

ರಾಜಕಾರಣಿಗಳು ಜನರ ಕಿವಿ ಮೇಲೆ ಹೂವು ಇಡುವುದರಲ್ಲಿ ನಿಸ್ಸೀಮರು. ಮೈಸೂರಿನ ಮೇಯರ್ ಎನ್.ಎಂ. ರಾಜೇಶ್ವರಿ ಅವರು ಕೂಡ ಇದನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ! ಬೆಂಗಳೂರಿನಂತೆ ಮೈಸೂರು ಕೂಡ ಬೃಹತ್ ನಗರ ಪಾಲಿಕೆ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಅವರಿಂದ ಸಕಾರಾತ್ಮಕ ಭರವಸೆ ಸಿಕ್ಕಿದೆ ಎಂದು ಇತ್ತೀಚೆಗೆ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದರು. ಅದೇ ದಿನ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಈ ಕುರಿತು ಕೇಳಿದರೆ, 'ನನ್ನನ್ನು ಯಾರೂ ಭೇಟಿ ಮಾಡಿಲ್ಲ. ನಾನು ಯಾರಿಗೂ ಬೃಹತ್ ನಗರ ಪಾಲಿಕೆ ಮಾಡುವ ಭರವಸೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು. ಎರಡು ಹೇಳಿಕೆ ಕೇಳಿದ ಜನ ಕಿವಿ ಮುಟ್ಟಿಕೊಂಡಿದ್ದು ಸುಳ್ಳಲ್ಲ!
ಹಿರೇಮಠ ಬದಲು ಅಶೋಕ ಪೈ ಕರೆದುಕೊಂಡು ಬಂದರು!
ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠ ರಾಜ್ಯದ ಬಹುತೇಕ ಜನರಿಗೆ ಪರಿಚಿತರು. ಅದರಲ್ಲೂ ಮಾಧ್ಯಮರಿಗೆ ಚೆನ್ನಾಗಿ ಪರಿಚಯವಿದೆ. ಕಳೆದ ವಾರ ಮೈಸೂರಿನಲ್ಲಿ ಹಿರೇಮಠ ಸೇರಿದಂತೆ ನಾಲ್ವರಿಗೆ ಕರ್ನಾಟಕ ಕಣ್ಮಣಿ ಪ್ರಶಸ್ತಿ ಸಮಾರಂಭ ಇತ್ತು. ಮಾಧ್ಯಮದವರಿಗೆ ಹಿರೇಮಠ ಅವರನ್ನು ಮಾತನಾಡಿಸಬೇಕಿತ್ತು. ಆಗ ವೇದಿಕೆ ಏರಿದ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರೊಬ್ಬರು ಹಿರೇಮಠ ಅವರ ಬದಲು ವೇದಿಕೆ ಮೇಲೆಯೇ ಇದ್ದ ಡಾ. ಅಶೋಕ ಪೈ ಅವರನ್ನು ಕರೆ ತಂದರು. ಆಗ ಅಲ್ಲಿಯೇ ಇದ್ದ ಕೆಲವು ಮಿತ್ರರು, 'ರೀ... ಇವರು ಹಿರೇಮಠರಲ್ಲ, ನಮಗೆ ಬೇಕಿರುವುದು ಹಿರೇಮಠರು' ಅಂದಾಗ ಬೇಸ್ತು ಬಿದ್ದ ಆ ವರದಿಗಾರ ಅಶೋಕ ಪೈ ಅವರ ಕ್ಷಮೆ ಕೋರಿ, ನಂತರ ಹಿರೇಮಠರನ್ನು ಕರೆತಂದರು!
ಸ್ಟಾರ್ ಲೈಫ್ ಎನ್ನುವುದು ಒಂಟಿಸಲಗ ಇದ್ದಂತೆ!
