ಮೋದಿ ನೆಪದಲ್ಲಾದರೂ ಕಾಂಗ್ರೆಸ್ಗೆ ಪಟೇಲರ ನೆನಪಾಗಿದ್ದು ಪುಣ್ಯ!

ಭಾರತಕ್ಕೆ ಆಗ ತಾನೆ ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷ್ ಪ್ರಭುತ್ವದಲ್ಲಿದ್ದ ಎಲ್ಲ ಪ್ರಾಂತ...
ಮೋದಿ ನೆಪದಲ್ಲಾದರೂ ಕಾಂಗ್ರೆಸ್ಗೆ ಪಟೇಲರ ನೆನಪಾಗಿದ್ದು ಪುಣ್ಯ!
Updated on: 

ಭಾರತಕ್ಕೆ ಆಗ ತಾನೆ ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷ್ ಪ್ರಭುತ್ವದಲ್ಲಿದ್ದ ಎಲ್ಲ ಪ್ರಾಂತ, ರಾಜ್ಯಗಳನ್ನು ಭಾರತ ಸರ್ಕಾರದ ಕಬ್ಜಕ್ಕೆ ನೀಡಬೇಕೆಂದು ತಿಂಗಳ ಹಿಂದೆಯೇ ಬ್ರಿಟಿಷ್ ಪಾರ್ಲಿಮೆಂಟ್ ಸಹ ತೀರ್ಮಾನ ತೆಗೆದುಕೊಂಡಿತ್ತು. ಅಂದಿನ ಮದರಾಸು ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟಿದ್ದ ಲಕ್ಷದ್ವೀಪವನ್ನು ಸಹಜವಾಗಿ ತನ್ನ ಕಕ್ಷೆಯೊಳಗೆ ಸೇರಿಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿತು. ಆದರೆ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವುದರಿಂದ ಲಕ್ಷದ್ವೀಪ ತನಗೆ ಸೇರಬೇಕೆಂದು ನೂತನವಾಗಿ ಉದಯಿಸಿದ ಪಾಕಿಸ್ತಾನ ಒಳಗೊಳಗೇ ಕಾರಸ್ಥಾನ ಮಾಡಲಾರಂಭಿಸಿತು. ಈ ಸಂಗತಿ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಗಮನಕ್ಕೆ ಬಂದಿತು.
ಪಟೇಲ್ ಒಂದು ಕ್ಷಣವೂ ತಡ ಮಾಡಲಿಲ್ಲ.
ಆದರೆ ಪ್ರಧಾನಿ ನೆಹರು ಅಪಸ್ವರ ಎತ್ತಿದರು. ಲಕ್ಷದ್ವೀಪವನ್ನು ಏಕಾಏಕಿ ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆ, ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಬಹುದು. ಲಕ್ಷದ್ವೀಪದಲ್ಲಿರುವ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಇದರಿಂದ ಮನಸ್ಸಿಗೆ ನೋವಾಗಬಹುದು. ಪಾಕ್ ಸರ್ಕಾರದ ಜತೆ ಮಾತುಕತೆ ಮೂಲಕ ಲಕ್ಷದ್ವೀಪ ಯಾರಿಗೆ ಸೇರಬೇಕೆಂಬುದನ್ನು ಬಗೆಹರಿಸಿಕೊಳ್ಳೋಣ. ಈಗ ನಮ್ಮ ಮುಂದೆ ಬೇರೆ ವಿಷಯಗಳಿವೆ. ಅದಕ್ಕೂ ಪ್ರಮುಖ ಆದ್ಯತೆಗಳಿವೆ' ಎಂದು ಪ್ರಧಾನಿ ನೆಹರು, ಪಟೇಲ್ರ ಕ್ರಮಕ್ಕೆ ಅಡ್ಡ ಬಂದರು.
ಪಟೇಲ್ ಪಟ್ಟು ಸಡಿಲಿಸಲಿಲ್ಲ. 'ಲಕ್ಷದ್ವೀಪ ತನ್ನದೇ ಎಂದು ಪಾಕ್ ಸರ್ಕಾರ ಹೇಳಿಲ್ಲ. ಹೀಗಿರುವಾಗ ಅದು ನಿಮ್ಮದಾ ಅಥವಾ ನಮ್ಮದಾ ಎಂದು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಅವರೊಂದಿಗೆ ಈ ವಿಷಯವಾಗಿ ಮಾತುಕತೆ ನಡೆಸುವ ಪ್ರಶ್ನೆಯೂ ಏಳುವುದಿಲ್ಲ. ವಿಳಂಬ ಮಾಡಿದರೆ ಲಕ್ಷದ್ವೀಪ ನಮ್ಮ ಕೈ ತಪ್ಪಿ ಹೋಗುವ ಸಾಧ್ಯತೆಯಿದೆ. ಇಲ್ಲದ ವಿವಾದಕ್ಕೆ ನಾವೇ ಆಸ್ಪದ ನೀಡಿದಂತಾಯಿತು. ಅಲ್ಲದೇ ಲಕ್ಷದ್ವೀಪ ಭೌಗೋಳಿಕವಾಗಿ, ಭಾವನಾತ್ಮಕವಾಗಿ ಭಾರತಕ್ಕೆ ಹತ್ತಿರದಲ್ಲಿದೆ. ನಾವು ನಮ್ಮ ನಿಯಂತ್ರಣವನ್ನು ಸಾಧಿಸಿದರೆ, ಪಾಕ್ ಮುಂದಕ್ಕೆ ಬರಲು ಉತ್ಸುಕವಾಗಲಾರದು. ಈ ವಿಷಯದಲ್ಲಿ ತಡ ಮಾಡುವ ಪ್ರಶ್ನೆಯೇ ಇಲ್ಲ' ಎಂದು ಪಟೇಲ್ ತಮ್ಮ ವಾದವನ್ನು ಪ್ರಬಲವಾಗಿ ಪ್ರತಿಪಾದಿಸಿದರು.
