ಅಂಕಣಗಳು

ನೈರ್ಮಲ್ಯದ ಅರಿವೊಂದೇ ಆರೋಗ್ಯವಂತ ಸಮಾಜಕ್ಕೆ ಬುನಾದಿ

ನೈರ್ಮಲ್ಯದ ಅರಿವೊಂದೇ ಆರೋಗ್ಯವಂತ ಸಮಾಜಕ್ಕೆ ಬುನಾದಿ
Published On :

ನಗರದಲ್ಲಿ ವಾಸಿಸುವ ಜನರು ಹಳ್ಳಿಯ ಜನರು ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಾರೆ, ಶೌಚಾಲಯಗಳ ಬಳಕೆಯ ಬಗ್ಗೆ ಅವರಿಗೆ ಅರಿವಿಲ್ಲ ಎಂಬ ಮಾತನ್ನು ಕೇಳಿದಾಗ ಹೌಹಾರುತ್ತಾರೆ. ಏಕೆಂದರೆ ನಗರದಲ್ಲಿರುವ ಪ್ರತಿ ಮನೆಗಳಲ್ಲೂ ಶೌಚಾಲಯಗಳಿರುತ್ತವೆ. ಆದರೆ ಗುಲ್ಬರ್ಗಾದಂತಹ ನಗರದಲ್ಲೂ ಇಂದಿಗೂ ಶೌಚಾಲಯಗಳ ಬಳಕೆ ಕಡಿಮೆ ಇದೆ. ಹೀಗಾಗೇ ಜನರಿಗೆ ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗುತ್ತದೆ.  
2008ರಲ್ಲಿ ರಾಷ್ಟ್ರೀಯ ನಗರ ನೈರ್ಮಲ್ಯ ಯೋಜನೆಯ ಅಡಿಯಲ್ಲಿ ಭಾರತದ ಪ್ರತಿಯೊಂದು ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ನಿರ್ಮಲವಾಗಬೇಕು, ಜನರು ಆರೋಗ್ಯದಿಂದ ಜೀವಿಸಬೇಕು, ನಗರದಲ್ಲಿ ವಾಸಿಸುವ ಬಡವರು ಮತ್ತು ಮಹಿಳೆಯರಿಗೆ ಶೌಚಾಲಯವಿರಬೇಕು ಎಂಬ ನಿಯಮಗಳನ್ನು ರೂಪಿಸಲಾಯಿತು. ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಪೂರ್ತಿಯಾಗಿ ನಿಲ್ಲಬೇಕು ಎಂಬ ಆಶಯದೊಂದಿಗೆ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಜನರಲ್ಲಿ ಅರಿವು ಮೂಡಬೇಕೆಂದರೆ, ಅನೂಚಾನವಾಗಿ ನಡೆದುಕೊಂಡು ಬಂದ ನಡವಳಿಕೆಗಳನ್ನು ಬದಲಿಸಬೇಬೇಕಾಗುತ್ತದೆ.
ಕಳೆದ ಎರಡು ದಶಕಗಳಿಂದ ಜನಸಂಖ್ಯೆ ಮತ್ತು ಆರ್ಥಿಕ ಬೆಳವಣಿಗೆಯ ಆಧಾರದ ಮೇಲೆ ಕರ್ನಾಟಕಕ್ಕೆ ಭಾರತದಲ್ಲಿ ಅಧುನಿಕ ನಗರಗಳನ್ನೊಳಗೊಂಡ ರಾಜ್ಯಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಶೇಕಡಾ 34 ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸಿಸುತ್ತದೆಂದು ಕಂಡುಬಂದಿದೆ.
