ಪ್ರಧಾನಿಯವರ ಜತೆ ಇಪ್ಪತ್ತು ನಿಮಿಷಗಳು!

ಪ್ರಧಾನಿ ಡಾ. ಮನಮೋಹನಸಿಂಗ್ ಅವರು ಕೊನೆಗೂ ಮಾತಿಗೆ ಸಿಕ್ಕರು...
Updated on: 

-ಹಿಂದಿನ ರಾಷ್ಟ್ರಪತಿ ಡಾ. ಅಬ್ದುಲ್‌ಕಲಾಂ ಅವರ ಜತೆ ಪ್ರವಾಸ ಹೋಗಿ ಬಂದ ಬಳಿಕ 'ರಾಷ್ಟ್ರಪತಿ ಜತೆಗೆ ಹದಿನಾಲ್ಕು ದಿನಗಳು' ಎಂಬ ಪುಸ್ತಕ ಬರೆದಿದ್ದೆ  ಡಾ. ಮನಮೋಹನ್ ಸಿಂಗ್ ಜತೆಗಿನ ಈ ಪ್ರವಾಸ ಕುರಿತ ಪುಸ್ತಕ ಬರೆದರೆ ಎಲ್ಲ ಪುಟಗಳನ್ನು ಖಾಲಿಬಿಡಬೇಕಾದೀತು!

ಪ್ರಧಾನಿ ಡಾ. ಮನಮೋಹನಸಿಂಗ್ ಅವರು ಕೊನೆಗೂ ಮಾತಿಗೆ ಸಿಕ್ಕರು.  ಸೇಂಟ್ ಪೀಟರ್ಸ್‌ಬರ್ಗ್‌ಗೆ ಹೋಗುವಾಗ ಭೇಟಿಯಾಗಬಹುದೆಂದು ಪತ್ರಕರ್ತರು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಯವರು ಪತ್ರಕರ್ತರತ್ತ ಸುಳಿಯಲಿಲ್ಲ. ವಾಪಸ್ ಬರುವಾಗ ಮಾತಾಡುತ್ತಾರೆ ಎಂದು ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರು ತಿಳಿಸಿದರು.
ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಸ್ವದೇಶಕ್ಕೆ ಮರಳುವಾಗ ವಿಮಾನ ಟೇಕಾಫ್ ಆಗುತ್ತಿದ್ದಂತೆ ವಕ್ತಾರರು ಬಂದು ಪ್ರಧಾನಿಯವರು ಮಾತಾಡಲು ಒಪ್ಪಿದ್ದಾರೆಂದು ತಿಳಿಸಿದರು. ಅದೇ ಸಂದರ್ಭದಲ್ಲಿ ಅವರು ಕೆಲವು ನಿಯಮಗಳನ್ನು ಪಾಲಿಸಬೇಕೆಂಬುದನ್ನು ಹೇಳಲು ಮರೆಯಲಿಲ್ಲ.
 'ಪ್ರಧಾನಿಯವರು ಮೊದಲು ಮೂರ್ನಾಲ್ಕು ನಿಮಿಷ ಪ್ರಾಸ್ತಾವಿಕವಾಗಿ ಮಾತಾಡುತ್ತಾರೆ. ಆನಂತರ ಪ್ರಶ್ನೆಗಳನ್ನು ಕೇಳಬಹುದು. ಎಂಟಕ್ಕಿಂತ ಹೆಚ್ಚು ಪ್ರಶ್ನೆ ಕೇಳಲು ಅವಕಾಶ ಇಲ್ಲ. ಕೇಳಿದ ಪ್ರಶ್ನೆಗೆ ಉಪಪ್ರಶ್ನೆಗಳನ್ನು ಕೇಳುವಂತಿಲ್ಲ. ಮೊದಲು ಜಿ-20 ಶೃಂಗಸಭೆ, ಎರಡನೆಯದಾಗಿ ಅಂತಾರಾಷ್ಟ್ರೀಯ ವಿಷಯ ಹಾಗೂ ಮೂರನೆಯದಾಗಿ ದೇಶಿಯ ವಿದ್ಯಮಾನಗಳನ್ನು ಕುರಿತು ಪ್ರಶ್ನೆಗಳಿರಲಿ.ದೀರ್ಘ ಪ್ರಶ್ನೆಗಳು ಬೇಡ. ಆದಷ್ಟು ಚುಟುಕಾಗಿರಲಿ.' ಎಂದು ಕಿವಿಮಾತು, ಬಿನ್ನಹ ಎರಡನ್ನೂ ಹೇಳಿದರು.
