ಕುಲಾಂತರಿ ತಂತ್ರಜ್ಞಾನದ ಅರಿವು ಮೂಡಿಸಲಿ ಕೃಷಿ ತಜ್ಞರು

ಜಿಎಂ ತಳಿಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಾರದ ದಿನವೇ ಇಲ್ಲವೆನ್ನಬಹುದು. ರಾಷ್ಟ್ರದ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ಭಾಷೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇತ್ತೀಚೆಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ Ç Undue haste ಎಂದು ಇದೇ ವಿಷಯವಾಗಿ ಸಂಪಾದಕೀಯವೂ ಪ್ರಕಟವಾಗಿದೆ. ವಿಪರ್ಯಾಸವೆಂದರೆ ಈ ವಿಷಯದಲ್ಲಿ ಸಂಶೋಧನೆ ಮಾಡಿರುವವರು ಮೌನ ತಾಳಿರುವುದು ಮತ್ತು ಕೃಷಿ ವಿಜ್ಞಾನಿಗಳು ಮತ್ತು ತಜ್ಞರು ಸಮಾಜಕ್ಕೆ ಅಥವಾ ಮಾಧ್ಯಮದವರಿಗೇ ಆಗಲಿ ಸರಿಯಾದ ಮಾಹಿತಿ ಕೊಡದಿರುವುದು. ಜೊತೆಗೆ, ಜಿಎಂ ತಳಿಗಳ ಬಗ್ಗೆ ಅನುಭವವಿಲ್ಲದ - ಆದರೆ ಇತರೇ ವಿಷಯಗಳಲ್ಲಿ ಹೆಸರು ಮಾಡಿರುವ ಗಣ್ಯರು ಈ ಕುಲಾಂತರಿ ಬೆಳೆಗಳ ವಿಷಯವಾಗಿ ಆಗಾಗ ಮಾಧ್ಯಮಗಳಲ್ಲಿ ಮಾತನಾಡುತ್ತಲೇ ಇರುತ್ತಾರೆ. ಎರಡನೆಯ ವರ್ಗದವರನ್ನು ನಾನು ಟೀಕಿಸಲಿಚ್ಚಿಸುವುದಿಲ್ಲ. ಏಕೆಂದರೆ ಈ ತಂತ್ರಜ್ಞಾನವನ್ನು ವಿರೋಧಿಸುವವರು ಇವರ ಮನವೊಲಿಸಿ, ತಪ್ಪು ಮಾಹಿತಿ ನೀಡಿ ಹೀಗೆ ಮಾತಾಡುವಂತೆ ಪ್ರೇರೇಪಿಸುತ್ತಾರೆ.
2010ರಲ್ಲಿ ಕೇಂದ್ರ ಸರ್ಕಾರದ ಪರಿಸರ ಮಂತ್ರಿಗಳು ಬೆಂಗಳೂರಿನಲ್ಲಿ ಬಿ ಟಿ ಬದನೆ ಬಗ್ಗೆ ಏರ್ಪಡಿಸಲಾಗಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದರು. ಇಂಥ ಅವಕಾಶ ಅನುಭವಿ ರೈತ ಅಥವಾ ಕೃಷಿ ವಿಜ್ಞಾನಿಗಳಿಗಿಂತ, ಕೃಷಿಯ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದವರಿಗೇ ಹೆಚ್ಚು ಮಣೆ ಹಾಕಲಾಗಿತ್ತು. ಅವರಿಗೆಲ್ಲ ನೇರವಾಗಿ ವೇದಿಕೆಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ಜನರ ಮುಂದಿಡಲು ವಿಶೇಷ ಅವಕಾಶ ದೊರೆತದ್ದು ವಿಷಾದದ ವಿಷಯ. ಅದೇ ವಿಷಯದಲ್ಲಿ ಅಧ್ಯಯನಮಾಡಿ ತಮ್ಮ ಅನಿಸಿಕೆಯನ್ನು ಮುಂದಿಡಲು ಬಂದ ವಿಜ್ಞಾನಿಗಳಿಗೆ ನಿರಾಸೆಯೂ ಆಯಿತು. ಇದರಿಂದ ನಷ್ಟ ರಾಷ್ಟ್ರಕ್ಕೆ ಮತ್ತು ರೈತರಿಗಲ್ಲವೇ?
