ಅಂಕಣಗಳು

ತಿನಿಸಿನ ಗುಣಮಟ್ಟದ ಜತೆ ಪಾತ್ರೆ ಅಚ್ಚುಕಟ್ಟಾಗಿದ್ದರೆ ಹಿತ

Published On :

ಭಾನುವಾರದ (20 ಜುಲೈ, 2014) 'ಖುಷಿ'ಯಲ್ಲಿನ ಎರಡು ಲೇಖನಗಳು ನನಗೆ ಸಿಕ್ಕಾಪಟ್ಟೆ ಖುಷಿ ನೀಡಿದವು. ನಾವು ನೋಡಲು ಇನ್ನೂ ಸಾಧ್ಯವಾಗದ ಭೂಲೋಕದ ಸ್ವರ್ಗ ಶಿಮ್ಲಾ (ಲೇಖಕಿ ವೀಣಾ ಮಾರ್ಕಂಡೆ) ಹಾಗೂ ಉತ್ತರಕಾಂಡ (ರೇಷ್ಮಾರಾವ್ ಎ.ಎಸ್.) ಎರಡೂ ಲೇಖನಗಳು ಓದುತ್ತಿದ್ದಂತೆ 'ಥ್ರಿಲ್‌' ಆಗುತ್ತಿತ್ತು. ಅಲ್ಲಿನ ವಾತಾವರಣಕ್ಕೆ ಹೇಗೋ ಹೊಂದಿಕೊಂಡು ಇದ್ದಷ್ಟೂ ದಿನ ಮೋಜು ಅನುಭವಿಸಿ ಪ್ರವಾಸ ಮಾಡಿ ಬಂದ ಲೇಖಕಿಯರಿಬ್ಬರೂ ತಮ್ಮ ಲೇಖನದ ಮೂಲಕ ನಮ್ಮನ್ನು ಭಾವನಾಲೋಕಕ್ಕೆ ಕೊಂಡೊಯ್ದರು ಎಂದರೆ ತಪ್ಪಲ್ಲ. ಇದೇ ರೀತಿ ಕಾಫಿ ಬಗ್ಗೆ ಬಂದ ಲೇಖನವೂ ಸಹ ಕಾಫಿಪ್ರಿಯನಾದ ನನಗೆ ಹಿಡಿಸಿತು. ಭಾನುವಾರದ ಬೆಳಗಿನ ದೋ ಅಂತ ಸುರಿವ ಮಳೆಯಲ್ಲಿ ಬೆಚ್ಚನೆ ಮನೇಲಿ ಕುಳಿತು ಖುಷಿ ಓದಿ ಮುಗಿಸಿದಾಗ ಆದ ಆನಂದ ಅಷ್ಟಿಷ್ಟಲ್ಲಾ!
-ಬಿ.ಎಸ್. ರಮೇಶ್, ರಮ್ಯಾ ಬೆಳ್ಳಾವೆ, ಮಣಿಪಾಲ.

ಬರ್ತಾ ಬರ್ತಾ ಕ.ಪ್ರ.ದ ಪೇಪರ್‌ನ ಗುಣಮಟ್ಟ ಕಡಿಮೆಯಾಗುತ್ತಿದೆಯೆನಿಸುತ್ತಿದೆ. ಭೈರಪ್ಪನವರ ಹೊಸ ಕಾದಂಬರಿ 'ಯಾನ'ದ ಪರಿಚಯ ಮಾಡಿಕೊಡುವ ಖುಷಿ ಕೈಯಲ್ಲೂ ಆಚೀಚೆ ಮಾಡೋದ್ರಲ್ಲೂ ಪೇಪರ್ ಮುದ್ದೆ! ಒಂದ್ಕಡೆ ಮಳೆಗಾಲದ ತೇವಾಂಶಭರಿತ ಗಾಳಿಯಿಂದಾಗಿ ದಿನಪತ್ರಿಕೆಯ ಕಾಗದ ಮೆತ್ತಗಾಗುವುದು ಸಹಜ. ಆದರೆ ಯಾವಾಗಿನಂತೆ ದಿನಪತ್ರಿಕೆಯಾದ ಲೇಖನಗಳ ಗುಣಮಟ್ಟಕ್ಕೆ ಹೋಲಿಸಿದರೆ ಪತ್ರಿಕೆಗೆ ಬಳಸುವ ಕಾಗದದ ಗುಣಮಟ್ಟ ಇನ್ನೂ ಸುಧಾರಿಸಬೇಕಾದ ಅವಶ್ಯಕತೆಯಿದೆ. ಅದ್ಭುತವಾದ ಲೇಖನಗಳಿಂದ ಕೂಡಿದ ಕನ್ನಡಪ್ರಭಕ್ಕೂ ಇಂಥಾ ಕಳಪೆ ಕಾಗದದ ಬಳಕೆ ಭಾಳಾ ಬೇಸರದ ಸಂಗತಿ. ಸಂಪಾದಕರ ಲೇಖನಕ್ಕೆ ಮರೆಯದೇ ಸಮಯ ಕೊಟ್ಟು ಓದುತ್ತೇವೆ. ಹೊಸ ಹೊಸ ವಿಷಯಗಳ ಆಕರ ಈ ಲೇಖನಗಳು. ನಿಜಕ್ಕೂ ವೈಚಾರಿಕತೆಯ ವೈಭವ ಎಂದರೆ ಅತಿಶಯೋಕ್ತಿಯವಲ್ಲ. ಕಾಗದದ ಗುಣಮಟ್ಟ ಏರಿಸುವ ಪ್ರಯತ್ನವೂ ಆಗಲಿ.
-ವಿಜಯಾ ಎ. ಡೋಂಗ್ರೆ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ.

