

'ನೀರಿಲ್ಲ. ಸಮಸ್ಯೆ ಬಗ್ಗೆ ನಮಗೆ ಅರಿವಿದೆ. ಸರ್ಕಾರದಲ್ಲಿ ಹಣವೂ ಇದೆ. ಸಮಸ್ಯೆ ಇರುವಲ್ಲಿ ಕೊಳವೆ ಬಾವಿ ಮಂಜೂರಾತಿಯೂ ಸಿಗುತ್ತಿದೆ. ಆದರೆ ಸಾವಿರಾರು ಅಡಿ ಕೊರೆದರೂ ನೀರೇ ಬರುತ್ತಿಲ್ಲ. ಇಲ್ಲದ ನೀರನ್ನು ನಾವು ಎಲ್ಲಿಂದ ತರೋಣ?'
ರಾಜ್ಯ ರಾಜಧಾನಿಯ ಜನಸಂಪರ್ಕ ಸಭೆಯಲ್ಲಿ ಸಚಿವರೊಬ್ಬರು ಕೆಲವೇ ದಿನಗಳ ಹಿಂದೆ ಹೇಳಿದ ಮಾತು. ರಾಜ್ಯದ ಯಾವುದೇ ಮೂಲೆಗೆ ಹೋಗಿ. ನೀರಿಲ್ಲ...ನೀರಿಲ್ಲ...ನೀರಿಲ್ಲ... ಶಿವರಾತ್ರಿ ಕಳೆಯುತ್ತಿದ್ದಂತೆ ಕೇಳಿಬರುವ ಕೂಗು. ಮಲೆನಾಡಿನಂಥ ಮಲೆನಾಡಿನ ಒಡಲೂ ಬರಿದಾಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳು ಬಿಸಿಲ ಬೇಗೆ ಆರಂಭವಾಗುತ್ತಿದ್ದಂತೆ ಬತ್ತಿ ಹೋಗುವುದು, ಬಾವಿಗಳೂ ಬತ್ತುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಪಟ್ಟಣ ಪ್ರದೇಶಗಳಲ್ಲಂತೂ ಯಾವ ಪರಿಸ್ಥಿತಿ ತಲುಪಿಬಿಟ್ಟಿದ್ದೇವೆ ಎಂದರೆ ಕಾಸು ಕೊಟ್ಟರೂ ನೀರು ಸಿಗದು. ಸಾವಿರ ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರಿನ ಸೆಲೆಯೇ ಸಿಗುವುದಿಲ್ಲ ಎನ್ನುವುದು ಒಂದು ಮುಖವಾದರೆ, ಇನ್ನೊಂದು ಮುಖ ಇನ್ನೂ ಘೋರ. ಕೊಳಾಯಿಯಲ್ಲಿ ನೀರು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಟ್ಯಾಂಕರ್ ನೀರಿಗೆ ಇಂದು ಬೆಳಗ್ಗೆ ಹೇಳಿದರೆ ನಾಳೆ ರಾತ್ರಿಯಾದರೂ ಬರುತ್ತದೆ ಎನ್ನುವ ಖಾತ್ರಿ ಇಲ್ಲ. ಟ್ಯಾಂಕರ್‌ನವರು ಹೇಳುವುದೂ ಅದನ್ನೇ, 'ನಮ್ಮ ಬೋರ್‌ವೆಲ್‌ನಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಒಂದು ಟ್ಯಾಂಕ್ ಭರ್ತಿಯಾಗಲು ಈಗ ಎರಡು ಗಂಟೆಯಾದರೂ ಬೇಕು. ನಾವೇನು ಮಾಡೋಣ ಹೇಳಿ'. ಶಹರ ಇರಲಿ, ಗ್ರಾಮೀಣ ಪ್ರದೇಶಗಳೇ ಇರಲಿ. ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ, ಕೊಳವೆ ಬಾವಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರತಿವರ್ಷವೂ ಸಾವಿರಾರು ಕೋಟಿ ರುಪಾಯಿ ವ್ಯಯಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲು ಎಂಬಂತಾಗಿಬಿಟ್ಟಿದೆ.
