ಸಾಕು ಸಮ್ಮಿಶ್ರದ ರಾಡಿ, ಮತದಾರನೆ ಮಾಡೊಮ್ಮೆ ಮೋಡಿ
ಈ ಬಾರಿಯ ಚುನಾವಣಾ ಪ್ರಚಾರದ ರಂಗು ಮಾಡುತ್ತಿರುವ ಮೋಡಿಯನ್ನು ಗಮನಿಸಿದಾಗ. ಎಂತೆಂಥವರಿಗೋ ಕೊಟ್ಟು ನೋಡಿದ್ದಾಯಿತು, ಒಮ್ಮೆ ಮೋಡಿಗೆ ಒಳಗಾಗಿ ನೋಡಿಬಿಡೋಣ ಎಂದೆನಿಸಿದರೆ ಆಶ್ಚರ್ಯವಿಲ್ಲ. ಇಷ್ಟು ವರ್ಷಗಳ ಆಡಳಿತ ವೈಖರಿಗಳನ್ನು ವಿಶ್ಲೇಶಿಸಿ ನೋಡಿದರೆ, ಹಾಗನ್ನಿಸುವುದು ತಪ್ಪು ಎಂತಲೂ ಅನಿಸುವುದಿಲ್ಲ. ಸಂವಿಧಾನ ರಚನೆಯಾಗಿ ಚುನಾವಣಾ ರಾಜಕೀಯ ಪ್ರಾರಂಭವಾದಾಗಿನಿಂದ ನಡೆದ ಚುನಾವಣಾ ಫಲಿತಾಂಶಗಳತ್ತ ಒಮ್ಮೆ ಫ್ಲಾಶ್ಬ್ಯಾಕ್ಗೆ ಹೋಗಿ ನೋಡಿದರೆ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವಂತಹ ಅವಕಾಶ ಇಂದಿರಾ ಗಾಂಧಿಯವರೊಂದಿಗೇ ಕೊನೆಯಾಗಿ ಹೋಗಿದೆ. ಅವರ ಅಕಾಲ ಮೃತ್ಯುವಿನ ಸಹಾನುಭೂತಿ ರಾಜೀವ್ ಗಾಂಧಿಯವರ ನಾಯಕತ್ವಕ್ಕೆ ಅಭೂತಪೂರ್ವ ಬಹುಮತವನ್ನು ತಂದುಕೊಟ್ಟಿದ್ದನ್ನು ಬಿಟ್ಟರೆ ಸ್ವತಃ ರಾಜೀವ್ ಗಾಂಧಿಯವರ ದಾರುಣ ಸಾವು ಕೂಡ (ಅದಾಗಲೇ ಅರ್ಧದಷ್ಟು ಕ್ಷೇತ್ರಗಳಿಗೆ ಮತದಾನವಾಗಿ ಹೋಗಿದ್ದರಿಂದ) ಕಾಂಗ್ರೆಸ್ಗೆ ಸ್ಪಷ್ಟ ಬಹುಮತವನ್ನು ತಂದುಕೊಡಲಿಲ್ಲ. 1989 ರಿಂದೀಚೆಗೆ ನಡೆದಿರುವ ಯಾವ ಲೋಕಸಭಾ ಚುನಾವಣೆಯಲ್ಲೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದೇ ಇಲ್ಲ. ನಂತರ ಪ್ರಧಾನಿಗಳಾದ ಪಿ.ವಿ ನರಸಿಂಹರಾವ್, ವಿ.ಪಿ ಸಿಂಗ್, ವಾಜಪೇಯಿ, ಎಚ್.ಡಿ ದೇವೇಗೌಡ, ಐ.ಕೆ ಗುಜ್ರಾಲ್ ಮತ್ತು ಈಗಿನ ಡಾ. ಮನಮೋಹನ್ ಸಿಂಗ್ ಎಲ್ಲರೂ ಅಲ್ಪಮತದ ಸರ್ಕಾರ, ಇಲ್ಲ ಸಮ್ಮಿಶ್ರ ಸರ್ಕಾರ ನಡೆಸಿದವರೇ.
