

ಇನ್ನು ಇಪ್ಪತ್ತೈದು ವರ್ಷವಾದರೂ ಪ್ರವಾಸೋದ್ಯಮದಲ್ಲಿ ನಾವು ಇವರ ಹತ್ತಿರಕ್ಕೂ ಸುಳಿಯುವುದಿಲ್ಲ. ದೇಶಪಾಂಡೆಯವರು 'ಪ್ರವಾಸೋದ್ಯಮ'ದ ಬಗ್ಗೆ ಇಲ್ಲಿಗೆ ಬಂದು 'ಉನ್ನತ ಶಿಕ್ಷಣ' ಪಡೆಯುವುದು ಒಳ್ಳೆಯದು. ಉತ್ತಮ ಸಂಗತಿಗಳು ಎಲ್ಲಿಯೇ ಇರಲಿ, ಅವುಗಳಿಂದ ಕಲಿಯುವುದರಲ್ಲಿ ತಪ್ಪೇನಿಲ್ಲ.
ಕಳೆದ 10 ದಿನಗಳಿಂದ ದಕ್ಷಿಣ ಆಫ್ರಿಕಾದಲ್ಲಿ ತಿರುಗುತ್ತಿದ್ದೇನೆ. ಅಚ್ಚರಿ, ವಿಸ್ಮಯಗಳಿಗೆ ಮಾತ್ರ ಕೊರತೆಯಾಗಿಲ್ಲ. ಸಾಮಾನ್ಯವಾಗಿ ವಿದೇಶ ಪ್ರವಾಸದಲ್ಲಿರುವಾಗ ಒಂದು ವಾರದ ಬಳಿಕ ಮನೆ, ಹೆಂಡತಿ, ಆಫೀಸು, ಮನೆಯ ಅಡುಗೆ, ಸ್ನೇಹಿತರು... ಎಲ್ಲ ಕಾಡಲಾರಂಭಿಸುತ್ತಾರೆ. ಹೋಟೆಲು ಊಟ, ಹೋಟೆಲ್ ಹಾಸಿಗೆಗಳೆಲ್ಲ ಮೆಲ್ಲಗೆ ವಾಕರಿಕೆ ತರಿಸಲಾರಂಭಿಸುತ್ತವೆ. ಸೂಟ್ಕೇಸ್ನಲ್ಲಿರುವ ಬಟ್ಟೆಗಳೆಲ್ಲ ಮುದುರಲು, ಕೆದರಲು ಆರಂಭಿಸುತ್ತವೆ. ಊರಿಗೆ ಹೋಗಲು ಇನ್ನು ಎಷ್ಟು ದಿನಗಳಿವೆ ಎಂದು ಹಿಂಬರ್ಕಿಯಿಂದ ಎಣಿಸಲು ಶುರು ಮಾಡುತ್ತೇವೆ. ಮನೆ ಸೇರುವ ತನಕ ಈ ಭಾವನೆ ನಮ್ಮನ್ನು ಆವರಿಸಿರುತ್ತದೆ.
