ಮೈಸೂರಿನಲ್ಲಿ ಯುವಕನೊಬ್ಬ ಮೋಟಾರ್ ಸೈಕಲ್ ಖರೀದಿಸಿದ. ಕಷ್ಟಪಟ್ಟು ಓಡಿಸುವುದನ್ನು ಕಲಿತ. ಕೆಲ ದಿನಗಳ ನಂತರ ಊರಿನಲ್ಲಿರುವ ತಮ್ಮ ಮಾವನಿಗೆ ಓಡಿಸಲು ಕೊಟ್ಟ. ಅವರು ಓಡಿಸಲು ಹೋಗಿ ಹಂದಿಗೆ ಡಿಕ್ಕಿ ಹೊಡೆಸಿದರು. ಮೈಸೂರು- ಚಾಮರಾಜನಗರದ ಕಡೆ ಹಂದಿಗೆ ಡಿಕ್ಕಿ ಹೊಡೆಸಿದ ಗಾಡಿಯನ್ನು ಇಟ್ಟುಕೊಳ್ಳಬಾರದು ಎಂಬ ನಂಬಿಕೆ ಇದೆ. ಹೀಗಾಗಿ ಆ ಮೋಟಾರ್ ಸೈಕಲ್ನ್ನು ಮಾರಾಟ ಮಾಡಿ, ಹೊಸದನ್ನು ಕೊಡಿಸಿದರು. ಆದರೆ ಏನಾಶ್ಚರ್ಯ. ಆ ಯುವಕ ಮೈಸೂರಿನಲ್ಲಿ ತನ್ನ ಪಾಡಿಗೆ ತಾನು ಓಡಿಸಿಕೊಂಡು ಹೋಗುತ್ತಿದ್ದರೆ ಆಟೋದವನೇ ಬಂದು ಡಿಕ್ಕಿ ಹೊಡೆಸಿದ. ಇದರಿಂದ ಚಿಂತಾಕ್ರಾಂತನಾದ ಆ ಯುವಕ ನನಗೂ -ಗಾಡಿಗೂ (ಮೋಟಾರ್ ಸೈಕಲ್) ಆಗಿಬರುತ್ತಿಲ್ಲ. ನನಗೆ ಗಾಡಿ ಗಂಡಾಂತರ ಇರಬಹುದು ಎಂದುಕೊಂಡು ಜೋತಿಷಿಯ ಬಳಿ ತೆರಳಿ ಶಾಸ್ತ್ರ ಕೇಳಿದ. ಆಗ ಆತ ಹೇಳಿದ್ದು ಏನು ಗೊತ್ತೆ? 'ನಿನಗೆ ಗಾಡಿ ಗಂಡಾಂತರ ಇಲ್ಲ. ನೀನು ವಾಸವಾಗಿರುವ ಮನೆಯ ವಾಸ್ತು ಸರಿಯಿಲ್ಲ. ಆದ್ದರಿಂದ ಪೂರ್ವ ದಿಕ್ಕಿನ ಮನೆಯಲ್ಲಿ ವಾಸಿಸು' ಎಂದು ಸಲಹೆ ಮಾಡಿದ್ದಾರೆ. ಈಗ ಆ ಯುವಕ ಗಾಡಿ ಹಾಕಿಕೊಂಡು ಪೂರ್ವ ದಿಕ್ಕಿನ ಮನೆ ಹುಡುಕುತ್ತಿದ್ದಾನೆ. ಮನೆ ಸಿಗುವುದರೊಳಗೆ ಆತ ಅಲ್ಲ ಬೇರೆಯವರು ಗಾಡಿಗೆ ಡಿಕ್ಕಿ ಹೊಡೆಸದಿದ್ದರೆ ಸಾಕು!