ನಗರಗಳಲ್ಲಿ ಬಡತನ ಕೇಂದ್ರೀಕೃತವಾಗಿರುವುದು ಕೊಳಚೆ ಪ್ರದೇಶಗಳಲ್ಲಿ.  2010ರ ಕರ್ನಾಟಕ ಸರ್ಕಾರದ ಆಶಾಕಿರಣ್ ಮಾಹಿತಿ ಗುಲ್ಬರ್ಗಾದಲ್ಲಿ ಅರವತ್ತೊಂದು ಕೊಳಚೆ ಪ್ರದೇಶಗಳಿವೆ ಎಂದು ಹೇಳುತ್ತದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆ 60,196 (12085 ಕುಟುಂಬಗಳು), ಅಂದರೆ ಶೇಕಡಾ ಹನ್ನೊಂದರಷ್ಟು ಜನಸಂಖ್ಯೆ ಕೊಳಚೆ ಪ್ರದೇಶಗಳಲ್ಲಿದ್ದಾರೆ. ಕೊಳಚೆ ಪ್ರದೇಶವಲ್ಲದೇ ನಗರದಲ್ಲಿ ವಾಸಿಸುವ ಬಹುತೇಕ ಜನರು ಶೌಚಾಲಯಗಳನ್ನು ಬಳಸುತ್ತಾರೆ. ಶೇಕಡಾ 44.3 ರಷ್ಟು ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಶೇಕಡಾ 40.1 ರಷ್ಟು ನಗರದಲ್ಲಿರುವ, ಶೌಚಾಲಯದ ವ್ಯವಸ್ಥೆ ಇಲ್ಲದ ಜನರು ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಸಮುದಾಯದಲ್ಲಿನ ಶೌಚಾಲಯಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣಗಳೇನೆಂದರೆ  ಶೌಚಾಲಯಗಳ ಕೊರತೆ ಮತ್ತು ಇರುವ ಶೌಚಾಲಯಗಳು ಕೆಲಸ ಮಾಡದಿರುವುದು. ಕೊಳಚೆ ಪ್ರದೇಶದಲ್ಲಿರುವವ ಶೇಕಡಾ 7.6ರಷ್ಟು ಜನರು ಮತ್ತು ಇತರೆ ಜಾಗಗಳಲ್ಲಿ ವಾಸಿಸುವವ ಶೇಕಡಾ 9.9 ಮಂದಿ ಬಯಲಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತಾರೆ. ಉಳಿದ ಶೇಕಡಾ 5.9ರಷ್ಟು ಜನರು ಶೌಚಾಲಯಗಳನ್ನು ಹಂಚಿಕೊಂಡು ಬಳಸುತ್ತಾರೆ. ಸರಿಯಾದ ಶೌಚಾಲಯಗಳಿಲ್ಲದೇ ಬಹಳ ತೊಂದರೆ ಅನುಭವಿಸುತ್ತಿರುವವರೆಂದರೆ ಮಹಿಳೆಯರು.
ಎಲ್ಲಕ್ಕಿಂತ ಮುಖ್ಯವಾಗಿ ಶಾಲೆಗಳಲ್ಲಿ ಸ್ವಚ್ಛ ಕುಡಿಯುವ ನೀರು ಮತ್ತು ಶುಭ್ರ ಶೌಚಾಲಯವಿರಬೇಕು. ಇದರ ಕೊರತೆಯಿಂದಾಗಿ ಎಷ್ಟೋ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಾರೆ. ಹೆಣ್ಣು ಮಕ್ಕಳು ಪ್ರತ್ಯೇಕ ಶೌಚಾಲಯದ ಕೊರತೆಯಿಂದಾಗಿ ಓದು ಮುಂದುವರೆಸುವುದಿಲ್ಲ. ಶಾಲೆಯಲ್ಲಿ ನೈರ್ಮಲ್ಯದ ಅರಿವು ಮಕ್ಕಳಿಗೆ ಉಂಟಾದರೆ ಅದರ ಪ್ರಭಾವ ಅವರ ಮನೆಯಲ್ಲಿ, ಜೀವನದಲ್ಲಿ ಕಾಣಿಸುವುದಕ್ಕೆ ಸಾಧ್ಯ.
ನಮ್ಮ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಬಾಹ್ಯ ಮತ್ತು ಆಂತರಿಕ ಸ್ವಚ್ಛತೆಗೆ ಬಹಳ ಮಹತ್ವವನ್ನು ನೀಡಿದ್ದರೂ, ಹೆಚ್ಚು ಬದಲಾವಣೆ ಏಕೆ ಸಾಧ್ಯವಾಗುತ್ತಿಲ್ಲವೆಂದು ಯೋಚಿಸಿದಾಗ, ಈ ಸಮಸ್ಯೆಗೆ ಮೂಲ ಕಾರಣ ಅವಿದ್ಯೆ, ಬಡತನ, ಎಲ್ಲಕ್ಕೂ ಸರ್ಕಾರದ ಮೇಲೆಯೇ ಅವಲಂಬಿತವಾಗುವ ಮನೋಭಾವ ಗೋಚರಿಸುತ್ತವೆ.