ಆದರೆ ನೆಹರು ಅವರಿಗೆ ಸಂಪೂರ್ಣ ಸಮಾಧಾನವಿರಲಿಲ್ಲ. ಪಟೇಲ್ರನ್ನು ತಡೆಯುವ ಎಲ್ಲ ಕ್ರಮಗಳನ್ನು ಕೈಗೊಂಡರು. ಆದರೆ ಪಟೇಲ್ ಯಾರ ವಾದವನ್ನೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಾಗೆಂದು ಅವರನ್ನು ಕೈ ಕಟ್ಟಿ ಹಾಕುವುದು ಸಾಧ್ಯವೂ ಇರಲಿಲ್ಲ. ಕಾರಣ ಅವರ ವಾದದಲ್ಲಿ ಹುರುಳಿತ್ತು. ಈ ವಿಷಯದಲ್ಲಿ ಮಹಾತ್ಮ ಗಾಂಧಿ ಮಾತ್ರ ಪಟೇಲ್ರನ್ನು ಸುಮ್ಮನಾಗಿಸಬಹುದಿತ್ತು. ಪಟೇಲರು ಗಾಂಧೀಜಿ ಬಳಿ ನ್ಯಾಯ ಕೇಳಲು ಹೋಗಲಿಲ್ಲ. ಗಾಂಧೀಜಿ ಸಹ ಸ್ವಯಂ ಮಧ್ಯ ಪ್ರವೇಶಿಸಲಿಲ್ಲ. ಯಾಕೆಂದರೆ ಪಟೇಲ್ ಕೈಗೊಂಡ ನಿರ್ಧಾರ ಸರಿಯಾದುದೆಂದು ಅವರು ಭಾವಿಸಿದ್ದರು.
ಈ ಮಧ್ಯೆ, ಪಟೇಲರು ಭಾರತೀಯ  ನೌಕಾಪಡೆಯ ಹಡಗುಗಳನ್ನು (ರಾಯಲ್ ಇಂಡಿಯನ್ ನೇವಿ) ಲಕ್ಷದ್ವೀಪಕ್ಕೆ ತೆರಳುವಂತೆ ತುರ್ತು ಆದೇಶ ನೀಡಿದರು. ಭಾರತೀಯ ನೌಕಾಪಡೆಯ ಸೈನಿಕರು ಅಲ್ಲಿಗೆ ತೆರಳಿದವರೇ, ಇಡೀ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಎಲ್ಲೆಡೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದರು.
ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ನೌಕಾಪಡೆಯ ಹಡಗುಗಳು ಸಹ ಲಕ್ಷದ್ವೀಪದತ್ತ ಆಗಮಿಸಲಾರಂಭಿಸಿತು. ಭಾರತದ ಹಡಗು, ರಾಷ್ಟ್ರಧ್ವಜವನ್ನು ಕಾಣುತ್ತಲೇ ಪಾಕ್ ನೌಕೆಗಳು ವಾಪಸ್ ಕರಾಚಿಗೆ ತೆರಳಿದವು.
ಒಂದು ದಿನ ತಡ ಮಾಡಿದ್ದರೆ, ಲಕ್ಷದ್ವೀಪ ಕೈ ತಪ್ಪಿ ಹೋಗುತ್ತಿತ್ತು. ಮರಳಿ ಪಡೆಯಲು ಮಾತುಕತೆ, ಯುದ್ಧ, ರಕ್ತಪಾತ... ಹೀಗೆಲ್ಲ ಹರಸಾಹಸ ಮಾಡಬೇಕಿತ್ತು. ಅದು ಮತ್ತೊಂದು ಕಾಶ್ಮೀರ ಸಮಸ್ಯೆಯಾಗುತ್ತಿತ್ತೋ ಏನೋ? ಗೊತ್ತಿಲ್ಲ. ಆದರೆ ಪಟೇಲರ ದಿಟ್ಟ, ತುರ್ತು ಕ್ರಮದಿಂದ ಅದು ನಮ್ಮದಾಯಿತು. ಆನಂತರ ಇದರ ಸಂಪೂರ್ಣ ಲಾಭವನ್ನು ತಾವು ತೆಗೆದುಕೊಳ್ಳಲು ನೆಹರು ಪ್ರಯತ್ನಿಸಿದ್ದು ಬೇರೆ ಕತೆ.
----------------------
ಸ್ವಾತಂತ್ರ್ಯಾನಂತರ ಭಾರತ ಸರ್ಕಾರದ ಮುಂದೆ ಬಲವಾದ ಸವಾಲಿತ್ತು. 862 ರಾಜ-ಮಹಾರಾಜರು, ಸಾಮಂತರ ಆಳ್ವಿಕೆಯಲ್ಲಿದ್ದ ಪ್ರದೇಶಗಳನ್ನು ಮುಖ್ಯವಾಹಿನಿಗೆ ತಂದು ರಾಜ್ಯಗಳನ್ನು ಪುನರ್ ವಿಂಗಡಣೆ ಮಾಡುವ ಕಾರ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲೇ ಆರಂಭವಾದ ಈ ಕಾರ್ಯ ಕಾರಣಾಂತರಗಳಿಂದ ಕುಂಟುತ್ತಾ ಸಾಗುತ್ತಿತ್ತು. ರಾಜರ ಹಿಡಿತದಲ್ಲಿರುವ ಪ್ರದೇಶಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ರಾಜ್ಯವನ್ನು ಪುನಾರಚಿಸುವ ಕೆಲಸವನ್ನು ಪಟೇಲ್ ಅವರಿಗೆ ವಹಿಸಲಾಯಿತು. ಸ್ವತಃ ಗಾಂಧೀಜಿಯೇ ಈ ಮಹತ್ತರ ಜವಾಬ್ದಾರಿಯನ್ನು ಪಟೇಲ್ ಕೊರಳಿಗೆ ಹೊದಿಸಿದರು.