ಯು.ಟಿ. ಖಾದರ್ ಉಳ್ಳಾಲದ ಮಂಗಳೂರು ಕ್ಷೇತ್ರ ಶಾಸಕ!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಅವರು ಎಲ್ಲಿಗೆ ಹೋದರೂ ಅವರ ಶಾಸಕ ಕ್ಷೇತ್ರವನ್ನು ಹೊರಗಿನವರು ಗುರುತಿಸುತ್ತಿರಲಿಲ್ಲ ಎಂಬ ಖೇದ ಇತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. 'ನಾನು ಖಾದರ್, ಮಂಗಳೂರು ಶಾಸಕ' ಎಂದ ಕೂಡಲೇ 'ಮಂಗಳೂರು ಗೊತ್ತು' ಎನ್ನುತ್ತಾರಂತೆ. ಇದರಿಂದ ಖಾದರ್ ಅವರು ಫುಲ್ಖುಷ್ ಆಗಿದ್ದಾರೆ. ವಿಷಯ ಇಷ್ಟೇ, ಖಾದರ್ ಅವರು ಮೊದಲು ಸ್ಪರ್ಧಿಸಿದಾಗ ಅವರ ಕ್ಷೇತ್ರದ ಹೆಸರು ಉಳ್ಳಾಲ ಎಂದಿತ್ತು. ಕ್ಷೇತ್ರ ವಿಂಗಡಣೆಯಲ್ಲಿ ಉಳ್ಳಾಲ ಇದ್ದರೂ ಹೆಸರು ಮಾತ್ರ ಮಂಗಳೂರು ಎಂದು ಬದಲಾಯಿತು. ಹಾಗಾಗಿ ಖಾದರ್ ಅವರು ದೆಹಲಿಗೆ ಹೋಗಲಿ, ವಿದೇಶಕ್ಕೆ ಹೋಗಲಿ ಅವರನ್ನು 'ಮಂಗಳೂರು ಶಾಸಕ' ಎಂದೇ ಕರೆಯುತ್ತಾರಂತೆ. ಮಂಗಳೂರು ಎಂದ ಕೂಡಲೇ ಗೌರವ ಕೊಡುತ್ತಾರೆ. ಹಾಗಾಗಿ ಮಂಗಳೂರು ಕ್ಷೇತ್ರ ಇರುವುದು ಉಳ್ಳಾಲದಲ್ಲಿ ಎಂದು ಅಪ್ಪಿತಪ್ಪಿಯೂ ಖಾದರ್ ಸಾಹೇಬರು ಹೇಳುವುದಿಲ್ಲ. ಇತ್ತೀಚೆಗೆ ಬಿಷಪ್ ಹೌಸ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಖಾದರ್ ಬಹಿರಂಗಪಡಿಸಿದರು.
ರಮಾನಾಥ ರೈ ಸಮವಸ್ತ್ರ ಇಲಾಖೆ ಮಂತ್ರಿ!
ರಾಜ್ಯ ಸಚಿವ ಸಂಪುಟದಲ್ಲಿ ಸಮವಸ್ತ್ರ ಇಲಾಖೆ ಮಂತ್ರಿ ಇದ್ದಾರೆ! ಇದ್ಯಾವಾಗ ಹೊಸ ಇಲಾಖೆ ಸೃಷ್ಟಿಯಾಯಿತು ಎಂದು ಹೌಹಾರಬೇಡಿ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳುವಂತೆ ಅವರು ಸಮವಸ್ತ್ರ ಇಲಾಖೆ ಮಂತ್ರಿ. ಅದ್ಹೇಗೆ ಅಂತೀರಾ? ಹಿಂದೆ ರಮಾನಾಥ ರೈ ಸಚಿವರಾದಾಗ ಸಿಕ್ಕ ಇಲಾಖೆಗಳೆಲ್ಲ ಸಮವಸ್ತ್ರಕ್ಕೆ ಸಂಬಂಧಪಟ್ಟದ್ದಂತೆ. ಅಬಕಾರಿ, ಗೃಹ, ಸಾರಿಗೆ ಇಲಾಖೆ.. ಈಗ ಪರಿಸರ, ಅರಣ್ಯ ಇಲಾಖೆ. ಅಂದರೆ ನಿಯಂತ್ರಣ ಇಲಾಖೆ. ಇಲ್ಲಿ ಶಿಸ್ತು ಇರಬೇಕಾದ್ದು ಮುಖ್ಯ. ಸಚಿವನಾದರೂ ಮಾತು, ನಡತೆ, ನಡವಳಿಕೆ, ಭಾವನೆಯಲ್ಲೂ ಶಿಸ್ತು ಇರಬೇಕು ಎಂದು ಕುದುರೆಮುಖ ಕಾರ್ಮಿಕರು ಇತ್ತೀಚೆಗೆ ಮಂಗಳೂರಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಹೇಳಿಕೊಂಡರು ರಮಾನಾಥ ರೈ.