ಗುಲ್ಬರ್ಗಾ ವಿಭಾಗದಲ್ಲಿ ಗ್ರಾಮೀಣ ಜನತೆಯ ಆರ್ಥಿಕ ದುಸ್ಥಿತಿಯ ಜೊತೆಗೆ ನಮ್ಮ ಮನಸ್ಸಿನ ಮೇಲೆ ಅಚ್ಚೊತ್ತುವ ಇನ್ನೊಂದು ಸಂಗತಿ ಎಂದರೆ ಅವರ ಕಳಪೆ ಆರೋಗ್ಯ ಮತ್ತು ಶುಚಿತ್ವದ ಮಟ್ಟ. ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ ನಾವು ನಮ್ಮ ಆದಾಯದ ಶೇಕಡ ಮೂವತ್ತರಷ್ಟು ಹಣವನ್ನು ಔಷಧಿ ಮತ್ತು ಆಸ್ಪತ್ರೆ ವೆಚ್ಚಗಳಿಗಾಗಿ ಖರ್ಚು ಮಾಡುತ್ತೇವೆ. ಆದುದರಿಂದ ಆದಾಯ ಹೆಚ್ಚಾಗುವ ಕೆಲಸವನ್ನು, ಆರೋಗ್ಯ ವೃದ್ಧಿಸುವ ಜೀವನಶೈಲಿಯನ್ನು ನಾವು ರೂಢಿಸಿಕೊಳ್ಳಬೇಕಿದೆ. ಶೇಕಡ ಎಂಬತ್ತರಷ್ಟು ಕಾಯಿಲೆಗಳು ನೀರಿನಿಂದ ಬರುವುದೆಂದು ಈಗಾಗಲೇ ದೃಢಪಟ್ಟಿದೆ.   ತೀರ ಕಳಪೆ ವ್ಯವಸ್ಥೆ ಮತ್ತು ನಿರ್ಲಕ್ಷ್ಯದಿಂದಾಗಿ ದಿನೇ ದಿನೆ ಅಂತರ್ಜಲ ಹಾಗೂ ಬಾಹ್ಯ ಜಲ ಕಲುಷಿತಗೊಳ್ಳುತ್ತಲೇ ಇದೆ. ಆದರೆ ಇದರ ಅರಿವು ನಮಗಿಲ್ಲವೆಂಬಂತೆ ನಾವು ನಿಶ್ಚಿಂತರಾಗಿದ್ದೇವೆ. ಗುಲ್ಬರ್ಗಾ ವಿಭಾಗದಲ್ಲಿ ನಾವು ಸಮೀಕ್ಷೆ ಮಾಡಿದಾಗ ಆಯಾ ಭಾಗಗಳಲ್ಲಿ ಶೇಕಡ ಇಪ್ಪತ್ತಕ್ಕಿಂತ ಕಡಿಮೆ ಶೌಚಾಲಯಗಳನ್ನು ಹೊಂದಿರುವುದು ಕಂಡುಬಂದಿತು. ಆದರೆ, ಕಾಗದಪತ್ರಗಳ ಮೇಲೆ ಸೂಚಿಸಿದ ಅಂಕಿ ಅಂಶಗಳ ಪ್ರಕಾರ ಶೇಕಡ ಐವತ್ತರಷ್ಟು ಮನೆಗಳು ಶೌಚಾಲಯಗಳನ್ನು ಹೊಂದಿರಬೇಕಾಗಿತ್ತು! ಸಮಸ್ಯೆ ಏನೆಂದರೆ, ಪಂಚಾಯಿತಿ ಅಧಿಕಾರಿಗಳು ಶೌಚಾಲಯಗಳ ನಿರ್ಮಾಣದ ಬಗ್ಗೆ ಜನರಿಗೆ ತಿಳಿಹೇಳಿದರೂ ಸಹ ಅದರಿಂದಾಗುವ ದೀರ್ಘಕಾಲಿಕ ಉಪಯೋಗಗಳ ಬಗ್ಗೆ ಅರಿವು ಮೂಡಿಸುವುದರಲ್ಲಿ ವಿಫಲರಾಗುತ್ತಾರೆ. ಇದರಿಂದಾಗಿ, ಕೆಲವರು ತಮ್ಮ ಶೌಚಾಲಯಗಳನ್ನು ಉಗ್ರಾಣಗಳಾಗಿ ಹಾಗೂ ಮತ್ತೆ ಕೆಲವರು ತಮ್ಮ ಸಾಕು ಪ್ರಾಣಿಗಳಿಗೆ ಕೊಟ್ಟಿಗೆಗಳಾಗಿ ಪರಿವರ್ತಿಸಿಕೊಂಡಿದ್ದರು. ಇನ್ನೊಂದು ಸಮಸ್ಯೆ ಎಂದರೆ,  ಸರ್ಕಾರವು ಅತಿ ಕಡಿಮೆ ಮೊತ್ತವನ್ನು ಇದಕ್ಕೆ ಸಹಾಯಧನವನ್ನಾಗಿ ಕೊಟ್ಟಿದ್ದು. ಉಳಿದ ಹಣವನ್ನು ಬಡ ಜನರೇ ಸ್ವತಃ ಭರಿಸಬೇಕಾಗಿತ್ತು. ಶೌಚಾಲಯ ನಿರ್ಮಾಣ ಆ ಜನರ ಆದ್ಯತೆಯ ಕೆಲಸ ಖಂಡಿತವಾಗಿಯೂ ಆಗಿರಲಿಲ್ಲ.
