ಎಲ್ಲ ಕಳೆದುಕೊಂಡಾಗ ಗಳಿಸಬೇಕಿರುವುದು ಭರವಸೆ

ನೂರಾರು ಸಲ ವಿದೇಶ ಪ್ರವಾಸ ಮಾಡಿದ್ದರೂ, ನಲವತ್ತೇಳು ದೇಶಗಳನ್ನು ಸುತ್ತಿದ್ದರೂ ನಾನು..
Updated on: 

ನೂರಾರು ಸಲ ವಿದೇಶ ಪ್ರವಾಸ ಮಾಡಿದ್ದರೂ, ನಲವತ್ತೇಳು ದೇಶಗಳನ್ನು ಸುತ್ತಿದ್ದರೂ ನಾನು ದೊಡ್ಡ ಪ್ರಮಾದ ಮಾಡಿದ್ದೆ. ಅದೂ ವಿದೇಶಿ ಪ್ರವಾಸದಲ್ಲಿರುವಾಗ ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಮರೆತು ಬಂದಿದ್ದೆ. ವಿದೇಶದಲ್ಲಿರುವಾಗ ಉಸಿರು ಬೇರೆ ಅಲ್ಲ, ಪಾಸ್‌ಪೋರ್ಟ್ ಬೇರೆ ಅಲ್ಲ. ಜತೆಯಲ್ಲಿ ಪರ್ಸು ಕೂಡ ಹೋದರೆ ಕತೆ ಏನಾಗಬೇಡ?

ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಆದರೆ ತಪ್ಪುಗಳಾಗಿ ಹೋಗುತ್ತವೆ. ಎಂಥ ಅನುಭವಿಗಳು, ನುರಿತವರು, ಪರಿಣತರಿಂದಲೂ ತಪ್ಪುಗಳಾಗುತ್ತವೆ. ಎಷ್ಟೇ ಎಚ್ಚರ ವಹಿಸಿದರೂ ಅದನ್ನು ತಪ್ಪಿಸಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಂಬುದೇ ಮುಖ್ಯವೆನಿಸಿಕೊಳ್ಳುತ್ತದೆ. ಈ ಪೀಠಿಕೆಯನ್ನೇಕೆ ಹಾಕಿದೆ ಎಂಬುದು ನಿಮಗೆ ಕೊನೆಯಲ್ಲಿ ತಿಳಿದೀತು.
ಮೊನ್ನೆ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ನಡೆದ ಒಂದು ಸಣ್ಣ ಪ್ರಸಂಗವನ್ನು ನಿಮಗೆ ಹೇಳಬೇಕು. ಐದು ದಿನ ಕೇಪ್‌ಟೌನ್‌ನಲ್ಲಿ ಕಳೆದ ಬಳಿಕ ಅಲ್ಲಿಂದ ನಾವು ಡರ್ಬನ್‌ಗೆ ಹೊರಟಿದ್ದೆವು. ವಿಮಾನದಲ್ಲಿ ಸುಮಾರು ಎರಡು ಗಂಟೆಗಳ ಪಯಣ. ಬೋರ್ಡಿಂಗ್ ಪಾಸ್ ಪಡೆಯಲು ಕ್ಯೂನಲ್ಲಿ ನಿಂತಿದ್ದೆವು. ನಮ್ಮ ತಂಡದಲ್ಲಿ ಹತ್ತು ಮಂದಿಯಿದ್ದೆವು. ಕೌಂಟರ್ ಬಳಿ ಬಂದಾಗ ನಮ್ಮ ತಂಡದ ಮುಖ್ಯಸ್ಥ ಅಜಯ್ ಶಹಾ ಎಲ್ಲರಿಂದ ಪಾಸ್‌ಪೋರ್ಟ್ ಸಂಗ್ರಹಿಸಲಾರಂಭಿಸಿದ. ನಾನು ನನ್ನ ಕೋಟಿನ ಕಿಸೆಗೆ ಕೈ ಹಾಕಿದೆ.