ರೆಬೆಲ್ ಸ್ಟಾರ್ ಅಂಬರೀಷ್ ಬಣ್ಣದ ಲೋಕದಿಂದ ರಾಜಕೀಯ ರಂಗ ಪ್ರವೇಶಿಸಿದರೂ ಡೈಲಾಗ್ ಹೊಡೆಯುವುದನ್ನು ಇನ್ನೂ ಮರೆತಿಲ್ಲ. ಇತ್ತೀಚೆಗೆ ಬೆಳಗಾವಿಗೆ ಬಂದಿದ್ದ ವಸತಿ ಸಚಿವ ಅಂಬಿಗೆ ಪತ್ರಕರ್ತರೊಬ್ಬರು, 'ನೀವು ಅನೇಕ ಸಿನಿಮಾಗಳಲ್ಲಿ ಬಡವರ ಪರ ಧ್ವನಿ ಎತ್ತಿ ಹೋರಾಟ ಮಾಡಿದ್ದೀರಿ. ಈಗ ರಿಯಲ್ ಲೈಫ್ನಲ್ಲೂ ಬಡವರ ಪರ ಹೋರಾಟ ಮಾಡುತ್ತೀರಾ?' ಎಂದು ಪ್ರಶ್ನಿಸಿದರು. ಇದನ್ನು ಕೇಳಿ ಮೈ ಕುಲುಕಿ ನಗುತ್ತ 'ನೀವು ಕೇಳಿದ ಪ್ರಶ್ನೆಗಳಿಗೆಲ್ಲ ನಾನು ಉತ್ತರ ಕೊಡುತ್ತೇನೆ. ಜನರ ಪ್ರಶ್ನೆಗೂ ಉತ್ತರಿಸುತ್ತೇನೆ. ಸ್ಟಾರ್ ಜೀವನಕ್ಕೂ, ನಿಜ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಸ್ಟಾರ್ ಲೈಫ್ ಎನ್ನುವುದು ಒಂಟಿಸಲಗ ಇದ್ದಂತೆ. ರಿಯಲ್ ಸ್ಟೋರಿ ಕುರಿತು ಸಿನಿಮಾ ನಿರ್ಮಿಸಿದರೆ ಅದರಲ್ಲಿ ನಾನು ನಟಿಸಲು ಸಿದ್ಧನಿದ್ದೇನೆ. ಸದನದಲ್ಲಿ ಕಥೆ ಬರೆಯಲು ದೊಡ್ಡರಂಗೇಗೌಡರಿದ್ದಾರೆ. ಪೋಷಕ ನಟಿ ಉಮಾಶ್ರೀಯೂ ಇದ್ದಾರೆ' ಎಂದು ಡೈಲಾಗ್ ಹೊಡೆದರು. ಹಿಂದೆ ಕುಳಿತಿದ್ದ ಕಿಲಾಡಿಯೊಬ್ಬ 'ಹಣ ಹೂಡಲು ಸಚಿವ ಲಾಡ್ ಇದ್ದಾರೆ ಬಿಡಿ' ಎಂದು ಸಣ್ಣದಾಗಿ ಗೊಣಗಿದ. ಅಕ್ಕಪಕ್ಕದವರು ನಗುತ್ತಲೇ ಹೊರಗೆ ಬಂದರು!