ಬಡ ಕುಟುಂಬಗಳು ಜಾಗದ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದರು. ಹಾಗಾಗೇ ನಾವು ಒಂದೇ ಸ್ಥಳದಲ್ಲಿ ಸಾಲಾಗಿ ಬಿಡಿ ಶೌಚಾಲಯಗಳನ್ನು ನಿರ್ಮಿಸಲು ಸರ್ಕಾರಿ ಜಮೀನನ್ನು ಮೀಸಲಿಡುವಂತೆ ಕಂದಾಯ ಅಧಿಕಾರಿಗಳನ್ನು ಕೋರಬೇಕಾಯಿತು. ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿದಲ್ಲಿ ಅವುಗಳ ನಿರ್ವಹಣೆ ಒಂದು ಸಮಸ್ಯೆಯಾಗಿದ್ದು ಅದು ಅಷ್ಟೊಂದು ಉತ್ತೇಜನಕಾರಿಯಲ್ಲ ಎಂಬುದು ನಮ್ಮ ಅನುಭವಕ್ಕೆ ಬಂದಿತ್ತು. ಗ್ರಾಮ ಪಂಚಾಯ್ತಿಗಳಲ್ಲಿ ಸಂಪನ್ಮೂಲದ ಕೊರತೆ ಇದ್ದು, ಜನರು ಸಾರ್ವಜನಿಕ ಆಸ್ತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲ.  
ಬಡತನದ ಬೇಗೆಯಿಂದ ಬಳಲುವವರು ಪ್ರತಿ ತಿಂಗಳೂ ಶೌಚಾಲಯ ಬಳಕೆಯ ದರವನ್ನು ಹೇಗೆ ಕಟ್ಟಬಲ್ಲರು? ಇದರ ಜೊತೆಗೆ ಅವರಿಗೆ ನೈರ್ಮಲ್ಯದ ಮಹತ್ವದ ಅರಿವಿಲ್ಲದಿರುವುದೂ ದೊಡ್ಡ ಸಮಸ್ಯೆಯಾಗಿತ್ತು. ಒಳಚರಂಡಿಗೆ ಮನೆಗಳಿಂದ ಸಂಪರ್ಕ ಕಲ್ಪಿಸುವುದರ ವೆಚ್ಚವನ್ನು ಅವರಿಗೆ ಭರಿಸಲಾಗದಿರುವುದು ಇನ್ನೊಂದು ಸಮಸ್ಯೆ. ತಾವೇ ಶೌಚಾಲಯವನ್ನು ಕಟ್ಟಿಕೊಳ್ಳಲು ಅವರಲ್ಲಿ ಹಣವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇರಲಿಲ್ಲ.