ಆದರೆ ಯಾಕೋ ಈ ಸಲ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ ಊರಿನ ವಾಸನೆಯೇ ಹೊಡೆಯಲಿಲ್ಲ. ಹಾಗಂತ ಸ್ನೇಹಿತರು, ಸಹೋದ್ಯೋಗಿಗಳು, ಹೆಂಡತಿ ಅಥವಾ ಇನ್ನಿತರರೊಂದಿಗೆ ಮುನಿಸು ಇರಲಿಲ್ಲ. ಯಾರೊಂದಿಗೂ 'ಟ್ಟೂ' ಬಿಟ್ಟಿರಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪತ್ರಿಕೆಯ ಪುಟಗಳೆಲ್ಲ ಮುದ್ರಣಕ್ಕೆ ಹೋಗುವ ಮುನ್ನ ಕಾಡಿನಲ್ಲಿ ಕುಳಿತೋ, ವನ್ಯಧಾಮದಲ್ಲಿ ತಂಗಿರುವಾಗಲೇ ನನ್ನ ಐಪ್ಯಾಡಿನಲ್ಲಿ ನೋಡುತ್ತಿದ್ದೇನೆ. ಬೆಳಗ್ಗೆ ಐದು ಗಂಟೆಗೆ ಎದ್ದು (ಆಗ ಭಾರತದಲ್ಲಿ ಬೆಳಗ್ಗೆ ಎಂಟೂವರೆ) ಐಪ್ಯಾಡ್ ತೆಗೆದರೆ ಕನ್ನಡದ ಎಲ್ಲ ಪತ್ರಿಕೆಗಳ ಪುಟಗಳೂ ತೆರೆದುಕೊಳ್ಳುತ್ತವೆ! ಬೆಂಗಳೂರಿನಲ್ಲಿ, ಆಫೀಸಿನಲ್ಲಿ ಇಲ್ಲ ಎನ್ನುವುದನ್ನು ಬಿಟ್ಟರೆ, ಇದ್ದಿದ್ದರೆ ಏನೆಲ್ಲ ಮಾಡುತ್ತಿದ್ದೆನೋ, ಅವೆಲ್ಲವನ್ನೂ ಆಫ್ರಿಕಾ ಖಂಡದಲ್ಲಿ ದಕ್ಷಿಣದ ತುದಿಯಲ್ಲಿರುವ ಬೇರೆ ಬೇರೆ ಊರು-ಕಾಡುಗಳಲ್ಲಿ ಕುಳಿತು ಮಾಡುತ್ತಿದ್ದೇನೆ. ವೈಫೆ ಕನೆಕ್ಷನ್ ಸಿಕ್ಕಾಗಲೆಲ್ಲ ಹೆಂಡತಿ, ಮಗನೊಂದಿಗೆ, ಕಚೇರಿಯ ಸಹೋದ್ಯೋಗಿಗಳೊಂದಿಗೆ ವಿಡಿಯೋ ಚಾಟ್ ಮಾಡುತ್ತೇನೆ. ಎರಡು ದಿನ ಮಾತ್ರ ಈ ಪ್ರಪಂಚದ ಯಾವ ತಾಣದಲ್ಲಿದ್ದೇವೆಂಬುದೇ ಗೊತ್ತಿರಲಿಲ್ಲ. ಅದನ್ನು ಬಿಟ್ಟರೆ ಬೆಂಗಳೂರಿಗೊಂದಿಗೆ, ಕರ್ನಾಟಕದೊಂದಿಗೆ, ಸತತ ಸಂಪರ್ಕದಲ್ಲಿದ್ದೆ. ಹೀಗಾಗಿ ಈ ಬಾರಿ ಯಾವಾಗ ಊರಿಗೆ ಹೋಗುತ್ತೇನೋ ಎಂಬ 'ಕೈ ಹಿಡಿದು ನಡೆಸೆನ್ನನು' ಭಾವ ಹತ್ತಿರವೇ ಸುಳಿಯಲಿಲ್ಲ.
ಇದಕ್ಕೆ ಜಾಗ, ದೇಶದ ಮಹಿಮೆ ಕಾರಣವಾ? ಇದ್ದಿರಬಹುದು.
ಹಾಗೆ ನೋಡಿದರೆ, ನಾನು ಆಫ್ರಿಕಾ ಖಂಡಕ್ಕೆ ಕಾಲಿಟ್ಟಿದ್ದು ಬಹಳ ತಡವಾಗಿ. ಹಿಂದಿನ ವರ್ಷ ಪ್ರಧಾನಿ ಡಾ. ಮನಮೋಹನಸಿಂಗ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾಕ್ಕೆ ಭೇಟಿ ಕೊಟ್ಟಾಗಲೇ ಆಫ್ರಿಕಾದೊಂದಿಗಿನ ನನ್ನ ಸಂಬಂಧ ಮೊಳಕೆಯೊಡೆದಿದ್ದು. ಅದ್ಯಾವ ಘಳಿಗೆಯಲ್ಲಿ ಆಫ್ರಿಕಾ ನಂಟು ಬೆಸೆಯಿತೋ ತಿಳಿಯಲಿಲ್ಲ. ಅದಾಗಿ ತಿಂಗಳ ಬಳಿಕ, ಈ ವರ್ಷದ ಜೂನ್ನಲ್ಲಿ ಗೊರಿಲ್ಲಾಗಳ ನಾಮಕರಣಕ್ಕೆಂದು ಆಫ್ರಿಕಾದ ವಿಭಿನ್ನ ದೇಶ ರವಾಂಡಾಕ್ಕೆ ಹೋದೆ. ಸಾಗರಕ್ಕೆ ಹೋದವರು ಜೋಗಕ್ಕೆ ಹೋಗುವಂತೆ, ರವಾಂಡಕ್ಕೆ ಹೋದವನು ಹಾಗೆ ಬುರುಂಡಿ ಹಾಗೂ ಕೀನ್ಯಾಕ್ಕೆ ಪಾದ ಬೆಳೆಸಿದೆ.
