ಸಾವಿನ ಕೀಟದ ಸದ್ದು ಜೋರಾಗುತ್ತಿದೆ ಹುಷಾರ್!

Updated on: 

'ಡೆತ್-ವಾಚ್ ಬೀಟಲ್‌' ಎನ್ನುವ ಕಟ್ಟಿಗೆ ಕೊರಕ ಕೀಟವೊಂದಿದೆ. ಗಡಿಯಾರದ ಮುಳ್ಳಿನಂತೆ ಅದು (ಟಿಕ್ ಟಿಕ್)ಸದ್ದು ಮಾಡುತ್ತದೆ. ಹೆಣ್ಣು ಕೀಟವನ್ನು ಆಕರ್ಷಿಸುವುದಕ್ಕಾಗಿ ತನ್ನ ತಲೆಯನ್ನು ಕಟ್ಟಿಗೆಗೆ ಗುದ್ದುತ್ತಾ ಅದು ಈ ರೀತಿಯ ಸಣ್ಣ ಸದ್ದು ಹೊರಡಿಸುತ್ತದೆ. ಆದರೆ ಹಿಂದಿನ ತಲೆಮಾರಿನವರು ಈ ಸದ್ದನ್ನು ಕೇಳಿ, "ಅಗೋಚರ ಸಾವಿನ ಗಡಿಯಾರದ ಸದ್ದಿದು. ಇದು ನಿಂತಾಕ್ಷಣ ಮನೆಯಲ್ಲಿ ಯಾರಾದರೂ ಸಾಯುತ್ತಾರೆ" ಎಂದು ಬಾವಿಸುತ್ತಿದ್ದರು. ಸಮಯದ ಜೊತೆಗೆ ಆ ಮೂಢನಂಬಿಕೆ ದೂರವಾಗಿರಬಹುದು. ಆದರೆ ಆ ಟಿಕ್ ಟಿಕ್ ಎನ್ನುವ ಭಯಾನಕ ಸದ್ದು ಮಾತ್ರ ನಿಂತಿಲ್ಲ. ಮನುಷ್ಯರೆಲ್ಲರೂ ಈಗ ಈ ಕೀಟವಾಗಿ ಬದಲಾಗಿದ್ದಾರೆ. ಇಡೀ ಭೂಮಂಡಲವನ್ನೇ ನಾಶ ಮಾಡಲು ನಿಂತಿರುವ ನಾವು ನಮ್ಮ ತಲೆಯನ್ನು ಪ್ರಕೃತಿಗೆ ನಿರಂತರವಾಗಿ ಗುದ್ದುತ್ತಲೇ ಇದ್ದೇವೆ.
ಹೇಗೆ ನಮ್ಮ ನದಿಗಳೆಲ್ಲ ಮರುಳು ಮಾಫಿಯಾದ ಕೈಯಲ್ಲಿ ಸಾಯುತ್ತಿವೆಯೋ ನೋಡಿ. ಈ ಲಾಬಿ ಎಷ್ಟು ಬಲಿಷ್ಠವಾಗಿದೆಯೆಂದರೆ ಮರಳು ಲಾರಿಗಳನ್ನು ತಡೆಯಲು ಹೋಗುವ ನಿಷ್ಠಾವಂತ ಅಧಿಕಾರಿಗಳೆಲ್ಲ  ಆ ಲಾರಿಗಳ ಕೆಳಗೆ ಸಿಲುಕಿ ಸಾಯುತ್ತಿದ್ದಾರೆ. ಯಾವ ರಾಜ್ಯದಲ್ಲೂ ಮರುಳು ಮಾಫಿಯಾದ ಹೆಡೆಮುರಿಕಟ್ಟಲು ಸಾಧ್ಯವಾಗಿಲ್ಲ. ಗುಜರಾತ್‌ನಿಂದ ಕೇರಳದವರೆಗೂ ಹರಡಿಕೊಂಡಿರುವ ಪಶ್ಚಿಮ ಘಟ್ಟಗಳ ಪರಿಸ್ಥಿತಿ ಇಂದು ಎಲ್ಲಿಗೆ ಬಂದು ನಿಂತಿದೆ? ದಕ್ಷಿಣದ ಜೀವನಾಡಿಯಿದು. ಎಲ್ಲಾ ನದಿಗಳ ತಾಯಿಯಿದು. ಮೋಡಗಳನ್ನು ತಡೆಹಿಡಿದು ಈ ಭಾಗಕ್ಕೆ ಮಳೆ ಭಾಗ್ಯ ಕರುಣಿಸುವ ಮಮತಾಮಯಿಯಿದು.  
