ಅಂಕಣಗಳು

ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಪಾತ್ರ ಯಾರದ್ದು ಗೊತ್ತೇ?

Published On :

ಕೂಡಲೇ ಉತ್ತರಿಸಿ: ಭಾರತದ ಅತಿದೊಡ್ಡ 'ಅಲ್ಪಸಂಖ್ಯಾತರು' ಯಾರು?
ನಿಮ್ಮ ಊಹೆ ತಪ್ಪು, ಖಂಡಿತವಾಗಿಯೂ ಮುಸಲ್ಮಾನರಲ್ಲ! ಬದಲಾಗಿ ಮೇ 2014ರಂದು ಮೊದಲ ಬಾರಿಗೆ ಮತ ನೀಡಲಿರುವ 18-23 ವರ್ಷದೊಳಗಿನ ಯುವಕರು.
ಲೋಕಸಭಾ ಚುನಾವಣೆಗಳಿಗೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಈ ಯುವಕರ ಸಂಖ್ಯೆ ಎಷ್ಟಿರಬಹುದೋ ಯೋಚಿಸಿ? 2011ರ ಜನಗಣತಿಯ ಪ್ರಕಾರ ಇವರ ಸಂಖ್ಯೆ 14.93 ಕೋಟಿಯಷ್ಟಿದೆ.  ಚುನಾವಣಾ ಆಯೋಗದ ಅರ್ಹತಾ ಪಟ್ಟಿಯಲ್ಲಿರುವ 72.5 ಕೋಟಿ ಜನರಲ್ಲಿ ಇವರ ಪ್ರಮಾಣ 20 ಪ್ರತಿಶತಕ್ಕಿಂತಲೂ ಹೆಚ್ಚಿದೆ. ಆದಾಗ್ಯೂ ಈ ಯುವ ಮತದಾರರ ಸಂಖ್ಯೆ ಮೇ 2014ಕ್ಕೆ 14.93 ಕೋಟಿಯಿಂದ(2011ರ ಗಣತಿ), 16 ಕೋಟಿಗೆ ಹೆಚ್ಚಳವಾಗಲಿದೆ.  ಇನ್ನು ಆ ಸಮಯದಲ್ಲಿ ಮತದಾನ ಮಾಡಲು ಅರ್ಹರಾದ ಮುಸ್ಲಿಂ ಮತದಾರರ ಸಂಖ್ಯೆ 11 ಕೋಟಿಯಷ್ಟಿರಲಿದೆ (ದೇಶದಲ್ಲಿನ ಒಟ್ಟು ಮುಸ್ಲಿಂ ಜನಸಂಖ್ಯೆ 18 ಕೋಟಿ).
ಹಾಗಾಗೇ ಯಾವ ರಾಜಕೀಯ ಪಕ್ಷ ಮೊದಲ ಬಾರಿಗೆ ಮತದಾನ ಮಾಡಲಿರುವ ಈ ಹೊಸ ತಲೆಮಾರಿನ 16 ಕೋಟಿ ಯುವಕರನ್ನು ಸೆಳೆಯಲು ಯಶಸ್ವಿಯಾಗುತ್ತದೋ, ಅದಕ್ಕೆ ನಿಸ್ಸಂಶಯವಾಗಿಯೂ 2014ರ ಚುನಾವಣೆಯಲ್ಲಿ ಭಾರೀ ಲಾಭವಾಗಲಿದೆ. ಇನ್ನು ಈ 72.5 ಕೋಟಿ ಮತದಾರರಲ್ಲಿ ಎರಡನೆಯ ದೊಡ್ಡ 'ಮೈನಾರಿಟಿ'ಯೆಂದರೆ ನಗರ ಮತ್ತು ಪಟ್ಟಣಗಳಲ್ಲಿನ ಮಧ್ಯಮ ವರ್ಗದ ಮತದಾರರು. ಇವರ ಸಂಖ್ಯೆ 15 ಕೋಟಿಯಷ್ಟಿದೆ. ಹಾಗಾಗೆ ಕಾಂಗ್ರೆಸ್, ನಂದನ್ ನಿಲೇಕಣಿ(ಇನ್ಫೋಸಿಸ್‌ನ ಮಾಜಿ ಸಿಇಒ)ಯವರನ್ನು ತನ್ನ ಪಕ್ಷದಿಂದ ಬೆಂಗಳೂರಿನಲ್ಲಿ ಸ್ಪರ್ಧೆಗಿಳಿಸಲು ಉತ್ಸುಕತೆ ತೋರಿಸುತ್ತಿದೆ. ಆ ಮೂಲಕ ವಿದ್ಯಾವಂತ ಮಧ್ಯಮ ವರ್ಗದ ಮತ ಪಡೆಯಬಹುದು ಎನ್ನುವ ಎಣಿಕೆ ಅದರದ್ದು.