ಪಟೇಲ್ ಕಾರ್ಯಪ್ರವೃತ್ತರಾದರು. ಒಬ್ಬೊಬ್ಬ ರಾಜರನ್ನು ಭೇಟಿ ಮಾಡಿ, ಅವರನ್ನು ಮನವೊಲಿಸಲು ಆರಂಭಿಸಿದರು. ದೇಶಾದ್ಯಂತ ಮಿಂಚಿನಂತೆ ಸಂಚರಿಸಿದರು. ಜನರನ್ನುದ್ದೇಶಿಸಿ ಸಭೆಗಳಲ್ಲಿ ಮಾತಾಡಿ ಅವರ ವಿಶ್ವಾಸ ಗಳಿಸಲಾರಂಭಿಸಿದರು. ಈ ಎಲ್ಲ ಸಭೆ, ಸಮಾರಂಭ ಹಾಗೂ ಆಪ್ತಸಮಾಲೋಚನೆಯಲ್ಲಿ ಪಟೇಲ್ ಮುಖ್ಯವಾಗಿ ಪ್ರತಿಪಾದಿಸುತ್ತಿದ್ದ ಸಂಗತಿಯೆಂದರೆ ದೇಶದ ಸೌರ್ವಭೌಮತ್ವ ಹಾಗೂ ದೇಶಭಕ್ತಿ. 1947ರ ಆಗಸ್ಟ್ 15ರೊಳಗೆ ತಮ್ಮ ನಿಯಂತ್ರಣದಲ್ಲಿರುವ ರಾಜ್ಯವನ್ನು ವಿಸರ್ಜಿಸದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟರು.
ಪಟೇಲರ ಮಾತಿಗೆ, ಒತ್ತಡ ತಂತ್ರಕ್ಕೆ ಎಲ್ಲ ರಾಜ-ಮಹಾರಾಜರು ಮನಸ್ಸಿಲ್ಲದ ಮನಸ್ಸಿಂದಲೋ, ತುಂಬು ಹೃದಯದಿಂದಲೋ, ಅಂತೂ ಒಪ್ಪಿಕೊಂಡರು, ಜಮ್ಮು-ಕಾಶ್ಮೀರ, ಜುನಾಗಢ ಹಾಗೂ ಹೈದರಾಬಾದ್ನ ನವಾಬರ ಹೊರತಾಗಿ! ಈ ಮೂವರು ಪಟೇಲ್ರಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ತಾವು ಮಾತ್ರ ಭಾರತ ಒಕ್ಕೂಟದಲ್ಲಿ ಸೇರುವುದಿಲ್ಲ ಎಂದು ಸೆಡ್ಡು ಹೊಡೆದರು. ಈ ನವಾಬರುಗಳಿಗೆ ಮುಸ್ಲಿಂ ಲೀಗ್ನ ಬೆಂಬಲವಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ನಡುವೆ ಮುಸ್ಲಿಂಲೀಗ್ನ ಕೋಮು ಆಧರಿತ ದೇಶ ವಿಭಜನೆಯ ಬೇಡಿಕೆ ರಕ್ತದ ಓಕುಳಿಯನ್ನೇ ಹರಿಸಿತು.
ಜುನಾಗಢ ನವಾಬ ಯಾವಾಗ ಪ್ರತಿರೋಧ ವ್ಯಕ್ತಪಡಿಸಿದನೋ, ಇದನ್ನು ಪಟೇಲ್ ಗಂಭೀರವಾಗಿ ಪರಿಗಣಿಸಿದರು. ಕಾರಣ ಜುನಾಗಢ ಅವರ ತವರು ರಾಜ್ಯವಾದ ಗುಜರಾತಿನಲ್ಲಿದ್ದುದರಿಂದ ಅವರು ಪ್ರತಿಷ್ಠೆಯ ವಿಷಯವನ್ನಾಗಿ ಸ್ವೀಕರಿಸಿದರು. ಸೌರಾಷ್ಟ್ರ ವಲಯದಲ್ಲಿರುವ ಸಂಪದ್ಭರಿತ ಜುನಾಗಢದ ವ್ಯಾಪ್ತಿಯಲ್ಲಿ ಐತಿಹಾಸಿಕ ಸೋಮನಾಥ ದೇವಾಲಯ (ಘಜ್ನಿ ಮಹಮ್ಮದ್ನಿಂದ ಹದಿನೇಳು ಬಾರಿ ಆಕ್ರಮಣ, ಕೊಳ್ಳೆಗೆ ಗುರಿಯಾದ ದೇಗುಲ)ವಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು. ವಿಚಿತ್ರವೆಂದರೆ ಜುನಾಗಢದ ಜನಸಂಖ್ಯೆಯಲ್ಲಿ ಶೇ. 80ರಷ್ಟು ಹಿಂದುಗಳಿದ್ದರು. ಆದರೆ ಅದರ ನವಾಬ ಮಾತ್ರ ಮುಸ್ಲಿಂ!