ಆದರೆ ಈ ಘಟ್ಟಗಳ ಮೇಲೆ ಈಗ ದಾಳಿ ನಡೆದಿದೆ. ಪರಿಣಾಮ ಗಂಭೀರವಾಗಿದೆ. ಮಳೆಯ ಗತಿ ಬದಲಾಗಿದೆ. ವಾತಾವರಣದ ಸ್ಥಿತಿ ಗಂಭೀರವಾಗಿದೆ. ಕಾವು ಏರುತ್ತಿದೆ. ಆದರೆ ಘಟ್ಟಗಳ ಮೇಲೆ ದಾಳಿ ಮಾಡುತ್ತಿರುವವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮರ, ಖನಿಜ, ಗ್ರಾನೈಟ್ ಮತ್ತು ಭೂಗಳ್ಳರೆಲ್ಲ ಇಲ್ಲಿ ಮುಕುರಿಕೊಂಡಿದ್ದಾರೆ. ಮಲಬಾರ್ ಭಾಗದಲ್ಲಿನ ಒಂದು ಅದ್ಭುತ ಬೆಟ್ಟದ ಮೇಲೆ ಕರ್ನಾಟಕದ ಮೈನಿಂಗ್ ಕಂಪನಿಯೊಂದು ಈಗ ಕಣ್ಣು ಹಾಕಿದೆ. ಕೇರಳದ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಸಿಪಿಎಮ್‌ನ ಮಾಜಿ ಮಂತ್ರಿಯೊಬ್ಬರು 5 ಕೋಟಿ ಲಂಚ ಪಡೆದು ಆ ಭಾಗವನ್ನು ಬಳಸಲು ಆ ಕಂಪನಿಗೆ ಅನುಮತಿ ದೊರಕಿಸಿಕೊಟ್ಟಿದ್ದಾರೆ. ಒಂದು ವೇಳೆ ಆ ಕಂಪನಿಯೇನಾದರೂ ಅಲ್ಲಿ ಮೈನಿಂಗ್ ಶುರುಮಾಡಿತೆಂದರೆ ಆ ಬೆಟ್ಟ ಇನ್ನು ಕೆಲವೇ ದಿನಗಳಲ್ಲಿ ಕಾಣೆಯಾಗುವುದರಲ್ಲಿ ಸಂಶಯವಿಲ್ಲ. ಆಶ್ಚರ್ಯವೆಂದರೆ ಇತ್ತೀಚೆಗೆ ಎರಡು ಸಮಿತಿಗಳು ಪಶ್ಚಿಮ ಘಟ್ಟಗಳ ಉಳಿವಿನ ಕುರಿತು ಪ್ರಕಟಿಸಿದ ವರದಿಗಳಿಂದಾಗಿ ಕೇರಳ ಮತ್ತು ಇನ್ನಿತರ ರಾಜ್ಯಗಳಲ್ಲಿ ಗಲಭೆಗಳು ನಡೆದಿವೆ! ಕ್ರಿಶ್ಚಿಯನ್ ಪಾದ್ರಿಯೊಬ್ಬರಂತೂ, ಕೇರಳದಲ್ಲಿ ಜಾಲಿಯನ್ ವಾಲಾಬಾಗ್‌ನಂಥ ಘಟನೆ ಸಂಭವಿಸುತ್ತದೆ ಎಂದು ಸಾರ್ವಜನಿಕವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.  