ಕಮಿಷನರ್ ಬಳಿಯೇ ಲಂಚ ಕೇಳಿದ್ದ ಬಿಲ್ಡರ್!
ಪಣಂಬೂರು ಬಂದರು ಬಳಿ ದಿನಕ್ಕೆ ಸಾವಿರಾರು ವಾಹನಗಳು ಅಪ್ಲೋಡ್, ಡೌನ್ಲೋಡ್ ಮಾಡುತ್ತವೆ. ಪೊಲೀಸರು ಬಂದು ಕಿರಿಕಿರಿ ಮಾಡಬಾರದು ಎಂದು ಟ್ರಾನ್ಸ್ಪೋರ್ಟ್ ಮಾಲೀಕರು ಪೊಲೀಸರ ಜತೆ 'ವ್ಯವಸ್ಥೆ' ಮಾಡಿಕೊಂಡಿದ್ದರು. ಆದರೆ, ವಾಹನಗಳ ನಿಯಮ ಉಲ್ಲಂಘನೆ ಪತ್ತೆ ಮಾಡುವ ಇಂಟರ್ಸೆಪ್ಟರ್ ಚಾಲಕರನ್ನು 'ವ್ಯವಸ್ಥೆ'ಯಿಂದ ಹೊರಗಿಡಲಾಗಿತ್ತು. ಸಣ್ಣಪುಟ್ಟ ಟ್ರಾನ್ಸ್ಪೋರ್ಟ್ಗಳ ಮಾಲೀಕರಿಗೆ ಕರೆ ಮಾಡಿ ಇಂಟರ್ಸೆಪ್ಟರ್ ಚಾಲಕ ರಗಳೆ ಮಾಡುತ್ತಿದ್ದ. ಈ ವಿಚಾರ ಟ್ರಾನ್ಸ್ಪೋರ್ಟ್ ಮಾಲೀಕರೊಬ್ಬರು ತಮ್ಮ ಆಪ್ತ ಪೊಲೀಸ್ ಠಾಣೆ ಅಧಿಕಾರಿಗಳಲ್ಲಿ ತೋಡಿಕೊಂಡರು. ಕಮಿಷನರ್ ಬಳಿ ಆಗಾಗ ಹೋಗುತ್ತಿರುವವರ ಬಳಿ ಹೇಳಿದರೆ ಒಳ್ಳೆಯದೆಂದು ಪತ್ರಕರ್ತ ಮಿತ್ರರನ್ನು ಹುಡುಕಿ ಕಮಿಷನರ್ ಹತ್ತಿರ ಕಳುಹಿಸಿದರು. ಎಲ್ಲ ವಿಚಾರ ಕೇಳಿದ ಕಮಿಷನರ್ ಸಾಹೇಬ್ರು 'ಯಾರಿಗೂ ಲಂಚ ಕೊಡಬೇಡಿ. ನಾನು ಪ್ಲ್ಯಾಟ್ ಖರೀದಿ ಮಾಡುವಾಗ ಬಿಲ್ಡರ್ ಒಬ್ಬರು ರಿಜಿಸ್ಟ್ರಾರ್ಗೆ ಇಂತಿಷ್ಟು ಕೊಬೇಕಾಗುತ್ತದೆ ಎಂದಿದ್ದರು. ನೋಡಪ್ಪಾ ನಾನು ಲಂಚ ಕೊಡೋದಿಲ್ಲ, ಏನು ಬೇಕಾದರೂ ಅಗಲಿ ಎಂದು ಹೇಳಿಬಿಟ್ಟೆ. ನೀವೂ ಅಷ್ಟೇ. ಲಂಚ ಕೊಡಬೇಡಿ ಎಂದರು. ಆದರೆ, ಪಕ್ಕದಲ್ಲೇ ಇದ್ದ ಎಸಿಪಿಯೊಬ್ಬರು, 'ಹೌದು ನಮ್ಮ ಸಂಬಂಧಿಕರ ಮನೆ ನೋಂದಣಿಗೆ ಲೈನ್ ಸರ್ವಿಸ್ ಅಂಥ ಹೆಚ್ಚುವರಿ ಹಣ ಪಡೆದರು' ಎಂದು ಬಿಟ್ಟರು. ದೂರು ನೀಡಲು ಹೋದವರು ಪೆಚ್ಚು ಮೋರೆಯಿಂದ ಹೊರಗೆ ಬಂದು ಬಿಟ್ಟರು!
