ಅಂಕಣಗಳು

ಜನಪದರ ಜೀವನದಲ್ಲಿ ಅಂತರ್ಗತವಾಗಿತ್ತು ಲೈಂಗಿಕ ಶಿಕ್ಷಣ

ಜನಪದರ ಜೀವನದಲ್ಲಿ ಅಂತರ್ಗತವಾಗಿತ್ತು ಲೈಂಗಿಕ ಶಿಕ್ಷಣ
Published On :

ಲೈಂಗಿಕತೆ/ಲೈಂಗಿಕ ಪ್ರಜ್ಞೆ ಎನ್ನುವುದನ್ನು ಇಂದು ಪ್ರಚೋದನಾತ್ಮಕ ದೃಶ್ಯಗಳ ಮೂಲಕ ನೇರವಾಗಿ ಉದ್ದೀಪನಗೊಳಿಸುವ ಕೆಲಸವನ್ನು ಬಹುತೇಕ ಮಾಧ್ಯಮಗಳು ಒಂದಲ್ಲ ಒಂದು ರೀತಿಯಲ್ಲಿ ಮಾಡಿಕೊಂಡು ಬರುತ್ತಿವೆ. ಈ ಬಗೆಯ ಅಗ್ಗದ ಮನರಂಜನೆಗಳು ಕಾಮವಿಕಾರಗಳನ್ನು, ಅನಗತ್ಯ ಕುತೂಹಲ ಮತ್ತು ಭಯಗಳನ್ನು ಬಿತ್ತುತ್ತಿವೆ. ಹಾಗಾಗಿ ಇಲ್ಲಿ ಗಂಡು-ಹೆಣ್ಣಿನ ನಡುವಣ ಭಾವಾನಾತ್ಮಕ ಸಂಬಂಧಗಳು, ಕೌಟುಂಬಿಕ ಬಾಂಧವ್ಯ ಮತ್ತು ಒಡನಾಟ ಇತ್ಯಾದಿಗಳು ಗೌಣವಾಗಿ, ಕಂಡದ್ದರ ಮೇಲೆ ಆಕ್ರಮಿಸುವ ಹಿಂಸಾತ್ಮಕ ಪ್ರವೃತ್ತಿಗಳು ಹೆಚ್ಚುತ್ತಿವೆ. ಈ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮ ಜನಪದರಲ್ಲಿದ್ದ ವಿಧಾನಗಳು ಇಂದು ನಮ್ಮ ಹಳ್ಳಿಗಳಿಂದಲೇ ಕಣ್ಮರೆಯಾಗುತ್ತಿರುವುದು ಆತಂಕ ಹುಟ್ಟುಹಾಕುತ್ತಿದೆ.
ನಮ್ಮ ಜನಪದರಲ್ಲಿ ಲೈಂಗಿಕತೆ ಅಥವಾ ಹೆಣ್ಣು-ಗಂಡುಗಳ ಮಿಲನ ಎನ್ನುವ ಸಂದರ್ಭಗಳಲ್ಲಿ ಅವರಿಬ್ಬರನ್ನು ಈ ಪ್ರಕೃತಿಯಲ್ಲಿ ಸಮಾನ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕಾದವರು ಎಂಬಂತೆ ತಿಳಿವು ನೀಡುವುದು ಮುಖ್ಯವಾಗಿರುತ್ತಿತ್ತು. ಮೂಲತಃ ಮಾತೃಪ್ರಧಾನ ಸಂಸ್ಕೃತಿಯ ಜನಪದರಿಗೆ ಹೆಣ್ಣೆಂದರೆ ಎಣೆಯಿಲ್ಲದ ಗೌರವ,  ಗಂಡಿಗೆ ಹೆಗಲೆಣೆಯಾಗಿ ಬದುಕುವ ಅವಳಿಗೆ ಎಲ್ಲ ಹಬ್ಬ ಆಚರಣೆಗಳಲ್ಲಿಯೂ ಪ್ರಮುಖ ಆದ್ಯತೆ ಇದ್ದೇ ಇರುತ್ತಿತ್ತು. ಶ್ರಮಸಂಸ್ಕೃತಿಯಲ್ಲಿ ಸಮಾನ ಭಾಗಿಗಳಾಗಬೇಕಿದ್ದ ಈ ಇಬ್ಬರು ಲೈಂಗಿಕತೆಯಿಂದ ಹಿಡಿದು ಎಲ್ಲ ಬಗೆಯ ಆಲೋಚನೆಗಳಲ್ಲಿ ಅರಿವು ಪಡೆಯಲು ಮುಕ್ತ ಅವಕಾಶಗಳು ಮನೆಯಲ್ಲಿನ ಅಜ್ಜಿಯರ ಮೂಲಕ ದೊರೆಯುತ್ತಿದ್ದವು.