2014ರ ಲೋಕಸಭಾ ಚುನಾವಣೆ ವಿಭಿನ್ನವಾಗಿರಲಿದೆ. ಇದರ ಫಲಿತಾಂಶ ಕೇವಲ ಜಾತಿ, ಧರ್ಮ ಅಥವಾ ಪ್ರದೇಶದ ಮೇಲಷ್ಟೇ ನಿರ್ಧರಿತವಾಗಿರದೇ, ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರ ಮೇಲೂ ಅವಲಂಬಿಸಲಿದೆ. ಹಾಗಂತ ಮೇಲಿನ ಮೂರು ಅಂಶಗಳೂ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವುದಿಲ್ಲ ಎನ್ನುವ ಹಾಗೂ ಇಲ್ಲ.
ಆಹಾರ ಭದ್ರತಾ ಮಸೂದೆ ಮತ್ತು ಭೂ ಸ್ವಾಧೀನ ಕಾಯ್ದೆಗಳನ್ನು ಯುಪಿಎ ಸರ್ಕಾರ ಜಾರಿಗೆ ತಂದದ್ದು ಗ್ರಾಮೀಣ ಭಾಗದ ಮತದಾರರನ್ನು ಗಮನದಲ್ಲಿಟ್ಟುಕೊಂಡು. ಆದರೆ ಇನ್ನೊಂದೆಡೆ ಅದಕ್ಕೆ ಈ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವ ವರ್ಗದಿಂದ ಅಪಾಯ ಎದುರಾಗಲಿದೆ ಎನ್ನುವ ಅರಿವೂ ಇಲ್ಲದಿಲ್ಲ. ಏಕೆಂದರೆ ಸರ್ಕಾರದ ಸರಣಿ ಹಗರಣಗಳನ್ನು ಅತಿ ಕಟುವಾಗಿ ಟೀಕಿಸುತ್ತಿರುವುದೇ ಈ ವರ್ಗ ದುರದೃಷ್ಟವಶಾತ್ ಯುಪಿಎದ ಎರಡನೆಯ ಅತಿ ದೊಡ್ಡ ಮತದಾರ ವರ್ಗವೂ ಅದರಿಂದ ದೂರ ಸರಿಯುವ ಲಕ್ಷಣಗಳು ಗೋಚರವಾಗುತ್ತಿವೆ. ನಗರ ಪ್ರದೇಶದ ಈ ವರ್ಗ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಯಿಂದ ಅತಿ ಹೆಚ್ಚು ಬಳಲಿದೆ. ಯುಪಿಎ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತಂದಿದೆಯಾದರೂ, ಅದರಿಂದ ಮೇಲಿನ ಎರಡೂ ವರ್ಗಗಳಿಗೆ ಯಾವುದೇ ಪ್ರಯೋಜನವಿಲ್ಲ.   