ಈ ಮಧ್ಯೆ, ಜುನಾಗಢದ ನವಾಬ, 'ನಮ್ಮ ರಾಜ್ಯ ಪಾಕಿಸ್ತಾನಕ್ಕೆ ಸೇರ್ಪಡೆಯಾಗುತ್ತದೆ. ನಾವು ಭಾರತದೊಂದಿಗೆ ಇರುವುದಿಲ್ಲ' ಎಂದು ಘೋಷಿಸಿಬಿಟ್ಟ. ಈ ನಿರ್ಧಾರದಿಂದ ಅಲ್ಲಿನ ಹಿಂದುಗಳು ದಂಗೆ ಎದ್ದರು. ಅಲ್ಲಿಯ ಹಿರಿಯ ಕಾಂಗ್ರೆಸ್ಸಿಗ ಸಮಾಲ್ದಾಸ್ ಗಾಂಧಿ ನೇತೃತ್ವದಲ್ಲಿ ನವಾಬನ ಆಳ್ವಿಕೆ ವಿರುದ್ಧ ಪರ್ಯಾಯ ಸರ್ಕಾರ ರಚಿಸಲು ಪಟೇಲ್ ಬೆಂಬಲಿಸಿದರು. ಸ್ಥಳೀಯ ನಾಗರಿಕರ ಏಕತೆಯ ಹೋರಾಟದಿಂದ ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ನವಾಬನ ಪ್ರಯತ್ನ ನಿಷ್ಪಲವಾಯಿತು. ತನ್ನೆಲ್ಲ ಕುತಂತ್ರ ವಿಫಲವಾಗುತ್ತಲೇ ನವಾಬ ದಿಕ್ಕು ತೋಚದಂತಾದ. ಜುನಾಗಢದ ದಿವಾನ್ ಸರ್ ಶಾ ನವಾಜ ಭುಟ್ಟೋ (ಪಾಕ್ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ತಂದೆ) ಕುಮ್ಮಕ್ಕಿನಿಂದಾಗಿ ನವಾಬ ಈ ರೀತಿ ವರ್ತಿಸುತ್ತಿದ್ದ. ವಲ್ಲಭಬಾಯಿ ಪಟೇಲ್ ಯಾವಾಗ ಸೇನೆ ಹಾಗೂ ಪೊಲೀಸರನ್ನು ನುಗ್ಗಿಸಿದರೋ, ನವಾಬ ಹಾಗೂ ಭುಟ್ಟೋ ರಾತ್ರೋರಾತ್ರಿ ಕರಾಚಿಗೆ ಓಡಿ ಹೋದರು. ಪಟೇಲ್ ಸಮ್ಮುಖದಲ್ಲಿ ಸಮಾಲ್ದಾಸ್ ಗಾಂಧಿ 'ಜುನಾಗಢ ಭಾರತ ಗಣರಾಜ್ಯದಲ್ಲಿ ಲೀನವಾಗುತ್ತದೆ' ಎಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ, ಜುನಾಗಢದಲ್ಲಿ ಸೇರಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಪಟೇಲ್, 'ಹೈದರಾಬಾದ್ನ ನವಾಬ ಪಾಠ ಕಲಿಯದಿದ್ದರೆ, ಜುನಾಗಢದಲ್ಲಿ ನಡೆದಿದ್ದೇ ಅಲ್ಲೂ ನಡೆಯುತ್ತದೆ ಎಂಬುದನ್ನು ತಿಳಿಯಲಿ. ಜಮ್ಮು-ಕಾಶ್ಮೀರದ ನವಾಬನಿಗೂ ನಾನು ಪ್ರತ್ಯೇಕವಾಗಿ ಹೇಳುವುದಿಲ್ಲ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.
ಜುನಾಗಢದಲ್ಲಿದ್ದ ವಾತಾವರಣವೇ ಹೈದರಾಬಾದ್ನಲ್ಲಿತ್ತು. ಆಂಧ್ರ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳನ್ನು ಸೇರಿಸಿಕೊಂಡು ಹೈದರಾಬಾದ್ ರಾಜ್ಯ ಮಾಡಿಕೊಂಡಿದ್ದ ನಿಜಾಮ ಉಸ್ಮಾನ ಅಲಿಖಾನ್ ಸಹ ಭಾರತ ಒಕ್ಕೂಟಕ್ಕೆ ಸೇರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ. ನಿಜಾಮನಿಗೆ ನಿಷ್ಠರಾಗಿದ್ದ ಮುಸ್ಲಿಮರು (ರಜಾಕರರು) ಖಾಸಿಮ್ ರಜ್ವಿ ನೇತೃತ್ವದಲ್ಲಿ ದಂಗೆಯೆದ್ದಾಗ, ಅವರ ಹೋರಾಟವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲು ಪಟೇಲರು ತೀರ್ಮಾನಿಸಿದರು. ಪ್ರಧಾನಿ ನೆಹರು ಯುರೋಪಿನ ಪ್ರವಾಸದಲ್ಲಿದ್ದಾಗ, ಪಟೇಲರು ಹೈದರಾಬಾದ್ಗೆ ಸೇನೆಯನ್ನು ನುಗ್ಗಿಸಿದರು. ಸಾವಿರಾರರು ರಜಾಕಾರರು ಘರ್ಷಣೆಯಲ್ಲಿ ಹತರಾದರು. ನೆಹರು ಅವರಿಗೆ ಇದು ಇಷ್ಟವಿರಲಿಲ್ಲ. ಹಿಂದು-ಮುಸ್ಲಿಂ ಗಲಭೆ ಆಗಬಹುದೆಂದು ಅವರು ಹೆದರಿದ್ದರು. ಪಟೇಲರ ನಿರ್ದಾಕ್ಷಿಣ್ಯ ಹಾಗೂ ದಿಟ್ಟ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನೆಹರು, ಕ್ಯಾಬಿನೆಟ್ ಮೀಟಿಂಗ್ನಲ್ಲಿ ಎಲ್ಲ ಸಚಿವರುಗಳ ಸಮ್ಮುಖದಲ್ಲಿ ಕೆಂಡಾಮಂಡಲರಾಗಿ, ಪಟೇಲರನ್ನು ನಿಂದಿಸಿ ಅವಮಾನ ಮಾಡಿದರು. 