ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿವೆ. ಇದಕ್ಕಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಪೈಕಿ ಚಲನಚಿತ್ರೋತ್ಸವ ಉಪ ಸಮಿತಿಯೂ ಒಂದು. ಕಳೆದ ವಾರ ಚಲನಚಿತ್ರ ಉಪ ಸಮಿತಿಯ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿ ಚಿತ್ರೋತ್ಸವದ ವಿವರ ನೀಡುತ್ತಿದ್ದರು. ಆಗ ಮಧ್ಯ ಪ್ರವೇಶಿಸಿದ ಪತ್ರಕರ್ತರೊಬ್ಬರು, 'ಮೇಡಂ ಈ ಬಾರಿಯ ಚಿತ್ರೋತ್ಸವದಲ್ಲಿ ಜೋಗಯ್ಯ, ಅಟ್ಟಹಾಸ, ಎದೆಗಾರಿಕೆ ಮೊದಲಾದ ಜನಪ್ರಿಯ ಚಿತ್ರಗಳನ್ನು ತೋರಿಸುತ್ತಿದ್ದೀರಿ. ದಂಡುಪಾಳ್ಯ, ಉಮೇಶ್ ರೆಡ್ಡಿ, ಸಿಲ್ಕ್‌ನಂಥ ಚಿತ್ರಗಳನ್ನೂ ತೋರಿಸಬಹುದಿತ್ತು' ಎಂದರು. ಚಲನಚಿತ್ರ ಹಿನ್ನೆಲೆಯುಳ್ಳ ಮೀನಾ ಅವರಿಗೆ ಇದು ಅರ್ಥವಾಗಿ ನಕ್ಕು ಸುಮ್ಮನಾದರು. ಆದರೆ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ಸಮಿತಿಯ ಸದಸ್ಯರೊಬ್ಬರು ಆ ಪತ್ರಕರ್ತನ ಬಳಿ ಬಂದು, 'ಸಾರ್... ನೀವೇನು ಯೋಚ್ನೆ ಮಾಡಬೇಡಿ. ಸಾಹೇಬ್ರುಗೇಳಿ (ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್) ನೀವ್ ಹೇಳಿರೋ ಚಿತ್ರಗಳನ್ನು ತೋರಿಸಾನ ಬಿಡಿ ಸಾ...' ಎಂದು ಸಮಾಧಾನ ಮಾಡಲೆತ್ನಿಸಿದರು!
ಮುಂದೆ ಆಗುವ ಕಳ್ಳತನ ಮೈಸೂರು
ಕಮಿಷನರ್‌ಗೆ ಈಗಲೇ ಗೊತ್ತಾಗಿದೆ!
ಕಳ್ಳತನವಾದ ಮೇಲೆ ಕದೀಮರನ್ನು ಹಿಡಿಯಲು ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಹರಸಾಹಸ ಪಟ್ಟು ಸೆರೆ ಹಿಡಿಯುವುದು ಮಾಮೂಲಿ. ಆದರೆ, ಮೈಸೂರು ಪೊಲೀಸ್ ಆಯುಕ್ತರಿಗೆ ಮಾತ್ರ ಮುಂದೆ ನಡೆಯುವ ಕಳ್ಳತನ ಮೊದಲೇ ಗೊತ್ತಾಗಿ ಬಿಡುತ್ತದೆ! ಇಂಥ ಆಯುಕ್ತರು ಇರುವಾಗ ಮೈಸೂರಿನಲ್ಲಿ ಕಳ್ಳತನ ಕಡಿಮೆಯೇನೂ ಆಗಿಲ್ಲ. ಈಗ ವಿಷಯಕ್ಕೆ ಬರ್ತೀನಿ ಕೇಳಿ. ಇತ್ತೀಚೆಗೆ ಮೈಸೂರು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸುದ್ದಿಗೋಷ್ಠಿ ಕರೆದಿದ್ದರು. ಅದೂ ಇದೂ ಮಾತಾಡಿ ಕಳ್ಳತನ ವಿಷಯ ಪ್ರಸ್ತಾಪಿಸಿದರು. ನಮಗೊಂದು ಹೊಸ ಐಡಿಯಾ ಸಿಕ್ಕಿದೆ. ಅ.5ರೊಳಗೆ ನಗರದಲ್ಲಿ ಮೂರು ಸರಗಳ್ಳತನ ಆಗುವ ಸಾಧ್ಯತೆ ಇದೆ. ನಮಗೆ ಈಗಲೇ ಎಲ್ಲವೂ ಅರ್ಥವಾಗಿದೆ ಎಂದರು. ಆದರೆ, ಅದನ್ನು ತಡೆಗಟ್ಟುವುದು ಸಾಧ್ಯವೇ ಎಂಬುದನ್ನು ಮಾತ್ರ ವಿವರಿಸದೆ ಎದ್ದು ಹೋದರು!
