ಅಂಕಣಗಳು

ನಮ್ಮ ಮಕ್ಕಳು ಎಷ್ಟು ಸುರಕ್ಷಿತ?

ನಮ್ಮ ಮಕ್ಕಳು ಎಷ್ಟು ಸುರಕ್ಷಿತ?
Published On :

ದೊಡ್ಡಿಯಂತಿದ್ದರೇನು, ಶಾಲೆ ಶಾಲೆಯೇ ಎಂದು ಮಕ್ಕಳನ್ನು ಸೇರಿಸಿದರೆ ದುರಂತ, ಅವಘಡಗಳ ಸರಮಾಲೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಅರಮನೆಯಂತಹ ಶಾಲೆ ಎಂದುಕೊಂಡರೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಆಘಾತ...
ಇದಕ್ಕೆ ನಮ್ಮ ಸುತ್ತ ನಡೆಯುತ್ತಿರುವ ಪ್ರಕರಣಗಳೇ ಸಾಕ್ಷಿ. ಹೀಗಾದರೆ ನಮ್ಮ ಮಕ್ಕಳು ಸುರಕ್ಷಿತವಾಗಿರುವುದಾದರೂ ಎಲ್ಲಿ? 2004ರಲ್ಲಿ ತಮಿಳುನಾಡಿನ ಕುಂಭಕೋಣಂನ ಶಾಲೆಯಲ್ಲಿ ನಡೆದ ಬೆಂಕಿ ಅವಘಡ 94 ಮಕ್ಕಳನ್ನು ಸುಟ್ಟು ಕರಕಲಾಗಿಸಿತು, ಬಿಹಾರದಲ್ಲಿ ಕೆಲ ತಿಂಗಳ ಹಿಂದಷ್ಟೇ ಬಿಸಿಯೂಟಕ್ಕೆ ಕ್ರಿಮಿನಾಶಕ ಸೇರಿ 26 ಮಕ್ಕಳು ಸಾವಿಗೀಡಾದರು. ಇಂತಹ ಘಟನೆಗಳು ಬೇಜವಾಬ್ದಾರಿಯುತ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಕನ್ನಡಿ ಹಿಡಿದರೆ, ಬೆಂಗಳೂರಿನ ಪ್ರತಿಷ್ಠಿತ ವಿಬ್‌ಗ್ಯೋರ್ ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲಾದ ಅತ್ಯಾಚಾರ ಪ್ರಕರಣ ನೋಟುಗಳ ಕಂತೆಗಳ ಮೇಲೆ ನಿಂತ ಶಾಲೆಯೂ ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಶಾಲೆ ಹೇಗೇ ಇರಲಿ, ಕಲಿಯುವ ಮಕ್ಕಳು ಕಲಿತೇ ಕಲಿಯುತ್ತಾರೆ ಎಂಬಂತಹ ಮನಸ್ಥಿತಿಯಿಂದ, ಮತ್ತೆ ಕೆಲವೊಮ್ಮೆ ಕಡಿಮೆ ಖರ್ಚಿನಲ್ಲಿ ಆಗುತ್ತದೆಂಬ ಕಾರಣಕ್ಕಾಗಿ ಆ ಶಾಲೆಯಲ್ಲಿ ಸೂಕ್ತ ಮೂಲಸೌಕರ್ಯಗಳು ಇವೆಯೇ, ಅದರ ಪರಿಸ್ಥಿತಿ ಹೇಗಿದೆ, ಅಲ್ಲಿ ಮಕ್ಕಳು ಯಾವುದೇ ಆತಂಕವಿಲ್ಲದೇ ಕಲಿಯಬಹುದೇ ಎಂಬ ಯಾವ ವಿಚಾರದ ಬಗ್ಗೆಯೂ ಗಮನಹರಿಸದೇ ಶಾಲೆಗೆ ಸೇರಿಸಿಬಿಡುತ್ತಾರೆ. ಕುಂಭಕೋಣಂನಲ್ಲಿ ಆಗಿದ್ದೂ ಇದೆ. ದುರಂತ ಸಂಭವಿಸಿದ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯಗಳಿರಲಿಲ್ಲ. ಒಂದು ತರಗತಿಗೆ ಒಂದೇ ಬಾಗಿಲಿತ್ತು, ಮಹಡಿಯ ಮೆಟ್ಟಿಲುಗಳಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನಿಡಲಾಗಿತ್ತು. ಬಿಸಿಯೂಟ ತಯಾರಿಸುವ ಕೋಣೆಯ ವ್ಯವಸ್ಥೆಯೂ ಹದಗೆಟ್ಟಿತ್ತು. ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಮಕ್ಕಳು ವಿಚಾರವನ್ನು ಶಿಕ್ಷಕರಿಗೆ ತಿಳಿಸಿದರೂ ಅವರು 'ಅದು ಸಣ್ಣ ಅವಘಡ ಅಷ್ಟೇ. ನೀವೆಲ್ಲರೂ ತರಗತಿಯಲ್ಲೇ ಕುಳಿತುಕೊಳ್ಳಿ, ಎಲ್ಲೂ ಹೋಗಬೇಡಿ' ಎಂಬ ಸಲಹೆ ನೀಡಿದರು. ಅಲ್ಲಿ ಹೊತ್ತಿಕೊಂಡ ಬೆಂಕಿ ಒಂದು ಮಹಡಿಯಿಡೀ ವ್ಯಾಪಿಸಿತು. ಮಕ್ಕಳಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೆಟ್ಟಿಲುಗಳಲ್ಲಿ ಇಳಿದುಕೊಂಡು ಓಡುವ ಎಂದರೆ ಅಲ್ಲಿಟ್ಟಿದ್ದ ಸಾಮಗ್ರಿಗಳು ಅಡ್ಡಿಯಾದವು. ಮಕ್ಕಳು ಜೀವಭಯದಿಂದ ಚೀರಾಡುತ್ತಿದ್ದರೆ ಬಹುತೇಕ ಶಿಕ್ಷಕರು ತಮ್ಮ ತಮ್ಮ ಪ್ರಾಣ ಉಳಿಸಿಕೊಳ್ಳಲು ಹವಣಿಸಿದರೇ ವಿನಾ ಮಕ್ಕಳ ಸಹಾಯಕ್ಕೆ ಬರಲೇ ಇಲ್ಲ. 96 ಮಕ್ಕಳು ಸುಟ್ಟು ಕರಕಲಾದರು.
ಈಗ ಹೇಳಿ, ನಿಮ್ಮ ಮಕ್ಕಳ ಜೀವಕ್ಕಿಂತ ದೊಡ್ಡದು ಯಾವುದಾದರೂ ಇದೆಯೇ? ಸರ್ಕಾರಿಯಾಗಿರಲೀ, ಖಾಸಗಿಯಾಗಿರಲೀ ಹಣ ಉಳಿಸುವ ಆತುರದಲ್ಲಿ ಹಿಂದೆ ಮುಂದೆ ನೋಡದೇ ದೊಡ್ಡಿಯಂತಿರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮುಂಚೆ ಸ್ವಲ್ಪ ಯೋಚಿಸಿ. ಮಕ್ಕಳ ಬಗ್ಗೆ ಸಾವಿರಾರು ಕನಸು ಕಂಡಿರುವ ನೀವು ಅವರ ಸುರಕ್ಷತೆಯ ಬಗ್ಗೆ ಆಲೋಚಿಸಲೇಬೇಕು. ಈ ವಿಚಾರದಲ್ಲಿ ಹೆತ್ತವರ ಜತೆಗೆ ಸರ್ಕಾರಗಳ ಜವಾಬ್ದಾರಿಯೂ ಹೆಚ್ಚಿರುತ್ತದೆ. ಹೆಚ್ಚಿನ ಶುಲ್ಕ ಭರಿಸಲಾಗದೇ ಹೆತ್ತವರು ಕಡಿಮೆ ಶುಲ್ಕವಿರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಆದರೆ  ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆಗಳು ಎದ್ದು ಕಾಣುತ್ತಿವೆ. ಸರ್ಕಾರಿ ಶಾಲೆಗಳನ್ನು ಕೇಳುವವರೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಶಾಲೆಗಳಲ್ಲಿ ಚಾವಣಿ ಇಂದೋ, ನಾಳೆಯೋ ಬೀಳಬಹುದು ಎಂಬ ಸ್ಥಿತಿಯಿದೆ, ಕೆಲವೆಡೆ ಮಳೆ ಬಂತೆಂದರೆ ಸೋರಲು ಶುರುವಾಗುತ್ತವೆ. ಬಿರುಕು ಬಿಟ್ಟ ಗೋಡೆಗಳು, ಗಾಳಿ ಬೆಳಕಿಲ್ಲದ ಕೊಠಡಿಗಳು, ಮುರಿದ ಬಾಗಿಲುಗಳು ಒಂದೋ, ಎರಡೋ. ಈ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡರಷ್ಟೇ ಕುಂಭಕೋಣಂ, ಬಿಹಾರದಂತಹ ದುರ್ಘಟನೆಗಳನ್ನು ತಡೆಯಲು ಸಾಧ್ಯ.
