ಹುಮ್ಮಸ್ಸು ಉಕ್ಕಿಸುವ ಕೇಪ್ ಆಫ್ ಗುಡ್ ಹೋಪ್

ಕಳೆದ ವರ್ಷ ಮೆಕ್ಸಿಕೋಕ್ಕೆ ತಾಕಿಕೊಂಡಿರುವ ಲಾಸ್‌ಕೆಬೋಸ್ ನಗರಕ್ಕೆ ಹೋಗಿದ್ದೆ...
Updated on: 

ಕೇಪ್ ಆಫ್ ಗುಡ್‌ಹೋಪ್‌ಗೆ ತಾಕಿಕೊಂಡು ಸುಮಾರು ಇನ್ನೂರು ಮೀಟರ್ ಎತ್ತರದ ಗುಡ್ಡವಿದೆ. ಇದನ್ನು ಬಳಸಿಯೇ ಅಟ್ಲಾಂಟಿಕ್ ಹಾಗೂ ಹಿಂದೂ ಮಹಾಸಾಗರಗಳು ನೈಸರ್ಗಿಕ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಿವೆ.

ಕಳೆದ ವರ್ಷ ಮೆಕ್ಸಿಕೋಕ್ಕೆ ತಾಕಿಕೊಂಡಿರುವ ಲಾಸ್‌ಕೆಬೋಸ್ ನಗರಕ್ಕೆ ಹೋಗಿದ್ದೆ. ಲಾ ಪಾಜ್ ಎಂಬ ನಗರಕ್ಕೆ ಹತ್ತಿರವಿರುವ ಲಾಸ್ ಕೆಬೋಸ್‌ನ ವೈಶಿಷ್ಟ್ಯವೇನೆಂದರೆ ಅದರ ಮುಂದೆ ಊರುಗಳೇ ಇಲ್ಲ. ಬರೀ ಸಮುದ್ರ! ನಾವು ಉಳಿದುಕೊಂಡ ಹೋಟೆಲ್ ಕಟ್ಟಕಡೆಯ ಕಟ್ಟಡ. ಹೋಟೆಲ್ ಪೋರ್ಟಿಕೋದಿಂದ ಕಾಲು ಕೆಳಚಾಚಿದರೆ ಸಮುದ್ರ. ಎಲ್ಲಿ ನೋಡಿದರೂ ಸಮುದ್ರ, ಜಲರಾಶಿ. ಇಂಥದೇ ಅನುಭವ ಐದಾರು ವರ್ಷಗಳ ಹಿಂದೆ ಸ್ಪೇನಿನ ಬಾರ್ಸಿಲೋನಾ ನಗರದಿಂದ ಒಂದೂವರೆ ಗಂಟೆ ವಿಮಾನ ಪಯಣದಷ್ಟು ದೂರವಿರುವ ಇಬಿಜಾ ಎಂಬ ದ್ವೀಪಕ್ಕೆ ಹೋದಾಗಲೂ ಆಗಿತ್ತು.
ಮೊನ್ನೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಸುಮಾರು ನೂರೈವತ್ತು ಕಿ. ಮೀ. ದೂರದಲ್ಲಿರುವ 'ಕೇಪ್ ಆಫ್ ಗುಡ್ ಹೋಪ್‌'ಗೆ ಹೋದಾಗ ಆದ ಅನುಭವವೇ ಬೇರೆ.
'ಕೇಪ್ ಆಫ್ ಗುಡ್ ಹೋಪ್‌' ಅಂದ್ರೆ ಎಲ್ಲೋ ಕೇಳಿದಂತಿದೆಯಲ್ಲ ಎಂದು ನಿಮಗೆ ಅನಿಸಬಹುದು. ಹೈಸ್ಕೂಲಿನಲ್ಲಿ ಭೂಗೋಳ ಮೇಷ್ಟ್ರ ಬಾಯಲ್ಲಿ ಇದನ್ನು ಕೇಳಿಯೇ ಕೇಳಿರುತ್ತೀರಿ. ನಾನು ಓದಿದ ಶಿರಸಿ ಸಮೀಪದ ಗೋಳಿ ಹೈಸ್ಕೂಲಿನಲ್ಲಿ ಹಬ್ಬು ಮಾಸ್ತರರು 'ಕೇಪ್ ಆಫ್ ಗುಡ್ ಹೋಪ್‌' ಬಗ್ಗೆ ಬಹಳ ರಸವತ್ತಾಗಿ ಪಾಠ ಮಾಡಿದ್ದು ನನಗೆ ಇನ್ನೂ ನಿನ್ನೆ ಮೊನ್ನೆ ಕೇಳಿದಂತಿದೆ. ಹೀಗಾಗಿ ಈ ಅಪೂರ್ವ ರುದ್ರರಮಣೀಯ ತಾಣಕ್ಕೆ ಬರುತ್ತಿದ್ದಂತೆ ಮಂತ್ರಮುಗ್ಧನಾಗಿ ರೋಮಾಂಚನಗೊಂಡೆ.