ಇದಕ್ಕೆ ವಿರುದ್ಧವಾದ ಧೋರಣೆಗಳು ಬೆಳೆದದ್ದು ಮತ್ತು ಬಲಿತದ್ದು ತದನಂತರ ಸಮಾಜಗಳಲ್ಲಿ ಅದರಲ್ಲಿಯೂ ಹೆಣ್ಣನ್ನು ತಿಂಗಳ ಹೊಲತಿ ಎಂದು ಬಗೆದ ಆರ್ಯ ಸಂಸ್ಕೃತಿಯ ಮೂಲಕ, ಧಾರ್ಮಿಕ ಸಮಾನತೆಯಿಂದಲೂ ವಂಚಿತಳಾದ ಇಲ್ಲಿನ ಹೆಣ್ಣು ಅಸಹಾಯಕಳು. ಹೊಸ್ತಿಲೊಳಗಿನ ಪ್ರಪಂಚಕ್ಕೆ ಮೀಸಲಾಗಿರಬೇಕಾದ ಪರಿಚಾರಿಕೆ,  ಶಾಸ್ತ್ರದ ಚೌಕಟ್ಟಿನಲ್ಲಿ ಇರಲೇಬೇಕಾದ ಒಂದು ವಸ್ತು, ಪ್ರೌಢಳಾದೊಡನೆ ಅಥವಾ ಅದಕ್ಕೂ ಮೊದಲು ಈ ವಸ್ತುವನ್ನು ಗಂಡಾದವನಿಗೆ ದಾನ ಕೊಡಲೇಬೇಕಾದದ್ದು ಇವಳ ತಂದೆ ತಾಯಿಯರ ಆದ್ಯ ಕರ್ತವ್ಯ. ಮಗಳ ಕನ್ಯಾಸೆರೆ ಬಿಡಿಸಲು ಸಾಧ್ಯವಾಗದ ಪಿತೃಗಳಿಗೆ ಮೋಕ್ಷವಿಲ್ಲ ಎಂಬ ಭಯ. ಒಟ್ಟಾರೆ ಹೆಣ್ಣಿಗೆ ಸ್ವತಂತ್ರ ಅಸ್ತಿತ್ವ ಅನಗತ್ಯ ಎಂದು ಷರಾ ಬರೆದ ಬಹುತೇಕ ಉದ್ಗ್ರಂಥಗಳ ದೃಷ್ಟಿಯಲ್ಲಿ ಹೆಣ್ಣು ಒಂದು ರಿಪ್ರೊಡಕ್ಟಿವ್ ಹಾಗೂ ಸರ್ವಿಸ್ ಎಲಿಮೆಂಟ್ ಎಂಬಂತೆ ಕಾಣುತ್ತಾ ಬಂದ ಪುರುಷ ಪ್ರಧಾನ ಚಿಂತನೆಗಳು. ಇಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ಸಹ ಪಾಪ ಎಂಬ ಪರಿಕಲ್ಪನೆ ಆವರಿಸಿರುತ್ತಿತ್ತು. ಅದೊಂದು ಗೋಪ್ಯ ಕ್ರಿಯೆ. ತನ್ನ ಹೆಂಡತಿಯೊಡನೆ ಸುಖಿಸಿದ ಗಂಡ ಸ್ನಾನಮಾಡಿ ಬೇರೆ ಹಾಸಿಗೆ ಮೇಲೆ ಮಲಗಬೇಕಿತ್ತು. ಹೆಣ್ಣು ಸಹ ಮಡಿಹಾಸಿಗೆಯ ಮೇಲೆ ನಿದ್ರೆ ಮಾಡಬೇಕಾದಂತಹ ನಿಯಮಗಳನ್ನು ಸಂಪ್ರದಾಯಗಳೆಂಬಂತೆ ರೂಢಿಸಿಕೊಂಡ ಪುರೋಹಿತ ಕುಟುಂಬಗಳಿದ್ದವು ಎಂಬುದು ಸುಳ್ಳಲ್ಲ.
