ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಮಾಡಿದ ಮೋಡಿ

ಕಳೆದ ವಾರ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಇನ್ಫೋಸಿಸ್ ಫೌಂಡೇಷನ್ನಿನವರು ಕೈಗೆತ್ತಿಕೊಂಡ "ಪರಿಶುದ್ಧ" ಎನ್ನುವ ಶೌಚಾಲಯ ನಿರ್ಮಾಣ ಯೋಜನೆಯ ಬಗ್ಗೆ ನಿಮಗೆ ಹೇಳುತ್ತಿದ್ದೆ. ಈ ಯೋಜನೆಯ ಯಶೋಗಾಥೆಯನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಇನ್ಫೋಸಿಸ್ ಫೌಂಡೇಷನ್ನಿನ ವಾಸುದೇವರಾವ್ ಎಂ.ದೇಶಪಾಂಡೆಯವರು ಗುಲ್ಬರ್ಗಾದಲ್ಲಿದ್ದುಕೊಂಡು ಈ ಯೋಜನೆಯನ್ನು ಮುನ್ನಡೆಸಿದರು. ಇನ್ಫೋಸಿಸ್ ಫೌಂಡೇಷನ್ ಉತ್ತರ ಕರ್ನಾಟಕದ ನಾಲ್ಕು ನೂರು ಹಳ್ಳಿಗಳಲ್ಲಿ, ಹನ್ನೆರಡು ಸಾವಿರ ಶೌಚಾಲಯಗಳನ್ನು ನಿರ್ಮಿಸಿ, ಆರು ಲಕ್ಷ ಕುಟುಂಬಗಳಿಗೆ ತಿಳಿವಳಿಕೆ ನೀಡಿ, ಇಪ್ಪತ್ತೈದು ಹೊಸ ಉದ್ಯಮಿಗಳಿಗೆ ಅವಕಾಶ ಕಲ್ಪಿಸಿಕೊಟ್ಟು, ಐನೂರು ಮೇಸ್ತ್ರಿಗಳಿಗೆ ತರಬೇತಿ ನೀಡಿ, ತಂತ್ರಜ್ಞಾನದ ಮೂಲಕ ಮಾಹಿತಿ ಸಂಗ್ರಹಿಸಿ, ಸರ್ಕಾರದೊಂದಿಗೆ ಜನಸಾಮಾನ್ಯನ ಪ್ರಗತಿಗೆ ಕೈಜೋಡಿಸಿದ ಹೆಗ್ಗಳಿಕೆಗೂ ಪಾತ್ರವಾಯಿತು.
ನೈರ್ಮಲ್ಯದ ಬಗ್ಗೆ ಅಜ್ಞಾನ, ಎಲ್ಲವನ್ನೂ ಸಹಿಸಿಕೊಂಡು ಬದಲಾವಣೆಗೆ ತೆರೆದುಕೊಳ್ಳದೆ ಇರುವ ಮನೋಭಾವ, ಸರ್ಕಾರವೇ ಎಲ್ಲವನ್ನೂ ಒದಗಿಸಲಿ ಎನ್ನುವ ಧೋರಣೆ, ಬೇರೆಯವರೆಲ್ಲಾ ಬದಲಾವಣೆಗಳಲ್ಲಿ ಭಾಗಿಗಳಾಗಲಿ, ನಂತರ ನಾವು ನೋಡಿಕೊಳ್ಳೋಣ ಎನ್ನುವ ತಾತ್ಸಾರ, ಇವೆಲ್ಲವೂ ಹೇರಳವಾಗಿ ಕಂಡುಬರುತ್ತಿದ್ದ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬವನ್ನೂ ಕನಿಷ್ಠ ಪಕ್ಷ ಐದು ಸಲವಾದರೂ ಭೇಟಿ ಮಾಡಿ, ಎರಡು ತಿಂಗಳ ಕಾಲ ಶ್ರಮಿಸಿದ ಬಳಿಕ ಸ್ವಲ್ಪ ಜನರ ಮನ ಒಲಿಸಲು ಸಾಧ್ಯವಾಗುತ್ತಿತ್ತು. ಎಷ್ಟೋ ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರದಾಟವಿರುವಾಗ ಸಹಜವಾಗಿಯೇ ಶೌಚಾಲಯ ನಿರ್ಮಾಣ ಅವರ ಆದ್ಯತೆಯ ಪಟ್ಟಿಯಲ್ಲಿ ಕಡೆಯದಾಗಿರುತ್ತಿತ್ತು. ಬ್ಯಾಂಕಿನವರು ಸಾಲ ಕೊಡಲು ಮುಂದೆ ಬಂದರೂ, ಅವರ ನಿಯಮಗಳಿಂದ ನಿಧಾನವಾಗುತ್ತಿದ್ದುದರಿಂದ ಸಂಘಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಮತ್ತು ಮಹೀಂದ್ರ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಗಳು ಸಾಲ ಒದಗಿಸಿದವು. ಎಷ್ಟೋ ಮನೆಗಳಲ್ಲಿ ಹಿಂದೆ ಅವೈಜ್ಞಾನಿಕವಾಗಿ ಕಟ್ಟಿದ ಶೌಚಾಲಯಗಳಿಂದ ದುರ್ವಾಸನೆ ಹಬ್ಬಿ, ಶೌಚಾಲಯವೆಂದರೇ ಹೆದರಿ ಓಡುವ ಪರಿಸ್ಥಿತಿ ಬಂದೊದಗಿತ್ತು. ಅಲ್ಲದೆ ಸರ್ಕಾರದಿಂದ ಧನ ಸಹಾಯ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಬೇರೆ ಜನರಿಗಿತ್ತು.
ಇವೆಲ್ಲದರ ಪರಿಣಾಮವಾಗಿ ಶೌಚಾಲಯ ನಿರ್ಮಾಣಕ್ಕೆ ಜನರ ಮನ ಒಲಿಸುವುದು ದೊಡ್ಡ ಸವಾಲಾಗಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ರು.4700 ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ರು.4500 ಪ್ರೋತ್ಸಾಹಧನ ಲಭ್ಯವಿತ್ತು.
ಮನೆಯಿಂದ ಮನೆಗೆ ಹೋಗಿ ಶೌಚಾಲಯದ ಅವಶ್ಯಕತೆಗಳ ಬಗ್ಗೆ ಕುಟುಂಬದ ಮನ ಒಲಿಸಬೇಕಾಗುತ್ತಿತ್ತು. ಒಂದು ಬಯಲಿನಲ್ಲಿ ಒಂದು ಶೌಚಾಲಯವನ್ನು ನಿರ್ಮಿಸಿ, ಜನರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸಿ ವಿವರಿಸಬೇಕಾಗುತ್ತಿತ್ತು. ಜಿಲ್ಲಾ ಪಂಚಾಯಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರು ಲಕ್ಷ ಕುಟುಂಬಗಳ ಮನ ಒಲಿಸಲಾಯಿತು.
ಗುಲ್ಬರ್ಗಾ, ಯಾದ್ಗೀರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸುಮಾರು ಹತ್ತು ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಯಿತು. ಬಯಲು ಪ್ರದೇಶಗಳಲ್ಲಿ ಮಲ ಮೂತ್ರ ವಿಸರ್ಜನೆಯನ್ನು ತಡೆಯುವುದರಲ್ಲಿ ಬಹುತೇಕ ಯಶಸ್ಸನ್ನು ಗಳಿಸಿದೆವು. ದೃಶ್ಯ ಮತ್ತು ಶ್ರವಣ ಮಾಧ್ಯಮಗಳ ಮುಖಾಂತರ ವಿಷಯಗಳನ್ನು ಮನ ಮುಟ್ಟುವಂತೆ ತಲುಪಿಸಲು ಶ್ರಮಪಟ್ಟೆವು. ವಿಶೇಷವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿ, ಅವರಿಂದ ಮನೆಯವರ ಮನ ಒಲಿಸಲು ಸಾಧ್ಯವಾಯಿತು.
