ಪ್ರಧಾನಿಯನ್ನು ಉಳಿಸಲು ಎಫ್ಐಆರ್ನಲ್ಲಿ ಬಿರ್ಲಾ ಹೆಸರು!

ಈಗ ಮನಮೋಹನ್ ಸಿಂಗ್ ಅವರು ಮಾಹಿತಿದಾರನನ್ನೇ ಶೂಟ್ ಮಾಡಿದ್ದಾರೆ. ಸಂಸತ್ತಿನಲ್ಲಿ ಅವರು ಮತ್ತು ಅವರ ಪಕ್ಷದ ಎಲ್ಲಾ ನಾಯಕರು ಸಿಎಜಿಯ ಮೇಲೆ ಮುರಿದುಕೊಂಡು ಬಿದ್ದರು. ಜವಾಬ್ದಾರಿಯನ್ನು ಒಪ್ಪಿಕೊಂಡು ತಪ್ಪನ್ನು ತಿದ್ದಿಕೊಳ್ಳುವ ಮನಸ್ಥಿತಿಗಳ ಬದಲು, ಸಂಸತ್ತಿನಲ್ಲಿ ಮಡುಗಟ್ಟಿದ್ದು ಯುಪಿಎದ ಕೊಳೆತ ಆತ್ಮಸಾಕ್ಷಿಯ ದುರ್ನಾತವೊಂದೇ!
ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಈಗ ಬಿರ್ಲಾ ಉದ್ದಿಮೆ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಎಫ್ಐಆರ್ ದಾಖಲಿಸಿದೆ. ಹೀಗೆ ಅಚಾನಕ್ಕಾಗಿ ಕುಮಾರ ಮಂಗಲಂ ಅವರ ಹೆಸರು ಎಫ್ಐಆರ್ನಲ್ಲಿ ಕಾಣಿಸಿಕೊಂಡಿದ್ದು ನೋಡಿದರೆ, ನಿಸ್ಸಂಶಯವಾಗಿಯೂ ಇದು ಸಿಬಿಐನ ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಡೆಸಿರುವ ಪ್ರಯತ್ನ ಎನ್ನುವುದು ಅರ್ಥವಾಗುತ್ತದೆ.
ಒಂದು ವೇಳೆ ಸಿಬಿಐ ಎಲ್ಲಾ ಉದ್ಯಮಿಗಳ ಹಿಂದೆ, ಎಲ್ಲಾ ರಾಜಕಾರಣಿಗಳ ಹಿಂದೆ, ಎಲ್ಲಾ ಅಧಿಕಾರಿಗಳ ಹಿಂದೆ ಬಿದ್ದಿತೆಂದರೆ(ಅವರ ವಿರುದ್ಧದ ಸಾಕ್ಷ್ಯ ಎಷ್ಟೇ ಮಜಬೂತಾಗಿರಲಿ ಅಥವಾ ಪೊಳ್ಳಾಗಿರಲಿ) ಅದು ಸೃಷ್ಟಿಸುವ ಸನ್ನಿವೇಶ ಅಸ್ತವ್ಯಸ್ಥವಾಗಿರುವುದಂತೂ ನಿಶ್ಚಿತ. ಅಂಥ ಪರಿಸ್ಥಿತಿಯಲ್ಲಿ ಯಾರಲ್ಲೂ ಕೂಡ ಈ ಪ್ರಕರಣ ಬಗೆ ಹರಿಯಬೇಕು ಎಂಬ ಆಸೆಯೇ ಉಳಿಯುವುದಿಲ್ಲ.