ಹಣದುಬ್ಬರ ಎನ್ನುವುದು ಎರಡೂ ಕಡೆಯೂ ಹರಿತವಾಗಿರುವ ಕತ್ತಿಯಿದ್ದಂತೆ. ಇದರಿಂದಾಗಿ ನಗರ ಪ್ರದೇಶಗಳ ಮತದಾರರಿಗಷ್ಟೇ ಅಲ್ಲದೆ ಗ್ರಾಮೀಣ ಜನರಿಗೂ ತೊಂದರೆಯಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿನ ಬಹುತೇಕರು ಹಣದುಬ್ಬರದಿಂದಾಗಿ ತಮ್ಮ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುವುದನ್ನು ಸ್ವಾಗತಿಸುತ್ತಾರೆ. ಹಾಗೆ ನೋಡಿದರೆ, ಈ ಆಹಾರ ಉತ್ಪನ್ನಗಳ ಬೆಲೆಏರಿಕೆಯಲ್ಲಿ ಅತಿ ಹೆಚ್ಚು ಲಾಭ ಗಳಿಸುವುದು ಭ್ರಷ್ಟ ಮಧ್ಯವರ್ತಿಗಳೇ. ಅವರೆಲ್ಲರಿಗೂ ರಾಜಕೀಯದ ನಂಟಿರುತ್ತದೆ ಎನ್ನುವುದಂತೂ ಸುಳ್ಳಲ್ಲ. ಬೆಲೆ ಏರಿಕೆಗೆ ಅವರುಗಳ ಸ್ವಹಿತಾಸಕ್ತಿಯೇ ಮೂಲ ಕಾರಣ.
ಇನ್ನು ಮೊದಲಿನಿಂದಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದ ಅಲ್ಪಸಂಖ್ಯಾತರು(ಮುಸಲ್ಮಾನರು), ಈಗ ಆ ಪಕ್ಷದ ಖಚಿತ ಓಟ್‌ಬ್ಯಾಂಕ್‌ಗಳಾಗಿ ಉಳಿದಿಲ್ಲ. ಮುಝಫರ್‌ನಗರದ ಹಿಂಸಾಚಾರ ದಶಕಗಳ ಜಾಟ್-ಮುಸ್ಲಿಂ ಬಾಂಧವ್ಯವನ್ನಷ್ಟೇ ಮುರಿದಿಲ್ಲ, ಅದರೊಟ್ಟಿಗೆ ಈ ದಳ್ಳುರಿಯ ಕಾವು ಇಡೀ ಉತ್ತರ ಭಾರತದಾದ್ಯಂತ ವ್ಯಾಪಿಸಿ ಕಾಂಗ್ರೆಸ್‌ಗೆ ಹಾನಿ ಮಾಡಲೂಬಹುದು. ದಶಕಗಳಿಂದ ಕಾಂಗ್ರೆಸ್ ಧ್ರುವೀಕರಣದ ಮೂಲಕ ಮುಸ್ಲಿಮರ ಮತಗಳನ್ನು ಜೋಳಿಗೆಗೆ ಹಾಕಿಕೊಳ್ಳುತ್ತಾ ಬಂದಿತ್ತು. ಅದರ ಈ ತಂತ್ರದಿಂದಾಗಿ ಮುಸಲ್ಮಾನರು ಎಲ್ಲಾ ವಲಯಗಳಲ್ಲೂ ಹಿಂದುಳಿಯುತ್ತಲೇ ಬಂದಿದ್ದಾರೆ. ಈಗ ಆ ಸಮುದಾಯ ತಿರುಗಿ ಬೀಳುತ್ತಿದೆ.