ಇಂಥಾ ಸರ್ಕಾರಗಳು ಅಸಹಾಯಕತೆಯ ಪ್ರತೀಕಗಳಷ್ಟೇ ಹೊರತು ಅಗತ್ಯದ ದ್ಯೋತಕವಲ್ಲ. ಇದು ಸ್ಪಷ್ಟ ತೀರ್ಪು ಬರಲಿಲ್ಲವೆಂಬ ಕಾರಣಕ್ಕೆ ಮತ್ತೆಮತ್ತೆ ಚುನಾವಣೆ ನಡೆಸಲಾಗದು, ದೇಶದ ಬೊಕ್ಕಸ ಬರಿದು ಮಾಡಲಾಗದು ಎಂಬ ಕಾರಣಕ್ಕೆ ಹುಟ್ಟಿಕೊಳ್ಳುವ ಒಂದು ತಾತ್ಕಾಲಿಕ ಶಮನಕಾರೀ ವ್ಯವಸ್ಥೆಯೇ ಹೊರತು ದೇಶದ ಹಿತದೃಷ್ಟಿಯಿಂದ ರೂಪುಗೊಳ್ಳುವ ವ್ಯವಸ್ಥೆಯಲ್ಲ. ಇಲ್ಲಿ ಪ್ರಮುಖ ಪಕ್ಷಕ್ಕೆ ಬೆಂಬಲ ಕೊಡುವ ಸಣ್ಣಪುಟ್ಟ ಪಕ್ಷಗಳ ಹಾಗೂ ಪಕ್ಷೇತರ ಸದಸ್ಯರುಗಳ ಧೋರಣೆ, ಅಧಿಕಾರ ಅನುಭವಿಸಲು ನಾವು ಒಬ್ಬರಿಗೆ ಸಹಾಯ ಮಾಡುತ್ತಿದ್ದೇವೆ ಎಂಬುದಾಗಿರುತ್ತದೆಯೇ ವಿನಃ ದೇಶ ಕಟ್ಟುವ ಕಾರ್ಯದಲ್ಲಿ ನಾವು ಭಾಗಿಯಾಗುತ್ತಿದ್ದೇವೆ ಎಂಬುದಾಗಿರುವುದಿಲ್ಲ.
ಇನ್ನು ಇವರ ಮರ್ಜಿಯಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವವರ ಮನಸ್ಥಿತಿ ಹೇಗಿರುತ್ತದೆಂದರೆ, ಹಳೇ ಕಾಲದಲ್ಲಿ ಮದುವೆ ಮನೆಗಳಲ್ಲಿ, ಗಂಡಿನ ಕಡೆಯವರು ಎಲ್ಲಿ ಮುನಿಸಿಕೊಂಡುಬಿಡುತ್ತಾರೋ, ಎಲ್ಲಿ ಸಂಬಂಧ ಕಡಿದುಕೊಂಡು ಹೋಗಿಬಿಡುತ್ತಾರೋ ಎಂದು ಹೆದರಿ, ನೆರಳಿನಂತೆ ಅವರನ್ನು ಹಿಂಬಾಲಿಸುತ್ತಾ, ಅವರು ಮುಖ ಬಿರಿದುಕೊಂಡರೆ ತಮ್ಮಿಂದ ಏನೋ ಅಪಚಾರವಾಗಿಹೋಗಿದೆ ಎಂದು ಪರಿತಪಿಸಿ, ಉಪಚಾರವನ್ನು ಮತ್ತಷ್ಟು ತೀವ್ರಗೊಳಿಸಿ ಮದುವೆ ಮುಗಿಸುವುದರಲ್ಲೇ ಸಾರ್ಥಕತೆಯನ್ನು ಕಾಣುವ ಹೆಣ್ಣಿನಕಡೆಯವರಂತೆ! ಇದರ ಸತ್ಯಾಸತ್ಯತೆಯ ತುಲನೆಯಾಗಬೇಕೆಂದರೆ ಇದುವರೆಗೂ ಬಂದ ಸಮ್ಮಿಶ್ರ ಸರ್ಕಾರಗಳ ಮೌಲ್ಯಮಾಪನ ಮಾಡಿನೋಡಬೇಕಾಗುತ್ತದೆ.