ನೀರು ಈಗ ಎಲ್ಲರಿಗೂ 'ಬಿಸಿ' ಮುಟ್ಟಿಸುತ್ತಿದೆ. ರಾಜಕೀಯ ಪಕ್ಷಗಳನ್ನೂ ಬಿಟ್ಟಿಲ್ಲ. ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯನ್ನೇ ತೆಗೆದುಕೊಳ್ಳಿ. ಮನೆ ಬಾಗಿಲಿಗೆ ಬರುವ ರಾಜಕಾರಣಿಗಳ ಮುಂದೆ ಮತದಾರರು ಇಡುವ ಬೇಡಿಕೆಯಾದರೂ ಏನು? ರಸ್ತೆ ಮಾಡಿಸಿ ಕೊಡಿ ಎಂದು ಕೇಳುತ್ತಿಲ್ಲ. ಸದಾ ಕಣ್ಣಾಮುಚ್ಚಾಲೆಯಾಡುವ ವಿದ್ಯುತ್ ಕುರಿತು ದೂರುತ್ತಿಲ್ಲ. ಅವರದ್ದು ಒಂದೇ ಬೇಡಿಕೆ, 'ನಮಗೆ ನೀರು ಕೊಡಿ'. ಹೀಗಾಗಿ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀರಿನ ವಿಚಾರ ಪ್ರಸ್ತಾಪಿಸಲೇಬೇಕಾದ ಅನಿವಾರ್ಯತೆ. ಆದ್ದರಿಂದಲೇ ಪ್ರಮುಖ ಪಕ್ಷಗಳ ಪ್ರಣಾಳಿಕೆಗಳಲ್ಲಿ ಇರುವ ಸಾಮಾನ್ಯ ಅಂಶ ಎಂದರೆ ನೀರು. ಅಷ್ಟರಮಟ್ಟಿಗಾದರೂ ಜನ ಜಾಗೃತರಾಗಿದ್ದಾರಲ್ಲ, ಪಕ್ಷಗಳು ಸ್ಪಂದಿಸಿವೆಯಲ್ಲ. ಅದೇ ಸಮಾಧಾನ. ನಮ್ಮ ರಾಜ್ಯದಲ್ಲಂತೂ ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರಗಳಲ್ಲಿ ಈ ಬಾರಿ ಎತ್ತಿನಹೊಳೆ ಯೋಜನೆಯೇ ಪ್ರಮುಖ ವಿಚಾರವಾಗಿದೆ. ಹಿಂದೆಂದೂ ನೀರು ಚುನಾವಣೆಗಳಲ್ಲಿ ಈ ಮಟ್ಟಿನ ಪ್ರಾಮುಖ್ಯ ಪಡೆದಿರಲಿಲ್ಲ.
ಕೆಲವು ವರದಿಗಳ ಪ್ರಕಾರ 2050ರ ಹೊತ್ತಿಗೆ 'ಜಲ ಕೊರತೆ' ಎದುರಿಸುವ ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಈ ಹಿನ್ನೆಲೆಯಲ್ಲಿ ನೋಡಿದರೂ ನೀರು ಕಡೆಗಣಿಸಬಹುದಾದ ಸಂಗತಿ ಅಲ್ಲವೇ ಅಲ್ಲ. ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ ಬಗ್ಗೆ ಗಮನ ಕೊಡದಿದ್ದರೆ ಭವಿಷ್ಯದ ದಿನಗಳು ಭೀಕರವಾಗಲಿವೆ ಎನ್ನುವುದರಲ್ಲಿ ಕಿಂಚಿತ್ತೂ ಅನುಮಾನ ಬೇಡ. 2014ರ ಲೋಕ ಸಮರದ ಪ್ರಣಾಳಿಕೆಯಲ್ಲಿ ಯಾವ್ಯಾವ ಪಕ್ಷ ನೀರಿನ ಕುರಿತು ಏನು ಭರವಸೆ ನೀಡಿದೆ ನೋಡೋಣ.