ರೈತರನ್ನು ಕಾಪಾಡುವುದಕ್ಕೆ ಈ ಪ್ರತಿಭಟನೆಗಳು ನಡೆದವು ಎಂದು ಹೇಳಲಾಗುತ್ತಿದೆ. ಆದರೆ ಯಾವ ಸಮಿತಿಯೂ ರೈತರಿಂದ ಜಾಗ ಕಸಿದುಕೊಂಡು, ಅವರನ್ನು ಹೊರದೂಡಬೇಕು ಎಂದು ಶಿಫಾರಸು ಮಾಡೇ ಇಲ್ಲ. ಬೃಹತ್ ಉದ್ಯಮಗಳು ಪಶ್ಚಿಮಘಟ್ಟದಲ್ಲಿ ಬಂದು ಕೂಡದಂತೆ ಕ್ರಮ ಕೈಗೊಳ್ಳಬೇಕು ಎನ್ನುವುದೇ ಈ ಸಮಿತಿಗಳ ಮುಖ್ಯ ಉದ್ದೇಶ. ಅಂದರೆ ಈ ವರದಿಗಳಿಂದಾಗಿ ಅನ್ಯಾಯಕ್ಕೊಳಗಾಗುವವರು ಗಣಿ ಧಣಿಗಳು, ರೆಸಾರ್ಟ್ ಮಾಲೀಕರು ಮತ್ತು ಅಂಥದ್ದೇ ಸ್ವಹಿತಾಸಕ್ತಿಯ ಜನರು ಮಾತ್ರ. ಪಾಪ ರೈತರು ಬೇರೆ ಯಾರದ್ದೋ ಯುದ್ಧದಲ್ಲಿ 'ಹೋರಾಡುತ್ತಿದ್ದಾರೆ'!
ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮ ಘಟ್ಟಗಳು ಹಾಳಾಗಿ ಹೋಗಬಹುದು. 'ಡೆತ್-ವಾಚ್ ಬೀಟಲ್‌' ಸದ್ದು ಮಾಡುತ್ತಲೇ ಇದೆ. 'ಆಯ್ಕೆ' ಮಾಡುವ ಸಾಮರ್ಥ್ಯವಿರುವ ಪ್ರಾಣಿಯೆಂದರೆ ಮನುಷ್ಯನೊಬ್ಬನೇ. ಆದರೆ ಆತ ಕೇವಲ ತಪ್ಪು ಆಯ್ಕೆಗಳನ್ನೇ ಆದ್ಯತೆಯಾಗಿಸಿಕೊಳ್ಳುತ್ತಿದ್ದಾನೆ. ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಆತನಿಗೆ ಅರಿವಿಲ್ಲ, ಅದನ್ನು ತಿಳಿದುಕೊಳ್ಳುವ ಮನಸ್ಸೂ ಇಲ್ಲ. ಹಾಗೆ ನೋಡಿದರೆ ಅನೇಕ ಬುದ್ಧಿವಂತ ಪ್ರಾಣಿಗಳಿವೆ. ಉದಾಹರಣೆಗೆ: ಆನೆ . ಆದರೆ ಸರಿ ತಪ್ಪನ್ನು ನಿರ್ಧರಿಸುವ ಸಾಮರ್ಥ್ಯ ಮನುಷ್ಯನಿಗಷ್ಟೇ ಏಕಿದೆ? ಇದ್ದರೂ ಸರಿ ತಪ್ಪುಗಳ ಆಯ್ಕೆಯಲ್ಲಿ ಬಹುತೇಕರು ತಪ್ಪು ಆಯ್ಕೆಯತ್ತಲೇ ಏಕೆ ತೆರಳುತ್ತಾರೆ?