ಅಡ್ಡಂಡ ಕಾರ್ಯಪ್ಪನವರ "ಯಾರೆಲ್ಲ ಆಳಿದರೂ ಕೊಡಗಿನ ತನ್ನತನ ಕೊಲ್ಲಲಾಗಲಿಲ್ಲ (ಕ.ಪ್ರ. 30.7.14). ನನ್ನ ಅಭಿಪ್ರಾಯದಲ್ಲಿ ಎಲ್ಲ ಭಾರತೀಯರು ಓದಲೇಬೇಕಾದ ಒಂದು ಲೇಖನ.
-ಬ್ಯಾಂಕ್ ಶಿವಕುಮಾರ್, ಮೈಸೂರು. ಮೊ. 9886 301184

ಎಚ್ಚರ ವಹಿಸಿದರೆ ಅಮರನಾಥ, ತಪ್ಪಿದರೆ ಕೈಲಾಸ (ಕ.ಪ್ರ. 23.07.14) ಲೇಖನ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಅಮರನಾಥ ಯಾತ್ರೆಯ ಹಾದಿಯುದ್ದಕ್ಕೂ ಎದುರಾಗುವ ಪ್ರಕೃತಿ ನಿರ್ಮಿತ ಹಾಗೂ ಹುಲು ಮಾನವ ನಿರ್ಮಿತ ಅಡೆ-ತಡೆಗಳನ್ನು ವಿಶ್ಲೇಷಿಸಿದೆ. ಪ್ರತಿಕೂಲ ಪ್ರಕೃತಿಯನ್ನು ಮಾನವ ಬದಲಾಯಿಸಲಾರ, ಹೊಂದಿಕೊಂಡು ಹೋಗಬೇಕು ನಿಜ. ಆದರೆ ಸಂಕುಚಿತ ಮನಸ್ಸುಗಳಿಂದ ಯಾತ್ರಿಗಳಿಗೆ ಉಂಟಾಗುತ್ತಿರುವ ಬವಣೆಗಳನ್ನು ನಿವಾರಿಸಲು ಸಾಧ್ಯವಿಲ್ಲವೇಕೆ? ಮುಸ್ಲಿಂ ಬಾಂಧವರ ಹಜ್ ಯಾತ್ರೆಗೆ (ವಿದೇಶಿ ಯಾತ್ರೆ) ಕೋಟ್ಯಂತರ ರೂ. ಸಬ್ಸಿಡಿ ನೀಡುತ್ತಿರುವಾಗ, ನಮ್ಮದೇ ನೆಲದಲ್ಲಿ  ಕೈಗೊಳ್ಳುವ ಯಾತ್ರೆಗೆ ಸೌಕರ್ಯ ಒದಗಿಸಲಾರದ ಪರಿಸ್ಥಿತಿಯಲ್ಲಿ ನಾವಿರುವುದು ನಾಚಿಕೆಗೇಡಿನ ಸಂಗತಿ.
-ಕೆ.ಎಂ. ಲಿಂಗರಾಜು, ನಂಜನಗೂಡು, ಮೊ. 99160 21365