ರವಾಂಡಾದಿಂದ ಬಂದು ನಾಲ್ಕು ತಿಂಗಳುಗಳಾದವು. ಆದರೆ ಪ್ರತಿದಿನ ಆ ದೇಶದ ಗೊರಿಲ್ಲಾ, ಕಾಡು, ಜನಾಂಗೀಯ ನರಮೇಧ, ಹತ್ತು ಲಕ್ಷ ಜನರ ಮಾರಣ ಹೋಮ ಕಾಡುತ್ತಲೇ ಇದೆ. ಇನ್ನೂ ರವಾಂಡಾದಿಂದ ಹೊರಬರಲು ಆಗುತ್ತಿಲ್ಲ. ಮೊನ್ನೆ ನನ್ನ ಜತೆಗಿದ್ದ ಸಹಸ್ರವಾಸಿಯೊಬ್ಬರು, 'ನೀವು ನಲವತ್ತೇಳು ದೇಶಗಳನ್ನು ನೋಡಿದಿರಿ ಅಂತ ಹೇಳಿದಿರಲ್ಲ, ನಿಮಗೆ ಬಹಳ ಇಷ್ಟವಾದ ನೆನಪಿನಲ್ಲಿ ಉಳಿದ ದೇಶ ಯಾವುದು?' ಅಂತ ಕೇಳಿದಾಗ, ನಿಸ್ಸಂದೇಹವಾಗಿ 'ರವಾಂಡ, ರವಾಂಡ' ಎಂದು ಹೇಳಿದ್ದೆ. ಅದಾದ ಬಳಿಕ ಕೀನ್ಯಾದ ಮಸೈಮರಾ ವನ್ಯಪ್ರಾಣಿ ಧಾಮ ನನಗೆ ಇನ್ನೊಂದು ಪ್ರಪಂಚವನ್ನು ತೆರೆದಿಟ್ಟ ವಿಸ್ಮಯದಂತೆ ಕಾಣುತ್ತಿದೆ. ಒಂದು ಹುಲ್ಲುಗಾವಲಿನಲ್ಲಿ, ಒಂದು ತಾವದಲ್ಲಿ ಲಕ್ಷಾಂತರ ಪ್ರಾಣಿಗಳನ್ನು ಹಿಡಿದಿಟ್ಟುಕೊಂಡಿರುವ ತೆರೆದ ಬೋನು ಅಥವಾ ಮುಕ್ತ ಮೃಗಾಲಯ ಅಂದ್ರೆ ಮಸೈಮರಾ!