ಪ್ರಧಾನಿಯವರು ಬಂದರು. ಪತ್ರಕರ್ತರು ಇರುವಲ್ಲಿಗೇ ಬಂದು ಎಲ್ಲರಿಗೂ ಹಸ್ತಲಾಘವ ಮಾಡಿ ತಮ್ಮ ಆಸನದಲ್ಲಿ ಕುಳಿತುಕೊಂಡು ಎರಡು ನಿಮಿಷ ಆರಂಭಿಕ ನುಡಿಗಳನ್ನು ಹೇಳಿ ಸುಮ್ಮನಾದರು. ಪ್ರಶ್ನೆಗಳನ್ನು ಕೇಳಬಹುದು ಎಂದರು ವಕ್ತಾರರು.
ಪ್ರಶ್ನೆಗಳಲ್ಲಿ ಅಂಥ ಹರಿತವಿರಲಿಲ್ಲ. ಕಾರಣ ಜಿ-20 ಶೃಂಗ, ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಏನೇ ಕೇಳಿದರೂ ಹರಿತವಾಗಿರಲು ಸಾಧ್ಯವಿಲ್ಲ ಎಂಬುದು ಪ್ರಧಾನಿಯವರೂ ಸೇರಿ ಎಲ್ಲರಿಗೂ ಗೊತ್ತಿತ್ತು. ಆರು ಪ್ರಶ್ನೆಗಳು ಈ ವಿಷಯವಾಗಿಯೂ ಖರ್ಚಾಗಿ ಹೋದವು. 'ಇನ್ನೇನಿದ್ದರೂ ಕೊನೆಯ ಎರಡು ಪ್ರಶ್ನೆಗಳು ಮಾತ್ರ' ಎಂದರು ವಕ್ತಾರರು.
2014ರ ಚುನಾವಣೆ ನಂತರವೂ ನೀವೇ ಪ್ರಧಾನಿಯಾಗಿ ಮುಂದುವರಿಯಲು ಬಯಸುತ್ತೀರಾ ಎಂದು ಕೇಳಿದಾಗ, 'ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ. ನಾನು ಅವರ ನೇತೃತ್ವದಡಿಯಲ್ಲಿ ಪಕ್ಷಕ್ಕಾಗಿ ದುಡಿಯಲು ಬಯಸುತ್ತೇನೆ' ಎಂದರು.
ಇನ್ನುಳಿದಿದ್ದು ಒಂದು ಪ್ರಶ್ನೆ. ಮುಂಗಾಲುಪುಟಿಕೆ ಬೆಂಗಾಲದ ಪರ್ತಕರ್ತನೊಬ್ಬ ಆತುರಾತುರದಲ್ಲಿ 'ಮಮತಾ ಜತೆ ಮೈತ್ರಿ ಮಾಡಿಕೊಳ್ತೀರಾ?' ಎಂದು ಕೇಳಿದ. ಅದಕ್ಕೆ ಅವರು ಎಂದಿನ ಮಾಮೂಲಿ ಉತ್ತರ ನೀಡಿದರು. ಪತ್ರಿಕಾಗೋಷ್ಠಿ ಮುಗಿಯಿತು ಎಂದರು, ಗೋಷ್ಠಿ ಶುರುವಾಗಿ ಇಪ್ಪತ್ತು ನಿಮಿಷಗಳಾಗಿದ್ದವು.
ಹಿಂದಿನ ರಾಷ್ಟ್ರಪತಿ ಡಾ. ಅಬ್ದುಲ್‌ಕಲಾಂ ಅವರ ಜತೆ ಪ್ರವಾಸ ಹೋಗಿ ಬಂದ ಬಳಿಕ 'ರಾಷ್ಟ್ರಪತಿ ಜತೆಗೆ ಹದಿನಾಲ್ಕು ದಿನಗಳು' ಎಂಬ ಪುಸ್ತಕ ಬರೆದಿದ್ದೆ  ಡಾ. ಮನಮೋಹನ್ ಸಿಂಗ್ ಜತೆಗಿನ ಈ ಪ್ರವಾಸ ಕುರಿತ ಪುಸ್ತಕ ಬರೆದರೆ ಎಲ್ಲ ಪುಟಗಳನ್ನು ಖಾಲಿಬಿಡಬೇಕಾದೀತು!  ಆ ಪುಸ್ತಕಕ್ಕೆ 'ಪ್ರಧಾನಿ ಜತೆ ಇಪ್ಪತ್ತು ನಿಮಿಷಗಳು' ಎಂಬ ಶೀರ್ಷಿಕೆ ನೀಡಬಹುದು.