ಫೋನ್ ರಿಸೀವ್ ಮಾಡಿ ಉತ್ತರ ಹೇಳುವ ಪತಿರಾಯ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದೆ. ಹೀಗಾಗಿ ನಗರಪಾಲಿಕೆಯಿಂದ ಹಿಡಿದು ಗ್ರಾಪಂವರೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಆದರೆ ಅವರು ಸಭೆಗೆ ಹೋಗುವುದನ್ನು ಬಿಟ್ಟರೆ ಉಳಿದೆಲ್ಲಾ ತೀರ್ಮಾನಗಳನ್ನು ಗಂಡಂದಿರೇ ಮಾಡುತ್ತಿದ್ದಾರೆ. ಮೈಸೂರು ನಗರ ಪಾಲಿಕೆಯಲ್ಲಿ ಕಳೆದ ವಾರ ಮೇಯರ್- ಉಪ ಮೇಯರ್ ಚುನಾವಣೆ ನಡೆಯಿತು. ಆಯ್ಕೆಯಾಗಿ ಆರು ತಿಂಗಳ ನಂತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ದಿನದ ಅನುಭವ ಹೇಗಿತ್ತು ಎಂದು ಕೇಳಲು ಸದಸ್ಯೆಯೊಬ್ಬರಿಗೆ ಕರೆ ಮಾಡಿದರೆ ಅವರ ಪತಿ ಹಲೋ ಎಂದರು. ಪ್ರತಿಕ್ರಿಯೆ ಕೇಳಬೇಕು ಕೊಡಿ ಎಂದರೂ ಕೊಡಲಿಲ್ಲ. ಬದಲಿಗೆ ಪ್ರಶ್ನೆ ಕೇಳಿದರೆ ಅವರ ಪತ್ನಿಗೆ ಅದನ್ನು ಹೇಳಿ, ಅವರು ಹೇಳಿದ ಉತ್ತರವನ್ನು ವಾಪಸ್ ಹೇಳುತ್ತಿದ್ದರು. ಕೊನೆಗೆ ಮೇಯರ್ ಆಗಬೇಕು ಎಂಬ ಆಸೆ ಇದೆ ಎಂದರು. ನಿಮಗೋ ಅವರಿಗೋ ಎಂದಾಗ ಛೇ.. ನನಗಿಲ್ಲ, ಅವರಿಗೆ ಎಂದು ಹೇಳಿ ಫೋನ್ ಇಟ್ಟರು!
- ನಂಬಿರಾಜ್