ಪಾಠ ಕಲಿಯಿತೆ ಕಾಂಗ್ರೆಸ್?
ನೀರಾವರಿ ಸೇರಿದಂತೆ ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳ ತ್ವರಿತ ಅನುಮೋದನೆಗಾಗಿ ರಾಷ್ಟ್ರೀಯ ಪಾರಿಸಾರಿಕ ಅಭಿವೃದ್ಧಿ ಮತ್ತು ನಿರ್ವಹಣಾ ಮಂಡಳಿ ರಚಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್,
ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಜೀವನ ಮಾತ್ರವಲ್ಲದೆ ಕೃಷಿಯಲ್ಲಿಯೂ ನೀರಿನ ಮಿತ ಬಳಕೆ ಕುರಿತು ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದೆ. ಗಂಗಾ ಯೋಜನೆ ವೈಫಲ್ಯದಿಂದ ಪಾಠ ಕಲಿತಂತಿರುವ ಪಕ್ಷ, ಪ್ರಮುಖ ನದಿಗಳನ್ನು ಸ್ವಚ್ಛಗೊಳಿಸಲು ಸ್ವಾಯತ್ತ ಏಜೆನ್ಸಿಯೊಂದನ್ನು ಸ್ಥಾಪಿಸುವುದಾಗಿಯೂ, ಅದಕ್ಕೆ ಆರ್ಥಿಕ ಕೊರತೆ ಕಾಡದಂತೆ ಎಚ್ಚರ ವಹಿಸುವುದಾಗಿಯೂ ಹೇಳಿಕೊಂಡಿದೆ. ಕೈಗೆಟುಕುವ ದರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಗ್ರಾಮೀಣ ಪ್ರದೇಶದ ಕುಡಿಯುವ ನೀರು ಮತ್ತು ನೀರಾವರಿ ವಿಚಾರಗಳಿಗೆ ಸಂಬಂಧಿಸಿ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟಿನಲ್ಲಿ ವ್ಯವಸ್ಥೆಯೊಂದನ್ನು ರೂಪುಗೊಳಿಸುವುದು ಕಾಂಗ್ರೆಸ್‌ನ ಇನ್ನೊಂದು ಪ್ರಮುಖ ಭರವಸೆ. ಜೆನರ್ಮ್-2 ಮೂಲಕ ನಗರಗಳಲ್ಲಿ ಉತ್ತಮ ಒಳಚರಂಡಿ ಸೌಲಭ್ಯ, ದೇಶದ ಪ್ರತಿ ಶಾಲೆ, ಮನೆಗಳಲ್ಲಿ ಶೌಚಾಲಯಗಳೂ ಪಕ್ಷದ ಆಶ್ವಾಸನೆಗಳಲ್ಲಿ ಸೇರಿವೆ.