ದಕ್ಷಿಣ ಕನ್ನಡ ಜಿಲೆಯಲ್ಲಿ ಇಂದು ಬರ್ಹಿದೆಸೆ ಸಂಪೂರ್ಣವಾಗಿ ನಿಂತಿದೆ. ಈ ವಿಷಯ ಯೋಚಿಸಿದಾಗ ನನಗೆ ನೆನಪಾದದ್ದು ಧರ್ಮಸ್ಥಳ ಪ್ರತಿಷ್ಠಾನದ ವತಿಯಿಂದ ದೊರೆತ ನೆರವು. ಅಲ್ಲದೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಉಪ-ಆಯುಕ್ತ (ನೈರ್ಮಲೀಕರಣ) ಹುದ್ದೆಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಡಾ. ಸುಧಾಮೂರ್ತಿಯವರು ಬೆಂಗಳೂರು ನಗರದಲ್ಲಿ ಒಂದು ನೂರು ಶೌಚಾಲಯಗಳನ್ನು ನಿರ್ಮಿಸಲು ಸಹಾಯ ಮಾಡಿದ್ದು ನೆನಪಾಯಿತು. ಕೂಡಲೇ ಇನ್ಫೋಸಿಸ್ ಫೌಂಡೇಷನ್‌ನ ಸ್ಥಳಿಯ ಸಮನ್ವಯಕಾರರನ್ನು ಸಂಪರ್ಕಿಸಿದೆ. ಖುದ್ಧಾಗಿ ಡಾ. ಸುಧಾ ಮೂರ್ತಿ ಮತ್ತು ಫೌಂಡೇಷನ್‌ನ ಇತರೆ ಸದಸ್ಯರೊಂದಿಗೆ ಚರ್ಚಿಸಿ ಹತ್ತು ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಅವರ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ವಿನಂತಿಸಿದೆ. ಏಕ ಗವಾಕ್ಷಿ ಮಾದರಿಯಲ್ಲಿ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಜೊತೆ ಸಮನ್ವಯತೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವುದಾಗಿ ಆಶ್ವಾಸನೆ ನೀಡಿದೆ. ಈ ವಿಷಯದ ಬಗ್ಗೆ ಗಮನ ಹರಿಸಲು ಅನುಕೂಲವಾಗುವಂತೆ ಒಂದು ವಿಶೇಷ ಘಟಕವನ್ನು ಗುಲ್ಬರ್ಗಾದಲ್ಲಿ ತೆರೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಒಂದು ಪ್ರಸ್ತಾವನೆ ಕಳುಹಿಸಿಕೊಟ್ಟೆವು. ರಾಜ್ಯ ಸರ್ಕಾರವು ಇದನ್ನು ಗುಲ್ಬರ್ಗಾದಲ್ಲಿನ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿಯೇ ತೆರೆಯಲು ಒಪ್ಪಿಗೆ ನೀಡಿತು. ಈ ಘಟಕವನ್ನು ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಉದ್ಘಾಟಿಸಿದರು. ಜಿಲ್ಲಾ ಮತ್ತು ಗ್ರಾಮ ಪಂಚಾಯ್ತಿ ಮಟ್ಟದ ಸಮನ್ವಯಕಾರರಿಗೆ ತರಬೇತಿ ನೀಡಲು ತರಬೇತಿ ಪಡೆದ ಸಲಹೆಗಾರರನ್ನು ನಿಯೋಜಿಸಲಾಯಿತು. ಅತೀ ಕಳಪೆ ನೈರ್ಮಲ್ಯವಿರುವ ಗ್ರಾಮಗಳ ಮೇಲೆ ಇವರ ಗಮನವನ್ನು ಕೇಂದ್ರೀಕರಿಸುವುದರ ಜೊತೆಗೆ ಸ್ಥಳೀಯ ಮುಖಂಡರನ್ನು ಇದರಲ್ಲಿ ತೊಡಗಿಸಿಕೊಂಡು ಪ್ರತಿಯೊಂದು ಮನೆಯು ಪ್ರತ್ಯೇಕವಾಗಿ ಶೌಚಾಲಯ ಹೊಂದುವುದರ ಪ್ರಾಮುಖ್ಯತೆಯನ್ನು ಜನರಿಗೆ ಮನದಟ್ಟುಮಾಡುವುದು ಅವರ ಕರ್ತವ್ಯವಾಗಿತ್ತು, ಈ ಪ್ರಕ್ರಿಯೆಯಲ್ಲಿ ಇನ್ಫೋಸಿಸ್‌ನ ಪರಿಶುದ್ಧ ಯೋಜನೆ ಅತಿ ಹೆಚ್ಚಿನ ಯಶಸ್ಸು ಗಳಿಸಿತು. ಈ ಒಂದು ಸತ್ಕಾರ್ಯಕ್ಕೆ ಅವರು ಬಳಸಿದ ಫಲಿತಾಂಶ ಆಧಾರಿತ ತಂತ್ರಜ್ಞಾನ ಮತ್ತು ಅವರ ಬದ್ಧತೆ ಪ್ರಶಂಸನೀಯ. ವಾಸುದೇವರಾವ ಎಂ. ದೇಶಪಾಂಡೆಯವರು ಈ ಯೋಜನೆಯ ಮುಂದಾಳತ್ವ ವಹಿಸಿ ನಮ್ಮ ನಿಕಟ ಸಹಯೋಗದಲ್ಲಿದ್ದರು.
ಪರಿಶುದ್ಧ ಯೋಜನೆಯ ಸಾರ್ಥ್ಯಕ್ಯದ ಬಗ್ಗೆ ಮುಂದಿನ ವಾರ ನಿಮಗೆ ತಿಳಿಸುತ್ತೇನೆ.
(ಮುಂದುವರೆಯುವುದು)

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.