ಈಗ ಮತ್ತೊಂದು ದಿಕ್ಕಿನತ್ತ ನೋಡೋಣ. ವೈಭವೋಪೇತ ಕಟ್ಟಡ, ಮುಂದೆ ವಿಶಾಲ ಉದ್ಯಾನವನ, ದೊಡ್ಡ ದೊಡ್ಡ ಗೇಟುಗಳು, ಒಳಗೆ ಕಾಲಿಟ್ಟರೆ ಹೊಸ ಲೋಕಕ್ಕೇ ಹೋದಂತಹ ಅನುಭವ. ಇವುಗಳನ್ನೆಲ್ಲ ನೋಡಿ ಮೈಮರೆಯುವ ಹೆತ್ತವರು, ಎಷ್ಟೇ ಖರ್ಚಾದರೂ ಸರಿ ಈ ಪ್ರತಿಷ್ಠಿತ ಶಾಲೆಗೇ ನನ್ನ ಮಗುವನ್ನು ಕಳುಹಿಸಬೇಕು ಎಂದು ನಿರ್ಧರಿಸುತ್ತಾರೆ. ಇಲ್ಲಿ ಕಲಿತರಷ್ಟೇ ಮಗ ಬುದ್ಧಿವಂತನಾಗುತ್ತಾನೆ ಎಂಬ ಭ್ರಮೆ ಅವರಲ್ಲಿ ಸೃಷ್ಟಿಯಾಗುತ್ತದೆ. ಮುಖ ನೋಡಿ ಮಣೆ ಹಾಕುವುದು ಎಂಬ ಮಾತಿನಂತೆ ಕಟ್ಟಡವನ್ನು ನೋಡಿ ಆ ಶಾಲೆಯ ಮತ್ತು ಶಿಕ್ಷಣದ ಗುಣಮಟ್ಟ ಅಳೆಯುತ್ತಾರೆ. ಆದರೆ ಇಂತಹ ಶಾಲೆಗಳಲ್ಲೂ ಮಕ್ಕಳಿಗೆ ಸುರಕ್ಷೆ ಸಿಗದಿದ್ದಾಗ
ತಮ್ಮ ಮಕ್ಕಳನ್ನು ಕಾಯಲು ಸೆಕ್ಯೂರಿಟಿ ಗಾರ್ಡ್‌ಗಳನ್ನೇ ನೇಮಿಸುವಂತಹ ಸಾಮರ್ಥ್ಯ ಇರುವ ಹೆತ್ತವರಿಗೆ, ಕೋಟೆಯಂತಹ ಶಾಲೆಯೊಳಗೆ ಮಕ್ಕಳು ಸುರಕ್ಷಿತವಾಗಿಲ್ಲ ಎಂಬುದು ಅರಿತಾಗ ಏನಾಗಬಹುದು ಎಂಬುದಕ್ಕೆ ವಿಬ್‌ಗ್ಯೋರ್ ಪ್ರಕರಣವೇ ಸಾಕ್ಷಿ. ಅಮಾಯಕ ಮಗುವಿನ ಮೇಲೆ ಅತ್ಯಾಚಾರ ನಡೆದಾಗ ಇಡೀ ಸಮಾಜವೇ ಅದನ್ನು ಪ್ರತಿಭಟಿಸಿತು. ಆದರೆ ಅಂತಾರಾಷ್ಟ್ರೀಯ ಖ್ಯಾತಿಯ ಶಾಲೆಯ ಆಡಳಿತ ಮಂಡಳಿ ಮಾತ್ರ ತಮ್ಮ ಘನತೆ ಮಣ್ಣುಪಾಲಾಗುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಅನ್ಯಾಯಕ್ಕೊಳಗಾದ ಮಗುವಿಗೆ, ಹೆತ್ತವರಿಗೆ ಸಾಂತ್ವನ ಹೇಳುವ ಬದಲು ತಪ್ಪನ್ನು ಮುಚ್ಚಿಹಾಕಲು ಯತ್ನಿಸಿತು.