ಚಿಗುರಿತು ನದಿ ಜೋಡಣೆ ಕನಸು
ತಡವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದರೂ ನೀರಿನ ಕುರಿತು ಅತಿ ಹೆಚ್ಚು ಮುತುವರ್ಜಿ ತೋರಿಸಿದ್ದು ಬಿಜೆಪಿ. ಗಂಗಾ-ಕಾವೇರಿ ಸೇರಿಸುವುದು ಒಳಗೊಂಡಂತೆ ವಾಜಪೇಯಿ ಕಾಲದಿಂದಲೂ ನದಿ ಜೋಡಣೆ ಪಕ್ಷದ ಪ್ರಮುಖ ವಿಚಾರವಾಗಿತ್ತು. ಆ ನಿಲುವಿಗೆ ಈಗಲೂ ಬದ್ಧವಾಗಿದೆ. ಕಾರ್ಯಸಾಧು ಅನ್ನಿಸುವ ಕಡೆಗಳಲ್ಲಿ ನದಿ ಜೋಡಣೆಗೆ ಒತ್ತು ನೀಡುವುದಾಗಿ ಪಕ್ಷ ಹೇಳಿಕೊಂಡಿದೆ. ಖುದ್ದು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೇ ಈ ವಿಚಾರದಲ್ಲಿ ಬಹಳ ಮುತುವರ್ಜಿ. ಸರ್ದಾರ್ ಸರೋವರ್ ಪ್ರಾಜೆಕ್ಟ್ ಹಾಗೂ ಸುಜಲಾಂ ಸುಫಲಾಂ ಯೋಜನೆಯಲ್ಲಿ ನರ್ಮದಾ ಮುಖ್ಯ ಕಾಲುವೆ ಮೂಲಕ 36 ಕೆರೆಗಳು ಈಗಾಗಲೇ ಭರ್ತಿಯಾಗಿವೆ. ಇನ್ನೊಂದು ಹಂತದಲ್ಲಿ ನರ್ಮದಾ ಕೊಳ್ಳದ 174 ಕೆರೆಗಳನ್ನು ಪರಸ್ಪರ ಜೋಡಿಸುವ ಪ್ರಸ್ತಾಪ ಇದೆ. ಸಾಬರಮತಿ-ಸರಸ್ವತಿ ಸೇರಿದಂತೆ ಹಲವು ಯೋಜನೆಗಳು ಮೋದಿ ಮುಂದಿವೆ. ಹೀಗಾಗಿ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದರೆ ನದಿ ಜೋಡಣೆ ಯೋಜನೆ ಕಾರ್ಯಗತವಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಹುದು.
'ಪ್ರತಿಯೊಬ್ಬರ ಹೊಲಕ್ಕೂ ನೀರು' ಧ್ಯೇಯದೊಂದಿಗೆ ಪ್ರಧಾನಮಂತ್ರಿ ಗ್ರಾಮ ಸಂಚಯಿ ಯೋಜನೆ ಆರಂಭಿಸುವುದಾಗಿ ಪಕ್ಷ ಹೇಳಿಕೊಂಡಿದೆ. ನೀರಾವರಿ ಜಮೀನುಗಳ ಪ್ರಮಾಣ ಹೆಚ್ಚಿಸುವುದು, ದೀರ್ಘ ಕಾಲದಿಂದ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ತ್ವರಿತ ಮಂಜೂರಾತಿ, ರೈತರ ಮಳೆ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಕೃಷಿಯಲ್ಲಿ ನೀರಿನ ಬಳಕೆ ಕಡಿಮೆ ಮಾಡುವಂತಹ ತಾಂತ್ರಿಕತೆಗೆ ಉತ್ತೇಜನ ನೀಡುವುದು, ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಯೋಜನೆಯ ಪ್ರಮುಖ ಆಶಯಗಳಾಗಿವೆ. ಅಸ್ಸಾಂನಲ್ಲಿ ಪ್ರವಾಹ ನಿಯಂತ್ರಣ ಮತ್ತು ನದಿ ನಿರ್ವಹಣೆ, ದೇಶಾದ್ಯಂತ ಮಳೆ ನೀರು ಕೊಯ್ಲು ಅಳವಡಿಕೆ ಮತ್ತು ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್‌ಗಳಂತಹ ವಿಷಕಾರಿ ರಾಸಾಯನಿಕಗಳು ಇರುವ ಪ್ರದೇಶಗಳಲ್ಲಿ ವಿಶೇಷ ಮುತುವರ್ಜಿ, ಪ್ರತಿ ಮನೆಗೂ ಕೊಳವೆ ನೀರು ಪೂರೈಕೆ ಹಾಗೂ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ 'ವಾಟರ್ ಗ್ರಿಡ್'ಗಳ ರಚನೆ, ಸ್ವಚ್ಛ ಮತ್ತು ಆರೋಗ್ಯಕಾರಿ ನಗರ ಜೀವನಕ್ಕಾಗಿ ತ್ಯಾಜ್ಯ ಮತ್ತು ನೀರು ನಿರ್ವಹಣಾ ವ್ಯವಸ್ಥೆ ಉನ್ನತೀಕರಣ ಇವೂ ಪಕ್ಷದ 'ಜಲ ಪ್ರಣಾಳಿಕೆ'ಯಲ್ಲಿನ ಪ್ರಮುಖ ಅಂಶಗಳು.