ಹಿಂದೆ ವಿ.ಪಿ ಸಿಂಗ್ರ ಸಾರಥ್ಯದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ತೀರಾ ವಿರುದ್ಧ ತತ್ವಸಿದ್ಧಾಂತಗಳಿಂದ ಕೂಡಿದ್ದ ಪಕ್ಷಗಳು ಅನಿವಾರ್ಯತೆಯಿಂದ ಬೆಂಬಲ ನೀಡಿದ್ದ ಸರ್ಕಾರ ಅದು. ಆದರೆ ಆದದ್ದೇನು? ಸಾಮಾಜಿಕ ನ್ಯಾಯ ಸ್ಥಾಪನೆ ಮಾಡುತ್ತೇವೆಂದು ಹೇಳಿ ಸರ್ಕಾರ ಮಂಡಲ್ ಆಯೋಗದ ವರದಿ ಜಾರಿ ಮಾಡಿತು, ಇದು ಪ್ರಮುಖ ಮಿತ್ರಪಕ್ಷದಲ್ಲಿ ಒಂದು ರೀತಿಯ ಅಸಮಾಧಾನದ ಹೊಗೆ ಎಬ್ಬಿಸಿತು. ವಿ.ಪಿ ಸಿಂಗ್ ತಮ್ಮದೇ ಆದ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ತಮ್ಮ ಓಟ್ ಬ್ಯಾಂಕಿಗೆ ಕೈಹಾಕಿ ಅದನ್ನು ಜಾತಿಯ ಆಧಾರದ ಮೇಲೆ ಒಡೆಯುವ ಹುನ್ನಾರ ಮಾಡುತ್ತಿದ್ದಾರೆಂಬ ಸಂದೇಹ ಮೂಡಿತು. ಕೂಡಲೇ ಅದಕ್ಕೆ ಪ್ರತ್ಯಸ್ತ್ರವೆಂಬಂತೆ ರಾಮಜನ್ಮಭೂಮಿ ಆಂದೋಲನವನ್ನು ಕೈಗೆತ್ತಿಕೊಂಡು ಹಿಂದು ಸಮಾಜವನ್ನು ಒಂದುಗೂಡಿಸುವ ಹೆಸರಲ್ಲಿ ರಥಯಾತ್ರೆ ಕೈಗೊಂಡು ತಮ್ಮ ಓಟ್ ಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಹೊರಟಿತು. ಪರಿಣಾಮವಾಗಿ ಸರ್ಕಾರ ಉರುಳಿಬಿತ್ತು.
ಇನ್ನು ಪಿ.ವಿ ನರಸಿಂಹರಾವ್ ನೇತೃತ್ವದ ಅಲ್ಪಮತದ ಸರ್ಕಾರವನ್ನು ನೋಡಿ. ಅವರನ್ನು ಜಾಗತೀಕರಣದ ಹರಿಕಾರರೆಂದೇ ಹೇಳಬೇಕು. ಅಂದು ಅವರು ಮುಕ್ತಮಾರುಕಟ್ಟೆಗೆ ಭಾರತದ ಬಾಗಿಲನ್ನು ತೆರೆದು ವಿಶ್ವಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡದೇ ಇದ್ದಿದ್ದರೆ ಅಂದಿನ ಉದ್ಯೋಗಾಕಾಂಕ್ಷಿಗಳ ಹಾಹಾಕಾರ ನೀಗಿಸಲು ಸಾಧ್ಯವೇ ಇರಲಿಲ್ಲ. ನಂತರ ಉದ್ಯೋಗಾವಕಾಶಗಳು ವಿದ್ಯಾರ್ಥಿಗಳನ್ನೇ ಹುಡುಕಿಕೊಂಡು ವ್ಯಾಸಂಗದ ಅವಧಿಯಲ್ಲೇ ಅವರಿದ್ದ ಕಾಲೇಜ್ ಕ್ಯಾಂಪಸ್ಗೇ ಬರುವಂತಾದುದು ನರಸಿಂಹರಾವ್ ಅವರ ಸಮಯೋಚಿತವಾದ ನಿರ್ಧಾರದಿಂದ. ಅಂತಹ ಜನೋಪಯೋಗಿ ನಿರ್ಧಾರವನ್ನು ತೆಗೆದುಕೊಳ್ಳಲು ಅವರು ಮಿತ್ರಪಕ್ಷಗಳಿಂದಲೇ ಎದುರಿಸಿದ ವಿರೋಧವೆಷ್ಟು? ಕಡೆಗೆ ತಮ್ಮ ಸರ್ಕಾರವನ್ನು ಉಳಿಸಿಕೊಂಡು ಅವಧಿ ಪೂರ್ಣ ಮಾಡಲು ಸಂಸದರಿಗೆ ಲಂಚ ನೀಡುವಂತಹ ಅಪಮಾರ್ಗವನ್ನೂ ಹಿಡಿಯಬೇಕಾಯಿತು.