ಫಲಿತಾಂಶವಾಗಿ, ಕಾಂಗ್ರೆಸ್ ತನ್ನ ಎರಡು ಪ್ರಬಲ ಸಾಂಪ್ರದಾಯಿಕ ಮತದಾರರನ್ನು 2014ರ ಚುನಾವಣೆಗಳಲ್ಲಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಚುನಾವಣೆಗಳು ಹತ್ತಿರುವಾಗುತ್ತಿರುವುದರಿಂದ ನಾವು ಎರಡು ಪ್ರಮುಖ ಮಿಥ್ಯೆಗಳನ್ನು ನಿವಾರಿಸಬೇಕಿದೆ. ಮೊದಲನೆಯದು, ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಧ್ಯಕ್ಷೀಯ ಮಾದರಿ ಆಯ್ಕೆ ಸರಿಹೊಂದುವುದಿಲ್ಲ ಎನ್ನುವುದು. ಇದು ನಿಜಕ್ಕೂ ಮೂರ್ಖತನದ ಪರಮಾವಧಿ. ಭಾರತದಂತೆಯೇ ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳೂ ಪ್ರಜಾಪ್ರಭುತ್ವ ರಾಷ್ಟ್ರಗಳೇ. ಈ ಎಲ್ಲಾ ದೇಶಗಳ ಪ್ರಮುಖ ಪಕ್ಷಗಳೂ ಆಂತರಿಕ ಚುನಾವಣೆಯ ಮೂಲಕ ತಮ್ಮ ನಾಯಕನ ಆಯ್ಕೆ ಮಾಡುತ್ತವೆ. ಹಾಗಾಗೆ ಮತದಾರರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿಯಾಗುತ್ತಾರೆ ಎನ್ನುವುದು ಮೊದಲೇ ತಿಳಿದಿರುತ್ತದೆ.
ಉದಾಹರಣೆಗೆ ಬ್ರಿಟನ್ ಅನ್ನೇ ತೆಗೆದುಕೊಳ್ಳಿ. 2010ರ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ನೇತೃತ್ವ ವಹಿಸಿದವರು ಡೇವಿಡ್ ಕೆಮರೂನ್. ಲೇಬರ್ ಪಕ್ಷದ ನೇತೃತ್ವವನ್ನು ಬ್ರೌನ್ ವಹಿಸಿಕೊಂಡಿದ್ದರು. ಮತದಾನ ಮಾಡುವುದಕ್ಕಿಂತ ಮುಂಚೆಯೇ ಮತದಾರರಿಗೆ ಯಾವ ಪಕ್ಷದಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಎಂಬುದು ಗೊತ್ತಿತ್ತು.
ಹಾಗಾಗೇ ಈ ಅಧ್ಯಕ್ಷೀಯ ಮಾದರಿ ಗಡ ಸಂಸದೀಯ ಮಾದರಿ ಎನ್ನುವ ಚರ್ಚೆಯ ಅರ್ಥಹೀನ. ಕಾಂಗ್ರೆಸ್ ತನ್ನ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್‌ರನ್ನು ಮುಂದೆ ನಿಲ್ಲಿಸುವುದಕ್ಕೆ ಹೆದರುತ್ತಿರುವುದರಿಂದಲೇ ಇಂಥ ಅಸಂಬದ್ಧ ವಾದ ಮಾಡುತ್ತಿದೆ. ಹಾಗೆ ನೋಡಿದರೆ ಈ ರೀತಿ ವಾದ ಮಾಡುವ ಅರ್ಹತೆಯೇ ಅದಕ್ಕಿಲ್ಲ. ಆ ಪಕ್ಷದಲ್ಲಿ ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬನಿಗೆ ಸರ್ಕಾರದ ನೀತಿಗಳಲ್ಲಿ ನಿರ್ಧಾರ ಕೈಗೊಳ್ಳುವುದಕ್ಕೆ ಅಧಿಕಾರವಿಲ್ಲ. ಬೇರೇ ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರಗಳು ಇಂಥ ಕುಟುಂಬ ರಾಜಕಾರಣವನ್ನು ಎಂದಿಗೂ ಸಹಿಸಿಕೊಂಡಿಲ್ಲ.
ಈ ಅಸಂಗತತೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹುಟ್ಟುಹಾಕಿರುವ ಇನ್ನೊಂದು ಮಿಥ್ಯೆಯೆಂದರೆ, "ರಾಹುಲ್ ಗಾಂಧಿ, ನರೇಂದ್ರ ಮೋದಿಯಂತೆ ಪ್ರಧಾನ ಮಂತ್ರಿಯಾಗಲು ಹಾತೊರೆಯುತ್ತಿಲ್ಲ" ಎಂಬುದು!