ಕೇಪ್ ಆಫ್ ಗುಡ್ ಹೋಪ್ ನೈರುತ್ಯ ಆಫ್ರಿಕಾ ಖಂಡದ ಕಟ್ಟಕಡೆಯ ಭೂಭಾಗ. ಅದರ ನಂತರ ಭೂಮಿಯೇ ಇಲ್ಲ. ಮತ್ತೊಂದು ವಿಶೇಷ ಅಂದ್ರೆ ಇದೇ ತಾಣದಲ್ಲಿ ಅಟ್ಲಾಂಟಿಕ್ ಮಹಾಸಾಗರ ಹಾಗೂ ಹಿಂದೂ ಮಹಾಸಾಗರಗಳು ಪರಸ್ಪರ ಚುಂಬಿಸುತ್ತವೆ. ಅಂದಮೇಲೆ ಈ ತಾಣ ಅದೆಷ್ಟು ಸುಂದರ, ನಯನಮನೋಹರವಾಗಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಬಹುದು. ಅದನ್ನು ಬಣ್ಣಿಸುವುದು ನಿಜಕ್ಕೂ ಸವಾಲಿನ ಕೆಲಸವೇ. 1488ರಲ್ಲಿ ಮೊತ್ತಮೊದಲ ಬಾರಿಗೆ ಇಲ್ಲಿಗೆ ಕಾಲಿಟ್ಟವನು ಪೋರ್ಚುಗೀಸ್ ನಾವಿಕ ಬಾರ್ತೋಲೋಮಿಯೋ ಡಯಾಸ್. ಆತ ಈ ಭೂಪ್ರದೇಶಕ್ಕೆ ಇಟ್ಟ ಹೆಸರು 'ಕೇಪ್ ಆಫ್ ಸ್ಟಾರ್ಮ್ಸ್‌'.
ಬಾರ್ತೋಲೋಮಿಯೋ ಡಯಾಸ್‌ನ ಹಡಗಿನಲ್ಲಿ ಸಹಾಯಕನಾಗಿದ್ದ ಎರಡನೆ ಜಾನ್ ಮುಂದಿನ ವರ್ಷ ಪುನಃ ಇಲ್ಲಿಗೆ ಬಂದಾಗ ಆತ ಅದಕ್ಕೆ 'ಕೇಪ್ ಆಫ್ ಗುಡ್ ಹೋಪ್‌' ಎಂದು ಮರು ನಾಮಕರಣ ಮಾಡಿದ.
ಆದರೆ ಈ ತಾಣ ಪ್ರಸಿದ್ಧವಾದದ್ದು ವಾಸ್ಕೋಡ ಗಾಮನಿಂದ. ಆತ ಯುರೋಪಿನ ಲಿಸ್ಬನ್‌ನಿಂದ ಹೊರಟು ಕೇಪ್ ಆಫ್ ಗುಡ್ ಹೋಪ್‌ನಲ್ಲಿ ತಂಗಿ ಆನಂತರ ಭಾರತದ ಕಲ್ಲಿಕೋಟೆ ಹಾಗೂ ಗೋವಾಕ್ಕೆ ಭೇಟಿ ಕೊಟ್ಟಿದ್ದ. ಭಾರತದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ವೈವಿಧ್ಯಮಯ ಸಾಂಬಾರು ಪದಾರ್ಥಗಳ ವಾಸನೆ ಕೇಪ್ ಆಫ್ ಗುಡ್ ಹೋಪ್‌ನಿಂದ ಭಾರತಕ್ಕೆ ಅವನನ್ನು ಕರೆದುಕೊಂಡು ಬಂದಿತ್ತು. ಈ ಪ್ರದೇಶ ಪೋರ್ಚುಗೀಸರಿಗೆ ಪೂರ್ವರಾಷ್ಟ್ರಗಳ ಮಹಾದ್ವಾರವನ್ನೇ ತೆರೆದಿದ್ದರಿಂದ ಅವರು ಕೇಪ್‌ಟೌನ್‌ನಿಂದ ಹತ್ತಿರದಲ್ಲಿರುವ ಈ ತಾಣಕ್ಕೆ ಕೇಪ್ ಜತೆಗೆ 'ಗುಡ್‌ಹೋಪ್‌' ಅನ್ನು ಸೇರಿಸಿ, 'ಕೇಪ್ ಆಫ್ ಗುಡ್ ಹೋಪ್‌' ಎಂದು ಕರೆದರು. ಇದರ ಇನ್ನೊಂದು ಪಾರ್ಶ್ವದಲ್ಲಿ ಭೂಮಿ ತುಸು ಮುಂದಕ್ಕೆ ಚಾಚಿಕೊಂಡಿದೆ. ಹಾಗೆ ನೋಡಿದರೆ ಕೇಪ್ ಆಫ್ ಗುಡ್ ಹೋಪ್‌ಗಿಂತ ತುಸು ಮುಂದೆ ಭೂಮಿ ವಿಸ್ತರಿಸಿದೆ. ಅದನ್ನು 'ಕೇಪ್ ಪಾಯಿಂಟ್‌' ಅಂತಾರೆ. ಇಲ್ಲಿಂದ ನಿಂತು ನೋಡಿದರೆ ಎರಡು ಸಾಗರಗಳು ಒಂದಾಗುವ ದೃಶ್ಯವನ್ನು ನೋಡಬಹುದು. ಕೇಪ್ ಆಫ್ ಗುಡ್‌ಹೋಪ್‌ಗೆ ತಾಕಿಕೊಂಡು ಸುಮಾರು ಇನ್ನೂರು ಮೀಟರ್ ಎತ್ತರದ ಗುಡ್ಡವಿದೆ. ಇದನ್ನು ಬಳಸಿಯೇ ಅಟ್ಲಾಂಟಿಕ್ ಹಾಗೂ ಹಿಂದೂ ಮಹಾಸಾಗರಗಳು ನೈಸರ್ಗಿಕ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಿವೆ.
ಗುಡ್‌ಹೋಪ್‌ಗೆ ಹೋಗುವಾಗ ಸಾಮಾನ್ಯವಾಗಿ ನಿಮಗೆ ಮುಖಾಮುಖಿ ಆಗುವ ಅತಿಥಿ ಅಂದ್ರೆ ಆಸ್ಟ್ರಿಚ್ ಅಥವಾ ಉಷ್ಟ್ರಪಕ್ಷಿ.  ಇಂಥ ಅಪರೂಪದ ತಾಣದ ಬಗ್ಗೆ ಇಷ್ಟು ಚುಟುಕಾಗಿ ಹೇಳಬಾರದು. ಈ ಬಗ್ಗೆ ಹೇಳುವುದು ಬೆಟ್ಟದಷ್ಟಿದೆ. ಹೋಪ್ ಫಾರ್ ದಿ ಗುಡ್!
ಮೊಬುಟು ಸೆಸೆ ಸೆಕೊ ಕುಕು ನಬೆಂಡು ವಾಜಾ ಬಂಗಾ!
ಕಳೆದ ವಾರ ಈ ಅಂಕಣದಲ್ಲಿ 'ಅಂದ ಹಾಗೆ ನಿಮ್ಮ ಹೆಸರೇನು?' ಎಂಬ ಶೀರ್ಷಿಕೆಯಡಿಯಲ್ಲಿ ಹೆಸರು ಹಾಗೂ ಅಡ್ಡ ಹೆಸರಿನ ಬಗ್ಗೆ ಪ್ರಸ್ತಾಪಿಸಿದ್ದೆನಷ್ಟೆ. ಅದಕ್ಕೆ ಪೂರಕವೆಂಬಂತೆ ಪತ್ರಿಕೆಯ ಓದುಗರಾದ ಭೃಗೇಂದ್ರ ಪಿ. ಭಟ್ ಎಂಬುವವರು ಆಫ್ರಿಕಾದ ಝೈರೆ ಎಂಬ ಸರ್ವಾಧಿಕಾರಿ ಅಧ್ಯಕ್ಷ ಮೊಬುಟು ಹೆಸರನ್ನು ನೆನಪಿಸಿದ್ದಾರೆ. ಆತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವೊಂದೇ ಅಲ್ಲ. ಅದೊಂದು ರಾಷ್ಟ್ರೀಯ ಸವಾಲು (ಆತನ ದೇಶದವರಿಗೆ). ಅಲ್ಲದೇ ಮೊಬುಟು ಪೂರ್ತಿ
ಹೆಸರನ್ನು ಹತ್ತು ಸಲ ತಪ್ಪಿಲ್ಲದೇ ಹೇಳಬೇಕೆಂದು ತಾಕೀತು ಹಾಕಿದರೆ, ಅದು ರಾಷ್ಟ್ರೀಯ ಸಂಕಷ್ಟವೂ ಹೌದು. ಅವನ ಪೂರ್ತಿ ಹೆಸರನ್ನು ಪತ್ರಿಕೆಯ ಹೆಡ್‌ಲೈನ್‌ನಲ್ಲಿ ಬರೆಯುವುದು ಸಾಧ್ಯವೇ ಇಲ್ಲ. ಎಂಟು ಕಾಲಮ್ಮಿನಲ್ಲೂ ಅದು ಫಿಟ್ ಆಗುವುದಿಲ್ಲ. ಚುಟುಕಾಗಿ ಮೊಬುಟು ಎಂದಷ್ಟೇ ಬರೆಯಬಹುದು.