ಮಸೈಮರಾ ಕಾಡಿನಲ್ಲಿ ಡಚ್ ಮಹಿಳೆ ಬ್ಲಿಕ್ಸೆನ್ ನೆನಪಿನಲ್ಲಿ ಕಟ್ಟಿದ ಟೆಂಟಿನಲ್ಲಿ ಮಲಗಿದ್ದಾಗ ರಾತ್ರಿ ನೀರಾನೆ, ಆನೆಗಳು ಘೀಳಿಡುತ್ತಾ ಟೆಂಟ್ ಸವರಿಕೊಂಡು ಹೋದ ಪ್ರಸಂಗವನ್ನು ನೆನಪಿಸಿಕೊಂಡರೆ 'ಪುನರ್ಜನ್ಮ'ವಿರುವುದು ಸುಳ್ಳಲ್ಲ ಎಂದೆನಿಸುತ್ತದೆ. ಬುರುಂಡಿಯ ರಾಜಧಾನಿ ಬುಜುಂಬರಾದ ದಟ್ಟಕಾನನ, ಹತ್ತು ಜನ ಗೆಂಚು ಹಾಕಿದರೂ ತೆಕ್ಕೆಗೆ ಸಿಗದಷ್ಟು ಅಗಲ ಮರಗಳು, ಇನ್ನೂ ಮೂರು ತಲೆಮಾರಿನಷ್ಟು ಹಿಂದುಳಿದವರಂತೆ ಕಾಣುವ ಮುಗ್ಧ, ಅಮಾಯಕ ಜನ ಕಣ್ಣಿಗೆ ತಟ್ಟಿ ಕಟ್ಟಿದಂತಾಗಿ ಬಿಟ್ಟಿದ್ದಾರೆ. 'ನಮ್ಮೂರು ಎಷ್ಟು ಹಿಂದುಳಿದಿದೆ ಅಂದ್ರೆ ನಮ್ಮೂರ ಮಹಿಳೆಯರ್ಯಾರೂ ಬ್ರಾ ತೊಡುವುದಿಲ್ಲ' ಎಂಬ ಮಾತು ಅಗ್ದಿಖರೆ ಎಂದೆನಿಸಿದ್ದು ಬುಜುಂಬರಾದಲ್ಲಿ.
ರವಾಂಡಾದಿಂದ ಬಂದ ಬಳಿಕ ಆ ದೇಶದ ಇತಿಹಾಸ, ರಾಜಕೀಯ, ಜನಾಂಗೀಯ ಘರ್ಷಣೆ, ಗೊರಿಲ್ಲಾ ಸಂರಕ್ಷಣೆಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿದ ಬಳಿಕ, 'ಹೋಟೆಲ್ ರವಾಂಡ' ಎಂಬ ಸಿನಿಮಾ ನೋಡಿದ ಬಳಿಕ, ಆ ದೇಶದ ಬಗ್ಗೆ ಪುಸ್ತಕ ಬರೆಯುವ ನನ್ನ ಯೋಜನೆಯನ್ನು ತುಸು ಮುಂದೂಡಿದೆ. ರವಾಂಡ ಅಷ್ಟೊತ್ತಿಗೆ ಬೇರೆಯ ಕತೆಗಳನ್ನೇ ಹೇಳಲಾರಂಭಿಸಿತ್ತು. ಅದರಲ್ಲೂ ಲೆಫ್ಟಿನೆಂಟ್ ಜನರಲ್ ರೋಮಿಯೋ ಡಲ್ಲೇರ್ ಬರೆದ Shake Hands With The Devil: The Failure of Humanity in Rwanda ಎಂಬ ಪುಸ್ತಕ ಓದಿದ ಬಳಿಕ, ರವಾಂಡಕ್ಕೆ ಒಂದು ಸಲ ಭೇಟಿ ಕೊಟ್ಟು ಹಸಿಹಸಿಯಾಗಿ ಪುಸ್ತಕ ಬರೆಯುವ ಪಡಪೋಶಿತನ ಪ್ರದರ್ಶಿಸಬಾರದು ಎಂದೆನಿಸಿತು. ರವಾಂಡದ ಅಧ್ಯಕ್ಷ ಪಾಲ್ ಕಿಗಾಮೆ ಅವರನ್ನು ಟ್ವಿಟರ್ನಲ್ಲಿ ಹಿಂಬಾಲಿಸಿ, ಅವರಿಗೆ ಹತ್ತಾರು ಪ್ರಶ್ನೆಗಳನ್ನು ಹಾಕಿ, ಅವರೇ ಸೂಚಿಸಿದ ಒಂದು ಲೇಖನ ಓದಿದ ಬಳಿಕ ರವಾಂಡಾದ ಮತ್ತೊಂದು ಮುಖದ ದರ್ಶನವಾಯಿತು.