ಪಾಸ್‌ಪೋರ್ಟ್ ಇರಲಿಲ್ಲ! ಆ ಕ್ಷಣ ಎದೆ ಝಲ್ಲೆಂದಿತು. ಡಾಲರ್ ಹಾಗೂ ಸೌತ್ ಆಫ್ರಿಕಾದ ರ್ಯಾಂಡ್‌ಗಳನ್ನಿಟ್ಟುಕೊಂಡಿದ್ದ ಪರ್ಸ್‌ಗಾಗಿ ಕೈ ಹಾಕಿದೆ. ಅದೂ ಇರಲಿಲ್ಲ! ಪಾಸ್‌ಪೋರ್ಟ್ ಹಾಗೂ ವಿದೇಶಿ ಕರೆನ್ಸಿ ಇಲ್ಲದ ನನ್ನ ಪಾಡನ್ನು ಊಹಿಸಲೂ ಸಾಧ್ಯವಿರಲಿಲ್ಲ. ತಕ್ಷಣ ಅಜಯ್‌ನನ್ನು ಕರೆದು, 'ಅಜಯ್, ಎಮರ್ಜೆನ್ಸಿ ಸ್ಥಿತಿ. ನನ್ನ ಪಾಸ್‌ಪೋರ್ಟ್ ಹಾಗೂ ಪರ್ಸ್ ಕಾಣುತ್ತಿಲ್ಲ' ಎಂದೆ. ಆ ಕ್ಷಣ ನಿಜಕ್ಕೂ ಅಧೀರನಾಗಿದ್ದೆ. ಆದರೆ ತೋರಿಸಿಕೊಳ್ಳಲಿಲ್ಲ. ಅಜಯ್ ಏಕಾಏಕಿ ಗಾಬರಿಯಾಗಿಬಿಟ್ಟ. ನನ್ನ ಹತ್ತಿರ ಧಾವಿಸಿದ ಆತ, ಸೂಟ್‌ಕೇಸ್ ಹಾಗೂ ಬ್ಯಾಗ್‌ನಲ್ಲಿ ಮತ್ತೊಮ್ಮೆ ಶೋಧಿಸುವಂತೆ ಹೇಳಿದ. ಟಿಕೆಟ್ ಕೌಂಟರ್ ಮುಂದೆ ಗಾಬರಿಯಿಂದ ಸೂಟ್‌ಕೇಸ್‌ನ್ನೆಲ್ಲ ಕೆದರಿಹಾಕಿದೆ, ಸಿಗಲಿಲ್ಲ.
ಅಷ್ಟೊತ್ತಿಗೆ ನಾನು ಮಾಡಿದ ಯಡವಟ್ಟೇನೆಂಬುದು ತಿಳಿಯಿತು. ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ನಾನು ಉಳಿದುಕೊಂಡ 'ಗ್ರ್ಯಾಂಡ್ ಡ್ಯಾಡಿ ಹೋಟೆಲ್‌'ನಲ್ಲಿ ಬಿಟ್ಟು ಬಂದಿದ್ದೇನೆಂಬುದು ನನಗೆ ಮನವರಿಕೆಯಾಯಿತು.
ನೂರಾರು ಸಲ ವಿದೇಶ ಪ್ರವಾಸ ಮಾಡಿದ್ದರೂ, ನಲವತ್ತೇಳು ದೇಶಗಳನ್ನು ಸುತ್ತಿದ್ದರೂ ನಾನು ದೊಡ್ಡ ಪ್ರಮಾದ ಮಾಡಿದ್ದೆ. ಅದೂ ವಿದೇಶಿ ಪ್ರವಾಸದಲ್ಲಿರುವಾಗ ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಮರೆತು ಬಂದಿದ್ದೆ. ವಿದೇಶದಲ್ಲಿರುವಾಗ ಉಸಿರು ಬೇರೆ ಅಲ್ಲ, ಪಾಸ್‌ಪೋರ್ಟ್ ಬೇರೆ ಅಲ್ಲ. ಜತೆಯಲ್ಲಿ ಪರ್ಸು ಕೂಡ ಹೋದರೆ ಕತೆ ಏನಾಗಬೇಡ? ನಾನು ಮಾಡಬಾರದ ತಪ್ಪು ಮಾಡಿದ್ದೆ. ನನ್ನ ಸ್ವಭಾವವನ್ನು ಹಳಿದುಕೊಂಡೆ.