ಇನ್ನು ಸಮ್ಮಿಶ್ರ ಸರ್ಕಾರಗಳಲ್ಲಿ ಭಾಗಿಯಾಗುವ ರಾಜಕೀಯ ಪಕ್ಷಗಳ ಗುರಿ ಸ್ವಹಿತಾಸಕ್ತಿಯಾಗಿರುತ್ತದೆಯೇ ಹೊರತು ರಾಷ್ಟ್ರಹಿತವಾಗಿರುವುದಿಲ್ಲ ಎಂಬುದಕ್ಕೆ ಪ್ರಬಲ ನಿದರ್ಶನ ಸಿಕ್ಕಿದ್ದು 1998ರಲ್ಲಿ. ಆಗ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಸಿಗದೆ ಅತೀ ದೊಡ್ಡ ಪಕ್ಷವಾಗಿ ಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಷ್ಟ್ರಪತಿಗಳಿಂದ ಆದೇಶ ಬಂತು. ಅದರಂತೆ ವಾಜಪೇಯಿಯವರ ನೇತೃತ್ವದಲ್ಲಿ ಸರ್ಕಾರವೂ ರಚನೆಯಾಯಿತು. ಆದರೆ ಆ ಪಕ್ಷದ ತತ್ವಸಿದ್ಧಾಂತಗಳಿಗೂ ತಮ್ಮ ಪಕ್ಷಕ್ಕೂ ಹೊಂದಾಣಿಕೆ ಸಾಧ್ಯವೇ ಇಲ್ಲವೆಂಬ ತಾತ್ವಿಕ ಕಾರಣ ಕೊಟ್ಟು ದೇಶದ ಯಾವ ಪಕ್ಷಗಳೂ ಅವರನ್ನು ಬೆಂಬಲಿಸಲಿಲ್ಲ. ಹಾಗಾಗಿ ಸರ್ಕಾರ 13 ದಿನಗಳಲ್ಲೇ ಉರುಳಿಬಿತ್ತು. ವಿಪರ್ಯಾಸವೆಂದರೆ ಕಾಂಗ್ರೆಸ್ ಸಿದ್ಧಾಂತಗಳನ್ನು ವಿರೋಧಿಸಿ ಚುನಾವಣೆ ಗೆದ್ದಿದ್ದ ಅವೇ ಪಕ್ಷಗಳು ಯುನೈಟೆಡ್ ಫ್ರಂಟ್ ಎಂಬ ಹೆಸರಿನಲ್ಲಿ ಗುಂಪುಕಟ್ಟಿಕೊಂಡು ಅದೇ ಕಾಂಗ್ರೆಸ್ನೊಂದಿಗೇ ಹೊಂದಾಣಿಕೆ ಮಾಡಿಕೊಂಡು ಅವರ ಬೆಂಬಲದಿಂದಲೇ ಸರ್ಕಾರ ರಚನೆ ಮಾಡಿದರು. ಅತಂತ್ರ ಸರ್ಕಾರ, ನಾಮಕೇವಾಸ್ತೆ ಪ್ರಧಾನಿಯನ್ನಿಟ್ಟುಕೊಂಡು ಎಲ್ಲ ಪಕ್ಷಗಳು ತಮ್ಮ ಓಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಳ್ಳುವುದರತ್ತ ಹಾಗೂ ವಿಸ್ತರಿಸಿಕೊಳ್ಳುವುದರತ್ತ ಗಮನಹರಿಸಿದವು. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಈ ದೇಶದಲ್ಲಿ ಸ್ಥಿರ ಸರ್ಕಾರ ಕೊಡಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡುವುದರತ್ತ ಸ್ಕೆಚ್ ಹಾಕಿತು. ತತ್ಪರಿಣಾಮವಾಗಿ ಹತ್ತು ತಿಂಗಳಿಗೆ ಹೆಚ್.