ಅಂದು ಅಂಟಿಕೊಂಡ ಆಫ್ರಿಕಾದ ನಂಟು ಈಗ ದಕ್ಷಿಣ ಆಫ್ರಿಕಾಕ್ಕೆ ಕರೆದುಕೊಂಡು ಬಂದಿದೆ. ದಕ್ಷಿಣ ಆಫ್ರಿಕಾದ ಜೋಹಾನೆಸ್ಬರ್ಗ್, ಡರ್ಬನ್, ಕೇಪ್ಟೌನ್, ಕ್ವಾಜುಲು ನಟಾಲ್ ಪ್ರಾಂತ್ಯ, ಇಲ್ಲಿನ ಕಾಡು, ಅಭಯಾರಣ್ಯ, ಸಫಾರಿಗಳಲ್ಲೆಲ್ಲ ಸುತ್ತಾಡಿಸುತ್ತಿದೆ. ಊರ ನೆನಪು ಬರದಂತೆ ಅಡ್ಡಗೋಡೆ ಕಟ್ಟಿದೆ. ವಾಸ್ತವವೇನೆಂದರೆ, ಈ ದೇಶದಲ್ಲಿ ಕಳೆದ ಹತ್ತು ದಿನಗಳಿಂದ ತಿರುಗುತ್ತಿರುವಾಗ ನಾನೊಂದು ಬೇರೆ ದೇಶಕ್ಕೆ ಬಂದಿದ್ದೇನೆಂದು ಅನಿಸುತ್ತಲೇ ಇಲ್ಲ. ಸಿದ್ದಿ ಜನರಿರುವ ಉತ್ತರ ಕನ್ನಡದ ಯಲ್ಲಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿದ ಅನುಭವವಾಗುತ್ತಿದೆ. ಹಾಗಂತ ಅಂದುಕೊಂಡು ಸಮಾಧಾನ ಮಾಡಿಕೊಳ್ಳಬೇಕು.
ಯಾಕೆಂದರೆ ದಕ್ಷಿಣ ಆಫ್ರಿಕಾದ ಯಾವುದೇ ಊರನ್ನೇ ತೆಗೆದುಕೊಳ್ಳಿ. ಅದು ಡರ್ಬನ್, ಕೇಪ್ಟೌನ್ ಅಥವಾ ಜೋಹಾನೆಸ್ಬರ್ಗ್ ಹೀಗೆ ಯಾವುದೇ ಆಗಿರಬಹುದು. ಅದು ನಮ್ಮ ಬೆಂಗಳೂರಿಗಿಂತ ಸುಂದರವಾಗಿದೆ, ಸುವ್ಯವಸ್ಥಿತವಾಗಿದೆ, ಅಚ್ಚುಕಟ್ಟಾಗಿದೆ, ಮೂಲಭೂತ ಸೌಕರ್ಯಗಳೆಲ್ಲ ಮಜಬೂತಾಗಿದೆ, ರಸ್ತೆಗಳೆಲ್ಲ ವಿಶಾಲವಾಗಿವೆ, ಹುಡುಕಿದರೂ ಹೊಂಡ ಸಿಗುವುದಿಲ್ಲ. ಆಫ್ರಿಕಾ ಅಂದ್ರೆ ನಮ್ಮ ಮುಂದೆ ಮೂಡುವ ಕಲ್ಪನೆಯೇ ಬೇರೆ. ಆದರೆ ದಕ್ಷಿಣ ಆಫ್ರಿಕಾ ಈಗಾಗಲೇ ಭಾರತಕ್ಕಿಂತ ಮುಂಗಾಲುಪುಟಕಿ. ಎಂದೋ ನಮ್ಮನ್ನು ಹಿಂದಕ್ಕೆ ಹಾಕಿಬಿಟ್ಟಿದೆ. ಇಲ್ಲಿನ ರಸ್ತೆ, ಸೇತುವೆ, ಮೇಲ್ಸೆತುವೆ, ವಿಮಾನ ನಿಲ್ದಾಣ, ರೈಲು, ಸಾರ್ವಜನಿಕ ಕಟ್ಟಡ, ನಗರ ಸೌಂದರ್ಯ, ಉದ್ಯಾನಗಳನ್ನು ನೋಡಿದರೆ, ನಮ್ಮ ಬೆಂಗಳೂರು ಒಮ್ಮೆ ಈ ಊರುಗಳಿಗೆ ಭೇಟಿ ಕೊಟ್ಟು ನೋಡಬಾರದಾ ಎಂದೆನಿಸುತ್ತದೆ. ಕಳೆದ ಒಂದು ದಶಕದಲ್ಲಿ ಈ ದೇಶ ಸಾಧಿಸಿದ ಪ್ರಗತಿಯ ಫಲಗಳು ಈಗ ಕಾಣಿಸಿಕೊಳ್ಳಲಾರಂಭಿಸಿವೆ. ಈ ದೇಶದ ಬಾಹ್ಯ ಚಹರೆಗಳನ್ನು ನೋಡಿದರೆ ಇಂಗ್ಲೆಂಡ್, ಅಮೆರಿಕದ ಅಭಿವೃದ್ಧಿಯನ್ನು ನೆನಪಿಸುವಂತಿದೆ. ಹೀಗೆಂದರೆ ಸ್ವಲ್ಪ ಅತಿಶಯೋಕ್ತಿಯಾಯಿತೇನೋ ಎಂದೆನಿಸಬಹುದು. ಇಲ್ಲ, ಹಾಗೇನಿಲ್ಲ.