ಮಾತಲ್ಲೇ ನಡೆಯಿತು ಶೀತಲ ಸಮರ!
ನಮ್ಮ ರಾಜಕೀಯ ನಾಯಕರು ತಮ್ಮ ವಿರೋಧಿಗಳನ್ನು ಟೀಕಿಸುವುದು, ಕೆಂಡ ಕಾರುವುದು ಸಾಮಾನ್ಯ. ಮೊನ್ನೆ ನಡೆದ ಲೋಕಸಭೆಯ ಎರಡು ಮರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಕಚ್ಚಾಡಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ರಾಜಕಾರಣಿಗಳ ಈ ವರ್ತನೆ ಹೊಸತೇನಲ್ಲ. ಮೊನ್ನೆ ಮೊನ್ನೆ ನಮ್ಮ ಪ್ರಧಾನಿ ಹಾಗೂ ಬಿಜೆಪಿ ಅರುಣ್ ಜೇಟ್ಲಿ ಸಹ ಸಂಸತ್ತಿನಲ್ಲಿ ತುಸು ಅತಿಯಾಯಿತು ಎಂಬಂತೆ ಜಗಳ ಮಾಡಿಕೊಂಡಿದ್ದನ್ನು ಸಹ ನೋಡಿದ್ದೇವೆ. ಸದಾ ಮೌನವಾಗಿರುವ ಪ್ರಧಾನಿ ಡಾ. ಮನಮೋಹನಸಿಂಗ್ ಸಹ ಅಂದು ಖಾರವಾಗಿಯೇ ಮಾತಾಡಿದರು. ನಮ್ಮ ರಾಜಕೀಯ ಅಂದ್ರೆ ಹೀಗೇ. ನಮ್ಮ ರಾಜಕಾರಣಿಗಳು ಪರಸ್ಪರ ಕಚ್ಚಾಡಿಕೊಂಡರೆ, ಅದರಲ್ಲೇನೂ ವಿಶೇಷವಿಲ್ಲ. ಜನರೂ ಸಹ ಅದನ್ನು ಬಹಳ ಗಂಭೀರವಾಗಿ ಪರಿಗಣಿಸುವುದಿಲ್ಲ. ಕೆಲವರಿಗಂತೂ ಅದು ಅಪ್ಪಟ ಮನರಂಜನೆ. ಟಿವಿ ಚಾನೆಲ್‌ಗಳಿಗೆ ಆ ದಿನದ 'ಆಹಾರ ಭದ್ರತೆ'! ಕೆಲವು ಅಂಕಣಕಾರರಿಗೆ ಅದು ಬರಹದ ಹೂರಣ. ನಮ್ಮ ದೇಶದ ರಾಜಕಾರಣಿಗಳು ಇಂಥ ಮನರಂಜನೆ, 'ಆಹಾರ ಭದ್ರತೆ'ಯನ್ನು ಕಾಲಕಾಲಕ್ಕೆ ನೀಡುತ್ತಲೇ ಇರುತ್ತಾರೆ. ಇದನ್ನು ಸಾರ್ವಜನಿಕರು ಬಹಳ ಗಂಭೀರವಾಗಿ ಸ್ವೀಕರಿಸುವುದಿಲ್ಲ.