ನನ್ನದೊಂದು ವಿಚಿತ್ರ ಸ್ವಭಾವ. ನಾನು ಉಳಿದುಕೊಂಡ ಹೋಟೆಲ್ ರೂಮು ನನ್ನ ಮನೆಯ ರೂಮಿನಂತೆ ನೀಟಾಗಿ, ಸ್ವಚ್ಛವಾಗಿರಬೇಕೆಂಬುದು ಆಸೆ. ರೂಮು ಖಾಲಿ ಮಾಡಿ ಹೊರಡುವಾಗಲೂ ಬಾತ್‌ರೂಮು, ಬೆಡ್, ರೂಮನ್ನು ನೀಟಾಗಿಟ್ಟು ಹೊರಡುವುದು ಸ್ವಭಾವ. ಟೈಮಿದ್ದರೆ ಬಾತ್‌ರೂಮನ್ನು ತೊಳೆದು, ನಾನು ರೂಮು ಪ್ರವೇಶಿಸುವಾಗ ಹೇಗಿತ್ತೋ ಅದೇ ಸ್ಥಿತಿಯಲ್ಲಿ ಇಡಬೇಕೆಂಬುದು ಪಾಲಿಸಿಕೊಂಡು ಬಂದ ನಿಯಮ. ಬೆಡ್ ಕೆದರಿದ್ದರೆ, ನೆರಿಗೆ ಬಿದ್ದರೆ ಕಿರಿಕಿರಿ. ಹೌಸ್‌ಕೀಪಿಂಗ್‌ನವರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ತಾಳಲಿ ಎಂಬ ಹಿರಿಮೆಯೂ ಇದ್ದಿರಬಹುದು.
 ಅಂದು ನಾನು ರೂಮು ಖಾಲಿ ಮಾಡಿ ಹೊರಡುವ ಮುನ್ನ ಇಡೀ ರೂಮನ್ನೆಲ್ಲ ಸ್ವಚ್ಛಗೊಳಿಸಿ, ಒಪ್ಪ ಓರಣವಾಗಿಟ್ಟು ನೆಲಮಹಡಿಯ ರೆಸ್ಟೋರೆಂಟ್‌ಗೆ ಉಪಾಹಾರಕ್ಕೆಂದು ಹೋದೆ. ಹೋಗುವಾಗ ಮಣಗಾತ್ರದ ಮೂರು ಪುಸ್ತಕಗಳಿರುವ ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಚಾದರದ ಕೆಳಗಿಟ್ಟೆ. ಅವನ್ನೆಲ್ಲ ಕೆಳಗೆ ಯಾಕೆ ತೆಗೆದುಕೊಂಡು ಹೋಗಬೇಕು ಎಂದು ಅಲ್ಲಿಟ್ಟು ಹೋದೆ. ಉಪಾಹಾರ ಮುಗಿಸಿದಾಗ ಎದುರಾದ ಗೈಡ್ ಬೇಗ ಹೊರಡುವಂತೆ ಸೂಚಿಸಿದ. ರೂಮಿಗೆ ಧಾವಿಸಿದ ನಾನು ಪುನಃ ಹಲ್ಲುಜ್ಜಿ, ಡೆಂಟಲ್ ಕಿಟ್‌ನ್ನು ಸೂಟ್‌ಕೇಸ್‌ಗೆ ಹಾಕಿಕೊಂಡು, ಕೋಟೇರಿಸಿ, ಎಲ್ಲವನ್ನೂ ತೆಗೆದುಕೊಂಡಿದ್ದೇನೆಂಬುದನ್ನು ಎರಡೆರಡು ಸಲ ಖಾತ್ರಿ ಮಾಡಿಕೊಂಡು, ರೂಮಿನ ಹೊರಬಿದ್ದೆ.
ಚಾದರದ ಕೆಳಗಿಟ್ಟ ಪಾಸ್‌ಪೋರ್ಟ್ ಹಾಗೂ ಪರ್ಸು ಬೆಚ್ಚಗೆ ಅಲ್ಲಿಯೇ ಮಲಗಿದ್ದವು! ಬೆಡ್ ನೀಟಾಗಿದ್ದುದರಿಂದ ಚಾದರದ ಅಡಿಗಿಟ್ಟಿದ್ದ ಅವೆರಡೂ ಕಣ್ಣಿಗೆ ಬಿದ್ದಿರಲಿಲ್ಲ. ನಾನು ಅವಸರದಲ್ಲಿ ಅಲ್ಲಿಂದ ಹೊರಡುವ ಭರದಲ್ಲಿ ಈ ಅವಾಂತರವಾಗಿತ್ತು.
ಅಜಯ್ ಏಕಾಏಕಿ ಗಾಬರಿಯಾದ. ವಾಪಸ್ ಹೋಟೆಲ್‌ಗೆ ಹೋಗೋಣ ಎಂದ. ನಾನು ಅವನಿಗೆ ಹಾಗಲ್ಲ, ಹೀಗೆ ಮಾಡಿದರೆ ಹೇಗೆ ಎಂದು ಹೇಳಲು ಪ್ರಯತ್ನಿಸುತ್ತಿದ್ದೆ. ಆದರೆ ಆತ ನನ್ನ ಮಾತನ್ನು ಕೇಳದೇ ಹೋಟೆಲ್‌ಗೆ ವಾಪಸ್ ಹೋಗೋಣ, ಅದೇ ಉಳಿದಿರುವ ಮಾರ್ಗ ಎಂದ.   