2005ರಲ್ಲಿ ಒಡಿಶಾದ ತಲಬಿರಾದಲ್ಲಿ ಬಿರ್ಲಾ ಸಮೂಹ ಸಂಸ್ಥೆಗೆ 2 ಕಲ್ಲಿದ್ದಲು ಬ್ಲಾಕ್ಗಳನ್ನು ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಮೀಸಲಾಗಿ ಇರಿಸಲಾಗಿದ್ದ ಈ ಕಲ್ಲಿದ್ದಲು ಘಟಕಗಳನ್ನು ಬಿರ್ಲಾ ಸಮೂಹಕ್ಕೆ ಸೇರಿದ ಹಿಂಡಾಲ್ಕೋಗೆ ನೀಡಲಾಗಿತ್ತು. ಆದರೆ ಆಹಾರ ಸರಪಳಿಯಲ್ಲಿ ಮೇಲ್ಮಟ್ಟದಲ್ಲಿರುವವ ಇಂಥವರನ್ನೂ ಈಗ ಕಲ್ಲಿದ್ದಲ ತಗ್ಗುಗಳಲ್ಲಿ ಬೀಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರೆ ಇದಕ್ಕೆ ಬೇರ್ಯಾವ ಕಾರಣಗಳೂ ಸಿಗುತ್ತಿಲ್ಲ- ಕೆಳಮಟ್ಟದಲ್ಲಿರುವವರು ಮಾಡಿದ ತಪ್ಪುಗಳಿಗೆ ಉನ್ನತ ಮಟ್ಟದಲ್ಲಿರುವ ವ್ಯಕ್ತಿಯೇ ಜವಾಬ್ದಾರ ಎಂದು ತಪ್ಪನ್ನೆಲ್ಲ ಆತನ ತಲೆಗೆ ಕಟ್ಟುವ ಪ್ರಯತ್ನವಷ್ಟೇ ಇದು! ಒಂದು ವೇಳೆ ಇದೇ ಸಿದ್ಧಾಂತವನ್ನೇ ಅನುಸರಿಸುವುದಾದರೆ, ಕಲ್ಲಿದ್ದಲು ಹಗರಣದ ಕೇಂದ್ರ ಬಿಂದುವಾದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಇದು ಅನ್ವಯವಾಗಬೇಕು. ಈ 'ನಾಮಕರಣ ಸಮಾರಂಭದಿಂದ" ಅವರನ್ನು ಕೈಬಿಟ್ಟಿದ್ದೇಕೆ? ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಘಟಕಗಳ ಹಂಚಿಕೆಯಾದಾಗ ಕಲ್ಲಿದ್ದಲು ಸಚಿವರಾಗಿದ್ದವರು ಈ ಮನಮೋಹನ್ಸಿಂಗ್ರೇ ಅಲ್ಲವೇ?
- ಮಹಾಲೇಖಪಾಲರ (ಸಿಎಜಿ) ವರದಿ, ಈ ಹಂಚಿಕೆ ಪ್ರಕ್ರಿಯೆ ಅಪಾರದರ್ಶಕವಾಗಿ ನಡೆಯಿತು ಎಂದು ಹೇಳುತ್ತದೆ. ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿ ಹೊರುವ ಮುನ್ನ ಮನಮೋಹನ್ ಸಿಂಗ್ ಅವರು ತಾವು ಹಂಚಿಕೆಯ ವ್ಯವಹಾರದಲ್ಲಿ ಚಾಂಪಿಯನ್ ಎನ್ನುವಂತೆ ವರ್ತಿಸಿದರು. ಪ್ರಕ್ರಿಯೆ ಪಾರದರ್ಶಕವಾಗಿರಲಿದೆ ಎಂದು ಹೇಳಿದರು. ಆದರೆ ಹೇಳಿದ್ದನ್ನು ಮಾಡಿ ತೋರಿಸುವುದಕ್ಕೆ ಅವರಿಗಾಗಲಿಲ್ಲ. ತಮ್ಮ ನೆರಳಡಿಯಲ್ಲೇ ಲೂಟಿ ನಡೆದರೂ ಅವರು ಮೌನವಾಗಿದ್ದರು.