ನಮ್ಮ ಜನಪದರಲ್ಲಿ ಲೈಂಗಿಕತೆ ಎನ್ನುವುದು ಸಮಸ್ಯಾತ್ಮಕ ವಿಚಾರ ಎಂದಾಗಲೀ, ಪ್ರತ್ಯೇಕವಾಗಿ ಬೋಧನೆಯ ಮೂಲಕ ಮಾತ್ರವೇ ಅರಿವಿಗೆ ತಂದುಕೊಳ್ಳಬೇಕಾದ ಕ್ರಮ ಎನ್ನುವಂತೆ ಇರುತ್ತಿದ್ದುದ್ದು ತೀರಾ ಅಪರೂಪ. ಪ್ರಾಯಶಃ ಇರಲಿಲ್ಲವೆಂದರೂ ತಪ್ಪೇನು ಆಗಲಿಕ್ಕಿಲ್ಲ. ಕಾರಣ ಹೆಣ್ಣು ಭೋಗದ ಪಾತ್ರೆ ಗಂಡು ಆ ಪಾತ್ರೆಯನ್ನು ಭೋಗಿಸುವ ಉಪಕರಣ ಎಂಬ ಪರಿಭಾವನೆಗಿಂತ ಅವಳು ಪ್ರಕೃತಿ, ಈ ವಿಶಾಲ ಜೀವ ಜಗತ್ತಿಗೆ ಆಶ್ರಯವಾದ ಭೂಮಿ, ನೀರು, ಗಾಳಿ, ಬೆಳಕಿನಂತೆ ತನ್ನ ಇಡೀ ಕುಟುಂಬವನ್ನು ನಳನಳಿಸುವಂತೆ ಮಾಡುವ ಬಾಂಧವ್ಯದ ಸೇತುವೆಂಬ ಪರಿಕಲ್ಪನೆ ಪ್ರಧಾನವಾಗಿತ್ತು. ಇದಕ್ಕೆ ನಿದರ್ಶನವಾಗಿ ಗರತಿಯ ಹಾಡುಗಳಲ್ಲಿ ಸಾಕಷ್ಟು ಮಾಹಿತಿಗಳು ನಮಗೆ ದೊರೆಯುತ್ತವೆ. ಒಂದರ್ಥದಲ್ಲಿ ನೋಡುವುದಾದರೆ ಆಗಿನ ಜನಪದ ಸಮಾಜದಲ್ಲಿ ಗಂಡಿಗಿಂತ ಹೆಣ್ಣಿಗೇ ಹೆಚ್ಚು ಪ್ರಾಧಾನ್ಯತೆ ಇತ್ತು. ಅವಳಿಗೆ ವಧು ದಕ್ಷಿಣೆ ಕೊಟ್ಟು ಮದುವೆಯಾಗಬೇಕಾದ ಅನಿವಾರ್ಯತೆಗಳು ಗಂಡಿಗೆ ಇದ್ದವು.