'ಪಟೇಲ್, ನೀವೊಬ್ಬ ಕೋಮುವಾದಿ. ನಿಮ್ಮ ನಿರ್ಧಾರವನ್ನು ನಾನು ಸಮ್ಮತಿಸಲಾರೆ' ಎಂದು ಜೋರಾಗಿ ರೇಗಾಡಿದರು. ಇದರಿಂದ ವಿಚಲಿತರಾದಂತೆ ಕಂಡುಬಂದ ಪಟೇಲ್, ತಮ್ಮ ಮುಂದಿದ್ದ ಫೈಲುಗಳನ್ನು ಎತ್ತಿಕೊಂಡು ಕ್ಯಾಬಿನೆಟ್ ಮೀಟಿಂಗ್ನಿಂದ ಹೊರನಡೆದರು. ಹೀಗೆಂದು 1947ನೇ ಬ್ಯಾಚಿನ ಐಎಎಸ್ ಅಧಿಕಾರಿ ಎಂಕೆಕೆ ನಾಯರ್ With No Ill Feeling To Anybody ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಹೈದರಾಬಾದ್ ಭಾರತ ಗಣರಾಜ್ಯದಲ್ಲಿ ಸೇರದೇ ಪ್ರತ್ಯೇಕವಾಗಿ ಉಳಿದರೆ, ದೇಶದ ಸೌರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆಂಬುದು ಪಟೇಲರ ವಾದವಾಗಿತ್ತು. ಸರ್ಕಾರದ ಪ್ರತಿಷ್ಠೆಯ ಮುಂದೆ ನಿಜಾಮನ ಆಟವನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹಠ ಹಿಡಿದರು. ಪಟೇಲರು ಕಾರ್ಯ ನೆರವೇರುವ ತನಕ ಬಿಡಲಿಲ್ಲ. ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಮೂಲಕ ಪಟೇಲರನ್ನು ಸುಮ್ಮನಿರಿಸಲು ನೆಹರು ಪ್ರಯತ್ನಿಸಿದರು. ಪಟೇಲ್ ಜಪ್ಪಯ್ಯ ಅನ್ನಲ್ಲಿಲ್ಲ. ಪಟೇಲ್ ತಮ್ಮ ಮಾತು ಕೇಳುವುದಿಲ್ಲ ಎಂದು ನೆಹರು ಅನೇಕರ ಮುಂದೆ ಅಸಮಾಧಾನ ತೋಡಿಕೊಂಡರು. ದೇಶದ ಹಿತದೃಷ್ಟಿಯಿಂದ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಸ್ವತಃ ಪಟೇಲರೇ ನೆಹರುಗೆ ತಿಳಿಸಿ ಅವರ ಬಾಯಿ ಮುಚ್ಚಿಸಿದ್ದರು.
----------------------
ಜುನಾಗಢವನ್ನು ಭಾರತ ಸರ್ಕಾರ ವಶಪಡಿಸಿಕೊಂಡ ಬಳಿಕ, ಪಟೇಲರು ಸೌರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಅವರ ಜತೆಗೆ ಅಂದಿನ ಲೋಕೋಪಯೋಗಿ ಸಚಿವ ಎನ್.ವಿ. ಗಾಡ್ಗೀಳ್ ಸಹ ಇದ್ದರು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪಟೇಲರು ಐತಿಹಾಸಿಕ ಹಾಗೂ ದಿಟ್ಟ ಘೋಷಣೆಯನ್ನು ಮೊಳಗಿಸಿದರು-'ಸೋಮನಾಥ ದೇವಾಲಯವನ್ನು ಭಾರತ ಸರ್ಕಾರ ಮರು ನಿರ್ಮಿಸುತ್ತದೆ. ಅದು ಇದ್ದ ಸ್ಥಳದಲ್ಲೇ. ಅದು ಮೂಲದಲ್ಲಿ ಹೇಗಿತ್ತೋ ಆ ಸ್ಥಿತಿಯಲ್ಲಿ ನಿರ್ಮಿಸುತ್ತದೆ. ಅಲ್ಲದೇ ಜ್ಯೋತಿರ್ಲಿಂಗವನ್ನೂ ನಾವು ಪ್ರತಿಷ್ಠಾಪನೆ ಮಾಡುತ್ತೇವೆ.'
ಇದಕ್ಕೆ ನೆಹರು ಸಂಪುಟದಲ್ಲಿ ಸಚಿವರಾಗಿದ್ದ ಮೌಲಾನ ಅಬುಲ್ ಕಲಾಂ ಅಜಾದ್ ಅಸಮ್ಮತಿ ಸೂಚಿಸಿದರು. 'ಬೇಕಾದರೆ ಅದನ್ನು ಐತಿಹಾಸಿಕ ಸ್ಮಾರಕವಾಗಿ ಮಾಡಲಿ. ಆದರೆ ಮಂದಿರದ ಪುನರ್ ನಿರ್ಮಾಣಕ್ಕೆ ತಮ್ಮ ವಿರೋಧವಿದೆ' ಎಂದು ಅಜಾದ್ ಹೇಳಿದರು. ಆದರೆ ಈ ವಿಚಾರದಲ್ಲಿ ಪಟೇಲ್ ನಿಲುವು ಸ್ಪಷ್ಟವಾಗಿತ್ತು. 'ಸೋಮನಾಥ ಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ, ಹಿಂದೂಗಳ ಕನಸು. ಮರುನಿರ್ಮಾಣ ಬಿಟ್ಟು ಬೇರೇನೇ ಮಾಡಿದರೂ ಹಿಂದುಗಳು ಸಂತುಷ್ಟರಾಗಲಾರರು. ದೇಗುಲವನ್ನು ಪುನಾರಚಿಸಿ ಜ್ಯೋತಿರ್ಲಿಂಗವನ್ನು ಪ್ರತಿಷ್ಠಾಪಿಸುವುದೊಂದೇ ಹಿಂದುಗಳ ಭಾವನೆಯನ್ನು ಗೌರವಿಸಲು ನಮಗೆ ಉಳಿದಿರುವ ಏಕೈಕ ದಾರಿ' ಎಂದು ಪಟೇಲ್ ಖಡಾಖಡಿ ಹೇಳಿದರು.