-ಇನ್ನು ಆ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ. ಪಾರಖ್ ಅವರ ಹೆಸರೂ ಎಫ್ಐಆರ್ನಲ್ಲಿದೆ, ಆದರೆ ಪ್ರಧಾನಿಗಳದ್ದಲ್ಲ. ಇನ್ನೊಂದೆಡೆ ಸಿಎಜಿ, ಪಾರಖ್ ಅವರನ್ನು ಮಾಹಿತಿದಾರನೆಂದೇ ಪರಿಗಣಿಸಿತ್ತು ಎಂದು ಹೇಳುತ್ತದೆ ಇತ್ತೀಚಿನ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ವರದಿ. ಮಾಹಿತಿದಾರನ ವಿರುದ್ಧ ಎಫ್ಐಆರ್ ದಾಖಲಿಸುವುದು, ಲೂಟಿ ನಡೆದಾಗ ನೋಡಿಕೊಂಡು ಸುಮ್ಮನಿದ್ದವರಿಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ಕೊಡುವುದು, ಇದೆಂಥಾ ನ್ಯಾಯ?
ಕಲ್ಲಿದ್ದಲು ಹಗರಣದ ಬಗ್ಗೆ ಸುಪ್ರೀಂಕೋರ್ಟ್ನೊಂದಿಗೆ ತಾನು ಮಾತನಾಡಿದ್ದು ಏನು ಎನ್ನುವ ಬಗ್ಗೆ ವರದಿ ನೀಡಲು ಸಿಬಿಐ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಓಡುತ್ತಾ ಹೋಗುತ್ತದೆ. ಈ ಮಾಹಿತಿ ಕಟ್ಟಿಕೊಂಡು ಪ್ರಧಾನಿಗಳಿಗೇನಾಗಬೇಕಿದೆ? ಒಂದು ವೇಳೆ ಪ್ರಧಾನಿಗಳು ಪ್ರಾಮಾಣಿಕರೇ ಆಗಿದ್ದರೆ ಸಿಬಿಐನ ತನಿಖೆಯನ್ನೆಲ್ಲ ಕೌತುಕದಿಂದ ಅವರು ನೋಡುತ್ತಿರುವುದೇಕೆ?
ಈಗ ಮನಮೋಹನ್ ಸಿಂಗ್ ಅವರು ಮಾಹಿತಿದಾರನನ್ನೇ ಶೂಟ್ ಮಾಡಿದ್ದಾರೆ. ಸಂಸತ್ತಿನಲ್ಲಿ ಅವರು ಮತ್ತು ಅವರ ಪಕ್ಷದ ಎಲ್ಲಾ ನಾಯಕರು ಸಿಎಜಿಯ ಮೇಲೆ ಮುರಿದುಕೊಂಡು ಬಿದ್ದರು. ಜವಾಬ್ದಾರಿಯನ್ನು ಒಪ್ಪಿಕೊಂಡು ತಪ್ಪನ್ನು ತಿದ್ದಿಕೊಳ್ಳುವ ಮನಸ್ಥಿತಿಗಳ ಬದಲು, ಸಂಸತ್ತಿನಲ್ಲಿ ಮಡುಗಟ್ಟಿದ್ದು ಯುಪಿಎದ ಕೊಳೆತ ಆತ್ಮಸಾಕ್ಷಿಯ ದುರ್ನಾತವೊಂದೇ!