ಟಿಕೆಟ್ ಕೌಂಟರ್‌ನಲ್ಲಿ ಕುಳಿತಿದ್ದ ಮಹಿಳೆ ಇವೆಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದಳು. ಕ್ಯೂನಲ್ಲಿ ನಿಂತಿದ್ದ ಸಹಪ್ರಯಾಣಿಕರು ನನ್ನನ್ನು 'ಮಹಾಪೆಕರ'ನೆಂಬಂತೆ ದಿಟ್ಟಿಸಿ, ಅನುಕಂಪ ಸೂಚಿಸಿ ಮುಂದಕ್ಕೆ ಹೋಗುತ್ತಿದ್ದರು. ನನ್ನ ಜತೆಗಿದ್ದ ಪತ್ರಕರ್ತರು, 'ಈತನಿಂದಾಗಿ ಪ್ರವಾಸವೆಲ್ಲ ಯಕ್ಕುಟ್ಟಿ ಹೋಯ್ತಲ್ಲ' ಎಂದು ಮನಸ್ಸಿನೊಳಗೆ ಶಾಪ ಹಾಕುತ್ತಿದ್ದಿರಬೇಕು.
ಕಳೆದುಕೊಳ್ಳಬಾರದ್ದನ್ನು ಕಳೆದುಕೊಂಡಾಗ, ತಕ್ಷಣ ಗಳಿಸಿಕೊಳ್ಳಬೇಕಾದದ್ದು ಆತ್ಮವಿಶ್ವಾಸ ಹಾಗೂ ಭರವಸೆ. ಅದನ್ನಂತೂ ಕಳೆದುಕೊಂಡಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡೆ. ಅಷ್ಟೇ ಅಲ್ಲ, ಕಳೆದಿದ್ದು ಪಾಸ್‌ಪೋರ್ಟ್ ಹೊರತು ನಾನಲ್ಲವಲ್ಲ, ನಾನು ಕಳೆದುಹೋಗಿದ್ದರೆ ಮಾತ್ರ ಚಿಂತೆ ತಾನೆ? ಹಾಗೆಂದುಕೊಂಡ ತಕ್ಷಣವೇ ನಾನು ಸಹಜ ಸ್ಥಿತಿಗೆ ಬಂದೆ.
ಆದರೆ ನಮ್ಮ ಟೀಮ್ ಲೀಡರ್ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಇಲಾಖೆಯ ಅಜಯ್ ಮಾತ್ರ ಹೋಟೆಲ್‌ಗೆ ವಾಪಸ್ ಹೋಗಿ ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ತರೋಣ ಎಂದು ಹೇಳುತ್ತಿದ್ದ. ಆಗ ನಾನು ಸಮಾಧಾನದಿಂದ ಅಜಯ್‌ಗೆ ಹೇಳಿದೆ-'ಅಜಯ್, ನಮ್ಮ ಮುಂದೆ ಈಗ ಎರಡು ಆಯ್ಕೆಗಳಿವೆ. ಮೊದಲನೆಯದು, ನೀನು ಹೇಳಿದಂತೆ ಈಗ ಹೋಟೆಲ್‌ಗೆ ಹೋಗುವುದು. ಹೋಗಲು ಹಾಗೂ ಬರಲು ಒಂದು ಗಂಟೆ ಬೇಕು. ಈಗ ಬೆಳಗ್ಗೆ 8.30. ಆದರೆ ವಿಮಾನ ಹೊರಡುವ ಸಮಯ ಬೆಳಗ್ಗೆ 9.35. ಅಂದರೆ ನಮಗೆ ಒಂದು ಗಂಟೆ ಐದು ನಿಮಿಷ ಇದೆ. ಇದು ಬಹಳ ರಿಸ್ಕ್. ಫ್ಲೈಟ್ ಮಿಸ್ ಆದರೆ ನಮ್ಮ ಮುಂದಿನ ನಿಗದಿತ ಪ್ರಯಾಣವೆಲ್ಲ ಗಬ್ಬೆದ್ದು ಹೋಗುತ್ತದೆ. ಡರ್ಬನ್‌ಗೆ ಹೊರಡುವ ಮುಂದಿನ ಫ್ಲೈಟ್ ಯಾವಾಗಲೋ ಏನೋ? ಅದಕ್ಕೆ ಹೆಚ್ಚಿನ ಹಣ ತೆರಬೇಕು. ಒಬ್ಬನಿಂದಾಗಿ ಉಳಿದವರಿಗೆಲ್ಲ ತಾಪತ್ರಯ. ಇನ್ನು ನಾವಿಬ್ಬರೇ ಉಳಿದುಕೊಂಡು, ಉಳಿದ ಎಂಟು ಮಂದಿ ಹೊರಟರೆ, ಟೀಮ್ ಲೀಡರ್ ಇಲ್ಲದೇ ಅವರಿಗೂ ತೊಂದರೆಯಾಗುತ್ತದೆ. ಎಲ್ಲ ವಿವರಗಳು ನಿನ್ನಲ್ಲಿವೆ...'