ಇದಕ್ಕೆಲ್ಲ ಕಾರಣ ಏನು? ಇಂದಿನ ಶಿಕ್ಷಣ ವ್ಯವಸ್ಥೆಯೇ ಹಣದ ಮೇಲೆ ನಿಂತಿದೆ. ಶಾಲೆ ಮತ್ತು ಮಕ್ಕಳ ಹೆತ್ತವರ ಮಧ್ಯೆ ಅಂತರ ಸೃಷ್ಟಿಯಾಗುತ್ತಿದೆ. ಹಿಂದೆ ಇದ್ದಂತೆ ಈಗ ಹೆತ್ತವರು ಶಾಲೆಗೆ ಮನಸ್ಸಾದಾಗ ಭೇಟಿ ನೀಡುವಂತಿಲ್ಲ, ಕೆಲವು ಖಾಸಗಿ ಶಾಲೆಗಳಲ್ಲಂತೂ ಪ್ರಾಂಶುಪಾಲರನ್ನು ಭೇಟಿಯಾಗುವ ಅವಕಾಶವೂ ಸಿಗುತ್ತಿಲ್ಲ. ಕೇವಲ ಪಾಲಕರ-ಶಿಕ್ಷಕರ ಸಭೆಯಿದ್ದ ದಿನ ಮಾತ್ರ ಶಿಕ್ಷಕರೊಂದಿಗೆ ಮಾತುಕತೆ ನಡೆಸಬಹುದು. ಕೆಲವೆಡೆಯಂತೂ ಹಣಕಾಸಿನ ವಿಚಾರ ಮಾತನಾಡುವುದಿದ್ದರೆ ಮಾತ್ರ ಪಿಟಿಎ ಸಭೆ ಕರೆಯಲಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಣದ ಲಾಲಸೆ ಎಷ್ಟೊಂದು ಹೆಚ್ಚಿದೆಯೆಂದರೆ, ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ ಎಂಬ ಏಕೈಕ ಕಾರಣಕ್ಕಾಗಿ ಗುರುತು ಪರಿಚಯ ಇಲ್ಲದವರನ್ನು, ಹಿನ್ನೆಲೆಯೇ ಗೊತ್ತಿಲ್ಲದವರನ್ನು ಶಾಲೆಗಳಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ. ಅಂಥವರು ನಡೆಸುವ ದುಷ್ಕೃತ್ಯಗಳು ಮಕ್ಕಳ ಭವಿಷ್ಯವನ್ನೇ ಮುರುಟಿಸಿಬಿಡುತ್ತದೆ ಎಂಬ ಕನಿಷ್ಠ ಜ್ಞಾನವೂ ಅವುಗಳಿಗಿರುವುದಿಲ್ಲ.
ಮತ್ತೊಂದೆಡೆ ಲಕ್ಷಾಂತರ ರು. ಡೊನೇಷನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿದರೆ ನಮ್ಮ ಕೆಲಸ ಮುಗಿಯಿತು ಎಂದುಕೊಳ್ಳುವ ಹೆತ್ತವರು. ನೀವು ಹಗಲು ರಾತ್ರಿ ದುಡಿದು ಸಂಪಾದಿಸುವುದು ಯಾರಿಗಾಗಿ, ಮಕ್ಕಳಿಗಾಗಿ ಅಲ್ಲವೇ? ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿಯೇ ವಹಿಸದಿದ್ದರೆ ನೀವು ಎಷ್ಟು ದುಡಿದರೂ ಪ್ರಯೋಜನವೇನು?