ಯಾವುದೇ ಒಂದು ಹೊಸ ಕೆಲಸ ಯಶಸ್ಸು ಕಾಣಬೇಕೆಂದರೆ, ಅದರ ಬಗ್ಗೆ ಜನರಿಗೆ ಅರಿವು ಮೂಡಿಸಿ, ಅವರು ಅದರಲ್ಲಿ ಭಾಗವಹಿಸುವಂತೆ ಮಾಡುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇನ್ಫೋಸಿಸ್ ಫೌಂಡೇಷನ್, ಕೊಟ್ಟಾಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ, ಇಂಡಸ್ ಪ್ರತಿಷ್ಠಾನ ಮುಂತಾದ ಸರ್ಕಾರೇತರ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿದವು. ಆ ಜಾಗದ ಮುಖಂಡರುಗಳನ್ನು ಕಂಡು ಅವರ ಸಹಾಯ ಕೋರಲಾಯಿತು. ಮಠಾಧೀಶರನ್ನು ಕಂಡು ಜನರಿಗೆ ಅರಿವು ನೀಡುವಂತೆ ಕೋರಲಾಯಿತು. ಶೌಚಾಲಯ ಮತ್ತಿತರ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲೋಸುಗ ನೂರಾರು ಚಿತ್ರಗಳು ಮತ್ತಿತರ ಪರಿಕರಗಳ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಯಿತು. ಶಾಲಾ ಮಕ್ಕಳಿಗೆ ನೈರ್ಮಲ್ಯಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸುಮಾರು 1200 ಶಾಲೆಗಳಿಂದ ಹತ್ತು ಸಾವಿರ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಪತ್ರಿಕೆ ಮತ್ತು ದೃಶ್ಯ ಮಾಧ್ಯಮದವರ ಸಹಾಯವನ್ನೂ ಪಡೆಯಲಾಯಿತು. ದಿನ ಪತ್ರಿಕೆಗಳು, ಮಾಸ ಪತ್ರಿಕೆಗಳು, ಟೆಲಿವಿಷನ್ ಮತ್ತು ರೇಡಿಯೋದ ಮೂಲಕವೂ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಯಾವುದೇ ರೀತಿಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಬಹುದಾದಂಥ ಹಿರಿಯರನ್ನು ಸಂಪರ್ಕಿಸಿ, ಅವರ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸಲಾಯಿತು. ಒಂದು ಆಂದೋಲನದ ಮಾದರಿಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಬಯಲು ಶೌಚಾಲಯ ಮೂಕ್ತ ಪ್ರದೇಶವನ್ನಾಗಿಸಲು ಸಹಕಾರಿಯಾಗುವಂಥ ಎಲ್ಲಾ ರೀತಿಯ ಕೆಲಸಗಳನ್ನೂ ಕೈಗೆತ್ತಿಕೊಳ್ಳಲಾಯಿತು. ವಸ್ತು ಪ್ರದರ್ಶನದಲ್ಲಿ ವಿವಿಧ ರೀತಿಯ ಶೌಚಾಲಯಗಳ ಬಗ್ಗೆ ಮಾಹಿತಿ ನೀಡಲಾಯಿತು:
-ಕಡಿಮೆ ಖರ್ಚಿನಲ್ಲಿ, ಇಂಗು ಗುಂಡಿ ನಿರ್ಮಾಣ ಮಾಡಬಹುದು, ಸರಳವಾಗಿ ಬಳಸಬಹುದು. ಬೂದಿಯ ಉಪಯೋಗವಾಡಬಹುದು ಮತ್ತು ಆಗಾಗ ಮತ್ತೊಂದು ಗುಂಡಿ ತೋಡಬೇಕಾಗುತ್ತದೆ. ಇದರ ಅಂದಾಜು ವೆಚ್ಚ ರು. 2,000 ರಿಂದ 4,000 ದವರೆಗೆ ಆಗುವುದು ಎನ್ನುವ ಮಾಹಿತಿ ನೀಡಲಾಯಿತು.