ಪಟೇಲರ ಪ್ರತಿಪಾದನೆ ಎಷ್ಟು ತೀಕ್ಷ್ಣ ಹಾಗೂ ಪರಿಣಾಮಕಾರಿಯಾಗಿತ್ತೆಂದರೆ ಸಚಿವ ಸಂಪುಟ ಸೋಮನಾಥ ಮಂದಿರ ಮರು ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತು. ಈ ಪ್ರಸ್ತಾವನೆಗೆ ಸ್ವತಃ ಗಾಂಧೀಜಿ ಸಮ್ಮತಿಯಿತ್ತು. ಆದರೆ ಈ ಯೋಜನೆಗೆ ತಗುಲುವ ವೆಚ್ಚವನ್ನು ಸಾರ್ವಜನಿಕರಿಂದ ಸಂಗ್ರಹಿಸಬೇಕೆಂದು ಸೂಚಿಸಿದರು.
ಆದರೆ ಈ ಯೋಜನೆಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಿತ್ತು. ನೆಹರು ಅವರು ಈ ಯೋಜನೆಗೆ ಪರೋಕ್ಷವಾಗಿ ಒಂದಿಲ್ಲೊಂದು ತೊಡರನ್ನು ಸೃಷ್ಟಿಸುತ್ತಿದ್ದರು. ಆದರೆ ಪಟೇಲ್ ಅದನ್ನು ನಿವಾರಿಸುತ್ತಿದ್ದರು. ಈ ಕಾರ್ಯ ನೆರವೇರದಂತೆ ನೆಹರು ಅಡ್ಡಿಪಡಿಸುವ ಸಂಗತಿ ಪಟೇಲ್ಗೆ ಚೆನ್ನಾಗಿ ತಿಳಿದಿತ್ತು. ಮಂದಿರ ನಿರ್ಮಾಣ ಉಸ್ತುವಾರಿಗಾಗಿ ಒಂದು ಸಮಿತಿ ರಚಿಸಿ ಅದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಅಂದಿನ ಆಹಾರ ಮತ್ತು ಕೃಷಿ ಸಚಿವ ಕೆ.ಎಂ. ಮುನ್ಶಿ ಅವರನ್ನು ಕರೆದು, ಮಂದಿರ ಮರು ನಿರ್ಮಾಣ ಯೋಜನೆಯ ಪ್ರಗತಿ ಪರಿಶೀಲಿಸಿದ ಬಳಿಕ ತಮ್ಮ ಅಸಮ್ಮತಿ ವ್ಯಕ್ತಪಡಿಸುತ್ತಿದ್ದರು. 'ಈ ಯೋಜನೆಗೆ ನನ್ನ ವಿರೋಧವಿದೆ. ಇದು ಕೇವಲ ಹಿಂದುಗಳ ಭಾವನಾತ್ಮಕ ವಿಷಯ. ಇದರಿಂದ ಮುಸ್ಲಿಮರು ಬೇಸರಗೊಳ್ಳುತ್ತಾರೆ' ಎಂದು ಗೊಣಗುತ್ತಿದ್ದರು.
ಈ ಮಧ್ಯೆ 1950ರ ಡಿಸೆಂಬರ್ 15ರಂದು ಪಟೇಲ್ರು ನಿಧನರಾದರು. ಆನಂತರ ನೆಹರು ಬಹಿರಂಗವಾಗಿ ಈ ಯೋಜನೆಯನ್ನು ಹಳ್ಳ ಹಿಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಪಟೇಲರಿಂದ ಪ್ರೇರಣೆ ಪಡೆದ ಮುನ್ಶಿ ಹಿಂದಕ್ಕೆ ಸರಿಯಲಿಲ್ಲ. ಹೆಜ್ಜೆ ಹೆಜ್ಜೆಗೆ ವಿರೋಧ ಬಂತು. ಮಂದಿರ ಹೊಸ ಸ್ವರೂಪದಲ್ಲಿ ಎದ್ದು ನಿಂತಾಗ, ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಉದ್ಘಾಟಿಸಲು ಮುಂದಾದಾಗಲೂ ನೆಹರು ವಿರೋಧಿಸಿದರು.
ಪಟೇಲರು ಇದ್ದಿದ್ದರೆ ಈ ಯೋಜನೆ ಇನ್ನಷ್ಟು ಶೀಘ್ರವಾಗಿ ಮುಗಿಯುತ್ತಿತ್ತು. ಆದರೆ ಅವರ ಧೀಶಕ್ತಿ, ಛಲ, ಹಠ, ಪ್ರೇರಣೆ, ಹೋರಾಟ ಪರಿಶ್ರಮದ ಫಲವಾಗಿ ಸೋಮನಾಥ ಮಂದಿರ ಭವ್ಯವಾಗಿ ತಲೆಯೆತ್ತಿತು.

