ಅಂತೂ ಇಂತೂ ಅನಂತ ಪ್ರಚಾರ!
ಪ್ರತಾಪ್ ಸಿಂಹ ಅವರೇ ನಿಮ್ಮ ಬುದ್ಧಿಗೇನಾಗಿದೆ? ನಿನ್ನೆವರೆಗೂ ನಿಮ್ಮ ಅಭಿಮಾನಿಯಾಗಿದ್ದ ನಾನು ಇಂಥದ್ದೊಂದು ಖಾರವಾದ ಪ್ರಶ್ನೆ ನಿಮಗೆ ಕೇಳಲೇಬೇಕಾಗಿದೆ. ಬೆಳಿಗ್ಗೆ ಎದ್ದು ಕನ್ನಡಪ್ರಭ ನೋಡಿದರೆ ಮುಖಪುಟದಲ್ಲೇ ನಮ್ಮ ಗ್ರೇಟ್ ಸಾಹಿತಿ ಅನಂತಮೂರ್ತಿಯವರಿಗೆ ಜಾಡಿಸಿದ್ದೀರಲ್ಲಾ? ಅವರ ಹೇಳಿಕೆಗೆ ಇಷ್ಟು ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿತ್ತೇ? "ಅಹಂಕಾರಕ್ಕೆ ಉದಾಸೀನವೇ ಮದ್ದು" ಅನ್ನೋ ಗಾದೆ ಮಾತು ನೀವು ಕೇಳಿಲ್ಲವೆ? ಇದರಿಂದ ಅವರಿಗೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಲಿಲ್ಲವೇ? ನಮ್ಮ ಮೋದಿ ಎಂಬ ವಜ್ರಕ್ಕೆ ಒಂದು ಸಾಮಾನ್ಯ ಇದ್ದಿಲೊಂದು ಸವಾಲು ಹಾಕಿದರೆ ಅದನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬೇಕೆ? ಅಲ್ಲಾ ಸ್ವಾಮಿ ಅಪರೂಪಕ್ಕೆ ಅನಂತಮೂರ್ತಿವರು ಒಂದು ಒಳ್ಳೇ ನಿರ್ಧಾರ ತೆಗೆದುಕೊಂಡರೆ ಅದನ್ನು ಪ್ರೋತ್ಸಾಹಿಸುವುದು ಬಿಟ್ಟು ಖಂಡಿಸಿ ನೀವು ಹೇಳಿಕೆ ಕೊಡುತ್ತೀರಲ್ಲಾ, ನಿಮಗೇನೆನ್ನಬೇಕು? ಅವರ ಈ ನಿರ್ಧಾರದಿಂದ ಎಷ್ಟು ಜನರಿಗೆ ಸಂತೋಷವಾಗಿದೆ. ಇಂಥದೊಂದು ಸಂತೋಷವನ್ನು ಹಿಂದೆ ಎಂದಾದರೂ ಅವರು ಕೊಟ್ಟಿದ್ದುಂಟೆ? ಅನಂತಮೂರ್ತಿಯವರು ಮೊದಲೇ ಅಂದರೆ ಮೋದಿ ಪ್ರಧಾನಿ ಎಂದು ಘೋಷಣೆಯಾದ ದಿನವೇ ದೇಶ ಬಿಡುತ್ತೇನೆ ಎಂಬ ನಿರ್ಧಾರ ತೆಗೆದುಕೊಂಡಿದ್ದರೆ ಇಷ್ಟು ಹೊತ್ತಿಗೆ ನಾವೆಲ್ಲ ಅವರನ್ನು ವಿಮಾನ ಹತ್ತಿಸಿ ಟಾಟಾ ಮಾಡಿ ಬರಬಹುದಾಗಿತ್ತು. ಆದರೆ ಆ ದಿನಕ್ಕಾಗಿ ಇನ್ನೂ ಒಂದು ವರ್ಷ ಕಾಯಬೇಕಾಗಿದೆಯಲ್ಲ ಎಂದು ದುಃಖವಾದರೂ ಇನ್ನೊಂದು ವರ್ಷದ ಮೇಲಾದರೂ ಆ ಸುದಿನ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ನಾನಿದ್ದರೆ, ನೀವು ಅದಕ್ಕೂ ಕಲ್ಲು ಹಾಕುತ್ತಿದ್ದೀರಲ್ಲಾ? ನಿಮಗೆ ಏನು ಹೇಳಬೇಕು? ಪಾಪ ಅನಂತಮೂರ್ತಿಯವರೇನಾದರು ನಿಮ್ಮ ಲೇಖನದಿಂದ ಪ್ರಭಾವಿತರಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವವಳಲ್ಲ. ನೀವು ಏನು ಮಾಡುತ್ತೀರೋ ನನಗೆ ಗೊತ್ತಿಲ್ಲ, ಸ್ವಾಮಿ ಒಟ್ಟಿನಲ್ಲಿ ನಮ್ಮ ಅನಂತಮೂರ್ತಿಯವರ ವಿದೇಶ ಪ್ರಯಾಣ ರದ್ದಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು.