ದಿ. 26.7.14ರ ವಿಚಾರತೋರಣದ ಆಗೀಗ ಅಂಕಣದಲ್ಲಿ ಹಲೀಮತ್ ಸಅದಿಯಾ ಅವರ ಉಪಾಸವೆಂಬ ಅಂತರಂಗ ವ್ಯಾಯಾಮ, ಹೋರಾಟದ ಆಯಾಮ ಉಪವಾಸದ ಕುರಿತು ಸಮಗ್ರವಾಗಿ ಬರೆದಿದ್ದಾರೆ. ಹಿಂದೂ ಮುಸ್ಲಿಂರ ಉಪವಾಸದ ಕುರಿತು ಚೆನ್ನಾಗಿ ಬರೆದಿದ್ದಾರೆ. ಆರೋಗ್ಯದ ಕುರಿತು ಬರಹಗಳನ್ನು ಅಂಕಣದಲ್ಲಿ ಪ್ರಕಟಿಸಬೇಕು ಎಂದು ವಿನಂತಿ.
-ಮಲ್ಲನಗೌಡ. ಗಂ. ಪಾಟೀಲ, ರಂಕಲಕೊಪ್ಪ, ತಾ. ರಾಮದುರ್ಗ, ಮೊ. 7760 863424

ನಮಗೆ ತುರ್ತಾಗಿ ಹೊಸಪದಗಳು ಬೇಕಿದೆ. ಹುಡುಕಿಕೊಡಿ ಎಂಬ ನಿಮ್ಮ ಬೇಡಿಕೆಗೆ ಪತ್ರಿಕೆಯ ಓದುಗ  ಎಚ್. ಆನಂದರಾಮಶಾಸ್ತ್ರಿಗಳು ಕಳುಹಿಸಿರುವ ಆಂಗ್ಲದಿಂದ ಕನ್ನಡಕ್ಕೆ ತರ್ಜುಮೆ ಓ.ಕೆ. ಆದರೆ ಇದನ್ನು ಬಳಸಲು ಕಷ್ಟವಾಗುತ್ತಲ್ಲಾ...? ಉದಾಹರಣೆಗೆ ಕೆಟ್ಟು ಹೋಗಿರುವ ಬಲ್ಬ್ ಕೇಳಲು (ಹೊಸ ಬಲ್ಬ್ ಕೊಳ್ಳುವ ಸಲುವಾಗಿ) ಅಂಗಡಿಗೆ ಹೋಗಿ ಬಲ್ಬ್ ಕೊಡಿ ಅಂತ ಕೇಳಿದರೆ ಅಂಗಡಿಯಾತ ಕೊಟ್ಟಾನು. ಬದಲಿಗೆ ಬರುಡು ದೀಪ, ಗೆಡ್ಡೆದೀಪ, ಉಂಡೆ ದೀಪ ಕೊಡಿ ಅಂತ ಕೇಳಿದರೆ ಈತನೆಲ್ಲೋ ಮೆಂಟ್ಲು ಅಂತ ಅಂಗಡಿಯವನಿಗೆ ಅನಿಸಲಿಕ್ಕೆ ಸಾಕು. ಶಾಸ್ತ್ರಿಗಳು ಸೂಚಿಸಿರುವ ಪದ ಬಳಕೆ ಓದಲು ಚೆನ್ನ. ಆದರೆ ಬಳಸಲು ಕಷ್ಟವೇ...!
-ಬೆಳ್ಳಾವೆ ರಮೇಶ್, ಬಿಎಸ್‌ಕೆ 3ನೇ ಹಂತ, ಬೆಂಗಳೂರು-85.

ನಾನು ಮಂದಾರ ತೇರದಾಳ. ಬೆಳಗಾವಿ ನಗರದ ಎಂ.ಆರ್. ಭಂಡಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಪ್ರತಿದಿನ ಕನ್ನಡಪ್ರಭವನ್ನು ತಪ್ಪದೆ ಓದುತ್ತೇನೆ. ಅದರಲ್ಲಿ ಬರುವ ಕಿರುನಗೆ ಹಾಗೂ ಬೈಟುಕಾಫಿಯಲ್ಲಿ ಬರುವ 'ನಕ್ಕೋ ನಕ್ಕೋ' ನನಗೆ ಅತಿ ಸಂತೋಷ ಕೊಡುವ ಅಂಕಣಗಳು. ಅದರಲ್ಲಿ ಬರುವ ಕೋಲ್ಯನ ನಗೆ ಚಟಾಕಿಗಳು ನನಗೆ ತುಂಬಾ ಇಷ್ಟ. ಅವುಗಳನ್ನು ಓದಿ ದಿನಪೂರ್ತಿ ಸಂತೋಷ ಹಾಗೂ ಲವಲವಿಕೆಯಿಂದ ಇರುತ್ತೇನೆ. ಯಾವುದೇ ಕಾರಣಕ್ಕೂ ಕೋಲ್ಯನ ಹಾಗೂ ನಮ್ಮ ಸಂಬಂಧವನ್ನು ಕಡಿಯಬೇಡಿ.
-ಮಮತಾ ಮಂದಾರ. ಮ. ತೇರದಾಳ

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.