ಡಿ ದೇವೇಗೌಡ, ಇನ್ನಾರು ತಿಂಗಳಿಗೆ ಐ.ಕೆ ಗುಜ್ರಾಲ್ ಕುರ್ಚಿ ಖಾಲಿ ಮಾಡಬೇಕಾಯಿತು. ಅವಧಿಗೆ ಮುನ್ನವೇ ಚುನಾವಣೆ ಎದುರಾಯಿತು. ನಂತರದ ಚುನಾವಣೆಯಲ್ಲೂ ಮತದಾರ ಪಾಠ ಕಲಿಯಲಿಲ್ಲ. ಕಾಂಗ್ರೆಸ್ಸಿನ ಕನಸನ್ನು ಭಗ್ನಗೊಳಿಸಿ, ಬಿ.ಜೆ.ಪಿ ಗೆ ಇನ್ನೊಂದಷ್ಟು ಹೆಚ್ಚಿನ ಸೀಟು ಕೊಟ್ಟು ಮತ್ತದೇ ಅತಂತ್ರಸ್ಥಿತಿ ತಂದಿಟ್ಟ. ಬಿ.ಜೆ.ಪಿಯ ತತ್ವಸಿದ್ಧಾಂತಗಳೊಂದಿಗೆ ರಾಜಿ ಸಾಧ್ಯವೇ ಇಲ್ಲ ಎಂದು ಯುನೈಟೆಡ್ ಫ್ರಂಟ್ ಮಾಡಿಕೊಂಡಿದ್ದ ಪಕ್ಷಗಳಲ್ಲಿ ಕೆಲವರು, ಕಾಂಗ್ರೆಸ್ಸಿನ ಓತೀಕ್ಯಾತ ನಡೆಗಳನ್ನು ನಂಬಲಾಗದೆ ಬಿ.ಜೆ.ಪಿಯೊಂದಿಗೆ ಕೈಜೋಡಿಸಿದರು. ಮತ್ತೆ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಎನ್.ಡಿ.ಎ ಹೆಸರಿನಲ್ಲಿ ಮತ್ತೊಂದು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು.ಅಧಿಕಾರ ವಹಿಸಿಕೊಂಡ ಒಂದು ತಿಂಗಳಿಗೆಲ್ಲಾ ಪೋಕ್ರಾನ್ ಅಣುಸ್ಫೋಟ ಯಶಸ್ವಿಯಾಗಿ ನಡೆಸಿ, ದೇಶವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ಸಮರ್ಥ ನಾಯಕ ತಾವೆಂದು ನಿರೂಪಿಸಿದರು ವಾಜಪೇಯಿ. ಆದರೆ ವೈಯಕ್ತಿಕ ಪ್ರತಿಷ್ಠೆಗಳೇ ಪ್ರಾಮುಖ್ಯವನ್ನು ಪಡೆಯುವ ಸಮ್ಮಿಶ್ರ ಸರ್ಕಾರಗಳಲ್ಲಿ ಇನ್ನೊಬ್ಬರ ಸಾಮರ್ಥ್ಯ, ನಿಷ್ಠೆಗಳಿಗೆ ಮೂರುಕಾಸಿನ ಬೆಲೆಯೂ ಇರುವುದಿಲ್ಲ. ಯಶಸ್ವಿಯಾಗಿ ನಡೆಯುತ್ತಿದ್ದ ಸರ್ಕಾರವನ್ನು ಜಯಲಲಿತಾರವರು ವೃಥಾ ಕಾರಣಕ್ಕೆ 13 ತಿಂಗಳಿಗೆಲ್ಲಾ ಬಲಿ ತೆಗೆದುಕೊಂಡುಬಿಟ್ಟರು.