-ಪದ್ಮಜ ಹೆಗಡೆ, ಸಾಯಿ ಪ್ಯಾರಡೈಸ್, ಚಿಲಿಂಬಿ, ಮಂಗಳೂರು
"ಗಲ್ಲಾಯ್ತು... ರದ್ದಾಯ್ತು...' ಎಂಬ ಕ.ಪ್ರ.ದ ತಲೆಬರಹ ಬಹಳ ಹಿಡಿಸಿತು. ಕ.ಪ್ರ.ದಲ್ಲಿ ಕಂಡು ಬರುವ ತಲೆಬರಹಗಳು ಚಿಕ್ಕದಾಗಿದ್ದು, ಚೊಕ್ಕವಾಗಿದ್ದು ಓದುಗರ ಗಮನವನ್ನು ಪಕ್ಕನೆ ಸೂರೆಗೊಳ್ಳುತ್ತವೆ. ಹಾಗೆಯೇ ಅರ್ಥಗರ್ಭಿತವಾಗಿರುವುದಲ್ಲದೇ ಓದುಗರು ಕ್ಷಣಕಾಲ ಯೋಚಿಸುವಂತೆ ಮಾಡುತ್ತವೆ.
-ಎನ್.ಪಿ. ರಾಘವೇಂದ್ರರಾವ್
'ಮೋದಿ (ವಿ) ವಾದ- ರಾಜ್ಯದಲ್ಲೂ ಪ್ರಧಾನಿ ಹುದ್ದೆ ಬಗ್ಗೆ ಚರ್ಚೆ' ಎಂಬ ಶೀರ್ಷಿಕೆಯಲ್ಲಿ ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್, ಹಂಸರಾಜ ಭಾರದ್ವಾಜ್, ಸಿ.ಟಿ.ರವಿ ಹಾಗೂ ಅನಂತಕುಮಾರ್ ಹೆಗಡೆಯವರ ಹೇಳಿಕೆಗಳ ಝಲಕ್ಗಳನ್ನು 18.9.2013ರ ಮುಖಪುಟದಲ್ಲಿ ಫೋಟೋಸಹಿತ ಪ್ರಕಟಿಸಿದ್ದೀರಿ! 'ಕೆರೆಯಲ್ಲಿ ಮುಳುಗುತ್ತಿದ್ದ 7 ಜನರನ್ನು ರಕ್ಷಿಸಿದ ಸಚಿವ ಕಿಮ್ಮನೆ ಕಾರು ಚಾಲಕ' ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯನ್ನು 5ನೇ ಪುಟದಲ್ಲಿ ಪ್ರಕಟಿಸಿದ್ದೀರಿ. ಮೋದಿ (ವಿ) ವಾದದಲ್ಲಿ ಹೇಳಿಕೆ ನೀಡಿದವರೆಲ್ಲಾ ಪೂರ್ವಾಗ್ರಹಪೀಡಿತರು. ಅದರಲ್ಲಿ ವಿಶೇಷವೇನಿಲ್ಲ. 7 ಜನರ ಪ್ರಾಣ ಉಳಿಸಿದ ಚಾಲಕನ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಿದ್ದರೆ ಚಾಲಕನ ಮಾನವೀಯತೆಗೆ ಬೆಲೆ ಕೊಟ್ಟಂತಾಗುತ್ತಿತ್ತು.