ದಕ್ಷಿಣ ಆಫ್ರಿಕಾಕ್ಕೆ ಹೋಲಿಸಿದರೆ, ನಾವು ಬಹಳ ಹಿಂದೆ ಇದ್ದೇವೆ ಎಂದೆನಿಸುತ್ತದೆ. ಅದರಲ್ಲೂ ಬೆಂಗಳೂರು ಹಾಗೂ ರಾಜ್ಯದ ರಸ್ತೆಗಳು ಮೈ ಚರ್ಮದ ಹೊಪ್ಪಳಿಕೆ ಎದ್ದು ಬಂದಂತಿರುವುದನ್ನು ನೆನೆದಾಗ, ಇಂಗ್ಲೆಂಡ್, ಅಮೆರಿಕವನ್ನು ನೆನಪಿಸಿರಲಿಕ್ಕೂ ಸಾಕು. ಆಫ್ರಿಕಾ ದೇಶ ಆಫ್ರಿಕಾ ಜನ ಎಂದೆಲ್ಲ ನಾವು ಮೂಗು ಮುರಿಯುತ್ತೇವಲ್ಲ, ಕಳೆದ ಹತ್ತು ದಿನಗಳಲ್ಲಿ ನಾನು ಒಂದೇ ಒಂದು ಸಲ ವಾಹನಗಳ ಹಾರ್ನ್ಸೌಂಡ್ ಕೇಳಿಲ್ಲ, ರಸ್ತೆ ಉಬ್ಬು, ತಗ್ಗು ನೋಡಿಲ್ಲ. ಕಸಕಡ್ಡಿ, ಗಾರ್ಬೆಜನ್ನೂ ಕಂಡಿಲ್ಲ, ವೃಷಭಾವತಿ, ಮಂಡೂರಿನ ದರ್ಶನವಾಗಿಲ್ಲ, ಎಲ್ಲೆಂದರಲ್ಲಿ ಎಂಜಲು ಉಗುಳುವ, ಎಲೆ ಅಡಕೆ ಅಗೆದು ಪಿಚಕಾರಿ ಹಾರಿಸುವ, ಕಸ ಬಿಸಾಕುವ, ಕಂಡಲ್ಲೆಲ್ಲ ಉಚ್ಚೆ ಹಾರಿಸುವ, ಮಲವಿಸರ್ಜನೆ ಮಾಡುವ ಒಬ್ಬೇ ಒಬ್ಬ ಆಫ್ರಿಕಾದ 'ಕರಿಮನುಷ್ಯ' ನನ್ನು ನೋಡಿಲ್ಲ. ನಮ್ಮ ಮನೆಗಳಿಗಿಂತ ಅವರ ಬೀದಿ, ರಸ್ತೆ, ಓಣಿ ಹೆಚ್ಚು ಸ್ವಚ್ಛವಾಗಿರುವುದು ಸುಳ್ಳಲ್ಲ.