  'ಅದ್ಸರಿ ಈಗ ನಾವೇನು ಮಾಡಬೇಕು? ಅದನ್ನು ಮೊದಲು ಹೇಳಿ' ಎಂದ ಅದೇ ಧಾವಂತದಿಂದ.
'ಅಜಯ್ ನಮ್ಮ ಮುಂದೆ ಇನ್ನೊಂದು ಆಯ್ಕೆಯಿದೆ. ಅದೇನೆಂದರೆ ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಇಲ್ಲಿಯೇ ಬಿಟ್ಟು ನಾವು ಹೊರಡುವುದು. ಹೇಗಿದ್ದರೂ ದೇಶದೊಳಗೆ ಪ್ರವಾಸ ಮಾಡುವಾಗ ಪಾಸ್‌ಪೋರ್ಟ್ ಅಗತ್ಯವಿರುವುದಿಲ್ಲ. ಟಿಕೆಟ್ ಕೌಂಟರ್‌ನಲ್ಲಿ ತೋರಿಸಲು ನನ್ನ ಬಳಿ ಬೇರೆ ಗುರುತಿನ ಪತ್ರವಿದೆ. ನಾನು ನನ್ನ ಹೋಟೆಲ್ ರೂಮಿನಲ್ಲಿಯೇ ಅವೆರಡನ್ನೂ ಬಿಟ್ಟಿದ್ದೇನೆ. ಅದರಲ್ಲಿ ಸಂದೇಹವಿಲ್ಲ. ಅವು ಎಲ್ಲೂ ಹೋಗಲ್ಲ. ನನ್ನ ಪರ್ಸ್‌ನಲ್ಲಿರುವ ಒಂದು ಪೈಸೆಯೂ ಹೈಗೈ ಆಗುವುದಿಲ್ಲ. ಸಾಮಾನ್ಯವಾಗಿ ಪ್ರತಿಷ್ಠಿತ ಹೋಟೆಲ್‌ಗಳಲ್ಲಿರುವ ಸಿಬ್ಬಂದಿ ಪ್ರಾಮಾಣಿಕರಾಗಿರುತ್ತಾರೆ, ಅಪರಾತಪರಾ ಮಾಡೊಲ್ಲ. ಹೀಗಿರುವಾಗ ಚಿಂತೆ ಯಾಕೆ? ಈಗ ನಾವು ಮಾಡಬೇಕಿರುವುದು ನಮ್ಮ ಪ್ರಯಾಣವನ್ನು ಮುಂದುವರಿಸುವುದು. ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಡರ್ಬನ್‌ನಲ್ಲಿ ನಾವು ಉಳಿದುಕೊಳ್ಳುವ ಹೋಟೆಲ್‌ಗೆ ಕೋರಿಯರ್ ಮೂಲಕ ಕಳಿಸಿ ಎಂದು ಹೇಳೋಣ' ಎಂದು ಅಜಯ್‌ಗೆ ಹೇಳಿದೆ.
'ವಾಪಸ್ ಹೋಟೆಲ್‌ಗೆ ಹೋಗೋಣ' ಎಂಬ 'ಒಂದಂಶ'ದ ಬೇಡಿಕೆಯನ್ನು ಆತ ಕೈ ಬಿಟ್ಟ. ನಮ್ಮೊಂದಿಗಿದ್ದ ಉಳಿದ ಸ್ನೇಹಿತರೂ ನಿರಾಳರಾದರು.