ಸತ್ಯವೇನೆಂದರೆ ರಾಹುಲ್ ಕೂಡ ಅವರಮ್ಮ ಸೋನಿಯಾರಂತೆ, ಪ್ರಧಾನಿಯವರನ್ನು ತಮ್ಮ ತಾಳಕ್ಕೆ ಕುಣಿಸುವಂಥ ಅಧಿಕಾರವನ್ನು ಪಡೆದಿದ್ದಾರೆ. ಅವರದನ್ನು ಎಂಜಾಯ್ ಕೂಡ ಮಾಡುತ್ತಿದ್ದಾರೆ. ಪ್ರಧಾನಿಯಾಗುವ ಅವಶ್ಯಕತೆ ಅವರಿಗಿಲ್ಲವೇ ಇಲ್ಲ. ಜವಾಬ್ದಾರಿಯಿಲ್ಲದ ಅಧಿಕಾರವನ್ನು ಅನುಭವಿಸುವ ಅಸಂವಿಧಾನಿಕ ಸಂಪ್ರದಾಯವನ್ನು ಸೋನಿಯಾ ಗಾಂಧಿ 2004ರಿಂದಲೇ ಶುರುಮಾಡಿದರು. ಈಗ ಅಂಥ ಅಧಿಕಾರವನ್ನು ರಾಹುಲ್ ಕೂಡ ಅನುಭವಿಸುತ್ತಿದ್ದಾರೆ.  
---
ಇನ್ನೂ ಕೆಲವು ಪ್ರಮುಖ ಪ್ರಶ್ನೆಗಳು ಹಾಗೆ ಉಳಿದುಕೊಂಡುಬಿಟ್ಟಿವೆ:
ಒಂದು, ಕಾಂಗ್ರೆಸ್‌ನಲ್ಲಿನ ನಾಯಕತ್ವದ ಕೊರತೆಯ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆಯೇ?
ಎರಡು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಇಷ್ಟು ವರ್ಷದಿಂದ ಮುಸ್ಲಿಂ ಮತಗಳ ಧ್ರುವೀಕರಣ ಮಾಡಿಕೊಂಡು ಬಂದಿದ್ದವು. ಆದರೆ ಮುಝಫರ್‌ನಗರ ಹಿಂಸಾಚಾರದಿಂದಾಗಿ ಎಲ್ಲವೂ ತಿರುಗುಮುರುಗಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಹಾಗಿದ್ದರೆ 2014 ಬಿಜೆಪಿಯ ಹಿಡಿತದಲ್ಲಿರಲಿದೆಯೇ?
ಮೂರು, ನರೇಂದ್ರ ಮೋದಿಯವರು, ಈ ಪ್ರಮುಖ ವರ್ಗಗಳ(ಮೊದಲ ಬಾರಿಯ ಮತದಾರರು, ನಗರದ ಮಧ್ಯಮ ವರ್ಗ ಮತ್ತು ಶಾಂತ ಹಿಂದು ಬಹುಸಂಖ್ಯಾತರು) ಬೆಂಬಲ ಪಡೆದು 16ನೇ ಲೋಕಸಭೆಯಲ್ಲಿ ಬಿಜೆಪಿಗೆ 200ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ದೊರಕಿಸಿಕೊಡಬಲ್ಲರೆ? ಇವೆಲ್ಲದರ ವಿಶ್ಲೇಷಣೆಗೆ ಇನ್ನೊಂದು ಲೇಖನವನ್ನೇ ಬರೆಯಬೇಕಾಗುತ್ತದೆ.

(ಟೈಮ್ಸ್ ಬ್ಲಾಗ್‌ನಿಂದ, ಲೇಖಕರ ಅನುಮತಿ ಮೇರೆಗೆ)

- ಮಿನ್ಹಾಜ್ ಮರ್ಚೆಂಟ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.