ಅವಿಭಕ್ತ ಕುಟುಂಬದಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ನಮ್ಮ ಜನಪದರಲ್ಲಿ ಎಳೆತನದಿಂದಲೇ ಹುಡುಗರು ಹಾಗೂ ಹುಡುಗಿಯರು ಒಟ್ಟಿಗೆ ಮನೆಯಲ್ಲಿ ಮಲಗುತ್ತಿದ್ದುದು, ಮನೆಯಲ್ಲಿ ಈಗಿನಂತೆ ಪ್ರತ್ಯೇಕ ಕೋಣೆಗಳು ಸಹ ಇರುತ್ತಿರಲಿಲ್ಲ. ಹಾಗೆಯೇ ಅವರಿಗೆ ಒಳ ಉಡುಪುಗಳ ಕಲ್ಪನೆ ಇರುತ್ತಿರಲಿಲ್ಲ. ಹುಡುಗನಿಗೆ ಉದ್ದನೆಯ ನಿಲುವಂಗಿ ಮಾತ್ರ. ಚಡ್ಡಿ ಇರುತ್ತಿದ್ದುದು ಅಪರೂಪ, ಹಾಗೆಯೇ ಹುಡುಗಿಗೆ ಲಂಗ- ದಾವಣಿ. ಒಂದು ಹಂತದವರೆಗೆ ಇವರಿಬ್ಬರೂ ಪರಸ್ಪರ ತಮ್ಮ ಅಂಗಗಳನ್ನು ನೋಡಿಕೊಂಡೇ ಬೆಳೆಯುತ್ತಿದ್ದರು ಎನ್ನಬಹುದು. ದನಗಳನ್ನು ಕಾಯಲು, ಹೊಲಗದ್ದೆಗಳಲ್ಲಿ ಚಿಕ್ಕ ಪುಟ್ಟ ಕೃಷಿ ಕೆಲಸಗಳನ್ನು ನಿರ್ವಹಿಸಲು, ದನಕರುಗಳಿಗೆ ಹುಲ್ಲು ತರಲು, ಮನೆಯಲ್ಲಿ ಉರುವಲುಗಳಿಗಾಗಿ ಸೌದೆಗಳನ್ನು ಕಡಿದು ತರುವುದು, ಕಾಲುವೆ, ಕೆರೆ, ಹಳ್ಳ, ಕೊಳ್ಳಗಳಲ್ಲಿ ಈಜಾಡಲು ಹೋಗುತ್ತಿದ್ದುದು ಸರ್ವೇಸಾಮಾನ್ಯವಾಗಿರುತ್ತಿತ್ತು. ಈ ಎಲ್ಲ ಚಟುವಟಿಕೆಗಳಲ್ಲಿನ ಬೆರಕೆಗಳಿಂದಾಗಿ ಅವರಲ್ಲಿ ತಮ್ಮ ಸಂರಕ್ಷಣೆ ಕುರಿತಂತೆ ಆತಂಕಗಳಿಗೆ ಅವಕಾಶವಿರುತ್ತಿರಲಿಲ್ಲ.
ಇನ್ನು ಗಂಡು ಹೆಣ್ಣಿನ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಹುಡುಗನಾಗಲೀ ಹುಡುಗಿಯಾಗಿರಲಿ ತಮ್ಮ ಮನೆಯಲ್ಲಿನ ದನಗಳು ಬೆದೆಗೆ ಬಂದವು ಎಂಬುದನ್ನು ಗುರುತಿಸುತ್ತಿದ್ದ ಮನೆಯ ಹಿರಿಯರು ಎಮ್ಮೆಗೆ-ಕೋಣ, ಆಕಳುಗಳಿಗೆ-ಹೋರಿಗಳ ಮೇಲೆ ಹಾಯಿಸಿಕೊಂಡು ಬರುವುದರ ದೃಶ್ಯ ನೋಡಿಕೊಂಡೇ ಬೆಳೆಯುತ್ತಿದ್ದರು.. ಹಾಗೆಯೇ ಇವುಗಳೆಲ್ಲ ಒಂದೊಂದು ಬಗೆಯ ಲೈಂಗಿಕ ಕ್ರಿಯೆಯ ಮಾದರಿಗಳಾಗಿ ಇರುತ್ತಿದ್ದವು. ಆದರೆ ಹುಡುಗಿ ಋತುಮತಿಯಾದ ನಂತರ ಅವಳನ್ನು ಮೊದಲಿನಂತೆ ಗಂಡಸರೊಂದಿಗೆ ಬೆರೆಯಲು ಅವಕಾಶ ನೀಡುತ್ತಿರಲಿಲ್ಲವಷ್ಟೇ. ಜೊತೆಗೆ ಗಂಡು- ಹೆಣ್ಣು, ಅಣ್ಣ ತಂಗಿ, ಅತ್ತಿಗೆ, ಮಾವ ಇನ್ನಾವುದೇ ಸಂಬಂಧ ಹೊಂದಿದವರಾಗಿದ್ದರು ಒಂದು ಬಗೆಯ ಗೌರವದ ಅಂತರ ಕಾಯ್ದುಕೊಳ್ಳುವ ಕಣ್ಣೆಚ್ಚರ ಅಲ್ಲಿರುತ್ತಿತ್ತು.   