ಆದರೆ ವಿಶ್ವದ ಎರಡು ಪ್ರಬಲ ದೇಶಗಳ ನಾಯಕರು ನಮ್ಮ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಥರಾ ಪರಸ್ಪರ ಕಚ್ಚಾಡಿ ಕೊಂಡರೆ ಅದಕ್ಕೇನನ್ನುವುದು? ಸಾಮಾನ್ಯವಾಗಿ ಅಂತಾರಾಷ್ಟ್ರೀಯ ನಾಯಕರು ಅಥವಾ ಎರಡು ದೇಶಗಳ ನಾಯಕರು ಪರಸ್ಪರ ಜಗಳ, ವೈಯಕ್ತಿಕ ನಿಂದನೆ ಹಾಗೂ ಟೀಕೆಗಳಿಗೆ ಇಳಿಯುವುದಿಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಮೈತ್ರಿ ಸಂಪೂರ್ಣ ಮುರಿದು ಬಿದ್ದು, ಯುದ್ಧಭೂಮಿಯಲ್ಲಿ ಕಾದಾಡಿಕೊಂಡರೂ ಉಭಯ ದೇಶಗಳ ನಾಯಕರು ವಾಗ್ಯುದ್ಧ ಮಾಡಿದ್ದು ಅಪರೂಪ. ಭಾರತ-ಪಾಕ್ ಕಾದಾಟವನ್ನು ಗಡಿಯಲ್ಲಿರುವ ಸೈನಿಕರು ಮಾಡಿದ್ದಾರೆಯೇ ಹೊರತು, ಎರಡೂ ದೇಶಗಳ ಪ್ರಧಾನಿಗಳು ಮಾಡಿದ್ದು ಕಡಿಮೆಯೇ. ಸ್ವತಃ ಪ್ರಧಾನಿಯಾಗಲಿ, ರಾಷ್ಟ್ರಾಧ್ಯಕ್ಷರಾಗಲಿ, ಮತ್ತೊಂದು ದೇಶದ ಪ್ರಮುಖರ ವಿರುದ್ಧ ವೈಯಕ್ತಿಕ ಟೀಕೆ, ನಿಂದನೆಗೆ ಇಳಿದರೆ ಅವರ ಸಂಬಂಧ ಸಂಪೂರ್ಣ ನೆಗೆದು ಬಿದ್ದಿದೆ ಎಂದೇ ಅರ್ಥ.
ಕಳೆದ ಹದಿನೈದು ದಿನಗಳಿಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರಸ್ಪರರ ಬಗ್ಗೆ ಮಾತಾಡಿದ್ದನ್ನು ಕೇಳಿದರೆ ಈ ಸಂದೇಹ ಸಹಜ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮೊನ್ನೆ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ಒಬಾಮ ಹಾಗೂ ಪುಟಿನ್ ಮಧ್ಯೆ ಮಾತುಕತೆ ನಡೆಯಲಿಕ್ಕಿಲ್ಲವೆಂದೇ ಎಲ್ಲರೂ ಭಾವಿಸಿದ್ದರು. ಶೃಂಗಸಭೆಗೆ ಮುನ್ನವೇ ಇಬ್ಬರ ಸಂಬಂಧ ಹಳಸಿತ್ತು. ಕಾಟಾಚಾರಕ್ಕೆ ಇಬ್ಬರೂ ನಾಯಕರು ಮುಖಾಮುಖಿಯಾದರೇ ಶಿವಾಯ್, ಅದರಲ್ಲಿ ಆತ್ಮೀಯತೆ, ಸಲುಗೆ ಇರಲಿಲ್ಲ. ಅತಿಥಿಯಾಗಿ ಬಂದವರನ್ನು ಮಾತಾಡದೇ ಕಳಿಸುವುದು ಸೌಜನ್ಯ ಅಲ್ಲ ಎಂಬ ಕಾರಣಕ್ಕೆ ಪುಟಿನ್, ಒಬಾಮ ಅವರನ್ನು ಮಾತಾಡಿಸಿದರು. ಬೇರೆ ಸನ್ನಿವೇಶ ಹಾಗೂ ಬೇರೆ ದೇಶದಲ್ಲಿ ಶೃಂಗ ಏರ್ಪಟ್ಟಿದ್ದರೆ, ಅವರಿಬ್ಬರೂ ಮುಖಾಮುಖಿ ಆಗುತ್ತಿರಲಿಲ್ಲವೇನೋ? ಹಾಗೆಂದೇ ಅಮೆರಿಕ ಹಾಗೂ ರಷ್ಯಾದ ಪತ್ರಿಕೆಗಳು ಅಭಿಪ್ರಾಯಪಟ್ಟವು. ಶೃಂಗಸಭೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅವರು ಒಡನಾಡಲಿಲ್ಲ. ಅವರಿಬ್ಬರೂ ಮುಖಾಮುಖಿಯಾದಾಗ ಅಲ್ಲಿ ಹಾಜರಿದ್ದ ಜಗತ್ತಿನ ಎಲ್ಲ ಮಾಧ್ಯಮ ಪ್ರತಿನಿಧಿಗಳು ಪ್ರಾಯಶಃ ಹೆಚ್ಚಿನ ಸಲುಗೆ, ಆತ್ಮೀಯತೆ ನಿರೀಕ್ಷಿಸಿದ್ದರೇನೋ? ಆದರೆ ಅದು ನೆರವೇರಲಿಲ್ಲ. ಮುಷ್ಠಿ ಬಿಗಿ ಹಿಡಿದಾಗ ಹಸ್ತಲಾಘವ ಸಾಧ್ಯವಿಲ್ಲ ಅಂತಾರಲ್ಲ, ಹಾಗೇ ಆಯಿತು.
ಒಬಾಮ ಆಡಳಿತ ಅಮೆರಿಕದ ಕಾಂಗ್ರೆಸ್‌ಗೆ ಸುಳ್ಳು ಹೇಳಿ, ದಾರಿ ತಪ್ಪಿಸಿದೆ. ನಿಜ ಸಂಗತಿ ಹೇಳಿದ್ದರೆ, ಸಿರಿಯಾ ದಾಳಿಗೆ ಕಾಂಗ್ರೆಸ್ ಅನುಮತಿ ನೀಡುತ್ತಿರಲಿಲ್ಲ ಎಂದು ಪುಟಿನ್ ನೇರವಾಗಿ ದೂಷಿಸಿದರು. 'ನಾನು ಇವರು ಯೋಗ್ಯರು, ಸಾಚಾ ವ್ಯಕ್ತಿಗಳು ಎಂದು ಭಾವಿಸಿದ್ದೆ. ಆದರೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಮಹಾ ಸುಳ್ಳುಗಾರ. ಎಂಥ ಸುಳ್ಳುಗಾರ ಅಂದ್ರೆ ತಾನು ಸುಳ್ಳು ಹೇಳುತ್ತಿದ್ದೇನೆಂಬುದು ಅವನಿಗೆ ಗೊತ್ತಾಗುವಷ್ಟು ಸುಳ್ಳುಗಾರ. ಅದು ದುರಂತ' ಎಂದು ಪುಟಿನ್ ಹಮಾರಿ-ತುಮಾರಿ ಭಾಷೆಯಲ್ಲಿ ಜಾಡಿಸಿ ಬಿಟ್ಟರು. ಈ ಹೇಳಿಕೆಯನ್ನು ವಿದೇಶಿ ಪತ್ರಿಕೆಗಳು ತಮಗೆ ಬೇಕಾದಂತೆ ವರದಿ ಮಾಡಿದವು. ಅಸೋಸಿಯೇಟೆಡ್ ಪ್ರೆಸ್ ಹೇಳಿದ್ದನ್ನು ಗಮನಿಸಬೇಕು- Putins remarks which seemed more fitting for bar-room scrap than a Kremlin Statement. (ಪುಟಿನ್ ಅವರ ಹೇಳಿಕೆ ಬಾರ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಾರಲ್ಲ, ಆ ರೀತಿ ಇತ್ತೇ ಹೊರತು ರಷ್ಯಾದ ಅಧ್ಯಕ್ಷರ ಹೇಳಿಕೆಯಂತಿರಲಿಲ್ಲ.)
 ಹಿಂದಿನ ತಿಂಗಳು ಒಬಾಮ ಮತ್ತು ಪುಟಿನ್ ಜಿ-20 ಶೃಂಗಸಭೆಯ ಕುರಿತು ಚರ್ಚಿಸಲು ಭೇಟಿಯಾಗಬೇಕಿತ್ತು. ಆದರೆ ಕೊನೆಕ್ಷಣದಲ್ಲಿ ಒಬಾಮ ಭೇಟಿಯನ್ನು ರದ್ದುಗೊಳಿಸಿದರು. ಈ ರೀತಿ ಎರಡು ನಾಯಕರ ನಿಗದಿತ ಕಾರ್ಯಕ್ರಮ ಹಠಾತ್ ರದ್ದಾಗಿದ್ದು ಉಭಯ ದೇಶಗಳಐವತ್ತಮೂರು ವರ್ಷಗಳ ರಾಜತಾಂತ್ರಿಕ ಇತಿಹಾಸದಲ್ಲಿ ಮೊದಲ ಬಾರಿಗೆ. ರಷ್ಯಾದ ಜತೆಗಿನ ರಾಜತಾಂತ್ರಿಕ ಸಂಬಂಧದಲ್ಲಿ ಅಮೆರಿಕ ಒಂದು 'ನಿಲುಗಡೆ' ತೆಗೆದುಕೊಳ್ಳಲು ಬಯಸುತ್ತದೆ ಎಂದು ಒಬಾಮ ಹೇಳಿ ಪುಟಿನ್ ಅವರನ್ನು ಮತ್ತಷ್ಟು ಕೆರಳಿಸಿದರು.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಒಬಾಮ ಪುಟಿನ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿ ಮತ್ತಷ್ಟು ಉಪ್ಪು, ಹುಳಿ, ಖಾರ ಸುರಿದರು. 