ಎಲ್ಲದಕ್ಕೂ ಬಹುಮತವೇ ಮುಖ್ಯವಾಗುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ಮುನ್ನಡೆಸುವ ನಾಯಕ ಎಲ್ಲದರಲ್ಲೂ ಎಷ್ಟೇ ಅರ್ಹನಾಗಿದ್ದರೂ ಅದು ಕೆಲಸಕ್ಕೆ ಬರುವುದಿಲ್ಲ ಎಂಬುದಕ್ಕೆ 2004, 2009 ರಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವೇ ಸಾಕ್ಷಿ. ಒಬ್ಬ ಅತ್ಯುತ್ತಮ ಆರ್ಥಿಕತಜ್ಞ ದೇಶದ ಚುಕ್ಕಾಣಿ ಹಿಡಿದಿದ್ದಾನೆಂದರೆ ದೇಶ ಯಾವ ಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಣಬೇಕಿತ್ತು ಆದರೆ ಆಗಿರುವುದೇನು? ದೇಶ ಯಾವ ಮಟ್ಟಕ್ಕೆ ಹಳ್ಳಹಿಡಿದಿದೆ. ಹಾಗಿದ್ದರೆ, ಅರ್ಥಶಾಸ್ತ್ರದಲ್ಲಿ ಆಕ್ಸ್ಫರ್ಡ್ನಿಂದ ಡಾಕ್ಟರೇಟ್ ಪಡೆದಿರುವ, ವಿಶ್ವಸಂಸ್ಥೆಗೆ ಸಲಹೆಗಾರರಾಗಿ, ಅಂತಾರಾಷ್ಟ್ರೀಯ ವ್ಯಾಪಾರದ ವಿಷಯದಲ್ಲಿ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ, ಯೋಜನಾ ಆಯೋಗದ ಮುಖ್ಯಸ್ಥರಾಗಿ, ಪಿ.ವಿ ನರಸಿಂಹರಾವ್ ಸಂಪುಟದಲ್ಲಿ ವಿತ್ತಸಚಿವರಾಗಿ ಮತ್ತು ವಿರೋಧಪಕ್ಷದ ನಾಯಕನಾಗಿಯೂ ಅನುಭವವಿರುವ ಡಾ. ಮನಮೋಹನ್ ಸಿಂಗ್ ದಡ್ಡರಂತೂ ಖಂಡಿತ ಅಲ್ಲ. ಆದರೂ ಅವರಿಂದು ಜನರ ದೃಷ್ಟಿಯಲ್ಲಿ ಹೇಗೆ ಅಪಹಾಸ್ಯದ ವಸ್ತುವಾಗಿದ್ದಾರೆ ನೋಡಿ. ಕಾರಣ ಇಷ್ಟೆ, ಪಾಳೆಗಾರಿಕೆ ಮನಸ್ಥಿತಿ ಹೊಂದಿರುವ ಪ್ರಾದೇಶಿಕ ಪಕ್ಷಗಳ ನಾಯಕರಾರೂ ಅವರನ್ನು ನಾಯಕರೆಂದು ತಿಳಿದಿಲ್ಲ. ಅವರ ಮಾತಿಗೆ ಕಿಂಚಿತ್ ಗೌರವವನ್ನೂ ನೀಡುವುದಿಲ್ಲ. ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಾರೆಯೇ ಹೊರತು ರಾಷ್ಟ್ರಹಿತದ ನಿಲುವುಗಳನ್ನೂ ಬೆಂಬಲಿಸುವುದಿಲ್ಲ. ಮಾತೆತ್ತಿದರೆ ಬೆಂಬಲ ಹಿಂತೆಗೆತದ ಗುಮ್ಮನನ್ನು ತೋರಿಸಿ ಬೆದರಿಸುತ್ತಿದ್ದರೆ ನಾಯಕನೆನಿಸಿಕೊಂಡವನು ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವುದೆಲ್ಲಿಂದ ಬಂತು?