ಜನಪದರು ಆಚರಿಸುತ್ತಿದ್ದ ಹಬ್ಬಗಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ. ಅದರಲ್ಲಿಯೂ ಪ್ರಾಯಕ್ಕೆ ಬಂದ ಹೆಣ್ಣಿಗೆ ಸಂಬಂಧಿಸಿದ ಆಚರಣೆಗಳು, ಅವಳು ಪುಷ್ಪವತಿ ಆದಾಗ ಹೂ ಮುಡಿಸುವುದು ಆ ದಿನಗಳಲ್ಲಿ ಅವಳಲ್ಲಿ ಉಂಟಾಗುವ ರಕ್ತಸ್ರಾವದಿಂದ ಉಂಟಾಗುವ ದೈಹಿಕ ನಿಃಶಕ್ತಿಯನ್ನು ನಿವಾರಿಸುವ ತಿನಿಸುಗಳನ್ನು ಅವಳಿಗೆ ಕೊಡಬೇಕೆನ್ನುವ ಪದ್ದತಿ ಇತ್ಯಾದಿಗಳು ಒಂದು ರೀತಿಯಲ್ಲಿದ್ದರೆ, ಮದುವೆ ಸಮಾರಂಭದಲ್ಲಿ ಮನೆಗಳಲ್ಲಿ ಪೂಜಿಸಲಾಗುವ ಬೀಸುಕಲ್ಲು, ಒರಳು ಕಲ್ಲು, ಒನಕೆಗಳು, ಶಾವಿಗೆ ಹೊಸೆಯುವ ಮಣೆ ಮತ್ತು ಶಾವಿಗೆ ಹೊಸೆಯುವಿಕೆಗೆಂದು ತನ್ನ ಎರಡು ಕಾಲುಗಳನ್ನು ಮಣೆಯ ಆಚೀಚೆ ಹಾಕಿಕೊಂಡು ಕೂಡುವ ಹೆಂಗಳೆಯರ ಭಂಗಿ ಇತ್ಯಾದಿಗಳೆಲ್ಲ ನೇರವಾಗಿ ಹೆಣ್ಣು-ಗಂಡಿನ ಜನನಾಂಗಳನ್ನು ಅವುಗಳ ನಡುವಣದ ಮೈಥುನ ಕ್ರಿಯೆಯನ್ನು ನೇರವಾಗಿ ಸಾಂಕೇತಿಸುತ್ತಿದ್ದವು.
ಜೊತೆಗೆ ಮನೆಗಳಲ್ಲಿದ್ದ ಹಿರಿಯ ಅಜ್ಜಿಯರು ಸಣ್ಣ ಪುಟ್ಟ ಕತೆಗಳ ಮೂಲಕ ನೇರವಾಗಿ ತಿಳಿಸಿಕೊಡುತ್ತಿದ್ದ ಬಗ್ಗೆ ನಮಗೆ ಮಾಹಿತಿಗಳು ದೊರೆಯುತ್ತವೆ. ಆದರೆ ಅವರ ಕೊಡುತ್ತಿದ್ದ ತಿಳವಳಿಕೆಗಳಲ್ಲಿ ಪ್ರಚೋದನೆ ಇರುತ್ತಿರಲಿಲ್ಲ. ಬದಲಿಗೆ ತುಸು ಹಾಸ್ಯ ಅಥವಾ ತುಂಟತನದ ಸ್ಪರ್ಶವಿರುತ್ತಿತ್ತು. ಒಟ್ಟಾರೆ ಅಜ್ಜಿಯರು ಲೈಂಗಿಕ ತಿಳಿವಳಿಕೆಗಳಿಂದ ಹಿಡಿದು ಹೆರಿಗೆ ಮಾಡಿಸುವವರೆಗಿನ ವಿಚಾರಗಳನ್ನು ಬಲ್ಲವರಾಗಿಯೇ ಇರುತ್ತಿದ್ದರು.