1. ಕುಲಾಂತರಿ ತಳಿ ಎಂದ ಮಾತ್ರಕ್ಕೆ ಅದು ಬೇಡವೇ ಬೇಡ ಎನ್ನುವ ವಾದ ಅವೈಜ್ಞಾನಿಕ. ರೈತನೊಬ್ಬ ತನ್ನ ಭೂಮಿಯಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಅದರ ಹಿಂದೆ ಒಂದು ಉದ್ದೇಶವಿರುತ್ತದೆ. ಸ್ವಂತ ಬಳಕೆಗೆ, ಹಣ ಸಂಪಾದಿಸಲು, ಮುಂದಿನ ಬೆಳೆಗೆ ಬೇಕಾಗುವ ಬಿತ್ತನೆ ಉತ್ಪಾದಿಸಲು ಹೀಗೆ ಹಲವಾರು ಕಾರಣಗಳಿರುತ್ತವೆ. ಜಿಎಂ ತಳಿಗಳು ಎಂದ ಮಾತ್ರಕ್ಕೆ ಅದರಿಂದ ಪರಿಸರಕ್ಕೆ ಮತ್ತು ಜೈವಿಕ ವೈವಿಧ್ಯಕ್ಕೆ ಹಾನಿ ಎಂಬುದು ಕೇವಲ ಅಪಪ್ರಚಾರವಷ್ಟೆ. ಹೊಸದಾಗಿ ಆವಿಷ್ಕರಿಸಲ್ಪಟ್ಟ ತಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವ ಯಾವ ತಳಿಗಳನ್ನು ಬಿಡುಗಡೆ ಮಾಡಬಹುದು, ಯಾವ ತಳಿಗಳನ್ನು ಬಿಡುಗಡೆ ಮಾಡಲು ಅವಕಾಶವೀಯಬಾರದು ಎಂದು ಮಾರ್ಗದರ್ಶನ ನೀಡಲು ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವದಲ್ಲಿದೆ ಎನ್ನುವುದನ್ನು ಮರೆಯಬಾರದು. ಇಂತಹ ಸಮಿತಿಯಗಳಲ್ಲಿ ನಿಷ್ಪಕ್ಷಪಾತ ನಿರ್ಧಾರ ಕೈಗೊಳ್ಳುವ ಪರಿಣತಿ ಪಡೆದಿರುವಂತಹ ಸದಸ್ಯರಷ್ಟೇ ಇರಬೇಕು. ಈಗ ಸದನದಲ್ಲಿ ಒಪ್ಪಿಗೆಗಾಗಿ ಕಾಯುತ್ತಿರುವ ಮಸೂದೆಗೆ ಆದಷ್ಟು ಬೇಗ ಅಂಕಿತ ಬಿದ್ದು ಕಾರ್ಯರೂಪಕ್ಕೆ ಬರಬೇಕು. ಅನೇಕ ರಾಷ್ಟ್ರಗಳು ಕುಲಾಂತರಿ ತಳಿಗಳನ್ನು ಒಪ್ಪಿಕೊಂಡು, ಲಾಭಮಾಡಿಕೊಳ್ಳುತ್ತಿವೆ. ವಿಶ್ವದ 27 ದೇಶಗಳಲ್ಲಿ ( 19 ಆಭಿವೃದ್ಧಿ ಹಾದಿಯಲ್ಲಿರುವ ಹಾಗೂ 8 ಅಭಿವೃದ್ಧಿ ಹೊಂದಿರುವ), 175 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಜಿ. ಎಂ. ತಳಿಗಳನ್ನು ಬೆಳೆಯುತ್ತಿರುವ 18 ಮಿಲಿಯನ್ ರೈತರು ಮತ್ತು ಉತ್ಪಾದನೆಯಲ್ಲಿ ತೊಡಗಿರುವವರ ಅನುಭವಗಳು ಈ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬರಲು ನೆರವಾಗಬಲ್ಲವು. ಯಾವುದೇ ಜಿಎಂ ತಳಿಯಿಂದ ಪರಿಸರಕ್ಕಾಗಲಿ, ರೈತರ ಹಿತಕ್ಕಾಗಲಿ ಅಡ್ಡಿ ಉಂಟಾಗುವುದಾದರೆ, ಅಂತಹವುಗಳನ್ನು ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ತಡೆಹಿಡಿದು ಪ್ರಯೋಗದಲ್ಲಿರುವಾಗಲೇ ನಿಲ್ಲಿಸುವ ವ್ಯವಸ್ಥೆ ನಮ್ಮಲ್ಲಿದೆ.