ಮೊಬುಟು ಅಮೆರಿಕ ಪ್ರವಾಸಕ್ಕೆ ಹೋಗಿದ್ದ. ಆಗ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮಾತಿನುದ್ದಕ್ಕೂ ಕೇವಲ ಮೊಬುಟು ಎಂದಷ್ಟೇ ಪ್ರಸ್ತಾಪಿಸಿದ್ದು ವರದಿಯಾಗಿತ್ತು. ಮೊಬುಟು ಪೂರ್ತಿ ಹೆಸರನ್ನು ಬರೆದುಕೊಂಡು ಹೇಳಬಹುದೇ ಹೊರತು, ಬಾಯಿಪಾಠ ಮಾಡಿಕೊಂಡು ಹೇಳಬಹುದೇ ಹೊರತು, ನೆನಪಿಟ್ಟುಕೊಂಡು ಹೇಳುವುದು ಕಷ್ಟವೇ.
ಅಂದ ಹಾಗೆ ಅವನ ಪೂರ್ತಿ ಹೆಸರು-ಮೊಬುಟು ಸೆಸೆ ಸೆಕೊಕುಕುಕು ನಬೆಂಡು ನಾಜಾ ಬಂಗಾ!
ಝೈರೆಯ ಉತ್ತರ ಗಡಿಭಾಗದಿಂದ ಅಧ್ಯಕ್ಷನ ಹೆಸರನ್ನು ಹೇಳುತ್ತಾ ನಡೆಯಲಾರಂಭಿಸಿದರೆ ದಕ್ಷಿಣದ ಗಡಿ ಭಾಗ ಸೇರುತ್ತೀರಿ ಎಂದು ಅವನ ದೇಶದ ಜನರೇ ತಮಾಷೆ ಮಾಡುತ್ತಿದ್ದರು. ಈ 'ಮಹಾಪುರುಷ' ಭಾರತಕ್ಕೂ ಬಂದಿದ್ದ. ಇವನ ಹೆಸರನ್ನು ಹೇಗೆ ಬರೆಯುವುದೆಂದು ಆಗಲೂ ಸಾಕಷ್ಟು ಜಿಜ್ಞಾಸೆಯಾಗಿದ್ದಿರಬಹುದು. ಇಂಗ್ಲಿಷಿನಲ್ಲಿ ಅವನ ಹೆಸರನ್ನು ಬರೆಯುವುದೇ ಒಂದು ಉಚ್ಚರಿಸುವುದೇ ಇನ್ನೊಂದು-
Mobuta Sese Seko NKuku Ngbendu wa Za Banga.
ಮೊಬುಟು ಅಳಿಯ ತನ್ನ ಮಾವನ ಬಗ್ಗೆ ಒಂದು ಪುಸ್ತಕ ಬರೆದಿದ್ದಾನೆ. ಏಳೆಂಟು ವರ್ಷಗಳ ಹಿಂದೆ ಈ ಕೃತಿಯನ್ನು ಓದಿದ್ದೆ. ಮುಂದೊಮ್ಮೆ ಮೊಬುಟು ಬಗ್ಗೆಯೇ ಬರೆಯುತ್ತೇನೆ. ಜಗತ್ತಿನ ಭ್ರಷ್ಟಾಭ್ರಷ್ಟ ರಾಜಕೀಯ ನಾಯಕರ ಸಾಲಿನಲ್ಲಿ ಈತನಿಗೆ ಎತ್ತರದ ಹಾಗೂ ವಿಶೇಷ ಸ್ಥಾನ. ತನ್ನ ದೇಶದ ಜನ ಹೊಟ್ಟೆಗೆ ಹಿಟ್ಟಿಲ್ಲದೇ ಬಡತನದಿಂದ, ಹಸಿವಿನಿಂದ ಸಾಯುತ್ತಿದ್ದರೆ, ಈತ ವಿಶೇಷ ವಿಮಾನದಲ್ಲಿ ಪ್ಯಾರಿಸ್‌ಗೆ ಶಾಪಿಂಗ್‌ಗೆ ಹೋಗುತ್ತಿದ್ದ. ತನ್ನ ದೇಶದ ಎಲ್ಲ ಪತ್ರಿಕೆಗಳೂ ಮುಖಪುಟದಲ್ಲಿ ಪ್ರತಿನಿತ್ಯ ತಪ್ಪದೇ ತನ್ನ ಫೋಟೋವನ್ನು ಪ್ರಕಟಿಸಬೇಕೆಂದು ಆದೇಶ ಹೊರಡಿಸಿದ್ದ! ಅವನ ಹೆಸರೇ ಮೈಲುದ್ದ, ಜತೆಗೆ ಫೋಟೋ ಬೇರೆ ಕೇಡು. ತನ್ನ ಒಂದು ಅರಮನೆಯಿಂದ ಮತ್ತೊಂದು ಅರಮನೆಗೆ ಹೋಗಲು ಈತನಿಗೆ ಬೇರೆ ಬೇರೆ ಬೆಂಜ್ ಕಾರುಗಳು ಬೇಕಾಗಿತ್ತು. ಒಂದೇ ದಿನ ಹಸಿವಿನಿಂದ ಮುನ್ನೂರ ಅರವತ್ತೆಂಟು ಮಂದಿ ತೀರಿಕೊಂಡ ದಿನವೇ, ಬೆಲ್ಜಿಯಮ್‌ನಿಂದ ಲಕ್ಷ ಡಾಲರ್ ಕೇಕ್ ತರಿಸಿ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದ!
ಮೊಬುಟು ಎಂದ ವ್ಯಕ್ತಿ ಎಂಬುದರ ಸಣ್ಣ ಸ್ಯಾಂಪಲ್ ಇದು.
ಹೆಚ್ಚು ಕಮ್ಮಿ ಮರೆತೇ ಹೋಗಿದ್ದ ಈ ವ್ಯಕ್ತಿಯನ್ನು ಭೃಗೇಂದ್ರ ಪಿ. ಭಟ್ ನೆನಪಿಸಿದ್ದಕ್ಕೆ ವಂದನೆಗಳು. ಭಟ್ ಅವರು ತಮ್ಮ ಹೆಸರಿನ 'ಮಹಾತ್ಮೆ'ಯನ್ನೂ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ ಈ ಹೆಸರಿನ ಮತ್ತೊಬ್ಬ ವ್ಯಕ್ತಿ ಇಲ್ಲ. ಹೆಸರಿನ ಕಾರಣಕ್ಕೆ ಅವರನ್ನು ಅನೇಕರು ಅಣಕಿಸುತ್ತಿದ್ದರಂತೆ. ಅದಕ್ಕೆ ಅವರು ಹೇಳುತ್ತಿದ್ದುದು-'ನೀವು ಇಂದಿರಾಗಾಂಧಿಗೆ (ಅಂದಿನ ಪ್ರಧಾನಿ) ಪತ್ರ ಬರೆದರೆ, ಜತೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಂದು ಬರೆಯಬೇಕಾಗುತ್ತದೆ. ಇಲ್ಲದಿದ್ದರೆ ಅವರಿಗೆ ತಲುಪುತ್ತಿರಲಿಲ್ಲ. ಆದರೆ ನನ್ನ ವಿಷಯದಲ್ಲಿ ಹಾಗಲ್ಲ, ಭೃಗೇಂದ್ರ ಪಿ. ಭಟ್ ಅಂತ ಬರೆದರೆ ಸಾಕು. ಟಂಬಕ್ಟುನಿಂದ ಪೋಸ್ಟ್ ಮಾಡಿದರೂ ನನಗೇ ಬರುತ್ತದೆ. ಕಾರಣ ಈ ಭೂಮಿ ಮೇಲೆ ಆ ಹೆಸರಿನ ವ್ಯಕ್ತಿ ನಾನೊಬ್ಬನೇ.'
ಭಟ್ ಅವರ ಹೊರತಾಗಿ ಬೇರೆ ಯಾರಾದರೂ ಭೃಗೇಂದ್ರ ಹೆಸರಿದ್ದರೆ, ಅವರು ಕೈಯೆತ್ತಿ.

- ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com