ನಮ್ಮಲ್ಲಿ ಇಂದಿಗೂ ಮದುವೆಯಾದ ಮೊದಲ ವರ್ಷದಲ್ಲಿನ ಆಷಾಢ ಮಾಸದಲ್ಲಿ ಅತ್ತೆ - ಸೊಸೆಯರು ಒಂದೇ ಮನೆಯಲ್ಲಿ ಇರಬಾರದೆಂಬ ನಂಬುಗೆ ಒಂದು ಬಗೆಯ ಆಚರಣೆಯಂತೆ ಚಾಲ್ತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಆಷಾಢ ಮಾಸದಲ್ಲಿನ ಗಾಳಿಯು ಮಿಲನ ಕ್ರಿಯೆಗೆ ಸೂಕ್ತವಾದುದಲ್ಲ, ಇದು ಗಂಡಸಿನ ವೀರ್ಯವೃದ್ಧಿಯ ಶಕ್ತಿಯನ್ನು ಹಾಗೆಯೇ ಹೆಣ್ಣಿನ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕುಗ್ಗಿಸಬಲ್ಲ ಅಥವಾ ಇಲ್ಲದಂತೆ ಮಾಡಬಲ್ಲದು ಎಂಬ ಆರೋಗ್ಯದ ಕಾಳಜಿಯಾಗಿರುತ್ತದೆ.
ಇನ್ನು ನಮ್ಮ ಕರ್ನಾಟಕದಲ್ಲಿ ಆಚರಿಸಲಾಗುವ ಹೋಳೀ ಹಬ್ಬದಂದು ನಡೆಯುವ ಕಾಮದಹನ ಇದು ನೇರವಾಗಿ ಲೈಂಗಿಕ ಕ್ರಿಯೆಯ ಉತ್ಸವದಂತೆ ಕೆಲವು ಕಡೆ ಕಂಡು ಬರುತ್ತದೆ. ಅಂದು ಕಾಮನನ್ನು ಸುಡಲು ಬೆಂಕಿ ತರಲು ಹೋಗುವ ಗಂಡಸರ ಗುಂಪು ಹೇಳುವ ಹಾಡುಗಳಲ್ಲಿ ಅಶ್ಲೀಲ ಪದಗಳು ಎಲ್ಲೆ ಮೀರಿ ಕೇಳಿಬರುತ್ತವೆ. ಇನ್ನು ನಮ್ಮ ಜನಪದರ ಬೈಗುಳಲ್ಲಿನ ಪದಗಳೇ ಗಂಡು ಹೆಣ್ಣಿನ ಮಿಲನ ಸಿದ್ಧತೆ, ಮಿಲನ ಮತ್ತು ಪರಿಣಾಮ ಇತ್ಯಾದಿಗಳನ್ನೆಲ್ಲ ಬಹಿರಂಗವಾಗಿ ಯಾವುದೇ ಅಳಕುಗಳಿಲ್ಲದೇ ಒಳಗೊಂಡು ಬರುತ್ತಿರುತ್ತವೆ. ಅನೇಕ ಬುಡಕಟ್ಟುಗಳಲ್ಲಿ, ಆದಿವಾಸಿಗಳಲ್ಲಿ ಬೇರೆ ಬೇರೆ ಬಗೆಯ ರೂಪದಲ್ಲಿ ಲೈಂಗಿಕತೆ ಕುರಿತಂತೆ ತಿಳಿಹೇಳುವ ಪದ್ದತಿಗಳಿರುವುದಕ್ಕೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ಈ ಬಗ್ಗೆ ಆಸಕ್ತರು ಸಂಶೋಧನೆಯನ್ನು ಮಾಡಬಹುದಾಗಿದೆ.

-ಡಾ. ನೆ.ಮ. ಗಿರಿಜಾಪತಿ
ಸಹಾಯಕ ಪ್ರಾಧ್ಯಾಪಕರು,
ಜೆ.ಎಸ್.ಎಸ್.ಮಹಿಳಾ ಕಾಲೇಜು , ಚಾಮರಾಜನಗರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.