ಇನ್ನು ಈ ದೇಶದಲ್ಲಿ ಪ್ರವಾಸೋದ್ಯಮವನ್ನು ಎಷ್ಟು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ ಅಂತೀರಾ, ನಮ್ಮ ಮಂತ್ರಿ ದೇಶಪಾಂಡೆಯವರೂ ಇದ್ದಾರೆ. ಅಮೆರಿಕ, ಜರ್ಮನಿ, ಇಂಗ್ಲೆಂಡ್, ರಷ್ಯಾದ ಪ್ರವಾಸಿಗರು ಕೂಡ ಇಲ್ಲಿನ ಬೆರಗನ್ನು ಕಂಡು ಕಂಗಾಲು ಆಗುವಷ್ಟು ಮಜಕೂರಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ್ದಾರೆ. ಇನ್ನು ಇಪ್ಪತ್ತೈದು ವರ್ಷವಾದರೂ ಪ್ರವಾಸೋದ್ಯಮದಲ್ಲಿ ನಾವು ಇವರ ಹತ್ತಿರಕ್ಕೂ ಸುಳಿಯುವುದಿಲ್ಲ. ದೇಶಪಾಂಡೆಯವರು 'ಪ್ರವಾಸೋದ್ಯಮ'ದ ಬಗ್ಗೆ ಇಲ್ಲಿಗೆ ಬಂದು 'ಉನ್ನತ ಶಿಕ್ಷಣ' ಪಡೆಯುವುದು ಒಳ್ಳೆಯದು. ಉತ್ತಮ ಸಂಗತಿಗಳು ಎಲ್ಲಿಯೇ ಇರಲಿ, ಅವುಗಳಿಂದ ಕಲಿಯುವುದರಲ್ಲಿ ತಪ್ಪೇನಿಲ್ಲ.
ಕೇಪ್ಟೌನ್ ಇದೆಯಲ್ಲ, ಅದು ಪುಟ್ಟ ಯುರೋಪಿನಂತೆ ಕಾಣುತ್ತದೆ. ಯುರೋಪಿನ ಶಿಸ್ತು, ಸ್ವಚ್ಛತೆ ಢಾಳಾಗಿ ಎದ್ದು ತೋರುತ್ತದೆ. ಅಂದ ಹಾಗೆ ಯುರೋಪಿನ ಹೆಚ್ಚು ಪ್ರವಾಸಿಗರು ದಕ್ಷಿಣ ಆಫ್ರಿಕಾದೆಡೆ ಮುಖ ಮಾಡುತ್ತಿದ್ದಾರೆ. ನಾವು ಈಗ ಬೆಂಗಳೂರಿನ ರಸ್ತೆ ಬಗ್ಗೆ ಮಾತಾಡಲಾರಂಭಿಸಿದ್ದೇವೆ.
ಅಭಿವೃದ್ಧಿ ವಿಷಯ ಬಂದಾಗ ಯುರೋಪ್, ಅಮೆರಿಕ, ಕೆನಡ ಅಂತಿದ್ದೆವು. ಈಗ ನಾವು ಆಫ್ರಿಕಾದಿಂದ ಕಲಿಯಬೇಕಾಗಿ ಬಂದಿದೆ.
ಪ್ರತಿಸಲ ಅಮೆರಿಕ, ಯುರೋಪ್, ರಷ್ಯಾ, ಮಲೇಷಿಯಾ, ದುಬೈ ಇನ್ನಿತರ ದೇಶಗಳಿಗೆ ಹೋಗಿ ಬಂದು, ಬೆಂಗಳೂರಿಗೆ ಧಾವಿಸುತ್ತಿರುವಂತೆ ಇಲ್ಲಿನ ಅವ್ಯವಸ್ಥೆಗಳನ್ನು ಕಂಡಾಗ ನಮ್ಮ ಊರು ಅಲ್ಲಿನಂತೆ ಇರಬಾರದಾ ಎಂದು ಅನಿಸುತ್ತಿತ್ತು. ಇದು ನನ್ನೊಬ್ಬನ ಕನವರಿಕೆಯಲ್ಲ. ಆಫ್ರಿಕಾದಿಂದ ಮರಳುವಾಗಲೂ ಹೀಗೆ ಅನಿಸುತ್ತಿದೆ ಅಂದ್ರೆ ನಾವು ಎಲ್ಲಿದ್ದೇವೆ? ಗೊತ್ತಾಗುತ್ತಿಲ್ಲ. ಸಿದ್ರಾಮಣ್ಣನೇ ಕಾಪಾಡಬೇಕು.
- ವಿಶ್ವೇಶ್ವರ ಭಟ್