ಹೆಸ್ಕಾಂ ಅಧಿಕಾರಿ ಕಾಲಿಟ್ಟಲ್ಲಿ ಕಗ್ಗತ್ತಲು!
ದೀಪದ ಕೆಳಗೆ ಕತ್ತಲು ಎಂಬುದು ಗಾದೆ ಮಾತು. ಆದರೆ, ಇದನ್ನು ಕೊಂಚ ಬದಲಾಯಿಸಿ 'ಹೆಸ್ಕಾಂ ಅಧಿಕಾರಿ ಕಾಲಿಟ್ಟಲ್ಲಿ ಕಗ್ಗತ್ತಲು ಎನ್ನಬಹುದು. ಇದಕ್ಕೆ ಪುಷ್ಟಿ ನೀಡಿದ್ದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಘಟನೆ. ಜಿಲ್ಲಾಧಿಕಾರಿ ಎನ್. ಜಯರಾಂ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿದ್ದ ವೇಳೆ ಹೆಸ್ಕಾಂ ಅಧಿಕಾರಿಯೊಬ್ಬರು ಎಂಟ್ರಿ ಕೊಟ್ಟರು. ಅವರು ಕಾಲಿಟ್ಟಿದ್ದೇ ತಡ ಕರೆಂಟ್ ಹೋಯ್ತು. ಏನ್ರೀ ನೀವು ಎಲ್ಲಿ ಕಾಲಿಡುತ್ತೀರೋ ಅಲ್ಲಿ ಕರೆಂಟ್ ಹೋಗುತ್ತಾ ಎಂದು ಗರಂ ಆದರು. ಇದರಿಂದ ತಬ್ಬಿಬ್ಬಾದ ಹೆಸ್ಕಾಂ ಅಧಿಕಾರಿ, ಇಲ್ಲ.. ಇಲ್ಲ... ಸಾರ್, ಹಾಗೇನಿಲ್ಲ. ಎಲ್ಲಾ ಕಡೇನೂ ಕರೆಂಟ್ ಸಮಸ್ಯೆ ಇದೆ ಎಂದರು. ಕತ್ತಲಾವರಿಸಿದ್ದ ಕಚೇರಿಯಲ್ಲಿ ಜನರೇಟರ್ ಸ್ಟಾರ್ಟ್ ಮಾಡುವ ಹೊತ್ತಿಗೆ ಕರೆಂಟ್ ಬಂದಾಗ ಸಭೆಯಲ್ಲಿ ನಗೆಗಡಲು!
ಸಿಎಂಗೆ ಬಿಜೆಪಿ, ಕಾಂಗ್ರೆಸ್ ಸಹಕಾರ ಬೇಡ್ವಂತೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೂ ಪೂರ್ವಾಶ್ರಮದ ನೆನಪು ಹೋಗಿಲ್ಲ! ಹೌದು ಇದಕ್ಕೆ ಕಳೆದ ವಾರ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಹೇಳಿದ ಮಾತೇ ನಿದರ್ಶನ. 'ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕದಲ್ಲಿದ್ದಾರಂತೆ ನಿಜವೇ?' ಎಂದು ಪತ್ರಕರ್ತರು ಕೇಳಿದಾಗ, 'ನಾವು ಸುಭದ್ರ ಸರ್ಕಾರ ನೀಡುತ್ತಿದ್ದೇವೆ. ನಮಗೆ ಬಿಜೆಪಿಯವರ ಸಹಕಾರವೂ ಬೇಡ, ಕಾಂಗ್ರೆಸ್‌ನವರ ಸಹಕಾರವೂ ಬೇಡ' ಎಂದರು. ಜೆಡಿಎಸ್ ಎಂದು ಹೇಳುವ ಬದಲು ಕಾಂಗ್ರೆಸ್ ಎಂದು ಹೇಳಿ ಪೇಚಿಗೆ ಸಿಲುಕಿದರು!