ದ್ವಿಪ್ರತಿ ಇಂಗು ಗುಂಡಿ ಶೌಚಾಲಯ ಸರಳ, ಅಷ್ಟೇನು ಖರ್ಚಿಲ್ಲದ್ದು. ಆಗಾಗ ಮಣ್ಣು ಬದಲಿಸಬೇಕಾಗುತ್ತದೆ. ಮಳೆಗಾಲದಲ್ಲಿ ಕಷ್ಟ, ಅಂದಾಜು ವೆಚ್ಚ ರು. 8,000ದಿಂದ ರೂ. 10,000.
ಇಕೋಸ್ಯಾನ್ ಶೌಚಾಲಯ ನೈಸರ್ಗಿಕ ಮಿತ್ರ, ಉತ್ತಮ ಗೊಬ್ಬರವಾಗುವುದು, ಬೂದಿಹಾಕಬೇಕಾಗುವುದು ಮತ್ತು ನೀರು ಮಣ್ಣು ಬೆರೆಸಬಾರದು. ಅಂದಾಜು ವೆಚ್ಚ ರು.8,000ದಿಂದ 22,000 ಗಳು ಆಗುತ್ತಿತ್ತು.
ಡ್ರೈನೇಜ್ ವ್ಯವಸ್ಥೆ ಇರುವ ಶೌಚಾಲಯಗಳು ತುಂಬಾ ಬಾಳಿಕೆ ಬರುತ್ತದೆ. ಸ್ವಚ್ಛ ಭಾವನೆ ಮೂಡಿಸುತ್ತದೆ, ಆದರೆ ಪ್ರಾರಂಭಿಕ ಸ್ಥಾಪನೆಯ, ಅಂದರೆ ಡ್ರೈನೇಜ್ ನಿರ್ಮಾಣ(ಸಂಪರ್ಕ) ಖರ್ಚು, ಮಾತ್ರ ಹೆಚ್ಚಾಗುತ್ತಿತ್ತು. ಇವುಗಳಲ್ಲದೆ ಯುನಿಸೆಫ್, ಮತ್ತಿತರ ಮಾದರಿಗಳ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಯಿತು. ಶತ ಶತಮಾನಗಳಿಂದ ಬಂದಿರುವ ಪದ್ಧತಿಗಳನ್ನು ಬದಲಾಯಿಸಲು ಮೊದಲು ಮನಸ್ಸುಗಳ ಪರಿವರ್ತನೆ ಆಗಬೇಕು. ಹಳೆಯ ಪದ್ಧತಿಗಳು ಇಂದು ಪ್ರಸ್ತುತವಲ್ಲ ಎಂಬ ಆಲೋಚನೆಯನ್ನು ತಲೆಯಲ್ಲಿ ಮೂಡಿಸಲು ಬುದ್ಧಿ ನೆರವಾಗಬೇಕು. ಮನಸ್ಸು ಮತ್ತು ಬುದ್ಧಿ ಎರಡೂ ಒಟ್ಟಿಗೇ ಕೆಲಸ ಮಾಡಲಾರಂಭಿಸಿದಾಗ ಮಾತ್ರ ಒಬ್ಬ ಮನುಷ್ಯ ಬದಲಾವಣೆಗೆ ತೆರೆದುಕೊಳ್ಳಲು ಸಾಧ್ಯ. ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆಯ ಫಲವಾಗಿ ಹಲವಾರು ರೋಗ ರುಜಿನಗಳು ಹರಡುತ್ತಿದ್ದು, ಅದರಲ್ಲೂ ನೂರಾರು ಮಕ್ಕಳು ವಾಂತಿ ಬೇಧಿಯಿಂದ ಸಾಯುತ್ತಿದ್ದುದನು ್ನಉದಾಹರಣೆಯಾಗಿಕೊಟ್ಟು ನಿಧಾನವಾಗಿ ಪರಿವರ್ತನೆ ಮಾಡಬೇಕಾಗಿತ್ತು.