ಕಾಶ್ಮೀರ ಸಮಸ್ಯೆಯನ್ನು ನೆಹರು ನಿಭಾಯಿಸುತ್ತಿರುವ ರೀತಿ ನೋಡಿ ಪಟೇಲ್ರು ರೋಸಿ ಹೋಗಿದ್ದರು. ಕಾಶ್ಮೀರ ಸಮಸ್ಯೆ ಪರಿಹರಿಸುವ ಕೆಲಸವನ್ನು ವಿಶ್ವ ಸಂಸ್ಥೆಗೆ ಕೊಟ್ಟು ನಾವು ನಮ್ಮ ಕೈಗಳನ್ನು ಕಟ್ಟಿಕೊಂಡಂತಾಗಿದೆ ಎಂದು ಬಹಿರಂಗವಾಗಿ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ವಿಶ್ವಸಂಸ್ಥೆ ಮುಂದಿರುವ ಈ ಸಮಸ್ಯೆಯನ್ನು ಹೊರತಂದು ನಾವೇ ಇದನ್ನು ಪರಿಹರಿಸಿಕೊಳ್ಳೋಣ ಎಂದು ಪಟೇಲರು ಹೇಳಿದರೂ ನೆಹರು ಕೇಳಲಿಲ್ಲ. ಒಂದು ವೇಳೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಪಟೇಲರಿಗೆ ವಹಿಸಿದ್ದೇ ಆದಲ್ಲಿ ಅದು ಏನಾಗುತ್ತಿತ್ತೋ ಎಂಬುದನ್ನು ಊಹಿಸುವುದು ಕಷ್ಟ. ಆದರೆ ನಾವು ಇವತ್ತಿನ ತನಕ ಬೆಲೆ ತೆರುತ್ತಿದ್ದೇವಲ್ಲ. ಅಂಥ ಸ್ಥಿತಿ ಮಾತ್ರ ಖಂಡಿತವಾಗಿಯೂ ಬರುತ್ತಿರಲಿಲ್ಲ.
----------------------
ಇಂದು ವಲ್ಲಭಬಾಯಿ ಪಟೇಲರ 138ನೇ ಜನ್ಮದಿನ ಎಂದಾಗ ಈ ಎಲ್ಲ ಘಟನೆಗಳು ಏಕೋ ನೆನಪಾದವು. ನ್ಯಾಯಸಮ್ಮತವಾಗಿ ಪಟೇಲರೇ ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು. ಹನ್ನೊಂದು ರಾಜ್ಯಗಳ ಕಾಂಗ್ರೆಸ್ ಘಟಕಗಳು ಪಟೇಲರೇ ಪ್ರಧಾನಿಯಾಗಲಿ ಎಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದವು, ಪಕ್ಷದ ಅಧ್ಯಕ್ಷರೇ ಪ್ರಧಾನಿಯಾಗುತ್ತಾರೆಂಬ ನಂಬಿಕೆಯಿಂದ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾತ್ರ ನೆಹರುರನ್ನು ಬೆಂಬಲಿಸಿತು. ಪಟೇಲ್ ಪ್ರಧಾನಿಯಾದರೆ ಅವರಿಗೆ ಎರಡನೆಯವರಾಗಿ ನೆಹರು ಅವರು ಕೆಲಸ ಮಾಡಲು ಒಪ್ಪಲಿಕ್ಕಿಲ್ಲವೆಂದು ಅರಿತ ಗಾಂಧೀಜಿ, ಪಟೇಲರನ್ನು ಮನವೊಲಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಿದರು. ಅದಕ್ಕೆ ಪಟೇಲ್ ಸಮ್ಮತಿಸಿದರು. ನೆಹರು ಪ್ರಧಾನಿಯಾದರು. ಒಂದು ವೇಳೆ ಪಟೇಲರೇ ಅಂದು ಪ್ರಧಾನಿಯಾಗಿದ್ದಿದ್ದರೆ? ಒಮ್ಮೆ ಕಲ್ಪಿಸಿಕೊಳ್ಳಿ.
ಮೊನ್ನೆ ಅಹಮದಾಬಾದ್ನಲ್ಲಿ ವಲ್ಲಭಬಾಯಿ ಪಟೇಲ್ ಸ್ಮಾರಕ ಮ್ಯೂಸಿಯಂ ಉದ್ಘಾಟನೆಯಲ್ಲಿ ಭಾಗವಹಿಸಿದ ಪ್ರಧಾನಿ ಡಾ. ಮನಮೋಹನಸಿಂಗ್ ಅವರ ಮಾತುಗಳನ್ನು ನೀವು ಕೇಳಿರಬಹುದು. ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, 'ನೆಹರು ಬದಲು ಪಟೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರೆ ಈ ದೇಶದ ಪರಿಸ್ಥಿತಿಯೇ ಬದಲಾಗುತ್ತಿತ್ತು' ಎಂದಾಗ ಚಡಪಡಿಸಿಕೊಂಡ ಡಾ. ಸಿಂಗ್, ಆನಂತರ ತಮ್ಮ ಮಾತಿನಲ್ಲಿ 'ನೆಹರು-ಪಟೇಲ್ ನಡುವೆ ಉತ್ತಮ ಸಂಬಂಧವಿತ್ತು. ಪಟೇಲ್ ಅಪ್ಪಟ ಕಾಂಗ್ರೆಸ್ಸಿಗರಾಗಿದ್ದರು. ಅವರು ಜಾತ್ಯತೀತವಾದಿಗಳಾಗಿದ್ದರು. ಇಂಥ ಮಹಾನ್ ನಾಯಕ ಇದ್ದ ಪಕ್ಷದಲ್ಲಿಯೇ ನಾನೂ ಇರುವುದು ಹೆಮ್ಮೆ' ಎಂದರು.
ಎಂಥಾ ಮಾತು?