2. ಜಿಎಂ ತಳಿಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಮಾತ್ರ ಉತ್ಪಾದಿಸಬಲ್ಲವು, ಅವುಗಳ ಕೈಗೆ ಏಕಸ್ವಾಮ್ಯ. ಸಿಕ್ಕು ಬಿಡುತ್ತದೆ ಎನ್ನುವ ವಾದದಲ್ಲಿ ಸತ್ಯಾಂಶವಿಲ್ಲ. ವಿಜ್ಞಾನ ಯಾವುದೇ ಕಂಪನಿಯ ಸೊತ್ತು ಎಂದು ತಿಳಿಯುವುದು ತಪ್ಪು. ಜಿಎಂ ತಳಿ ಎಂದರೆ ಏನು? ಬೇರೊಂದು ತಳಿಯಲ್ಲಿರುವ ಪ್ರಯೋಜನಕಾರಿ ವಂಶವಾಹಿ (Gene) ಅನ್ನು ಇನ್ನೊಂದು ತಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ವರ್ಗಾಯಿಸುವುದರಿಂದ ಅಭಿವೃದ್ಧಿಗೊಂಡ ತಳಿ. ಹೀಗೆ ಹುಟ್ಟಿಕೊಂಡ ಹೊಸ ತಳಿಯನ್ನು ಸೂಕ್ತವಾಗಿ ಪರೀಕ್ಷಿಸಿ ಅದರಿಂದ ಯಾವುದೇ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾಗದು ಎಂದು ಖಚಿತವಾದಲ್ಲಿ ಮತ್ತು ರೈತರ ಕೆಲವು ಬಗೆಹರಿಯದ ಸಮಸ್ಯೆಗಳಿಗೆ ಇದು ಉತ್ತರವಾಗಿದ್ದರೆ, ಅದಕ್ಕೆ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ಅನುಮತಿ ದೊರೆತರೆ ಮಾತ್ರ ರೈತರಿಗೆ ಬೆಳೆಯಲು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ ಯಾವುದೇ ಜಿಎಂ ತಳಿಯ ಬೀಜ ಬೇಕೆಂದರೆ ಬಹುರಾಷ್ಟ್ರೀಯ ಕಂಪನಿಗಳ ಬಳಿಯೇ ಹೋಗಬೇಕು ಎನ್ನುವುದು ತಪ್ಪು ತಿಳಿವಳಿಕೆ. ಭಾರತದಲ್ಲಿನ ಐಈಆಖ ಮತ್ತು ಕೃಷಿ ಸಂಶೋಧನಾ ಸಂಸ್ಥೆಗಳು ಜಿ ಎಂ ತಳಿಗಳನ್ನು ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿವೆ. ಈಗಾಗಲೇ ಅನೇಕ ತಳಿಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಯಾವುದೇ ಒಂದು ಉದ್ಯಮದ್ದೇ ಮನೋಪಲಿ ಆಗಬಾರದು. ಹಾಗೆ ಆಗದಂತೆ ನೋಡಿಕೊಳ್ಳುವುದು ಎಲ್ಲರ - ಅಂದರೆ, ಸರ್ಕಾರ, ವಿಶ್ವವಿದ್ಯಾಲಯಗಳು, ಅಧಿಕಾರದಲ್ಲಿರುವವರು, ನಾಯಕರು, ರೈತ ಮುಂದಾಳುಗಳ ಕರ್ತವ್ಯವಾಗಿದೆ.