ವಾಸ್ತುದೋಷ ನಿವಾರಣೆ ವಸ್ತು ಮಾರುವವರಿಗೆ 'ದೋಷ'
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಖಾದಿ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಮಳಿಗೆ ತೆರೆದಿರುವ ವ್ಯಾಪಾರಿಯೊಬ್ಬರು ವಾಸ್ತು ಸಂಬಂಧಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ವಸ್ತುಗಳನ್ನು ನಿಮ್ಮ ಮನೆಯ ಬಾಗಿಲಲ್ಲಿ ತೂಗು ಹಾಕಿದರೆ ವಾಸ್ತುದೋಷಗಳು ನಿವಾರಣೆಯಾಗುತ್ತವೆ ಎಂದು ಮೇಳಕ್ಕೆ ಬಂದವರಿಗೆಲ್ಲಾ ಹೇಳುತ್ತಿದ್ದರು. ಈ ರೀತಿ ಹೇಳುತ್ತಿದ್ದಾಗಲೇ ವಾಸ್ತುದೋಷ ನಿವಾರಣೆಯ ವಸ್ತುಗಳನ್ನು ಇಟ್ಟಿದ್ದ ಟೇಬಲ್ ಕುಸಿದು ಬಿತ್ತು. ಆಗ ಗ್ರಾಹಕರು ನಕ್ಕಿದ್ದೇ ನಕ್ಕಿದ್ದು. ನಿಮ್ಮ ವಾಸ್ತುವೇ ಸರಿಪಡಿಸಲಾಗದ ನೀವು, ನವ್ಮ ಮನೆಯ ವಾಸ್ತು ಹೇಗೆ ಪರಿಹರಿಸುವಿರಿ ಎಂದು ಮೂದಲಿಸುತ್ತಿದ್ದಂತೆ ಮಾಲೀಕ ಇಂಗು ತಿಂದ ಮಂಗನಂತಾದರು!
ಕೇಂದ್ರ ಸಚಿವರೆದುರು ಇಎಸ್ಐ ನಿಗಮ ಅಧಿಕಾರಿಗಳ ಪೇಚಾಟ
ಇತ್ತೀಚೆಗೆ ಇಎಸ್ಐ ನಿಗಮ ಮಂಗಳೂರು ಉಪಪ್ರಾದೇಶಿಕ ಕಚೇರಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿತ್ತು. ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಕೋಡಿಕುನ್ನಿಲ್ ಸುರೇಶ್ ಇಎಸ್ಐ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುತ್ತಲೇ ಇದ್ದರು. ಇದಕ್ಕೆ ಸರಿಯಾಗಿ ಸುದ್ದಿಗೋಷ್ಠಿ ವೇಳೆ ಅಧಿಕಾರಿಗಳು ತಮ್ಮದೇ ಇಲಾಖೆ ವಿಚಾರ ಹೇಳುವಾಗ ಅರೆಬರೆ ಮಾಹಿತಿ ನೀಡಿ ಸಚಿವರೆದುರೇ ಪೇಚಿಗೀಡಾದರು. ಉದ್ಯೋಗಸ್ಥ ಗರ್ಭಿಣಿಯರಿಗೆ ವೇತನ ಸಹಿತ ರಜೆ ಬಗ್ಗೆ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ ಎಂದು ಪತ್ರಕರ್ತರೊಬ್ಬರು ಸಚಿವರಿಗೆ ಪ್ರಶ್ನೆ ಮಾಡಿದರು. ಸಚಿವರು ಅಧಿಕಾರಿ ಮುಖ ನೋಡಿದರು. ಅಧಿಕಾರಿ ಮಿಸ್ಕ್ಯಾರೇಜ್ಗೆ 42 ದಿನ ಎಂತಲೂ, ಇನ್ನೊಮ್ಮೆ ಅಲ್ಲ, 3 ವಾರ ಎಂದೂ ಹೇಳತೊಡಗಿದರು. ಆಗ ಇನ್ನೊಬ್ಬ ಅಧಿಕಾರಿ ಅಲ್ಲಲ್ಲ ಎಂದು ತಡೆದರು. ಹೆರಿಗೆ ಭತ್ಯೆ 2.5 ಸಾವಿರದಿಂದ 5 ಸಾವಿರಕ್ಕೆ ಏರಿಸಲಾಗುವುದು ಎಂದು ಅದೇ ಅಧಿಕಾರಿ ಹೇಳಿದರು. ಅಷ್ಟರಲ್ಲಿ ಇನ್ನೊಬ್ಬ ಅಧಿಕಾರಿ ಅಲ್ಲ, ಅದೇಶ ಬಂದಾಗಿದೆ ಎಂದರು. ಪತ್ರಕರ್ತರಿಗೆ ಉತ್ತರ ನೀಡುತ್ತಿದ್ದ ಅಧಿಕಾರಿ ಕ್ಷಣ ಸ್ತಬ್ಧರಾದರು, ಆದೇಶ ಬಂತಾ? ಎಲ್ಲಿ ಎಂದು ಸಚಿವರೆದುರೇ ತಮ್ಮ ಜ್ಞಾನ ಪ್ರದರ್ಶನ ಮಾಡಿದರು. ಮುಖ ಮುಚ್ಚಿಕೊಂಡ ಸಚಿವರು ಪತ್ರಕರ್ತರ ಬಳಿ ಪೇಲವ ದೃಷ್ಟಿ ಬೀರಿ 'ಇಎಸ್ಐ ವ್ಯವಸ್ಥೆ ಸರಿ ಮಾಡುತ್ತೇನೆ' ಎಂದು ಭರವಸೆ ನೀಡಿದರು.