'ನಾನು ಕಳೆದ ಸಲ ಪುಟಿನ್ ಭೇಟಿಯಾದಾಗ ಕ್ಲಾಸ್‌ರೂಮ್‌ನಲ್ಲಿ ಬೋರಾದ ಹುಡುಗ ಹಿಂದಿನ ಬೇಂಚಿನಲ್ಲಿ ಪೇಲವ ಭಾವ ಹೊತ್ತು ಮುಖ ಗಂಟಿಕ್ಕಿ ಕುಳಿತಿರುತ್ತಾನಲ್ಲ, ಹಾಗೆ ಕುಳಿತಿದ್ದರು' ಎಂದು ಬಿಟ್ಟರು.  ಪುಟಿನ್ ತಕ್ಷಣ ತೀಕ್ಷ್ಣ ಪ್ರತಿಕ್ರಿಯೆ ನೀಡಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಸಲಹೆಗಾರರು ಈ ಸಂದರ್ಭದಲ್ಲಿ ಏನೇ ಹೇಳಿದರೂ ಅದು ವಿಕೋಪಕ್ಕೆ ಹೋಗುತ್ತದೆಂದು ಅವರನ್ನು ತಡೆದರು. ಆದರೂ ಪುಟಿನ್, 'ಒಬಾಮ ಭೇಟಿ ರದ್ದಾದುದು ದುರದೃಷ್ಟಕರ' ಎಂದಷ್ಟೇ ಹೇಳಿ ಒಬಾಮ ಬಗ್ಗೆ ತಮ್ಮ ಕೋಪವನ್ನು ನುಂಗಿಕೊಂಡರು.
ಆದರೆ ಮೊನ್ನೆ ನಡೆದ ಜಿ-20 ಶೃಂಗಸಭೆಯ ಮುನ್ನಾ ದಿನ ನೀಡಿದ ಸಂದರ್ಶನದ ವೇಳೆ, ಸಿರಿಯಾ ಕುರಿತು ಒಬಾಮ ಪ್ರತಿಕ್ರಿಯೆಯನ್ನು ಪದೇ ಪದೆ ಪ್ರಸ್ತಾಪಿಸಿ ಪ್ರಶ್ನೆ ಕೇಳಿದಾಗ ಸಿಡಿಮಿಡಿಗೊಂಡ ಪುಟಿನ್, 'ನೀನು ಪತ್ರಕರ್ತನೋ? ಸಿಐಎ ಏಜೆಂಟನೋ?' ಎಂದು ದಬಾಯಿಸಿ ಬಿಟ್ಟರು.   ಸಿರಿಯಾ ಮೇಲೆ ದಾಳಿ ಮಾಡಲು ಜಾಗತಿಕ ನಾಯಕರ ಮನವೊಲಿಸುವ ಅವಕಾಶವಾಗಿ ಜಿ-20 ಶೃಂಗಸಭೆಯನ್ನು ಬಳಸಿಕೊಳ್ಳಲು ಒಬಾಮ ಯೋಚಿಸಿದ್ದರು. ಆದರೆ ಪುಟಿನ್ ಅದಕ್ಕೆ ಅವಕಾಶವೇ ನೀಡಲಿಲ್ಲ. ಪುಟಿನ್ ಸಲಿಂಗಕಾಮದ ವಿರುದ್ಧ ಕಾನೂನು ಜಾರಿಗೆ ತಂದರೆ, ಮೊನ್ನೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಒಬಾಮ ಸಲಿಂಗಕಾಮಿಗಳ ನಿಯೋಗವನ್ನು ಭೇಟಿ ಮಾಡಿ ಅವರಿಗೆ ತಮ್ಮ ಬೆಂಬಲ ಸೂಚಿಸಿದರು.
ಇದಾದ ಕೆಲ ಕ್ಷಣಗಳಲ್ಲಿ ಸಿರಿಯಾ ಪರವಾಗಿ ಯುದ್ಧ ನೌಕೆಗಳನ್ನು ಪುಟಿನ್ ಕಳಿಸಿದ್ದಾರೆ ಎಂಬ ಸುದ್ದಿ ಬಂತು.
ಒಬಾಮ-ಪುಟಿನ್ ಜಗತ್ತಿನ ಎರಡು ಪ್ರಬಲ ದೇಶಗಳ ನಾಯಕರಿರಬಹುದು. ಆದರೆ ಎಷ್ಟೆಂದರೂ ಮನುಷ್ಯರು ತಾನೆ?


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com