ಸಮ್ಮಿಶ್ರ ಸರ್ಕಾರಗಳಿಂದ ಇಷ್ಟೆಲ್ಲ ಅನಾಹುತಗಳಿದ್ದರೂ ಮತದಾರ ಮಾತ್ರ ಏಕೆ ಮತ್ತೆಮತ್ತೆ ಅತಂತ್ರ ಸಂಸತ್ತನ್ನೇ ಚುನಾಯಿಸುತ್ತಾನೆ ಎಂಬುದಕ್ಕೆ ಉತ್ತರ ತುಂಬಾ ಸಿಂಪಲ್. ಸ್ವತಂತ್ರ ಭಾರತದಲ್ಲಿ ದೇಶದ ಮೂಲೆಮೂಲೆಯಲ್ಲೂ, ಮನೆಮನೆಯಲ್ಲೂ ಪರಿಚಯವಿರುವ ಏಕೈಕ ರಾಜಕೀಯ ಪಕ್ಷವೆಂದರೆ ಕಾಂಗ್ರೇಸ್ ಮಾತ್ರ. ದೇಶದ ಸ್ವಾತಂತ್ರ್ಯ ಚಳವಳಿಯ ಜೊತೆಯೇ ಗುರುತಿಸಿಕೊಂಡು ಬೆಳೆದು ಬಂದ ಕಾರಣ ಇಡೀ ದೇಶಕ್ಕೆ ದೇಶವೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿತ್ತು. ಅದಕ್ಕೇ ಮಹಾತ್ಮ ಗಾಂಧಿಯವರು ಆ ಹೆಸರಿನ ದುರುಪಯೋಗವಾಗಬಹುದೆಂಬ ಶಂಕೆಯಿಂದ ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂದು ಮನವಿ ಮಾಡಿದ್ದರು. ಸ್ವಾತಂತ್ರ್ಯಾಂದೋಲನವೊಂದು ರಾಜಕೀಯ ಪಕ್ಷವಾಗಿ ಹೊಮ್ಮುವುದು ಅವರಿಗೆ ಬೇಕಿರಲಿಲ್ಲ. ಆದರೆ ಕೆಲವರು ಅದನ್ನೇ ಅಧಿಕಾರದ ಸೋಪಾನವೆಂದು ಪರಿಗಣಿಸಿದ್ದರಿಂದ ಅದು ರಾಜಕೀಯ ಪಕ್ಷವಾಯಿತು. ಜನರೆಲ್ಲಾ ಅದರ ಬೆಂಬಲಿಗರೇ ಆಗಿದ್ದರು. ಆ ಕಾರಣದಿಂದಲೇ ಕಾಂಗ್ರೆಸ್ 1952 ರಿಂದ 1977 ರವರೆಗೂ ನಡೆದ ಪ್ರತಿ ಚುನಾವಣೆಯಲ್ಲೂ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲದೇ ಸ್ವಾತಂತ್ರಾನಂತರದ 67 ವರ್ಷಗಳಲ್ಲಿ 49 ವರ್ಷಗಳ ಆಡಳಿತ ನಡೆಸಿದೆ. ಪರ್ಯಾಯ ವಿಲ್ಲದಿದ್ದ ಕಾರಣ ಅದಕ್ಕೆ ಇಂಥ ಅವಕಾಶ ಸಿಕ್ಕಿತೇ ಹೊರತು ಅದು ಆಡಳಿತದಲ್ಲಿ ತೋರಿದ ಸಾಮರ್ಥ್ಯದಿಂದಲ್ಲ.
