಅದಕ್ಕೆ ನಡೆಯುವುದು-ಮಾತನಾಡುವುದನ್ನೆಲ್ಲ ಕಲಿಸುವುದಕ್ಕೆ ಅಪ್ಪ-ಅಮ್ಮಂದಿರ ಹತ್ತಿರ ಬಿಡುತ್ತಾನೆ.
ದೇವರ ಇನ್ನೊಂದು ಬಹುಮುಖ್ಯ ಕೆಲಸ ಅಂದ್ರೆ ಪ್ರಾರ್ಥನೆಯನ್ನು ಆಲಿಸೋದು. ಅದ್ಕೇ ಅವ್ನಿಗೆ ಟಿವಿ ನೋಡೋಕೂ ಪುರಸೊತ್ತು ಸಿಗಲ್ಲ. ದೇವರು ಎಲ್ಲ ಕಡೆಯಿಂದ, ಎಲ್ಲವನ್ನೂ ಕೇಳಿಸಿಕೊಳ್ಳುವುದರಿಂದ ಆತ ಛ್ಡಿಡಣ ಆಗಿರುತ್ತಾನೆ. ದೇವರನ್ನು ನಂಬದವರನ್ನು ನಾಸ್ತಿಕರೆನ್ನುತ್ತಾರೆ. ನಮ್ಮ ಏರಿಯಾದಲ್ಲಿ ಅಂಥವರು ಯಾರೂ ಇಲ್ಲ ಅಂದುಕೊಂಡಿದ್ದೇನೆ. ಇದ್ದರೂ ಅವರು ಚರ್ಚ್ಗಂತೂ ಬರುತ್ತಿಲ್ಲ.
ಜೀಸಸ್ ದೇವರ ಮಗ. ಆತ ಪರಿಶ್ರಮಿಯಾಗಿದ್ದು ಪವಾಡಗಳನ್ನು ಮಾಡುತ್ತಿದ್ದ. ಜನಕ್ಕೆ ಬೇಜಾರುಬಂದು ಆತನನ್ನು ಶಿಲುಬೆಗೇರಿಸಿದರು. ಅವರೇನು ಮಾಡಿದ್ದಾರೋ ಅವರಿಗೆ ಗೊತ್ತಿಲ್ಲ, ಅವರನ್ನು ಕ್ಷಮಿಸು ಎಂದು ಆತ ತಂದೆಯ ಬಳಿ ಕೇಳಿಕೊಂಡ. ತಂದೆ ಓಕೆ ಅಂದರು. ಆಮೇಲೆ ಆತನ ಕೆಲಸಕ್ಕೆ ಹೊಗಳಿ, ನೀನಿನ್ನು ರಸ್ತೆಗಿಳಿಯಬೇಡ ಸ್ವರ್ಗದಲ್ಲೇ ಇರು ಎಂದು ಹೇಳಿದ. ಈಗ ಜೀಸಸ್ ಸ್ವರ್ಗದಲ್ಲೇ ಇದ್ದುಕೊಂಡು ತಂದೆಗೆ ಸಹಾಯ ಮಾಡುತ್ತಿದ್ದಾನೆ. ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಹೇಳಿಕೊಂಡು ಆತನಿಗೆ ತೊಂದರೆ ಕೊಡದೆ, ಜೀಸಸ್ಗೆ ಎಲ್ಲವನ್ನೂ ಕೇಳಿಕೊಳ್ಳುತ್ತಿದ್ದೇವೆ.
ನಾವು ಪ್ರತಿ ಭಾನುವಾರ ಚರ್ಚ್ಗೆ ಹೋಗುತ್ತೇವೆ. ಆಗ ದೇವರಿಗೆ ಖುಷಿಯಾಗುತ್ತದೆ. ನೀವು ಯಾರನ್ನಾದರೂ ಖುಷಿಪಡಿಸಬಹುದು ಅಂದ್ರೆ ಅದು ದೇವರನ್ನು. ದೇವರನ್ನು ನಂಬದಿದ್ದರೆ ನಾಸ್ತಿಕರೆನಿಸಿಕೊಳ್ಳುತ್ತೀರಿ. ಆಗ ನೀವು ಒಂಟಿಯಾಗುತ್ತೀರಿ. ಯಾಕಂದ್ರೆ ಎಲ್ಲ ಟೈಮಲ್ಲೂ ಅಪ್ಪಾಮ್ಮ ನಮ್ ಜತೆ ಇರಲ್ಲ. ಕತ್ತಲಲ್ಲಿ ಹೋಗುತ್ತಿರುವಾಗ, ಈಜು ಬರದ ನಮ್ಮನ್ನು ಮೇಲಿನ ಕ್ಲಾಸ್ನ ಮಕ್ಕಳು ನೀರಿಗೆ ತಳ್ಳಿದಾಗ ಜತೇಲಿ ದೇವರಿದ್ರೆ ಧೈರ್ಯ ಬರುತ್ತೆ.
ದೇವರು ಯಾವಾಗ ಬೇಕೋ ಆವಾಗ ನನ್ನ ವಾಪಸ್ ತಗೋತಾನೆ. ಅದ್ಕೆ ನಾನು ದೇವ್ರನ್ನ ನಂಬ್ತೀನಿ.
---
ಯಾರಿಗೂ ಉಪದ್ರ ಎನಿಸದ ಮಗುಮನದ ನಿಷ್ಕಲ್ಮಶ ನಂಬಿಕೆ ಈ ಜಗತ್ತನ್ನು ನಿರಂತರ ಪೊರೆಯುತ್ತಿರಲಿ!
- ವಿಶ್ವೇಶ್ವರ ಭಟ್
vbhat@me.com