3. ರೈತರೇ ಜಿಎಂ ತಳಿಗಳ ಬೀಜವನ್ನು ಉತ್ಪಾದಿಸಬಹುದು. ಸಾಮಾನ್ಯ ತಳಿಗಳ ಹಾಗೂ ಜಿಎಂ ತಳಿಗಳ ಬೀಜೋತ್ಪಾದನೆಗೂ ಬಹಳಷ್ಟು ವ್ಯತ್ಯಾಸವಿಲ್ಲ. ಉತ್ಪಾದನೆಗೆ ಬಳಸುವ ತಾಯಿ ಬೀಜ (Parental seeds) ಮತ್ತು ನೆಡುವ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಅರಿಯಬೇಕಾಗುತ್ತದೆ ಅಷ್ಟೆ. ಸಾಮಾನ್ಯವಾಗಿ ಖಾಸಗಿ ಕಂಪನಿಗಳಷ್ಟು ಉತ್ತಮ ಉತ್ಪಾದನಾ ಸಾಮರ್ಥ್ಯ ಸಾರ್ವಜನಿಕ ಸಂಸ್ಥೆಗಳಿಂದ ನಿರೀಕ್ಷಿಸಲಾಗದು. ಹಾಗಾಗೇ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಿಂದ ಜಿ. ಎಂ. ತಂತ್ರಜ್ಞಾನದ ಲಾಭ ಪಡೆಯಲು ಹಿಂಜರಿಯಲೂಬಾರದು. ತಳಿಗಳಲ್ಲಿ ಅನೇಕ ವಿಧಗಳಿವೆ. ಹೈಬ್ರೀಡ್ ತಳಿ, ನೇರ ತಳಿ, ಕಾಂಪೊಸಿಟ್ ತಳಿ, ಮಲ್ಟಿಲೈನ್ ತಳಿ ಹೀಗೆ ಅನೇಕ ಮಾದರಿ ತಳಿಗಳು ಬಳಕೆಯಲ್ಲಿರುತ್ತವೆ. ಕೇವಲ ಒಂದೇ ಒಂದು ಸಾರಿ ತರಬೇತಿ ಕೊಡುವುದರ ಮೂಲಕ ಹಲವು ಮಾದರಿ ತಳಿಗಳ ಬೀಜೋತ್ಪಾದನೆಯನ್ನು ರೈತರೇ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಅನೇಕ ರೈತರು ಬೀಜೋತ್ಪಾದನೆಯನ್ನು ಒಂದು ಉದ್ಯಮವಾಗಿ ಬೆಳೆಸಿ ನೆಮ್ಮದಿಯಿಂದ ಹಾಗೂ ಸಂತೃಪ್ತರಾಗಿರುವ ಅನೇಕ ಉದಾಹರಣೆಗಳಿವೆ.
4. ಸರ್ಕಾರದ ನೀತಿ ನಿಯಮಗಳು ವಿವಾದಾತ್ಮಕ ಮತ್ತು ಕೇವಲ ಪುಸ್ತಕದಲ್ಲಿ ಮಾತ್ರ ಜೆನಿಟಿಕ್ ಇಂಜಿನಿಯರಿಂಗ್ ಅಪ್ರೂವಲ್ ಕಮಿಟಿಗೆ ಹೊರದೇಶದ ಜಿಎಂ ಬೀಜಗಳನ್ನು ಭಾರತಕ್ಕೆ ತರಿಸಿಕೊಳ್ಳಲು ಅನುಮತಿ ನೀಡುವ ಹಕ್ಕನ್ನು ಹೊಂದಿಲ್ಲ. ಆದರೆ ಇದೇ ಸಮಿತಿಯು ಜಿಎಂ ಸೋಯಾ ಅವರೆ ಎಣ್ಣೆಯನ್ನು (crude degummed or refined form) ತರಿಸಿಕೊಳ್ಳಲು ಅನುಮತಿ ನೀಡಿದೆ. ನಾವು ಆಮದು ಮಾಡಿಕೊಳ್ಳುತ್ತಿರುವ ಸೋಯಾ ಅವರೆ ಎಣ್ಣೆ ನಮ್ಮ ಬಳಕೆಯ ಶೇಕಡ 68 ರಷ್ಟು ( 2007ರ ಅಂಕಿ ಅಂಶ). ಸುಮಾರು 1.31.5ಮಿ. ಟನ್ ಎಣ್ಣೆಯನ್ನು ಬ್ರೆಜಿಲ್ ಮತ್ತು ಅಮೆರಿಕದಿಂದ ತರಿಸಿಕೊಳ್ಳಲಾಗುತ್ತಿದೆ. ಅಂದರೆ ನಾವು ಜಿಎಂ ತಳಿ ಸೋಯಾ ಎಣ್ಣೆಯನ್ನು ಈಗಾಗಲೇ ಬಹಳ ಪ್ರಮಾಣದಲ್ಲಿ ಅರಿವಿಲ್ಲದಂತೆ ಬಳಸುತ್ತಿದ್ದೇವೆ ಈ ಎಲ್ಲಾ ಅಂಶಗಳನ್ನು ನೀತಿ ನಿಯಮಗಳನ್ನು ಅನುಷ್ಠಾನಕ್ಕೆ ತರುವವರು ಗಮನಿಸಬೇಕು. ನಾನು ಪ್ರತೀ ವರ್ಷವೂ ವಿದೇಶಗಳಿಗೆ ಹೋಗಿಬರುತ್ತಿರುತ್ತೇನೆ. ಕ್ವಾರಂಟೈನ್ ಕಾಯಿದೆಯ ಬಗ್ಗೆ ನನಗೆ ಅರಿವಿರುವುದರಿಂದ ತಳಿ ವಿಜ್ಞಾನಿಯಾಗಿ ಯಾವುದೇ ಬೀಜ ಅಥವಾ ಬೀಜದ ರೀತಿ ಉಪಯೋಗಿಸಬಹುದಾದ ಸಸ್ಯದ ಅಂಗವನ್ನು(Propagating material) ತರುವುದಿಲ್ಲ. ಆದರೆ ಅನೇಕರು ನನ್ನ ಜೊತೆಯಲ್ಲಿ ಬರುವವರೇ ಸುಮಾರು ಬೀಜಗಳನ್ನು ಅಥವಾ ಕಸಿಗಳನ್ನು ತರುವುದನ್ನು ನಾನು ಗಮನಿಸಿದ್ದೇನೆ. ಇದನ್ನು ಕೇಳುವವರು ಎಲ್ಲೋ ಒಂದೆರಡು ಸಾರಿ ಮಾತ್ರ ನನ್ನ ಕಣ್ಣಿಗೆ ಬಿದ್ದರು ಅಂದರೆ ನಮ್ಮಲ್ಲಿನ ಈಗಿರುವ ವ್ಯವಸ್ಥೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ, ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಕಟು ಸತ್ಯ. ನನ್ನ ಸಹ ಪ್ರಯಾಣಿಕರು ಯಾವುದೇ ಆತಂಕ ಇಲ್ಲದೆ ತಾವು ತಂದ ಬೀಜಗಳನ್ನು ಕೊಂಡೊಯ್ದರು. ನಾನು "ಹಾಗೆ ಮಾಡಬಾರದು" ಎಂದಾಗ ಇನ್ನು ಮುಂದೆ ಮಾಡುವುದಿಲ್ಲವೆಂದು ಹೇಳಿ ಹೊರಟುಹೋದರು.
5. ಜಿಎಂ ತಳಿಗಳ ಬಳಕೆ ಜೈವಿಕ ವೈವಿಧ್ಯಕ್ಕೆ ಅಪಾಯಕಾರಿ ಎಂಬುದು ಸತ್ಯಕ್ಕೆ ದೂರ. ಒಂದು ವಂಶವಾಹಿ ಒಂದು ತಳಿಯಿಂದ ಇನ್ನೊಂದು ತಳಿಗೆ ವರ್ಗವಾದ ಮಾತ್ರಕ್ಕೆ ಮತ್ತು ಈ ತಳಿಗಳನ್ನು ಬೆಳೆಯಲಾರಂಭಿಸಿದ ಮಾತ್ರಕ್ಕೆ ಪರಾಗಸ್ಪರ್ಶ ಕ್ರಿಯೆಯಲ್ಲಿ ಇಂತಹ ಮಾರ್ಪಾಡಾಗುತ್ತದೆ ಎಂಬುದು ಕೇವಲ ಊಹೆ. ಇದಕ್ಕೆ ಆಧಾರವೆಲ್ಲಿದೆ? ಒಂದು ಸ್ಪೀಸಿಸ್ನಿಂದ ಸಂಗ್ರಹಿಸಿದ ಪರಾಗ ಬೇರೆ ತಳಿಯ ಸಸ್ಯದ ಶಲಾಕೆಗೆ ಸಿಂಪಡಿಸಿದಾಗ ಅದು ಗರ್ಭ ಕಟ್ಟುವುದಿಲ್ಲ. ಈ ಕಾರಣದಿಂದಲೇ ಇತ್ತೀಚೆಗೆ ವಂಶವಾಹಿ ವರ್ಗಾವಣೆಗೆ ಹೊಸ ಹೊಸ ವಿಧಾನಗಳನ್ನು ಸಂಶೋಧಿಸಿ ಬಳಸಲಾಗುತ್ತಿದೆ. ಅಪಾರವಾದ ಹೂಡಿಕೆಯಿಂದ ಮಾತ್ರ ಈ ಕೆಲಸ ಸಾಧ್ಯ. ಇದು ಸಾಧಾರಣ ಮಟ್ಟದ ಪ್ರಯೋಗಾಲಯಗಳಲ್ಲಿ ಮಾಡಲಾಗುವುದಿಲ್ಲ. ಇದೀಗ ಅನೇಕ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಇಂತಹ ಪ್ರಯೋಗಾಲಯಗಳು ಅಸ್ತಿತ್ವದಲ್ಲಿದ್ದು ಜಿಎಂ ತಳಿಗಳ ಅಭಿವೃದ್ಧಿ ಮತ್ತು ಬೀಜೋತ್ಪಾದನೆ ಕೇವಲ ಖಾಸಗಿ ಸಂಸ್ಥೆಗಳಿಗೆ ಮಾತ್ರ ಸೀಮಿತ ಎಂಬುದು ಕೇವಲ ಕಲ್ಪನೆಯಷ್ಟೆ. ನೈಸರ್ಗಿಕ ಜೈವಿಕತೆಗೂ ಜಿಎಂ ತಳಿಗಳ ಬಳಕೆಗೂ ಯಾವುದೇ ಪರಿಣಾಮಕಾರಿ ಸಂಬಂಧವಿಲ್ಲ. ನಿಸರ್ಗದಲ್ಲಿ ಉತ್ಪರಿವರ್ತನೆ(Mutation) ಮತ್ತು ಪರಪರಾಗಕ್ರಿಯೆ (Cross pollination) ಮೂಲಕ ಹೊಸ ಹೊಸ ವಂಶವಾಹಿಗಳು ಸೇರ್ಪಡೆಯಾಗುತ್ತಲೇ ಇವೆ. ಆದ್ದರಿಂದಲೇ ಜೈವಿಕ ವೈವಿಧ್ಯತೆ ಹೆಚ್ಚುತ್ತಲೇ ಇದೆ. ಜೈವಿಕ ವೈವಿಧ್ಯ ನಾಶವಾಗುತ್ತಿರುವುದು ಫಲವತ್ತಾದ ಕೃಷಿ ಭೂಮಿಯನ್ನು ವಿವೇಚನೆ ಇಲ್ಲದೆ, ರಿಯಲ್ ಎಸ್ಟೇಟ್ಗಳಿಗೆ, ವಿಶೇಷ ಆರ್ಥಿಕ ವಲಯ ಮತ್ತು ಅಂತಹ ಯೋಜನೆಗಳಿಗೆ ಕೊಡುತ್ತಿರುವುದರಿಂದಲೇ ಹೊರತು ಜಿ.ಎಂ ತಳಿ ಮತ್ತಿಂತಹ ತಂತ್ರಜ್ಞಾನದ ಬಳಕೆಯಿಂದಲ್ಲ.
6. ಕುಲಾಂತರಿ ತಂತ್ರಜ್ಞಾನ ಬಳಕೆಗೆ ಬೇಕಾಗಿರುವ ನೀತಿ ನಿಯಮಗಳನ್ನು ಜಾರಿಗೆ ತರುವುದರಲ್ಲಿ ವಿಳಂಬ ಸಲ್ಲದು. ನಮ್ಮ ದೇಶದಲ್ಲೇ ಅಭಿವೃದ್ಧಿ ಪಡಿಸಿದ ಜಿ. ಎಂ. ತಳಿಗಳಿಗೆ ತ್ವರಿತ ಗತಿಯಲ್ಲಿ ಹಸಿರು ನಿಶಾನೆ ಕೊಡುವುದರಲ್ಲಿ ವಿಳಂಬವಾದರೆ, ಬಹುರಾಷ್ಟ್ರೀಯ ಕಂಪನಿಗಳ ಜಿಎಂ ತಳಿಗಳು ವ್ಯಾಪಕವಾಗಿ ಭಾರತದಲ್ಲಿ ಬೆಳೆಯಲು ಹೆಚ್ಚು ವರ್ಷಗಳು ಕಾಯಬೇಕಿಲ್ಲ.