ಕೌಂಟರ್‌ನಲ್ಲಿ ಬೋರ್ಡಿಂಗ್ ಪಾಸ್ ಪಡೆದು, ಸೆಕ್ಯುರಿಟಿ -ಚೆಕ್ ಮಾಡಿಕೊಂಡು ವೇಟಿಂಗ್ ಲಾಂಜ್‌ನಲ್ಲಿ ಕುಳಿತು ನಿಟ್ಟುಸಿರುಬಿಟ್ಟೆ. ಅಜಯ್‌ಗೆ ಹೋಟೆಲ್‌ಗೆ ಫೋನ್ ಮಾಡಿ, ಪಾಸ್‌ಪೋರ್ಟ್ ಹಾಗೂ ಪರ್ಸ್‌ನ್ನು ಮರೆತು ರೂಮಿನಲ್ಲಿಯೇ ಬಿಟ್ಟು ಬಂದಿರುವ ವಿಷಯ ತಿಳಿಸು ಎಂದೆ. ಆತ ಫೋನ್ ಮಾಡಿದ. ಹೋಟೆಲ್ ಮ್ಯಾನೇಜರ್ 'ತಕ್ಷಣ ರೂಮಿಗೆ ಸಿಬ್ಬಂದಿಯನ್ನು ಕಳಿಸುತ್ತೇನೆ. ಎರಡು ನಿಮಿಷಗಳಲ್ಲಿ ವಾಪಸ್ ಫೋನ್ ಮಾಡ್ತೇನೆ' ಎಂದ.
ಎರಡು ನಿಮಿಷಗಳಲ್ಲಿ ಫೋನ್ ಬಂತು.
'ಯಸ್ ಸಾರ್, ಪಾಸ್‌ಪೋರ್ಟ್ ಹಾಗೂ ಪರ್ಸ್ ಸುರಕ್ಷಿತವಾಗಿವೆ' ಎಂದ. ಪರ್ಸಿನಲ್ಲಿ ಇಂತಿಷ್ಟು ಹಣವಿದೆ ಎಂಬುದನ್ನು ಹೇಳಿದ. ಒಂದು ರೂಪಾಯಿ ಸಹ ಆಚೆ ಈಚೆ ಆಗಿರಲಿಲ್ಲ.
ಈ ಮಧ್ಯೆ ನಮ್ಮ ಗೈಡ್‌ಗೆ ಈ ವಿಷಯ ತಿಳಿಸಿದೆ. ಆತ ಹೋಟೆಲ್‌ಗೆ ಹೋಗಿ ಅವೆರಡನ್ನೂ ತೆಗೆದುಕೊಂಡು ಡರ್ಬನ್‌ನ ಹೋಟೆಲ್‌ಗೆ ಕೋರಿಯರ್‌ನಲ್ಲಿ ಕಳಿಸುವುದಾಗಿ ಹೇಳಿದ. ಅಷ್ಟರೊಳಗೆ (ವಿಮಾನವೇರಲು) ಬೋರ್ಡಿಂಗ್ ಅನೌನ್ಸ್‌ಮೆಂಟ್ ಆಯಿತು. ನಾವು ಡರ್ಬನ್‌ಗೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದೆವು. ನನ್ನ ಸಣ್ಣ ತಪ್ಪಿನಿಂದಾದ ದೊಡ್ಡ ಸಮಸ್ಯೆ ಅಷ್ಟೇ ಸುಲಭವಾಗಿ ಬಂದ ವೇಗದಲ್ಲಿಯೇ ನಿವಾರಣೆಯಾಗಿತ್ತು. ನಾವು ಡರ್ಬನ್ ತಲುಪಿದವರೇ ಅಲ್ಲಿಂದ ನೇರವಾಗಿ ಸುಮಾರು ಆರು ನೂರು ಕಿ.ಮಿ. ದೂರದಲ್ಲಿರುವ ಖಾಸಗಿ ಅಭಯಾರಣ್ಯವೊಂದರಲ್ಲಿ ಎರಡು ದಿನ ಕಳೆದು ವಾಪಸ್ ಡರ್ಬನ್‌ಗೆ ಬಂದು ಹೋಟೆಲ್ ಸೇರುವ ಮುನ್ನ ನನ್ನ ಪಾಸ್‌ಪೋರ್ಟ್ ಹಾಗೂ ಪರ್ಸ್ ನನಗಾಗಿ ಕಾಯುತ್ತಿತ್ತು!
ಈಗ ಆರಂಭದ ಮೊದಲ ಪ್ಯಾರಾವನ್ನು ಓದಿ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com