ದೇಶದಲ್ಲಿ ಇದುವರೆಗೂ ನಡೆದಿರುವ ಇಂಥಾ ಕಣ್ಣಾಮುಚ್ಚಾಲೆ ಆಟಗಳನ್ನೆಲ್ಲಾ ನೋಡಿರುವ ಮತದಾರ ಈ ಬಾರಿ ಎಚ್ಚೆತ್ತಿರುವಂತೆ ಭಾಸವಾಗುತ್ತಿದೆ. ಕಳೆದ ಹತ್ತು ವರ್ಷಗಳ ಹಗರಣಗಳಿಂದ ಬೇಸರಗೊಂಡಿರುವುದಾಗಿ ತೋರುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಪರಿಚಯವಿರುವ ಏಕೈಕ ರಾಜಕೀಯ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ ಎಂಬ ನ್ಯೂನತೆಯೂ ದೂರವಾಗಿ ಹೊಸ ಆಶಾಕಿರಣವೊಂದು ದೇಶಾದ್ಯಂತ ಪ್ರಕಾಶಿಸುತ್ತಿದೆ. ದೇಶದ ಯಾವುದೋ ಒಂದು ಮೂಲೆಯಲ್ಲಿ ಕಂಡುಬಂದ ಮೋಡಿ ಇಡೀ ದೇಶವನ್ನೇ ಆವರಿಸುತ್ತಿರುವಂತಿದೆ. ಒಂದು ಸಣ್ಣ ರಾಜ್ಯವನ್ನು ವಿಶ್ವಭೂಪಟದಲ್ಲಿ ಮೆರೆಸಿ ಇಡೀ ವಿಶ್ವವೇ ಆ ಕಡೆ ಮುಖಮಾಡುವಂತೆ ಮಾಡಿ, ತನ್ನ ಕಾರ್ಯಕ್ಷಮತೆಯಿಂದಲೇ ಸತತ ಮೂರು ಬಾರಿ ಚುನಾವಣೆ ಗೆದ್ದು, ದೇಶದ ಅಭಿವೃದ್ಧಿಯ ಬಗ್ಗೆಯೂ ಸ್ಪಷ್ಟದೃಷ್ಟಿ, ಸ್ಪಷ್ಟ ನಿಲುವು ಪ್ರಕಟಪಡಿಸಿ, ಮೋಡಿ ಮಾಡಿರುವ ಆ ಅಸಾಧಾರಣ ಸಾಮರ್ಥ್ಯದ ಬಗ್ಗೆಯೇ ಮನೆಮನೆಯಲ್ಲೂ ಚರ್ಚೆಯಾಗುತ್ತಿರುವಂತಿದೆ. ಇನ್ನು ಸುದ್ದಿವಾಹಿನಿಗಳ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನೋಡಿದರೂ ದೇಶಾದ್ಯಂತ ಆ ಮೋಡಿಯದೇ ಮಾತು ಎನ್ನುವ ವಾತಾವರಣ ಗೋಚರಿಸುತ್ತಿದೆ. ಇಂಥಾ ಸುಸಂದರ್ಭ ಮತ್ತೆ ಬರುತ್ತದೋ ಇಲ್ಲವೋ, ದೇಶಕ್ಕೆ ಬೇಕಿರುವ ಪರ್ಯಾಯ ವ್ಯವಸ್ಥೆಗೊಂದು ಬುನಾದಿ ಈಗಲೇ ಹಾಕಿಬಿಡೋಣ. ಈ ಬಾರಿಯಾದರೂ ಪ್ರಾಂತೀಯ ಮನೋಭಾವಗಳನ್ನು ಬದಿಗೊತ್ತಿ, ವೈಯಕ್ತಿಕ ಆಶೋತ್ತರಗಳನ್ನು ದೂರವಿಟ್ಟು ರಾಷ್ಟ್ರೀಯ ಹಿತಾಸಕ್ತಿಗೇ ಆದ್ಯತೆ ಕೊಟ್ಟು ಬಲಿಷ್ಠ ರಾಷ್ಟ್ರ ನಿರ್ಮಾಣದೆಡೆಗೆ ಹೆಜ್ಜೆ ಹಾಕೋಣ, ಅದಕ್ಕಾಗಿ ಒಮ್ಮೆ ಮೋಡಿಗೆ ಒಳಗಾಗಿ ನೋಡಿಬಿಡೋಣ.
-ಫಣಿರಾಮಚಂದ್ರ
paniramachandra.hs@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