ಶಿಷ್ಟಾಚಾರ ಉಲ್ಲಂಘಿಸಿ ಭಾಷಣ ಬಿಗಿದ ಜಾರ್ಜ್
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಇತ್ತೀಚೆಗೆ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಶಿಷ್ಟಾಚಾರದ ಬಗ್ಗೆ ಭಾಷಣವನ್ನೇ ಬಿಗಿದರು. ಈ ಜಿಲ್ಲೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ. ಇನ್ಮುಂದೆ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕು. ಉಲ್ಲಂಘನೆ ಪ್ರಕರಣಗಳು ಮರುಕಳಿಸಿದರೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಎಚ್ಚರಿಕೆಯನ್ನೂ ನೀಡಿದರು. ಆದರೆ, ಅವರು ಪಾಲ್ಗೊಂಡಿದ್ದ ಸಮಾರಂಭದ ವೇದಿಕೆಯಲ್ಲಿ ಜನಪ್ರತಿನಿಧಿಗಳಲ್ಲದ ಕಾಂಗ್ರೆಸ್ ಮುಖಂಡರು ರಾರಾಜಿಸುತ್ತಿದ್ದರು. ಹೀಗೆ ತಾವೇ ಶಿಷ್ಟಾಚಾರ ಉಲ್ಲಂಘನೆಗೆ ಕಾರಣೀಭೂತರಾದ ಸಚಿವರು ಅದೇ ವಿಷಯವಾಗಿ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದನ್ನು ಕೇಳಿ ಪತ್ರಕರ್ತರು ಬೇಸ್ತುಬಿದ್ದರು!
ಎಲ್ಲರೂ ಎಮ್ಮೆಗಳಾಗೋಣ!
ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ನಟಿ ಉಮಾಶ್ರೀ ಅವರೀಗ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಕಳೆದ ವಾರ ಮೈಸೂರಿನ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರನ್ನು ನಿರೂಪಕಿ, ಕಷ್ಟಪಟ್ಟು ಎಂಎ ಮಾಡಿ, ರಾಜಕೀಯಕ್ಕೆ ಹೋಗಿ ಮಂತ್ರಿಯಾಗಿದ್ದಾರೆ ಎಂದು ಹೊಗಳಿದರು. ಅದನ್ನೇ ಆಧಾರವಾಗಿಟ್ಟುಕೊಂಡು ಮಾತು ಆರಂಭಿಸಿದ ಉಮಾಶ್ರೀ, ನಾನು ಬಹಳ ಆಳವಾಗಿ ಎಂಎ ಪಾಸ್ ಮಾಡಲಿಲ್ಲ. ಮಕ್ಕಿಕ ಮಕ್ಕಿ ಬರೆದು ಪಾಸ್ ಮಾಡ್ದೆ. ಎಂಎ ಮಾಡಬೇಕೆಂಬುದು ನನ್ನ ಆಸೆಯಷ್ಟೆ. ನಾನು ರಾಜಕೀಯಕ್ಕೆ ಬರಬೇಕು ಎಂದು ಎಂಎ ಮಾಡಲಿಲ್ಲ. ಮಗ ಎಲ್‌ಎಲ್‌ಎಂ, ಮಗಳು ಎಂಎ, ಅಳಿಯ ಎಂಡಿಎಸ್, ಸೊಸೆ ಬಿಎ- ಹೀಗೆ ಎಲ್ರೂ ಡಿಗ್ರಿ. ನಾನ್ ಮಾತ್ರ ಎಸ್ಸೆಸ್ಸೆಲ್ಸಿ. ಎಲ್ಲಾ ಬಿಎ, ಎಂ.ಎ ಮಾಡಿರಬೇಕಾದ್ರೆ ನಾನ್ ಯಾಕೆ ಎಂಎ ಮಾಡಬಾರ್ದು ಅನ್ನಿಸ್ತು. ಬಿಎ ಮಾಡಿದ ಸೊಸೆ ನಾನು ಒಟ್ಟಿಗೆ ಎಂಎ ಪರೀಕ್ಷೆ ಬರೆದು ಪಾಸಾದ್ವಿ. ನಿಮ್ಮ ಮನೆಯಲ್ಲಿ ನಿಮ್ಮಪ್ಪ ಅಥವಾ ನಿಮ್ಮವ್ವ ಡಿಗ್ರಿ ಮಾಡಬೇಕು ಅಂತಾ ಆಸೆ ಇದ್ರೆ ಓದಿಸಿ. ಅವರ ಆಸೆಯನ್ನು ನಿರಾಶೆ ಮಾಡಬೇಡಿ. ಎಲ್ರೂ ಎಮ್ಮೆಗಳಾಗೋಣ... ಸಾರಿ ಎಲ್ರೂ ಎಂಎಗಳಾಗೋಣ ಎಂದಾಗ ಸಭೆಯಲ್ಲಿ ನಗುವಿನ ಅಲೆ.
- ನಂಬಿರಾಜ್