ಜನರ ಸೊತ್ತು
ಈ ಬಾರಿಯ ಚುನಾವಣೆಯಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿ ನಗರ ಪ್ರದೇಶಗಳತ್ತಲೇ ತನ್ನ ಗಮನ ಕೇಂದ್ರೀಕರಿಸಿದೆ ನಿಜ. ಆದರೆ ಪಕ್ಷದ ಪ್ರಣಾಳಿಕೆ ಗ್ರಾಮೀಣ ವಿಚಾರಗಳ ಬಗ್ಗೆಯೂ ಗಮನ ಹರಿಸಿದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಭೂ ಸ್ವಾಧೀನಗಳಂತಹ ವಿಚಾರಗಳಲ್ಲಿ ಗ್ರಾಮಸಭೆಗಳ ತೀರ್ಮಾನವೇ ಅಂತಿಮ ಎನ್ನುವುದು ಆಪ್ ಪ್ರತಿಪಾದನೆ. ಇದಕ್ಕಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಯನ್ನು ಪ್ರಸ್ತಾಪಿಸಲಾಗಿದೆ. ನದಿ, ಅರಣ್ಯ, ದೊಡ್ಡ ಪ್ರಮಾಣದ ಖನಿಜ ನಿಕ್ಷೇಪಗಳು ರಾಜ್ಯ ಸರ್ಕಾರದ ಮಾಲೀಕತ್ವಕ್ಕೆ ಒಳಪಡಬೇಕು, ಆದರೆ ಮಳೆನೀರು, ಕಿರು ಅರಣ್ಯ ಉತ್ಪನ್ನಗಳು, ಸಣ್ಣ ಖನಿಜ ನಿಕ್ಷೇಪಗಳು ಸ್ಥಳೀಯ ಸಮುದಾಯಗಳ ಒಡೆತನಕ್ಕೆ ಸೇರಬೇಕು. ಜಲಾನಯನ ಅಭಿವೃದ್ಧಿ, ಮಳೆ-ಮಣ್ಣು ಸಂರಕ್ಷಣೆ, ಮಳೆ ಕೊಯ್ಲುಗಳ ಮೂಲಕ ಅಂತರ್ಜಲ ವೃದ್ಧಿ, ಜಲ ಸಂರಕ್ಷಣೆ ಮಾಡುವುದಾಗಿ; ರೈತರಲ್ಲಿ ನೀರಿನ ಮಿತ ಬಳಕೆ ಪ್ರೋತ್ಸಾಹಿಸಲು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಜ್ರಿವಾಲರ ಬಳಗ ಪ್ರಕಟಿಸಿದೆ.
ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ, ತೃಣಮೂಲ ಕಾಂಗ್ರೆಸ್‌ಗಳು ಸಹ ಈ ಬಾರಿ ತಮ್ಮ ಪ್ರಣಾಳಿಕೆಗಳಲ್ಲಿ ನೀರಿಗೆ ಮಹತ್ವ ನೀಡಿವೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ, ಸಾಂಪ್ರದಾಯಿಕ ಜಲ ಸಂರಕ್ಷಣೆ ವಿಧಾನಗಳಾಗಿದ್ದ ಕೆರೆ-ಕೊಳಗಳ ಪುನರುಜ್ಜೀವನ, ಮಳೆ ಕೊಯ್ಲಿಗೆ ಪ್ರೋತ್ಸಾಹ, ನೀರಿನ ಬೇಡಿಕೆ ಮತ್ತು ಲಭ್ಯತೆ ಆಧರಿಸಿ ಪೂರೈಕೆ ವ್ಯವಸ್ಥೆ ಬಲಪಡಿಸುವುದು ಮೊದಲಾದ ಅಂಶಗಳನ್ನು ಈ ಪಕ್ಷಗಳು ಪ್ರಸ್ತಾಪಿಸಿವೆ. ಸಿಪಿಎಂ ಅಂತೂ ರಾಷ್ಟ್ರೀಯ ಜಲ ನೀತಿಯನ್ನೇ ರೂಪಿಸುವುದಾಗಿ ಘೋಷಿಸಿದ್ದರೆ, ತೃಣಮೂಲ ಕಾಂಗ್ರೆಸ್ ಕರ್ನಾಟಕದ ಕೃಷ್ಣಾ, ಪಶ್ಚಿಮ ಬಂಗಾಳದ ಹೂಗ್ಲಿ ಸೇರಿದಂತೆ ದೇಶದ ಪ್ರಮುಖ ನದಿಗಳಗುಂಟ 'ಜಲ ಸಾರಿಗೆ ಕಾರಿಡಾರ್'ನಂಥ ಕಲ್ಪನೆಯನ್ನು ಹರಿಬಿಟ್ಟಿದೆ. ಗಮನಿಸಬೇಕಾದ ಅಂಶ ಎಂದರೆ ಎಲ್ಲ ಪಕ್ಷಗಳಿಗೂ ಅಂತರ್ಜಲ ಹೆಚ್ಚಿಸಲು ಮಳೆಕೊಯ್ಲೇ ದಾರಿ ಎನ್ನುವ ಸತ್ಯ ಅರಿವಾಗಿರುವುದು ಮತ್ತು ನೈರ್ಮಲ್ಯ, ಪ್ರತಿ ಮನೆಗೂ ಶೌಚಾಲಯದಂಥ ವಿಚಾರಗಳ ಕುರಿತು ಎಲ್ಲ ಪಕ್ಷಗಳೂ ಚಿತ್ತ ಹರಿಸಿರುವುದು.
ಇಷ್ಟಕ್ಕೇ ನಾವು ಸಮಾಧಾನಪಟ್ಟುಕೊಂಡರೆ ಸಾಕೆ? ಏಕೆಂದರೆ ಎಲ್ಲ ಪಕ್ಷಗಳಿಗೂ ಚಿಂತಕರ ಚಾವಡಿ ಇರುತ್ತದೆ. ಪ್ರಣಾಳಿಕೆಗಳನ್ನು ಸಿದ್ಧಪಡಿಸುವಾಗ ಅವುಗಳದ್ದೇ ಮುಖ್ಯಪಾತ್ರ. ಆದರೆ ಅಧಿಕಾರಕ್ಕೆ ಬಂದ ಬಳಿಕ ಭರವಸೆಗಳನ್ನು ಈಡೇರಿಸುವ ಹಾದಿ ಅಂದುಕೊಂಡಷ್ಟು ಸುಲಭದ್ದಲ್ಲ. ಹೀಗಾಗಿ ಬಿಜೆಪಿ ಸೇರಿದಂತೆ ಪ್ರಣಾಳಿಕೆಯಲ್ಲಿ ನೀರಿಗೆ ಒತ್ತು ನೀಡಿರುವ ಪಕ್ಷಗಳು ತಮ್ಮ ಭರವಸೆಗಳನ್ನು ಹೇಗೆ ಕಾರ್ಯಗತಗೊಳಿಸುತ್ತವೆ ಎನ್ನುವ ಕುತೂಹಲ, ಗುಮಾನಿ ಎರಡೂ ಪರಿಸರವಾದಿಗಳಲ್ಲಿ ಮನೆ ಮಾಡಿರುವುದು ಆಶ್ಚರ್ಯವೇನೂ ಅಲ್ಲ.
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in