-ಪಿ.ಜೆ. ರಾಘವೇಂದ್ರ, ಮೈಸೂರು. ಮೊ. 98860 30677
ಪತ್ರಿಕೆ ಹಾಕುವ ಹುಡುಗ ಪ್ರತಿನಿತ್ಯ ಬೆಳಗ್ಗೆ ಕನ್ನಡಪ್ರಭವನ್ನು ಮನೆ ಬಾಗಿಲಿಗೆ ಹಾಕಿ ಹೋದ ಕೂಡಲೇ ಪತ್ರಿಕೆಯನ್ನು ನಾನು ಮೊದಲು ಓದಬೇಕು. ನಾನು ಮೊದಲು ಓದಬೇಕು ಎಂದು ನಾನು ನನ್ನ ಯಜಮಾನರು ಕಿತ್ತಾಡುತ್ತೇವೆ. ಕೆಲವೊಮ್ಮೆ ನಮ್ಮ ಈ ಕಿತ್ತಾಟದಲ್ಲಿ ಪತ್ರಿಕೆ ಹರಿದು ಹೋದದ್ದೂ ಉಂಟು. ಇದಕ್ಕೆ ಕಾರಣ "ಕೇಳ್ರಪ್ಪೋ ಕೇಳಿ" ಅಂಕಣ. ಬೆಂಗಳೂರಿನ ನಿತ್ಯ ಬದುಕಿನ ಜಂಜಾಟದಲ್ಲಿ ಕಳೆದು ಹೋದ ಮನಸ್ಸನ್ನು ನಕ್ಕು ಹಗುರಾಗಿಸಿ ಓದುಗರಿಗೆ ಹೊಸ ಹುರುಪು ನೀಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಅಂಕಣದಲ್ಲಿ ಚುಟುಕಾಗಿ ಹಾಸ್ಯ ಮಿಶ್ರಿತ ರೊಮ್ಯಾಂಟಿಕ್ ಪ್ರಶ್ನೆಗಳನ್ನು ಬರೆಯುವ 'ಫ್ಯಾಷನ್ ಡಿಸೈನರ್ ಮಧು' ಅವರು ಬರೆಯುವ ಪ್ರಶ್ನೆಗಳು ಅದಕ್ಕೆ ಬಾಣಭಟ್ಟರು ಕೊಡುವ ಉತ್ತರಗಳು ಸಖತ್ತಾಗಿರುತ್ತವೆ.
-ವೀಣಾ ಮುರಳೀಧರ್ 'ಸನ್ಮತಿ' ಬಸವನಗುಡಿ, ಬೆಂಗಳೂರು.
ಸೆಪ್ಟೆಂಬರ್ 15ರ ಗೋಡೆಬರಹದಲ್ಲಿ ಆರ್. ತಿಪ್ಪೇರುದ್ರಪ್ಪನವರು ಪತ್ರಿಕೆಯ ಬೆಲೆಯನ್ನು ಹೆಚ್ಚು ಮಾಡುವಂತೆ ತಮ್ಮ ಬಹುದಿನದ ಬಯಕೆಯನ್ನು ತಿಳಿಸಿದ್ದಾರೆ. ಪ್ರಾಯಶಃ ತಿಪ್ಪೇರುದ್ರಪ್ಪನವರು ಶ್ರೀಮಂತ ಶಿಕ್ಷಕರಾಗಿರಬೇಕು...! ಬೆಲೆ ಜಾಸ್ತಿ ಮಾಡಿ ಎಂದು ಬಯಕೆ ವ್ಯಕ್ತಪಡಿಸಿದ ಮೊದಲ ವಿಶ್ವದ ವ್ಯಕ್ತಿಯಾಗಿರಬೇಕೆಂದು ನನಗೆ ಅನ್ನಿಸುತ್ತದೆ. ಕನ್ನಡಪ್ರಭಕ್ಕೆ ಓದುಗರೊಟ್ಟಿಗೆ ಲಕ್ಷಾಂತರ ರೂಪಾಯಿ ಆದಾಯ ತರುವ ಜಾಹೀರಾತುದಾರರು ಇರ್ತಾರೆ ಎಂಬುದನ್ನು ಮರೆಯಬೇಡಿ ತಿಪ್ಪೇರುದ್ರಪ್ಪನವರೇ.
-ಜೆ. ಪುಟ್ಟಸ್ವಾಮಿ, ಮೈಸೂರು. ಮೊ. 9342 101495
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