ಅಜ್ಞಾನಕ್ಕೆ ಮುಖ್ಯಕಾರಣ ಶಿಕ್ಷಣ ಇಲ್ಲದಿರುವುದು. ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಮೊದಲು ತಯಾರು ಮಾಡಿ, ನಂತರ ಮಹಿಳೆಯರಿಗೆ ತಿಳಿವಳಿಕೆ ನೀಡಲಾಯಿತು. ಒಬ್ಬ ವಿದ್ಯಾವಂತ ಮಹಿಳೆ ಮನೆಯಲ್ಲಿದ್ದರೆ ಆ ಮನೆಯೇ ಒಂದು ವಿಶ್ವವಿದ್ಯಾಲಯವಿದ್ದಂತೆ. ಆಕೆಗೆ ತನ್ನ ಕುಟುಂಬದ ಆರೋಗ್ಯ ಮತ್ತು ಆನಂದ ಮುಖ್ಯವಾಗಿರುತ್ತದೆ. ಪ್ರಥಮವಾಗಿ ಮಹಿಳೆಗೆ ಶಿಕ್ಷಣವನ್ನು ಕೊಟ್ಟರೆ ಇಡೀ ಕುಟುಂಬಕ್ಕೇ ಕೊಟ್ಟಂತೆ. ಆದ್ದರಿಂದ ಸ್ತ್ರೀಶಕ್ತಿ ಗುಂಪುಗಳು ಮತ್ತಿತರ ಸ್ವಸಹಾಯ ಸಂಘದ ಮಹಿಳೆಯರಿಗೆ ಉತ್ತೇಜನ ನೀಡಲಾಯಿತು. ಇದರ ಪರಿಣಾಮ ಗಮನಾರ್ಹವಾಗಿತ್ತು. ಶೌಚಾಲಯ ಕ್ರಾಂತಿಯಲ್ಲಿ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮುಖಂಡರು, ಗುರು ಹಿರಿಯರು, ಸರ್ಕಾರೇತರ ಸಂಸ್ಥೆಗಳು ಸರ್ಕಾರದೊಂದಿಗೆ ಹೆಜ್ಜೆ ಹಾಕುತ್ತಾ ಜಾಗೃತಿ ಮೂಡಿಸುವಲ್ಲಿ, ಬದಲಾವಣೆ ತರುವಲ್ಲಿ ಯಶಸ್ವಿಯಾದರು. ಸರ್ಕಾರದ ಯೋಜನೆಗಳು ಅತ್ಯುತ್ತಮವಾಗಿ ಜನಸಾಮಾನ್ಯರಿಗಾಗಿ ರೂಪುಗೊಂಡಿರುತ್ತವೆ. ಆದರೆ ಅವುಗಳು ಯಶಸ್ವಿಯಾಗಬೇಕಾದರೆ, ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ, ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಯವರು ಜೊತೆಯಾಗಬೇಕು. ಆಗ ಮಾತ್ರ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದು ಜನಸಾಮಾನ್ಯರಿಗೆ ತಲುಪುತ್ತವೆ. ಮುಂದೊಂದು ದಿನ ಸರ್ಕಾರದ ಪ್ರತಿ ಯೋಜನೆಗಳ ಬಗ್ಗೆಯೂ ಜನಸಾಮಾನ್ಯನಿಗೆ ಸಂಪೂರ್ಣ ಅರಿವು ಮೂಡುತ್ತದೆ. ಆ ಯೋಜನೆಗಳ ಪ್ರತಿ ಹಂತದಲ್ಲಿಯೂ ಪಾರದರ್ಶಕತೆ ಇರುತ್ತದೆ ಎಂಬ ಕನಸು ನನ್ನದು.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