ಮಗುವನ್ನು ಮೊದಲು ಶಾಲೆಗೆ ಸೇರಿಸುವಾಗ ಹೆತ್ತವರು ಬಹಳಷ್ಟು ಆಸ್ಥೆ ವಹಿಸುತ್ತಾರೆ. ಎಲ್‌ಕೆಜಿ, ಯುಕೆಜಿಯಿಂದ ಹಿಡಿದು ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಮಗು ಮನೆಗೆ ಬಂದೊಡನೆ ಅಂದು ನಡೆದ ಘಟನೆಗಳನ್ನೆಲ್ಲಾ ಆಲಿಸುತ್ತಾರೆ, ಹೋಂ ವರ್ಕ್ ಮಾಡಿದ್ದೀಯಾ? ಮಿಸ್ ಏನೆಂದರು? ಏನು ಪಾಠ ಮಾಡಿದರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಪ್ರೌಢಶಾಲೆಗೆ ಕಾಲಿಟ್ಟರೆ ಮುಗಿಯಿತು, ಮಕ್ಕಳ ಬಗೆಗಿನ ಕಾಳಜಿ ಕಡಿಮೆಯಾಗುತ್ತದೆ. ಮಕ್ಕಳೀಗ ಬೆಳೆದಿದ್ದಾರೆ, ಮೊದಲಿನಂತೆ ಅವರನ್ನು ಪ್ರಶ್ನಿಸಬೇಕಾಗಿಲ್ಲ ಎಂದೇ ಭಾವಿಸುತ್ತಾರೆ. ಆದರೆ ನಿಜಕ್ಕೂ ನಿಮ್ಮ ಮಕ್ಕಳಿಗೆ ನೀವು ಬೇಕಾಗಿರುವುದು ಈ ಅವಧಿಯಲ್ಲಿ. ಚಿಕ್ಕವರಿರುವಾಗ ಮಕ್ಕಳು ನೀವು ಕೇಳದಿದ್ದರೂ ಅಂದು ನಡೆದ ಎಲ್ಲ ಘಟನೆಗಳನ್ನೂ ಯಥಾವತ್ತಾಗಿ ವಿವರಿಸುತ್ತವೆ. ಆದರೆ ಪ್ರೌಢಾವಸ್ಥೆಗೆ ಬಂದಾಗ ಅವರಿಗೂ ತಿಳಿವಳಿಕೆ ಮೂಡುತ್ತವೆ, ಅಪ್ಪ, ಅಮ್ಮನಲ್ಲಿ ಏನನ್ನು ಹೇಳಬೇಕು, ಏನನ್ನು ಮುಚ್ಚಿಡಬೇಕು ಎಂಬುದು ಅರಿವಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರು ನಿಮ್ಮಲ್ಲಿ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಾಣಬಯಸುತ್ತಾರೆ. ಪ್ರೌಢಾವಸ್ಥೆಯಲ್ಲಿ ಅವರಿಗೆ ನಿಮ್ಮ ಅಗತ್ಯ ಹೆಚ್ಚಿರುತ್ತದೆ. ಅವರೊಂದಿಗೆ ಉತ್ತಮ ಗೆಳೆಯನಂತೆ ಹೆತ್ತವರು ವ್ಯವಹರಿಸಬೇಕು, ಅವರ ಮನಸ್ಥಿತಿ ಹೇಗಿದೆ, ಯಾರ ಸಹವಾಸ ಮಾಡಿದ್ದಾರೆ, ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕು. ಆಗ ಶಾಲೆ, ಕಾಲೇಜಿನಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಮಕ್ಕಳು ಮನೆಯಲ್ಲಿ ಹೇಳಿಕೊಳ್ಳುವ ಧೈರ್ಯ ಮಾಡುತ್ತಾರೆ. ಜತೆಗೆ ಮಕ್ಕಳು ಕೆಟ್ಟ ದಾರಿಗೆ ಹೋಗದಂತೆ ತಡೆಯಲೂ ಸಾಧ್ಯ.
ಒಟ್ಟಾರೆಯಾಗಿ ಮಕ್ಕಳ ಸುರಕ್ಷೆ ವಿಚಾರ ಬಂದಾಗ ಹೆತ್ತವರು, ಶಾಲೆಗಳು ಹಾಗೂ ಸರ್ಕಾರಗಳಿಗೆ ಅವುಗಳದ್ದೇ ಆದ ಪಾತ್ರಗಳು, ಜವಾಬ್ದಾರಿಗಳಿವೆ. ಆ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿದರೆ ಮಾತ್ರವೇ ಕುಂಭಕೋಣಂ, ವಿಬ್‌ಗ್ಯೋರ್‌ನಂತಹ ಪ್ರಕರಣಗಳು ಮರುಕಳಿಸದೇ ಇರಲು ಸಾಧ್ಯ.

-ಹಲೀಮತ್ ಸಅದಿಯಾ
haleesukhi@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.