ಕುಮಾರಮಂಗಲಂ ಬಿರ್ಲಾ ಅವರ ವಿರುದ್ಧ ಎಫ್ಐಆರ್ ದಾಖಲಾದದ್ದನ್ನು ನಾವು ಈ ಹಿನ್ನೆಲೆಯಲ್ಲೇ ನೋಡಬೇಕಿದೆ. ಪ್ರತಿಯೊಂದು ದೊಡ್ಡ ಹೆಸರೂ ತಪ್ಪಿತಸ್ಥರ ಸ್ಥಾನದಲ್ಲಿ ಸಾರ್ವಜನಿಕರಿಗೆ ಕಾಣಿಸಬೇಕು ಎಂಬುದು ಸಿಬಿಐನ ಪ್ರಯತ್ನ. 2ಜಿ ಮತ್ತು ಕಲ್ಲಿದ್ದಲು ಹಗರಣದ ನಡುವೆ ಅನೇಕ ಉದ್ಯಮಿಗಳ ಹೆಸರು ಕೇಳಿಬಂದಿವೆ. ಟಾಟಾಗಳು, ಅಂಬಾನಿಗಳು, ಜಿಂದಾಲ್ಗಳು, ಸುನಿಲ್ ಮಿತ್ತಲ್ ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಉದ್ಯಮಿಗಳ ಹೆಸರು. ಇಂಥ ದೊಡ್ಡ ದೊಡ್ಡ ಕುಳಗಳಿಗೇ ತಪ್ಪಿತಸ್ಥರ ಹಾರ ತೊಡಿಸಿಬಿಟ್ಟರೆ, ಎಲ್ಲಾ ತಪ್ಪೂ ಸಿಎಜಿ ಮತ್ತು ವ್ಯವಸ್ಥೆಯ ತಲೆಗೇ ಸುತ್ತಿಕೊಳ್ಳುತ್ತದೆ ಎನ್ನುವುದು ಯುಪಿಎ ಸರ್ಕಾರಕ್ಕೆ ಗೊತ್ತಿದೆ. ಇನ್ನು ಕಲ್ಲಿದ್ದಲು ಕೆದರಿ ಕೈಯೆಲ್ಲ ಮಸಿ ಮಾಡಿಕೊಂಡಿರುವ ರಾಜಕಾರಣಿಗಳೆಲ್ಲರಿಗೂ ತಾವು ಬಲಿಪಶುಗಳಷ್ಟೇ ಎಂದು ತೋರಿಸಿಕೊಳ್ಳಲು ಅನುವಾಗುತ್ತದೆ. ಎಲ್ಲರಿಗೂ ಒಂದೇ ಬಣ್ಣ ಹತ್ತಿಕೊಂಡಾಗ, ವ್ಯವಸ್ಥೆಯನ್ನು ಮುನ್ನಡೆಸಲು ಎಲ್ಲರನ್ನೂ ಬಿಟ್ಟುಬಿಡಲೇಬೇಕಾಗುತ್ತದೆ. ಎಫ್ಐಆರ್ನಲ್ಲಿ ಬಿರ್ಲಾ ಹೆಸರು ಕಾಣಿಸಿಕೊಂಡಿರುವುದರ ಹಿಂದಿರುವ ಲಾಜಿಕ್ ಇದೇ ಆಗಿದೆ. ಹಾಗಂತ ಉದ್ಯಮಿಗಳು ಮಾಡುವ ತಪ್ಪುಗಳೆಲ್ಲವನ್ನೂ ಮಾಫಿ ಮಾಡಿಬಿಡಬೇಕು ಎಂದು ನಾನು ಹೇಳುತ್ತಿಲ್ಲ, ಆದರೆ ಆರೋಪ ಮಾಡುವಾಗ ಸರಿಯಾದ ಸಾಕ್ಷ್ಯಾಧಾರಗಳನ್ನು ಕಲೆಹಾಕಬೇಕಲ್ಲವೇ?