ಆರ್ಎಸ್ಎಸ್ ಸಭಾಂಗಣದಲ್ಲಿ ಕಾಂಗ್ರೆಸ್ ಜೈಕಾರ ದಾಖಲೆ!
ಇಎಸ್ಐ ನಿಗಮ ಉಪ ಪ್ರಾದೇಶಿಕ ಕಚೇರಿ ಕಾರ್ಯಕ್ರಮ ಮಂಗಳೂರಿನ ಆರ್ಎಸ್ಎಸ್ ಕಚೇರಿ ಸಭಾಂಗಣ ಸಂಘ ನಿಕೇತನದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಕರೆದರೂ ಹೋಗಿರಲಿಲ್ಲ. ಆದರೆ ಸಚಿವ ಟಿ.ಪಿ.ಪರಮೇಶ್ವರ ನಾಯ್ಕ್ ಅವರಿಗೆ ಮಂಗಳೂರಿಗೆ ಬರುವವರೆಗೂ ಈ ವಿಚಾರ ಮಾತ್ರ ತಿಳಿದಿರಲಿಲ್ಲ. ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ದುಃಖ ತೋಡಿಕೊಂಡಾಗಲೇ ಗೊತ್ತಾಯಿತು. ಆದರೆ ಅಷ್ಟು ದೂರದಿಂದ ಬಂದು ಕಾರ್ಯಕ್ರಮಕ್ಕೆ ಗೈರಾಗಲು ಇಷ್ಟ ಇರಲಿಲ್ಲ. ಕಾಂಗ್ರೆಸ್ಗೆ ಮುಜುಗರವಾಗುವುದಕ್ಕೂ ಬಿಡಲಿಲ್ಲ. ಭಾಷಣದ ಕೊನೆಯಲ್ಲಿ ಜೈ ಕರ್ನಾಟಕ, ಜೈ ಕಾಂಗ್ರೆಸ್, ಜೈ ಹಿಂದ್ ಎನ್ನುವ ಮೂಲಕ ಮೊದಲ ಬಾರಿಗೆ ಆರ್ಎಸ್ಎಸ್ ಕಚೇರಿ ಸಭಾಂಗಣದಲ್ಲಿ ಕಾಂಗ್ರೆಸ್ ಜೈಕಾರ ಮೊಳಗಿಸಿ ದಾಖಲೆ ಬರೆದರು! ಕಾರ್ಯಕ್ರಮಕ್ಕೆ ಹಾಜರಾಗಿಯೂ ಬುದ್ಧಿವಂತಿಕೆ ಮೆರೆದರು. ಕಾರ್ಯಕ್ರಮಕ್ಕೆ ಬಾರದ ಸಚಿವರು ಮಾತ್ರ ಪೆಚ್ಚುಮೋರೆ ಹಾಕಿಕೊಂಡರು.
-ನಂಬಿರಾಜ್