ಕಾಂಗ್ರೆಸ್ಸಿಗರಿಗೆ, ಪಟೇಲರು ನೆನಪಾಗಿದ್ದೇ ದೊಡ್ಡದು. ಪಾಪ, ಪಟೇಲರು ಮಾಡಿದ ಪುಣ್ಯವಿರಬೇಕು, ಅವರ ಪಕ್ಷದ ಪ್ರಧಾನಿ ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಯಾವ ವೇದಿಕೆಯಲ್ಲಾಗಲಿ, ಜಾಹೀರಾತಿನಲ್ಲಾಗಲಿ, ಪೋಸ್ಟರಿನಲ್ಲಾಗಲಿ ಪಟೇಲರ ಭಾವಚಿತ್ರವನ್ನೂ ತೋರಿಸುವುದಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಅವರ ಭಾವಚಿತ್ರವನ್ನು ಹಾಕಬೇಕೇ ಬೇಡವೇ ಎಂದು ಚರ್ಚೆಯಾಗಿ, ಕೊನೆಗೆ ಬೇಡವೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಿತ್ತು. ನೆಹರುಗೆ ಪ್ರತಿಸ್ಪರ್ಧಿಯಾಗಿದ್ದರು, ಅವರ ನಿಲುವುಗಳನ್ನು ವಿರೋಧಿಸುತ್ತಿದ್ದರು ಎಂದ ಮೇಲೆ ಗಾಂಧಿ ಮನೆತನದ 'ಕೈ' ವಶವಾಗಿರುವ ಕಾಂಗ್ರೆಸ್ನಲ್ಲಿ ಪಟೇಲ್ಗೆ ಸ್ಥಾನಮಾನ ಸಿಗುವುದಾದರೂ ಹೇಗೆ? ಹೀಗಾಗಿ ಅವರು ಅಂದಿನಿಂದಲೂ ಅವರ ಪಕ್ಷದಲ್ಲಿಯೇ ಅನಾದರ, ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದ್ದಾರೆ. ಇಂತಿರುವಾಗ ಡಾ. ಮನಮೋಹನಸಿಂಗ್ ಮೊನ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಹೆಚ್ಚು.
ಅಕ್ಟೋಬರ್ 31 ಬಂದರೆ ಕಾಂಗ್ರೆಸ್ ಸರ್ಕಾರ ಸಾಲುಸಾಲು ಜಾಹೀರಾತುಗಳನ್ನು ದೇಶದೆಲ್ಲೆಡೆ ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತದೆ. ಯಾಕೆಂದರೆ ಅಂದು ಇಂದಿರಾಗಾಂಧಿ ಪುಣ್ಯತಿಥಿ. ಅಂದು ಸರ್ದಾರ ಪಟೇಲರ ಪುಣ್ಯ ಜಯಂತಿಯೂ ಹೌದು. ನೆಪಮಾತ್ರಕ್ಕೆ ಕಿರುಬೆರಳು ಗಾತ್ರದ ಜಾಹೀರಾತು ಪ್ರಕಟವಾದರೆ ಅದೇ ದೊಡ್ಡದು. ಮೊನ್ನೆ ಆಗಸ್ಟ್ 20ರಂದು ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಜನ್ಮದಿನದಂದು ಯುಪಿಎ ಸರ್ಕಾರ ಬಿಡುಗಡೆ ಮಾಡಿದ ಜಾಹೀರಾತು ಎಷ್ಟು ಗೊತ್ತಾ? ಬರೋಬ್ಬರಿ 48. ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳೂ ತಾ ಮುಂದು ನಾ ಮುಂದು ಎಂದು ಜಾಹೀರಾತು ಬಿಡುಗಡೆ ಮಾಡಿ ಸೋನಿಯಾ ಗಾಂಧಿಯವರನ್ನು ಖುಷಿ ಪಡಿಸಿದರು. ನೆಹರು, ಇಂದಿರಾಗಾಂಧಿ, ರಾಜೀವ ಗಾಂಧಿ ಮಾಡಿದ 'ದೇಶ ಸೇವೆ' ಮುಂದೆ ಸರ್ದಾರ ಪಟೇಲರು ಯಾವ ಮರದ ತೊಪ್ಪಲು?
ಹಾಗಂತ ಕಾಂಗ್ರೆಸ್ ಪಕ್ಷ ಭಾವಿಸಿದೆ.
ಇಲ್ಲದಿದ್ದರೆ ರಾಜೀವ್ಗಾಂಧಿಯವರಿಗೆ 'ಭಾರತ ರತ್ನ' ನೀಡಿದ ನಂತರ, ಪಟೇಲ್ರಿಗೆ ಆ ಪ್ರಶಸ್ತಿ ನೀಡುತ್ತಿತ್ತಾ? ರಾಜೀವ್ ತೀರಿಕೊಂಡ ಎರಡು ವರ್ಷಗಳ ಬಳಿಕ ಅವರಿಗೆ ಭಾರತ ರತ್ನ ಬಂದರೆ, ಪಟೇಲ್ರು ನಿಧನವಾಗಿ ನಲವತ್ತೊಂದು ವರ್ಷಗಳ ನಂತರ ಅವರಿಗೆ ಇದನ್ನು ಕೊಡಲಾಯಿತು.
ಮೊನ್ನೆ ಪ್ರಧಾನಿ ಕಾರ್ಯಕ್ರಮಕ್ಕೆ ಹೋಗಿದ್ದು ಪಟೇಲರ ಮೇಲಿನ ಗೌರವ, ಪ್ರೇಮಕ್ಕಿಂತ ನರೇಂದ್ರ ಮೋದಿ ಪಟೇಲರ ನೆನಪಿನ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ಕಾರಣವಾಗಿದ್ದಿರಬಹುದು. ಅದೇನೇ ಇರಲಿ, 'ಉಕ್ಕಿನ ಮನುಷ್ಯ'ನ ಜನ್ಮದಿನದಂದು ಗೌರವ, ಆದರಗಳನ್ನುಕ್ಕಿಸಿ ಅವರಿಗೆ ನಮನಗಳನ್ನು ಸಲ್ಲಿಸೋಣ.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com