ಇದೇನೇ ಇದ್ದರೂ ಸತ್ಯವಂತೂ ಬದಲಾಗುವುದಿಲ್ಲ. ಕಲ್ಲಿದ್ದಲು ಘಟಕಗಳ ಹಂಚಿಕೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದರೆ, ಬೇಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಆ ಅಪಕೀರ್ತಿ ಸಲ್ಲಬೇಕಾದದ್ದು ಪ್ರಮುಖವಾಗಿ ಮನಮೋಹನ್ ಸಿಂಗ್ ಮತ್ತು ಅವರ ಕಾರ್ಯಾಲಯಕ್ಕೆ. ಆದರೆ ಪ್ರಧಾನಿಗಳಿಗೆ ಪ್ರಾಮಾಣಿಕ ಸರ್ಟಿಫಿಕೆಟ್ ಕೊಡುವ ಕಾಂಗ್ರೆಸ್ಸಿಗರು, ಕಲ್ಲಿದ್ದಲು ಮಸಿ ಯಾವುದೇ ಕಾರಣಕ್ಕೂ ಅವರಿಗೆ ತಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಸೋನಿಯಾಗಾಂಧಿಯವರಿಂದ ಹಿಡಿದು ಪಕ್ಷದ ತಳಮಟ್ಟದ ಕಾರ್ಯಕರ್ತನವರೆಗೂ ಎಲ್ಲರ ಬಾಯಲ್ಲೂ ಮನಮೋಹನ್ ಸಿಂಗ್ ಅವರು ಪ್ರಾಮಾಣಿಕತೆಯದ್ದೇ ಪುರಾಣ. ಇದಕ್ಕೂ ಕಾರಣವಿದೆ. ಪ್ರಧಾನಿಗಳು ಸಿಕ್ಕಿಬಿದ್ದರೆ ಸೋನಿಯಾ ಅವರ ಹೆಸರೂ ಕೆಡುತ್ತದೆ ಅಲ್ಲವೇ!? ತಮ್ಮ ಕುಟಿಲ ರಾಜಕಾರಣವನ್ನು ಮುಚ್ಚಿಟ್ಟುಕೊಳ್ಳಲು ಎಲ್ಲರೂ ಮನಮೋಹನ್ ಸಿಂಗ್ ಅವರ ಪ್ರಾಮಾಣಿಕತೆಯ(?) ಮುಖವಾಡ ಧರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ 2 ಜಿ ಹಗರಣದ ತನಿಖೆ ನಡೆಸಿರುವ ಜಂಟಿ ಸಂಸದೀಯ ಸಮಿತಿಯ(ಜೆಪಿಸಿ) ಮುಖ್ಯಸ್ಥ ಪಿ. ಸಿ. ಚಾಕೋ, ಪ್ರಧಾನಮಂತ್ರಿಗಳ ತಂಟೆಗೂ ಹೋಗಲಿಲ್ಲ. ಎಲ್ಲಿ ಹಗರಣದ ಪ್ರಮುಖ ಆರೋಪಿ ಎ. ರಾಜಾ ಬಾಯಿಬಿಡುತ್ತಾನೋ ಎನ್ನುವ ಕಾರಣಕ್ಕೆ ಆತನ ಬಳಿಯೂ ಸುಳಿಯಲಿಲ್ಲ. ಈಗ ಜೆಪಿಸಿ ಪ್ರಧಾನಿ ಸಿಂಗ್ ಅವರಿಗೆ "ಕ್ಲೀನ್ಚಿಟ್"ಕೊಡಲು ಎಲ್ಲಾ ಸಿದ್ಧತೆ ನಡೆಸಿದೆ. ಇದರರ್ಥವಿಷ್ಟೆ, ಪ್ರಧಾನಿಗಳನ್ನು ಉಳಿಸಬೇಕಾದರೆ ಇಡೀ ವ್ಯವಸ್ಥೆಯನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಬೇಕು! ಬಹುಶಃ ಮನಮೋಹನ್ ಸಿಂಗ್ ಅವರೂ ತಮ್ಮನ್ನು ತಾವು ಬಲಿಪಶು ಎಂದು ಬಿಂಬಿಸಿಕೊಳ್ಳುತ್ತಾರೇನೋ?!
- ಆರ್. ಜಗನ್ನಾಥನ್
ಸಂಪಾದಕರು, ಫಸ್ಟ್ಪೋಸ್ಟ್ ಡಾಟ್ಕಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