ಇದಕ್ಕೆ ಸೂಕ್ತ ಉತ್ತರ 'ಡಿನಯಲ್: ಸೆಲ್ಫ್ ಡಿಸಿಪ್ಶನ್, ಫೇಕ್ ಬಿಲೀಫ್ಸ್ ಆಂಡ್ ದಿ ಒರಿಜಿನ್ಸ್ ಆಫ್ ದಿ ಹ್ಯೂಮನ್ ಮೈಂಡ್‌' ಎನ್ನುವ ಪುಸ್ತಕದಲ್ಲಿ ನಿಮಗೆ ಸಿಗುತ್ತದೆ. ಡಾ. ಅಜಿತ್ ವಾರ್ಕಿ ಮತ್ತುಡ್ಯಾನಿ ಬ್ರೋವರ್ ಬರೆದಿರುವ ಈ ಪುಸ್ತಕ ಈ ಬಗ್ಗೆ ಬೆಳಕು ಚೆಲ್ಲುತ್ತದೆ.
ನಿರಾಕರಣೆ: ಮನುಷ್ಯ ಆನೆಗಿಂತಲೂ ಮುಂದುವರಿದು 'ನಿರಾಕರಣೆ' ಎನ್ನುವ ಸಾಮರ್ಥ್ಯವನ್ನು ಬೆಳೆಸಿಕೊಂಡ. ಇದರಿಂದಾಗಿ ಆತನಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ವಿಶ್ವಾಸ ಬೆಳೆಯಿತು(ವಾಸ್ತವವನ್ನು ನಿರಾಕರಿಸುವ ಸಾಮರ್ಥ್ಯ ಎನ್ನುವುದೊಳಿತು) ಆದರೆ ಇದರಿಂದಾಗಿ ಅನವಶ್ಯಕ ಸವಾಲುಗಳನ್ನು ಎದುರಿಸುವ ಚಟವೂ ಆತನಿಗೆ ಅಂಟಿಕೊಂಡಿತು. "ನಾವು ಸಿಗರೇಟ್ ಸೇದುತ್ತೇವೆ. ಪೌಷ್ಠಿಕ ಆಹಾರವನ್ನು ಸೇವಿಸುವುದಿಲ್ಲ. ವ್ಯಾಯಾಮವನ್ನು ತಪ್ಪಿಸಿಕೊಳ್ಳುತ್ತೇವೆ. ಇದರಿಂದಾಗಿ ಅಪಾಯಗಳು ಎದುರಾಗುತ್ತವೆ ಎನ್ನುವುದು ನಮಗೆ ತಿಳಿದಿಲ್ಲವೆಂದೇನಲ್ಲ."ಸರಳವಾಗಿ ಹೇಳಬೇಕೆಂದರೆ, ವಾಸ್ತವವನ್ನು ನಿರಾಕರಿಸುತ್ತೇವೆ. ಆಹಾರ ಪದ್ಧತಿ ಅಥವಾ ಸಿಗರೇಟು ಚಟಗಳನ್ನು ಬಿಟ್ಟು ಮತ್ತೆ ಆರೋಗ್ಯವನ್ನುಸರಿಪಡಿಸಬಹುದು. ಆದರೆ ಒಮ್ಮೆ ನಾವು ಪ್ರಕೃತಿಯನ್ನು ಹಾಳಗೆಡವಿದೆವೆಂದರೆ ಅದನ್ನು ಸರಿಪಡಿಸಲು ಸಾಧ್ಯವಾಗದು. ನಮಗಿರುವುದು ಒಂದೇ ಗ್ರಹ, ಒಂದೇ ಜೈವಿಕ ಮಂಡಲ, ಇದನ್ನು ಕೊಲ್ಲುವುದು ಬೇಡ.
ಕಣ್ಣು ತೆರೆದು ನೋಡಿದರೆ ನಮಗೆ ಪಶ್ಚಿಮ ಘಟ್ಟಗಳ ಮಹತ್ವ ಕಾಣಿಸುತ್ತದೆ. ಕಣ್ಣು ಮುಚ್ಚಿ ಕುಳಿತರೆ 'ಸಾವಿನ ಕೀಟದ' ಸದ್ದು ಜೋರಾಗುತ್ತಲೇ ಸಾಗುತ್ತದೆ.

- ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com