7. ಜಿಎಂ ತಂತ್ರಜ್ಞಾನ ಎಲ್ಲಾ ಸಮಸ್ಯೆಗಳಿಗೂ ಔಷಧಿಯಾಗದು. ಬಗೆಹರಿಸಲಾಗದ ಕೆಲವು ಬಹು ಮುಖ್ಯವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕಾರಿಯಾಗಬಲ್ಲದು. ಕುಲಾಂತರಿ ತಳಿಗಳಿಂದ ಮಣ್ಣು ಕೆಡುತ್ತದೆ ಎಂದು ಹೇಳುವವರು, ಆ ಮಣ್ಣನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ಸತ್ಯವನ್ನು ತಿಳಿದುಕೊಳ್ಳಹುದು.
9.ಈ ತಂತ್ರಜ್ಞಾನದ ಬಳಕೆಗೆ ಸದ್ಯ್ಯದಲ್ಲಿ ಇರುವ ಕೊರತೆ ಎಂದರೆ, ಈ ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಯಾವುದು ಬೇಕು, ಯಾವುದು ಬೇಡವೆಂದು ನಿರ್ಧರಿಸಿ ಮಾರ್ಗದರ್ಶನ ನೀಡಬೇಕಾದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಬಹಳ ಹಿಂದೆ ಬಿದ್ದಿವೆ. ಈ ತಂತ್ರಜ್ಞಾನವೊಂದೇ ಎಲ್ಲಾ ಸಮಸ್ಯೆಗಳಿಗೂ ಉತ್ತರವಲ್ಲ. ಆದರೆ ತಡೆ ಇಲ್ಲದೇ ಏರುತ್ತಿರುವ ಜನಸಂಖ್ಯೆಯ ಬೇಡಿಕೆಗಳ ಪೂರೈಕೆಗೆ ಇದರ ಅವಶ್ಯಕತೆ ಇದೆ. ಹತ್ತಿ ಬೆಳೆಯಲ್ಲಿ ಈ ತಂತ್ರಜ್ಞಾನದ ಬಳಕೆಯಿಂದ ನಿರೀಕ್ಷೆ ಮೀರಿ ಲಾಭ ದಕ್ಕಿರುವುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಜಿಎಂ ಮುಸುಕಿನ ಜೋಳ ಪ್ರಚಾರಕ್ಕೆ ಬಂದದ್ದೇ ಆಗಿದ್ದರೆ ಅಮೆರಿಕ ದೇಶಕ್ಕಿಂತಲೂ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿತ್ತು ಮತ್ತು ನಾವು ಆಮದುಮಾಡಿಕೊಳ್ಳುತ್ತಿರುವ ಪ್ರಮಾಣ ಕಡಮೆಯಾಗುತ್ತಿತ್ತು. ಅದರಿಂದ ಗಣನೀಯ ಪ್ರಮಾಣದಲ್ಲಿ ರೈತರಿಗೆ ಲಾಭವುಂಟಾಗುತ್ತಿತ್ತು ಎಂಬುದನ್ನು ಅಲ್ಲಗಳೆಯಲಾಗದು. ಈಗಲಾದರೂ ಈ ವಿಷಯವನ್ನು ಅರ್ಥಮಾಡಿಕೊಂಡು, ಜಿಎಂ ತಂತ್ರಜ್ಞಾನದ ಬಳಕೆಗೆ ಬೇಕಾಗಿರುವ ಪ್ರಯೋಗಗಳಿಗೆ ಅವಕಾಶ ದೊರಕಿಸಿಕೊಡುವುದು ಜಾಣತನ ಹಾಗೂ ರೈತಪರ ಧೋರಣೆ ಎಂಬುದು ನನ್ನ ಅನಿಸಿಕೆ.
-ಡಾ. ಎಮ್. ಮಹದೇವಪ್ಪ
mahadevrice@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


